Tuesday, November 17, 2009

ಒಂದು ಸೂಜಿಯ ಕಣ್ಣು

‘ಈ ಸರ್ತಿ ತಪ್ಸ್ದೆ ಬಾ. ರಥ-ಪ್ರತಿಷ್ಠೆ ಮತ್ತೆ ಮತ್ತೆ ಆಗಲ್ಲ. ಮಕ್ಕಳಿಗೆ ರಜ ಹಾಕ್ಸು ಆ ಚಿಕ್ಕ್-ಚಿಕ್ಕ ಕ್ಲಾಸುಗಳಿಗೆ ಏನಾಗತ್ತೆ? ನಾ ಅಳಿಯಂದ್ರಿಗೂ ಫೋನ್ ಮಾಡಿ ಹೇಳ್ತಿನಿ’ ಅಂತ ಅಪ್ಪ ಸ್ವಲ್ಪ ಗದರಿಸಿಯೇ ಹೇಳಿದ್ದರು. ಅಲ್ಲದೆ ನನಗೂ ಹೋಗಬೇಕು ಅನ್ನಿಸಿದ್ದರಿಂದ ಬ್ಯಾಂಕಿಗೆ ರಜ ಹಾಕಿ ಮಕ್ಕಳಿಬ್ಬರನ್ನೂ ಕರದುಕೊಂಡು ಊರಿಗೆ ಬಂದಿದ್ದೆ.
ಇವನು ‘ಅವತ್ತೊಂದು ದಿನ ಬಂದು ಹೋಗ್ತಿನಿ ಮೊದ್ಲೇ ಬರೋಕ್ಕೆ ಕಷ್ಟ’ ಅಂದಿದ್ದ. ನನಗಂತೂ ಯಾಕೋ ಊರಿಗೆ ಹೋದರೆ ಸಾಕು ಅನ್ನಿಸಿಬಿಟ್ಟಿತ್ತು. ಹಾಗೆ ಅನ್ನಿಸಿದ್ದು ಅಪ್ಪ ಫೋನು ಮಾಡಿ ಕರೆದಮೇಲೆ, ಅದಕ್ಕೆ ಮೊದಲೇ ಎಲ್ಲಾದರೂ ದೂರ ಹೋಗಬೇಕು ಅನ್ನಿಸುತ್ತಿತ್ತು. ಭಾನುವಾರದ ಔಟಿಂಗ್ಗಳು, ಆಗೀಗ ಚಿಕ್ಕ ಪುಟ್ಟ ಟೂರುಗಳು, ಸಿನೆಮಾ, ಪುಸ್ತಕಗಳು, ಸ್ನೇಹಿತರು, ಬ್ಯಾಂಕಿನ ಕೆಲಸ ಎಲ್ಲವೂ ಏಕತಾನತೆ. ಖುಷಿ ಸಂತೋಷಗಳೂ ಏಕತಾನತೆಯನ್ನ ತರಬಹುದಾ? ಬಿ.ಎಯಲ್ಲಿ ನಿಯೋಕ್ಲಾಸಿಕ್ ಕಾಲದ ಪದ್ಯಗಳನ್ನು ಮಾಡುತ್ತಾ ‘ಎಲಿಜಬಬತಿಯನ್ ಏಜ್ ನಲ್ಲಿ ಎಲ್ಲೆಲ್ಲೂ ಸುಖ, ಸಂತೋಷ, ಸ್ವೇಚ್ಚೆ ಎಷ್ಟು ಹೆಚ್ಚಾಯಿತೆಂದರೆ ಕೊನೆಕೊನೆಗೆ ಜನಕ್ಕೆ ಇದೆಲ್ಲಾ ಸಾಕು ಜೀವನದಲ್ಲಿ ಏನಾದರೂ ಕಟ್ಟುಪಾಡುಗಳಿರಬೇಕು ಅಂದುಕೊಂಡು ಪ್ಯೂರಿಟನ್ ಆಗಲು ಹೊರಟರು, ತಮ್ಮ ಜೀವನದಲ್ಲಿ ಒಂದಷ್ಟು ನೀತಿ ನಿಯಮಗಳಿರಬೇಕು ಅಂದುಕೊಂಡವರಿಗೆ ಕಾವ್ಯದಲ್ಲೂ ನೀತಿನಿಯಮಗಳಿರಬೇಕು ಅನ್ನಿಸಿತು, ಅದಕ್ಕೆ ಆಗಿನ ಕಾವ್ಯದಲ್ಲಿ ಕಲ್ಪನೆಗಿಂತ ಬುದ್ದಿವಂತಿಕೆಗೆ, ಭಾವನೆಗಳಿಗಿಂತ ಪದಪುಂಜಗಳಿಗೆ, ವಿಷಯಕ್ಕಿಂತ ಬರೆಯುವ ರೀತಿಗೆ ಹೆಚ್ಚು ಪ್ರಾಧಾನ್ಯತೆ..’ ಎಂದು ಪಾಟೀಲ್ ಸರ್ ಹೇಳುತ್ತಿದ್ದ ಮಾತುಗಳು ನೆನಪಾಗುತ್ತಿವೆ.
ಊರಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ನನ್ನ ಚಿಕ್ಕ ವಯಸ್ಸಿನ ಬುದ್ದಿ ಮತ್ತೆ ಜಾಗೃತವಾಯಿತು. ಊರು ತಿರುಗಲು ಹೊರಟೆ, ಎಂದಿನಂತೆ ಗಂಡುಬೀರಿ ಥರ. ಮಕ್ಕಳು ನನಗಿಂತಾ ಮೊದಲೇ ಎಲ್ಲೋ ಆಡಲು ಹೋಗಾಗಿತ್ತು. ತೇರು ಮನೆಯ ಅಂಗಡಿಯ ಬಳಿ ನನ್ನ ಜೊತೆಯವರು, ನನಗಿಂತಾ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾದ ಅಣ್ಣಂದಿರೆಲ್ಲ ಕಗ್ಗ ಹಾಕುತ್ತಾ ಕೂತಿದ್ದರು. ಅವರು ನಗುತ್ತಿರುವುದು, ಬೀದಿಯ ಈಚೆ ಬದಿಗೂ ಕೇಳಿಸುತ್ತಿತ್ತು.
‘ಓ.. ಶ್ರೀದೇವಿ! ಆಗ್ಲೇ ಬಂದ ಆಟೋ ನಿಮ್ ಮನೆ ಕಡೆ ಹೋಗೋದನ್ನ ನೋಡ್ದೆ. ನೀನೇ ಇರ್ಬೇಕು ಅನ್ಸಿತ್ತು. ಇಷ್ಟ್ ಲೇಟಾಗ್ ಬರದಾ? ಬಾ ಕೂತ್ಕೊ’ ಒಳಗೆ ಕರೆದೆ ಕೇಶವ. ಎಲ್ಲರನ್ನೂ ಮಾತಾಡಿಸುತ್ತಾ ಒಳಗೆ ಹೋದೆ. ಕೇಶವನ ಹೆಂಡತಿ ವೈದೇಹಿ ಮತ್ತು ನಾನು ಒಳಗಿಂದಲೇ ಈ ಗಂಡಸರ ಮಾತುಗಳನ್ನು ಕೇಳಿಸಿಕೊಂಡು ನಗುತ್ತಿದ್ದೆವು. ಮೊದಲಿನ ಹಾಗೆ ಅವರುಗಳ ಮಧ್ಯೆ ಹೋಗಿ ಕೂರೋದಕ್ಕೆ ಆಗೋದೇ ಇಲ್ಲವಲ್ಲ ಅನ್ನಿಸಿತು. ‘ಮೂರ್ತಿ, ಜನ್ನ, ನಾಣಿ ಎಲ್ಲಾ ಎಲ್ಲಿ ಕಾಣಿಸ್ತಾ ಇಲ್ಲ’ ಕೇಳಿದೆ. ನಾಣಿ ಇಲ್ಲೇ ಕೂತಿದ್ದ ಮೂರ್ತಿ ಬಂದಮೇಲೆ ಅವರಿಬ್ಬರೂ ಏನೇನೋ ಫಿಲಾಸಫಿಕಲ್ ಚರ್ಚೆಗಳಲ್ಲಿ ಮುಳುಗಿ ಹೋಗಿ, ಹಾಗೇ ಮಾತಾಡಿಕೊಂಡು ಎದ್ದು ಹೋದರು ಎಂದ ಕೇಶವ, ನಿನ್ನ ಬೆಸ್ಟ್ ಫ್ರೆಂಡ್ ಜನ್ನಂಗೆ ಸ್ಕೂಲಲ್ಲಿ ತುಂಬಾ ಕೆಲ್ಸ ಅಂತೆ, “ಅಯ್ಯೋ ನಿಂಗೊತ್ತಿಲ್ಲ ವೆಂಕಿ, ಈ ಸಲ ಗಾಂಧಿ ಜಯಂತಿಗೆ ವಿಶೇಷ ಕಾರ್ಯಕ್ರಮಗಳನ್ನೆಲ್ಲಾ ಹಮ್ಮಿಕೊಂಡಿದೀವಿ, ಅದ್ರ ಎಲ್ಲಾ ಜವಬ್ದಾರಿನೂ ನಂಗೇ ವಹಿಸಿದಾರೆ ಹೆಡ್ಮಾಷ್ಟ್ರು. ಅಕ್ಟೋಬರ್ ಎರಡಕ್ಕೆ ಇನ್ನು ಎರಡೇ ವಾರ ಉಳ್ದಿರೋದು. ನಾನು ರಥಪ್ರತಿಷ್ಠೆ ದಿವ್ಸ ರಜ ಹಾಕಿಬರ್ತಿನಿ, ನೀವು ಆರಾಮಾಗಿ ಇದ್ದೋಗಿ” ಜನ್ನನ ಮಾತುಗಳನ್ನ ಅದೇ ದಾಟಿಯಲ್ಲಿ ಅನುಕರಿಸುತ್ತಾ ಹೇಳಿದ ವೆಂಕಿಯ ಮಾತಿಗೆ ಎಲ್ಲರೂ ನಕ್ಕರು.
ಕೇಶವ ವ್ಯಾಪಾರ ಮಾಡುವುದನ್ನೇ ನಾನು ಗಮನಿಸುತ್ತಿದ್ದೆ, ಅಂಗಡಿಗೆ ಬಂದವರಿಗೆ ತಕ್ಕಡಿಗೆ ತೊಗರಿಬೇಳೆ, ಬೆಲ್ಲ, ಅಕ್ಕಿ, ರವೆ ಇಂಥವನ್ನು ಹಾಕುವಾಗ ಎಷ್ಟು ಜೋರಾಗಿ ಹಾಕುತ್ತಿದ್ದ ಎಂದರೆ ಅವನು ಹಾಕಿದ ರಭಸಕ್ಕೆ ಬೊಟ್ಟಿರುವ ಭಾಗಕ್ಕಿಂತಾ ಸಾಮಾನಿರುವ ಭಾಗವೇ ಕೆಳಗೆ ಹೋಗಿ ವ್ಯಾಪಾರ ಮಾಡಲು ಬಂದವರಲ್ಲಿ ಆ ಕ್ಷಣಕ್ಕೆ ಕೇಶವನೇ ಮೋಸಹೋಗುತ್ತಿದ್ದಾನೆಂಬ ಭ್ರಮೆ ಹುಟ್ಟುವಂತೆ ಮಾಡಿ, ತಕ್ಷಣವೇ ಆ ಸಾಮಾನನ್ನು ಪ್ಲಾಸ್ಟಿಕ್ ಕವರಿಗೆ ಸುರಿದು ಮುಗ್ದವಾದ ಮುಖಭಾವದಲ್ಲಿ ನಿಲ್ಲುತ್ತಿದ್ದ. ಹೀಗೆ ಪ್ರತಿ ಬಾರಿಯೂ ಅಷ್ಟೋ ಇಷ್ಟೋ ಉಳಿಸುತ್ತಿದ್ದ ಹಾಗೂ ಒಟ್ಟು ಮೊತ್ತಕ್ಕಿಂತ ಕೊಂಚ ಕಡಿಮೆಯೇ ತೆಗೆದುಕೊಂಡು ಒಳ್ಳೆಯವನಂತೆ ಎಲ್ಲರಿಗೂ ಕಾಣಿಸುತ್ತಿದ್ದ.
ಅವನನ್ನೇ ಗಮನಿಸುತ್ತಾ ಕೂತಿದ್ದಾಗ, ದೂರದಲ್ಲಿ ಹೆಂಗಸೊಬ್ಬಳು ಬರುವುದು ಕಣಿಸಿತು, “ಅಲ್ಲಿ ಬರ್ತಿರೋದು ದೇಜಿ ಹೆಂಡ್ತಿ ತಾನೆ?” ಕೇಳಿದೆ. “ಅಯ್ಯೋ ಮತ್ತೆ ಬಂದ್ಲೇನೇ? ಈ ದೇಜಿದು ಎಂಟುನೂರು ರುಪಾಯ್ ಸಾಲ ಆಗಿದೆ ಒಂದು ದಮ್ಮಡಿ ವಾಪಸ್ ಬಂದಿಲ್ಲ. ಅವ್ನು ಬಂದ್ರೆ ಸಾಲ ಕೊಡಲ್ಲ ಅಂತ ಈಗ ಹೆಂಡ್ತಿನ ಕಳ್ಸಕ್ ಶುರು ಮಾಡಿದಾನೆ. ಈ ಮುದ್ಕಿ ಹ್ಯಾಪ್ ಮೋರೆ ಹಾಕ್ಕಂಡ್ ಅಂಗ್ಡಿ ಮುಂದೆ ನಿಂತಿದ್ರೆ ನೋಡಕ್ಕಾಗಲ್ಲ. ವೈದೇಹಿ ನೀನೇ ಅವ್ಳನ್ನ ಕಳ್ಸು ನಾ ಒಳ್ಗೆ ಹೋಗ್ತಿನಿ” ಅನ್ನುತ್ತಾ ಎದ್ದ. ನನಗೂ ಇದನ್ನೆಲ್ಲಾ ನೋಡುತ್ತಾ ಸಣ್ಣದಾಗಿ ಹಿಂಸೆ ಆಗುತ್ತಿತ್ತು. “ನಾ ತೋಟದ್ ಕಡೆ ಹೋಗ್ ಬರ್ತಿನಿ”ಅಂತ ಎದ್ದೆ. “ಸಂಜೆ ಮನೆಕಡೆ ಬಾರೆ, ಅಪ್ಪ ಹೇಳ್ತಿದ್ರು, ಅದೇನೋ ಬ್ಯಾಂಕಿನ ವ್ಯವಹಾರದ ಮಾತು ಆಡ್ಬೇಕಂತೆ” ಅಂದ ವೆಂಕಿಗೆ ಸರಿ ಎನುತ್ತಾ ತೋಟಗಳ ದಾರಿಯ ಕಡೆ ಹೊರಟೆ.

ತೋಟಗಳ ದಾರಿಯಲ್ಲಿ ಒಬ್ಬಳೇ ನಡೆಯುತ್ತಾ ಹೋಗುತ್ತಿದ್ದರೆ ಮನಸ್ಸು ಯಾಕೋ ಆಹಾ ಅನ್ನುವಷ್ಟು ಹಗುರಾಗಿದೆ ಅನ್ನಿಸುತ್ತಿತ್ತು. ಮೈಸೂರಿನಲ್ಲಿ ಬಿ.ಎ ಓದುತ್ತಿರುವ ಸಮಯದಲ್ಲಿ, ರಜೆಯಲ್ಲಿ ಊರಿಗೆ ಬಂದಾಗ ತೋಟಕ್ಕೆ ಹೋಗಿ ವರ್ಡ್ಸ್ ವರ್ಥ್ನ ‘ರೆಸಲ್ಯೂಶನ್ ಅಂಡ್ ಇಂಡಿಪೆಂಡೆನ್ಸ್’, ‘ಶಿ ಡ್ವೆಲ್ಟ್ ಅಮಂಗ್ ದಿ ಅನ್ಟ್ರಾಡನ್ ವೇಸ್’, ಕೀಟ್ಸಿನ ‘ಓಡ್ ಟು ಅ ನೈಟಿಂಗೇಲ್’ ಪದ್ಯಗಳನ್ನ ಕನ್ನಡಕ್ಕೆ ಅನುವಾದ ಮಾಡುತ್ತಿದ್ದ ದಿನಗಳು ನೆನಪಾದವು. ಮದುವೆಯಾದಮೇಲೆ ಬರೆಯುವುದನ್ನೇ ಬಿಟ್ಟುಬಿಟ್ಟೆನಲ್ಲಾ. ಮತ್ತೆ ಬರೆಯಲು ಶುರು ಮಾಡಬೇಕು. ಅಂದುಕೊಂಡೆ
ಇದ್ದಕ್ಕಿದ್ದ ಹಾಗೆ ದೇಜಿ ನೆನಪಾದ. ಅವನು ಹುಲಿಕೆರೆಗೆ ಬಂದಿದ್ದು ನಾನು ಸ್ಕೂಲಿನಲ್ಲಿದ್ದಾಗ. ಎಂಟನೇ ಕ್ಲಾಸೋ ಒಂಭತ್ತನೇಕ್ಲಾಸೋ ಇರಬೇಕು. ಒಂದು ಬೆಳಿಗ್ಗೆ ಅವನು ಅವನ ಹೆಂಡತಿ, ಅವನ ಮಗ ಹಾಲಿನಂಗಡಿಯ ಪಕ್ಕದ ಪುಟ್ಟ ಮನೆಯಲ್ಲಿ ಸ್ಥಾಪಿತರಾಗಿದ್ದರು. ಅವನಿಲ್ಲಿಗೆ ಯಾಕೆ ಬಂದ ಅಲ್ಯಾಕೆ ಠಿಕಾಣಿ ಹೂಡಿದ್ದಾನೆ ಎಂಬ ಕುತೂಹಲಕ್ಕೆ ಉತ್ತರವಾಗಿ ಎರಡೇ ದಿನದಲ್ಲಿ ಒಂದು ಟೇಲರ್ ಅಂಗಡಿ ತೆರೆದು ತನ್ನ ನಗು ಮತ್ತು ಹೊಲಿಗೆ ಮಿಷನ್ನೊಂದಿಗೆ ಪ್ರತ್ಯಕ್ಷವಾಗಿದ್ದ. ನಮ್ಮೂರಲ್ಲೂ ಟೇಲರ್ ಅಂಗಡಿ ತೆಗೆದ ಅವನ ಹುಚ್ಚುತನ ನೋಡಿ ಅವನುದ್ಧಾರ ಆಗಲ್ಲ ಏಂದು ರಘುಮಾವ ತೀರ್ಪುಕೊಟ್ಟುಬಿಟ್ಟಿದ್ದರು.
ನಮ್ಮೂರಲ್ಲೂ ಒಬ್ಬ ಟೇಲರ್ ಇದ್ದಾನೆ ಎಂದು ಹೇಳಿಕೊಳ್ಳೋದಕ್ಕೇ ನಮಗೆಲ್ಲ ಹೆಮ್ಮೆಯಾಗುತ್ತಿತ್ತು. ಅಷ್ಟುದಿನ ಹುಲಿಕೆರೆ, ಕಣಿಯಾರು, ಅಗ್ರಹಾರ, ಕ್ಯಾತ್ನಳ್ಳಿ, ಕೊರಟಿಕೆರೆ, ಬರಗೂರು ಮುಂತಾದ ಊರಿನವರೂ ಬಟ್ಟೆ ಹೊಲಿಸಿಕೊಳ್ಳಲು ಅರಕಲಗೂಡಿನವರೆಗೂ ಹೋಗಬೇಕಾಗಿತ್ತು. ಇವನು ಬಂದದ್ದೇ ಅವರೆಲ್ಲರಿಗೂ ‘ನಾವೂ ಮುಂದುವರೀತಿದಿವಿ’ ಅನ್ನೋ ಲಾಂಛನವನ್ನ ಹಾಕಿಕೊಂಡ ಹಾಗೆ ಅನ್ನಿಸಿತೇನೊ. ಅಲ್ಲಿವರೆಗೂ ಅಮ್ಮಂದಿರೆಲ್ಲಾ ಬ್ಲೌಸನ್ನು ತಾವೇ ಕೈಯಲ್ಲಿ ಹೊಲಿದುಕೊಂಡು ಹಾಕಿಕೊಳ್ಳುತ್ತಿದ್ದರು. ಅಪ್ಪ, ಯುಗಾದಿಗೆ, ದೀಪಾವಳಿಗೆ, ನವರಾತ್ರಿಗೆ ಅಂತ ವರ್ಷದಲ್ಲಿ ಮೂರು ಸರ್ತಿ ಅರಕಲಗೂಡಿಗೆ ಕರೆದುಕೊಂಡು ಹೋಗಿ ತಾವೂ ಶರ್ಟು ಹೊಲಿಯೋಕ್ಕೆ ಕೊಟ್ಟು ನಮಗೂ ಲಂಗ ಬ್ಲೌಸು ಹೊಲಿಸಿಕೊಡುತ್ತಿದ್ದರು. ಅದೇ ದೊಡ್ಡ ಸಂಭ್ರಮ ನಮಗೆ. ಹಬ್ಬಕ್ಕೆ ಇನ್ನೆರೆಡು ತಿಂಗಳಿದೆ ಅನ್ನುವಾಗಲೇ, ಅಮ್ಮ ಅರಕಲಗೂಡಿಗೆ ಯಾವಾಗ ಹೋಗೋದು ಎಂದು ಅಪ್ಪನಿಗೆ ದುಂಬಾಲು ಬೀಳುತ್ತಿದ್ದಳು. ಅಪ್ಪ ಇವತ್ತು ಕರಕೊಂಡ್ ಹೋಗ್ತಿನಿ ನಾಳೆ ಕರ್ಕೊಂಡ್ ಹೋಗ್ತಿನಿ ಅಂತ ಮುಂದೆ ತಳ್ಳುತ್ತಾ ಹಬ್ಬಕ್ಕೆ ಹದಿನೈದು ದಿನ ಇದೆ ಅನ್ನುವಾಗ ನಮ್ಮನ್ನೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಅಮ್ಮನಿಗೆ ಈ ಬಟ್ಟೆ ಹೊಲಿಸುವ ಕಾರ್ಯಕ್ರಮದಿಂದ ಸಾಕುಬೇಕಾಗಿ ಹೋಗುತ್ತಿತ್ತು.
ಅರಕಲಗೂಡಿನ ವೈಶಾಲಿ ಟೇಲರಿಂಗ್ ಹಾಲಿನ ರಾಜಶಟ್ಟಿ ಒಂದು ರಾಶಿ ಬಟ್ಟೆಗಳ ನಡುವೆ ದುಶ್ಯಾಸನನ ಥರ ಕೂತಿರುತ್ತಿದ್ದ. ನಾವು ಬಟ್ಟೆ ತೆಗೆದುಕೊಂಡು ಹೋಗಿ ಕೊಟ್ಟೆರೆ ನಮ್ಮನ್ನೊಮ್ಮೆ ಕಣ್ಣೆತ್ತಿ ನೋಡಿ ಹಳೇ ಪುಸ್ತಕದಲ್ಲಿ ಏನನ್ನೋ ಗೀಚಿಕೊಂಡು ಮುಂದಿನವಾರ ಶಂಕರ್ ಮೋಟಾರ್ಸ್ ನಲ್ಲಿ ಕಳ್ಸ್ಕೊಡ್ತಿನಿ ಹೋಗಿ ಅಂದು ನಮ್ಮ ಬಟ್ಟೆಯನ್ನೂ ಆ ರಾಷಿಯೊಳಗೆ ಮಾಯ ಮಾಡುತ್ತಿದ್ದ. ಅವನಿಗೆ ಅದರಲ್ಲಿ ನಮ್ಮ ಬಟ್ಟೆ ಹ್ಯಾಗೆ ಗೊತ್ತಾಗುತ್ತೆ ಅಂತ ನನಗೆ ಯಾವಾಗಲೂ ಆಶ್ಚರ್ಯವಾಗುತ್ತಿತ್ತು. ನಾನು ನನ್ನ ಬಟ್ಟೆಯಮೇಲೆ ಮೂಲೆಯೊಂದರಲ್ಲಿ ಸಣ್ಣದಾಗಿ ಎಸ್.ಡಿ ಎಂದು ಬರೆದಿಡುತ್ತಿದ್ದೆ. ಆದರೆ ಅವನು ಹೊಲಿದುಕೊಟ್ಟ ಬಟ್ಟೆಯಲ್ಲಿ ಎಷ್ಟು ಹುಡುಕಿದರೂ ಆ ಹಸ್ತಾಕ್ಷರ ನನಗೆ ಸಿಗುತ್ತಲೇ ಇರಲಿಲ್ಲ.
ಒಂದು ವಾರದಲ್ಲಿ ಕಳಿಸಿಕೊಡುತ್ತೇನೆ ಎಂದರೂ ಬಟ್ಟೆ ಬರುತ್ತಿದ್ದದ್ದು ಮಾತ್ರ ಹಬ್ಬದ ಹಿಂದಿನ ದಿನವೇ. ನಾವು ದಿನಾ ಸಂಜೆ ಶಂಕರ್ ಮೋಟರ್ಸ್ ಡ್ರೈವರ್ ಹತ್ತಿರ ಹೋಗಿ ವಿಚಾರಿಸಿ ನಿರಾಶರಾಗಿ ಅದೇ ಸುತ್ತಿಗೆ ಹಿಡಿಶಾಪ ಹಾಕುತ್ತಾ ಮನೆಗೆ ಮರಳುತ್ತಿದ್ದೆವು.
ಹಾಲಿನ ಸೊಸೈಟಿ ಪಕ್ಕದಲ್ಲಿ ಟೇಲರ್ ಒಬ್ಬ ಬಂದಿದಾನೆ ಅಂದಾಗ ನನಗೆ ಖುಷಿಯಾದದ್ದು, ಇನ್ನುಮೇಲೆ ಈ ರಗಳೆಗಳೆಲ್ಲಾ ಇರೋಲ್ಲ ಅನ್ನೋ ಕಾರಣಕ್ಕೆ. ಆವತ್ತು ಸ್ಕೂಲಿಂದ ವಾಪಸ್ಸು ಬರುವಾಗ ಅವನ ಅಂಗಡಿಯ ಮುಂದೆ ಸ್ವಲ್ಪ ಹೊತ್ತು ನಿಂತು ಎಲ್ಲವನ್ನು ಗಮನಿಸಿ ಮನೆಗೆ ಬಂದವಳೇ ಅಮ್ಮನ ಹತ್ತಿರ ಖುಶಿ ಖುಶಿಯಾಗಿ ಅವನ ಬಗ್ಗೆ, ಅವನು ಇಂಗ್ಲೀಷಿನಲ್ಲಿ ಪರ್ಫೆಕ್ಟ್ ಟೇಲರ್ಸ್ ಅಂತ ಬರೆಸಿರುವ ಬೋರ್ಡಿನ ಬಗ್ಗೆ, ಅವನ ಚಂದದ ಗುಂಗುರು ಕೂದಲಿನ ಹೆಂಡತಿಯ ಬಗ್ಗೆ ಸ್ವಲ್ಪ ಉತ್ಪ್ರೇಕ್ಷೆ ಮಾಡೇ ಹೇಳಿದ್ದೆ. ಅಮ್ಮ ನಗುತ್ತಾ ಗಂಡು ಬೀರಿ ಅಂದಿದ್ದಳು. ನಾನು ಹೇಳಿದ್ದರಲ್ಲಿ ಗಂಡುಬೀರಿತನದ್ದು ಏನಿತ್ತು ಎಂದು ಇವತ್ತಿಗೂ ಗೊತ್ತಾಗಿಲ್ಲ. ಅಮ್ಮನಿಗೆ ನನ್ನನ್ನು ಹಾಗೆ ಅಂದು ಅಂದು ಅಭ್ಯಾಸವಾಗಿಹೋಗಿತ್ತೇನೋ.
ಅವನು ಮಂಗಳೂರಿಂದ ಬಂದಿದ್ದಾನೆ ಎನ್ನುವುದೂ ಅವನ ಹೆಂಡತಿಗೆ ಕನ್ನಡ ಬರಲ್ಲ ಎನ್ನುವುದು ಹಾಲು ಸೊಸೈಟಿಯ ಇನ್ನೊಂದು ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದ ವೆಂಕಮ್ಮನಿಂದ ಹುಲಿಕೆರೆಯ ಸಮಸ್ತ ಜನಕ್ಕೂ ವಿತರಣೆಯಾಗಿತ್ತು. ಸಿಕ್ಕಸಿಕ್ಕವರನ್ನು ಮಾತಾಡಿಸುವ ಅವರ ಎಂದಿನ ಚಾಳಿಯಂತೆ ದೇಜಿಯ ಹೆಂಡತಿಯನ್ನು ಮಾತಾಡಿಸಿದ್ದಕ್ಕೆ ಅಲ್ಲೇ ಏನೋ ಹೊಲೆಯುತ್ತಾ ಕೂತಿದ್ದ ದೇಜಿ, ‘ಅವಳಿಗೆ ಮಲಯಾಳಂ ಮತ್ತೆ ತುಳು ಮಾತ್ರ ಬರುವುದಾ, ಕನ್ನಡಮ್ ಗೊತ್ತಿಜ್ಜಿ.’ ಅಂದಿದ್ದನಂತೆ. ಇವನು ನನ್ನೇ ಪ್ರಶ್ನೆ ಕೇಳುತ್ತಿದ್ದಾನೋ ಇಲ್ಲಾ ಉತ್ತರಿಸುತ್ತಿದ್ದಾನ ಎಂದು ಗೊಂದಲಕ್ಕೆ ಬಿದ್ದ ವೆಂಕಮ್ಮ ಸುಮ್ಮನಾಗಿದ್ದರಂತೆ.


ತನ್ನ ಅಂಗಡಿಗೆ ಬಂದವರ ಹತ್ತಿರ ವಿಚಿತ್ರವಾದ ಅವನ ತುಳುಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾ ಅಲತೆ ತೆಗೆದುಕೊಳ್ಳುವಾಗ ‘ನೋಡಿ, ನಿಮಗೆ ಇಲ್ಲಿ ಸ್ವಲ್ಪ ಉದ್ದ ಇಟ್ರೆ ಆಗ್ತದೆ. ಓ.. ಅವರ ರೀತಿ ಹೊಲಿಸಿಕೊಂಡರೆ ಚಂದ ಕಾಣೋದಿಲ್ಲ. ನಿಮ್ಮ ಶೇಪಿಗೆ ಹೀಗೇ ಹೊಲಿಯಬೇಕು’ ಎನ್ನುತ್ತಲೋ ‘ನೋಡಿ ಇಷ್ಟು ಜಾಸ್ತಿ ಬಟ್ಟೆ ಬೇಡ ನಿಮಗೆ. ನೀವು ಸುಮ್ನೆ ಬಟ್ಟೆಗೆ ದುಡ್ಡು ಹಾಕುವುದು ಎಂತಕ್ಕೆ? ನಿಮ್ಮ ಚಿಕ್ಕ ಮಗನಿಗೂ ಇದರಲ್ಲೇ ಒಂದು ಶರ್ಟ್ ಹೊಲಿದುಕೊಡುವಾ’ ಎನ್ನುತ್ತಾ ತನ್ನ ಟೇಲರಿಂಗ್ ಪ್ರತಿಭೆಯನ್ನ ತೋರಿಸುವುದರ ಜೊತೆಗೇ, ಅವರ ವಿಶ್ವಾಸವನ್ನೂ ಸಂಪಾದಿಸುತ್ತಿದ್ದ. ತಾನು ಹೇಳಿದಂತೆ ಹೊಲಿಸಿಕೊಳ್ಳುವ ಹಾಗೆ ಮಾಡಿ ಅಲ್ಲಿನ ಟ್ರೆಂಡ್ ಸೆಟ್ಟರ್ ಆಗಿಬಿಟ್ಟಿದ್ದ.
‘ಏನೇ ಸುಂದ್ರಿ ಇಷ್ಟ್ ಚನ್ನಾಗ್ ಕಾಣ್ಸ್ತಿದಿಯಾ?’ ಅಂತ ಮನೆಯಿಂದ ಹೊರ ಬಂದ ತಕ್ಷಣ ಮೇಷ್ಟ್ರುಮನೆ ಶ್ರೀಧರ ಅಂದಾಗ ನನ್ನೆದೆ ಢಗ್ ಅಂದಿತ್ತು. ಅಯ್ಯೋ ಇವನು ಆಡ್ಕೊತಿದನ? ನಾನು ಮೈ ಅಳತೆ ಕೊಟ್ಟು ಲಂಗ ಬ್ಲೌಸು ಹೊಲಿಸಿಕೊಂಡಿದ್ದು ಗೊತ್ತಾಗ್ ಹೋಯ್ತಾ? ಇನ್ನು ಅಪ್ಪನಿಗೆ ಗೊತ್ತಾಗ್ಬಿಟ್ರೆ ನನ್ ಚರ್ಮ ಸುಲಿತಾರೆ ಎಂದೆಲ್ಲಾ ಯೋಚಿಸಿ ಕಣ್ಣು ತುಂಬಿಕೊಂಡಿತು. ‘ಏ ಹೋಗ..’ ಎನ್ನುತ್ತಾ ದೇವಸ್ತಾನದ ಕಡೆಗೆ ಹೊರಟೆ. ಯಾರು ಚೆನ್ನಾಗಿ ಕಾಣಿಸ್ತಿದಿಯ ಅಂದ್ರೂ ಎದೆ ಹೊಡೆದುಕೊಳ್ಳುತ್ತಿತ್ತು. ಜೊತೆಗೆ ಖುಷಿಯೂ..
ಮನೆಗೆ ಬಂದ ತಕ್ಷಣ ಬಿಚ್ಚಿಟ್ಟು ಹಳೇ ಬಟ್ಟೆ ಹಾಕಿಕೊಂಡಿದ್ದೆ. ಅಪ್ಪ ‘ಹೊಸಾ ಬಟ್ಟೆ ತೆಗ್ದಿಟ್ಬಿಟ್ಯಾ, ಈ ದೇಜಿ ಪರವಾಗಿಲ್ಲ, ಕಣ್ಣಲ್ಲೇ ಅಳತೆ ತಗೊಂಡ್ರೂ ಚನ್ನಾಗ್ ಹೊಲ್ದಿದಾನೆ, ಚನ್ನಾಗ್ ಕಾಣ್ತಿದ್ದೆ ಇವತ್ತು ಅಂದ್ರು.
ನಾನು ಮಾತಾಡದೆ ಸುಮ್ಮನಿದ್ದೆ. ‘ಕಣ್ಣಲ್ಲೇ ಅಳ್ತೆ ತಗೊಂಡು ಹೊಲ್ದುಕೊಡ್ತಿನಿ ಬೇಕಿದ್ರೆ, ಆಮೇಲೆ ಅಲ್ಲಿ ಸರಿ ಇಲ್ಲ, ಇಲ್ಲಿ ಸರಿ ಇಲ್ಲ ಅಂತ ಮತ್ತೆ ನನ್ನ ಬಳಿ ಬರಬೇಡಿ ಆಯ್ತಾ? ಅದರ ಬದಲು ಒಂದೇ ಬಾರಿಗೆ ಅಳತೆ ಕೊಟ್ಟು ಹೊಲಿಸ್ಕೊಳಿ. ನೋಡಿ ಎಷ್ಟು ಚಂದ ಆಗ್ತದೆ ಅಂತ. ನಾನು ಹಾಗೆ ಕೆಟ್ಟ ಮನುಷ್ಯ ಅಲ್ಲವಾ.. ನನಗೆ ನಿಮ್ಮ ವಯಸ್ಸಿನ ತಂಗಿ ಇದಾಳೆ.. ಓ ಅಲ್ಲಿ ಪರ್ಕಳದಲ್ಲಿ. ಹೆದರಬೇಡಿ ಆಯ್ತಾ...’ ವಾರದ ಹಿಂದೆ ಬಟ್ಟೆ ಹೊಲಿಯಲು ಕೊಟ್ಟು ಬರಲು ಹೋದಾಗ ಅಂದ ದೇಜಿಯ ಮಾತುಗಳು ನೆನಪಾಗುತ್ತಿದ್ದವು. ‘ಅದಕ್ಕಲ್ಲ ದೇಜಿ, ದೊಡ್ಡೋರಿಗೆ ಗೊತ್ತಾದ್ರೆ ಇಷ್ಟ ಆಗಲ್ಲ’ ಅಂತ ಅನುಮಾನಿಸಿದ್ದೆ. ‘ಓ ಎಂತದಾ.. ನಾನು ಯಾರಿಗಾದರೂ ಹೇಳೋದುಂಟಾ? ಸತ್ಯವಾಗ್ಲೂ ಯಾರಿಗೂ ಹೇಳಲ್ಲ ಮಾರಾಯ್ರೆ’ ಅಂದಿದ್ದ ಅವನ ಮಾತಿಗೆ ಒಪ್ಪಿ ಹೊಲಿಸಿಕೊಂಡಿದ್ದೆ.
ಹೊಲಿಸಲು ಕೊಟ್ಟು ಬಂದ ರಾತ್ರಿ ಕನಸು: ಅಳತೆ ಕೊಟ್ಟಿದ್ದು ಎಲ್ಲರಿಗೂ ಗೊತ್ತಾದ ಹಾಗೆ, ಅಪ್ಪ ಇದೇ ಅವಮಾನದಿಂದ ರೋಡಿನಲ್ಲಿ ತಲೆತಗ್ಗಿಸಿಕೊಂಡು ಬರುತ್ತಿರುವ ಹಾಗೆ, ನನ್ನ ಹತ್ರ ಮಾತು ಬಿಟ್ಟ ಹಾಗೆ.. ಎಚ್ಚರವಾದಾಗ ಸದ್ಯ ಕನಸು ಎನ್ನಿಸಿದರೂ ಯಾಕಾದರೂ ಅಳತೆ ಕೊಟ್ಟು ಬಂದೆನೋ ಪೇಚಾಡಿಕೊಂಡಿದ್ದೆ.

ಬರಬರುತ್ತಾ ಊರಿನ ಹುಡುಗೀರೆಲ್ಲಾ ಯಾಕೋ ಚನ್ನಾಗಿ ಕಾಣ್ತಿದಾರಲ್ಲ ಅನ್ನಿಸ್ತಿತ್ತು ನನಗೆ. ಬರೀ ನನಗೆ ಮಾತ್ರ ಹಿಂಗನ್ನಿಸ್ತಿದಿಯಾ ಅಂತ ಮೊದಮೊದಲು ಅನುಮಾನವಾದರೂ ಶ್ರೀನಿವಾಸ ಚಿಕ್ಕಪ್ಪ ಮನೆಗೆ ಬಂದಾಗ ಅಪ್ಪನ ಜೊತೆ ಮಾತಾಡುತ್ತಿದ್ದು ಕಿವಿಗೆ ಬಿದ್ದಿತ್ತು. ‘ಬರೀ ಚಿಕ್ಕಮಗಳೂರು, ಮೈಸೂರು, ಬೆಂಗಳೂರಿನ ಮಕ್ಕಳ ಇರಿಕೆ ಚನ್ನಾಗಿದೆ. ನಮ್ಮೂರಿನವರು ಹೆಂಗ್ಹ್ಯಂಗೋ ಇರ್ತಾರೆ ಅನ್ನಿಸ್ತಿತ್ತು. ಆದ್ರೆ ಇಲ್ಲೂ ಎಲ್ಲಾ ಚಿಗತ್ಕೊಂಬಿಟ್ಟಿದಾರೆ’ ಅಂದಿದ್ದರು.
ಎಲ್ಲರೂ ಅಳತೆ ಕೊಟ್ಟು ಹೊಲಿಸಿಕೊಂಡಿದ್ದಾರೆ ಅಂತ ಗೊತ್ತಾಗುತ್ತಿದ್ದರೂ ಯಾವ ಹುಡುಗಿಯ ಹತ್ರ ಕೇಳೋಣಾ ಅಂದ್ರೂ ಭಯ. ನಾನೇ ಸಿಕ್ಕಿಹಾಕಿಕೊಂಡುಬಿಟ್ರೆ ಅಂತ. ಆದರೆ ದೇಜಿ ಮೈ ಅಳತೆ ತೊಗೊಂಡು ಹೊಲಿತಾನೆ ಅಂತ ಎಲ್ಲರಿಗೂ ಗೊತ್ತಾಗಿದ್ದು ಲಕ್ಷ್ಮಿಯಿಂದ. ಅವಳದನ್ನು ತಾನು ಪ್ರೀತಿಸುತ್ತಿದ್ದ ರಾಘವನಿಗೆ ಹೇಳಿದ್ದೇ ತಪ್ಪಾಗಿ ಊರಿಗಿಡೀ ಗೊತ್ತಾಗಿತ್ತು.

ಎಲ್ಲವೂ ಇದ್ದ ಹಾಗೇ ಇದ್ದಿದ್ದರೆ ದೇಜಿ ಬಹಳ ಶ್ರೀಮಂತನಾಗಿ ಒಂದಷ್ಟು ತೋಟವನ್ನೋ ಒಂದೆರೆಡು ಮನೆಗಳನ್ನೋ ಮಾಡಿಕೊಳ್ಳುತ್ತಿದ್ದನೇನೋ? ಆದರೆ ಇದ್ದಹಾಗೆ ಇರುವುದಾದರೂ ಯಾವುದು? ನಾವೆಲ್ಲಾ ಅರಕಲಗೂಡಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಹೊತ್ತಿಗೆ, ಬೆಂಗಳೂರಿನಲ್ಲಿ ಬೇಕರಿ ಇಟ್ಟಿದ್ದ ಶೇಶಿ ಒಂದೆರೆಡು ದಿನಗಳ ಮಟ್ಟಿಗೆ ಊರಿಗೆ ಬಂದಿದ್ದ. ಬಂದವನು ಎಲ್ಲಾ ರೀತಿಯಲ್ಲೂ ತುಂಬಾ ಬದಲಾಗಿದ್ದ. ಅವನು ಹಾಕಿಕೊಂಡಿದ್ದ ಬಟ್ಟೆಗಳನ್ನು ನೋಡಿ ನಮಗೆಲ್ಲಾ ಆಶ್ಚರ್ಯ. ದೇಜಿ ಹೊಲೆಯುವುದಕ್ಕಿಂತ ಚೆನ್ನಾಗಿ ಹೊಲಿದಂತಿತ್ತು. ಎಲ್ಲಿ ಹೊಲಿಸಿಕೊಂಡ್ಯೋ, ಎಷ್ಟಾಯ್ತೋ, ಎನ್ನುವ ಹುಡುಗರ ಪ್ರಶ್ನೆಗಳಿಗೆ, ‘ಹೊಲಿಸ್ಕೊಂಡಿದ್ದಲ್ಲ, ಅಲ್ಲೆಲ್ಲಾ ಈಗ ರಡೀಮೇಡ್ ಬಟ್ಟೆ ಸಿಗತ್ತೆ. ಅಲ್ಯಾಕೆ, ಈಗ ಹಾಸನದಲ್ಲೂ ಸಿಗತ್ತೆ. ನಾವು ಬಟ್ಟೆ ತೊಗೊಂಡು ದೇಜಿ ಕೈಯಲ್ಲಿ ಹೊಲಿಸ್ಕೊಂಡ್ರೆ ನೂರು ರುಪಾಯಾದ್ರೂ ಆಗತ್ತೆ. ಅಲ್ಲಿ ಹೊಲ್ದಿದ್ ಬಟ್ಟೆ ನಿಮ್ ನಿಮ್ ಅಳ್ತೆದೇ ಅರವತ್ತಕ್ಕೋ ಎಂಭತ್ತಕ್ಕೋ ಸಿಗತ್ತೆ. ಇನ್ನು ಕಮ್ಮಿದು ಬೇಕಾದ್ರೂ ಸಿಗುತ್ತೆ’ ಅಂದ. ಇಲ್ಲಿದ್ದ ಹುಡುಗರೆಲ್ಲಾ ಹಾಸನಕ್ಕೆ ಹೋದಾಗ ಒಂದೆರೆಡು ಶರ್ಟು ತೊಗೊಬೇಕು ಅಂತ ಮಾತಾಡಿಕೊಂಡರು. ಕೆಲವೇದಿನಗಳಲ್ಲಿ ನಮ್ಮೂರ ತುಂಬಾ ರಡಿಮೇಡ್ ಬಣ್ಣದ ಶರ್ಟು ಹಾಕಿಕೊಂಡ ಹುಡುಗರು ಹುಲಿವೇಷದಂತೆ ಓಡಾಡತೊಡಗಿದರು.
ನಾವು ಹುಡುಗೀರು ಮಾತ್ರ ನಮ್ಮ ಬಟ್ಟೆ ಹೊಲಿಸಿಕೊಳ್ಳುವುದಕ್ಕೆ ದೇಜಿಯ ಬಳಿಯೇ ಹೋಗುತ್ತಿದ್ದೆವು. ನಾನು ಪಿ.ಯು.ಸಿ ಮುಗಿಸಿ ಬಿ.ಎಗೆ ಮೈಸೂರಿನಲ್ಲಿ ಸೇರಿದ ಮೇಲೆ ದೇಜಿಯ ಬಳಿ ಹೊಲಿಸಿಕೊಳ್ಳುವುದನ್ನು ಬಿಟ್ಟಿದ್ದೆ. ಮೈಸೂರಲ್ಲಿ ಸ್ವಲ್ಪ ಶ್ರೀಮಂತ ಹುಡುಗಿಯರೆಲ್ಲಾ ಚೂಡೀದಾರ್ ಹಾಕ್ತಿದ್ರು. ಬಹಳಷ್ಟು ಜನ ಲಂಗ ಬ್ಲೌಸು ಹಾಕಿಕೊಂಡು ಬರುತ್ತಿದ್ದರೂ, ಅದೂ ಸ್ವಲ್ಪ ಬೇರೆಯ ತರಹವೇ ಇದೆ, ನಾವು ಹಾಕಿಕೊಳ್ಳುವುದಕ್ಕಿಂತಾ ಚೆನ್ನಾಗಿದೆ ಅನ್ನಿಸುತ್ತಿತ್ತು. ನಾನು ಅಲ್ಲೇ ಹೊಲಿಸಿಕೊಳ್ಳಲು ಶುರು ಮಾಡಿದೆ. ಹೀಗಿರುತ್ತಾ ಜನ್ನ ನನಗೆ ಬರೆದ ಪತ್ರವೊಂದರಲ್ಲಿ, ‘ದೇಜಿಗೆ ಈಗ ವ್ಯಾಪಾರವೇ ಇಲ್ಲ. ದೇಜಿಗೆ ಮಾತ್ರ ಅಲ್ಲ, ಬಹಳಷ್ಟು ಚಿಕ್ಕ-ಪುಟ್ಟ ಅಂಗಡಿಗಳು, ಗುಡಿ ಕೈಗಾರಿಕೆಗಳು ಎಲ್ಲವೂ ಮುಚ್ಚಿಕೊಂಡು ಹೋಗುತ್ತಿವೆ. ಗಾಂಧಿ ತತ್ವಗಳಿಗೆ ಬೆಲೆಯೇ ಇಲ್ಲ, ಗಾಂಧೀಜಿ ಸ್ವಾತಂತ್ರಕ್ಕಾಗಿ ವಿದೇಶಿಗಳ ವಸ್ತುಗಳನ್ನು ಸುಟ್ಟರೆ, ಈಗ ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ನಮ್ಮವರು ಗಾಂಧೀಜಿ ತತ್ವಗಳನ್ನ ಸುಡುತ್ತಿದ್ದಾರೆ.....’ ಅಂತೆಲ್ಲ ಬಹಳ ಬೇಸರದಿಂದ ಬರೆದಿದ್ದ. ಆಮೇಲೆ ನನ್ನ ಜೀವನ ಯಾವ್ಯಾವುದೋ ಹಳಿಗಳ ಮೇಲೆ ಓಡಲು ಶುರುವಾಗಿ ನಾನೇ ಎಲ್ಲೆಲ್ಲೊ ಕಳೆದು ಹೋದೆ.


‘ಫೈನಲ್ ಇಯರ್ ಗೋಪಾಲ ನಿನ್ನೇ ಗುರಾಯಿಸ್ತಿದಾನೆ ಕಣೇ’ ಅಂತ ಕಾಲೇಜು ಗೇಟು ದಾಟುತ್ತಿದ್ದವಳ ಕೈ ಚಿವುಟಿದಳು ರೇಶ್ಮ. ಅವನನ್ನು ತಿರುಗಿ ನೋಡಿದ್ದೆ. ಅಬ್ಬಾ ಅನ್ನಿಸಿತ್ತು. ಇಷ್ಟ ಆಗಿ ಹೋಗಿದ್ದ. ಮೈತುಂಬ್ಬಿಕೊಂಡ ಎತ್ತರದ ಆಕಾರ, ನಾನು ಮೆಚ್ಚುವ ನಸುಗಪ್ಪು ಬಣ್ಣ.. ಅವನ ದೇಹದಿಂದ ಯಾವುದೋ ಬೆಳಕಿನ ಸಂಚಲನವಾಗುತ್ತಿದೆ ಅನ್ನಿಸಿದ್ದು ಆ ಕ್ಷಣಕ್ಕೆ ಭ್ರಮೆ ಅಂದುಕೊಂಡಿದ್ದೆ. ಕ್ಲಾಸಿನ ಮುಂದೆ ಬಂದು ನನ್ನ ನೋಡುತ್ತಾ ಸಣ್ಣದಾಗಿ ನಗುತ್ತಾ ನಿಂತಿರುತ್ತಿದ್ದ. ನಗು ಬರುತ್ತಿದ್ದರೂ ಅವನ ಕಡೆ ನೋಡದೆ, ಪಾಠದಮನೆ ರಂಗಸಾಮಿ ಅಯ್ಯಂಗಾರ್ ಅವರ ಎರಡನೇ ಪುತ್ರಿ ಶ್ರೀದೇವಿ ಎಚ್. ಆರ್ ತನ್ನ ಪ್ರಪಂಚದ ಬಾಗಿಲನ್ನು ಅವನಿಗೆ ಮುಚ್ಚಿ ಭದ್ರವಾಗಿ ತನ್ನ ಪಾಡಿಗಿದ್ದಳು. ಅವನು ಫೈನಲ್ ಇಯರ್ ಮುಗಿಸಿ ಹೋದಮೇಲೆ, ‘ಛೆ! ಒಂದು ಸಲವಾದರೂ ಮಾತಾಡಿದ್ದರೆ ಏನಾಗೋದು?’ ಎಂದು ಹಳಿದುಕೊಂಡಿದ್ದು ಲೆಕ್ಕವಿಲ್ಲದಷ್ಟು ಸಲ. ಆದರೆ ನಾನು ಸೆಕೆಂಡ್ ಇಯರ್ ಕೊನೆಯಲ್ಲಿರುವ ಹೊತ್ತಿಗೆ, ಅವನನ್ನು ಮರೆತೇ ಬಿಟ್ಟಿದ್ದೆ ಅಥವಾ ಹಾಗೊಬ್ಬ ಇದ್ದ ಅಂತ ನೆನಪಾಗುತ್ತಿದ್ದ. ಆದರೆ ನನ್ನ ಕಾಲೇಜಿನ ನೆನಪುಗಳಲ್ಲಿ ಮಾತ್ರ ದಾಖಲಾಗುತ್ತಾನೆ ಅಂದುಕೊಂಡಿದ್ದವ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದ. ಮುಜುಗರವಿಲ್ಲದೆ ಬಂದು ಮಾತಾಡಿಸಿದವನನ್ನು ಮಾತಾಡಿಸುತ್ತಾ ನನ್ನ ಮುಜುಗರವೆಲ್ಲಾ ನೀರಾಗಿತ್ತು. ಎಲ್ಲಾ ಮಾತಾಡಿದಮೇಲೆ ‘ಸಿ. ಎ ಕಟ್ಟಿದ್ದೀನಿ. ಇನ್ನು ಮೂರ್ ವರ್ಷ ಆಗತ್ತೆ. ಅಷ್ಟರೊಳಗೆ ಯಾರನ್ನು ಒಪ್ಕೊಬೇಡ, ಪ್ಲೀಸ್. ನಾನು ಫೇಲ್ ಆದ್ರೆ ನಿನ್ ತಂಟೆಗ್ ಬರಲ್ಲ. ಅಲ್ಲಿವರ್ಗು ಕಾಯ್ತಿಯಾ? ನೀನ್ ನಂಗ್ ಇಷ್ಟ’ ಅಂದಿದ್ದ. ನಾನು ಮೊದಲು ಒಪ್ಪಲಿಲ್ಲ. ಫೈನಲ್ ಇಯರ್ ಡಿಗ್ರಿ ಮುಗಿಸಿ ಕಾಲೇಜು ಬಿಡುವ ಹೊತ್ತಿಗೆ ಮತ್ತೆ ಬಂದ ಅವನು, ‘ನಾನು ಆರ್ಟಿಕಲ್ಶಿಪ್ನಲ್ಲೇ ಸಿ.ಎ ಇಂಟರ್ ಮುಗ್ಸಿದೀನಿ. ನಂಗೆ ನಿನ್ನ ಬೇಡ್ಕೊಳಕ್ಕೆ ಇಷ್ಟ ಇಲ್ಲ, ಆದ್ರೆ ನಿನ್ ಜೊತೆ ಖುಷಿಯಾಗಿರ್ತಿನಿ ಅಂತ ಗೊತ್ತು. ಉತ್ತರ ಹೇಳಿ ಹೋಗು’ ಅಂದ. ಏನೂ ಮಾತಾಡದೆ ಬಂದ ನಾನು ಉತ್ತರ ಹೇಳಿದ್ದು ಅಪ್ಪನಿಗೆ.
‘ಅದ್ಯಾವ್ದೋ ಸ್ಮಾರ್ತ ಮುಂಡೇಮಗನ್ನ ಪ್ರೀತಿಸಿ ಬಂದಿದಾಳೆ ನಿಮ್ ಮಗ್ಳು, ಬೀದಿ ರಂಡೆ.. ಬೀದಿ ರಂಡೆ..’ ಅಂತ ಅಮ್ಮ ಕೂಗಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ. ಅಪ್ಪ ‘ಓದಿದ್ದು ಸಾಕು’ ಅಂದರು. ಹಿಂಗೆಲ್ಲಾ ಆಯಿತು ಅಂತ ಅವನಿಗೆ ಪತ್ರ ಬರೆದು ಹಾಕಿದೆ. ‘ತಲೆಕೆಡಿಸಿಕೊಳ್ಳಬೇಡ. ಬ್ಯಾಂಕ್ ಎಕ್ಸಾಂ ಕಟ್ಟು. ನಾ ಪುಸ್ತಕಗಳನ್ನು ಕಳ್ಸ್ಕೊಡ್ತಿನಿ. ಕಷ್ಟ ಆಗಲ್ಲ. ಇನ್ನೊಂದುವರೆ ವರ್ಷ ಅಷ್ಟೆ. ನಾನು ಸಿ.ಎ. ಫೈನಲ್ಸ್ ಮುಗಿಸಿದ ತಕ್ಷಣ ಮದುವೆಯಾಗೋಣ’ ಎಂದು ಸಮಾಧಾನ ಹೇಳುತ್ತಿದ್ದ. ಆ ಎರಡು ವರ್ಷಗಳು ನರಕ. ಅಮ್ಮನ ನಿರಂತರ ಗೊಣಗಾಟದ ನಡುವೆಯೂ ಸಾಹಿತ್ಯ ಓದಿಕೊಂಡಿದ್ದವಳು, ಹಠಕ್ಕಾಗಿಯೇ ಓದಿ ಪಾಸು ಮಾಡಿ ಅಕೌಂಟು ಸ್ಟಾಟಿಸ್ಟಿಕ್ಸ್ಗಳ ನಡುವೆ ಕರಗಿ ಹೋದೆ. ಆಗ ನೆಮ್ಮದಿ ತರುತ್ತಿದ್ದಿದ್ದು ಅವನ ಪತ್ರಗಳು ಮತ್ತು ಶ್ರೀನಿವಾಸ ಚಿಕ್ಕಪ್ಪನ ಸಮಾಧಾನದ ಮಾತುಗಳು. ‘ನಿನ್ನದು ಕುರುಡು ಪ್ರೀತಿ ಅಲ್ಲ ಅಂತ ಗೊತ್ತು ಮಗಳೇ. ಅವನು ಎಕ್ಸಾಮ್ ಪಾಸು ಮಾಡಲಿ, ನಾನು ನಿನ್ನಪ್ಪನನ್ನು ಒಪ್ಪಿಸುತ್ತೇನೆ’ ಅಂದಿದ್ದರು. ಅವನು ಒಂದೇ ಅಟೆಮ್ಟಿಗೆ ಸಿ.ಎ ಪಾಸು ಮಾಡಿದ.. ಅಪ್ಪನೂ ‘ಹೋಗಲಿ ಬ್ರಾಹ್ಮಣರೇ ತಾನೇ’ ಅನ್ನತೊಡಗಿದರು. ನನಗೇ ಆಶ್ಚರ್ಯವಾಗುವಂತೆ ಹೆಣ್ಣು ಕೇಳಲು ಬಂದವರಿಗೆ ಒಳ್ಳೆಯ ಸತ್ಕಾರ ಮಾಡಿ ಮದುವೆ ನಿಶ್ಚಯಿಸಿದರು. ‘ಈಗೆಲ್ಲಾ ತ್ರಿಮತಸ್ತರು ಒಂದಾಗದಿದ್ದರೆ ಆಗೋಲ್ಲ’ ಅಂತೆಲ್ಲಾ ಅಪ್ಪ, ಅವನ ತಂದೆ ಮಾತಾಡಿಕೊಳ್ಳುತ್ತಿದ್ದರೆ ಇವರ ಜಾತಿಯ ಭ್ರಮೆಗೆ ತಲೆಚಚ್ಚಿ ಕೊಳ್ಳುವ ಹಾಗಾಗುತ್ತಿತ್ತು. ಮದುವೆ ನಮ್ಮ ಇಷ್ಟದ ಪ್ರಕಾರವಾಗಿಯೇ ನಡೆಯಿತು. ಬಹಳಷ್ಟು ಜನ ಕುವೆಂಪುರವರ ಮಂತ್ರ ಮಾಂಗಲ್ಯದಿಂದ ಪ್ರಭಾವಿತರಾಗಿ ಮದುವೆಯಾದಂತೆ ನಾವೂ ಆದೆವು. ಇದೆಲ್ಲಾ ಆಗಿ ಹತ್ತು ಹನ್ನೆರೆಡು ವರ್ಷಗಳಾಗಿವೆ ಅಷ್ಟೆ. ಮೊದಲು ಹರಿಹರನ್ ಅಂಡ್ ಕೋ. ನಲ್ಲಿ ಕೆಲಸ ಮಾಡುತ್ತಿದ್ದವನು, ತನ್ನದೇ ಫರ್ಮ್ ಶುರುಮಾಡಿದ. ಅಪ್ಪ ಅಮ್ಮನಿಗೆ ಅಳಿಯ ಚಾರ್ಟೆಡ್ ಅಕೌಂಟೆಂಟ್ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ.


ತೋಟ ಸುತ್ತಿ ವಾಪಸ್ಸು ಬರುವ ದಾರಿಯಲ್ಲೇ ಜನ್ನನ ಶಾಲೆ. ಜನ್ನ ಮರದ ಟೇಬಲ್ಲಿನ ಮುಂದೆ ಕೂತು ಕೈಯಲ್ಲೊಂದು ರೀಫಿಲ್ ಹಿಡಿದುಕೊಂಡು ಪೇಪರಿನ ಮೇಲೆ ಎಂತದೋ ಬರೆಯುತ್ತಾ ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿಹೋಗಿದ್ದ. ‘ನಿಂಗೆ ಪೆನ್ನಿಗೆ ಗತಿ ಇಲ್ವ? ರೀಫಿಲ್ನಲ್ಲಿ ಬರೀತಿದ್ಯಲ್ಲ’ ಚುಡಾಯಿಸುತ್ತಾ ಒಳಗೆ ಹೋದೆ. ‘ಅಯ್ಯೋ ತಕ್ಷಣಕ್ಕೆ ಏನೂ ಸಿಗಲಿಲ್ಲ ಅದಕ್ಕೇ ಈ ರೀಫಿಲ್ಲಿನಲ್ಲೇ ಲೆಕ್ಕ ಹಾಕ್ತಿದ್ದೆ’ ಅನ್ನುತ್ತಾ ನಕ್ಕ. ‘ಗಾಂಧಿ ಜಯಂತಿಯನ್ನ ವಿಜೃಂಭಣೆಯಿಂದ ಆಚರಿಸೋಣ. ಎಷ್ಟು ಖರ್ಚಾಗುತ್ತೆ ಲೆಕ್ಕ ಕೊಡಿ, ಅಂತ ಕೇಳಿದಾರೆ ಹೆಡ್ಮಾಷ್ಟ್ರು’ ಅಂದ. ಏನು ಮಾಡ್ತಾಇದಿಯಾ ಕೇಳಿದೆ ‘ಗಾಂಧಿ ಗ್ರಾಮ ಅಂತ ಒಂದು ನಾಟ್ಕ ಆಡ್ಸ್ತಿದಿನಿ, ಭಾರತದ ಹೋರಾಟದ ಕಥೆ, ಕಳೆದ ಐವತ್ತು ವರ್ಷಗಳಲ್ಲಿ ಹೇಗೆ ನಾವೆಲ್ಲಾ ಗೋಡ್ಸೆ ಆಗಿದ್ದೀವಿ ಬ್ರಿಟಿಷರಿಂದ ಪಾರಾಗುವುದಕ್ಕೆ ಅಷ್ಟೊಂದು ಹೋರಾಡಿದ ಕೆಲವೇ ವರ್ಷಗಳಲ್ಲಿ ಅಮೇರಿಕಾಕ್ಕೆ ನಮ್ಮನ್ನ ಹೇಗೆ ಮಾರಿಕೊಂಡು ಬಿಟ್ಟಿದ್ದೀವಿ ಅನ್ನೋದೆಲ್ಲಾ ಹೇಳೋಕೆ ಹೊರತಿದ್ದೀನಿ. ದುಬಾರಿ ಪ್ರೊಡಕ್ಷನ್ನು ಈ ಖಾದಿ ಜುಬ್ಬ ಖಾದಿ ಟೋಪಿ ಹೊಂದಿಸೋದೇ ಸಮಸ್ಯೆಯಾಗಿದೆ..’ ಅಂದ. ಜಗತ್ತಿನ ಎಲ್ಲಾ ಜವಬ್ದಾರಿಗಳೂ ತನ್ನ ಮೇಲಿದೆ ಎನ್ನುವ ಟೆನ್ಷನ್ನಲ್ಲಿ, ಸಂಭ್ರಮದಲ್ಲಿ ಇದ್ದ. ನನಗೆ ನಗು ಬರುತ್ತಿತ್ತು. ಸಂಜೆ ದೇಜಿ ಹತ್ರ ಹೊಲಿದು ಕೊಡ್ತೀಯಾ ಅಂತ ಕೇಳಬೇಕು ಅಂದ.
‘ದೇಜಿ ಈಗ್ಲೂ ಹೊಲೀತಾನಾ? ಅವನು ಅಂಗಡಿ ಮುಚ್ಚಿಯಾಗಿದೆ ಅಂದಿದ್ದೆ’ ಎಂದಿದ್ದಕ್ಕೆ ‘ಅಂಗ್ಡಿ ಮುಚ್ಚಿದ್ದ್ರೂ ನಾ ಕೇಳಿದ್ರೆ ಇಲ್ಲ ಅನ್ನಲ್ಲ’ ಅಂದ. ‘ಆಮೇಲೆ ಇಂಥ ಪ್ರೋಗ್ರಾಮುಗಳಿಂದಾದರೂ ಅವನಿಗೊಂದಷ್ಟು ಸಹಾಯ ಆಗಲಿ, ಉಸಿರಾಡಲೂ ತ್ರಾಣ ಇಲ್ಲದ ಇಂಥಾ ಗಾಂಧಿಯ ಮಕ್ಕಳನ್ನ ಗಾಂಧಿ ಜಯಂತಿಯಾದರೂ ಬದುಕಿಸಲಿ ಅಂತ’ ಅಂದ. ನನಗೂ ದೇಜಿಯನ್ನ ನೋಡಬೇಕೆನಿಸಿತು. ‘ನೀನು ದೇಜಿ ಹತ್ರ ಹೋದ್ರೆ ನನ್ನನ್ನೂ ಕರಿ’ ಅಂದೆ. ‘ಓಹೋ ನಿಂಗೇನು ಕೆಲ್ಸ ಅಲ್ಲಿ. ನಿಮ್ಮಂಥಾ ಜಾಗತೀಕರಣದ ಹಾಲು ಕುಡಿದು ಬೆಳೆದ ಕೂಸುಗಳು ಅಂಥವರ ಮೇಲೆ ಕರುಣೆ ತೋರಿಸೋದು ಬೇಡ.’ ಅಂದ ವ್ಯಂಗ್ಯವಾಗಿ. ‘ಸಿನಿಕನ ಥರ ಮಾತಾಡ್ಬೇಡ. ಹೋಗೋ ಮುಂಚೆ ಮನೆ ಕಡೆ ಬಾ. ಇಲ್ಲ ಅಂದ್ರೆ ನಾನೇ ಹೋಗ್ಬರ್ತಿನಿ’ ಅಂದೆ. ‘ಇಲ್ಲ ಮರಾಯ್ತಿ ಬರ್ತಿನಿ ಆರುವರೆಗೆ.’ ಅಂದು ನಕ್ಕ.
ಮನೆಗೆ ಬಂದಾಗ ಅಮ್ಮ ಹೂ ಕಟ್ಟುತ್ತಾ ಕೂತಿದ್ದಳು. ದೇಜಿಯ ಬಗ್ಗೆ ಅಮ್ಮನ ಹತ್ತಿರ ಕೇಳಿದೆ. ಅವನು ಹೊಲಿಯೋದು ಬಿಟ್ಟಿರಬೇಕು. ನಾನಂತೂ ನೋಡ್ಲಿಲ್ಲಪ್ಪ. ಅವನ ಮಗ ಓಡಿ ಹೋದ ಮೇಲೆ ಹೊರಗೆ ಬರೋದೇ ಬಿಟ್ಟಿದ್ದ ಅಂದಳು ಅಮ್ಮ. ಈ ಬೆಳವಣಿಗೆಗಳೆಲ್ಲ ನನಗೆ ಗೊತ್ತೇ ಇರಲಿಲ್ಲ.

7
ನಾನು, ಜನ್ನ ಹಾಲು ಸೊಸೈಟಿಯ ಮುಂದೆ ಬಂದು ನಿಂತಾಗ ಸರಿಯಾಗಿ ಏಳು ಗಂಟೆ. ‘ಹೇಗೂ ಅಲ್ಲೇ ಹೋಗ್ತಿರಲ್ಲ, ಹಾಗೇ ಹಾಲು ತೊಗೊಂಡು ಬಾ’ ಅಮ್ಮ ಪಾತ್ರೆ ಕೊಟ್ಟು ಕಳುಹಿಸಿದ್ದಳು. ದೇಜಿ ಮನೆಯ ಬಾಗಿಲ ಬಳಿ ‘ಪರ್ಫೆಕ್ಟ್ ಟೇಲರ್ಸ್’ ತಗಡಿನ ಬೋರ್ಡು ಬಣ್ಣಗೆಟ್ಟು ನಿಂತಿತ್ತು. ಜನ್ನ ಬಾಗಿಲು ಬಡಿದ. ಐದು ನಿಮಿಷ ಒಳಗಿನಿಂದ ಯಾವ ಚಲನೆಯೂ ಕಾಣಿಸಲಿಲ್ಲ. ನಂತರ ಅವನ ಹೆಂಡತಿ ಮನೆಯೊಳಗೆ ಬೆಳಕು ಬಂದುಬಿಟ್ಟರೆ ಅನಾಹುತವಾಗುತ್ತೆ ಎಂಬಂತೆ ಒಂದು ಚೂರೇ ಚೂರು ಬಾಗಿಲು ತೆರೆದು ಮುಖ ಹೊರಗಡೆ ಹಾಕಿದಳು. ‘ದೇಜಿ ಇಲ್ವಾ? ಒಂಚೂರ್ ಕೆಲ್ಸ ಇತ್ತು ಗಾಂಧಿಜಯಂತಿಗೆ ಬಟ್ಟೆ ಹೊಲ್ಸದಿತ್ತು’ ಅಂದ. ಅವಳಿಗೇನು ಅರ್ಥವಾಯಿತೋ ‘ಬಣ್ಣಿ’ ಎಂದು ಮಲೆಯಾಳಂಕನ್ನಡದಲ್ಲಿ ಕರೆದು ನಾವು ಒಳಗೆ ಬರುತ್ತಲೇ ಬಾಗಿಲು ಮುಚ್ಚಿದಳು. ಅವನ ಟೇಲರಿಂಗ್ ರೂಮಿಗೆ ಹೋಗಿ ಕಾಯುತ್ತಾ ಕೂತೆವು.
ದೇಜಿ ಬಾಗಿಲ ಬಳಿ ಕಾಣಿಸಿಕೊಂಡ. ಒಂದು ಸುಧೀರ್ಘ ಪ್ರಯಾಣ ಮುಗಿಸಿದವನಷ್ಟು ಸುಸ್ತಾದವನಂತೆ ಕಂಡ. ಕೂದಲು ಬಣ್ಣಗೆಟ್ಟಿದ್ದವು. ಬಾಚಿ ವರ್ಷಗಳೇ ಕಳೆದಿರಬೇಕು. ಜನ್ನ ಅವನನ್ನು ನೋಡಿದ ತಕ್ಷಣ ‘ದೇಜಿ ಹೇಗಿದ್ಯ?’ ಎಂದು ಕೇಳ್ ಅವನ ಉತ್ತರಕ್ಕೂ ಕಾಯದೆ ‘ಒಂದು ದೊಡ್ಡ ಕಾರ್ಯಕ್ರಮ ಮಾಡ್ತಿದಿವಿ ನಾಟ್ಕ ಆಡಿಸ್ತೀವಿ. ಗಾಂಧಿ ಜಯಂತಿನ ತುಂಬ ಜೋರಾಗಿ ಮಾಡ್ತಿವಿ ನನ್ಗೆ ಎಂಟು ಜೊತೆ ಖಾದಿ ಜುಬ್ಬ, ಪೈಜಾಮ, ಗಾಂಧಿ ಟೋಪಿ ಬೇಕು. ನೀನೇ ಬಟ್ಟೆ ತಂದು ಹೊಲ್ದು ಕೊಡು. ಎಷ್ಟಾಗತ್ತೆ ಹೇಳು? ಗಾಂಧಿ ಜಯಂತಿ ಸಮಿತಿಯವರು ದುಡ್ಡು ಕೊಡ್ತಾರೆ. ನಾಳೆ ಬೆಳಗ್ಗೆ ಮಕ್ಕಳನ್ನ ಕಳಿಸ್ತಿನಿ. ಅವ್ರ ಅಳ್ತೆ ತೊಗೊ..’ ಎಂದೆಲ್ಲಾ ಎಡಬಿಡದೆ ಹೇಳಲು ಶುರು ಮಾಡಿದ.
ನಾನು ದೇಜಿಯ ಟೇಲರಿಂಗ್ ಶಾಪನ್ನೇ ನೋಡುತ್ತಾ ನಿಂತಿದ್ದೆ. ಅವನು ಮೊದಲ ಸಲ ನನ್ನ ಅಳತೆ ತೆಗೆದುಕೊಳ್ಳುತ್ತಾ ನನ್ನ ಮುಜುಗರ ಕಳೆಯುತ್ತಾ ಆಡಿದ ಮಾತುಗಳು ನೆನಪಾದವು. ಯಾವತ್ತೂ ಬಟ್ಟೆ ಹೊಲಿಸಿಕೊಳ್ಳದ ನನ್ನ ಮಗಳು ಶ್ರಾವಣಿಗೆ ದೇಜಿ ಹತ್ತಿರ ಉದ್ದ ಲಂಗ ರವಕೆ ಹೊಲಿಸಿಕೊಡಬೇಕು ಅಂದುಕೊಂಡೆ.
ಜನ್ನನ ಮಾತು ಮುಗಿದಿತ್ತು, ದೇಜಿ ಮಾತಾಡದೆ ಟೇಲರಿಂಗ್ ಮೆಷಿನ್ನನ್ನು ಮುಚ್ಚಿದ ಹಳೇ ಪಂಚೆಯನ್ನು ಸರಿಸಿದ. ನೋಡಿ ಎಂಬಂತೆ ನಮ್ಮ ಮುಖವನ್ನೇ ನೋಡಿದ.
ಎಷ್ಟೋ ವರ್ಷಗಳಿಂದ ದೇಜಿ ಕೈಯಲ್ಲಿ ಏನನ್ನೂ ಹೊಲಿಸಿಕೊಂಡಿಲ್ಲವೆಂಬಂತೆ ಅದು ಕೂತಿತ್ತು. ನನ್ನ ಕಣ್ಣಿಗೆ ಯಾವುದೋ ಕಾಲದ ಮ್ಯೂಸಿಯಮ್ ಪೀಸಿನಂತೆ ಕಂಡಿತು. ಜನ್ನ ಒಂಚೂರೇ ಕಾಣಿಸುತ್ತಿದ್ದ ಅದರ ವೀಲನ್ನು ತಿರುಗಿಸಿದ. ವಿಚಿತ್ರವಾದ ಕರ್ಕಶ ಶಬ್ಧ ಹೊರಟಿತು.

(ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಸಿಕ್ಕಿದ ಕತೆ)