Friday, May 15, 2009

ಸಂಜಯದೃಷ್ಟಿ

ಇದ್ದಕ್ಕಿದ್ದಹಾಗೆ ನಾನು ಧೃತರಾಷ್ಟ್ರ ಅನಿಸತೊಡಗಿತು ನನಗೆ. ಸಂಜಯ ನನ್ನ ಮುಂದೆ ನನಗೆ ಬೇಕಾದ ಕಣ್ಣುಗಳನ್ನು ತೆರೆದುಕೊಳ್ಳಲು ಸಿದ್ಧನಾಗಿ ಕೂತಿದ್ದ. ಹೀಗೆ ಅನ್ನಿಸಿದ ತಕ್ಷಣ ಟೀವಿ ಹಾಕಲು ಮನಸಾಗಲೇ ಇಲ್ಲ. ಮಗಳ ಬಳಿ ಹೋದೆ ಸಂಜಯನ ಹತ್ತಾರು ಕಣ್ಣುಗಳನ್ನು ತೆರೆದುಕೊಂಡು ಧೃತರಾಷ್ಟ್ರಳಾಗಿ ಮಗಳು ಬ್ರೌಸ್ ಮಾಡುತ್ತಾ ಕೂತಿದ್ದಳು. ಭಯವಾಯಿತು.
‘ಕಿಮಕುರ್ವತ ಸಂಜಯ?’ ಅಂತ ಕುರುಡ(ದೃಷ್ಟಿಹೀನ ಇನ್ನೂ ಒಳ್ಳೆಯ ಪದವಾ?) ಧೃತರಾಷ್ಟ್ರ ಅಂದಾಗಲೆಲ್ಲಾ ಸಂಜಯನು ಯಥಾವತ್ತಾಗಿ ರೋಬೋಟಿನ ಥರ ಯುದ್ದದ ಸ್ಥಿತಿಗತಿಗಳನ್ನು ವಿವರಿಸಿದ್ದನಾ? ಅಥವಾ ಒಂದೊಂದು ಪಕ್ಷವನ್ನು ಸಮರ್ಥಿಸುವ ಪತ್ರಿಕೆಯ ಥರ, ಟೀವಿ ಚಾನಲ್ಲಿನ ಥರ ತನ್ನೆಲ್ಲಾ ಪೂರ್ವಾಗ್ರಹಗಳು, ಅನುಮಾನ, ಆತಂಕ, ಅಭೀಪ್ಸೆ, ಸಮಯಸಾಧಕತನಗಳೊಡನೆ ನೋಡಿ ಹೇಳುತ್ತಿದ್ದನಾ? ಧೃತರಾಷ್ಟ್ರನ ಮಕ್ಕಳು ಸಾಯುತ್ತಾ ಬಂದಹಾಗೆಲ್ಲಾ ಹೇಳುವುದು ಎಷ್ಟು ಕಷ್ಟವಾಗಿರಬೇಕು? ಹಾಗೆ ನೋಡಿದರೆ ಮಹಾಭಾರತವನ್ನ ಯಾರ ಕಣ್ಣಿನಿಂದ ನೋಡಬೇಕು? ಹೊರಗಿನವನಾದ ಕೃಷ್ಣನ ಚಾಣಾಕ್ಷತನದಿಂದ? ಕೊನೆಗೂ ತಣಿಯದ ದ್ರೌಪದಿಯ ರೋಷದಿಂದ? ಯಾವಾಗಲೂ ಕಡೆಗಣಿಸಲ್ಪಟ್ಟ ದುರ್ಯೋಧನನ ಅತೃಪ್ತಿಯಿಂದ? ಅಥವಾ ಯಾವುದೋ ಪೂರ್ವ ಜನ್ಮದ ಶಾಪದಂತೆ ಯಾವ ಗಂಡಸಿನ ಪ್ರೀತಿಯನ್ನೂ ಅವಳದನ್ನಾಗಿಸಿಕೊಳ್ಳಾಗದ ಅತೃಪ್ತೆ ಕುಂತಿಯ ಕಣ್ಣಿನಿಂದಲೋ? ಇಲ್ಲಾ ನಲ್ಲಪಿಳ್ಳೈ? ರನ್ನ? ಪಂಪ? ಕುಮಾರವ್ಯಾಸ? ಯಾರಿಗಾದರೂ ನನಗೂ ಅದಕ್ಕೂ ಸಂಬಂಧವಿಲ್ಲ ಹಾಗೆ ಸುಮ್ಮನೆ ನೋಡ್ತಿದಿನಿ ಅಂತ ನೋಡೋದಕ್ಕೆ ಸಾಧ್ಯವಾ? ಯಾರಿಗೆ ಹಾಗೆ ಎಲ್ಲವನ್ನೂ ನಿರ್ವಿಕಾರವಾಗಿ ಯಾರ ಪಕ್ಷವನ್ನೂ ವಹಿಸದೆ, ಬಿಟ್ಟುಕೊಡದೆ, ವೈಭವೀಕರಿಸದೆ, ಹೀಗಳೆಯದೆ ಸುಮ್ಮನೆ ನೋಡಲು ಸಾಧ್ಯವಿದೆ?


ಹಿಂಗೆಲ್ಲಾ ಕೇಳಿಕೊಂಡಮೇಲೆ ಹಾಗೆ ನೋಡಬೇಕಾದದ್ದಾದರೂ ಏನಕ್ಕೆ ಪ್ರಶ್ನೆ ಮುಡುತ್ತೆ. ಅನುಮಾನವಾಗುತ್ತಿದೆ, ನಾನೇ ಎಲ್ಲವನ್ನೂ ನೋಡಬೇಕು ಅನ್ನಿಸುತ್ತಿದೆ.ಇಷ್ಟು ವರ್ಶವೂ ಬೇರೆಯವರ ಕಣ್ಣುಗಳಿಂದ ಲೋಕವನ್ನು ನೋಡುವುದೇ ಅಭ್ಯಾಸವಾಗಿಹೋಗಿದೆ. ಅಪ್ಪ ಅಮ್ಮ ಟೀಚರಿನಿಂದ ಮೊದಲುಗೊಂಡು ಪ್ರತಿಯೊಬ್ಬರೂ ಕಣ್ಣು ತೆರೆಯಲು ಬಿಡಲೇ ಇಲ್ಲ. ಮದುವೆಯಾದಮೇಲಂತೂ ಆ ಲೋಕವೆ ಬೇರೆ. ಅವನ ಕಣ್ಗಳಿಂದ ನೋಡಲು ಖುಶಿಯಾಗುತ್ತಿತ್ತು. ಅವನು ತನ್ನ ಕಣ್ಣುಗಳಿಂದ ತೋರಿಸಿದ್ದನ್ನು ನಾನೇ ನೋಡಿದಂತೆ ನನ್ನ ಸ್ನೇಹಿತೆಯರಿಗೆಲ್ಲಾ ಹೇಳುತ್ತಿದ್ದೆ. ಅವನಾದರೂ ತನ್ನ ಕಣ್ಣುಗಳಿಂದ ನೋಡುತ್ತಾನಾ ಅಥವಾ ಅವನಿಗೂ ಧೃತರಾಷ್ಟ್ರನ ಕುರುಡುಗಣ್ಣು, ಸಂಜಯನ ಸಹಾಯವೋ? ಹಾಗೆ ನೋಡಿದರೆ ಯಾರು ಸಂಜಯ ಯಾರು ಧೃತರಾಷ್ಟ್ರ? ಪ್ರತಿಯೊಬ್ಬ ಧೃತರಾಷ್ಟ್ರನಿಗೂ ಲಕ್ಷಾಂತರ ಸಂಜಯರು. ನಿಜವಾಗಲೂ ಎಲ್ಲದನ್ನೂ ನೋಡುವವರ್ಯಾರು? ನನಗೆ ಹಾಗೆ ಎಲ್ಲದನ್ನೂ ಮೇಲಿನಿಂದ ನೋಡಲು, ನಿರ್ಧರಿಸಲು ಸಾಧ್ಯವಾ? ಬೇರೆಯವರೆಲ್ಲರ ಕಣ್ಣುಗಳಿಂದ ನೋಡಿದುದರಿಂದ ದೃಷ್ಟಿ ಮಂಜಾಗಿದೆ ಕಣ್ಣುಗಳಿಗೆ ಪೊರೆ ಬಂದಿವೆ. ಸತ್ಯ ಯಾವುದು ಸುಳ್ಳ್ಯಾವುದು ತಿಳಿಯುತ್ತಿಲ್ಲ. ಹೋಗಲಿ ನನಗೇನನ್ನಿಸುತ್ತಿದೆ ಎಂದೂ ಗೊತ್ತಾಗುತ್ತಿಲ್ಲ. ಗಾಂಧಾರಿ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಕಳಚಬೇಕು. ಧೃತರಾಷ್ಟ್ರ ಕಾಡಿನಲ್ಲಿ ಧೀರ್ಘ ತಪಸ್ಸು ಮಾಡಿಯಾದರೂ ದೃಷ್ಟಿ ಪಡೆಯಬೇಕು.


ಸ್ವಲ್ಪ ಹೊತ್ತು ಕಣ್ಣುಮುಚ್ಚಿಕೊಂಡು ಕೂತೆ. ಕಣ್ಣುಮುಚ್ಚಿಕೊಂಡಾಗ ಹೇಗೆ ಕಾಣುತ್ತೀನಿ ನೋಡಬೇಕೆನ್ನಿಸಿತು. ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡು ನೋಡಿದೆ. ಫೋಟೋ ಯಾಕೋ ನೀನು ಕಣ್ಣು ಮುಚ್ಚಿಕೊಂಡರೂ ಅಷ್ಟೇ ಕಣ್ಣುಬಿಟ್ಟಿದ್ದರೂ ಅಷ್ಟೆ ಎರೆಡೂ ಒಂದೇ! ಅಣಗಿಸಿದ ಹಾಗಾಯಿತು. ಮಗ ಕಾಲೇಜಿನಿಂದ ಬಂದ, ಬಾಗಿಲು ತೆರೆದೆ ಥೇಟ್ ಸಂಜಯನಂತೆ ಕಂಡ. ಅತ್ತೆಯ ಕಣ್ಣಲ್ಲಿ ಸಂಜಯನ ನೆರಳು. ಆಫೀಸಿನಿಂದ ಬರುತ್ತಲೇ ಇವರು ಅಂದಿದ್ದೇನು ‘ಸೇನಯೋರುಭಯೋರ್ ಮಧ್ಯೇ ರಥಂ ಸ್ಥಾಪಯಮೇಚ್ಚ್ಯುತಾ’ ಅಂತಲಾ?

{ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು :-)}