Wednesday, October 13, 2010

ನಡೆದಷ್ಟೂ ದಾರಿ ದೂರ

ಭೀಮನ ಕಣ್ಣಲ್ಲಿ ಹಿಡಂಬೆ ಎಂಬ ಕಮಲಪಾಲಿಕೆ

ವನವಾಸ ಶುರುವಾಗಿ ತಿಂಗಳಾಗುತ್ತಾ ಬಂದಿತ್ತು. ಉಳಿದ ಐದು ಜನರೂ ಕಾಡಿನ ಜೀವನಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದರೂ ಭೀಮನಿಗೆ ಸರಿಹೋಗುತ್ತಲೇ ಇರಲಿಲ್ಲ. ಅದರಲ್ಲೂ ಕೃಷ್ಣೆ ಸಾಮಾನ್ಯ ಹೆಂಗಸರಂತೆ ಕಷ್ಟಪಡುವುದನ್ನು ನೋಡಿದಾಗಲೆಲ್ಲ ರೋಷ ಉಕ್ಕುತ್ತಿತ್ತು. ಕಷ್ಟ ಪಡದೆ ವಿಧಿಯೇ ಇಲ್ಲ ಅಂತಾದರೆ ಒಂದು ಥರ ಆದರೆ ಕಣ್ಮುಂದೆಯೇ ಇದೆಯಲ್ಲಾ ಪರಿಹಾರ.
ಆ ಯೋಚನೆಯನ್ನು ಮನಸ್ಸಿಗೆ ಪೂರ್ತಿಯಾಗಿ ತಂದುಕೊಳ್ಳಲೂ ಕಸಿವಿಸಿ. ಏನೋ ಒಂಥರಾ ಮುಜುಗರ ಇಕ್ಕಟ್ಟಿಗೆ ಸಿಲುಕಿದ ಹಾಗೆ. ಹಾಗೇನು ಮುಜುಗರ ಪಟ್ಟುಕೋಬೇಕಿಲ್ಲ, ಹೀಗಾಗಿದೆ ಅಂತ ತಿಳಿಸಿದರೆ ಸಾಕು. ಅಷ್ಟಕ್ಕೂ ಏನಾಗಿದೆ ಅಂತ ತಿಳಿಸಲೂ ಬೇಕಿಲ್ಲ. ಹಾಗೇ ಸ್ವಲ್ಪ ದಿನ ಹೋಗಿದ್ದು ಬಂದು ಬಿಡಬಹುದು. ಆದರೆ ಧರ್ಮ ಒಪ್ಪಬೇಕಲ್ಲ. ಕಾರಣ ಹೇಳಿಯೇ ಹೇಳುತ್ತಾನೆ. ಅವಳಾದರೂ ಸುಮ್ಮನಿದ್ದಾಳ? ಯಾರೂ ಇರಲಿಲ್ಲ ಅಂತ ನನ್ನ ಬಳಿ ಬಂದಿರಿ. ರಾಜ್ಯ ಹೋಗಿಲ್ಲದಿದ್ದರೆ ನನ್ನ ನೆನಪೂ ಆಗುತ್ತಿರುತ್ತಿರಲಿಲ್ಲ ಅಲ್ಲವೇ ಅನ್ನುತ್ತಾಳೆ. ಉಸಿರುಕಟ್ಟಿಸುತ್ತಾಳೆ. ನೀನು ಹೇಳ್ತಿರೋದೆ ಸರಿ, ಹೀಗಾಗಿ ಹೋಯ್ತು. ನೀನೇ ದಿಕ್ಕು ಅಂತ ನೇರವಾಗೇ ಹೇಳಿದ್ರೆ? ಹೌದು, ಆಗ ನೆನಪಿಸಿಕೊಳ್ಳಲಿಲ್ಲ ನಂದು ತಪ್ಪು. ಅದನ್ನ ಒಂದು ಸತಿ ಒಪ್ಪಿಕೊಂಡ್ರೆ ಆಯ್ತಲ್ಲ? ಖಂಡಿತ ಚನ್ನಾಗೇ ನೋಡ್ಕೊತಾಳೆ. ಇಂದ್ರಪ್ರಸ್ಥದ ಜೀವನ ಅಲ್ದೇ ಹೋಗಬಹುದು ಆದ್ರೆ ಹಿಂಗೆ ನಿರ್ಗತಿಕರ ಥರ ಅಂತೂ ಇರ್ಬೇಕಿಲ್ಲ. ಸರಿ ಅಣ್ಣನಿಗೆ ಹೋಗಿ ಹೇಳೋದೇ ಅಂತ ನಿಶ್ಚಯಿಸಿ ಎದ್ದು ನಿಂತ ಭೀಮ.
ಆದರೆ ಎದ್ದು ನಿಂತವನು ಹೆಜ್ಜೆ ಇಡುವ ಮೊದಲೇ ಕೃಷ್ಣೆಯ ನೆನಪಾಯಿತು. ಬೇಜಾರು ಮಾಡ್ಕೊತಾಳೆ. ಅವಳು ಇವಳನ್ನ ಹೇಗೆ ಕಾಣ್ತಾಳೋ? ಮತ್ತೆ ಕೂತುಕೊಂಡ. ತಲೆ ಧಿಮಿ ಧಿಮಿ ಅನ್ನುತ್ತಿತ್ತು. ಬೇಜಾರು ಯಾಕ್ ಮಾಡ್ಕೊಬೇಕು. ಅವ್ಳಿಗೇ ಹೇಳ್ತಿನಿ. ಅರ್ಥ ಮಾಡ್ಕೊತಾಳೆ ಅನ್ನೋ ನಿಶ್ಚಯವು ಮೂಡೋ ಮೊದಲೇ ಕರಗಿ ಹೋಯಿತು. ಕೃಷ್ಣೆ ಬೇಜಾರಾದ್ರೂ ಅಂದು ತೋರ್ಸಲ್ಲ. ಯಾವತ್ತೂ ಅಂದು ತೋರ್ಸಿಲ್ಲ. ಏನೆ ಆರ್ದ್ರೂ ನಿಂಗೇ ಅರ್ಥವಾಗಬೇಕು ಅದಾಗೇ ಅರ್ಥ ಆಗ್ದಿದ್ರೆ, ಅರ್ಥ ಮಾಡ್ಸಿಯೂ ಪ್ರಯೋಜನ ಇಲ್ಲ ಅನ್ನೋದು ಯಾವತ್ತಿನ ಮತು ಅವಳದು. ಭೀಮ ಮತ್ತೆ ನಿಧಾನವಾಗಿ ಯೋಚಿಸಿದ. ಹೆಂಗಿದ್ರು ಕಮಲಪಾಲಿಕೆಯನ್ನು ಬಿಟ್ಟು ಬಂದು ವರ್ಷಗಳೇ ಕಳೆದಿದೆ. ಬಿಟ್ಟು ಬರೋವಾಗ್ಲೇ ಬೇಜಾರು ಮಾಡಿಯಾಗಿದೆ, ವಾಪಸ್ಸು ಬರ್ತಿನಿ ಅಂತ ಮಾತೇನೂ ಕೊಟ್ಟಿಲ್ಲ. ಕರೆದಾಗ ಬರಬೇಕು ಅಂತ ಹೇಳಿದ್ದೀನಿ, ಕರೆಯುವ ಅವಕಾಶ ಬಂದಿಲ್ಲ ಅಷ್ಟೆ. ಈಗ ಹೋದ್ರೆ ಇವಳಿಗೂ ಬೇಜಾರು. ಮಾತಾಡದೆ ಏನನ್ನೂ ಹೇಳದೆ ಮೌನವಾಗಿ ಕೊಲ್ಲುತ್ತಾಳೆ. ಮೊದಲೇ ದ್ಯೂತ ಸಭೇಲಿ ಸಾಕಷ್ಟು ಬೇಜಾರು ಮಾಡಿದ್ದಾಗಿದೆ ಅಂತೆಲ್ಲಾ ಯೋಚಿಸಿ ಸರಿ ಅವಳಲ್ಲಿಗೆ ಹೋಗೋದು ಬೇಡ ಅಂತ ನಿರ್ಧರಿಸಿದ.



ಶ್ರೀಧರನ ನೆನಪಿನಲ್ಲಿ ಇಳಾ ಎಂಬ ಹಿಡಂಬೆ

ಇನ್ನು ಮುಂದೆ ಓದೋಕ್ಕೆ ಸಾಧ್ಯವೇ ಇಲ್ಲ ಅನ್ನಿಸಿ ಬುಕ್ ಮಾರ್ಕನ್ನು ಇಟ್ಟು ಕಣ್ಣು ಮುಚ್ಚಿದ ಶ್ರಿಧರ. ಹೀಗೆ ನೆನಪುಗಳು ತೊಳಸಿಕೊಂಡು ತೊಳಸಿಕೊಂಡು ಬರುವಾಗ ಓದಲಾದರೂ ಹೇಗೆ ಸಾಧ್ಯ? ಭೀಮನನ್ನು ಬೈದರೆ ನನಗ್ಯಾಕೆ ಸಿಟ್ಟು ಬರಬೇಕು, ಲಂಕೇಷರನ್ನು ಓದೋವಾಗಲೂ ಹಿಂಗೇ ಆಗುತ್ತಿತ್ತು. ಅವರ ಕಥೆಗಳನ್ನು ಕಂಡರೆ ದ್ವೇಶ ಹುಟ್ಟಬೇಕು, ಅಷ್ಟು ಹಿಂಸೆ. ಯಾವ ಕಾರಣಕ್ಕೂ ಓದಬಾರದು ಅಂದುಕೊಂಡು ಮುಚ್ಚಿಡುತ್ತಿರಲಿಲ್ಲವ? ಸಾಯಲಿ ಎಸೆದು ಬಿಡೋಣ ಅನ್ನೋಷ್ಟು ಸಿಟ್ಟು ಬಂದರೂ. ಅಲ್ಲಾ ಸುಮ್ಮಸುಮ್ಮನೆ ತಲೆನೋವು ಬರಿಸಿಕೊಳ್ಳಲು ಹುಚ್ಚಾ? ಓದುತ್ತಾ ಹೋದಹಾಗೆಲ್ಲಾ ತಲೆಯೊಳಗೆ ಒಂಥರಾ ಯಾವುದೋ ಯೋಚನೆ. ನಿದ್ದೆ ಬಾರದೆ ಮಾರನೆ ದಿನವೆಲ್ಲಾ ತಲೆ ಧಿಂ ಅನ್ನುತ್ತಿರುತ್ತಲ್ಲ ಹಾಗೇ.. ಹಾಗೇನು, ಅದೇ ಆಗೋದು. ಎಲ್ಲಾ ಕಂಗೆಡಿಸೋ ಕಥೆಗಳು. ನನ್ನ ತಪ್ಪು, ಸ್ವಾರ್ಥ, ಅಹಂಕಾರ ಇನ್ನೂ ನನ್ನೊಳಗಿನ ಬೇಡದ್ದ ಭಾವನೆಗಳನ್ನೆಲ್ಲಾ ಹೊಡದೆಬ್ಬಿಸುವಂಥಾ ಕಥೆಗಳು. ನೂರಾರು ಪುಟಗಳ ಕಾದಂಬರಿಗಳನ್ನ ಸರಾಗವಾಗಿ ಕೆಲವೇ ಗಂಟೆಗಳಲ್ಲಿ ಓದಿ ಮುಗಿಸಿಬಿಡಬಹುದು. ಲಂಕೇಶರ ಒಂದು ಕಥೆ ಓಂದೇ ಏಟಿಗೆ ಓದಿ ಮುಗಿಸಲು ಕಷ್ಟ. ಸ್ವಲ್ಪ ಓದುತ್ತಾಲೇ ಇನ್ನೇನೋ ನೆನಪಾಗಿ, ಸಣ್ಣತನಗಳು ಹೊರಬಂದ ಘಟನೆಗಳು, ಮರತೇ ಬಿಟ್ಟಿದ್ದ ಮಾತುಗಳು ಎಲ್ಲಾ ಸುಪ್ತ ಮನಸ್ಸಿನಿಂದ ಹೊರಬಂದು ಕಿರಿಕಿರಿ ಮಾಡಿ, ಕಾಡಿ, ಹಿಂಸೆ ಮಾಡಿ ಅಯ್ಯೋ ದಮ್ಮಯ್ಯಾ..
ಲಂಕೆಷ್ ಆದರೆ ಒಂದು ರೀತಿಗೆ ಸಮ. ವೈಯಕ್ತಿವಾಗಿ ಗೊತ್ತಿಲ್ಲದವರು, ಅವರು ಬರೆದಿದ್ದನ್ನು ಒಳಮನಸ್ಸು ತನ್ನ ಜೀವನದ ಯಾವುದಕ್ಕೋ ತಳುಕಿ ಹಾಕುವಾಗಲೂ ಒಂಥರಾ ಆಚೆ ಉಳಿದ ಭಾವ ಇರುತ್ತಿತ್ತು. ಆದರೆ ಇವಳು? ಇವಳು ಬರೆದಿರೋದನ್ನ ಇನ್ಯಾರದೋ ಜೀವನಕ್ಕೆ ಸಮೀಕರಿಸಲು ಹೇಗೆ ಸಾಧ್ಯ?

ನಾವಾಡಿಕೊಳ್ಳುತ್ತಿದ್ದ ಮಾತುಗಳೇ. ಭೈರಪ್ಪನವರ ಪರ್ವ ಓದೋಕ್ಕೆ ಮೊದಲೂ ಅವಳಿಗೆ ಭೀಮನೆಂದರೆ ಇಷ್ಟ. ಅದು ಓದಿದಮೇಲಂತೂ ಇನ್ನೂ. ಮಸಾಲೆ ತಿಂದು ಬರೋಣ ಅಂತ ಕ್ಯಾಂಟೀನಿಗೆ ಎಳೆದುಕೊಂಡು ಹೋದರೆ ಇವಳದು ಮತ್ತೆ ಭೀಮ ಹಿಡಂಬಿಯ ಮಾತು. ಮಹಾಭಾರತದ ಕಥೆ ಏನಾದರಾಗಲಿ. ಹಿಡಂಬಿಗೆ ತುಂಬ ಮೋಸವಾಯಿತು. ಮತ್ತೆ ವಾದ ತೆಗೆಯುವಳು. ಅಲ್ಲಾ, ನೀನೇ ಹೇಳು. ಅಷ್ಟು ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದ ಹಿಡಂಬಿ ಇದ್ದೂ ವನವಾಸದ ಕಾಲದಲ್ಲಿ ಅವಳಲ್ಲಿಗೆ ಹೋಗುವ ಯೋಚನೆ ಒಬ್ಬ ಪಾಂಡುಪುತ್ರನಿಗೂ ಹೊಳೆಯಲಿಲ್ಲವೆಂದರೆ ಆಶ್ಚರ್ಯ. ಹೋಗ್ಲಿ, ಭೀಮಾನಾದ್ರು ಈ ಬಗ್ಗೆ ಯೋಚನೆ ಮಾಡಬಹುದಿತ್ತಲ್ಲ? ಯಕೆ ಹೋಗ್ಲಿಲ್ಲ ಅವ್ಳ್ ಹತ್ರ? ನೆನಪಾಗಲಿಲ್ಲ ಅಂದ್ರೆ ನಂಬಕ್ಕಾಗಲ್ಲ. ಅರವತ್ತು ವರ್ಷದ ನನ್ನ ಚಿಕ್ಕ್ ತಾತ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ ಜೊತೆಗೋದುತ್ತಿದ್ದ ಹುಡುಗಿಯ ಬಗ್ಗೆ ನೆನಪಿಸಿಕೊಂಡು ಹೇಳುವಾಗ, ಒಂದು ವರ್ಷ ಸಂಸಾರ ಮಾಡಿ ಜೊತೆಗಿದ್ದ ಹೆಂಡತಿಯ ನೆನಪು ಬರಲಿಲ್ಲ ಅಂದರೆ ವಿಚಿತ್ರ. ಆದರೆ ಸರಿಯಾಗಿ ಯುದ್ಧದ ಹೊತ್ತಿಗೆ ಸಹಾಯ ಮಾಡಲು ಅವಳ ಮಗ ಅವಳ ಜನ ಬೇಕು. ಯೋಚನೆ ಮಾಡು, ಭೈರಪ್ಪನವರು ಬರೆದಿರೋದು ಸರಿ. ಎಲ್ಲಾ ಕುಂತಿಯಿಂದಲೇ ಆದದ್ದು. ಅಲ್ಲ ನಿಜಕ್ಕೂ ಭೀಮನ ತಪ್ಪೇ ಅಲ್ಲ, ಭೀಮ ಅಂತವನಲ್ಲ. ವ್ಯಾಸರೇ ಸರಿ ಇಲ್ಲ, ಬರೀ ಘಟನೆಗಳನ್ನ ಹೇಳಿಬಿಟ್ಟರೆ ಆಯಿತಾ ಸೂಕ್ಷ್ಮಗಳು ಬೇಡ? ವ್ಯಾಸರನ್ನು ಬೈದದ್ದಾಯಿತು, ಹಂಗಂತ ಇಳಾ ಆಗ ವ್ಯಾಸರ ಭಾರತವನ್ನ ಓದಿಕೊಂಡಿದ್ದಳು ಅಂತಲ್ಲ, ವ್ಯಾಸರನ್ನು ಬಯ್ಯುವಾಗ ಅವನನ್ನು ಓದಿಕೊಂಡಿದ್ದೀವಾ ಇಲ್ಲವಾ ಅನ್ನೋದೆಲ್ಲಾ ನೆನಪಿಗೆ ಬರೋಲ್ಲ. ನೆನಪಿಗೆ ಬಂದರೂ ಓದದಿದ್ದರೇನಂತೆ ವ್ಯಾಸರು ಖಂಡಿತ ಹಿಡಂಬಿಯನ್ನ ಕದೆಗಣಿಸಿದ್ದಾರೆ. ಅದಕ್ಕೇ ನೋಡು ಪರ್ವ ಇಷ್ಟ ಆಗೋದು. ಮತ್ತೆ ಪರ್ವಕ್ಕೆ ತಂದು ನಿಲ್ಲಿಸಿದ್ದಳು. ಇಷ್ಟೊತ್ತೂ ಸುಮ್ಮನೆ ಕೂತಿದ್ದ ಅನಂತಮೂರ್ತಿಗಳ ಪ್ರಕಾಂಡ ಶಿಷ್ಯ ಶಿವಪ್ರಸಾದ ಭೈರಪ್ಪನವರನ್ನು ಟೀಕಿಸತೊಡಗಿದ. ಮಾತಿಗೆ ಮಾತು ಬೆಳೆದು ನೀ ವಾದ ಮಾಡ್ಬೇಕು ಅಂತ ಮಾಡ್ತಿಯ, ಸುಮ್ಮನೆ ಬಯ್ಯೋದಂದ್ರೆ ನಿಂಗ್ ಖುಷಿ ನಾನು ಮೂರ್ತಿಗಳನ್ನೇನಾದ್ರೂ ಅಂದ್ನ? ನಂಗೆ ಇಬ್ಬರೂ ಲೇಖಕರೂ ಇಷ್ಟ. ಒಂದು ಕೃತಿಯನ್ನ ಲೇಖಕನ ಹಂಗಿಲ್ಲದೆ ಓದಿಕೊಳ್ಳೋಕ್ಕೆ ಬರೋವರ್ಗೂ ಉದ್ಧಾರ ಆಗೋಲ್ಲ. ಮಸಾಲ ದೋಸೆ ಹೆಂಗಿದೆ? ಎಷ್ಟು ಹೈಜೀನಿಕ್ ಆಗಿ ಮಾಡಿದಾನೆ? ಅನ್ನೋದು ಮುಖ್ಯ ಯಾರು ಮಾಡಿದ್ದು ಅನ್ನೋದಲ್ಲ ಅಂತೆಲ್ಲಾ ಯಾವುದ್ಯಾವುದಕ್ಕೋ ಹೋಲಿಸಿ ಮಾತು ಮುಗಿಸಿದ್ದಳು. ಶಿವಪ್ರಸಾದ್ ಅನಂತಮೂರ್ತಿ ಭೈರಪ್ಪನವರ ವಿಷಯ ಮಧ್ಯೆ ತಂದಿದ್ದು ಇಷ್ಟವಾಗದಿದ್ದರೂ, ನನಗ್ಯಾಕೋ ಕೃತಿಯನ್ನ ಲೇಖಕನ ಹಂಗಿಲ್ಲದೆ ಓದಿಕೊಳ್ಳಬೇಕು ಅನ್ನೋದನ್ನ ಒಪ್ಪಿಕೊಳ್ಳೋಕ್ಕೆ ಆಗಿರಲಿಲ್ಲ.

ಇಳಾಳಿಗೆ ತನ್ನ ಬಗ್ಗೆ ಏನನ್ನಿಸುತ್ತಿತ್ತು ಅಂತ ಶ್ರೀಧರ ಯೋಚಿಸಲು ಶುರು ಮಡಿದ. ನೀನು ನನ್ನ ಭೀಮ ಅನ್ನುತ್ತಿದ್ದಳು. ಆದರೆ, ಹಿಡಂಬಿಯ ಹಾಗೆ ಅವಳಾಗೇ ನನ್ನ ಬಳಿ ಬಂದಿರಲಿಲ್ಲ, ಛೇ ನಮ್ಮಗಳನ್ನ ನಾವು ಪುರಾಣದ ಪಾತ್ರಗಳಿಗೇಕೆ ಹೋಲಿಸಿಕೊಳ್ಳಬೇಕು? ನಾವು ಯಾರು ಅಂತ ಕಂಡುಕೊಳ್ಳೋಕ್ಕೆ ಅವಕಾಶವೇ ಕೊಡದಂತೆ ಚಿಕ್ಕಂದಿನಿಂದ ನೀನು ನಿನ್ನ ತಾತನ ಹಾಗೆ, ಬ್ರಂಹಾಂಡ ಸಿಟ್ಟು. ಆದ್ರೆ ನನ್ನ ಥರ ಮೃದು ಮನಸ್ಸು ಅನ್ನುತ್ತಿದ್ದ ಅಮ್ಮನಿಮ್ದ ಹಿಡಿದು, ನೀನು ಅವನ ಹಾಗೆ ಮಾತು ಕಮ್ಮಿ ಇನ್ಯಾರದೋ ರೀತಿ ನಿನ್ನ ಧ್ವನಿ ಇನ್ನು ಏನೇನೋ.. ಎಲ್ಲರೂ ಹೋಲಿಸುವವರೇ. ನಾನ್ಯರು ಅಂತ ಇವತ್ತಿಗೂ ನನಗೇ ಗೊತ್ತಾಗದ ಹಾಗೆ. ನನ್ನ ಭೀಮನಿಗೆ ಹೋಲಿಸುತ್ತಿದ್ದ, ಭೀಮನನ್ನು ಅಷ್ಟು ಇಷ್ಟ ಪಡುತ್ತಿದ್ದ ಇವಳು ಈಗ ಭೀಮನನ್ನ ಬೇರೆ ರೀತಿಯಲ್ಲಿ ಚಿತ್ರಿಸಿದ್ದಾಳೆ. ಪುರಾಣದ ಪಾತ್ರಗಳ ಸ್ವಭಾವ ಮನುಷ್ಯರ ಈಗಿನ ನಡವಳಿಕೆಗಳ ಆಧಾರದ ಮೇಲೆ ಚಿತ್ರಣಗೊಳ್ಳುತ್ತೆ. ಯೋಚನೆಯೇ ಮಾಡದ, ನೇರಾ ನೇರ ಮನಸ್ಸಿನ, ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದ ಮಗುವಿನ ಹೃದಯದ ಭೀಮ, ಯೋಚನೆ ಮಾಡುವ, ಯಾರ್ಯಾರಿಗೆ ಏನೇನನಿಸುತ್ತೆ? ಅಂತ ಲೆಕ್ಕ ಹಾಕುವ ಭೀಮನಾಗಿ ಹೋಗುತ್ತಾನೆ. ಅವಳಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಕೊಳಕು ಪದಗಳಲ್ಲಿ ಬೈಯ್ಯಬೇಕು ಅನ್ನಿಸಿತು. ಹೀಗೆ ಪುರಾಣವನ್ನ ಮನಸ್ಸಿಗೆ ಬಂದಂತೆ ಚಿತ್ರಿಸಲು ಅವಳಿಗೆ ಹಕ್ಕನ್ನು ಕೊಟ್ಟೋರು ಯಾರು? ಫೋನ್ ಮಾಡಿದರೂ ಬಯ್ಯಲಂತೂ ಆಗೋದಿಲ್ಲ ಅನ್ನೋದೂ ಹೊಳೀತು. ಬಯ್ಯೋದು ಹೋಗ್ಲಿ ಮಾತಾಡಿಸೋಕ್ಕಾದರೂ ಅವಳು ಫೋನ್ ಎತ್ತಬೇಕಲ್ಲ.

ಶ್ರೀಧರ ನಿರ್ಭಾವುಕನಾಗಿ ಓದಿದ ಮತ್ತಷ್ಟು ಪುಟಗಳು

ಎಣಸಿಕೊಂಡಳು, ಇಂದಿಗೆ ಸರಿಯಾಗಿ ಎಂಟು ವರ್ಷ ನಾಲ್ಕು ತಿಂಗಳು, ಇವನು ಹುಟ್ಟೋದನ್ನೀ ಕಾಯುತ್ತಿದ್ದಂತೆ ಹೊರಟರಲ್ಲ ಎಲ್ಲರೂ. ನಿನ್ನ ಕರ್ತವ್ಯ ಅಷ್ಟೇ ಅಂತ ವೇದವ್ಯಾಸರು ಹೇಳಿದರು ಎನ್ನುವ ನೆಪ ಬೇರೆ. ಇವನಾದರೂ ಇರಬಹುದಿತ್ತು. ಅವರಿಗೆಲ್ಲ ಕಷ್ಟವಾಗುತ್ತಿತ್ತು. ಹೌದು, ಸುಖಭೋಗಗಳ ನಡುವೆ ಬೆಳೆದವರ ಕಷ್ಟವೇ ಇದು, ಸುಲಭವಾಗಿ ಕಾರ್ಪಣ್ಯಗಳಿಗೆ, ಬದಲಾವಣೆಗಳಿಗೆ ಹೊಂದಿಕೊಳ್ಳೋಲ್ಲ. ಆದರೂ ಅವರಿಗೆ ಹಿಂಸೆಯಾಗದಂತೆ ನಡೆದುಕೊಳ್ಳುತ್ತಿರಲಿಲ್ಲವಾ ನಾನು? ಯಾರಿಗಾದರೂ ಎದುರು ಮಾತಾಡಿದ್ದೆನಾ? ಅಣ್ಣ ಸತ್ತ ನಂತರ ಕಿರ್ಮೀರನ ಮಕ್ಕಳು ತಾವೇ ಮುಖಂಡರಾಗಬೇಕು ಅಂತ ಎಷ್ಟು ಕಷ್ಟ ಪಟ್ಟರು, ಭೀಮ ಇಲ್ಲದೇ ಹೋಗಿದ್ದರೆ ಅವರೇ ಯಾರಾದರೂ ಬಲವಂತವಾಗಿ ಮದುವೆ ಮಾಡಿಕೊಂಡು.. ಸಧ್ಯ ಹಾಗಾಗಲಿಲ್ಲ. ಸಣ್ಣಂದಿನಿಂದಲೂ ನನಗೆ, ಎಲ್ಲಾದರೂ ಹೋಗಬೇಕು, ಕಾಡುಗಳಿಂದ, ಆಕಾಷ ಕಾಣದಂತೆ ಮುಚ್ಚುವ ಮರಗಳಿಂದ ದೂರ ತುಂ ದೂರಕ್ಕೆ, ಯಾವುದಾದರೂ ಬಯಲಿನಲ್ಲಿ ಅಂಗಾತ ಮಲಗಿಕೊಂಡು ನಕ್ಷತ್ರ ಎಣಿಸಬೇಕು, ಬೇಕಾದಾಗ ಕಾಡಿಗೆ ಹೋಗಿ ಸಾಕಷ್ಟು ಮಾಂಸ ಹಣ್ಣು ತಂದಿಟ್ಟುಕೊಂಡು ಬೇರೇನನ್ನಾದರೂ ಮಾಡಬೇಕು, ಎಲ್ಲಾ ಕಾಡು ಬಯಲು ಝರಿ ಸುತ್ತಬೇಕು, ಹುಡುಗರಂತಿರಬೇಕು ಸುಮ್ಮನೆ ಕೂರಬಾರದು.. ಕನಸುಗಳಿಗೆ ಕಟ್ಟೆಯಲ್ಲಿ?

ರಾಜಕುಮಾರನೊಬ್ಬನನ್ನು ಮದುವೆಯಾಗುತ್ತೇನೆಂದು ಕನಸೂ ಕಂಡಿರಲಿಲ್ಲ. ಮನುಷ್ಯರೆಲ್ಲಾ ದುರ್ಬಲರಾದ ಆಟಿಕೆಗಳಂತೆ ಕಾಣುತ್ತಿದ್ದರು. ಘನವಲ್ಲದ ಯಾವುದೂ ನನ್ನ ಯಾವತ್ತೂ ಆಕರ್ಷಿಸಿದ್ದಿಲ್ಲ. ಅಂಥದ್ದರಲ್ಲಿ ಮನುಷ್ಯರಲ್ಲೊಬ್ಬನಾದ ಇವನನ್ನು ನಾನು ಹಾಗೆ ಬಯಸಿ ಬಯಸಿ ಮದುವೆಯಾಗುತ್ತೇನೆಂದು ಯಾರು ಕಂಡಿದ್ದರು? ನಿಜಕ್ಕೂ ಅವನು ಮನುಷ್ಯರಂತೆಲ್ಲಿದ್ದ? ಅವನ ಅಗಲ ಬುಜ, ತೋಳುಗಳನ್ನು ನೋಡಿದವಳಿಗೆ ಅವನ ಅಪ್ಪುಗೆಯೊಳಗೆ ಪುಡಿಪುಡಿಯಾಗಬೇಕು ಅನ್ನಿಸಿತ್ತು, ನಾಭಿಯಾಳದಲ್ಲಿ ಭೋರ್ಗರೆತ. ನಾಚಿಕೆಯೇ ಇಲ್ಲದವಳಂತೆ ಹೋಗಿ ಕೇಳುವವರೆಗೂ ಅವನು ತಿರಸ್ಕರಿಸಬಹುದು ಎಂದು ಹೊಳೆದೇ ಇರಲಿಲ್ಲ, ಅವನು ತಿರಸ್ಕರಿಸುವ ಒಪ್ಪಿಕೊಳ್ಳುವ ಮೊದಲೇ ಅಣ್ಣ ಬಂದುಬಿಟ್ಟನಲ್ಲ.. ಪಾಪ ಅನ್ನಿಸುತ್ತಿದೆ.. ಭೀಮನನ್ನು ನೋಡಿಯೇ ಅರ್ಥ ಮಾಡಿಕೊಳ್ಲಬೇಕಿತ್ತು. ಅವನು ಸಾಮಾನ್ಯನಲ್ಲ ಅಂತ. ಇಲ್ಲ ಅಣ್ಣನಿಗೆ ಅಹಂಕಾರ, ಅಲ್ಲದೆ ಯಾವತ್ತೂ ಯೊಚನೆ ಮಾಡುವ ಸ್ವಭಾವವೇ ಅಲ್ಲ ಅಣ್ಣನದು, ಮನುಷ್ಯರಲ್ಲವಾ ಅನ್ನೋ ಉಡಾಫೆಯಿಂದಲೇ ಎಗರಿ ಬಿದ್ದ. ಅಣ್ಣನ ಜೊತೆ ನಿಂತು ಹೋರಾಡಿದ್ದರೆ? ಇಲ್ಲ, ಇನ್ನೂ ನಾವು ಹತ್ತು ಜನ ಇದ್ದರೂ ಭೀಮ ಭೀಮನೇ... ಜೊತೆಗೆ ಅವನೊಬ್ಬ ಎದ್ದು ನಿಂತನಲ್ಲ ಬಿಲ್ಲು ಬಾಣ ಹಿಡಿದುಕೊಂಡು, ಇದೆಲ್ಲಾ ಈಗ ಹೊಳಿಯುತ್ತೆ. ಆಗ ನಿಜಕ್ಕೂ ನನ್ನ ಆವಾಹಿಸಿಕೊಂಡಿದ್ದು ಅವರಿಬ್ಬರ ಕಾದಾಟ. ಅಣ್ಣ ಪ್ರಾಣಿಗಳ ಮೇಲೆ ಎಗರುವಂತೆ ಅವುಗಳಿಗೆ ಪೆಟ್ಟುಕೊಡುವಂತೆ ಭೀಮನ ಮೇಲೆ ಎಗರುತ್ತಿದ್ದರೆ, ಭೀಮನದು ಲೆಕ್ಕಾಚಾರದ ಹೊಡೆತ. ಹೊಡೆದಾಡುವುದನ್ನು ಹೇಳಿಕೊಡುವುದಕ್ಕೂ ಅವರಿಗೆ ಗುರುಗಳಿರುತ್ತಾರೆ ಅಂತ ಗೊತ್ತಾಗಿದ್ದು ಆಮೇಲೆ. ಇವನು ಯೋಚನೆ ಮಾಡುವ ಮೊದಲೇ ಅವರಮ್ಮನೇ, ಹೂಂ ಒಪ್ಪಿಕೋ ಭೀಮ ಅವಳನ್ನು ಮದುವೆ ಮಾಡಿಕೋ ಅಂದುಬಿಟ್ಟರಲ್ಲಾ... ಅವನಿಗೇ ಆಶ್ಚರ್ಯ ಆಗುವಂತೆ. ಅವನು ನಿರಾಕರಿಸುವ ಹೊತ್ತಿಗೆ ಆ ಗಡ್ಡದ ವ್ಯಾಸ ಎಲ್ಲಿಂದಲೋ ಹೇಳಿಮಾಡಿಸಿದಂತೆ ಬಂದನಲ್ಲ, ಅವನ ಮಾತನ್ನು ಮೀರುವ ಹಾಗೇ ಇಲ್ಲವಂತೆ. ಆ ಬಿಲ್ಲು ಬಾಣದವನ ಮುಖದಲ್ಲಿ ತೆಳ್ಳಗೆ ಕಂಡೂಕಾಣದಂತೆ ಹರಡಿದ್ದು ತಿರಸ್ಕಾರವೇ ಇರಬೇಕು. ಇಲ್ಲಿರುವವರೆಗೂ ಅವನು ನನ್ನೆಡೆಗೆ ನಮ್ಮವರೆಡೆಗೆ ಬಿಗಿಯಾಗೇ ಇದ್ದ. ಅರ್ಥವಿಲ್ಲದ ಅಹಂಕಾರ.
ಮೊದಮೊದಲು ಕಸಿವಿಸಿ ಪಟ್ಟುಕೊಳ್ಳುತ್ತಿದ್ದ ಭೀಮ ನಿಧಾನಕ್ಕೆ ನನಗೆ ಅಂಟಿಕೊಂಡುಬಿಟ್ಟಿದ್ದ. ಆದರೆ ಕೆಲವೇ ತಿಂಗಳು ಅದು. ಘಟೋದ್ಘಜ ಹೊಟ್ಟೆಯಲ್ಲಿ ಹೊರಳಲು ಶುರುಮಾಡಿದ್ದ ಅಷ್ಟೇ, ಅವರಮ್ಮ ಬಂದು ಹೆಳಿದರಲ್ಲ, ಮಗು ಹುಟ್ಟಿದಮೇಲೆ ನಾವು ಹೊರಡುತ್ತೇವೆ ಅಂತ. ಹುಚ್ಚು ಕೋಪ ಬಂದಿತ್ತು ನನಗೆ. ಅಲ್ಲೇ ಅವಳನ್ನು ಪುಡಿಪುಡಿ ಮಾಡಿಬಿಡುವಷ್ಟು. ಆದರೆ ಭೀಮನ ಅಮ್ಮ ಸುಮ್ಮನಾದೆ. ಭೀಮನಿಗೆ ಹೇಳುತ್ತೇನೆ, ಅವನು ಹೊರಡೋಕ್ಕೆ ಒಪ್ಪಬೇಕಲ್ಲ ಅಂದುಕೊಂಡು ಅವನನ್ನು ಕೇಳಿದರೆ ಅವನು ಕಣ್ಣಿಗೆ ಕಣ್ಣು ಕೊಟ್ಟು ಮಾತಾಡುತ್ತಲೇ ಇರಲಿಲ್ಲ. ಇವನಿಗೂ ಸಾಕಾಗಿ ಹೋಗಿದೆ ಅಂತ ಅಳು ಒತ್ತರಿಸಿಕೊಂಡು ಬಂದಿತ್ತು. ಈಗಲೇ ಹೊರಟು ಹೋಗಿ ಅಂದೆ. ಅವರಮ್ಮ ಮೊಮ್ಮೊಗನ ಮುಖ ನೋಡಿಯೇ ಹೋಗೋದು ಅಂತ ಹಟ ಹಿಡಿದರು. ನಿಜಕ್ಕೂ ಹೋಗಲು ಆತರವಾಗಿದ್ದು ಇವನಿಗೆ. ನಮ್ಮ ಜೊತೆ ಬರುತ್ತೀಯ ಎಂದು ಮಾತಿಗೂ ಕೇಳಲಿಲ್ಲ. ರಾಕ್ಷಸಿಯ ಜೊತೆ ಇದಾನೆ ಎಂದರೆ ಇವನ ಮಾನ ಮಕ್ಕಾಗುವುದಿಲ್ಲವ? ಅವತ್ತಿನಿಂದ ಅವನ ಜೊತೆ ಸುತ್ತಾಡುವುದನ್ನು ನಿಲ್ಲಿಸಿಬಿಟ್ಟೆ, ಮಾತೂ ಎಣಿಸಿದಹಾಗೆ, ನಾನು ನನ್ನ ಹೊಟ್ಟೆಯಲ್ಲಿದ್ದ ಕಂದ, ಅವನೂ ಒಂದೆರೆಡು ಬಾರಿ ಮಾತಾಡಲು ಪ್ರಯತ್ನಿಸಿದೆ ಎನಿಸಿಕೊಳ್ಳಲು ಸಮಾಧಾನ ಮಾಡಲು ಬಂದವನಂತೆ ಮಾಡಿ ಆಮೆಲೆ ಸುಮ್ಮನಾಗಿಬಿಟ್ಟಿದ್ದ. ಹೊರಡುವ ಮೊದಲು ಎಷ್ಟು ಕೊಸರಿಕೊಂಡರೂ ಬಿಡದೆ ಮೂಳೆಗಳು ಮುರಿಯುವಂತೆ ಅಪ್ಪಿಕೊಂಡು ಕಣ್ಣೀರು ಸುರಿಸಿದನಲ್ಲಾ? ಏನರ್ಥ ಅವನದು? ಈ ನಾಟಕಗಳಿಗೆಲ್ಲಾ ಕಲ್ಲಾಗಿ ಹೋಗಿದ್ದೆ ನಾನು. ಹ್ಮ್ ಮ್.. ನಿಟ್ಟುಸಿರೆಳೆದುಕೊಂಡಳು.
ತೆಲೆ ಎತ್ತಿದರೆ ಘತೋಧ್ಗಜ ನಿಂತಿದ್ದ ಏನೋ ಕೇಳಬೇಕೆನ್ನುವಂತೆ ಎಷ್ಟೊತ್ತಿಂದ ನಿಂತಿದ್ದನೋ ಹೇಳು ಸನ್ನೆ ಮಾಡಿದೆ.. ಅವರು ಕಾಡಲ್ಲಿ ನಮ್ಮ ಜೊತೆ ಬಂದು ಇರುತ್ತಾರ? ಬರ್ಬರೀಕ ಹೇಳುತ್ತಿದ್ದ ಅವರು ಹನ್ನೆರೆಡು ವರ್ಷ ಕಾಡಲ್ಲಿ ಇರಬೇಕು ಅಂತ ಆಗಿದೆಯಂತೆ. ಅದಕ್ಕೇ ಇಲ್ಲೇ ಬಂದು ಇರ್ತಾರೆ ನೋಡು ಬೇಕಾದ್ರೆ ಅಂತಿದಾನೆ.. ಸಂಭ್ರಮ ನಿರೀಕ್ಷೆಗಳಿಂದ ಹೇಳಿದ. ಬರ್ಬರೀಕ ಹೇಳಿದ್ದು ನಿಜವಿರಲಿ ಎಂದು ಬೇಡುವಂತೆ. ಆದರೆ ಅವನು ಬರುವುದಿಲ್ಲವೆಂದು ನನಗಿಂತಾ ಚನ್ನಾಗಿ ಯಾರಿಗೆ ಗೊತ್ತಿರಬೇಕು?

ಕಾಡುತ್ತಿರುವುದು ಅವಳಾ? ತನ್ನೊಳಗಿನ ಭಯವಾ?

ಮತ್ತೆ ಪುಸ್ತಕ ಮುಚ್ಚಿದ ಶ್ರೀಧರ. ಮತ್ತದೇ ದಿಮಿಗುಟ್ಟುವ ತಲೆ, ಸೋತ ಸೋತ ಭಾವ.. ಕೋಪವನ್ನ ಹೇಗಾದರಾದರೂ ಹರಿಬಿಡಬೇಕು... ಕಥಾರ್ಸಿಸ್. ಈ ಪುಸ್ತಕವನ್ನ ಚಾಕುವಿನಿಂದ ಚುಚ್ಚಿದರೆ ಅವಳಿಗೆ ನೋವಾಗಬಹುದಾ? ಚುಚ್ಚಿದ ತಕ್ಷಣ ರಕ್ತದಂತೆ ಪದಗಳು ಸೋರಿಹೋದರೆ.. ನಿಜಕ್ಕೂ ಚಲ್ಲಿಹೋಗಬಹುದೇನೊ ಎನ್ನುವ ಅನುಮಾನವಿರುವವನಂತೆ ಪೂರ್ತಿ ಓದಿದಮೇಲೆ ಚುಚ್ಚೋಣ ಅಂದುಕೊಂಡ. ಅವಳನ್ನು ನಾನ್ಯಾಕೆ ಬಿಟ್ಟು ಬಂದೆ ಸಾವಿರ ಸಲ ಕೇಳಿಕೊಂಡಾಗಿದೆ. ಸಾವಿರ ಸಲಕ್ಕೂ ಬೇರೆ ಬೇರೆ ಉತ್ತರಗಳು. ನಿಜವಾದ ಉತ್ತರ ಯಾವುದು? ಅವಳು ಕಂಡುಕೊಂಡ ಉತ್ತರವಂತೂ ಅಲ್ಲ.. ಅವಳು ಸಾಕಾಗಿ ಅವಳಿಂದ ದೂರ ಹೋಗಿ ಸುಖವಾಗಿರಲು.. ಅವಳ ಗಂಡುಬೀರಿತನದಿಂದ ಹೆದರಿಕೊಂಡು ಸಾಕಾಗಿ ಬಂದಿದ್ದಲ್ಲ.. ಯಾಕೋ ನನಗೆ ಯಾರ ಜೊತೆಗೂ ಇರಲು ಸಾಧ್ಯವಿಲ್ಲ ಅನ್ನಿಸುತ್ತೆ. ಪ್ರೀತಿಯಂದರೇನು ಅನ್ನುವ ಉತ್ತರ ಕಂಡುಕೊಳ್ಳಲು ಸಾಧ್ಯವಾಗದೆ ಉಳಿದು ಹೋಗಿದ್ದೇನೆ. ಇದೆಲ್ಲಾ ಅರ್ಥವಾಗುತ್ತಾ ಅವಳಿಗೆ? ಪ್ರೀತಿಸುವವರ ಜೊತೆಗಿದ್ದರೆ ಮಾತ್ರ ಪ್ರೀತಿ ಅರ್ಥ ಆಗೋದು ಅನ್ನುವಂಥ ವ್ಯರ್ಥ ಮಾತುಗಳನ್ನಾಡುತ್ತಾಳೇನೋ ಈಗಲೂ.. ಯಾಕೆ ನನಗೆ ಯಾರನ್ನಾದರೂ ಪ್ರೀತಿಸಲು ಸಾಧ್ಯವೇ ಆಗಿಲ್ಲ? ಸುಮ್ಮನೇ ಜೊತೆಗಿರುತ್ತಾ, ಒಬ್ಬರಿಗೊಬ್ಬರಿಗೆ ಸಹಾಯವಾಗುತ್ತಾ ಅವರ ಸುಖ ದುಖಗಳಲ್ಲಿ ಭಾಗಿಯಾಗುವುದನ್ನೇ ಪ್ರೀತಿ ಅನ್ನುವುದಾದರೆ, ಅಂಥದು ಯಾರ ಜೊತೆಗಾದರೂ ಆಗಬಹುದಲ್ಲಾ? ಆಗ ಅವಳಿದ್ದಳು, ಅವಳು ಅತ್ತರೆ ಪಾಪ ಅನ್ನಿಸುತ್ತಿತ್ತು. ನನಗೆ ಬೇಜಾರಾದರೆ ಅವಳು ಏನಾಯ್ತೋ ಅಂತ ಕೇಳುತ್ತಿದ್ದಳು. ಅದೇ ಅವಳ ಜಾಗದಲ್ಲಿ ಯಾರೇ ಇದ್ದರೂ ನಾನು ಹಾಗೇ ರಿಯಾಕ್ಟ್ ಮಾಡ್ತಿದ್ದೆ, ಅವಳೂ ಅಷ್ಟೇ. ಅದ್ಯಾಕೆ ಅವಳಿಗೆ ಅರ್ಥವಾಗಲಿಲ್ಲ? ಅರ್ಥವಾಗುವುದಿಲ್ಲ?

ಸಿನಿಮಾಗಳನ್ನ ನೋಡಿದರೆ ನಗು ಬರುತ್ತಿತ್ತು. ಅವನು ಪ್ರೀತಿಸಿದ ಹುಡುಗಿ, ‘ನಿ ಇಷ್ಟ ಇಲ್ಲ’ ಅಂತಲೋ, ಅಥವ ಹೇಳಲೇ ಬಾರದ ಗಹನವಾದ ವಿಷಯದಂತೆ ಸುಮ್ಮನಿದ್ದುಬಿಡುವ ಸುಂದರಿ, ಅವಳು ಸಿಗದೆ ದುಃಖಿಸುವ ಅಳುವ, ನೋವಿದ್ದರೂ ಅಥವ ನೋವಿನಲ್ಲಿ(ಅದು ನೋವಾ? ಮತ್ತೆ ಪ್ರಶ್ನೆ?) ಹಾಡುವ ಹುಡುಗ, ಅವಳನ್ನು ದಕ್ಕಿಸಿಕೊಳ್ಳುವುದಕ್ಕೆ ಅವನು ಪಡುವ ಪರಿಪಾಟಲು, ಕೊನೆಗೂ ಸಿಗುವ, ಸಿಗದೇ ಬೇರ್ಯಾರನ್ನೋ ಮದುವೆಯಾಗಿ ಹೋಗುವ, ಇಲ್ಲ ಸತ್ತೇ ಹೋಗುವ ಹುಡುಗಿ. ಎಂಥದೋ ಒಂದು. ಅಂತೂ ಸಿನೆಮಾ ಮುಗಿಯುತ್ತದೆ. ಎಲ್ಲರ ಜೀವನದಲ್ಲೂ ಅಷ್ಟೇ. ಅವನು ಅವಳು ಸಿಗುವವರೆಗೆ ಅದು ಸಿನೆಮಾ, ಆಮೇಲೆ? ಪ್ರೀತಿಯ ಮೊದಲ ಹಂತಗಳು ಮುಗಿದು ‘ನಾನು ಅವನಿಗೇ-ಅವಳು ನನ್ನವಳು’ ಅಂತ ಸ್ಥಾಪಿತವಾದಮೇಲೆ? ಪ್ರೀತಿ ಅಂದರೇನು ಅಂತ ಪ್ರಶ್ನೆ ಹುಟ್ಟುತ್ತದಲ್ಲಾ? ಎಷ್ಟು ತಡಕಾಡಿದರೂ ಉತ್ತರವೇ ಸಿಗದಂಥಾ ಪ್ರಶ್ನೆ, ಅದ್ಯಾಕೆ ಹಾಗೆ? ಒಬ್ಬರಿಗೊಬ್ಬರು ಅಭ್ಯಾಸವಾಗುತ್ತಾ ಹೋಗುತ್ತಾರೆ, ಅವನಿಗೆ ಪೆಟ್ಟಾದರೆ ಇವಳಿಗೆ ಚಿಂತೆಯಾಗುವುದಕ್ಕೆ ಶುರುವಾಗುತ್ತದೆ, ಇವಳು ಅವತ್ಯಾವತ್ತೋ ಊಟ ಮಾಡದೆ ಮಲಗಿದಳು ಅಂತ ಅವನಿಗೆ ಬೇಜಾರು. ಇಂಥದೇ ನೂರು ಥರಾವರಿ ಘಟನೆಗಳಲ್ಲಿ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಕಾಳಜಿ. ಯಾರೇ ಹತ್ತಿರದವರಿಗಾದರೂ ಕಾಳಜಿ ತೋರಿಸುವುದಿಲ್ಲವಾ?? ಕಾಳಜಿಗೂ ಪ್ರೀತಿಗೂ ವೆತ್ಯಾಸ ಉಂಟಲ್ಲ? ಹೌದಾ ಇದೆಯಾ? ಅವನು ಇನ್ನೊಬ್ಬ ಹುಡುಗಿಯನ್ನು ತುಂಬ ಹೊತ್ತು ಮಾತಾಡಿಸಿದರೆ ಇವಳೊಳಗೆ ಧಗ ಧಗ. ಮುನಿಸು ಜಗಳ. ‘ನಾನವನನ್ನು ಪ್ರೀತಿಸೋದರಿಂದ ನಂಗೆ ಹೊಟ್ಟೆ ಉರಿಯುತ್ತೆ, ಪ್ರೀತಿನೇ ಇಲ್ಲಾ ಅಂದಿದ್ರೆ ಏನೂ ಅನ್ನಿಸುತ್ತಿಲಿಲ್ಲ’. ಎಲ್ಲಾ ಕಾಲದ ಪೊಸೆಸ್ಸಿವ್ ಹುಡುಗ ಹುಡುಗಿಯರ ಸ್ಟಾಂಡರ್ಡ್ ಸಮರ್ಥನೆ. ಪ್ರಕಾಶ ಒಮ್ಮೆ ಮಾತಾಡಿದ್ದು ನೆನಪಿಗೆ ಬಂತು. “ಸೈಟ್ ನಂದು. ಅವ್‌ನ್ಯಾರೋ ಬೇವರ್ಸಿ ಬಂದು ಬೇಲಿಹಾಕಿದಾನೆ. ಅವರಪ್ಪನ ಮನೆ ಗಂಟು ಅನ್ನೋ ಥರ. ಅದಕ್ಕೇ ಹೊಟ್ಟೆ ಉರಿಯತ್ತೆ ಬೇರೆಯವರಾಗಿದ್ರೆ ನಂಗೇನ್ ಅನ್‌ಸ್ತಿರ್ಲಿಲ್ಲ” ಅಂದಿದ್ದ. ಹಾಗಾದ್ರೆ ‘ಐ ಓನ್ ದಿಸ್’ ಅನ್ನೋದಕ್ಕೂ ‘ಐ ಲವ್’ ಅನ್ನೋದಕ್ಕೂ ವೆತ್ಯಾಸ ಇಲ್ವಾ? ಪ್ರೀತಿ ದೈಹಿಕ ಸ್ಥಿತಿಗತಿಗಳಿಗೆ ಸಂಭಂದಿಸಿದ್ದಾ? ಇಲ್ಲ ಮನಸ್ಸಿಂದಾ? ಕೊನೆ ಮೊದಲಿರದ ಪ್ರಶ್ನೆಗಳು.
ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ಯಾರನ್ನಾದರೂ ಪ್ರೀತಿಸುತ್ತಿದ್ದೇನೆ ಅನ್ನುವ ಧೈರ್ಯವಾದರೂ ಹೇಗೆ ಬರಬೇಕು ನನಗೆ? ಪ್ರೀತಿ ಇರದೇನೇ ಅದು ಅರ್ಥವಾಗದೇನೇ ಮದುವೆಯಾಗಿ ನರಳುವುದಕ್ಕಿಂತ ಈಥರದ ಜೀವನ ವಾಸಿ ಎಂದು ಆಯ್ದುಕೊಂಡೆ. ಇವಳ್ಯಾರು ನನ್ನ ಕಾಡೋದಕ್ಕೆ?

ಹಿಡಂಬೆಯ ಸ್ವಗತದಲ್ಲಿ ಪೂರ್ವಾಪರದ ಹಳಹಳಿಕೆ

ಕಾಮಕಂಟಕೆ ಇನ್ನೂ ಮಂಕಾಗಿದ್ದಳು.. ಮಗುವೊಂದು ಇಲ್ಲದೇ ಹೋಗಿದ್ದರೆ? ನೆನೆಸಿಕೊಳ್ಳಲೂ ಭಯವಾಯಿತು ಹಿಡಂಬೆಗೆ. ತನಗಾದರೂ ಗಂಡ ಬದುಕಿದ್ದಾನೆ ಎಂಬುದು ತಿಳಿದಿತ್ತು. ನಾನು ವಂಚನೆಗೊಳಗಾದ ಭಾವನೆಯಲ್ಲಿ ನರಳುತ್ತಿದ್ದರೂ ಅವನು ಬದುಕಿದ್ದಾನೆ ಎಂದಾದರೂ ಬರಬಹುದು ಅನ್ನೋ ಸುಳ್ಳು ನಿರೀಕ್ಷೆಯಾದರೂ ಇತ್ತಲ್ಲಾ. ಇವಳಿಗೆ ಕಣ್ಣ ಮುಂದೆಯೇ ಕಾದಾಡಿ ಸತ್ತ ಗಂಡನ ನೆನಪು ಕಬಳಿಸಿ ನುಂಗುವುದಿಲ್ಲವೇ? ಅವಳು ಬದುಕಬೇಕು ತನ್ನ ಮಗುವಿಗಾದರೂ. ಅಯ್ಯೋ ಅವನಿಗೋಸ್ಕರ ಕಾದಾಡಿ ಸತ್ತೆಯಲ್ಲಾ ಮಗನ ಮೇಲೆ ಭೀಮನ ಮೇಲೆ ಅಸಾಧ್ಯ ಸಿಟ್ಟು ಬಂತು. ವಾಪಸ್ಸು ನಡೆದು ಹೋಗಿ ಅಂದು ನಡೆದ ಘಟನೆಗಳನ್ನು ಬದಲಿಸುವ ಶಕ್ತಿಯಿದ್ದಿದ್ದರೆ ಅನ್ನಿಸಿತು. ಘಟೋದ್ಗಜ ಆ ಯುದ್ಧಕ್ಕೆ ಹೋಗುವ ಮೊದಲು ಎಳೆದುಕೊಂಡು ಬರಬೇಕಿತ್ತು. ಸಹಾಯ ಮಾಡಿ ಎಂದು ಅವರ ಕಡೆಯವರು ಬಂದು ಕರೆದರಲ್ಲ. ಸ್ವತಹ ಅವನಮ್ಮ ಕುಂತಿ ಪತ್ರ ಕಳುಹಿಸಿದ್ದಳು. ನಾನು ಮಗನಿಗೆ ಹೋಗು ಅನ್ನಲಿಲ್ಲ, ಹೋಗಬೇಡ ಅನ್ನಬಹುದಿತ್ತು. ಆದರೆ ಹುಟ್ಟಿಸಿದವನಿಗೂ iಗುವಿನ ಮೇಲೆ ಅಧಿಕಾರ ಇರುತ್ತದಲ್ಲ, ಬರೀ ಹುಟ್ಟಿಸಿದ ಕಾರಣಕ್ಕಾದರೂ. ಮಗ ಹೊರಟು ನಿಂತ ಯಾವುದೋ ನಿಶ್ಚಯ ಮೂಡಿದವನಂತೆ. ಹಠ ಬಿಡದ ಎಳೆ ಪ್ರಾಯದ ಹೆಂಡತಿಯೂ ಹೊರಟು ನಿಂತಳು. ಇದೆಲ್ಲಾ ಭೀಮನಿಂದಲೇ ಆದದ್ದು ಕೊಂದುಹಾಕಬೇಕು ಅವನನ್ನು ಅನ್ನಿಸಿತು.
ಕೋಪದಿಂದ ಹೊರಟವಳು ನದಿಯ ಬಳಿ ಬಂದು ಕೂತಿದ್ದಳು. ಹುಳುಗಳು ಮೂಡಿಸುವ ಚಿಕ್ಕಚಿಕ್ಕ ಅಲೆಗಳನ್ನು ಗಮನಿಸುತ್ತಾ. ಯಾರೋ ಬರುತ್ತಿರಬೇಕು ಅನ್ನಿಸಿತು. ಬರ್ಬರೀಕ ಓಡುತ್ತಾ ಬಂದು ಏದುಸಿರಿನಲ್ಲಿ ಹೇಳಿದ ಅವರು ಬಂದು ಕಾಡಿನ ಹೊರಗೆ ಬೀಡು ಬಿಟ್ಟಿದ್ದಾರೆ ತಮ್ಮ ಅಪ್ಪಣೆಯಿದ್ದರೆ ಒಳಗೆ ಬರುತ್ತಾರಂತೆ ಭಟನೊಬ್ಬನನ್ನು ಕಳುಹಿಸಿದ್ದರು. ಯಾರ್ಯಾರಿದ್ದಾರೆ ಕೇಳಿದಳು. ಭೀಮ ಕೊನೆಗೂ ಬಂದಿದಾನೆ ಅನ್ನುವುದು ಬರ್ಬರೀಕ ಹೇಳುವ ಮೊದಲೇ ಹೊಳೆಯಿತು. ಕುಂತಿಯ ಹೆಸರು ಕೇಳಿದೊಡನೆ ಎದ್ದು ನಿಂತಳು.
ದುಖದ ಕಟ್ಟೆ ಒಡೆಯಿತು. ಕುಂತಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಹೇಳಬೇಕಾದ್ದನ್ನು ಹೇಳಿ ನ್ನಿಸೂರಾದ ಕುಂತಿಯ ನಿಟ್ಟುಸಿರಿನಿಂದ ಕಿಡಿ ತಾಕಿಸಿಕೊಂಡ ಹಿಡಂಬಿಯ ಕೋಪ ಅವಳನ್ನೇ ದಹಿಸುತ್ತಿತ್ತು. ಈ ಹೆಂಗಸು ನನ್ನ ಬಳಿ ಬರುವುದೇ ನನ್ನ ಬರಿದಾಗಿಸುವುದಕ್ಕೆ, ಉಗುಳು ನುಂಗುವುದೂ ಯಮಯಾತನೆ. ಎಲ್ಲಾ ಮೊಮ್ಮೊಕ್ಕಳೂ ಮರಿಮಕ್ಕಳೂ ಸತ್ತು ಹೋಗಿದ್ದಾರೆ. ಅದಕ್ಕೇ ಕೊನೆಗೆ ಯಾರೂ ಇಲ್ಲದಕ್ಕೆ ನನ್ನ ಮೊವ್ಮೂಗ ಬೇಕು. ರಾಕ್ಷಸ ರಕ್ತ ಈಗ ಅಸಹ್ಯವಾಗುವುದಿಲ್ಲವಾ? ತಲೆತಗ್ಗಿಸಿಕೊಂಡೇ ಕೂತಿದ್ದ ಭೀಮನನ್ನು ದುರುದುರು ನೋಡಿದಳು. ಕಾಮಕಂಟಕೆಗೆ ಭೀಮ ದೇವರು. ಇವರು ಸತ್ತಾಗ ಹೇಗೆ ದೇಹವನ್ನು ತಬ್ಬಿಕೊಂಡು ಅತ್ತರು ಗೊತ್ತಾ ಹಿಡಂಬಿ? ಕೊನೆಗೆ ದ್ರೌಪದಿ ಬಹಳ ಹೊತ್ತು ಸಮಾಧಾನ ಮಾಡಬೇಕಾಯಿತು. ಇವನೂ ತಾತನನ್ನು ತುಂಬ ಹಚ್ಚಿಕೊಂಡಿದ್ದಾನೆ. ಅವಳು ಸಾವಿರ ಸಲ ಹೇಳಿದ್ದಳು. ಅವಳಿಗೆ ಹೋಗಲು ಮನಸ್ಸಿದೆ ಖಂಡಿತ ನನ್ನ ಉತ್ತರಕ್ಕಾಗಿ ಕಾಯುತ್ತಿರುತ್ತಾಳೆ. ಇನ್ನು ಉಗುಳು ನುಂಗಲಾಗುವುದೇ ಇಲ್ಲಾ.. “ನೀನೂ ಬಂದು ಬಿಡು ಹಿಡಂಬಿ ಇಲ್ಲ್ಯಾಕೆ ಇರಬೇಕು ಕಾಡಿನಲ್ಲಿ ಕಷ್ಟಪಟ್ಟುಕೊಂಡು..” ಉಸುರಿದಳು ಕುಂತಿ. ಅಸಹ್ಯವಾಗಿ ವಾಂತಿಬರುವಂತಾಯಿತು. ತಲೆತಿರುಗಿ ಬಿದ್ದುಬಿಡುತ್ತೇನೆ ಎಂದುಕೊಂಡಳು. ಅವತ್ಯಾವತ್ತೂ ನಾನು ಒಬ್ಬಂಟಿಯಾಗುತ್ತೇನೆ ಎನ್ನೋದು ಹೊಳೆಯಲಿಲ್ಲವಾ? ನಿಧಾನವಾಗಿ ಎದ್ದು ತನ್ನ ಮರದ ಪೊಟರೆಯನ್ನು ಸೇರಿಕೊಂಡಳು. ಭೀಮ ಒಳಹೋಗಲು ನೋಡಿದ ಅದರ ಬಾಗಿಲು ಭಧ್ರವಾಗಿ ಮುಚ್ಚಿತ್ತು.

ಮುಗಿದಿದ್ದು ಕಾದಂಬರಿಯಷ್ಟೇ ನೆನಪುಗಳಿಗೆ ಕೊನೆಯಿಲ್ಲ

ಶ್ರೀಧರ ಯೋಚಿಸತೊಡಗಿದ. ಅಲ್ಲ ಕಾದಂಬರಿಯೊಂದನ್ನು ಮುಗಿಸುವ ರೀತಿಯೇ ಇದು? ಅವಳ ಮನಸ್ಸಿನಲ್ಲಿರೋದಾದರೂ ಏನು? ಏನಿದೆಲ್ಲದರ ಅರ್ಥ? ನಾನವಳನ್ನು ಎಲ್ಲರಿಂದ ದೂರವಾಗುವಂತೆ ಮಾಡಿ ಒಂಟಿ ಮಾಡಿದೆ ಎನ್ನುವುದಾ? ಕಾಲೇಜಿನ ಕೊನೆಯ ದಿನಗಳು ನೆನಪಾಗತೊಡಗಿದವು.. ಸಧ್ಯ ಕೊನೇಗೂ ಪರೀಕ್ಷೆ, ಕ್ಲಾಸು, ಅಸೈನ್ಮೆಂಟು, ಅಟೆಂಡೆನ್ಸುಗಳಿಗೆಲ್ಲಾ ವಿದಾಯ. ನೆಮ್ಮದಿಯಾಗಿ ಕೆಲಸ ಮಾಡಿಕೊಂಡು ನಮ್ಮ ದುಡ್ಡು ನಾವು ದುಡಿದುಕೊಂಡು ಇರಬಹುದು, ಎಂದು ಖುಶಿಯಾಗುತ್ತಿದ್ದರೆ, ಅಯ್ಯೋ ಮುಗಿದೇ ಹೋಯಿತಲ್ಲಾ.. ಇಲ್ಲಿನ ಖುಷಿ, ಕೇರ್‌ಲೆಸ್ ಜೀವನ, ಹುಡುಗಿಯರನ್ನು ಚುಡಾಯಿಸುವುದು, ಎಲ್ಲದಕ್ಕೂ ಟಾಟಾ ಹೇಳಬೇಕು. ಇನ್ನು ಜವಾಬ್ದಾರಿಗಳು ಬೆಂಬಿಡದ ಬೇತಾಳದಂತೆ ಹೆಗಲೆರುತ್ತವೆ ಎನ್ನುವ ಚಿಂತೆ ಇನ್ನೊಂದೆಡೆ. ಅಲ್ಲದೆ ನನಗೆ ಅವಳಿಗುತ್ತರಿಸುವುದಿತ್ತು, ಮುಂದೇನು ಎನ್ನುವ ಪ್ರಶ್ನೆ ಎದುರಾದಾಗಲೆಲ್ಲಾ ನಾನು ಮೌನಿ. ನನಗೆ ಅವಳು ಹೇಳುತ್ತಿದ್ದ ಪ್ರೀತಿಯ ವ್ಯಾಖ್ಯೆ ಅರ್ಥವಾಗುತ್ತಿರಲಿಲ್ಲ. ಅವಳು ಖಂಡಿತ ಬೇಕು ಅನ್ನಿಸುತ್ತಿದ್ದಳು. ಅವಳ ಅಪ್ಪುಗೆಯ ಸುಖ, ಅವಳೊಡನೆ ಮಾತು, ಸಾಹಿತ್ಯ, ಅಪರೂಪಕ್ಕೆ ಆಡುತ್ತಿದ್ದ ಬ್ಯಾಡ್ಮಿಂಟನ್, ಬೆಳಗ್ಗಿನ ವಾಕ್‌ಗಳು, ಎಲ್ಲವೂ ಚಂದವೇ ಆದರೆ ಪ್ರೀತಿ? ನನಗೆ ಉತ್ತರಿಸಲು ತಿಳಿಯುತ್ತಿರಲಿಲ್ಲ. ಅವಳ ಕಣ್ಣುಗಳ ತುಂಬ ಪ್ರಶ್ನೆ. ಅವಳು ಬಾಯಿಬಿಟ್ಟು ಕೇಳುತ್ತಿರಲಿಲ್ಲ ಅಷ್ಟೆ. ಕೇಳುವಂಥ ಸಂದರ್ಭಕ್ಕೆ ಅವಕಾಶವೇ ಕೊಡದಂತೆ ತಪ್ಪಿಸಿಕೊಂಡು ಬಂದಿದ್ದೆ.
ಅವಳು, ಹಳೆಯ ಸ್ನೇಹಿತರು ಜೊತೆಯಲ್ಲಿಲ್ಲದೆ ಮೊದಮೊದಲು ಹಿಂಸೆಯಾಗುತ್ತಿತ್ತು. ಆಮೇಲೆ ಮತ್ತೆ ಎಲ್ಲಾ ಸರಿ ಹೋಯಿತಲ್ಲ. ಯಾರೂ ಅನಿವಾರ್ಯವಲ್ಲ ಅನ್ನುವ ಸತ್ಯವನ್ನು ಗಟ್ಟಿಮಾಡುತ್ತಾ. ಯಾವಾಗಲೂ ಒಬ್ಬರ ಬದಲಿಗೆ ಇನ್ನೊಬ್ಬರು ಸಿಕ್ಕೇ ಸಿಗುತ್ತಾರೆ.
ಅಷ್ಟೊಂದು ನೋವು ಕೊಟ್ಟಿದ್ದೇನಾ? ನಾನೂ ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದುದಂತೂ ಹೌದು. ಆದರೆ ನಿಧಾನಕ್ಕೆ ಅಭ್ಯಾಸವಾಯಿತಲ್ಲ. ಅವಳಿಗೆ ಆಗಲಿಲ್ಲವಾ? ಇನ್ನೂ ನನ್ನ ಬಗ್ಗೆ ಯೋಚಿಸಿ ತಲೆಕೆಡಿಸಿಕೊಳ್ಳುತ್ತಾಳೆ ಎನ್ನುವುದೂ ಖುಶಿಯನ್ನೇನು ಉಂಟುಮಾಡುತ್ತಿಲ್ಲ. ಆದರೆ ಪಾಪ ಅನ್ನಿಸುತ್ತೆ. ಹೌದೇನೆ ನಿಜವಾಗಲೂ ಇನ್ನೂ ಅಷ್ಟು ಇಷ್ಟ ಪಡ್ತಿಯ? ಅಂತ ಮುದ್ದುಗರೆಯುತ್ತಾ ಕೇಳಬೇಕು ಅನ್ನಿಸುತ್ತೆ. ಆದರೆ ಅಷ್ಟಕ್ಕೇ ಅವಳದನ್ನ ಪ್ರೀತಿ ಅಂತ ತಪ್ಪು ಅರ್ಥ ಮಾಡಿಕೊಂಡರೆ.. ಭಯವಾಯಿತು. ಇಲ್ಲ, ಅದನ್ನೆಲ್ಲಾ ಮೀರಿ ಬೆಳದಿರುತ್ತಾಳೆ. ಅವಳಿಗೆ ಉತ್ತರಗಳನ್ನು ಕೊಡಲೇ ಬೇಕು. ಪ್ರಶ್ನೆಗಳನ್ನೆತ್ತಿದ್ದಾಳೆ, ಉತ್ತರಗಳನ್ನೂ ಕೇಳಲಿ. ನೇರವಾಗಿ ಮನೆಗೇ ಹೋಗುತ್ತೇನೆ, ಹೇಗೆ ಅವಾಯ್ಡ್ ಮಾಡುತ್ತಾಳೆ ನೋಡೋಣ.
ಯೋಚಿಸುತ್ತಾ ಶ್ರೀಧರ ಕಾದಂಬರಿಯ ಕೊನೆಯ ಪುಟಗಳತ್ತ ಕಣ್ಣು ಹಾಯಿಸಿದ. ಧೀರೇಂದ್ರ ಆಚಾರ್ಯರು ಬರೆದ ಬೆನ್ನುಡಿ ಕಾಣಿಸಿತು. ಅದರ ಶೀರ್ಶಿಕೆಯೇ ಕುತೂಹಲ ಮೂಡಿಸಿತು.

ಪುರಾಣವನ್ನು ವರ್ತಮಾನಕ್ಕೆ ಒಗ್ಗಿಸುವ ವಿಫಲ ಯತ್ನ

ಇಳಾ ಅವರ ಕಾದಂಬರಿಯನ್ನು ನಾನು ಓದುವುದಕ್ಕೆ ಎತ್ತಿಕೊಂಡಾಗ ಇದ್ದ ಕುತೂಹಲ ಓದಿ ಮುಗಿಸುವ ಹೊತ್ತಿಗೆ ಇರಲಿಲ್ಲ. ಇಳಾ ಭಾಷೆ, ಯೋಚಿಸುವ ರೀತಿ, ಕಥೆ ಹೇಳುವ ಶೈಲಿ ಎಲ್ಲದರಲ್ಲೂ ನವ್ಯೋತ್ತರದ ಛಾಪಿದೆ. ಆದರೆ ನನ್ನ ತಕರಾರಿರುವುದು ಅವರ ಕಾದಂಬರಿಯ ವಸ್ತುವಿನ ಬಗ್ಗೆ. ಪುರಾಣವನ್ನು ಪುರಾಣವನ್ನಾUಯೇ ನೋಡುವ ಏಕಾಗ್ರತೆಯನ್ನು ಲೇಖಕಿ ಬೆಳಸಿಕೊಂಡಿಲ್ಲ. ಪುರಾಣದ ಕಥೆಗಳನ್ನು ತಿರುಚಬಾರದು ಅನ್ನುವುದು ನನ್ನ ವಾದವಲ್ಲ. ಆದರೆ ಒಂದು ಪಾತ್ರದ ಸಂವಿಧಾನವನ್ನು ಯೋಚನಾ ಕ್ರಮವನ್ನು ಬದಲಾಯಿಸುವುದು ಮೂಲ ಲೇಖಕನಿಗೆ ಮಾಡುವ ಅನ್ಯಾಯ. ಈ ಕಾಲಘಟ್ಟದ ಜನರ ಆಲೋಚನೆ, ತಲ್ಲಣ, ಭಗ್ನಪ್ರೇಮ, ಯಾಚನೆ, ಆಕ್ರೋಶ ಮತ್ತು ವಿರಹಗಳನ್ನು ಹಿಡಂಬಿಯ ಪಾತ್ರಕ್ಕೆ ಆರೋಪಿಸುತ್ತಾರೆ ಇಳಾ.
ವೇದವ್ಯಾಸರು ದೊಡ್ಡ ಲೇಖಕರಾಗುವುದು ಇಂಥಾ ವಿಚಾರದಲ್ಲೇ. ಅವರ ಹುಟ್ಟು ಬದುಕಿನ ಕಥೆ ಎಲ್ಲರಿಗೂ ತಿಳಿದಿರುವುದೇ. ಆದರೆ ಎಲ್ಲೂ ಅದರ ಪ್ರಭಾವ ಮಹಾಭಾರತದ ಮೇಲೆ ಆಗಿಲ್ಲ. ಅವರ ಏಕಾಂತದ ಯೋಚನೆಗಳು ನೋವುಗಳು ಕಾದಂಬರಿಯ ಪಾತ್ರಗಳನ್ನು ಪ್ರಭಾವಿಸಿಲ್ಲ. ದಾರ್ಶನಿಕನಿಗೆ ಇರಬೇಕಾದ ಗುಣ ಅದು. ಅವನು ತನ್ನನ್ನು ಹೊರಗಿಟ್ಟುಕೊಂಡು, ಕಥೆ ಕಟ್ಟುತ್ತಾ ಹೋಗುತ್ತಾನೆ. ಹಾಗಾದಾಗಲೇ ಲೇಖಕನ ಹಂಗಿಲ್ಲದೆಯೂ ಒಂದು ಕೃತಿ ನಮಗಿಷ್ಟವಾಗುತ್ತದೆ.
ಹಿಡಿಂಬೆ ರಾಕ್ಷಸ ಕುಲಕ್ಕೆ ಸೇರಿದವಳು. ಕಾಡಿನಲ್ಲಿ ವಾಸಿಸುವವರೆ ಜೀವನಕ್ರಮ ಯೋಚನೆಗಳು ಎಲ್ಲಾ ಬೇರೆ ಬೇರೆ. ಭೀಮ ಅವಳನ್ನು ಕೂಡುವ ಮೂಲಕ ಆಕೆಯನ್ನು ಪುನೀತನಾಗಿಸಿದ್ದಾನೆ. ಅವಳಿಗೊಂದು ಮಗುವನ್ನು ಕೊಟ್ಟು, ಮೊದಲೇ ಆದ ಒಪ್ಪಂದದ ಪ್ರಕಾರ ಬಿಟ್ಟು ಹೋಗಿದ್ದಾನೆ. ಅಲ್ಲದೆ ಘಟೋಧ್ಗಜ ಭೀಮ ಯುದ್ಧಕ್ಕೆ ಮೊದಲೇ ಭೇಟಿಯಾಗಿರುತ್ತಾರೆ. ಭೀಮ ಸೌಗಂಧಿಕಾ ಪುಷ್ಪವನ್ನು ತರೋಕ್ಕೆ ಹೋಗಿ ತುಂಬ ದಿನ ಬರದೇ ಇದ್ದಾಗ ಸಹಾಯ ಮಾಡೋದಕ್ಕೆ ಘಟೋದ್ಗಜನನ್ನು ಕರೆಯುತ್ತಾಳೆ ಕುಂತಿ, ರಾಜಸೂಯಯಾಗದ ಸಂಧರ್ಭದಲ್ಲಿ ಘಟೋದ್ಗಜ ಇಂದ್ರನನ್ನು ಸೋಲಿಸಿ ಕಪ್ಪವನ್ನು ತಂದಿರುತ್ತಾನೆ. ಪಾಂಡವರು ವನವಾಸ ಕಾಲದಲ್ಲಿ ಗಂಧಮಾದನ ಪರ್ವತದದಲ್ಲಿ ಸಂಚರಿಸುತ್ತಿದ್ದ ವೇಳೆ ಆಯಾಸಗೊಂಡು ದ್ರೌಪದಿ ಮೂರ್ಛಿತಳಾಗಿ ಬೀಳುತ್ತಾಳೆ. ಆಗ ಘಟೋಧ್ಗಜ ಅವಳನ್ನು ಹೆಗಲಮೇಲೆ ಕೂರಿಸಿಕೊಂಡು ಬಂದು ನಾರಾಯಣಾಶ್ರಮದಲ್ಲಿ ಬಿಡುತ್ತಾನೆ. ಅಲ್ಲದೆ ಅಭಿಮನ್ಯು ಮತ್ತು ವತ್ಸಲೆಯರ ಮದುವೆ ಮಾಡ್ಸುವಲಿಯೂ ಘಟೋಧ್ಗಜ ಮಹತ್ವದ ಪಾತ್ರ ವಹಿಸುತ್ತಾನೆ.
ಹೀಗಾಗಿ ಭೀಮನದಾಗಲಿ, ಕುಂತಿಯದಾಗಲೀ ತಪ್ಪು ಎಂದು ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಹಿಡಂಬಿಯ ಯೋಚನಾ ಲಹರಿ ಈ ಕಾಲದ ಹೆಣ್ಣು ಮಕ್ಕಳ ಯೋಚನಾ ಲಹರಿಯೇ ಹೊರತು ಆ ಪಾತ್ರದ್ದಲ್ಲ. ಆದರಿಂದ ಅದು ಆರೋಪಿತ ಚಿಂತನೆ. ಹೀಗಾಗಿ ಹಿಡಂಬೆಯ ಪಾತ್ರಕ್ಕೆ ಲೇಖಕಿ ನ್ಯಾಯ ಒದUಸಿಲ್ಲ. ಮತ್ತು ಅದಕ್ಕೆ ಪ್ರಾಪ್ತವಾಗಬೇಕಾದ ಪುರಾಣದ ಗುಣ ಪ್ರಾಪ್ತವಾಗಿಲ್ಲ.
ಇಷ್ಟಾಗಿಯೂ ಈ ಕಾದಂಬರಿಯನ್ನು ಕುತೂಹಲದಿಂದ ಓದಿಕೊಳ್ಳಬಹುದು. ಕೊಂಚ ಅಧ್ಯಯನ, ಭಾವನೆಗಳ ಮೇಲೆ ಹತೋಟಿಮತ್ತು ವರ್ತಮಾನ-ಪುರಾಣದ ನಡುವಿನ ತೆಳುಗೆರೆಯನ್ನು ಕಂಡುಕೊಳ್ಳುವ ಕಣ್ಣಿದ್ದರೆ ಇದು ಮತ್ತಷ್ಟು ಉತ್ತಮ ಕೃತಿಯಾಗುತ್ತಿತ್ತು ಎಂಬುದು ನನ್ನ ವಿನಮ್ರ ಅನಿಸಿಕೆ.

ವಿಮರ್ಶೆಯ ಹೊಸಿಲಾಚೆಗೆ ಅವಳ ನೆನಪಿನ ಘಮಲು

ಬಾಲ್ಕನಿಗೆ ಹೋಗಿ ತನ್ನ ಇಷ್ಟದ ಸಿಗರೇಟನ್ನು ಹಚ್ಚುವ ಮೊದಲೊಮ್ಮೆ ಧೀಘವಾಗಿ ಉಸಿರೆಳೆದುಕೊಂಡ. ವರ್ಜೀನಿಯಾ ಟೊಬ್ಯಾಕೋ ಘ್ಂ ಎನ್ನುತ್ತಿತ್ತು. ಜಾರಿಬೀಳದಂತೆ ನಿಧಾನವಾಗಿ ಕಟ್ಟೆಯಮೇಲೆ ಕೂತು ಸಿಗರೇಟು ಹತ್ತಿಸಿದ. ಬೆರಳತುದಿಯ ಜೀವಕೋಶವೂ ನೆಮ್ಮದಿಯಾಗಿ ಕಾಲುಚಾಚಿದಂತೆ ಅನ್ನಿಸಿತು. ವಿಮರ್ಶಕನಿಗೆ ಅವಳ ಬದುಕಿನ ಬಗ್ಗೆ ಏನುತಿಳಿದಿದೆ? ಅವನು ಕೃತಿಯನ್ನ ಮಾತ್ರ ವಿಮರ್ಶೆ ಮಾಡಬಲ್ಲ. ಹಿಡಂಬಿಯ ಯೋಚನಾ ಲಹರಿ ಈ ಕಾಲದ ಹೆಣ್ಣು ಮಕ್ಕಳ ಯೋಚನಾ ಲಹರಿ ಎಂದು ಹೊರಗಿನವನಾದ ವಿಮರ್ಶಕನಿಗೆ ಜವರಲೈಸ್ ಮಾಡಿಬಿಡುವುದು ಸುಲಭ. ಆದರೆ ಸ್ವಂತ ಬದುಕು ಕೃತಿಯನ್ನ ಪ್ರಭಾವಿಸುವ ರೀತಿ, ಅದರೆ ಸಾಂದ್ರತೆ ಹೊರಗಿನವರಿಗೆ ಹೇಗೆ ತಿಳಿಯಬೇಕು ಅನ್ನಿಸಿತು. ಆದರೆ ಮನುಷ್ಯ ಮನುಷ್ಯನನ್ನು ಬದುಕಿಯೆ ಪ್ರಭಾವಿಸಬೇಕು, ಕೃತಿ, ಕಲ್ಪನೆ, ಸ್ಂಶೋಧನೆ, ಕಲೆ ಎಲ್ಲವೂ ಇನ್ನೊಬ್ಬರನ್ನ ಇಂಪ್ರೆಸ್ ಮಾಡಬಹುದು ಆದರೆ ಪ್ರಭಾವಿಸಲು ಸಾಧ್ಯವಿಲ್ಲ ಅನ್ನುವುದೂ ಹೊಳೆಯಿತು. ತಲೆಯೊಳಗೆ ಮತ್ತದೇ ರುಮುರುಮು.. ವಿಮರ್ಶಕನ ಮಾತುಗಳು ಅವಳು ಹೇಳಿದ್ದಕ್ಕೆಲ್ಲಾ ಅರ್ಥವಿಲ್ಲವೆಂಬಂತೆ, ನಿರಾಕರಿಸುವಂತೆ ತೋರುತ್ತಿತ್ತು. ವಿಮರ್ಶಕನ ಪಾಲಿಗೆ ಬರೀ ಮಹಾಭಾರತ ಇದು. ಆದರೆ ನನ್ನ ಪಾಲಿಗೆ ನನ್ನ ಕಥೆಯೂ ಅಲ್ಲವೇ? ಕೇಳಿಕೊಂಡ ಅನುಮಾನವಾಯಿತು.. ಇಷ್ಟೆಲ್ಲಾ ನನ್ನ ಭ್ರಮೆ ಮಾತ್ರವಾ? ಕಾದಂಬರಿಗೂ ನನಗೂ ನಿಜಕ್ಕೂ ಸಂಭಂಧವೇ ಇಲ್ಲವೇ? ಅರ್ಥವಾಗಲಿಲ್ಲ. ಮತ್ತೊಂದು ಸಿಗರೇಟನ್ನು ಹತ್ತಿಸಿದ.. ಅರ್ಥವಾಗದ ಯಾವುದನ್ನೂ ನಾನು ಮಾಡುವುದಿಲ್ಲ ಎನ್ನುವ ಹಳೆಯ ನಿಶ್ಚಯ ನೆನಪಾಯಿತು. ಒಳಗೆ ಬಂದರೆ ಟೀಪಾಯಿಯ ಮೇಲೆ ‘ನಾನು ಹಿಡಿಂಬೆ’ ಕಾದಂಬರಿ ಅನಾಥ ಬಿದ್ದಿತ್ತು. ಯಾರೋ ಕಲಾವಿದ ದೊಡ್ಡ ಸ್ಥನಗಳ ಸಪೂರ ಸೊಂಟದ ಬೊಗಸೆ ಕಣ್ಣುಗಳ ಕಪ್ಪಗಿನ ಸುಂದರಿಯೊಬ್ಬಳ ರೇಖಾ ಚಿತ್ರ ಬರೆದು ಮುಖಪುಟ ವಿನ್ಯಾಸ ಮಾಡಿದ್ದ.
ಶ್ರೀಧರ ತನಗೇ ಗೊತ್ತಿಲ್ಲದ ಹಾಗೆ ಅಂಗೈಯನ್ನು ಮೂಗಿನ ಹತ್ತಿರ ತಂದು ಉಸಿರೆಳೆದುಕೊಂಡ. ಇಳಾಳ ಮೈಯ್ಯ ಕಂಪು ಇನ್ನೂ ಹಾಗೇ ಇದೆ ಅನ್ನಿಸಿತು.
( ಅಕ್ಕ ವಿಶ್ವಕನ್ನಡ ಸಮ್ಮೇಳನದ ಕಥಾಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದ ಕತೆ)

Saturday, September 4, 2010

ಪಂಚರಂಗಿ ನೋಡಿದೆ...

ಥೇಟ್ ಕಾಯ್ಕಿಣಿ ಸ್ಟೈಲಿನ ಶುರು ಎಲ್ಲಿ ಕೊನೆ ಯಾವುದು ಎಂದು ಗೊತ್ತಾಗದ ಕಥೆಗಳು, ಎಡಿಟಿಂಗ್ ಟೇಬಲ್ಲಿನಲ್ಲಿ ಕೂತು ಮಾಡಿದಂಥಾ ಸ್ಕ್ರೀನ್ ಪ್ಲೇಗಳು, ಗಣೇಶ್ ಬಾಯಲ್ಲಿ ಹೇಳಿಸಿದ್ರೆ ಬರೀ ಬೋರು ಹೊಡೆಸುವಂಥ ಹಳೇ ಕಾಮಿಡಿ ಅನಿಸುತ್ತಿದ್ದ, ಆದರೆ ದಿಗಂತ್ ಬಾಯಲ್ಲಿ ಕಾಮಿಡಿಯೂ ಪನ್ನೂ ಅನ್ನಿಸುವ ಸೂಪರ್ ಡೈಲಾಗ್ ಗಳು,ಇಷ್ಟವಾಗುವ ಸರ್ಕಾಸ್ಟಿಕ್ ಹಾಡುಗಳು,ಜೀರ್ಣಿಸಿಕೊಳ್ಳಲಾಗದ ಸತ್ಯಗಳು,ನೈಜವೆನಿಸುವ ದಿಗಂತ್ ಆಕ್ಟಿಂಗಳು,ಎಂದಿನಂತೆ ಇಶ್ಟವಾಗುವ ಅನಂತ್ ನಾಗ್, ಸುಧಾ ಬೆಳವಾಡಿ ಇನ್ನಿತರುಗಳು, ಮರ ಸುತ್ತುವ ಕಾರ್ಯಕ್ರಮವಿಲ್ಲದೆ, ಮರ ಹತ್ತಿಸಿ, ತೀರಾ ಬೋರು ಹೊಡಿಸದೆ ಡಿಫರೆಂಟಾಗಿ ಪ್ರೀತಿ, ಮದುವೆ ಮಾಡಿಸಿದ ರೀತಿಗಳು, ಥಟ್ಟನೆ ಅರ್ಥವಾಗಿಬಿಡುವ ’ಗಿಜಿಬಿಜಿ ಆ ಆ ಆ,ಗಿರಿಗಿರಿ ಕಯ ಕಯ ಕೊ ಕೊ ಕೊ,ಲಬೊ ಲಬೋ’ಗಳು, ಹಾಡಿಗಷ್ಟೇ ಸೀಮಿತವಾಗಿದ್ದರೆ ಚನ್ನಾಗಿರುತ್ತಿದ್ದ ಕಾಯ್ಕಿಣಿ ಎಂಟ್ರೆನ್ಸ್ ಗಳು, ಹೆಚ್ಚಾಗೇ ಮೂಗು ತೂರಿಸುವ ಯೋಗ್ರಾಜ್ ಭಟ್ ಸೌಂಡುಗಳು, ಮಾಸಿಗೂ ಪಿವಿಆರ್ ಜನಕ್ಕೂ ಕೇಟರ್ ಮಾಡುವ ಸ್ಕ್ರೀನ್ ಪ್ಲೇಗಳು, ಹೇಳಿಸಿಕೊಳ್ಳುವ ಕಥೆ ಇಲ್ಲದಿದ್ದರೂ ಎರಡೂವರೆ ಗಂಟೆಕಾಲ ಎಂಟರ್ಟೈನ್ ಮಾಡಿ ಚಂದದ ಮೆಸೇಜು ರವಾನೆ ಮಾಡುವ ಯೋಗ್ರಾಜ್ ಭಟ್ಟರ ನಿರ್ದೇಶನಗಳು, ಅವರ ಚಂದದ ಸಿನಿಮಾಗಳು, ನೋಡಿಬಂದ ನಾವುಗಳು ನೋಡಿಬರಬಹುದಾದ ನೀವುಗಳು. ಮತ್ತೆ ಎಂದಿನ ಹಾಗೆ ಜೀವನ ನಡೆಸುವ ಎಲ್ಲರುಗಳು.

Sunday, April 25, 2010

ಅವನು ಪರ-ಪುರುಷ

ನಾನ್ಯಾವತ್ತೂ ಸಾವಿಗಾಗಿ ಕಾಯಲಿಲ್ಲ, ಸಾವು ‘ಹಾಗಿರತ್ತೆ, ಹೀಗಿರತ್ತೆ’ ಅಂತ ಕಲ್ಪಿಸಿಕೊಳ್ಳಲಿಲ್ಲ, ಭಯ ಪಡಲಿಲ್ಲ, ಉಲ್ಲಾಸಗೊಳ್ಳಲಿಲ್ಲ, ‘ಹೇಗೆ ಬರಬಹುದು?’ ಅಂತ ಯೋಚಿಸುತ್ತಾ ಕೂರಲಿಲ್ಲ.

ಸಾವಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಅವನ ಬರವನ್ನು ಆದಷ್ಟು ಮುಂದೆ ಹಾಕಲು ಪ್ರಯತ್ನಿಸಿದೆ, ಏನೇನೋ ನಾಟಕ ಆಡಿದೆ, ಬರುವವರು ಬರದೇ ಇರುತ್ತಾರೆಯೆ? ಬಂದೇ ಬಂದ. ನಾನವನಿಗೆ ಕಾಯುತ್ತಿರಲ್ಲಿಲ್ಲ ಎಂದು ತಿಳಿದಿತ್ತೇನೋ ಎನ್ನುವಂತೆ ಹುಡುಕಿಕೊಂಡು ನನಗಾಗಿಯೇ ಬಂದ, ನನ್ನ ಹೊತ್ತೊಯ್ಯುವುದಕ್ಕೆ.

ಖುಶಿಯಾಗಿಯೇ ಇದ್ದವನು ಇದ್ದಕ್ಕಿದ್ದಂತೆ ಕೋಪಿಸಿಕೊಂಡವನಂತೆ ಒಬ್ಬನೇ ಹೊರಟು ನಿಂತ, ಯಾರೋ ಕಾಶಿಗೆ ಅಂದರು. ಖುಶಿಯಾಯಿತು ನನಗೆ. ಆದರೆ ಅಪ್ಪನೇ ಅವನ ಬಳಿ ಹೋಗಿ ರಮಿಸಿ ಕಾಲು ತೊಳೆದು ಮತ್ತೆ ಕರೆತಂದರು. ಆಮೇಲೆ ತಿಳಿಯಿತು ಅದೆಲ್ಲಾ ಸುಮ್ಮನೆಯಂತೆ ನಾಟಕವಂತೆ, ಆಟವಂತೆ. ‘ಸಾಯೋಆಟ’ದಲ್ಲಿ ಇನ್ನ್ಯಾವ ಆಟ? ಇನ್ನ್ಯಾಕೆ ಆಟ? ಯೋಚಿಸಿದೆ.

ನನಗೆ ಪುನರ್ಜನ್ಮದಲ್ಲಿ ನಂಬಿಕೆಯಿರಲಿಲ್ಲ. ರುಗ್ಣಶಯ್ಯೆಯಲ್ಲಿ ಮಲಗಿಸಿಕೊಂಡು ಇದು ಸಾವಲ್ಲ ಹೊಸ ಜನ್ಮ ಅಂತ ನಂಬಿಕೆ ಹುಟ್ಟಿಸಲು ಪ್ರಯತ್ನಿಸಿದ. ಎಲ್ಲಿಗೋ ಹೊರಟು ನಿಂತೆವು. ಎಲ್ಲಿಗೆ ಎಂದು ನಾನು ಕೇಳಲಿಲ್ಲ. ಪ್ರಶ್ನೆಗಳು ಆವಿಯಾಗಿ ಹೋಗಿದ್ದವು. ಉತ್ತರಗಳು ಯಾವ ವ್ಯತ್ಯಾಸವನ್ನೂ ಸೃಷ್ಟಿಸುತ್ತಿರಲಿಲ್ಲ. ಅಪ್ಪ ಅಮ್ಮ ಎಲ್ಲರೂ ಅಳುತ್ತಿದ್ದರು. ನನಗೆ ಗೊತ್ತಾಗುತ್ತಿತ್ತು "ಪುತ್ರ ಶೋಕಂ ನಿರಂತರಂ". ಮನೆಯವರಿಗೆಲ್ಲಾ ಸೂತಕ.


ಸಾವಿನ ಮನೆಯಲ್ಲಿ ನಿಶ್ಚಲ ನಿದ್ದೆ . Grave is a fine safe place but none do there embrace ಅಂದಿದ್ದ ಕವಿಮಾತು ಸುಳ್ಳಾಗಿದ್ದು ಯೋಚಿಸಿ ನಕ್ಕೆ. ನಾನು ನಕ್ಕಿದ್ದು ಇನ್ನೇನೋ ಅರ್ಥ ಕೊಟ್ಟಿರಬೇಕು ಸಾವಿನ ನಂತರದ ಯೋಚನೆಗಳೂ ‘ಬಾಹುಬಂಧನ ಚುಂಬನ’.

ಈಗೆಲ್ಲಾ ಬದಲಾಗಿ ಹೋಗಿದೆ. ಇಂಥ ಸಾವಿನಿಂದಾಗುವ ಮತ್ತೊಂದು ಹುಟ್ಟಿನ ಬಗ್ಗೆ ಅದು ಹುಟ್ಟಿದ ಕ್ಷಣದಿಂದ ಸಾವಿಗೆ ವಿವಿಧ ರೀತಿಯಲ್ಲಿ ತಯಾರಾಗುವುದರ ಬಗ್ಗೆ ಆಶ್ಚರ್ಯ ಪಡುತ್ತೇನೆ.ನಿಧಾನಕ್ಕೆ ಈ ಬದುಕು ಇಷ್ಟವಾಗುತ್ತಿದೆ. ಬದುಕು ಎಂದಾಕ್ಷಣ ಸಾವು ಆತ್ಮಹತ್ಯೆ ಮಾಡಿಕೊಂಡಿದೆ. ಈಗೆಲ್ಲಾ ಅಯೋಮಯ ‘ಹುಟ್ಟಿನಿಂದ ಸಾವಿನೆಡೆಗೆ’ ಎಂಬುದು ಸುಳ್ಳಾಗಿ, ಸಾವಿಗೆ ತಯಾರಾಗುತ್ತಿರುವ ಹೊಸಹುಟ್ಟು ನನ್ನಲ್ಲಿ ಜೀವ ಕಳೆ ತುಂಬಿದೆ. ಹುಟ್ಟುಸಾವುಗಳ ವಿಷಯಕ್ಕೇ ಹೋಗದೆ ನಿರಾತಂಕವಾಗಿದೆ. ನನ್ನ ಪ್ರತಿ ಕ್ಷಣವೂ ಜೀವಂತವಾಗಿಸುತ್ತಿದೆ. ಸಾವೆಂದುಕೊಂಡವನು ಪ್ರೀತಿಯಿಂದ ಜೀವಹಿಂಡುತ್ತಾನೆ.

ನನಗೀಗ ಪುನರ್ಜನ್ಮದಲ್ಲಿ ನಂಬಿಕೆ ಇದೆ.

Monday, April 5, 2010

ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ

ಇಷ್ಟು ಬೆಳಬೆಳಗ್ಗೆ ಕಾಲ್ ಮಾಡುತ್ತಿರೋದು ಯಾರು ಅನ್ನುವುದಕ್ಕಿಂತ, ಏನು ಸುದ್ದಿಯೊ ಅನ್ನೋ ಗಾಬರಿ ಚಕ್ರಪಾಣಿಯ ಮನಸ್ಸನ್ನು ಹೊಕ್ಕಿತು. ರೂಮಿನಲ್ಲಿ ಮಲಗಿರುವ ಹೆಂಡತಿಯನ್ನು ಏಳಿಸಲು ಮನಸಾಗಲಿಲ್ಲ, ಇನ್ನೊಂದು ರೂಮಿನಲ್ಲಿ ರಾತ್ರಿಯೆಲ್ಲಾ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸುತ್ತಿದ್ದ ಮಗಳು ಈಗಿನ್ನೂ ಮಲಗಿದ್ದಾಳೆ, ಮತ್ತೆ ಮಗುವಿಗೆ ಎಚ್ಚರವಾದರೆ ಏನು ಗತಿ ಎಂದುಕೊಂಡು ಮಾಡುತ್ತಿದ್ದ ಟ್ಯೂಶನ್ನನ್ನು ನಿಲ್ಲಿಸಿ ಸ್ವಲ್ಪ ಭಯದಿಂದಲೇ ಫೋನ್ ಎತ್ತಿಕೊಂಡವರಿಗೆ ಕೇಳಿಸಿದ್ದು ರಂಗರಾಯರ ಪತ್ನಿ ಸೀತಮ್ಮನ ಧ್ವನಿ! ‘ಟ್ಯೂಷನ್ ಮುಗಿದಮೇಲೆ ಮನೆ ಕಡೆ ಬಂದು ಹೋಗ್ತಿರಾ, ಸ್ವಲ್ಪ ಮಾತಾಡೋದಿತ್ತು’ ಎಂದಾಗ ಚಕ್ರಪಾಣಿಗೆ ವಿಚಿತ್ರ ಅನ್ನಿಸಿದ್ದು ಮಾತ್ರವಲ್ಲ ಅವರು ಏನು ಹೇಳುತ್ತಿದ್ದಾರೆ ಎಂದೂ ಅರ್ಥ ಆಗಲಿಲ್ಲ. ‘ರಂಗರಾಯರ ಆರೋಗ್ಯ ಸರಿ ಇದೆ ತಾನೆ?’ ಎಂದು ಕೇಳಿ ಇಂಥಾ ಎಡವಟ್ಟು ಪ್ರಶ್ನೆಯನ್ನ ಕೇಳಿದೆ ಎಂದುಕೊಂಡು, ಸರಿ ಬರುತ್ತೇನೆ ಎಂದು ಫೋನ್ ಇಟ್ಟು ಮತ್ತೆ ಮನೆ ಪಾಠದ ಕೋಣೆಗೆ ಬಂದರು.
‘ವೇವ್ಸ್’ ಪಾಠವನ್ನ ಅದೆಷ್ಟು ವರ್ಷಗಳಿಂದ, ಸುಮಾರು ೨೭ ಅಲ್ಲ ಅಲ್ಲ ೨೯ ವರ್ಷಗಳಿಂದ ಪಾಠ ಮಾಡುತ್ತಿದ್ದಾರೆ ಮೊದಮೊದಲು ಪ್ರತೀ ನಾಲ್ಕೈದು ವರ್ಷಗಳಿಗೊಮ್ಮೆ ಸಿಲಬಸ್ ಅಪ್ಡೇಟ್ ಆಗುತ್ತಿತ್ತು. ಈ ಸಿ.ಇ.ಟಿ ಭರಾಟೆಯೆಲ್ಲ ಶುರುವಾದಮೇಲೆ ತಾವೇ ಪ್ರತೀ ವರ್ಷವೂ ಪ್ರತಿಯೊಂದು ವಿಷಯದಲ್ಲೂ ಹೊಸಾ ಬದಲಾವಣೆಗಳಾಗಿವೆಯೇ ಎಂದು ನೋಡಿ ತಿಳಿದುಕೊಳ್ಳುತ್ತಿದ್ದರು. ಪಾಠದ ಮಕ್ಕಳಿಗೆ ಸಹಾಯವಾಗಲೆಂದು. ವಿನಿತಾ ನೆನಪಾದಳು, ‘ಶುದ್ದ ಸೋಮಾರಿ, ಯಾವತ್ತೂ ಏನನ್ನೂ ಅಪ್ಡೇಟ್ ಮಾಡಿಕೊಳ್ಳೋಲ್ಲ, ನಾನೇ ಆಗಾಗ ಫೋನು ಮಾಡಿ ಹೊಸ ವಿಷಯಗಳನ್ನು ಓದು ಎಂದು ಹೇಳಿಕೊಡಬೇಕು.’ ಎಂದು ಮಗಳ ಮೇಲೆ ಹುಸಿ ಮುನಿಸು. ತಮ್ಮ ಮಗಳು ತಮ್ಮಂತೆಯೇ ಫಿಸಿಕ್ಸ್‌ನಲ್ಲಿ ಎಂ.ಎಸ್.ಸಿ ಮಾಡಿ ಅದೂ ಗೋಲ್ಡ್ ಮೆಡಲ್ ತೆಗೆದುಕೊಂಡು ಪಾಸಾದಾಗ ಉಂಟಾದ ಹೆಮ್ಮೆ ಆ ಸಂಗತಿ ಇವತ್ತಿಗೂ ತರುವ ನೆಮ್ಮದಿ ನೆನೆದು ಎದೆ ತಂತಾನೇ ಉಬ್ಬಿತು. ಇವರ ಮನಸ್ಸಿನಲ್ಲಿ ನಡೆಯುತ್ತಿರುವುದಕ್ಕೂ ಪಾಠ ಮಾಡುತ್ತಿರುವುದಕ್ಕೂ ಏನೂ ಸಂಭಂದವಿಲ್ಲವೆಂಬಂತೆ ಫ್ರೀಕ್ವೆನ್ಸಿ ವೇವ್ಲೆಂತ್ ವೆಲಾಸಿಟಿಗಳ ಬಗ್ಗೆ ಅಡೆತಡೆ ಇಲ್ಲದೆ ಹೇಳುತ್ತಾ ಅವತ್ತಿನ ಪಾಠ ಮುಗಿಸಿದರು. ಮತ್ತು ಹಾಗೆ ಮಾಡಿದ್ದಕ್ಕೆ ಅಚ್ಚರಿ ಪಟ್ಟುಕೊಂಡರು. ಮಕ್ಕಳು ಎಂದಿನಂತೆ ಅರ್ದಂಬರ್ದ ಕೇಳಿಸಿಕೊಂಡು ಅರ್ದಂಬರ್ಧ ಮಲಗಿ ಎದ್ದು ಹೋದರು, ಅವರ ನಂತರ ಇನ್ನೊಂದು ಬ್ಯಾಚು. ಆ ಬ್ಯಾಚಿನ ಮಕ್ಕಳು ಬರೋದರೊಳಗೆ ಹೆಂಡತಿ ಮಾಡಿಟ್ಟ ಹೊಸ ಹಾಲಿನ ಹಬೆಯಾಡುತ್ತಿರುವ ಕಾಫಿ ಹೀರುತ್ತಾ ‘ರಾಧಾ, ವಿನಿತಾಗೆ ಫೋನ್ ಮಾಡಿ ಒಂದೆರೆಡು ದಿನಕ್ಕೆ ಬಂದು ಹೋಗು ಅಂತ ಹೇಳು, ನೋಡಬೇಕು ಅನ್ನಿಸ್ತಿದೆ. ನಾಳೆ ಶುಕ್ರವಾರ, ಶನಿವಾರ ಹಾಫ್ ಲೀವ್ ಹಾಕಿ ಬರೋಕ್ಕೆ ಹೇಳು.’ ಅಂದು ಕಾಫಿಯ ಕೊನೆಯ ಸಿಪ್ ಹೀರಿ ಇನ್ನೊಂದು ಬ್ಯಾಚಿನ ಮಕ್ಕಳಿಗೆ ಪಾಠ ಮಾಡಲು ಹೋದರು.

ಟ್ಯೂಷನ್ ಮುಗಿಸಿ ಎಂದಿನಂತೆ ಆರಾಮಾಗಿ ಕಾಲೇಜಿಗೆ ಹೋಗಿ ಮಧ್ಯಾನ ಊಟಕ್ಕೆ ಬಂದರೆ ಸೀತಮ್ಮ ಕೂತಿದ್ದರು. ‘ಓ ಸಾರಿ ಮರೆತುಬಿಟ್ಟಿದ್ದೆ, ಕಾಲೇಜಿನಲ್ಲಿ ನೆನಪಾಯ್ತು ಸಂಜೆ ಬರೋಣ ಅಂತಿದ್ದೆ...ಊಟ ಮಾಡೋಣ ಬನ್ನಿ-’ ಎನ್ನುತ್ತಿರುವಾಗಲೇ ಅವರು ‘ನೀವು ಊಟ ಮುಗಿಸಿ’ ಎಂದಾಗ ಅವರ ಧ್ವನಿಯಿಂದಲೇ ಏನೋ ಗಂಭೀರವಾದದ್ದೇ ಆಗಿದೆ ಎಂದು ಕಸಿವಿಸಿಯಾಯಿತು. ಬಿಸಿಬೇಳೆ ಬಾತು ಮೊಸರನ್ನವನ್ನ ಹಾಕಿಕೊಡುತ್ತಾ ‘ಬೆಳಗ್ಗೇನೇ ಹೋಗೋದಲ್ವ ಏನ್ ಮರ್ವೋ ನಿಮ್ಗೆ, ಅವಾಗ್ಲಿಂದ ಕಣ್ಣಲ್ ನೀರ್ ಬಿಟ್ಕೊತಿದಾರೆ, ಮಗ್ಳಿಂದೇನೋ ತೊಂದ್ರೆ ಆಗಿದೆ ಏನು ಅಂತ ವಿವರವಾಗಿ ತಿಳ್ಕೊಳಿ’ ಎಂದು ಸಿಡುಕಿದರು ರಾಧಾ.

* *
ಆಟೋ ಸದ್ದಾಗಿದ್ದು ಕೇಳುತ್ತಲೇ ವಿನಿ ಬಂದಳು ಅಂತ ದೊಡ್ಡ ಮಗಳು ಸುನಿತಾ ಬಾಗಿಲು ತೆರೆಯಲು ಹೋದಳು. ‘ಹಸೀ ಬಾಣಂತಿ ಹಿಂಗೆ ಗಾಳಿಗೆ ಹೋಗ್ತಿಯಲ್ಲ ಚೂರು ಭಯ ಇಲ್ಲ’ ಬೈದರು ಅಮ್ಮ. ಚಕ್ರಪಾಣಿ ಮಗಳನ್ನು ನೋಡಿದರು ‘ಸ್ವಲ್ಪ ದಪ್ಪಗಾಗಿದಾಳೆ’. ಬೆಂಗಳೂರು ಪ್ರಭಾವ ಅಂದುಕೊಂಡು ಕೆಲಸ ಹೇಗೆ ಆಗುತ್ತಿದೆ, ಕಾಲೇಜಿನಲ್ಲಿ ಏನು ತೊಂದರೆ ಇಲ್ಲವಲ್ಲ? ಎಷ್ಟು ಪಾಠ ಮುಗಿಸಿದ್ದಾಳೆ? ಮಕ್ಕಳು ಚುರುಕಿದ್ದಾರ? ಎಂದೆಲ್ಲಾ ವಿಚಾರಿಸಿಕೊಂಡರು. ಫೋನಿನಲ್ಲೇ ಎಲ್ಲಾ ಹೇಳಿ-ಕೇಳಿಯಾಗಿದ್ದರೂ ಮತ್ತೆ ಮತ್ತೆ ‘ಇನ್ನೇನು ವಿಷಯ’ ‘ಇನ್ನೇನು ವಿಷಯ’ ಅಂತ ಅಮ್ಮ ಮಗಳು ಮಾತಾಡಿಕೊಂಡರು. ರಾತ್ರಿ ಪಕ್ಕ ಮಲಗಿದ ಹೆಂಡತಿಯನ್ನು ಇನ್ನೇನಂತೆ ಎಂದು ಕೇಳಿದಾಗ ಮಗಳನ್ನು ಐ.ಎ.ಎಸ್ ಹುಡುಗನೊಬ್ಬ ಇಷ್ಟಪಟ್ಟು ಮದುವೆಗೆ ಪ್ರಪೋಸ್ ಮಾಡಿದ್ದಾನೆ ಇವಳು ಮನೆಯಲ್ಲಿ ಕೇಳಬೇಕು ಅವರು ಒಪ್ಪಿದರೆ ಪರವಾಗಿಲ್ಲ ಎಂದು ಹೇಳಿ ಬಂದಿದ್ದಾಳೆ ಎಂಬ ಸಂಗತಿಯನ್ನ ಹೆಂಡತಿ ಹೀಗೆ ನಿರುಮ್ಮಳವಾಗಿ ಹೇಳಿ ನಿದ್ದೆ ಹೋಗಿಬಿಡುತ್ತಾಳೆ ಎಂದು ನಿರೀಕ್ಷಿಸಿರಲಿಲ್ಲ... ನಿದ್ದೆ ಹಾರಿ ಹೋಯಿತು.

ಬೆಳಗ್ಗೆ ರಂಗರಾಯರ ಮನೆಯಲ್ಲಿ ಮಾತಾಡಿದ್ದನ್ನು ಮನಸ್ಸಿನಲ್ಲೇ ಮೆಲಕು ಹಾಕುತ್ತಾ, ಅವರ ಮಗಳು ಶ್ವೇತಾಳಿಗೆ ಗಂಡು ಹುಡುಕಲು ಶುರು ಮಾಡಿದ ಸಂಧರ್ಭವನ್ನು ನೆನಪಿಸಿಕೊಂಡರು. ಮುದ್ದಾಗಿ ಬೆಳೆದ ಹುಡುಗಿಯ ಚರ್ಮದ ಮೇಲೆ ಅಲ್ಲಲ್ಲಿ, ಬೆರಳ ತುದಿ, ತುಟಿಯ ಕೊನೆ, ಪಾದದ ಮಧ್ಯೆ ಸಣ್ಣದಾಗಿ ಚರ್ಮ ಬಿಳಿಯಾಗಲು ಶುರುವಾದಾಗ ಸೀತಮ್ಮ ಘಾಬರಿಯಾಗಿ ಔಶಧಿಗಳನ್ನ ಮಾಡಲು ಶುರು ಮಾಡಿದ್ದು, ಸ್ಪೆಶಲಿಷ್ಟುಗಳಿಗೆ ತೋರಿಸಿದ್ದು, ಧರ್ಮಸ್ಥಳದ ಶಾಂತಿವನದಲ್ಲಿ ತಿಂಗಳುಗಟ್ಟಲೆ ಪ್ರಕೃತಿ ಚಿಕಿತ್ಸೆ ಕೊಡಿಸಿದ್ದು ನಿರೀಕ್ಷಿಸಿದಷ್ಟು ಫಲ ಕೊಡಲಿಲ್ಲ. ವಯಸ್ಸು ೨೭ ಆದರೂ ಯಾರೂ ಮದುವೆಯಾಗಲು ಮುಂದೆ ಬರಲಿಲ್ಲ. ಸಾಕಾಗಿಹೋಗಿದ್ದ ರಂಗರಾಯರು ಕೊನೆಯ ಪ್ರಯತ್ನವೆಂಬಂತೆ ‘ಟೈಮ್ಸ್ ಆಫ್ ಇಂಡಿಯಾ’ ‘ಇಂಡಿಯನ್ ಎಕ್ಸಪ್ರೆಸ್ಸ್’ ಪೇಪರುಗಳ ಮ್ಯಾಟ್ರಿಮೋನಿಯಮ್ ಕಾಲಮ್ಮಿನಲ್ಲಿ ಮಗಳ ಹೆಸರನ್ನು ಸೇರಿಸಿದರು, ಏನನ್ನೂ ಮುಚ್ಚಿಡಲಿಲ್ಲ. ಮಗಳಿಗೆ ಹೀಗಾಗಿದೆ ಆದರೆ ಒಳ್ಳೆಯ ಕೆಲಸದಲ್ಲಿದ್ದಾಳೆ, ಸ್ಟೇಟ್ ಬ್ಯಾಂಕಿನಲ್ಲಿ ಆಫೀಸರ್, ಚನ್ನಾಗಿ ಓದಿಕೊಂಡಿದ್ದಾಳೆ, ಅದ್ಭುತವಾಗಿ ಅಡುಗೆ ಮಾಡುತ್ತಾಳೆ ಇತ್ಯಾದಿ ಇತ್ಯಾದಿ. ಯಾರಿಂದಾದರೂ ಉತ್ತರ ಬರುತ್ತೆ ಅಂತ ಉಹುಂ ಸತ್ಯವಾಗಲೂ ಅಂದುಕೊಂಡಿರಲಿಲ್ಲ... ಕೆಲವರಿಗೆ ಎಷ್ಟು ಹುಡುಕಿದರೂ ಸಿಗೋದಿಲ್ಲ, ಕೆಲವು ಮಕ್ಕಳು ತಾವೇ ಹುಡುಕಿಕೊಂಡುಬಿಡುತ್ತವೆ...

ಇತ್ತ ವಿನಿತಾಗೂ ನಿದ್ದೆ ಬರಲಿಲ್ಲ ಅಮ್ಮ ಹೇಳಿದ ವಿಷಯ ಮನಸ್ಸು ಕೆಡೆಸಿತ್ತು. ಅವನು ಬಂದು ಹೋದ ದಿನ ಶ್ವೇತ ಎಷ್ಟು ಖುಶಿಯಾಗಿದ್ದಳು ಎಂದುಕೊಳ್ಳುತ್ತಾ ವಿನಿತಾ ಅವತ್ತಿನ ಘಟನೆಗಳನ್ನು ನೆನಪಿಸಿಕೊಳ್ಳತೊಡಗಿದಳು. ಶ್ವೇತಾ ಖುಷಿಯಲ್ಲಿ ಒಂದು ಹೆಜ್ಜೆಗೆ ನಾಲ್ಕು ಹೆಜ್ಜೆ ಹಾರುತ್ತಾ ಮನೆಯೊಳಗೆ ಬರುತ್ತಲೇ “ಇವತ್ತು ಒಬ್ಬ ಬಂದಿದ್ದ ಕಣೇ ‘ಚಿರಾಗ್’ ಅಂತ ಹೆಸರು ‘ಚಿರಾಗ್ ವಸಿಷ್ಠ’ ” ಅನ್ನುತ್ತಾ ಸಂಭ್ರಮಿಸಿದ್ದು ನೆನಪಾಯಿತು. ಶ್ವೇತಾಳ ಅಪ್ಪ ಅಮ್ಮ ಅವತ್ತು ಯಾವುದೋ ಮದುವೆಗೆ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಇವಳೊಬ್ಬಳೇ. ಯಾವುದೋ ಹಳೇ ಸಿನೆಮಾ ನೋಡುತ್ತಾ ಕೂತಿದ್ದಳಂತೆ. ಆಗ ಕಾಲಿಂಗ್ ಬೆಲ್ ಸದ್ದಾಗಿದ್ದು ಕೇಳಿಸಿತು. ಬಾಗಿಲು ಹೋಗಿ ತೆರೆದರೆ ಇವಳನ್ನು ಗುರುತಿಸಿದ್ದು ಅವನು. ‘ಪೇಪರಿನಲ್ಲಿ ಮ್ಯಾಟ್ರಿಮೋನಿಯಲ್ ಆಡ್ ನೋಡಿದೆ ನನ್ನ ಹೆಸರು ಚಿರಾಗ್ ಅಂತ.’ ಎಂದು ಅವನು ಪರಿಚಯ ಮಡಿಕೊಂಡ ತಕ್ಷಣ ಇವಳಿಗೆ ಛೆ! ನಾನು ನೈಟಿಲಿರಬಾರದಿತ್ತು ಅನ್ನಿಸಿತ್ತು. ಹಾಗೆ ಬಂದವನು ಇವಳಿಗೆ ಇಷ್ಟವಾಗಿ ಹೋಗಿದ್ದ. ಮೊದಲ ದಿನವೇ ಬಹಳಷ್ಟು ಮಾತಾಡಿಕೊಂಡಿದ್ದರು. ಚನ್ನೈನಿಂದ ಮತ್ತೆ ಬರೋದು ಕಷ್ಟ, ಫೋಟೋ ಮೈಲ್ ಮಾಡ್ತಿನಿ. ನಿಮ್ಮ ಅಪ್ಪ ಅಮ್ಮ ಒಪ್ಪಿಗೆ ಕೊಟ್ರೆ ಫೋನ್‌ನಲ್ಲಿ ಮಾತಾಡೋಣ ಅಂತ ಹೇಳಿ ಹೋಗಿದ್ದ. ‘ಅಷ್ಟು ಚನ್ನಾಗಿದಾನೆ. ಸಬ್ ಇನ್ಸ್‌ಪೆಕ್ಟರ್ ಬೇರೆ. ಹೇಗಿದಾನೆ ಗೊತ್ತಾ ಮ್ಯಾನ್ಲಿ ಆಗಿ. ನನ್ನ ಇಷ್ಟ ಪಟ್ಟು ಹುಡುಕೊಂಡು ಬಂದಿದಾನೆ ನೋಡು. ನನ್ನ ಕ್ವಾಲಿಟೀಸ್ ಎಲ್ಲಾ ಇಷ್ಟ ಆಯ್ತಂತೆ’ ಅಂತವಳು ಖುಷಿ ಪಡುತ್ತಿದ್ದರೆ ವಿನಿತಾಗ್ಯಾಕೋ ಅನುಮಾನವಾಗುತ್ತಿತ್ತು. ‘ಎನೇ ಇರ್ಲಿ ಶ್ವೇತಾ ಯಾರನ್ನೂ ಹಾಗೆ ನಂಬಬೇಡ ಅವನ ಬಗ್ಗೆ ಎಲ್ಲಾ ವಿಚಾರಿಸೋಕ್ಕೆ ಹೇಳು,’ ಅನ್ನುವ ವಿನಿತಾಳ ಎಚ್ಚರಿಕೆಯ ಮಾತುಗಳಿಗೆ, ‘ಇಲ್ಲ ಕಣೇ, ಅವನು ಖಂಡಿತ ಸುಳ್ಳು ಹೇಳ್ತಿಲ್ಲ ನಂಗೊತ್ತು. ನಾಳೆ ಫೊಟೋ ಮೈಲ್ ಮಾಡ್ತಾನಲ್ಲ ನೋಡು ಬೇಕಾದ್ರೆ. ಅಷ್ಟಕ್ಕೂ ಅವ್ನ ಬಗ್ಗೆ ಎಲ್ಲಾ ಪ್ರೂಫ್ ಕೊಟ್ಟು ಹೋಗಿದಾನೆ ಕಣೇ. ನಾನೇ ಅವ್ನು ಕೆಲ್ಸ ಮಾಡೋ ಪೋಲಿಸ್ ಡಿಪಾರ್ಟ್ಮೆಂಟ್‌ಗೆ ಫೋನ್ ಮಾಡಿ ಯಾರೋ ಬೇರೆಯವರು ವಿಚಾರಿಸೋ ಥರ ವಿಚಾರಿಸಿ ನೋಡ್ದೆ. ಅವ್ನು ಹೇಳಿರೋ ಇನ್ಫರ್ಮೇಷನ್ ಎಲ್ಲಾ ಕರೆಕ್ಟು.’ ಅಂದ್ಲು. ಆದರೂ ವಿನಿತಾಗೆ ಸಮಾಧಾನವಿರಲಿಲ್ಲ. ‘ಯಾವುದಕ್ಕೂ ಜೋಪಾನ ಅಪ್ಪ ಅಮ್ಮ ಏನಂದ್ರು’ ಕೇಳಿದಳು. ಅವರಪ್ಪ ಅಮ್ಮನಿಗೂ ಸ್ವಲ್ಪ ಅನುಮಾನ ಇದ್ದೇ ಇತ್ತು. ಇವಳು ಫೋಟೋ ತೋರಿಸಿದ್ದಳು. ವಿನಿತಾಗಂತೂ ಫೋಟೋ ನೋಡಿದ ಕೂಡಲೇ ಇವನನ್ನೆಲ್ಲೋ ನೋಡಿದೀನಿ ಅನ್ನಿಸಿತು. ಆದರೆ ಯಾರಿರಬಹುದು ಎಂದು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಮಾರನೇ ದಿನ ಇವಳು ಬ್ಯಾಂಕಿನ ಕೆಲಸ ಮುಗಿಸಿ ಮನೆಗೆ ಬಂದಾಗ ಇವಳಮ್ಮ ಇವಳನ್ನು ತಬ್ಬಿಕೊಂಡು ಕಣ್ಣಿನಲ್ಲಿ ನೀರು ತುಂಬಿಕೊಂಡಿದರು. ಚಿರಾಗ್ ವಸಿಷ್ಠ ಶ್ವೇತಾಳ ತಾಯಿ ತಂದೆಯ ಜೊತೆ ಫೋನ್‌ನಲ್ಲಿ ಮಾತಾಡಿದ್ದ. ‘ನನಗೆ ಪರಿಚಯ ಮಾಡಿಸಿಕೊಡೇ..’ ಅಂತ ವಿನಿ ಅವಳನ್ನು ಗೋಳುಹುಯ್ದುಕೊಂಡ ಮರುದಿನವೇ ವಿನಿತಾಗೂ ಅವನಿಂದ ಕಾಲು ಬಂದಿತ್ತು. ಯಾಕೋ ಧ್ವನಿ ಸ್ವಲ್ಪ ಕೀರಲು ಅನ್ನಿಸುತ್ತಿದ್ದರೂ ಅವನು ಮಾತಾಡುತ್ತಿದ್ದ ಧಾಟಿ ಖುಷಿ ಕೊಡುತ್ತದೆ ಅಂದುಕೊಂಡಳು.

ಶ್ವೇತಾಳಿಗೆ ತಿಂಗಳಿಗೊಂದು ಗಿಫ್ಟು ಬರಲು ಶುರುವಾಯಿತು. ಚಿನ್ನದ ಸರ, ಬಳೆ ಹೀಗೇ.. ಇಷ್ಟು ದಿನವಾದರೂ ಚಿರಾಗ್‌ನನ್ನು ಬಿಟ್ಟರೆ ಅವರ ಮನೆಯವರ್ಯಾರೂ ಶ್ವೇತಾಳ ಮನೆಯವರ ಬಳಿ ಮಾತಾಡಿರಲಿಲ್ಲ. ಅವನಿಗೆ ತಂದೆ ತಾಯಿ ಇಲ್ಲ. ಇರುವ ಸಂಭಂದಿಕರಾದ ಚಿಕ್ಕಪ್ಪ ಚಿಕ್ಕಮ್ಮ ಅಮೇರಿಕಾದಲ್ಲಿದ್ದರು. ಆರು ತಿಂಗಳಾದಮೇಲೆ ಬರ್ತಾರೆ ಆಗ ಮನೆಗೇ ಬಂದು ಮಾತಾಡ್ತಾರೆ ಅಂದಿದ್ದ. ಅದ್ಯಾಕೋ ಏನೇನೋ ಕಾರಣಗಳಿಂದ ಶ್ವೇತಾಳ ಅಪ್ಪ ಅಮ್ಮನಿಗೆ ಅವನನ್ನು ಮುಖತಹ ಭೇಟಿ ಮಾಡಲಾಗಿರಲೇ ಇಲ್ಲ. ಇವಳೇ ಬ್ಯಾಂಕಿನ ಕೆಲಸದ ಮೇಲೆ ಬೆಂಗಳೂರಿಗೆ ಹೋದಾಗ ಅವನೂ ಚನ್ನೈಯಿಂದ ಬರುತ್ತಿದ್ದ ಹೀಗೆ ಆಗಾಗ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಎಂಟು ತಿಂಗಳಾದರೂ ಅವನ ಚಿಕ್ಕಪ್ಪ ಚಿಕ್ಕಮ್ಮ ಬರುವ ಸುದ್ದಿಯೇ ಇರಲಿಲ್ಲ. ರಂಗರಾಯರಿಗೆ ಅನುಮಾನವಾಗಿ, ಶ್ವೆತಾಳಿಗೆ ಗೊತ್ತಾಗದಂತೆ ಚಿನ್ನದಂಗಡಿಗೆ ಹೋಗಿ ಅಸಲಿ ಒಡವೆಯೋ ನಕಲಿಯೋ ಎಂದು ತೊರಿಸಿಕೊಂಡು ಬಂದರು. ಚಿನ್ನದ ಒಡವೆಗಳೇ. ಮೋಸಮಾಡುವ ಪೈಕಿಯಾದರೆ ಹಾಗೆ ಚಿನ್ನದ ಒಡವೆಗಳನ್ನ ದುಬಾರಿ ವಸ್ತುಗಳನ್ನ ಯಾಕೆ ಕಳುಹಿಸುತ್ತಾರೆ ಅಂದುಕೊಂಡು ಸುಮ್ಮನಾದರು. ಅದಲ್ಲದೇ ಅವನು ಇವರಿಗೆ ಹದಿನೈದು ದಿನಕ್ಕೊಂಮ್ಮೆ ತಪ್ಪದೇ ಮಾತಾಡುತ್ತಿದ್ದ. ಹೀಗೆ ಎಷ್ಟು ದಿನಗಳಾದರೂ ಅವರ ಮನೆಯವರು ಮದುವೆಯ ಬಗ್ಗೆ ಸುದ್ದಿಯೇ ಎತ್ತಿರಲಿಲ್ಲ.

ಮೊನ್ನೆ ಅನುಮಾನವಾಗಿ ಏನಾದರಾಗಲಿ ಹೋಗಿ ಮಾತಾಡಿಸಿಕೊಂಡು ಬರೋಣ ಅಂತ ರಂಗರಾಯರು ಯಾರಿಗೂ ಹೇಳದೇ ಅವನಿರುವ ಊರಿಗೆ, ಅಲ್ಲಿನ ಪೋಲೀಸ್ ಸ್ಟೇಶನ್‌ಗೆ ಹೋಗಿದ್ದಾರೆ. ಅಲ್ಲಿ ನೋಡಿದರೆ ಚಿರಾಗ್ ಎನ್ನುವ ಹೆಸರಿನವರು ಯಾರೂ ಇಲ್ಲ. ಬೇರೆ ಯಾವುದೋ ಮನುಷ್ಯ ಕೂತಿದ್ದಾನೆ. ಫೋಟೋಲಿ ನೋಡಿದ ಮನುಷ್ಯನಿಗೂ ಇವನಿಗೂ ಯಾವುದೇ ಸಂಭಂಧ ಇಲ್ಲ. ರಂಗರಾಯರಿಗೆ ನಾವು ಮೋಸ ಹೋದೆವು ಎಂದು ತಿಳಿದುಹೋಯಿತು. ಘಾಬರಿಗೊಂಡು ಅಲ್ಲೆಲ್ಲಾ ವಿಚಾರಿಸಿ ಸುತ್ತಾಡಿ ಹುಡುಕಾಡಿದ್ದಾರೆ ಆ ಮುಖದ ಮನುಷ್ಯನ ಸುಳಿವೇ ಇಲ್ಲ ಎಂದು ತಿಳಿದ ಮೇಲೆ ರಾತ್ರಿ ಹೆಂಡತಿಗೆ ಕಾಲ್ ಮಾಡಿದ್ದಾರೆ. ಮಗಳಿಗೆ ಈ ವಿಷಯವನ್ನು ತಿಳಿಸುವುದು ಹೇಗೆ ಎಂದು ತಲೆಕೆಡಸಿಕೊಂಡು ಬೆಳಗಿನವರೆಗೂ ನಿದ್ದೆಗೆಟ್ಟ ಸೀತಮ್ಮ ಬೆಳಗಾಗುತ್ತಲೇ ಚಕ್ರಪಾಣಿಯವರಿಗೆ ಫೋನ್ ಮಾಡಿದ್ದಾರೆ.

ಸೀತಮ್ಮನನ್ನು ಮಾತಾಡಿಸಲು ಬಂದ ಚಕ್ರಪಾಣಿಗೆ ಇವರು ಮೋಸ ಹೋಗಿದ್ದಾರೆ ಎಂದು ಮನಸ್ಸಿನಲ್ಲಿ ಧೃಢವಾಗುತ್ತಿರುವಾಗಲೇ ಶ್ವೇತಾ ಬ್ಯಾಂಕಿನಿಂದ ಮನೆಗೆ ಬಂದಿದ್ದಾಳೆ. ಅವನ ಜೊತೆ ಮಾತಾಡಿಕೊಂಡು ಬಂದವಳು, ಇವರನ್ನು ನೋಡಿದ ತಕ್ಷಣ ‘ಇನ್ನೊಂದ್ ಸ್ವಲ್ಪ ಹೊತ್ತು ಬಿಟ್ಟು ಮಾತಾಡ್ತಿನಿ ಕಣೋ, ಎಂದು ಫೋನಿನಲ್ಲಿ ಹೇಳಿ. ‘ಹೇಗಿದೀರಾ ಅಂಕಲ್? ವಿನಿತಾ ಬಂದಿದಾಳ?’ ಎಂದು ವಿಚಾರಿಸಿಕೊಂಡು ‘ಚಿರಾಗ್ ಫೋನ್ ಮಾಡಿದ್ದ ಅಮ್ಮ, ಯಾವ್ದೋ ಹೊಸಾ ಮಾಡಲ್ ಮೊಬೈಲ್ ಬಂದಿದಿಯಂತೆ ೧೭ಸಾವರದ್ದು ನಿಂಗೆ ಕೊಡ್‌ಸ್ತಿನಿ ಅಂದ’ ಎಂದು ಹೇಳುತ್ತಿದ್ದರೆ ಸೀತಮ್ಮನೂ ಚಕ್ರಪಾಣಿಯೂ ಘಾಬರಿಯಿಂದ ಕಕ್ಕಾಬಿಕ್ಕಿಯಾಗಿ ಕೂತಿದ್ದರು.

ವಿನಿತಾಗೆ ತಲೆ ಚಿಟ್ಟುಹಿಡಿಯುವಷ್ಟು ಹಿಂಸೆಯಾಗುತ್ತಿತ್ತು. ಶ್ವೇತಾಳ ಕಷ್ಟಗಳನ್ನ, ಅವಳು ತನ್ನ ಚರ್ಮದ ಖಾಯಿಲೆಯಿಂದ ಅನುಭವಿಸುತ್ತಿದ್ದ ಅವಮಾನವನ್ನ ಹತ್ತಿರದಿಂದ ನೊಡಿದ್ದ ಅವಳಿಗೆ ಶ್ವೇತಾ ಈಗ ಇನ್ನೊಂದು ಆಘಾತವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅನ್ನಿಸಿತು. ನಾಳೆ ರಂಗರಾಯರ ಮನೆಗೆ ಅಪ್ಪನ ಜೊತೆ ತಾನೂ ಹೋಗಬೇಕು ಅಂತ ನಿಶ್ಚಯಿಸಿಕೊಂಡಳು.
* * *

ರಂಗರಾಯರು ಮನೆಗೆ ಬಂದಮೇಲೆ ಅವನ ಬಗ್ಗೆ ಇನ್ಯಾವುದಾದರೂ ಇನ್ಫರ್ಮೇಶನ್ ಸಿಗಬಹುದಾ ಎಂದು ತಿಳಿಯಲು ಶ್ವೇತಾ ಮನೆಯಲ್ಲಿಲ್ಲದಿರುವ ಹೊತ್ತಿನಲ್ಲಿ ಅವಳ ಬೀರುವನ್ನ ಜಾಲಾಡಿದ್ದಾರೆ ಅಲ್ಲಿ ಅವರಿಗೆ ಸಿಕ್ಕಿದ್ದು ಕ್ರೆಡಿಟ್ ಕಾರ್ಡಿನ ಬಿಲ್ಲುಗಳು, ಆ ಬಿಲ್ಲುಗಳಲ್ಲಿ ಅವನು ಇವಳಿಗೆ ಕಳಿಸಿದ ಒಡವೆಗಳ ವಿವರಗಳಿವೆ ಎಲ್ಲಿ, ಯಾವತ್ತು ತೆಗೆದುಕೊಂಡಿದ್ದು? ಎಷ್ಟು ಬೆಲೆ ಇತ್ಯಾದಿ. ಎಲ್ಲವೂ ಶಿವಮೊಗ್ಗದ ಅಡ್ರಸ್ಸುಗಳೇ ಇವಳ ಕ್ರೆಡಿಟ್ ಕಾರ್ಡಿನಿಂದಲೇ ಪೇ ಆಗಿದೆ. ಇವಳಿವಳಿಗೇ ಇವಳು ಆ ಒಡವೆಗಳನ್ನು ಕೊರಿಯರ್ ಮಾಡಿರುವ ಚೀಟಿಗಳು. ಹುಡುಗರು ಹಾಕಿಕೊಳ್ಳುವಂಥಾ ಪ್ಯಾಂಟು ಶರ್ಟುಗಳು. ರಂಗರಾಯರಿಗೆ ಶಾಕ್ ಆಗಿ ಹೋಯಿತು ಮಗಳು ಮೋಸ ಮಾಡುತ್ತಿದ್ದಾಳ? ಅಥವ ಮಗಳಿಗೆ ಹುಚ್ಚು ಹಿಡಿದಿದೆಯಾ? ಏನೂಂದೂ ಅರ್ಥವಾಗಲಿಲ್ಲ. ವಿನಿತಾ ಮತ್ತು ಚಕ್ರಪಾಣಿ ರಂಗರಾಯರ ಮನೆಗೆ ಬರುವ ಹೊತ್ತಿಗೆ ರಂಗರಾಯರು ಟೇಬಲ್ಲಿನ ಮೇಲೆ ಕೊರಿಯರ್ ಚೀಟಿಗಳು ಕ್ರೆಡಿಟ್ ಕಾರ್ಡಿನ ಬಿಲ್ಲುಗಳನ್ನು ಹರಡಿಕೊಂಡು ಕೂತಿದ್ದರು.

ನಡೆದದ್ದನ್ನು ವಿವರಿಸಿದಾಗ ಚಕ್ರಪಾಣಿಗೂ ತಲೆನೋವು ಶುರುವಾಯಿತು. ‘ಚಿರಾಗ್‌ನನ್ನು ಎಲ್ಲೋ ನೋಡಿದ್ದೆ ಅಂತ ನೆನಪು ಎಲ್ಲಿ ಅಂತ ಎಷ್ಟು ಯೋಚಿಸಿದರೂ ಗೊತ್ತಾಗುತ್ತಿಲ್ಲ’ ಅಂದಳು ವಿನಿತಾ. ಹಾಗಾದರೆ ಚಿರಾಗ್ ಇರುವುದು ನಿಜ ಆದರೆ ಅವನು ಪೋಲೀಸ್ ಅಲ್ಲ. ನಮ್ಮ ಹುಡುಗಿಯ ತಲೆಕೆಡಸಿದ್ದಾನೆ ಇವತ್ತು ಎಲ್ಲದಕ್ಕೂ ಒಂದು ಅಂತ್ಯ ಕಾಣಿಸಬೇಕು ಶ್ವೇತಾಳನ್ನ ನೇರವಾಗಿ ಕೇಳಿಬಿಡೋಣ ಏನಾದರಾಗಲಿ ಅಂತ ನಿಶ್ಚಯಿಸಿದರು. ಅವಳು ಮನೆಗೆ ಬರುವವರೆಗೂ ಏನಾಗಿರಬಹುದು? ಹೇಗೆ ಪಾಪದ ಹುಡುಗಿ ಮೋಸ ಹೋಗಿರಬಹುದು? ಅಂತ ಮಾತಾಡಿಕೊಂಡರು. ಸೀತಮ್ಮ ಸದ್ದಿಲ್ಲದೆ ಬಿಕ್ಕುತ್ತಿದ್ದರು. ಸಮಯ ಸಾಗುತ್ತಲೇ ಇಲ್ಲವೇನೋ ಅನ್ನಿಸುತ್ತಿತ್ತು. ಕೊನೆಗೆ ಆರುಗಂಟೆಯ ವೇಳೆಗೆ ಶ್ವೇತಾ ಎಂದಿನಂತೆ ಫೋನಿನಲ್ಲಿ ಚಿರಾಗ್ ಜೊತೆ ಮಾತಾಡಿಕೊಂಡು ಬಂದಳು, ವಿನಿತಾಳ ಮುಖ ನೋಡಿ ಅವಳ ಕಣ್ಣರಳಿತು ವಿನಿತಾ ಪೇಲವವಾಗಿ ನಕ್ಕಳು, ಅಲ್ಲಿಯವರೆಗೂ ಒಂದೂ ಮಾತಾಡದೆ ಕುಳಿತಿದ್ದ ಸೀತಮ್ಮ ಬಿಕ್ಕುತ್ತಾ ‘ಏನೇ ಶ್ವೇತಾ ಇದು ನಿನಗೆ ನೀನೇ ಒಡವೆಗಳನ್ನು ಕಳಿಸಿಕೊಂಡಿದ್ದೀಯಾ..’ ಎಂದು ಅವಳ ಮುಂದೆ ಆ ಎಲ್ಲಾ ಚೀಟಿಗಳನ್ನು ಹಿಡಿದರು ಶ್ವೇತಾಳ ಮುಖದಲ್ಲಿ ಆಶ್ಚರ್ಯ. ಅವಳ ರೂಮಿನಿಂದ ಹುಡುಗರು ಹಾಕಿಕೊಳ್ಳೋ ಪ್ಯಾಂಟ್, ಟಿ ಷರ್ಟ್, ಕ್ಯಾಪ್‌ಗಳನ್ನು ತಂದ ರಂಗರಾಯರು ಅವುಗಳನ್ನು ಶ್ವೆತಾಳ ಮುಂದೆ ಹಿಡಿದರು. ಶ್ವೇತಾಳ ಚಹರೆ ಬದಲಾಯಿತು ರಂಗರಾಯರ ಕುತ್ತಿಗೆ ಹಿಸುಕುತ್ತಾ ‘ಶ್ವೇತಂಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ’ ‘ಶ್ವೇತಾಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ’ ಅಂತ Pರುಚಿಕೊಂಡಳು. ಅವಳ ಕೈಯಿಂದ ರಂಗರಾಯರನ್ನು ಬಿಡಿಸುವ ಹೊತ್ತಿಗೆ ವಿನಿತಾ ಚಕ್ರಪಾಣಿ ಸೀತಮ್ಮ ಸೋತು ಹೋಗಿದ್ದರು. ಚಕ್ರಪಾಣಿ ಕೊಟ್ಟ ಹೊಡೆತಕ್ಕೆ ಶ್ವೇತ ತಲೆತಿರುಗಿ ಬಿದ್ದಿದ್ದಳು. ಸೀತಮ್ಮ ಆದ ಘಾಬರಿಗೆ ಬಿಕ್ಕುವುದನ್ನು ನಿಲ್ಲಿಸಿದ್ದರು. ಶ್ವೇತಾಳ ವರ್ತನೆ ಅರ್ಥವೇ ಆಗದೆ ರಂಗರಾಯರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಭೂತ ಪ್ರೇತಗಳು ಇರೋದು ನಿಜವಿರಬಹುದಾ ಎಂಬ ಅನುಮಾನಕ್ಕೆ ತುತ್ತಾದರು. ಚಕ್ರಪಾಣಿ, ಶ್ವೇತಾಗೆ ಏನಾದ್ರು ಮಾಡಿದ್ರೆ ಸಾಯಿಸ್ಬಿಡ್ತಿನಿ ಅಂತ ಅವಳೇ ಅವಳ ಬಗ್ಗೆ ಹೇಳುತ್ತಿದ್ದರ ಅರ್ಥವೇನು? ಪ್ರಶ್ನೆಯಾಗುತ್ತಿದ್ದರೆ ವಿನಿತಾಗೆ ನೆನಪಾದದ್ದು ಡಾ.ಕೌಶಿಕ್. ಪಿ.ಯು.ಸಿ ಯಲ್ಲಿ ಚಕ್ರಪಾಣಿಯವರ ಟ್ಯೂಶನ್ನಿಗೆ ಬರುತ್ತಿದ್ದ ಹುಡುಗ ಎಂ.ಬಿ.ಬಿ.ಎಸ್ ಮುಗಿಸಿ ಸೈಕ್ಯಾಟ್ರಿಯಲ್ಲಿ ಪಿಜಿ ಮುಗಿಸಿ ಶಿವಮೊಗ್ಗದ ಮಾನಸಾದಲ್ಲಿ ಸೈಕ್ಯಾಟ್ರಿಸ್ಟ್ ಆಗಿದ್ದ. ಅವನು ಪಿ.ಯು.ಸಿ ಯಲ್ಲಿ ವಿನಿತಾಳ ಕ್ಲಾಸ್ ಮೇಟ್ ಕೂಡಾ ಆಗಿದ್ದ. ಅವನಿಗೆ ಫೋನ್ ಮಾಡಿ ನೆಡದದ್ದನ್ನು ತಿಳಿಸಿದರು. ಕೌಶಿಕ್ ಅಲ್ಲಿನ ಡಾಕ್ಟರ್ ಒಬ್ಬರಿಗೆ ಫೋನ್ ಮಾಡಿ ಮತ್ತು ಬರುವ ಇಂಜೆಕ್ಷನ್ ಕೊಡಲು ಹೇಳಿ ತಕ್ಷಣ ಶ್ವೇತಾಳನ್ನು ಮಾನಸಾಕ್ಕೆ ಕರೆದುಕೊಂಡು ಬರಲು ಹೇಳಿದ.

* * *
ಚಕ್ರಪಾಣಿ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಬಗ್ಗೆ ಕೇಳದೆ ಏನೂ ಇಲ್ಲ, ಅದರ ಬಗ್ಗೆ ಬಂದಿದ್ದ ಅನ್ನಿಯನ್ ಸಿನಿಮಾವನ್ನ ವಿನಿ ಬಲವಂತ ಮಾಡಿ ತೋರಿಸಿದ್ದಳು, ಅದಲ್ಲದೆ ಸಿಡ್ನಿ ಶಲ್ಡನ್ ಎಂಬ ಲೇಖಕನ ‘ಟೆಲ್ ಮೆ ಯುವರ್ ಡ್ರೀಮ್ಸ್’ ಕಾದಂಬರಿಯೂ ಇದಕ್ಕೆ ಕುರಿತಾದದ್ದೇ.. ಆದರೆ? ‘ಆದರೆ ಇದೆಂತಾ ರೀತಿಯದ್ದು, ನಾನು ಇಂಥಾ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಬಗ್ಗೆ ಕೇಳೇ ಇಲ್ಲವಲ್ಲ? ಪ್ರಶ್ನೆಯಾದರು. ಸರ್ ಇದು ಡಿಸೋಸಿಯೇಟಿವ್ ಡಿಸಾರ್ಡಗಳ ರೀತಿಯಲ್ಲಿ ಒಂದು ಬಗೆ.. ವಿವರಿಸಲು ತೊಡಗಿದ ಕೌಶಿಕ್.. ಡಿಸೋಸಿಯೇಟಿವ್ ಡಿಸಾರ್ಡರ್ ಅಂದ್ರೆ ಇದರಲ್ಲಿ ಮೂರು ವಿಧ ಅಮ್ನೇಶ್ಯ ಫ್ಯೂಗ್ ಮತ್ತು ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್. ಯಾವುದೋ ಆಘಾತದಿಂದಲೋ, ಇನ್ನು ತಡಿಯಲಿಕ್ಕೆ ಆಗೋಲ್ಲ ಅನ್ನೋವಂಥ ಸ್ಟ್ರೆಸ್ ಆದಾಗ, ಈಗಿರೋ ಸ್ಥಿತಿಯನ್ನ ಭರಿಸಲು ಸಾಧ್ಯವಿಲ್ಲ ಅನ್ನೋವಂಥ ಸ್ಥಿತಿ ತಲುಪಿದಾಗ ಇರೋಸ್ಥಿತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತೆ ಮನಸ್ಸು, ಈ ಪ್ರಯತ್ನಗಳೇ ಅಮ್ನೇಶ್ಯ (ಅಂದರೆ ಮರೆವು, ಆಟೋ ಬಯಾಗ್ರಾಫಿಕಲ್ ಅಥವಾ ಸಿಟುಯೇಶನಲ್ ಇತ್ಯದಿ) ಫ್ಯೂ ಗ್,(ಇರೋ ಸ್ಥಿತಿಯಿಂದ ಇರೋ ಜಾಗದಿಂದ ಓಡಿಹೋಗಿಬಿಡುವುದು, ಮತ್ತೆ ಹೀಗೆ ಓಡಿ ಹೋದವರಿಗೆ ತಮ್ಮ ಜೀವನದ ಬಗ್ಗೆ ಪೂರ್ತಿ ಮರೆತು ಹೋಗಿ ಬಿಟ್ಟಿರುತ್ತದೆ) ಹಾಗೂ ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಆಗಿ ಪರಿವರ್ತನೆ ಗೊಳ್ಳುತ್ತದೆ. ಈಗ ಶ್ವೇತಾಳಿಗೆ ಆಗಿರುವುದೂ ಇದೇ. ಅಷ್ಟು ದಿನದಿಂದ ಗಂಡು ಹುಡುಕುತ್ತಿರುವ ನಿಮ್ಮ ಚಟುವಟಿಕೆಗಳು, ಅವರ ಸ್ನೇಹಿತೆಯರಿಗೆಲ್ಲಾ ಮಕ್ಕಳಾಗಿ ಮದುವೆಯಾಗಿದ್ದರೂ ತನಗೆ ಆಗದಿರುವುದು, ಇವೆಲ್ಲಾ ಅವಳ ಅನ್‌ಕಾನ್‌ಶಸ್ ಮೈಂಡಿನ ಮೇಲೆ ಸಾಕಷ್ಟು ಪರಿಣಾಮ ಬೀರಿವೆ, ಇಂಥಾ ಯಾವುದೋ ಸನ್ನಿವೇಶದಲ್ಲೇ ಅವಳಲ್ಲಿ ‘ಅವನು’ ಹುಟ್ಟಿಕೊಂಡಿದ್ದಾನೆ. ಆವನಿಗೊಂದು ಚಂದದ ಅವಳಿಗೆ ಇಷ್ಟವಾಗೋ ಹೆಸರಿದೆ, ಅವನ ಸ್ವಭಾವಗಳೆಲ್ಲವೂ ಖುಷಿಕೊಡುವಂಥದ್ದೇ ಯಾಕೆಂದರೆ ನನ್ನ ಹುಡುಗ ಹಿಂಗಿರಬೇಕು ಅನ್ನುತ್ತಿದ್ದ ಅವಳ ಒಳ ಮನಸ್ಸು, ‘ದಿ ಅನ್ ಕಾನ್‌ಶಸ್ ಮೈಂಡ್’ ಅವನನ್ನು ಸೃಷ್ಟಿಸಿದೆ, ಚಿರಾಗ್ ಅನ್ನುವ ಹುಡುಗ ಸೃಷ್ಟಿಯಾಗಿರೋದೇ ಹೀಗೆ. ಅವನು ನೋಡೋಕ್ಕೆ ಅವಳಿಗೆ ಇಷ್ಟವಾಗುವ ಆಕ್ಟರ್ ಥರ ಇದಾನೆ, ನೋಡಿದ ತಕ್ಷಣ ನನಗೂ ಅವನನ್ನು ಎಲ್ಲೋ ನೋಡಿದ್ದೇನೆ ಅನ್ನಿಸಿತು ಅವನು ಹಿಂದಿ ಸೀರಿಯಲ್ ಒಂದರಲ್ಲಿ ಆಕ್ಟ್ ಮಾಡುತ್ತಾನೆ. ಅವನ ಫೋಟೋವನ್ನ ತನಗೆ ತಾನೇ ಮೈಲ್ ಮಾಡಿಕೊಂಡಿದ್ದಾಳೆ ತನ್ನ ಹುಡುಗ ಹೀಗೇ ಇದಾನೆ ಅಂತ ನಿಮ್ಮ ಮಗಳು ಕಲ್ಪಿಸಿಕೊಂಡಿದ್ದಾಳೆ. ಅದನ್ನೇ ನಂಬಿದ್ದಾಳೆ. ಅಶ್ಟೇ ಕೇರ್ಫುಲ್ ಆಗಿ ನಿಮಗೂ ಅವಳಿಗೂ ಗೊತ್ತಾಗದಂತೆ ಅವನು ಇನ್ನೊಬ್ಬ ಹುಡುಗನೇ ಎಂಬಂತೆ ಸನ್ನಿವೇಶಗಳನ್ನ ಅವಳ ಒಳ ಮನಸ್ಸು ಸೃಷ್ಟಿಸಿದೆ, ಅವರಿಬ್ಬರೂ ಗಂಟೆಗಟ್ಟಲೆ ಮಾತಾಡಿಕೊಂಡಿದ್ದಾರೆ. ಅವನು ಇವಳಿಗೆ ಗಿಫ್ಟ್ ಕಳಿಸಿದ್ದಾನೆ. ಅವಳ ಪಾಲಿಗೆ ನಮ್ಮ ನಿಮ್ಮಶ್ಟೇ ಅವನೂ ಜೀವಂತ. ಈ ಎರೆಡು ಪರ್ಸನಾಲಿಟೀಸ್‌ಗೂ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಚನ್ನಾಗಿ ಗೊತ್ತು-’ ತಾನು ಹೇಳುತ್ತಿರುವುದು ಮುಂದೆ ಕೂತಿರುವವರಿಗೆ ಅರ್ಥವಾಗುತ್ತಿದೆಯೋ ಇಲ್ಲವೂ ಅನುಮಾನದಲ್ಲಿ ಮಾತು ನಿಲ್ಲಿಸಿದ ಕೌಶಿಕ್. ಒಬ್ಬಳು ಹುಡುಗಿಯಲ್ಲಿ ಹುಡುಗನ ಪರ್ಸನಾಲಿಟಿ ಹುಟ್ಟಿಕೊಳ್ಳೋಕ್ಕೆ ಹೇಗೆ ಸಾಧ್ಯ? ತಮ್ಮ ಪ್ರಶ್ನೆ ಮುಂದಿಟ್ಟರು ಚಕ್ರಪಾಣಿ. ಒಂದು ಹುಡುಗಿಯಲ್ಲಿ, ಇನ್ನೊಂದು ಹುಡುಗಿ ಹುಟ್ಟಿಕೊಳ್ಳೋದು, ಅಥವಾ ಐದು ವರ್ಶದ ಮಗುವಿನ ವ್ಯಕ್ತಿತ್ವ ಹುಟ್ಟಿಕೊಳ್ಳೋದು ಎಷ್ಟು ಸಹಜವೋ ಇದೂ ಅಷ್ಟೇ ಸಹಜ. ಹುಡುಗ ಹುಡುಗಿ ಅನ್ನೋ ಲಿಂಗ ವ್ಯತ್ಯಾಸವನ್ನಾಗಾಲಿ ದೊಡ್ಡವರು ಚಿಕ್ಕವರು ಎಂಬ ವಯಸ್ಸಿನ ವ್ಯತ್ಯಾಸವನ್ನಿಟ್ಟುಕೊಂಡಾಗಲೀ ನಮ್ಮ ಒಳ ಮನಸ್ಸು ಇನ್ನೊಂದು ವ್ಯಕ್ತಿತ್ವವನ್ನ ಸೃಷ್ಟಿಸೋಲ್ಲ. ತನ್ನನ್ನು ಕಾಡುತ್ತಿರುವ ಸಮಸ್ಯೆಗಳಿಗೆ, ಅದಕ್ಕೆ ಸರಿಹೋಗುವಂಥ ಅದನ್ನು ನಿವಾರಿಸುವಂಥ ವ್ಯಕ್ತಿತ್ವಗಳು ಹುಟ್ಟಿಕೊಳ್ಳುತ್ತವೆ. ಅಲ್ಲಿ ಒಬ್ಬ ಹುಡುಗ ಮಾತ್ರ ಇಲ್ಲ ಇನ್ನೊಂದು ಹುಡುಗಿಯೂ ಇದ್ದಾಳೆ, ಶ್ವೆತಾಳಿಗಿಂತ ಪವರ್‌ಫುಲ್ ಆದ ಪರ್ಸನಾಲಿಟಿ ಅವಳದು ಅವಳೇ ರಂಗರಾಯರನ್ನು ಆಗ ಕೊಲ್ಲಲು ಹೊರಟಿದ್ದು. ಇದಕ್ಕೆ ಡಿಫೆನ್ಸ್ ಮೆಕ್ಯಾನಿಸಮ್ ಅನ್ನುತ್ತಾರೆ. ಇವಳ ಒಳಗೆ ಇನ್ನೆಷ್ತು ಪರ್ಸನಾಲಿಟಿಗಾಳು ಅಡಗಿ ಕುಳಿತಿವೆಯೋ ಗೊತ್ತಿಲ್ಲಾ. ಅವನ್ನೆಲ್ಲಾ ಒಂದೊಂದಾಗಿ ಹೊರತೆಗೆಯಬೇಕು. ‘ಈಗ ಹುಟ್ಟಿಕೊಂಡಿರೋ ಇನ್ನೆರೆಡು ಪರ್ಸನಾಲಿಟಿಗಳೂ ನಿನ್ನವೇ. ಅದನ್ನು ನೀನೇ ಸೃಷ್ಟಿಸಿಕೊಂಡಿದ್ದೀಯ’ ಅಂತ ನಿಮ್ಮ ಮಗಳಿಗೆ ಅರ್ಥ ಮಾಡಿಸಬೇಕು, ಅವಳ ಸುತ್ತ ಇರುವ ಸ್ಟ್ರೆಸ್ ಕಮ್ಮಿ ಮಾಡಬೇಕು ಇದಕ್ಕೆಲ್ಲಾ ತುಂಬ ಸಮಯವಾಗಬಹುದು.. ಕೌಶಿಕ್ ಹೇಳುತ್ತಾ ಹೋದ, ಅವನು ಹೇಳಿದ್ದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಪಡುತ್ತಿದ್ದ ಚಕ್ರಪಾಣಿ, ರಂಗರಾಯರ ಮಧ್ಯೆ ಮೌನ ಹರಡಿತ್ತು.

ಆ ರೂಮಿನಿಂದ ಹೊರಬಂದ ಮೇಲೆ ರಂಗರಾಯರು ಏನನ್ನೋ ನಿಶ್ಚಯಿಸಿದವರಂತೆ ‘ನಾನಿದನ್ನ ಅವ್ಳಿಗೆ ಹೇಳ್ಬಾರ್ದು ಅನ್ಕೊಂಡಿದಿನಿ. ಅವ್ಳು ಈ ಸ್ಥಿತಿಲೇ ಖುಷಿಯಾಗಿದಾಳೆ ಹಾಗೇ ಭ್ರಮೇಲೇ ಇದ್ದು ಬಿಡ್ಲಿ’ ಅಂದರು. ಚಕ್ರಪಾಣಿಗೆ ಯಾಕೋ ತಮ್ಮ ಮಗಳು ಹೆಂಡತಿಯ ನೆನಪಾಯಿತು ಅವರು ಸುಖವಾಗಿದ್ದಾರ? ಅವರಿಗೇನು ಚಿಂತೆಯಿಲ್ಲವಾ? ಮಗ ನಿಜಕ್ಕೂ ನೆಮ್ಮದಿಯಾಗಿದ್ದಾನ ಅವನನ್ನೇನು ಕಾಡುತ್ತಿಲ್ಲವಾ? ನಿಜಕ್ಕೂ ನಾನು ಬದುಕಿದ ರೀತಿ ನನ್ನಲ್ಲಿ ಉಲ್ಲಾಸ ತುಂಬಿದೆಯಾ? ಅಥವಾ ಎಲ್ಲವೂ ಸರಿ ಇದೆ ಎನ್ನುವ ನಂಬಿಕೆಯಲ್ಲಿ ಇಷ್ಟು ದಿನ ಬದುಕಿಬಿಟ್ಟೆನಾ? ಎಲ್ಲಾರೂ ಇಂಥಾ ಒಂದಲ್ಲಾ ಒಂದು ಭ್ರಮೆಯಲ್ಲಿ ಬದುಕುತ್ತಿದ್ದೇವೇನೋ ಎಂದು ಯೋಚಿಸುತ್ತಾ ಏನನ್ನೂ ಉತ್ತರಿಸದೆ ಸುಮ್ಮನಾದರು. ನಾನು ನಿಜವಾಗಲೂ ನಾನೇನಾ ಅನ್ನುವ ಪ್ರಶ್ನೆ ಅವರ ಮೈಮನಸ್ಸುಗಳನ್ನು ತಾಗಿಯೂ ತಾಗದಂತೆ ಸವರಿಕೊಂಡು ಹೋಯಿತು.

Friday, March 19, 2010

ಜಯಲಕ್ಷ್ಮಿಯ ಕವಿತೆಗಳು

ಜಯಲಕ್ಷ್ಮೀ ನನ್ನ ಸ್ನೇಹಿತೆ. ತುಂಬ ಮಾತಾಡುವ ಲವಲವಿಕೆಯಿಂದಿರುವ ಅದರೆ ಸಣ್ಣಪುಟ್ಟ ವಿಶಯಗಳನ್ನೂ ಮನಸ್ಸಿಗೆ ಹಚ್ಚಿಕೊಂಡು ತಳಮಳಿಸುವ ಹುಡುಗಿ. ಹೊಸದಾಗಿ ಭೇಟಿಯಾದವರೊಂದಿಗೂ ಕೂಡಾ ಪಕ್ಕದಮನೆಯ ಹುಡುಗಿ ಅನ್ನಿಸಿಬಿಡುವಷ್ಟು ಸರಾಗ ಸರಾಗ. ಒಂದಷ್ಟು ಚಂದದ, ಕಾಡುವ, ಪ್ರಶ್ನೆಗಳನ್ನು ಹುಟ್ಟುಹಾಕುವ, ಕವಿತೆಗಳನ್ನ ಬರೆದಿದ್ದಾಳೆ. ಜಲಪಾತ ಎನ್ನುವ ಬ್ಲಾಗ್ ಒಂದನ್ನು ತೆರೆದಿದ್ದಾಳೆ. ಜಲಪಾತ ಅನ್ನೋ ಹೆಸರೇ ಯಾಕೆ ಎಂದು ಕೇಳಿದರೆ ’ನಾನೂ ಜಲಪಾತದಂತೆ ಕಣೇ ಒಮ್ಮೆ ಉಕ್ಕಿ ಹರಿದರೆ, ಇನ್ನೊಮ್ಮೆ ಬರಡು ಮೊಗದೊಮ್ಮೆ ಭೋಗರೆತ ಇನ್ಯಾವಾಗಲೋ ತಣ್ಣನೆ ಹರಿಯುವ ಝರಿ’ ಅಂದಳು. jalapaata.blogspot.com ಇದು ಅವಳ ಬ್ಲಾಗ್ ವಿಳಾಸ. ಅವಳ ಕವಿತೆಗಳನ್ನು ಓದಿ ತಪ್ಪುಗಳನ್ನು ತಿದ್ದಿ ಸರಿಗಳನ್ನು ಗುರುತಿಸಿ finetune ಮಾಡಿದರೆ ಅವಳು ಇನ್ನೂ ಚಂದದ ಕವಿತೆಗಳನ್ನ ಬರೆಯುತ್ತಾಳೆ ಅನ್ನೋ ನಂಬಿಕೆ ನನ್ನದು. ಅವಳ ಜೊತೆ ನೀವಿರುತ್ತೀರಲ್ಲ..

ನನಗೆ ತುಂಬ ಇಷ್ಟವಾದ ಅವಳ ಒಂದು ಕವಿತೆಯನ್ನ ಇಲ್ಲಿ ಹಾಕಿದ್ದೇನೆ. ನಿಮಗೂ ಇಷ್ಟವಾಗಬಹುದು.


ಅವಳಲ್ಲ

ನಾನು ಆ ಹುಡುಗಿಯಲ್ಲ
ನಾನು ನಿಮ್ಮ ಕಲ್ಪನೆಯೊಳಗಿಲ್ಲ
ನನ್ನಲ್ಲಿ ಮಾತುಗಳಿಲ್ಲ... ನಿಮ್ಮನ್ನು ಮೆಚ್ಚಿಸಲು
ನಾನು ನಿಮ್ಮ ಸೀತೆಯಾಗಲಿಲ್ಲ
ತಲೆತಗ್ಗಿಸಿ ಗೊಂಡಾರಣ್ಯಕ್ಕೆ ನಡೆಯಲಿಲ್ಲ
ನಿಮ್ಮ ಬೆನ್ನ ಹಿಂದೆ ನನಗಾಗಿ ಹುಡುಕಾಡಿದಿರಿ
ನಿಮ್ಮ ಬಗಲಿಗೆ ಕಣ್ಣು ಹಾಯಿಸಲಿಲ್ಲ
ನಿಮಗಿಷ್ಟ, ನಿಮ್ಮ ಬೆನ್ನ ಹಿಂದಿನ ಹೆಜ್ಜೆ
ಆದರೆ ಹೆಜ್ಜೆಯಮೇಲೊಂದು ಹೆಜ್ಜೆ
ಉಸುಕಿನಲ್ಲೊಂದು ಆಳದ ಗುರುತು
ನಿಮಗೆ ಕಾಣಲೇ ಇಲ್ಲ

ನಿಮ್ಮ ಕನಸೊಳಗೆ ನಾನು ಬರಲಿಲ್ಲವೆಂದಿರಿ
ಕನಸುಗಣ್ಣಿನ ನನ್ನ ನೋಟಕೆ ನಿಮ್ಮ ನೋಟ ಬೆರೆಯಲಿಲ್ಲ
ಬಾಗಿದ ಕಣ್ರೆಪ್ಪೆ ನಿಮಗೆ ಪ್ರಿಯವಾಗಿತು
ನನ್ನ ಕಣ್ ಬಿಂಬವಾದ ನಿಮ್ಮ ಕನಸು
ಕನಸು ತೋಯ್ದು ಹರಿದ ನಿರೀಕ್ಷೆಯ ಹನಿ
ನಿಮ್ಮ ಕಲ್ಪನೆಯ ಹುಡುಕಾಟದಲಿ ಇಂಗಿಹೋಯಿತು
ಅವಳು ಹುಡುಗಿಯೇ...? ಎಂಬ ನಿಮ್ಮ ಪ್ರಶ್ನೆಯೊಂದಿಗೆ...

Sunday, February 28, 2010

ಹೊರಟು ನಿಂತ ಅವಳಿಗೆ ...

ಹೊರಟು ನಿಂತ ಹುಡುಗೀ,

WHEN we two parted
In silence and tears,
Half broken-hearted
To sever for years…


… If I should meet thee
After long years,
How should I greet thee?
With silence and tears.

ಈ ಸಾಲುಗಳನ್ನ ಬಳಸಿಕೊಳ್ಳದೆ ನಾನು ಹೇಳಬೇಕಾದ್ದನ್ನು ಶುರು ಮಾಡಲು ಸಾಧ್ಯವೇ ಇಲ್ಲವೇನೊ ? ಬೈರನ್ ಕವನದ ಸಾಲುಗಳಿವು. ಅವರು ಬೇರೆಯಾಗಿದ್ದಾರೆ, ಅವಳೇ ಬಿಟ್ಟುಹೋಗಿದ್ದಾಳ? ಇವನು ಇನ್ನು ಜೊತೆಗಿರೋಕ್ಕಾಗಲ್ಲಾ ಬೇರೆಬೇರೆಯಾಗೋಣ ಅಂದಿದ್ದಾನ? ಅಥವ ಇಷ್ಟು ದಿನ ಆದದ್ದಾಯಿತು ಇನ್ನು ನಮ್ಮ ದಾರಿ ನಮಗೆ ಅಂತ ಮಾತಾಡಿಕೊಂಡು ಅಗಲಿದ್ದಾರ? ಅದನ್ನೆಲ್ಲಾ ಊಹಿಸುತ್ತಾ ಕೂತುಕೊಳ್ಳಬಹುದು, ಆದರೆ ಕವಿ ಬೇರೆಯಾದ ಕ್ಷಣದ ಬಗ್ಗೆ ನೆನೆಸಿಕೊಂಳ್ಳುತ್ತಾ ಈಗಿನ ತನ್ನ ಸ್ಥಿತಿಯ ಬಗ್ಗೆ ಹೇಳುತ್ತಾನೆ. ಹೇಳುತ್ತಾನೆ ಏನು ನೋವಿನಲ್ಲಿ ಮಾತಾಡುತ್ತಾನೆ ಅವನಿಗೇನೋ ನಂಬಿಕೆ ಮುಂದೆ ಭೇಟಿಯಾಗುತ್ತೇವೆ, ಆಗ ಅವಳ ಪಕ್ಕ ನಾನಿರಬೇಕಾದ ಜಾಗದಲ್ಲಿ ಇನ್ಯಾರೋ ಇರುತ್ತಾನೆ ಅನ್ನುವುದೂ ತಿಳಿದಿದೆ. ಹಾಗೆ ಭೇಟಿಯಾದಾಗ ಹೇಗೆ ಮಾತಾಡಿಸಲೇ ನಿನ್ನ? ‘With silence and tears?’ ಅಂತ ಪ್ರಶ್ನೆಯಾಗುತ್ತಾನೆ ಅವನು.

ಹಿಂದಿನ ಕಾಲದ ಅಸಫಲ ಪ್ರೀತಿಗಳು ಹಾಗೇ ಇದ್ದವು. ಆಗ ಇದ್ದ ಸಾವಿರಾರು ಅಡೆತಡೆಗಳ ನಡುವೆಯೂ ಪ್ರೀತಿ ಚಿಮ್ಮುತ್ತಿತ್ತಲ್ಲಾ ಆಶ್ಚರ್ಯವಾಗುತ್ತೆ. ಬಡವ ಶ್ರೀಮಂತ ಮೇಲು ಜಾತಿ ಕೀಳು ಜಾತಿ ಅಪ್ಪ ಅಮ್ಮ ಸಮಾಜದ ಭಯ, ಯಾವುದೋ ಕೆಲಸದ ಮೇಲೆ ದೂರದ ಊರಿಗೆ ಹೋಗೋ ಹುಡುಗ ಎಷ್ಟು ದಿನವಾದರೂ ಬರದೇ ಇರೋದು ಇವೆಲ್ಲವುಗಳ ನಡುವೆಯೂ ಪ್ರೀತಿಸುತ್ತಿದ್ದರು. ಪ್ರೀತಿಸುವುದು ಮಾತ್ರವಲ್ಲ ಆ ಪ್ರೀತಿಯನ್ನ ಪಡೆದುಕೊಳ್ಳೋದೂ ಅಷ್ಟೇ ಕಷ್ಟದ್ದಾದ್ದರಿಂದ ‘ದೇವದಾಸ್ ಪಾರ್ವತಿ’ ಥರಹದ ಕಥೆಗಳು ಎಲ್ಲೆಲ್ಲೂ ಹರಡಿಕೊಂಡಿದ್ದವು. ಅವಳು ಹಿರಿಯರ ಒತ್ತಡವನ್ನು ಸಹಿಸಲಾರದೆ ಆತ್ಮಹತ್ಯೆ ಪ್ರಯತ್ನಗಳೆಲ್ಲಾ ವಿಫಲವಾಗಿ ಕೊನೆಗೆ ಭಾವನೆಗಳನ್ನೆಲ್ಲ ಬರಡು ಮಾಡಿಕೊಂಡು, ಯಾರೊಡನೆಯೋ ಜೀವನ ಸಾಗಿಸುತ್ತಿದ್ದಳು. ಇವನು ಮದುವೆಯೇ ಆಗದೇ ಅವಳ ನೆನಪಿನಲ್ಲೇ ಉಳಿದುಬಿಡುತ್ತಿದ್ದ. ಕೆಲವಷ್ಟು ಜನ ಬಿಟ್ಟಿರಲಾರದೆ ಜೊತೆಗಿರಲು ಬಿಡದ ಸಮಾಜವನ್ನೂ ಎದುರಿಸುವ ಧೈರ್ಯವಿಲ್ಲದೆ ಅಮರರಾಗುತ್ತಿದ್ದರು. ಅಂಥದ್ದರಲ್ಲೂ ಕೆಲವರು ಎದುರು ಹಾಕಿಕೊಂಡು ಬದುಕಿ ತೋರಿಸುತ್ತಿದ್ದರು.

ಈಗ ಪ್ರೀತಿಸಿದವರು ಬೇರೆಯಾಗಲು ಕಾರಣಗಳನ್ನ ಹುಡುಕಿಕೊಂಡು ಹೋಗಬೇಕು. ಅಪ್ಪ ಅಮ್ಮ ಅಷ್ಟು ರಿಜಿಡ್ ಅಗಿಲ್ಲ, ಜಾತಿ ಅನ್ನೋದು ಕನ್ಸಿಡರ್ ಮಾಡ್ಬಹುದಾದ್ದಂಥ ವಿಷಯವೇ ಅಲ್ಲ, ಶ್ರೀಮಂತ ಬಡವ ಅನ್ನೋದು ಮುಖ್ಯವಾಗೋಲ್ಲ, ದೂರ ಇದ್ದರೆ ಫೋನು ಇಂಟರ್ನೆಟ್ ಇದೆ.
ಲಷ್ಮೀನಾರಾಯಣ ಭಟ್ಟರ ಅಶ್ವಥ್ ಹಾಡಿದ

ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ
ಇಂದು ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ

ಸಾಲುಗಳು ನೆನಪಾಗುತ್ತಿವೆ. ಅವರು ಹಾಡಿದ್ದು ಪ್ರೇಮಿಗಳ ಎರಡು ಸ್ಥಿತಿಯ ಬಗ್ಗೆ ಅದು ಪ್ರೇಮದ ಸ್ಥಿತಿಯೂ ಆಗಿದೆಯಾ ಅಂತ ಅನುಮಾನ ನನಗೆ. ಅದೆಲ್ಲಾ ಹೋಗಲಿ ಬಿಡು, ಸಮಯ ಕಳೆಯುವುದಕ್ಕೆ, ಪ್ರೀತಿ ಅಂದರೆ ಇದೇನಾ ಅಂತ ಎಕ್ಪೆರಿಮೆಂಟ್ ಮಾಡೋದಕ್ಕೆ, ಎಲ್ಲರೂ ಪ್ರೀತಿಸುತ್ತಿದ್ದಾರೆ ನಾನೂ ಪ್ರೀತಿಸಬೇಕು ಅಂತಂದುಕೊಂಡು ಪ್ರೀತಿಸುವವರ ಬಗ್ಗೆ ಮಾತಾಡುವುದರಲ್ಲಿ ಅರ್ಥವಿಲ್ಲ ಕಣೇ. ಪ್ರೀತಿಸಿದವರೆಲ್ಲಾ ಮದುವೆಯಾಗಲೇಬೇಕಿಲ್ಲ, ಪ್ರೀತಿಯ ಅಂತ್ಯ ಮದುವೆಯಲ್ಲ ಅಂತೆಲ್ಲಾ ಮಾತಾಡುತ್ತೀವಲ್ಲಾ ಹಾಗಾದರೆ ಹೇಳೇ ಸಖಿ ಪ್ರೀತಿಯಂದರೇನು? ಆ ಕ್ಷಣದ ಆನಂದವಾ, ಒಟ್ಟಿಗೆ ಇದ್ದಷ್ಟು ದಿನದ ಅನುಭವಗಳಾ? ಇಲ್ಲಾ ಸಂತೃಪ್ತ ಕಾಮವಾ? ಇದೆಲ್ಲಾ ಆದಮೇಲೆ ‘move on’ ಅಂದು ಬೇರೆಯಾಗುವುದಾ ಅಂತ ಅರ್ಥ ಮಾಡಿಕೊಳ್ಳಲು ತಿಣುಕಾಡುತ್ತಿದ್ದೇನೆ. ‘ಮೂವ್ ಆನ್’ ಪದದ ಅರ್ಥವೇ ಬೇರೆ ಅಲ್ಲವಾ? ನಿಜವಾದ ಪ್ರೀತಿಯೇ ಇಲ್ಲದಿದ್ದರೆ ಮೂವ್ ಆಗುವುದು ಎಲ್ಲಿಗೆ? ಪ್ರೀತಿ ಅನ್ನೊದು ಬರೀ ಇಷ್ಟೇ ಅಲ್ಲ ಅನ್ನೋದಂತೂ ಗೊತ್ತು. ಇಂಥಾ ಪ್ರೀತಿಗೆ ಮೂವ್ ಆನ್ ಅನ್ನೋ ಪದವೂ ಬೇಕಿಲ್ಲ. ಒಂದು ಜಾಗದಲ್ಲಿದ್ದರಲ್ಲವೇ ಬೇರೆ ಕಡೆಗೆ ಹೋಗೋದು?

ಮೊದಲಿನ ಹಾಗೆ ಈಗ ಯಾರು ಪ್ರೀತಿಸುತ್ತಾರೋ, ಔಟ್ ಡೇಟೆಡ್ ಥರ ಮಾತಾಡಬೇಡ ಅನ್ನಬಹುದು ನೀನು. ಪ್ರೀತಿಗೆ ಮೊದಲು ಕೊನೆ ಇದೆಯಾ ಅಂತ ಕೇಳಿಕೊಳ್ಳುತ್ತೇನೆ ನಾನು. ನನ್ನ ತುಂಬೆಲ್ಲಾ ಬರೀ ಪ್ರಶ್ನೆಗಳು. ಹಿಂದಿನ ಕಾಲದ ಪ್ರೇಮಿಗಳಿಗೆ ಆಪ್ಶನ್ಸ್‌ಸೇ ಇರಲಿಲ್ಲ. ಅವರ ಜಗತ್ತು ಇಷ್ಟು ವಿಶಾಲವಾಗಿರಲಿಲ್ಲ. ಅಲ್ಲಿ ಇಷ್ಟು ವೈವಿಧ್ಯಗಳಿರಲಿಲ್ಲ. ನಮಗೆ ನೂರಾರು ದಾರಿಗಳು. ಸಾವಿರಾರು ಆಯ್ಕೆಗಳು ದಿನಾ ಯಾರ್ಯಾರನ್ನೋ ಭೇಟಿಯಾಗುತ್ತೇವೆ ಒಬ್ಬರಿಗಿಂತ ಇನ್ನೊಬ್ಬರು ಭಿನ್ನ ಒಬಳ್ಳಿಗಿಂತ ಇನ್ನೊಬ್ಬಳು ಸುರಸುಂದರಿ, ಮತ್ತೊಬ್ಬ ಮತ್ತಷ್ಟು ಬುದ್ದಿವಂತ, ಇನ್ಯಾರೋ ಬುದ್ದಿವಂತೆ, ಮತ್ತೆಲ್ಲೋ ಪ್ರಭುದ್ದ ಹುಡುಗ. ಪ್ರೀತಿಮಾಡಿದ ಮೇಲೆ ತಪ್ಪು ಮಾಡಿದೆನಾ ಅನ್ನಿಸತೊಡಗುತ್ತದೆ. ಅವನಿಗಿಂತ ಇನ್ನೊಬ್ಬ ವಾಸಿ ಅನ್ನಿಸುತ್ತನೆ. ಇವಳಾಗಿದ್ದರೆ ಇನ್ನೂ ಹೆಚ್ಚು ಅರ್ಥಮಾಡಿಕೊಳ್ಳುತ್ತಾಳೇನೋ? ಕೇಳಿಕೊಳ್ಳುತ್ತದೆ ಮನಸ್ಸು. ಆಯ್ಕೆಗಳು ಕಂಡ ತಕ್ಷಣ ಪ್ರೀತಿ ಬದಲಾಗುವುದಾದರೆ ಅದು ಪ್ರೀತಿಯೇ ಅಲ್ಲ.

‘love is not love which alters when alteration finds’

ನಾವು ಯಾರನ್ನಾದರೂ ಪ್ರೀತಿಸಿದ್ದೇ ಆದರೆ, ಅವರನ್ನ ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಬೆಳಬೇಕು ಕಣೇ. ‘ನೀನು ಇದ್ದಂತೆ ನಿನ್ನ ಪ್ರೀತಿಸುತ್ತೇನೆ ನೀನೇನು ಬದಲಾಗಬೇಕಿಲ್ಲ’ ಅನ್ನೋದೆಲ್ಲಾ ಬೊಗಳೆ. ನಾನು ನಿರೀಕ್ಷಿಸಿದಂಥ ಹುಡುಗಿಯನ್ನ ಪ್ರೀತಿಸಿದ್ದರೆ ಅವಳು ಬದಲಾಗಬೇಕಿಲ್ಲ ಹೌದು. ನೀನು ಪ್ರೀತಿಸೋ ಹುಡುಗ ನಿನ್ನ ಇಷ್ಟದಂತಿದ್ದರೆ, ನೀನು ಹಾಗಿರೋ ಹೀಗಿರೋ ಅಂತೆಲ್ಲಾ ಹೇಳಬೇಕಿಲ್ಲ. ಹಂಗಿಲ್ಲದೇ ಹೋದರೇ ಅವರಿಗೆ ಹಿಂಸೆ ಮಾಡದೆ ಅವರನ್ನು ಬದಲಾಯಿಸಲು ಪ್ರಯತ್ನಿಸಬೇಕು. ಪ್ರೀತಿ ಏನನ್ನೂ ಬದಲಾಯಿಸುತ್ತದೆ ಅನ್ನೋದನ್ನ ನಂಬುತ್ತೀಯಲ್ಲ. ಅವಳು ಹೆದರಿಕೆ ಸ್ವಭಾವದವಳಾ ಲೆಟ್ ಹಿಂ ಮೇಕ್ ಹರ್ ಟಫ್, ಅವನಿಗೆ ಇನ್ಸೆಕ್ಯುರಿಟಿಯಾ ಇವಳು ನಂಬಿಕೆ ತುಂಬಲಿ, ಅವಳು ಪೊಸೆಸ್ಸಿವಾ? ಟೀಚ್ ಹರ್ ಹೌ ಟು ಗಿವ್ ಸ್ಪೇಸ್. ಅವನಿಗೆ ಕೀಳರಿಮೆಯಾ? ನಾಟ್ ಹಾಪನಿಂಗ್ ಅನ್ನಿಸುತ್ತಾನ? ತಲೆಚಿಟ್ಟು ಹಿಡಿಯುವಂತೆ ಬಡ ಬಡ ಮಾತಾಡುತ್ತಾಳ? ಅಸಾಧ್ಯ ಸಿಟ್ಟಾ? ಪ್ರತಿಯೊಂದನ್ನು ನಿಭಾಯಿಸುವುದಕ್ಕೆ ದಾರಿಗಳಿವೆ. ಪ್ರೀತಿಯಲ್ಲಿ ನಿಷ್ಟೆ, ನಂಬಿಕೆ, ಕಾಳಜಿ, ಒಟ್ಟಿಗೆ ಬೆಳೆಯುವ, ಹಿರಿದಾಗುವ, ನಂಗೆ ಅರವತ್ತು ವಷವಾದಾಗಲೂ ನಿನ್ನ ತೊಡೆಯಮೇಲೆ ಹೀಗೇ ಮಲಗಬೇಕು ಕಣೋ ಅನ್ನೋ ಕನಸುಗಳು ಉಸಿರನಿಡುವೆ ಹೆಸರಕೊಡುವೆ ಅನ್ನುವ ಸಂಬ್ರಮ ಎಲ್ಲವೂ ಇವತ್ತಿಗೂ ನಿಜ. ಹಾಗೆ ಪ್ರೀತಿಯನ್ನ ಕೊನೆವರೆಗೂ ಕಾಯ್ದುಕೊಂಡಾಗಲೇ ನಾವು ಕನಸಿದ್ದೆಲ್ಲಾ ನಿಜವಾಗುತ್ತದೆ, ಪ್ರೀತಿಸಿದಮೇಲೆ ಪ್ರೀತಿಯನ್ನ ಕಾಪಿಟ್ಟುಕೊಳ್ಳುವ, ಅದನ್ನ ಹಿತವಾಗಿಬೆಳೆಸಿ, ಅವರಜೊತೆಗಿರುವ ಕನಸಿರುವವರು ಇದ್ದಾರೆ, ಪ್ರೀತಿ ಇದ್ದರೆ ಹಾಗೇ ಇರಬೇಕು.

ಇಶ್ಟೆಲ್ಲಾ ಆದರೂ ಇನ್ನೇನೋ ಆಗಿಬಿಡತ್ತೆ. ಲವ್ ಜಿಹಾದ್ ಅನ್ನೋ ಶಬ್ಧ ಎಲ್ಲಿಂದಲೋ ಬಾಂಬ್‌ನಂತೆ ಎರಗುತ್ತದೆ, ಒಬ್ಬೊಬ್ಬ ಅಮ್ಮಂದಿರು ಮಕ್ಕಳ ಪ್ರೀತಿ ಪ್ರೇಮವನ್ನ ಸಹಿಸದೆ ತೀರ ತಾವೇ ಸಾವಿನ ಕದ ತಟ್ಟಲ ಹೋಗುತ್ತಾರೆ, ನಾವೆಷ್ಟೇ ನಿಷ್ಟೆಯಿಂದ ಪ್ರೀತಿಸಿದರೂ ಅಲ್ಲೊಬ್ಬಳು ಬೇಕಂತಲೇ ಬಿಟ್ಟು ಹೋಗುತ್ತಾಳೆ, ಇನ್ನೊಬ್ಬನಿಗೆ ಪ್ರೀತಿ ಪ್ರೇಮ ಯಾಕೋ ಸಾಕು ಅನ್ನಿಸಿ ಸನ್ಯಾಸತ್ವದ ಕಡೆ ವಾಲುತ್ತಾನೆ. ಬಾ ನಿನ್ನ ನೋಡಿಕೊಳ್ಳುತ್ತೇನೆ ಅಂತ ಕರೆದುಕೊಂಡು ಹೋದವ ಅವಳಿಗೆ ಸರಿಯಾದ ನೆಲೆಯನ್ನೇ ಕಲ್ಪಿಸುವುದಿಲ್ಲ. ಇನ್ನು ಕೆಲವರಿಗೆ ಎಲ್ಲವೂ ಬೇಕು ಅವರೂ ನಿಮ್ಮನ್ನ ಪ್ರೀತಿಸುತ್ತಾರೆ ಆದರೆ ಕೊನೆಯ ಕ್ಷಣದಲ್ಲಿ ಕಮಿಟ್ಮೆಂಟ್ ಬೇಡ ಅನ್ನಿಸಿಬಿಡತ್ತೆ ಹೀಗೆಲ್ಲಾ ಆಗಿ ಪ್ರೀತಿ ಸುಳ್ಳು ಅನ್ನಿಸತೊಡಗುತ್ತಲ್ಲ ಅದು ನರಕ ಯಾತನೆ. ಬೇರೇನೂ ಬೇಡಾ ಅನ್ನಿಸಿ, ಕೆಲವರು ಜೀವನದಿಂದ ವಿಮುಖರಾದರೆ, ಇನ್ನೊಂದಷ್ಟು ಜನ ಸಾವೇ ಮೇಲು ಅಂದುಕೊಳ್ಳುತ್ತಾರೆ, ಮತ್ಯಾರೋ ಬದುಕು, ಸಮಾಜ ಅವರನ್ನು ತಾಳಲಾರದಂಥ ಸ್ಥಿತಿಗೆ ತಳ್ಳಿಕೊಳ್ಳುತ್ತಾರೆ. ಇದ್ಯಾವುದೂ ಆಗಬಾರದು ನಮ್ಮನ್ನು ಬಿಟ್ಟು ಹೋದವರನ್ನ ನಾವು ಸೇರಲಾರದವರನ್ನ ನಾವು ಪ್ರೀತಿಸಿದ್ದಂತೂ ಸತ್ಯ. ಹಾಗೆ ನಿಶ್ಕಲ್ಮತೆಯಿಂದ ಪ್ರೀತಿಸಲು ನಮಗೆ ಸಾಧ್ಯವಾಯಿತಲ್ಲ, ಅದು ನಮ್ಮ ಖುಷಿ. ಅಷ್ಟು ನಮ್ಮಲ್ಲಿರಲಿ, ಸಿಗಲಾರದವರ ಬಗ್ಗೆ ಕಾತರ, ಕಾದ ಕಾವ ಬೇಸರ ಬೇಡ. ಇಂಥ ಸಂದರ್ಭಗಳಲ್ಲಿ ‘ವಿ ಶುಡ್ ಮೂವ್ ಆನ್’ ನಮ್ಮನ್ನು ಇವೆಲ್ಲವುಗಳಿಂದ ಹೊರತರುವ ಪ್ರಯತ್ನಗಳನ್ನು ಮಾಡಬೇಕು. ನಮಗೆ ಖುಷಿ ತರುವಂಥದ್ದನ್ನು ಕಂಡುಕೊಳ್ಳಬೇಕು, ಹಾಗೇ ಬಾಳಬೇಕು. ಇಂಥದೇನಾದರೂ ಆದಾಗ ಅದರಿಂದ ಹೊರಬರುವ ವಿಧಾನಗಳು ನಮ್ಮ ಡಿಫೆ ನ್ಸ್ ಮೆಖ್ಯಾನಿಸಮ್‌ನಲ್ಲೇ ಇದೆ. ಅದನ್ನ ಹುಡುಕಿದರೆ ಸಾಕು ನಾನೇನೂ ಹೇಳ್ಬೇಕಿಲ್ಲ.

ಅದಕ್ಕೇ ಹುಡುಗಿ ಅವನನ್ನು ನೀನು ಬಿಟ್ಟುಬರಬಾರದು, ಯಾವುದಾದರೂ ಸಂಭಂಧದಿಂದ ಕಳಚಿಕೊಳ್ಳುವುದು ಸುಲಭ ಅದನ್ನು ನಿಷ್ಟೆಯಿಂದ ಪ್ರೀತಿಯಿಂದ ನಿಭಾಯಿಸುವುದು ನಿನ್ನಲ್ಲಿ ಜೀವನೋತ್ಸಾಹವನ್ನ ತುಂಬುತ್ತದೆ. ಅವನಿಗೆ ನಿನ್ನ ಪ್ರೀತಿಯನ್ನ ಅರ್ಥ ಮಾಡಿಸು, ಅವನನ್ನು ಅಷ್ಟು ಪ್ರೀತಿಸುವ ನೀನು ಸುಮ್ಮಸುಮ್ಮನೆ ಚಿಕ್ಕ ಕಾರಣಗಳಿಗೆಲ್ಲಾ ಬಿಟ್ಟು ಬರಬಾರದು. ನೀನು ಬಿಟ್ಟು ಬರುತ್ತೇನೆ ಎಂದು ಹೊರಟರೆ ಅವನು ಖಂಡಿತಾ ಹೇಳಿ ಹೋಗು ಕಾರಣ ಎಂದು ಕೇಳಿಯೇ ಕೇಳುತ್ತಾನೆ. ಹೇಳಲು ನಿನ್ನಲ್ಲಿ
ಕಾರಣಗಳಿವೆಯಾ, ಕೇಳಿಕೋ.
ಬಹುಶಃ ನಿನ್ನಲ್ಲಿ ಹೇಳಬಹುದಾದ, ಅವನನ್ನು ಒಪ್ಪಿಸಬಹುದಾದ ಕಾರಣಗಳೇ ಇರುವುದಿಲ್ಲ.
ಯಾಕೆಂದರೆ,

ಒಂದುಹೆಣ್ಣಿಗೊಂದುಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದ ಕನಸ ಕಂಡು
ದುಃಖ ಹಗುರ ಎನುತಿರೆ
ಪ್ರೇಮವೆನಲು ಹಾಸ್ಯವೇ?

ಇಂತಿ,
ನಿನ್ನೊಳಗಿನ ನೀನು

(ವಿಜಯ ಕರ್ನಾಟಕದಲ್ಲಿ ಫೆಬ್ರವರಿ 14ರಂದು ಪ್ರಕಟವಾದ ಬರಹ)

Tuesday, November 17, 2009

ಒಂದು ಸೂಜಿಯ ಕಣ್ಣು

‘ಈ ಸರ್ತಿ ತಪ್ಸ್ದೆ ಬಾ. ರಥ-ಪ್ರತಿಷ್ಠೆ ಮತ್ತೆ ಮತ್ತೆ ಆಗಲ್ಲ. ಮಕ್ಕಳಿಗೆ ರಜ ಹಾಕ್ಸು ಆ ಚಿಕ್ಕ್-ಚಿಕ್ಕ ಕ್ಲಾಸುಗಳಿಗೆ ಏನಾಗತ್ತೆ? ನಾ ಅಳಿಯಂದ್ರಿಗೂ ಫೋನ್ ಮಾಡಿ ಹೇಳ್ತಿನಿ’ ಅಂತ ಅಪ್ಪ ಸ್ವಲ್ಪ ಗದರಿಸಿಯೇ ಹೇಳಿದ್ದರು. ಅಲ್ಲದೆ ನನಗೂ ಹೋಗಬೇಕು ಅನ್ನಿಸಿದ್ದರಿಂದ ಬ್ಯಾಂಕಿಗೆ ರಜ ಹಾಕಿ ಮಕ್ಕಳಿಬ್ಬರನ್ನೂ ಕರದುಕೊಂಡು ಊರಿಗೆ ಬಂದಿದ್ದೆ.
ಇವನು ‘ಅವತ್ತೊಂದು ದಿನ ಬಂದು ಹೋಗ್ತಿನಿ ಮೊದ್ಲೇ ಬರೋಕ್ಕೆ ಕಷ್ಟ’ ಅಂದಿದ್ದ. ನನಗಂತೂ ಯಾಕೋ ಊರಿಗೆ ಹೋದರೆ ಸಾಕು ಅನ್ನಿಸಿಬಿಟ್ಟಿತ್ತು. ಹಾಗೆ ಅನ್ನಿಸಿದ್ದು ಅಪ್ಪ ಫೋನು ಮಾಡಿ ಕರೆದಮೇಲೆ, ಅದಕ್ಕೆ ಮೊದಲೇ ಎಲ್ಲಾದರೂ ದೂರ ಹೋಗಬೇಕು ಅನ್ನಿಸುತ್ತಿತ್ತು. ಭಾನುವಾರದ ಔಟಿಂಗ್ಗಳು, ಆಗೀಗ ಚಿಕ್ಕ ಪುಟ್ಟ ಟೂರುಗಳು, ಸಿನೆಮಾ, ಪುಸ್ತಕಗಳು, ಸ್ನೇಹಿತರು, ಬ್ಯಾಂಕಿನ ಕೆಲಸ ಎಲ್ಲವೂ ಏಕತಾನತೆ. ಖುಷಿ ಸಂತೋಷಗಳೂ ಏಕತಾನತೆಯನ್ನ ತರಬಹುದಾ? ಬಿ.ಎಯಲ್ಲಿ ನಿಯೋಕ್ಲಾಸಿಕ್ ಕಾಲದ ಪದ್ಯಗಳನ್ನು ಮಾಡುತ್ತಾ ‘ಎಲಿಜಬಬತಿಯನ್ ಏಜ್ ನಲ್ಲಿ ಎಲ್ಲೆಲ್ಲೂ ಸುಖ, ಸಂತೋಷ, ಸ್ವೇಚ್ಚೆ ಎಷ್ಟು ಹೆಚ್ಚಾಯಿತೆಂದರೆ ಕೊನೆಕೊನೆಗೆ ಜನಕ್ಕೆ ಇದೆಲ್ಲಾ ಸಾಕು ಜೀವನದಲ್ಲಿ ಏನಾದರೂ ಕಟ್ಟುಪಾಡುಗಳಿರಬೇಕು ಅಂದುಕೊಂಡು ಪ್ಯೂರಿಟನ್ ಆಗಲು ಹೊರಟರು, ತಮ್ಮ ಜೀವನದಲ್ಲಿ ಒಂದಷ್ಟು ನೀತಿ ನಿಯಮಗಳಿರಬೇಕು ಅಂದುಕೊಂಡವರಿಗೆ ಕಾವ್ಯದಲ್ಲೂ ನೀತಿನಿಯಮಗಳಿರಬೇಕು ಅನ್ನಿಸಿತು, ಅದಕ್ಕೆ ಆಗಿನ ಕಾವ್ಯದಲ್ಲಿ ಕಲ್ಪನೆಗಿಂತ ಬುದ್ದಿವಂತಿಕೆಗೆ, ಭಾವನೆಗಳಿಗಿಂತ ಪದಪುಂಜಗಳಿಗೆ, ವಿಷಯಕ್ಕಿಂತ ಬರೆಯುವ ರೀತಿಗೆ ಹೆಚ್ಚು ಪ್ರಾಧಾನ್ಯತೆ..’ ಎಂದು ಪಾಟೀಲ್ ಸರ್ ಹೇಳುತ್ತಿದ್ದ ಮಾತುಗಳು ನೆನಪಾಗುತ್ತಿವೆ.
ಊರಿಗೆ ಬಂದ ಸ್ವಲ್ಪ ಹೊತ್ತಿನಲ್ಲೇ ನನ್ನ ಚಿಕ್ಕ ವಯಸ್ಸಿನ ಬುದ್ದಿ ಮತ್ತೆ ಜಾಗೃತವಾಯಿತು. ಊರು ತಿರುಗಲು ಹೊರಟೆ, ಎಂದಿನಂತೆ ಗಂಡುಬೀರಿ ಥರ. ಮಕ್ಕಳು ನನಗಿಂತಾ ಮೊದಲೇ ಎಲ್ಲೋ ಆಡಲು ಹೋಗಾಗಿತ್ತು. ತೇರು ಮನೆಯ ಅಂಗಡಿಯ ಬಳಿ ನನ್ನ ಜೊತೆಯವರು, ನನಗಿಂತಾ ವಯಸ್ಸಿನಲ್ಲಿ ಸ್ವಲ್ಪ ದೊಡ್ಡವರಾದ ಅಣ್ಣಂದಿರೆಲ್ಲ ಕಗ್ಗ ಹಾಕುತ್ತಾ ಕೂತಿದ್ದರು. ಅವರು ನಗುತ್ತಿರುವುದು, ಬೀದಿಯ ಈಚೆ ಬದಿಗೂ ಕೇಳಿಸುತ್ತಿತ್ತು.
‘ಓ.. ಶ್ರೀದೇವಿ! ಆಗ್ಲೇ ಬಂದ ಆಟೋ ನಿಮ್ ಮನೆ ಕಡೆ ಹೋಗೋದನ್ನ ನೋಡ್ದೆ. ನೀನೇ ಇರ್ಬೇಕು ಅನ್ಸಿತ್ತು. ಇಷ್ಟ್ ಲೇಟಾಗ್ ಬರದಾ? ಬಾ ಕೂತ್ಕೊ’ ಒಳಗೆ ಕರೆದೆ ಕೇಶವ. ಎಲ್ಲರನ್ನೂ ಮಾತಾಡಿಸುತ್ತಾ ಒಳಗೆ ಹೋದೆ. ಕೇಶವನ ಹೆಂಡತಿ ವೈದೇಹಿ ಮತ್ತು ನಾನು ಒಳಗಿಂದಲೇ ಈ ಗಂಡಸರ ಮಾತುಗಳನ್ನು ಕೇಳಿಸಿಕೊಂಡು ನಗುತ್ತಿದ್ದೆವು. ಮೊದಲಿನ ಹಾಗೆ ಅವರುಗಳ ಮಧ್ಯೆ ಹೋಗಿ ಕೂರೋದಕ್ಕೆ ಆಗೋದೇ ಇಲ್ಲವಲ್ಲ ಅನ್ನಿಸಿತು. ‘ಮೂರ್ತಿ, ಜನ್ನ, ನಾಣಿ ಎಲ್ಲಾ ಎಲ್ಲಿ ಕಾಣಿಸ್ತಾ ಇಲ್ಲ’ ಕೇಳಿದೆ. ನಾಣಿ ಇಲ್ಲೇ ಕೂತಿದ್ದ ಮೂರ್ತಿ ಬಂದಮೇಲೆ ಅವರಿಬ್ಬರೂ ಏನೇನೋ ಫಿಲಾಸಫಿಕಲ್ ಚರ್ಚೆಗಳಲ್ಲಿ ಮುಳುಗಿ ಹೋಗಿ, ಹಾಗೇ ಮಾತಾಡಿಕೊಂಡು ಎದ್ದು ಹೋದರು ಎಂದ ಕೇಶವ, ನಿನ್ನ ಬೆಸ್ಟ್ ಫ್ರೆಂಡ್ ಜನ್ನಂಗೆ ಸ್ಕೂಲಲ್ಲಿ ತುಂಬಾ ಕೆಲ್ಸ ಅಂತೆ, “ಅಯ್ಯೋ ನಿಂಗೊತ್ತಿಲ್ಲ ವೆಂಕಿ, ಈ ಸಲ ಗಾಂಧಿ ಜಯಂತಿಗೆ ವಿಶೇಷ ಕಾರ್ಯಕ್ರಮಗಳನ್ನೆಲ್ಲಾ ಹಮ್ಮಿಕೊಂಡಿದೀವಿ, ಅದ್ರ ಎಲ್ಲಾ ಜವಬ್ದಾರಿನೂ ನಂಗೇ ವಹಿಸಿದಾರೆ ಹೆಡ್ಮಾಷ್ಟ್ರು. ಅಕ್ಟೋಬರ್ ಎರಡಕ್ಕೆ ಇನ್ನು ಎರಡೇ ವಾರ ಉಳ್ದಿರೋದು. ನಾನು ರಥಪ್ರತಿಷ್ಠೆ ದಿವ್ಸ ರಜ ಹಾಕಿಬರ್ತಿನಿ, ನೀವು ಆರಾಮಾಗಿ ಇದ್ದೋಗಿ” ಜನ್ನನ ಮಾತುಗಳನ್ನ ಅದೇ ದಾಟಿಯಲ್ಲಿ ಅನುಕರಿಸುತ್ತಾ ಹೇಳಿದ ವೆಂಕಿಯ ಮಾತಿಗೆ ಎಲ್ಲರೂ ನಕ್ಕರು.
ಕೇಶವ ವ್ಯಾಪಾರ ಮಾಡುವುದನ್ನೇ ನಾನು ಗಮನಿಸುತ್ತಿದ್ದೆ, ಅಂಗಡಿಗೆ ಬಂದವರಿಗೆ ತಕ್ಕಡಿಗೆ ತೊಗರಿಬೇಳೆ, ಬೆಲ್ಲ, ಅಕ್ಕಿ, ರವೆ ಇಂಥವನ್ನು ಹಾಕುವಾಗ ಎಷ್ಟು ಜೋರಾಗಿ ಹಾಕುತ್ತಿದ್ದ ಎಂದರೆ ಅವನು ಹಾಕಿದ ರಭಸಕ್ಕೆ ಬೊಟ್ಟಿರುವ ಭಾಗಕ್ಕಿಂತಾ ಸಾಮಾನಿರುವ ಭಾಗವೇ ಕೆಳಗೆ ಹೋಗಿ ವ್ಯಾಪಾರ ಮಾಡಲು ಬಂದವರಲ್ಲಿ ಆ ಕ್ಷಣಕ್ಕೆ ಕೇಶವನೇ ಮೋಸಹೋಗುತ್ತಿದ್ದಾನೆಂಬ ಭ್ರಮೆ ಹುಟ್ಟುವಂತೆ ಮಾಡಿ, ತಕ್ಷಣವೇ ಆ ಸಾಮಾನನ್ನು ಪ್ಲಾಸ್ಟಿಕ್ ಕವರಿಗೆ ಸುರಿದು ಮುಗ್ದವಾದ ಮುಖಭಾವದಲ್ಲಿ ನಿಲ್ಲುತ್ತಿದ್ದ. ಹೀಗೆ ಪ್ರತಿ ಬಾರಿಯೂ ಅಷ್ಟೋ ಇಷ್ಟೋ ಉಳಿಸುತ್ತಿದ್ದ ಹಾಗೂ ಒಟ್ಟು ಮೊತ್ತಕ್ಕಿಂತ ಕೊಂಚ ಕಡಿಮೆಯೇ ತೆಗೆದುಕೊಂಡು ಒಳ್ಳೆಯವನಂತೆ ಎಲ್ಲರಿಗೂ ಕಾಣಿಸುತ್ತಿದ್ದ.
ಅವನನ್ನೇ ಗಮನಿಸುತ್ತಾ ಕೂತಿದ್ದಾಗ, ದೂರದಲ್ಲಿ ಹೆಂಗಸೊಬ್ಬಳು ಬರುವುದು ಕಣಿಸಿತು, “ಅಲ್ಲಿ ಬರ್ತಿರೋದು ದೇಜಿ ಹೆಂಡ್ತಿ ತಾನೆ?” ಕೇಳಿದೆ. “ಅಯ್ಯೋ ಮತ್ತೆ ಬಂದ್ಲೇನೇ? ಈ ದೇಜಿದು ಎಂಟುನೂರು ರುಪಾಯ್ ಸಾಲ ಆಗಿದೆ ಒಂದು ದಮ್ಮಡಿ ವಾಪಸ್ ಬಂದಿಲ್ಲ. ಅವ್ನು ಬಂದ್ರೆ ಸಾಲ ಕೊಡಲ್ಲ ಅಂತ ಈಗ ಹೆಂಡ್ತಿನ ಕಳ್ಸಕ್ ಶುರು ಮಾಡಿದಾನೆ. ಈ ಮುದ್ಕಿ ಹ್ಯಾಪ್ ಮೋರೆ ಹಾಕ್ಕಂಡ್ ಅಂಗ್ಡಿ ಮುಂದೆ ನಿಂತಿದ್ರೆ ನೋಡಕ್ಕಾಗಲ್ಲ. ವೈದೇಹಿ ನೀನೇ ಅವ್ಳನ್ನ ಕಳ್ಸು ನಾ ಒಳ್ಗೆ ಹೋಗ್ತಿನಿ” ಅನ್ನುತ್ತಾ ಎದ್ದ. ನನಗೂ ಇದನ್ನೆಲ್ಲಾ ನೋಡುತ್ತಾ ಸಣ್ಣದಾಗಿ ಹಿಂಸೆ ಆಗುತ್ತಿತ್ತು. “ನಾ ತೋಟದ್ ಕಡೆ ಹೋಗ್ ಬರ್ತಿನಿ”ಅಂತ ಎದ್ದೆ. “ಸಂಜೆ ಮನೆಕಡೆ ಬಾರೆ, ಅಪ್ಪ ಹೇಳ್ತಿದ್ರು, ಅದೇನೋ ಬ್ಯಾಂಕಿನ ವ್ಯವಹಾರದ ಮಾತು ಆಡ್ಬೇಕಂತೆ” ಅಂದ ವೆಂಕಿಗೆ ಸರಿ ಎನುತ್ತಾ ತೋಟಗಳ ದಾರಿಯ ಕಡೆ ಹೊರಟೆ.

ತೋಟಗಳ ದಾರಿಯಲ್ಲಿ ಒಬ್ಬಳೇ ನಡೆಯುತ್ತಾ ಹೋಗುತ್ತಿದ್ದರೆ ಮನಸ್ಸು ಯಾಕೋ ಆಹಾ ಅನ್ನುವಷ್ಟು ಹಗುರಾಗಿದೆ ಅನ್ನಿಸುತ್ತಿತ್ತು. ಮೈಸೂರಿನಲ್ಲಿ ಬಿ.ಎ ಓದುತ್ತಿರುವ ಸಮಯದಲ್ಲಿ, ರಜೆಯಲ್ಲಿ ಊರಿಗೆ ಬಂದಾಗ ತೋಟಕ್ಕೆ ಹೋಗಿ ವರ್ಡ್ಸ್ ವರ್ಥ್ನ ‘ರೆಸಲ್ಯೂಶನ್ ಅಂಡ್ ಇಂಡಿಪೆಂಡೆನ್ಸ್’, ‘ಶಿ ಡ್ವೆಲ್ಟ್ ಅಮಂಗ್ ದಿ ಅನ್ಟ್ರಾಡನ್ ವೇಸ್’, ಕೀಟ್ಸಿನ ‘ಓಡ್ ಟು ಅ ನೈಟಿಂಗೇಲ್’ ಪದ್ಯಗಳನ್ನ ಕನ್ನಡಕ್ಕೆ ಅನುವಾದ ಮಾಡುತ್ತಿದ್ದ ದಿನಗಳು ನೆನಪಾದವು. ಮದುವೆಯಾದಮೇಲೆ ಬರೆಯುವುದನ್ನೇ ಬಿಟ್ಟುಬಿಟ್ಟೆನಲ್ಲಾ. ಮತ್ತೆ ಬರೆಯಲು ಶುರು ಮಾಡಬೇಕು. ಅಂದುಕೊಂಡೆ
ಇದ್ದಕ್ಕಿದ್ದ ಹಾಗೆ ದೇಜಿ ನೆನಪಾದ. ಅವನು ಹುಲಿಕೆರೆಗೆ ಬಂದಿದ್ದು ನಾನು ಸ್ಕೂಲಿನಲ್ಲಿದ್ದಾಗ. ಎಂಟನೇ ಕ್ಲಾಸೋ ಒಂಭತ್ತನೇಕ್ಲಾಸೋ ಇರಬೇಕು. ಒಂದು ಬೆಳಿಗ್ಗೆ ಅವನು ಅವನ ಹೆಂಡತಿ, ಅವನ ಮಗ ಹಾಲಿನಂಗಡಿಯ ಪಕ್ಕದ ಪುಟ್ಟ ಮನೆಯಲ್ಲಿ ಸ್ಥಾಪಿತರಾಗಿದ್ದರು. ಅವನಿಲ್ಲಿಗೆ ಯಾಕೆ ಬಂದ ಅಲ್ಯಾಕೆ ಠಿಕಾಣಿ ಹೂಡಿದ್ದಾನೆ ಎಂಬ ಕುತೂಹಲಕ್ಕೆ ಉತ್ತರವಾಗಿ ಎರಡೇ ದಿನದಲ್ಲಿ ಒಂದು ಟೇಲರ್ ಅಂಗಡಿ ತೆರೆದು ತನ್ನ ನಗು ಮತ್ತು ಹೊಲಿಗೆ ಮಿಷನ್ನೊಂದಿಗೆ ಪ್ರತ್ಯಕ್ಷವಾಗಿದ್ದ. ನಮ್ಮೂರಲ್ಲೂ ಟೇಲರ್ ಅಂಗಡಿ ತೆಗೆದ ಅವನ ಹುಚ್ಚುತನ ನೋಡಿ ಅವನುದ್ಧಾರ ಆಗಲ್ಲ ಏಂದು ರಘುಮಾವ ತೀರ್ಪುಕೊಟ್ಟುಬಿಟ್ಟಿದ್ದರು.
ನಮ್ಮೂರಲ್ಲೂ ಒಬ್ಬ ಟೇಲರ್ ಇದ್ದಾನೆ ಎಂದು ಹೇಳಿಕೊಳ್ಳೋದಕ್ಕೇ ನಮಗೆಲ್ಲ ಹೆಮ್ಮೆಯಾಗುತ್ತಿತ್ತು. ಅಷ್ಟುದಿನ ಹುಲಿಕೆರೆ, ಕಣಿಯಾರು, ಅಗ್ರಹಾರ, ಕ್ಯಾತ್ನಳ್ಳಿ, ಕೊರಟಿಕೆರೆ, ಬರಗೂರು ಮುಂತಾದ ಊರಿನವರೂ ಬಟ್ಟೆ ಹೊಲಿಸಿಕೊಳ್ಳಲು ಅರಕಲಗೂಡಿನವರೆಗೂ ಹೋಗಬೇಕಾಗಿತ್ತು. ಇವನು ಬಂದದ್ದೇ ಅವರೆಲ್ಲರಿಗೂ ‘ನಾವೂ ಮುಂದುವರೀತಿದಿವಿ’ ಅನ್ನೋ ಲಾಂಛನವನ್ನ ಹಾಕಿಕೊಂಡ ಹಾಗೆ ಅನ್ನಿಸಿತೇನೊ. ಅಲ್ಲಿವರೆಗೂ ಅಮ್ಮಂದಿರೆಲ್ಲಾ ಬ್ಲೌಸನ್ನು ತಾವೇ ಕೈಯಲ್ಲಿ ಹೊಲಿದುಕೊಂಡು ಹಾಕಿಕೊಳ್ಳುತ್ತಿದ್ದರು. ಅಪ್ಪ, ಯುಗಾದಿಗೆ, ದೀಪಾವಳಿಗೆ, ನವರಾತ್ರಿಗೆ ಅಂತ ವರ್ಷದಲ್ಲಿ ಮೂರು ಸರ್ತಿ ಅರಕಲಗೂಡಿಗೆ ಕರೆದುಕೊಂಡು ಹೋಗಿ ತಾವೂ ಶರ್ಟು ಹೊಲಿಯೋಕ್ಕೆ ಕೊಟ್ಟು ನಮಗೂ ಲಂಗ ಬ್ಲೌಸು ಹೊಲಿಸಿಕೊಡುತ್ತಿದ್ದರು. ಅದೇ ದೊಡ್ಡ ಸಂಭ್ರಮ ನಮಗೆ. ಹಬ್ಬಕ್ಕೆ ಇನ್ನೆರೆಡು ತಿಂಗಳಿದೆ ಅನ್ನುವಾಗಲೇ, ಅಮ್ಮ ಅರಕಲಗೂಡಿಗೆ ಯಾವಾಗ ಹೋಗೋದು ಎಂದು ಅಪ್ಪನಿಗೆ ದುಂಬಾಲು ಬೀಳುತ್ತಿದ್ದಳು. ಅಪ್ಪ ಇವತ್ತು ಕರಕೊಂಡ್ ಹೋಗ್ತಿನಿ ನಾಳೆ ಕರ್ಕೊಂಡ್ ಹೋಗ್ತಿನಿ ಅಂತ ಮುಂದೆ ತಳ್ಳುತ್ತಾ ಹಬ್ಬಕ್ಕೆ ಹದಿನೈದು ದಿನ ಇದೆ ಅನ್ನುವಾಗ ನಮ್ಮನ್ನೆಲ್ಲಾ ಕರೆದುಕೊಂಡು ಹೋಗುತ್ತಿದ್ದರು. ಅಮ್ಮನಿಗೆ ಈ ಬಟ್ಟೆ ಹೊಲಿಸುವ ಕಾರ್ಯಕ್ರಮದಿಂದ ಸಾಕುಬೇಕಾಗಿ ಹೋಗುತ್ತಿತ್ತು.
ಅರಕಲಗೂಡಿನ ವೈಶಾಲಿ ಟೇಲರಿಂಗ್ ಹಾಲಿನ ರಾಜಶಟ್ಟಿ ಒಂದು ರಾಶಿ ಬಟ್ಟೆಗಳ ನಡುವೆ ದುಶ್ಯಾಸನನ ಥರ ಕೂತಿರುತ್ತಿದ್ದ. ನಾವು ಬಟ್ಟೆ ತೆಗೆದುಕೊಂಡು ಹೋಗಿ ಕೊಟ್ಟೆರೆ ನಮ್ಮನ್ನೊಮ್ಮೆ ಕಣ್ಣೆತ್ತಿ ನೋಡಿ ಹಳೇ ಪುಸ್ತಕದಲ್ಲಿ ಏನನ್ನೋ ಗೀಚಿಕೊಂಡು ಮುಂದಿನವಾರ ಶಂಕರ್ ಮೋಟಾರ್ಸ್ ನಲ್ಲಿ ಕಳ್ಸ್ಕೊಡ್ತಿನಿ ಹೋಗಿ ಅಂದು ನಮ್ಮ ಬಟ್ಟೆಯನ್ನೂ ಆ ರಾಷಿಯೊಳಗೆ ಮಾಯ ಮಾಡುತ್ತಿದ್ದ. ಅವನಿಗೆ ಅದರಲ್ಲಿ ನಮ್ಮ ಬಟ್ಟೆ ಹ್ಯಾಗೆ ಗೊತ್ತಾಗುತ್ತೆ ಅಂತ ನನಗೆ ಯಾವಾಗಲೂ ಆಶ್ಚರ್ಯವಾಗುತ್ತಿತ್ತು. ನಾನು ನನ್ನ ಬಟ್ಟೆಯಮೇಲೆ ಮೂಲೆಯೊಂದರಲ್ಲಿ ಸಣ್ಣದಾಗಿ ಎಸ್.ಡಿ ಎಂದು ಬರೆದಿಡುತ್ತಿದ್ದೆ. ಆದರೆ ಅವನು ಹೊಲಿದುಕೊಟ್ಟ ಬಟ್ಟೆಯಲ್ಲಿ ಎಷ್ಟು ಹುಡುಕಿದರೂ ಆ ಹಸ್ತಾಕ್ಷರ ನನಗೆ ಸಿಗುತ್ತಲೇ ಇರಲಿಲ್ಲ.
ಒಂದು ವಾರದಲ್ಲಿ ಕಳಿಸಿಕೊಡುತ್ತೇನೆ ಎಂದರೂ ಬಟ್ಟೆ ಬರುತ್ತಿದ್ದದ್ದು ಮಾತ್ರ ಹಬ್ಬದ ಹಿಂದಿನ ದಿನವೇ. ನಾವು ದಿನಾ ಸಂಜೆ ಶಂಕರ್ ಮೋಟರ್ಸ್ ಡ್ರೈವರ್ ಹತ್ತಿರ ಹೋಗಿ ವಿಚಾರಿಸಿ ನಿರಾಶರಾಗಿ ಅದೇ ಸುತ್ತಿಗೆ ಹಿಡಿಶಾಪ ಹಾಕುತ್ತಾ ಮನೆಗೆ ಮರಳುತ್ತಿದ್ದೆವು.
ಹಾಲಿನ ಸೊಸೈಟಿ ಪಕ್ಕದಲ್ಲಿ ಟೇಲರ್ ಒಬ್ಬ ಬಂದಿದಾನೆ ಅಂದಾಗ ನನಗೆ ಖುಷಿಯಾದದ್ದು, ಇನ್ನುಮೇಲೆ ಈ ರಗಳೆಗಳೆಲ್ಲಾ ಇರೋಲ್ಲ ಅನ್ನೋ ಕಾರಣಕ್ಕೆ. ಆವತ್ತು ಸ್ಕೂಲಿಂದ ವಾಪಸ್ಸು ಬರುವಾಗ ಅವನ ಅಂಗಡಿಯ ಮುಂದೆ ಸ್ವಲ್ಪ ಹೊತ್ತು ನಿಂತು ಎಲ್ಲವನ್ನು ಗಮನಿಸಿ ಮನೆಗೆ ಬಂದವಳೇ ಅಮ್ಮನ ಹತ್ತಿರ ಖುಶಿ ಖುಶಿಯಾಗಿ ಅವನ ಬಗ್ಗೆ, ಅವನು ಇಂಗ್ಲೀಷಿನಲ್ಲಿ ಪರ್ಫೆಕ್ಟ್ ಟೇಲರ್ಸ್ ಅಂತ ಬರೆಸಿರುವ ಬೋರ್ಡಿನ ಬಗ್ಗೆ, ಅವನ ಚಂದದ ಗುಂಗುರು ಕೂದಲಿನ ಹೆಂಡತಿಯ ಬಗ್ಗೆ ಸ್ವಲ್ಪ ಉತ್ಪ್ರೇಕ್ಷೆ ಮಾಡೇ ಹೇಳಿದ್ದೆ. ಅಮ್ಮ ನಗುತ್ತಾ ಗಂಡು ಬೀರಿ ಅಂದಿದ್ದಳು. ನಾನು ಹೇಳಿದ್ದರಲ್ಲಿ ಗಂಡುಬೀರಿತನದ್ದು ಏನಿತ್ತು ಎಂದು ಇವತ್ತಿಗೂ ಗೊತ್ತಾಗಿಲ್ಲ. ಅಮ್ಮನಿಗೆ ನನ್ನನ್ನು ಹಾಗೆ ಅಂದು ಅಂದು ಅಭ್ಯಾಸವಾಗಿಹೋಗಿತ್ತೇನೋ.
ಅವನು ಮಂಗಳೂರಿಂದ ಬಂದಿದ್ದಾನೆ ಎನ್ನುವುದೂ ಅವನ ಹೆಂಡತಿಗೆ ಕನ್ನಡ ಬರಲ್ಲ ಎನ್ನುವುದು ಹಾಲು ಸೊಸೈಟಿಯ ಇನ್ನೊಂದು ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದ ವೆಂಕಮ್ಮನಿಂದ ಹುಲಿಕೆರೆಯ ಸಮಸ್ತ ಜನಕ್ಕೂ ವಿತರಣೆಯಾಗಿತ್ತು. ಸಿಕ್ಕಸಿಕ್ಕವರನ್ನು ಮಾತಾಡಿಸುವ ಅವರ ಎಂದಿನ ಚಾಳಿಯಂತೆ ದೇಜಿಯ ಹೆಂಡತಿಯನ್ನು ಮಾತಾಡಿಸಿದ್ದಕ್ಕೆ ಅಲ್ಲೇ ಏನೋ ಹೊಲೆಯುತ್ತಾ ಕೂತಿದ್ದ ದೇಜಿ, ‘ಅವಳಿಗೆ ಮಲಯಾಳಂ ಮತ್ತೆ ತುಳು ಮಾತ್ರ ಬರುವುದಾ, ಕನ್ನಡಮ್ ಗೊತ್ತಿಜ್ಜಿ.’ ಅಂದಿದ್ದನಂತೆ. ಇವನು ನನ್ನೇ ಪ್ರಶ್ನೆ ಕೇಳುತ್ತಿದ್ದಾನೋ ಇಲ್ಲಾ ಉತ್ತರಿಸುತ್ತಿದ್ದಾನ ಎಂದು ಗೊಂದಲಕ್ಕೆ ಬಿದ್ದ ವೆಂಕಮ್ಮ ಸುಮ್ಮನಾಗಿದ್ದರಂತೆ.


ತನ್ನ ಅಂಗಡಿಗೆ ಬಂದವರ ಹತ್ತಿರ ವಿಚಿತ್ರವಾದ ಅವನ ತುಳುಮಿಶ್ರಿತ ಕನ್ನಡದಲ್ಲಿ ಮಾತನಾಡುತ್ತಾ ಅಲತೆ ತೆಗೆದುಕೊಳ್ಳುವಾಗ ‘ನೋಡಿ, ನಿಮಗೆ ಇಲ್ಲಿ ಸ್ವಲ್ಪ ಉದ್ದ ಇಟ್ರೆ ಆಗ್ತದೆ. ಓ.. ಅವರ ರೀತಿ ಹೊಲಿಸಿಕೊಂಡರೆ ಚಂದ ಕಾಣೋದಿಲ್ಲ. ನಿಮ್ಮ ಶೇಪಿಗೆ ಹೀಗೇ ಹೊಲಿಯಬೇಕು’ ಎನ್ನುತ್ತಲೋ ‘ನೋಡಿ ಇಷ್ಟು ಜಾಸ್ತಿ ಬಟ್ಟೆ ಬೇಡ ನಿಮಗೆ. ನೀವು ಸುಮ್ನೆ ಬಟ್ಟೆಗೆ ದುಡ್ಡು ಹಾಕುವುದು ಎಂತಕ್ಕೆ? ನಿಮ್ಮ ಚಿಕ್ಕ ಮಗನಿಗೂ ಇದರಲ್ಲೇ ಒಂದು ಶರ್ಟ್ ಹೊಲಿದುಕೊಡುವಾ’ ಎನ್ನುತ್ತಾ ತನ್ನ ಟೇಲರಿಂಗ್ ಪ್ರತಿಭೆಯನ್ನ ತೋರಿಸುವುದರ ಜೊತೆಗೇ, ಅವರ ವಿಶ್ವಾಸವನ್ನೂ ಸಂಪಾದಿಸುತ್ತಿದ್ದ. ತಾನು ಹೇಳಿದಂತೆ ಹೊಲಿಸಿಕೊಳ್ಳುವ ಹಾಗೆ ಮಾಡಿ ಅಲ್ಲಿನ ಟ್ರೆಂಡ್ ಸೆಟ್ಟರ್ ಆಗಿಬಿಟ್ಟಿದ್ದ.
‘ಏನೇ ಸುಂದ್ರಿ ಇಷ್ಟ್ ಚನ್ನಾಗ್ ಕಾಣ್ಸ್ತಿದಿಯಾ?’ ಅಂತ ಮನೆಯಿಂದ ಹೊರ ಬಂದ ತಕ್ಷಣ ಮೇಷ್ಟ್ರುಮನೆ ಶ್ರೀಧರ ಅಂದಾಗ ನನ್ನೆದೆ ಢಗ್ ಅಂದಿತ್ತು. ಅಯ್ಯೋ ಇವನು ಆಡ್ಕೊತಿದನ? ನಾನು ಮೈ ಅಳತೆ ಕೊಟ್ಟು ಲಂಗ ಬ್ಲೌಸು ಹೊಲಿಸಿಕೊಂಡಿದ್ದು ಗೊತ್ತಾಗ್ ಹೋಯ್ತಾ? ಇನ್ನು ಅಪ್ಪನಿಗೆ ಗೊತ್ತಾಗ್ಬಿಟ್ರೆ ನನ್ ಚರ್ಮ ಸುಲಿತಾರೆ ಎಂದೆಲ್ಲಾ ಯೋಚಿಸಿ ಕಣ್ಣು ತುಂಬಿಕೊಂಡಿತು. ‘ಏ ಹೋಗ..’ ಎನ್ನುತ್ತಾ ದೇವಸ್ತಾನದ ಕಡೆಗೆ ಹೊರಟೆ. ಯಾರು ಚೆನ್ನಾಗಿ ಕಾಣಿಸ್ತಿದಿಯ ಅಂದ್ರೂ ಎದೆ ಹೊಡೆದುಕೊಳ್ಳುತ್ತಿತ್ತು. ಜೊತೆಗೆ ಖುಷಿಯೂ..
ಮನೆಗೆ ಬಂದ ತಕ್ಷಣ ಬಿಚ್ಚಿಟ್ಟು ಹಳೇ ಬಟ್ಟೆ ಹಾಕಿಕೊಂಡಿದ್ದೆ. ಅಪ್ಪ ‘ಹೊಸಾ ಬಟ್ಟೆ ತೆಗ್ದಿಟ್ಬಿಟ್ಯಾ, ಈ ದೇಜಿ ಪರವಾಗಿಲ್ಲ, ಕಣ್ಣಲ್ಲೇ ಅಳತೆ ತಗೊಂಡ್ರೂ ಚನ್ನಾಗ್ ಹೊಲ್ದಿದಾನೆ, ಚನ್ನಾಗ್ ಕಾಣ್ತಿದ್ದೆ ಇವತ್ತು ಅಂದ್ರು.
ನಾನು ಮಾತಾಡದೆ ಸುಮ್ಮನಿದ್ದೆ. ‘ಕಣ್ಣಲ್ಲೇ ಅಳ್ತೆ ತಗೊಂಡು ಹೊಲ್ದುಕೊಡ್ತಿನಿ ಬೇಕಿದ್ರೆ, ಆಮೇಲೆ ಅಲ್ಲಿ ಸರಿ ಇಲ್ಲ, ಇಲ್ಲಿ ಸರಿ ಇಲ್ಲ ಅಂತ ಮತ್ತೆ ನನ್ನ ಬಳಿ ಬರಬೇಡಿ ಆಯ್ತಾ? ಅದರ ಬದಲು ಒಂದೇ ಬಾರಿಗೆ ಅಳತೆ ಕೊಟ್ಟು ಹೊಲಿಸ್ಕೊಳಿ. ನೋಡಿ ಎಷ್ಟು ಚಂದ ಆಗ್ತದೆ ಅಂತ. ನಾನು ಹಾಗೆ ಕೆಟ್ಟ ಮನುಷ್ಯ ಅಲ್ಲವಾ.. ನನಗೆ ನಿಮ್ಮ ವಯಸ್ಸಿನ ತಂಗಿ ಇದಾಳೆ.. ಓ ಅಲ್ಲಿ ಪರ್ಕಳದಲ್ಲಿ. ಹೆದರಬೇಡಿ ಆಯ್ತಾ...’ ವಾರದ ಹಿಂದೆ ಬಟ್ಟೆ ಹೊಲಿಯಲು ಕೊಟ್ಟು ಬರಲು ಹೋದಾಗ ಅಂದ ದೇಜಿಯ ಮಾತುಗಳು ನೆನಪಾಗುತ್ತಿದ್ದವು. ‘ಅದಕ್ಕಲ್ಲ ದೇಜಿ, ದೊಡ್ಡೋರಿಗೆ ಗೊತ್ತಾದ್ರೆ ಇಷ್ಟ ಆಗಲ್ಲ’ ಅಂತ ಅನುಮಾನಿಸಿದ್ದೆ. ‘ಓ ಎಂತದಾ.. ನಾನು ಯಾರಿಗಾದರೂ ಹೇಳೋದುಂಟಾ? ಸತ್ಯವಾಗ್ಲೂ ಯಾರಿಗೂ ಹೇಳಲ್ಲ ಮಾರಾಯ್ರೆ’ ಅಂದಿದ್ದ ಅವನ ಮಾತಿಗೆ ಒಪ್ಪಿ ಹೊಲಿಸಿಕೊಂಡಿದ್ದೆ.
ಹೊಲಿಸಲು ಕೊಟ್ಟು ಬಂದ ರಾತ್ರಿ ಕನಸು: ಅಳತೆ ಕೊಟ್ಟಿದ್ದು ಎಲ್ಲರಿಗೂ ಗೊತ್ತಾದ ಹಾಗೆ, ಅಪ್ಪ ಇದೇ ಅವಮಾನದಿಂದ ರೋಡಿನಲ್ಲಿ ತಲೆತಗ್ಗಿಸಿಕೊಂಡು ಬರುತ್ತಿರುವ ಹಾಗೆ, ನನ್ನ ಹತ್ರ ಮಾತು ಬಿಟ್ಟ ಹಾಗೆ.. ಎಚ್ಚರವಾದಾಗ ಸದ್ಯ ಕನಸು ಎನ್ನಿಸಿದರೂ ಯಾಕಾದರೂ ಅಳತೆ ಕೊಟ್ಟು ಬಂದೆನೋ ಪೇಚಾಡಿಕೊಂಡಿದ್ದೆ.

ಬರಬರುತ್ತಾ ಊರಿನ ಹುಡುಗೀರೆಲ್ಲಾ ಯಾಕೋ ಚನ್ನಾಗಿ ಕಾಣ್ತಿದಾರಲ್ಲ ಅನ್ನಿಸ್ತಿತ್ತು ನನಗೆ. ಬರೀ ನನಗೆ ಮಾತ್ರ ಹಿಂಗನ್ನಿಸ್ತಿದಿಯಾ ಅಂತ ಮೊದಮೊದಲು ಅನುಮಾನವಾದರೂ ಶ್ರೀನಿವಾಸ ಚಿಕ್ಕಪ್ಪ ಮನೆಗೆ ಬಂದಾಗ ಅಪ್ಪನ ಜೊತೆ ಮಾತಾಡುತ್ತಿದ್ದು ಕಿವಿಗೆ ಬಿದ್ದಿತ್ತು. ‘ಬರೀ ಚಿಕ್ಕಮಗಳೂರು, ಮೈಸೂರು, ಬೆಂಗಳೂರಿನ ಮಕ್ಕಳ ಇರಿಕೆ ಚನ್ನಾಗಿದೆ. ನಮ್ಮೂರಿನವರು ಹೆಂಗ್ಹ್ಯಂಗೋ ಇರ್ತಾರೆ ಅನ್ನಿಸ್ತಿತ್ತು. ಆದ್ರೆ ಇಲ್ಲೂ ಎಲ್ಲಾ ಚಿಗತ್ಕೊಂಬಿಟ್ಟಿದಾರೆ’ ಅಂದಿದ್ದರು.
ಎಲ್ಲರೂ ಅಳತೆ ಕೊಟ್ಟು ಹೊಲಿಸಿಕೊಂಡಿದ್ದಾರೆ ಅಂತ ಗೊತ್ತಾಗುತ್ತಿದ್ದರೂ ಯಾವ ಹುಡುಗಿಯ ಹತ್ರ ಕೇಳೋಣಾ ಅಂದ್ರೂ ಭಯ. ನಾನೇ ಸಿಕ್ಕಿಹಾಕಿಕೊಂಡುಬಿಟ್ರೆ ಅಂತ. ಆದರೆ ದೇಜಿ ಮೈ ಅಳತೆ ತೊಗೊಂಡು ಹೊಲಿತಾನೆ ಅಂತ ಎಲ್ಲರಿಗೂ ಗೊತ್ತಾಗಿದ್ದು ಲಕ್ಷ್ಮಿಯಿಂದ. ಅವಳದನ್ನು ತಾನು ಪ್ರೀತಿಸುತ್ತಿದ್ದ ರಾಘವನಿಗೆ ಹೇಳಿದ್ದೇ ತಪ್ಪಾಗಿ ಊರಿಗಿಡೀ ಗೊತ್ತಾಗಿತ್ತು.

ಎಲ್ಲವೂ ಇದ್ದ ಹಾಗೇ ಇದ್ದಿದ್ದರೆ ದೇಜಿ ಬಹಳ ಶ್ರೀಮಂತನಾಗಿ ಒಂದಷ್ಟು ತೋಟವನ್ನೋ ಒಂದೆರೆಡು ಮನೆಗಳನ್ನೋ ಮಾಡಿಕೊಳ್ಳುತ್ತಿದ್ದನೇನೋ? ಆದರೆ ಇದ್ದಹಾಗೆ ಇರುವುದಾದರೂ ಯಾವುದು? ನಾವೆಲ್ಲಾ ಅರಕಲಗೂಡಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಹೊತ್ತಿಗೆ, ಬೆಂಗಳೂರಿನಲ್ಲಿ ಬೇಕರಿ ಇಟ್ಟಿದ್ದ ಶೇಶಿ ಒಂದೆರೆಡು ದಿನಗಳ ಮಟ್ಟಿಗೆ ಊರಿಗೆ ಬಂದಿದ್ದ. ಬಂದವನು ಎಲ್ಲಾ ರೀತಿಯಲ್ಲೂ ತುಂಬಾ ಬದಲಾಗಿದ್ದ. ಅವನು ಹಾಕಿಕೊಂಡಿದ್ದ ಬಟ್ಟೆಗಳನ್ನು ನೋಡಿ ನಮಗೆಲ್ಲಾ ಆಶ್ಚರ್ಯ. ದೇಜಿ ಹೊಲೆಯುವುದಕ್ಕಿಂತ ಚೆನ್ನಾಗಿ ಹೊಲಿದಂತಿತ್ತು. ಎಲ್ಲಿ ಹೊಲಿಸಿಕೊಂಡ್ಯೋ, ಎಷ್ಟಾಯ್ತೋ, ಎನ್ನುವ ಹುಡುಗರ ಪ್ರಶ್ನೆಗಳಿಗೆ, ‘ಹೊಲಿಸ್ಕೊಂಡಿದ್ದಲ್ಲ, ಅಲ್ಲೆಲ್ಲಾ ಈಗ ರಡೀಮೇಡ್ ಬಟ್ಟೆ ಸಿಗತ್ತೆ. ಅಲ್ಯಾಕೆ, ಈಗ ಹಾಸನದಲ್ಲೂ ಸಿಗತ್ತೆ. ನಾವು ಬಟ್ಟೆ ತೊಗೊಂಡು ದೇಜಿ ಕೈಯಲ್ಲಿ ಹೊಲಿಸ್ಕೊಂಡ್ರೆ ನೂರು ರುಪಾಯಾದ್ರೂ ಆಗತ್ತೆ. ಅಲ್ಲಿ ಹೊಲ್ದಿದ್ ಬಟ್ಟೆ ನಿಮ್ ನಿಮ್ ಅಳ್ತೆದೇ ಅರವತ್ತಕ್ಕೋ ಎಂಭತ್ತಕ್ಕೋ ಸಿಗತ್ತೆ. ಇನ್ನು ಕಮ್ಮಿದು ಬೇಕಾದ್ರೂ ಸಿಗುತ್ತೆ’ ಅಂದ. ಇಲ್ಲಿದ್ದ ಹುಡುಗರೆಲ್ಲಾ ಹಾಸನಕ್ಕೆ ಹೋದಾಗ ಒಂದೆರೆಡು ಶರ್ಟು ತೊಗೊಬೇಕು ಅಂತ ಮಾತಾಡಿಕೊಂಡರು. ಕೆಲವೇದಿನಗಳಲ್ಲಿ ನಮ್ಮೂರ ತುಂಬಾ ರಡಿಮೇಡ್ ಬಣ್ಣದ ಶರ್ಟು ಹಾಕಿಕೊಂಡ ಹುಡುಗರು ಹುಲಿವೇಷದಂತೆ ಓಡಾಡತೊಡಗಿದರು.
ನಾವು ಹುಡುಗೀರು ಮಾತ್ರ ನಮ್ಮ ಬಟ್ಟೆ ಹೊಲಿಸಿಕೊಳ್ಳುವುದಕ್ಕೆ ದೇಜಿಯ ಬಳಿಯೇ ಹೋಗುತ್ತಿದ್ದೆವು. ನಾನು ಪಿ.ಯು.ಸಿ ಮುಗಿಸಿ ಬಿ.ಎಗೆ ಮೈಸೂರಿನಲ್ಲಿ ಸೇರಿದ ಮೇಲೆ ದೇಜಿಯ ಬಳಿ ಹೊಲಿಸಿಕೊಳ್ಳುವುದನ್ನು ಬಿಟ್ಟಿದ್ದೆ. ಮೈಸೂರಲ್ಲಿ ಸ್ವಲ್ಪ ಶ್ರೀಮಂತ ಹುಡುಗಿಯರೆಲ್ಲಾ ಚೂಡೀದಾರ್ ಹಾಕ್ತಿದ್ರು. ಬಹಳಷ್ಟು ಜನ ಲಂಗ ಬ್ಲೌಸು ಹಾಕಿಕೊಂಡು ಬರುತ್ತಿದ್ದರೂ, ಅದೂ ಸ್ವಲ್ಪ ಬೇರೆಯ ತರಹವೇ ಇದೆ, ನಾವು ಹಾಕಿಕೊಳ್ಳುವುದಕ್ಕಿಂತಾ ಚೆನ್ನಾಗಿದೆ ಅನ್ನಿಸುತ್ತಿತ್ತು. ನಾನು ಅಲ್ಲೇ ಹೊಲಿಸಿಕೊಳ್ಳಲು ಶುರು ಮಾಡಿದೆ. ಹೀಗಿರುತ್ತಾ ಜನ್ನ ನನಗೆ ಬರೆದ ಪತ್ರವೊಂದರಲ್ಲಿ, ‘ದೇಜಿಗೆ ಈಗ ವ್ಯಾಪಾರವೇ ಇಲ್ಲ. ದೇಜಿಗೆ ಮಾತ್ರ ಅಲ್ಲ, ಬಹಳಷ್ಟು ಚಿಕ್ಕ-ಪುಟ್ಟ ಅಂಗಡಿಗಳು, ಗುಡಿ ಕೈಗಾರಿಕೆಗಳು ಎಲ್ಲವೂ ಮುಚ್ಚಿಕೊಂಡು ಹೋಗುತ್ತಿವೆ. ಗಾಂಧಿ ತತ್ವಗಳಿಗೆ ಬೆಲೆಯೇ ಇಲ್ಲ, ಗಾಂಧೀಜಿ ಸ್ವಾತಂತ್ರಕ್ಕಾಗಿ ವಿದೇಶಿಗಳ ವಸ್ತುಗಳನ್ನು ಸುಟ್ಟರೆ, ಈಗ ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ ನಮ್ಮವರು ಗಾಂಧೀಜಿ ತತ್ವಗಳನ್ನ ಸುಡುತ್ತಿದ್ದಾರೆ.....’ ಅಂತೆಲ್ಲ ಬಹಳ ಬೇಸರದಿಂದ ಬರೆದಿದ್ದ. ಆಮೇಲೆ ನನ್ನ ಜೀವನ ಯಾವ್ಯಾವುದೋ ಹಳಿಗಳ ಮೇಲೆ ಓಡಲು ಶುರುವಾಗಿ ನಾನೇ ಎಲ್ಲೆಲ್ಲೊ ಕಳೆದು ಹೋದೆ.


‘ಫೈನಲ್ ಇಯರ್ ಗೋಪಾಲ ನಿನ್ನೇ ಗುರಾಯಿಸ್ತಿದಾನೆ ಕಣೇ’ ಅಂತ ಕಾಲೇಜು ಗೇಟು ದಾಟುತ್ತಿದ್ದವಳ ಕೈ ಚಿವುಟಿದಳು ರೇಶ್ಮ. ಅವನನ್ನು ತಿರುಗಿ ನೋಡಿದ್ದೆ. ಅಬ್ಬಾ ಅನ್ನಿಸಿತ್ತು. ಇಷ್ಟ ಆಗಿ ಹೋಗಿದ್ದ. ಮೈತುಂಬ್ಬಿಕೊಂಡ ಎತ್ತರದ ಆಕಾರ, ನಾನು ಮೆಚ್ಚುವ ನಸುಗಪ್ಪು ಬಣ್ಣ.. ಅವನ ದೇಹದಿಂದ ಯಾವುದೋ ಬೆಳಕಿನ ಸಂಚಲನವಾಗುತ್ತಿದೆ ಅನ್ನಿಸಿದ್ದು ಆ ಕ್ಷಣಕ್ಕೆ ಭ್ರಮೆ ಅಂದುಕೊಂಡಿದ್ದೆ. ಕ್ಲಾಸಿನ ಮುಂದೆ ಬಂದು ನನ್ನ ನೋಡುತ್ತಾ ಸಣ್ಣದಾಗಿ ನಗುತ್ತಾ ನಿಂತಿರುತ್ತಿದ್ದ. ನಗು ಬರುತ್ತಿದ್ದರೂ ಅವನ ಕಡೆ ನೋಡದೆ, ಪಾಠದಮನೆ ರಂಗಸಾಮಿ ಅಯ್ಯಂಗಾರ್ ಅವರ ಎರಡನೇ ಪುತ್ರಿ ಶ್ರೀದೇವಿ ಎಚ್. ಆರ್ ತನ್ನ ಪ್ರಪಂಚದ ಬಾಗಿಲನ್ನು ಅವನಿಗೆ ಮುಚ್ಚಿ ಭದ್ರವಾಗಿ ತನ್ನ ಪಾಡಿಗಿದ್ದಳು. ಅವನು ಫೈನಲ್ ಇಯರ್ ಮುಗಿಸಿ ಹೋದಮೇಲೆ, ‘ಛೆ! ಒಂದು ಸಲವಾದರೂ ಮಾತಾಡಿದ್ದರೆ ಏನಾಗೋದು?’ ಎಂದು ಹಳಿದುಕೊಂಡಿದ್ದು ಲೆಕ್ಕವಿಲ್ಲದಷ್ಟು ಸಲ. ಆದರೆ ನಾನು ಸೆಕೆಂಡ್ ಇಯರ್ ಕೊನೆಯಲ್ಲಿರುವ ಹೊತ್ತಿಗೆ, ಅವನನ್ನು ಮರೆತೇ ಬಿಟ್ಟಿದ್ದೆ ಅಥವಾ ಹಾಗೊಬ್ಬ ಇದ್ದ ಅಂತ ನೆನಪಾಗುತ್ತಿದ್ದ. ಆದರೆ ನನ್ನ ಕಾಲೇಜಿನ ನೆನಪುಗಳಲ್ಲಿ ಮಾತ್ರ ದಾಖಲಾಗುತ್ತಾನೆ ಅಂದುಕೊಂಡಿದ್ದವ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದ. ಮುಜುಗರವಿಲ್ಲದೆ ಬಂದು ಮಾತಾಡಿಸಿದವನನ್ನು ಮಾತಾಡಿಸುತ್ತಾ ನನ್ನ ಮುಜುಗರವೆಲ್ಲಾ ನೀರಾಗಿತ್ತು. ಎಲ್ಲಾ ಮಾತಾಡಿದಮೇಲೆ ‘ಸಿ. ಎ ಕಟ್ಟಿದ್ದೀನಿ. ಇನ್ನು ಮೂರ್ ವರ್ಷ ಆಗತ್ತೆ. ಅಷ್ಟರೊಳಗೆ ಯಾರನ್ನು ಒಪ್ಕೊಬೇಡ, ಪ್ಲೀಸ್. ನಾನು ಫೇಲ್ ಆದ್ರೆ ನಿನ್ ತಂಟೆಗ್ ಬರಲ್ಲ. ಅಲ್ಲಿವರ್ಗು ಕಾಯ್ತಿಯಾ? ನೀನ್ ನಂಗ್ ಇಷ್ಟ’ ಅಂದಿದ್ದ. ನಾನು ಮೊದಲು ಒಪ್ಪಲಿಲ್ಲ. ಫೈನಲ್ ಇಯರ್ ಡಿಗ್ರಿ ಮುಗಿಸಿ ಕಾಲೇಜು ಬಿಡುವ ಹೊತ್ತಿಗೆ ಮತ್ತೆ ಬಂದ ಅವನು, ‘ನಾನು ಆರ್ಟಿಕಲ್ಶಿಪ್ನಲ್ಲೇ ಸಿ.ಎ ಇಂಟರ್ ಮುಗ್ಸಿದೀನಿ. ನಂಗೆ ನಿನ್ನ ಬೇಡ್ಕೊಳಕ್ಕೆ ಇಷ್ಟ ಇಲ್ಲ, ಆದ್ರೆ ನಿನ್ ಜೊತೆ ಖುಷಿಯಾಗಿರ್ತಿನಿ ಅಂತ ಗೊತ್ತು. ಉತ್ತರ ಹೇಳಿ ಹೋಗು’ ಅಂದ. ಏನೂ ಮಾತಾಡದೆ ಬಂದ ನಾನು ಉತ್ತರ ಹೇಳಿದ್ದು ಅಪ್ಪನಿಗೆ.
‘ಅದ್ಯಾವ್ದೋ ಸ್ಮಾರ್ತ ಮುಂಡೇಮಗನ್ನ ಪ್ರೀತಿಸಿ ಬಂದಿದಾಳೆ ನಿಮ್ ಮಗ್ಳು, ಬೀದಿ ರಂಡೆ.. ಬೀದಿ ರಂಡೆ..’ ಅಂತ ಅಮ್ಮ ಕೂಗಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ. ಅಪ್ಪ ‘ಓದಿದ್ದು ಸಾಕು’ ಅಂದರು. ಹಿಂಗೆಲ್ಲಾ ಆಯಿತು ಅಂತ ಅವನಿಗೆ ಪತ್ರ ಬರೆದು ಹಾಕಿದೆ. ‘ತಲೆಕೆಡಿಸಿಕೊಳ್ಳಬೇಡ. ಬ್ಯಾಂಕ್ ಎಕ್ಸಾಂ ಕಟ್ಟು. ನಾ ಪುಸ್ತಕಗಳನ್ನು ಕಳ್ಸ್ಕೊಡ್ತಿನಿ. ಕಷ್ಟ ಆಗಲ್ಲ. ಇನ್ನೊಂದುವರೆ ವರ್ಷ ಅಷ್ಟೆ. ನಾನು ಸಿ.ಎ. ಫೈನಲ್ಸ್ ಮುಗಿಸಿದ ತಕ್ಷಣ ಮದುವೆಯಾಗೋಣ’ ಎಂದು ಸಮಾಧಾನ ಹೇಳುತ್ತಿದ್ದ. ಆ ಎರಡು ವರ್ಷಗಳು ನರಕ. ಅಮ್ಮನ ನಿರಂತರ ಗೊಣಗಾಟದ ನಡುವೆಯೂ ಸಾಹಿತ್ಯ ಓದಿಕೊಂಡಿದ್ದವಳು, ಹಠಕ್ಕಾಗಿಯೇ ಓದಿ ಪಾಸು ಮಾಡಿ ಅಕೌಂಟು ಸ್ಟಾಟಿಸ್ಟಿಕ್ಸ್ಗಳ ನಡುವೆ ಕರಗಿ ಹೋದೆ. ಆಗ ನೆಮ್ಮದಿ ತರುತ್ತಿದ್ದಿದ್ದು ಅವನ ಪತ್ರಗಳು ಮತ್ತು ಶ್ರೀನಿವಾಸ ಚಿಕ್ಕಪ್ಪನ ಸಮಾಧಾನದ ಮಾತುಗಳು. ‘ನಿನ್ನದು ಕುರುಡು ಪ್ರೀತಿ ಅಲ್ಲ ಅಂತ ಗೊತ್ತು ಮಗಳೇ. ಅವನು ಎಕ್ಸಾಮ್ ಪಾಸು ಮಾಡಲಿ, ನಾನು ನಿನ್ನಪ್ಪನನ್ನು ಒಪ್ಪಿಸುತ್ತೇನೆ’ ಅಂದಿದ್ದರು. ಅವನು ಒಂದೇ ಅಟೆಮ್ಟಿಗೆ ಸಿ.ಎ ಪಾಸು ಮಾಡಿದ.. ಅಪ್ಪನೂ ‘ಹೋಗಲಿ ಬ್ರಾಹ್ಮಣರೇ ತಾನೇ’ ಅನ್ನತೊಡಗಿದರು. ನನಗೇ ಆಶ್ಚರ್ಯವಾಗುವಂತೆ ಹೆಣ್ಣು ಕೇಳಲು ಬಂದವರಿಗೆ ಒಳ್ಳೆಯ ಸತ್ಕಾರ ಮಾಡಿ ಮದುವೆ ನಿಶ್ಚಯಿಸಿದರು. ‘ಈಗೆಲ್ಲಾ ತ್ರಿಮತಸ್ತರು ಒಂದಾಗದಿದ್ದರೆ ಆಗೋಲ್ಲ’ ಅಂತೆಲ್ಲಾ ಅಪ್ಪ, ಅವನ ತಂದೆ ಮಾತಾಡಿಕೊಳ್ಳುತ್ತಿದ್ದರೆ ಇವರ ಜಾತಿಯ ಭ್ರಮೆಗೆ ತಲೆಚಚ್ಚಿ ಕೊಳ್ಳುವ ಹಾಗಾಗುತ್ತಿತ್ತು. ಮದುವೆ ನಮ್ಮ ಇಷ್ಟದ ಪ್ರಕಾರವಾಗಿಯೇ ನಡೆಯಿತು. ಬಹಳಷ್ಟು ಜನ ಕುವೆಂಪುರವರ ಮಂತ್ರ ಮಾಂಗಲ್ಯದಿಂದ ಪ್ರಭಾವಿತರಾಗಿ ಮದುವೆಯಾದಂತೆ ನಾವೂ ಆದೆವು. ಇದೆಲ್ಲಾ ಆಗಿ ಹತ್ತು ಹನ್ನೆರೆಡು ವರ್ಷಗಳಾಗಿವೆ ಅಷ್ಟೆ. ಮೊದಲು ಹರಿಹರನ್ ಅಂಡ್ ಕೋ. ನಲ್ಲಿ ಕೆಲಸ ಮಾಡುತ್ತಿದ್ದವನು, ತನ್ನದೇ ಫರ್ಮ್ ಶುರುಮಾಡಿದ. ಅಪ್ಪ ಅಮ್ಮನಿಗೆ ಅಳಿಯ ಚಾರ್ಟೆಡ್ ಅಕೌಂಟೆಂಟ್ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ.


ತೋಟ ಸುತ್ತಿ ವಾಪಸ್ಸು ಬರುವ ದಾರಿಯಲ್ಲೇ ಜನ್ನನ ಶಾಲೆ. ಜನ್ನ ಮರದ ಟೇಬಲ್ಲಿನ ಮುಂದೆ ಕೂತು ಕೈಯಲ್ಲೊಂದು ರೀಫಿಲ್ ಹಿಡಿದುಕೊಂಡು ಪೇಪರಿನ ಮೇಲೆ ಎಂತದೋ ಬರೆಯುತ್ತಾ ಯಾವುದೋ ಲೆಕ್ಕಾಚಾರದಲ್ಲಿ ಮುಳುಗಿಹೋಗಿದ್ದ. ‘ನಿಂಗೆ ಪೆನ್ನಿಗೆ ಗತಿ ಇಲ್ವ? ರೀಫಿಲ್ನಲ್ಲಿ ಬರೀತಿದ್ಯಲ್ಲ’ ಚುಡಾಯಿಸುತ್ತಾ ಒಳಗೆ ಹೋದೆ. ‘ಅಯ್ಯೋ ತಕ್ಷಣಕ್ಕೆ ಏನೂ ಸಿಗಲಿಲ್ಲ ಅದಕ್ಕೇ ಈ ರೀಫಿಲ್ಲಿನಲ್ಲೇ ಲೆಕ್ಕ ಹಾಕ್ತಿದ್ದೆ’ ಅನ್ನುತ್ತಾ ನಕ್ಕ. ‘ಗಾಂಧಿ ಜಯಂತಿಯನ್ನ ವಿಜೃಂಭಣೆಯಿಂದ ಆಚರಿಸೋಣ. ಎಷ್ಟು ಖರ್ಚಾಗುತ್ತೆ ಲೆಕ್ಕ ಕೊಡಿ, ಅಂತ ಕೇಳಿದಾರೆ ಹೆಡ್ಮಾಷ್ಟ್ರು’ ಅಂದ. ಏನು ಮಾಡ್ತಾಇದಿಯಾ ಕೇಳಿದೆ ‘ಗಾಂಧಿ ಗ್ರಾಮ ಅಂತ ಒಂದು ನಾಟ್ಕ ಆಡ್ಸ್ತಿದಿನಿ, ಭಾರತದ ಹೋರಾಟದ ಕಥೆ, ಕಳೆದ ಐವತ್ತು ವರ್ಷಗಳಲ್ಲಿ ಹೇಗೆ ನಾವೆಲ್ಲಾ ಗೋಡ್ಸೆ ಆಗಿದ್ದೀವಿ ಬ್ರಿಟಿಷರಿಂದ ಪಾರಾಗುವುದಕ್ಕೆ ಅಷ್ಟೊಂದು ಹೋರಾಡಿದ ಕೆಲವೇ ವರ್ಷಗಳಲ್ಲಿ ಅಮೇರಿಕಾಕ್ಕೆ ನಮ್ಮನ್ನ ಹೇಗೆ ಮಾರಿಕೊಂಡು ಬಿಟ್ಟಿದ್ದೀವಿ ಅನ್ನೋದೆಲ್ಲಾ ಹೇಳೋಕೆ ಹೊರತಿದ್ದೀನಿ. ದುಬಾರಿ ಪ್ರೊಡಕ್ಷನ್ನು ಈ ಖಾದಿ ಜುಬ್ಬ ಖಾದಿ ಟೋಪಿ ಹೊಂದಿಸೋದೇ ಸಮಸ್ಯೆಯಾಗಿದೆ..’ ಅಂದ. ಜಗತ್ತಿನ ಎಲ್ಲಾ ಜವಬ್ದಾರಿಗಳೂ ತನ್ನ ಮೇಲಿದೆ ಎನ್ನುವ ಟೆನ್ಷನ್ನಲ್ಲಿ, ಸಂಭ್ರಮದಲ್ಲಿ ಇದ್ದ. ನನಗೆ ನಗು ಬರುತ್ತಿತ್ತು. ಸಂಜೆ ದೇಜಿ ಹತ್ರ ಹೊಲಿದು ಕೊಡ್ತೀಯಾ ಅಂತ ಕೇಳಬೇಕು ಅಂದ.
‘ದೇಜಿ ಈಗ್ಲೂ ಹೊಲೀತಾನಾ? ಅವನು ಅಂಗಡಿ ಮುಚ್ಚಿಯಾಗಿದೆ ಅಂದಿದ್ದೆ’ ಎಂದಿದ್ದಕ್ಕೆ ‘ಅಂಗ್ಡಿ ಮುಚ್ಚಿದ್ದ್ರೂ ನಾ ಕೇಳಿದ್ರೆ ಇಲ್ಲ ಅನ್ನಲ್ಲ’ ಅಂದ. ‘ಆಮೇಲೆ ಇಂಥ ಪ್ರೋಗ್ರಾಮುಗಳಿಂದಾದರೂ ಅವನಿಗೊಂದಷ್ಟು ಸಹಾಯ ಆಗಲಿ, ಉಸಿರಾಡಲೂ ತ್ರಾಣ ಇಲ್ಲದ ಇಂಥಾ ಗಾಂಧಿಯ ಮಕ್ಕಳನ್ನ ಗಾಂಧಿ ಜಯಂತಿಯಾದರೂ ಬದುಕಿಸಲಿ ಅಂತ’ ಅಂದ. ನನಗೂ ದೇಜಿಯನ್ನ ನೋಡಬೇಕೆನಿಸಿತು. ‘ನೀನು ದೇಜಿ ಹತ್ರ ಹೋದ್ರೆ ನನ್ನನ್ನೂ ಕರಿ’ ಅಂದೆ. ‘ಓಹೋ ನಿಂಗೇನು ಕೆಲ್ಸ ಅಲ್ಲಿ. ನಿಮ್ಮಂಥಾ ಜಾಗತೀಕರಣದ ಹಾಲು ಕುಡಿದು ಬೆಳೆದ ಕೂಸುಗಳು ಅಂಥವರ ಮೇಲೆ ಕರುಣೆ ತೋರಿಸೋದು ಬೇಡ.’ ಅಂದ ವ್ಯಂಗ್ಯವಾಗಿ. ‘ಸಿನಿಕನ ಥರ ಮಾತಾಡ್ಬೇಡ. ಹೋಗೋ ಮುಂಚೆ ಮನೆ ಕಡೆ ಬಾ. ಇಲ್ಲ ಅಂದ್ರೆ ನಾನೇ ಹೋಗ್ಬರ್ತಿನಿ’ ಅಂದೆ. ‘ಇಲ್ಲ ಮರಾಯ್ತಿ ಬರ್ತಿನಿ ಆರುವರೆಗೆ.’ ಅಂದು ನಕ್ಕ.
ಮನೆಗೆ ಬಂದಾಗ ಅಮ್ಮ ಹೂ ಕಟ್ಟುತ್ತಾ ಕೂತಿದ್ದಳು. ದೇಜಿಯ ಬಗ್ಗೆ ಅಮ್ಮನ ಹತ್ತಿರ ಕೇಳಿದೆ. ಅವನು ಹೊಲಿಯೋದು ಬಿಟ್ಟಿರಬೇಕು. ನಾನಂತೂ ನೋಡ್ಲಿಲ್ಲಪ್ಪ. ಅವನ ಮಗ ಓಡಿ ಹೋದ ಮೇಲೆ ಹೊರಗೆ ಬರೋದೇ ಬಿಟ್ಟಿದ್ದ ಅಂದಳು ಅಮ್ಮ. ಈ ಬೆಳವಣಿಗೆಗಳೆಲ್ಲ ನನಗೆ ಗೊತ್ತೇ ಇರಲಿಲ್ಲ.

7
ನಾನು, ಜನ್ನ ಹಾಲು ಸೊಸೈಟಿಯ ಮುಂದೆ ಬಂದು ನಿಂತಾಗ ಸರಿಯಾಗಿ ಏಳು ಗಂಟೆ. ‘ಹೇಗೂ ಅಲ್ಲೇ ಹೋಗ್ತಿರಲ್ಲ, ಹಾಗೇ ಹಾಲು ತೊಗೊಂಡು ಬಾ’ ಅಮ್ಮ ಪಾತ್ರೆ ಕೊಟ್ಟು ಕಳುಹಿಸಿದ್ದಳು. ದೇಜಿ ಮನೆಯ ಬಾಗಿಲ ಬಳಿ ‘ಪರ್ಫೆಕ್ಟ್ ಟೇಲರ್ಸ್’ ತಗಡಿನ ಬೋರ್ಡು ಬಣ್ಣಗೆಟ್ಟು ನಿಂತಿತ್ತು. ಜನ್ನ ಬಾಗಿಲು ಬಡಿದ. ಐದು ನಿಮಿಷ ಒಳಗಿನಿಂದ ಯಾವ ಚಲನೆಯೂ ಕಾಣಿಸಲಿಲ್ಲ. ನಂತರ ಅವನ ಹೆಂಡತಿ ಮನೆಯೊಳಗೆ ಬೆಳಕು ಬಂದುಬಿಟ್ಟರೆ ಅನಾಹುತವಾಗುತ್ತೆ ಎಂಬಂತೆ ಒಂದು ಚೂರೇ ಚೂರು ಬಾಗಿಲು ತೆರೆದು ಮುಖ ಹೊರಗಡೆ ಹಾಕಿದಳು. ‘ದೇಜಿ ಇಲ್ವಾ? ಒಂಚೂರ್ ಕೆಲ್ಸ ಇತ್ತು ಗಾಂಧಿಜಯಂತಿಗೆ ಬಟ್ಟೆ ಹೊಲ್ಸದಿತ್ತು’ ಅಂದ. ಅವಳಿಗೇನು ಅರ್ಥವಾಯಿತೋ ‘ಬಣ್ಣಿ’ ಎಂದು ಮಲೆಯಾಳಂಕನ್ನಡದಲ್ಲಿ ಕರೆದು ನಾವು ಒಳಗೆ ಬರುತ್ತಲೇ ಬಾಗಿಲು ಮುಚ್ಚಿದಳು. ಅವನ ಟೇಲರಿಂಗ್ ರೂಮಿಗೆ ಹೋಗಿ ಕಾಯುತ್ತಾ ಕೂತೆವು.
ದೇಜಿ ಬಾಗಿಲ ಬಳಿ ಕಾಣಿಸಿಕೊಂಡ. ಒಂದು ಸುಧೀರ್ಘ ಪ್ರಯಾಣ ಮುಗಿಸಿದವನಷ್ಟು ಸುಸ್ತಾದವನಂತೆ ಕಂಡ. ಕೂದಲು ಬಣ್ಣಗೆಟ್ಟಿದ್ದವು. ಬಾಚಿ ವರ್ಷಗಳೇ ಕಳೆದಿರಬೇಕು. ಜನ್ನ ಅವನನ್ನು ನೋಡಿದ ತಕ್ಷಣ ‘ದೇಜಿ ಹೇಗಿದ್ಯ?’ ಎಂದು ಕೇಳ್ ಅವನ ಉತ್ತರಕ್ಕೂ ಕಾಯದೆ ‘ಒಂದು ದೊಡ್ಡ ಕಾರ್ಯಕ್ರಮ ಮಾಡ್ತಿದಿವಿ ನಾಟ್ಕ ಆಡಿಸ್ತೀವಿ. ಗಾಂಧಿ ಜಯಂತಿನ ತುಂಬ ಜೋರಾಗಿ ಮಾಡ್ತಿವಿ ನನ್ಗೆ ಎಂಟು ಜೊತೆ ಖಾದಿ ಜುಬ್ಬ, ಪೈಜಾಮ, ಗಾಂಧಿ ಟೋಪಿ ಬೇಕು. ನೀನೇ ಬಟ್ಟೆ ತಂದು ಹೊಲ್ದು ಕೊಡು. ಎಷ್ಟಾಗತ್ತೆ ಹೇಳು? ಗಾಂಧಿ ಜಯಂತಿ ಸಮಿತಿಯವರು ದುಡ್ಡು ಕೊಡ್ತಾರೆ. ನಾಳೆ ಬೆಳಗ್ಗೆ ಮಕ್ಕಳನ್ನ ಕಳಿಸ್ತಿನಿ. ಅವ್ರ ಅಳ್ತೆ ತೊಗೊ..’ ಎಂದೆಲ್ಲಾ ಎಡಬಿಡದೆ ಹೇಳಲು ಶುರು ಮಾಡಿದ.
ನಾನು ದೇಜಿಯ ಟೇಲರಿಂಗ್ ಶಾಪನ್ನೇ ನೋಡುತ್ತಾ ನಿಂತಿದ್ದೆ. ಅವನು ಮೊದಲ ಸಲ ನನ್ನ ಅಳತೆ ತೆಗೆದುಕೊಳ್ಳುತ್ತಾ ನನ್ನ ಮುಜುಗರ ಕಳೆಯುತ್ತಾ ಆಡಿದ ಮಾತುಗಳು ನೆನಪಾದವು. ಯಾವತ್ತೂ ಬಟ್ಟೆ ಹೊಲಿಸಿಕೊಳ್ಳದ ನನ್ನ ಮಗಳು ಶ್ರಾವಣಿಗೆ ದೇಜಿ ಹತ್ತಿರ ಉದ್ದ ಲಂಗ ರವಕೆ ಹೊಲಿಸಿಕೊಡಬೇಕು ಅಂದುಕೊಂಡೆ.
ಜನ್ನನ ಮಾತು ಮುಗಿದಿತ್ತು, ದೇಜಿ ಮಾತಾಡದೆ ಟೇಲರಿಂಗ್ ಮೆಷಿನ್ನನ್ನು ಮುಚ್ಚಿದ ಹಳೇ ಪಂಚೆಯನ್ನು ಸರಿಸಿದ. ನೋಡಿ ಎಂಬಂತೆ ನಮ್ಮ ಮುಖವನ್ನೇ ನೋಡಿದ.
ಎಷ್ಟೋ ವರ್ಷಗಳಿಂದ ದೇಜಿ ಕೈಯಲ್ಲಿ ಏನನ್ನೂ ಹೊಲಿಸಿಕೊಂಡಿಲ್ಲವೆಂಬಂತೆ ಅದು ಕೂತಿತ್ತು. ನನ್ನ ಕಣ್ಣಿಗೆ ಯಾವುದೋ ಕಾಲದ ಮ್ಯೂಸಿಯಮ್ ಪೀಸಿನಂತೆ ಕಂಡಿತು. ಜನ್ನ ಒಂಚೂರೇ ಕಾಣಿಸುತ್ತಿದ್ದ ಅದರ ವೀಲನ್ನು ತಿರುಗಿಸಿದ. ವಿಚಿತ್ರವಾದ ಕರ್ಕಶ ಶಬ್ಧ ಹೊರಟಿತು.

(ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಸಿಕ್ಕಿದ ಕತೆ)