Monday, February 16, 2009

ಲವ್ ಅಟ್ ಫಸ್ಟ್ ರೀಡ್..

Soft eyes ಶಿಶಿರನಿಗೆ,

ಲವ್ ಅಟ್ ಫಸ್ಟ್ ಸೈಟ್ ನಲ್ಲಿ ನಂಬಿಕೆಯಿದೆಯಾ ಅಂತ ನಿನ್ನಂಥವನನ್ನು ಕೇಳಿದರೆ ಅದಕ್ಕಿಂತ ಹುಚ್ಚುತನ ಬೇರೊಂದಿಲ್ಲ ಹುಡುಗಾ. ಅದರಲ್ಲೂ ಹಾಗೆ ನಿನ್ನ ಬಯಸಿ ಬಯಸಿ ಅರ್ಥ ಮಾಡಿಕೊಂಡ ನಾನಂತೂ ಅಂಥಾ ಎಡವಟ್ಟು ಪ್ರಶ್ನೆಯನ್ನ ಕೇಳಲೇ ಬಾರದು. ಆದರೆ ಲವ್ ಅಟ್ ಫಸ್ಟ್ ರೀಡ್ ನಲ್ಲಿ ನಂಬಿಕೆ ಇದೆಯೇನೋ ಅಂತ ಕೇಳಿದರೆ ನಗಬಹುದು ನೀನು. ಆದರೂ ನಂಬು ನನ್ನ.

ತೀರಾ ಹತ್ತಿರಾಗುವ ಮೊದಲೇ ನಾನೆಷ್ಟು ಜನರನ್ನು ದೂರ ಮಾಡಿಲ್ಲ. ಫೋನಿನಲ್ಲಿ ಮಾತಾಡುತ್ತಾ ಬುದ್ದಿವಂತನೆನಿಸುತ್ತಿದ್ದ ಕರೀ ಹುಡುಗನನ್ನು ಭೇಟಿಯಾದಾಗ ಎಲ್ಲದಕ್ಕೂ ನೀ ಹೇಳಿದಂತೆ ಅನ್ನತೊಡಗಿದಾಗ ಈ ಹುಡುಗ ಭೈರಪ್ಪನವರ ಸಾಕ್ಷಿಯ ಅಪ್ಪಾಜಪ್ಪನ ಥರದವನಿರಬಹುದು ಎನ್ನಿಸಿ, 'ಐ ಕಾಂಟ್ ಲವ್ ಯು' ಎಂದು ನನ್ನಿಂದ ಹೇಳಿಸಿಕೊಂಡವನಿಂದ ಹಿಡಿದು ಮೊನ್ನೆ ಮೊನ್ನೆ ಅವನಿಗೆ ಭಾವನೆಗಳೇ ಅರ್ಥ ಆಗಲ್ಲ ಸೆಲ್ಫ್ ಸೆಂಟರ್ಡ್ ಪರ್ಸನಾಲಿಟಿ, ತಾನು ಹೇಳಿದ್ದೇ ನೆಡೆಯಬೇಕೆನ್ನುವ ದಾಟು ಕಾದಂಬರಿಯ ವೆಂಕಟೇಶನ ಥರ, ಬುದ್ದಿವಂತ ಸರಿ ಆದರೆ ನನಗೆ ಹತ್ತಿರವಾಗಲಾರ ಎಂದು ಬಿಟ್ಟುಬಂದ ಹುಡುಗನವರೆಗೂ, ಅದೆಷ್ಟು ಜನ! ತುಂಬ ಮೊದ್ದ ಆಲನ ಹಳ್ಳಿಯವರ ಪರಸಂಗದ ಗೆಂಡೆ ತಿಮ್ಮನ ಥರ, ಇನ್ನೊಬ್ಬನ ಮಡಿ, ದೇವರು, ದಿಂಡರು, ಪೂಜೆ, ಪುನಸ್ಕಾರ, ಸಂಸ್ಕಾರದ ಪ್ರಾಣೆಷಾಚಾರ್ಯರ ರೀತಿ, ಚಾಕ್ಲೇಟ್ ಕಂಪನಿಯೊಂದರ ಸಿ. ಯಿ. ಓದು ಉದರಿಂಗ್ ಹೈಟ್ಸ್‌ನ ಹೀತ್ ಕ್ಲಿಫ್ ಥರಹದ ಪೈಶಾಚಿಕ ಪ್ರೀತಿಯ ನೆನಪು ತರಿಸಿದರೆ, ಇಷ್ಟವಾದ ಹುಡುಗನ ಅಲೌಕಿಕ ಆಸಕ್ತಿಯು ಮುಕ್ತದ ಸ್ವಾಮಿಜಿಯ ನೆನಪು ತರಿಸಿ ಹೆದರಿಸಿತ್ತು. ಇಂಗ್ಲಾಂಡಿನಿಂದ ಬಂದ ಹುಡುಗ ನೋಟದಲ್ಲಿ 'ದಿ ಕಂಪನಿ ಆಫ್ ವುಮೆನ್'ನ ಮೋಹನ್‌ನನ ಛಾಯೆ ಕಂಡು ಬೇಡವೆನಿಸಿ ಯಾವ ಹುಡುಗನೂ ಯಾವುದೇ ರೀತಿಯಲ್ಲೂ ನಿನ್ನ ಥರ ಅನ್ನಿಸದೆ ಹೊಂದಿಕೆಯಾಗಲಾರದೆ ಹೋದರು. 'ಮುಚ್ಚಿದ ಬಾಗಿಲ ಮುಂದೆ ಭಿಕ್ಷೆ ಬೇಡಿದರು'. ಹೋಗಲಿ ಪರವಾಗಿಲ್ಲ ಇವನು ಸರಿಯಾಗಬಹುದು ಪ್ರಪೋಸು ಮಾಡಲಾ ಅಂದುಕೊಳ್ಳುತ್ತಿರುವಾಗಲೇ ಕೆಲವರು ಅವರೇ ಪ್ರಪೋಸ್ ಮಾಡಿ ನನ್ನ ನಿರೀಕ್ಷೆಯನ್ನ ಹುಸಿ ಮಾಡಿದ್ದರು. ನದಿಯ ಕಾಲುಬುಡದೆಡೆಗೆ ತೆವಳಿಕೊಂಡು ಬರುವ ಸಮುದ್ರವನ್ನ ಪ್ರೀತಿಸುವುದಾದರೂ ಹೇಗೆ?'ಎಷ್ಟೇ ದೂರದಿಂದಲಾದರೂ ಸರಿ ಮಹಾನದಿ ತನ್ನೆಡೆಗೆ ಧುಮ್ಮಿಕ್ಕಿ ಹರಿದು ಬರಬೇಕೇ ಹೊರತು, ಸಮುದ್ರವೇ ತೆವಳಿಕೊಂಡು ನದಿಯ ಮನೆಬಾಗಿಲಿಗೆ ಹೋಗಲೊಲ್ಲದು.'ಈ ನಿನ್ನ ಮಾತುಗಳು ಪ್ರತಿಯೊಬ್ಬ ಹುಡುಗ ಬಂದು ಪ್ರಪೋಸ್ ಮಾಡಿದಾಗಲೂ ನೆನಪಾಗುತ್ತಿತ್ತೋ. ಇಲ್ಲಿಯವರೆಗೂ ಬರೋಬ್ಬರಿ ಹದಿನಾಲ್ಕು ಜನರನ್ನ ನಿನ್ನ ಕಾರಣದಿಂದಾಗಿ ರಿಜೆಕ್ಟ್ ಮಾಡಿದೀನಿ.

ಒಮ್ಮೆಯಾದರೂ ನಿನ್ನ ಕಷ್ಟಗಳನ್ನು ಹೇಳಿಕೊಳ್ಳುವುದಿಲ್ಲ ನೀನು, ಅವಡುಗಚ್ಚಿಕೊಂಡು ಎಂಥಾ ಪರಿಸ್ಥಿತಿಯಲ್ಲೂ ಸರಿಯಾಗಿ ಯೋಚಿಸುತ್ತೀಯ. ಹಾಗಿರಲು ಹೇಗೆ ಸಾಧ್ಯ ನಿಂಗೆ. ಯಾರ ಬಳಿಯಾದರೂ ನಿನ್ನ ಸಂಕಟಗಳನ್ನು ಹಂಚಿಕೊಳ್ಳಬೇಕು ಅನಿಸುತ್ತಿರಲಿಲ್ಲವೇನೋ? ನಿನ್ನ ಆತಂಕ ಸಂಕಟಗಳಿಗೆಲ್ಲಾ ಕಿವಿಯಾಗಬೇಕು ಅನ್ನಿಸುತ್ತಿತ್ತು ನನಗೆ. ಯಾರನ್ನಾದರೂ ಹಾಗೇ ಅವರಿರುವಂತೆಯೇ ಒಪ್ಪಿಕೊಳ್ಳುವುದನ್ನ, ಏನನ್ನಾದರೂ ಸಾಧಿಸಬೇಕಾದರೆ ರೂಢಿಸಿಕೊಳ್ಳಬೇಕಾದ ಧೃಡತೆಯನ್ನ ಸಂಕಲ್ಪವನ್ನ ಕಲಿಸಿಕೊಟ್ಟವನೇ ನೀನು. ನನ್ನ ವ್ಯಕ್ತಿತ್ವವದಲ್ಲಿ ನಿನ್ನ ಪ್ರಭಾವ ಎಷ್ಟಿದೆಯೆಂದು ಕಲ್ಪಿಸಿಕೊಳ್ಳಲೂ ಅಸಾಧ್ಯ ನಿನಗೆ. ನೀನೇ ಹೇಳಿದ ಮಾತು- ಸ್ಪರ್ಧೆಯಲ್ಲಿ ಪ್ರೀತಿ ಇರಬೇಕು. ಗೆದ್ದ ಗೆಲುವಿನಲ್ಲಿ ದುಷ್ಟ ಸಂತೋಷ ಇರಬಾರದು.

ಕೇಳು ಹುಡ್ಗಾ, 'ಮಹಾನದಿ ಸಮುದ್ರದೆಡೆಗೆ ಹರಿಯಬೇಕು, ಸಮುದ್ರ ನದಿಯೆಡೆಗೆ ತೆವಳಿಕೊಂಡು ಹೋಗಬಾರದು' ಎಲ್ಲಾ ಸರಿ. ಆದರೆ ನದಿ ಕೂಡಾ ಸಮುದ್ರವನ್ನ ನಿನ್ನೊಳಗೆ ಇಳಿಯಲಾ ಎಂದು ಕೇಳುವುದಿಲ್ಲ. ಸಮುದ್ರ ಬಾ ಅನ್ನುವುದೂ ಇಲ್ಲ ಆದರೆ ನದಿಯನ್ನ ತನ್ನೊಳಗೆ ಕರಗಿಸಿಕೊಳ್ಳಲು ಎಲ್ಲಾ ಸಿಧ್ದತೆ ಮಾಡಿಕೊಂಡು ಕಾಯುತ್ತದಲ್ಲಾ, ಹಾಗೆ ಅವನು ಅರಳಿಕೊಳ್ಳಬೇಕು, ನಾನು ಅವನೆಡೆಗೆ ಹರಿದ ಸದ್ದಿಗೆ ಅವನು ಮಯ್ಯೆಲ್ಲಾ ಕಿವಿಯಾಗಿಸಿಕೊಂಡು ಕಾಯಬೇಕು. ಹುಡುಗ ಮಾತ್ರ ಅಲ್ಲ ಹುಡುಗಿಯೂ ನಿನ್ನ ಪ್ರೀತಿಸುತ್ತೇನೆ ಎಂದು ಇಷ್ಟವಾದ ಹುಡುಗನ ಬಳಿ ಹೇಳಿಕೊಳ್ಳಬಾರದು.ಇಷ್ಟಕ್ಕೂ ಪ್ರೀತಿ ಹೇಳಿಕೊಳ್ಳುವುದಲ್ಲ. ಅರ್ಥ ಮಾಡಿಕೊಳ್ಳುವುದು. ನಾನು ನನ್ನ ವ್ಯಕ್ತಿತ್ವವನ್ನು ಮಡಿಚಿಟ್ಟು ಯಾರಿಗೂ ಶರಣಾಗತಳಾಗುವುದಿಲ್ಲ. .`ಯಾವ ಮನುಷ್ಯ ಯಾವ ಸ್ತರದಲ್ಲಿ ನಿಂತು ಯಾರನ್ನು ಪ್ರೀತಿಸಬಾರದು' ಅನ್ನೋದನ್ನು ತಿಳ್ಕೋಬೇಕು ಅಂದಿದ್ದೆ. ತಿಳ್ಕೊಂಡಿದ್ದೀನಿ ಅಂದ್ಕೊಂಡಿದ್ದೀನಿ. ಅರ್ಥ ಮಾಡಿಕೊಳ್ಳುತ್ತೀಯಾ ಹುಡುಗಾ? ಅರ್ಥ ಮಾಡಿಕೊಳ್ಳಲಾಗದಿದ್ದರೂ ನೀ ಹಿಂಗ ನನ್ನ ನೋಡಬ್ಯಾಡ ನನ್ನ.

(ರವಿ ಬೆಳೆಗೆರೆಯವರ ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿಯ ನಾಯಕ ಶಿಶಿರ ಇಷ್ಟ ನಂಗೆ. ಅವನಿಗೆ ಬರೆದ ಪತ್ರ ಇದು, ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು)