ತೊಂಬತ್ತು ವರ್ಷವಾದಮೇಲೂ ಬರೆಯುವ ಆಸಕ್ತಿ ಇರಲು ಸಾಧ್ಯವೇ? ಜಗತ್ತಿನ ದೊಡ್ಡ ದೊಡ್ಡ ಲೇಖಕರೆಲ್ಲಾ ಸಾಯುವವರೆಗೂ ಬರೆಯುತ್ತಿದ್ದರೇ? ಯಾವ ಲೇಖಕನ ಹೆಸರೂ ನೆನಪಿಗೆ ಬರುತ್ತಿಲ್ಲ. ತುಂಬ ಲೇಖಕರನ್ನು ಓದಿದ್ದೇನೆ ಅನ್ನುವುದಂತೂ ನಿಜ. ನಾನು ಸಣ್ಣವಯಸ್ಸಿನಲ್ಲಿ ಇಷ್ಟಪಟ್ಟು ಓದುತ್ತಿದ್ದ ಲೇಖಕ ಅದ್ಯಾರದು? ದಕ್ಷಿಣ ಕನ್ನಡದವರು ಏನೋ ಅಡಿಗ? ಯಾವ ಅಡಿಗ ಮರೆತೇ ಹೋಯಿತಲ್ಲ? ಯಾರನ್ನಾದರೂ ಕೇಳಬೇಕು, ಮೊಮ್ಮೊಗು ಅಗಸ್ತ್ಯನೂ ತುಂಬ ಓದುತ್ತಾನೆ. ’ಅರವಿಂದ ಅಡಿಗ ಇರಬೇಕು ಅಜ್ಜಿ’ ಅಂದ, ಆದರೆ ಅವನಿಗೆ ಕನ್ನಡದ ಲೇಖಕರು ಗೊತ್ತಿರುತ್ತಾರ? ಹೆಸರು ಗೊತ್ತಿಲ್ಲದೇ ಇರುತ್ತದೆಯೇ? ಅರವಿಂದ ಅಡಿಗನೇ ಇರಬೇಕು. ನಾನು ಇಷ್ಟಪಟ್ಟು ಓದುತ್ತಿದ್ದ ಲೇಖಕರ ಹೆಸರೇ ಗೊತ್ತಿಲದ ಮೇಲೆ ನಾನ್ಯಾಕೆ ಬರೆಯಬೇಕು ನನಗೇನಾದರೂ ನೆನಪಿರುವುದು ನಿಜವಾ?
ಆದರೆ ಅವತ್ತು ನಡೆದದ್ದನ್ನು, ನನ್ನ ಅನಿಸಿಕೆಗಳನ್ನು ಬರೆಯಲೇಬೇಕು ಅಂದುಕೊಂಡಿದ್ದೆನಲ್ಲಾ.. ಈಗ ಯಾಕೋ ಬರೆದೂ ಏನುಪಯೋಗ ಅನ್ನಿಸುತ್ತಿದೆ. ಸುಮ್ಮನೆ ಶ್ರಮ. ಅಗಸ್ತ್ಯನ ಕಾಲೇಜು ಬ್ಯಾಗಿನಿಂದ ಕಳ್ಳಿಯ ಥರ ಪೆನ್ನು ಪುಸ್ತಕ ಕದ್ದಿಟ್ಟುಕೊಳ್ಳುವ ಅವಶ್ಯಕತೆ ಏನಿತ್ತು? ಆತ್ರೇಯನಿಗೆ ಹೇಳಿದ್ದರೆ ಏನೂ ಕೇಳದೆ ಅವನೇ ’ಅಮ್ಮಾ ನೀನು ಹೇಳ್ತಾ ಹೋಗು ನಾನು ಟೈಪ್ ಮಾಡ್ತಿನಿ’ ಅನ್ನುತ್ತಿದ್ದ. ಇಲ್ಲ ಪುಸ್ತಕದಲ್ಲಿ ನಾನೇ ಬರೀತಿನಿ ಅಂತ ಹಟ ಮಾಡಿದ್ದರೂ ಚಂದದ ಪುಸ್ತಕ ಪೆನ್ನು ತಂದುಕೊಡುತ್ತಿದ್ದ. ಆದರೆ ಯಾವಾಗಲಾದರೂ ಏನು ಬರ್ದಿದಿಯ ತೋರ್ಸು ಅಂತ ಕೇಳಿಯೋ ಅಥವ ಅವನ್ಯಾವಾಗಲಾದರೂ ಬಂದು, ನಾನು ಬರೆದಿದ್ದೆಲ್ಲವನ್ನೂ ಓದಿ..... ಅವನಿಂದ ಮುಚ್ಚಿಡುವಂಥದ್ದೇನು ಬರೆಯುತ್ತಿಲ್ಲ. ಅವನಿಂದ ಏನೂ ಮುಚ್ಚಿಡಬೇಕಿಲ್ಲ,
ಹನ್ನೆರೆಡು ವರ್ಷದ ಆತ್ರೇಯನಿಗೆ ನಾನು ಅವನ ಅಪ್ಪ ಜಗಳವಾಡುತ್ತಿದ್ದುದು, ಅದರ ಕಾರಣ ಎಲ್ಲಾ ಗೊತ್ತಾಗುತ್ತಿತ್ತು. ಅವನಿಗೆ ಎಲ್ಲಾ ಗೊತ್ತಾಗುತ್ತಿದೆ ಅನ್ನುವುದು ನನಗೂ ತಿಳಿದಿತ್ತು. ಆದರೆ ಏನೂ ಮಾಡಲಾಗದೆ ನಿಸ್ಸಹಾಯಕಳಾಗಿದ್ದೆ. ಅವನಿಗೆ ಎಲ್ಲಾ ತಿಳಿದಿದ್ದರೂ ನಾನು ಬರೆದಿದ್ದನ್ನು ಯಾಕೋ ಸಧ್ಯಕ್ಕೆ ಯಾರೂ ಓದೋದು ಬೇಡಾ ಅನ್ನಿಸುತ್ತಿದೆ. ನನಗೆ ಸಾಕು ಅನ್ನಿಸುವಷ್ಟು ಬರೆದಮೇಲೆ.. ಯಾವುದೋ ಒಂದು ಮಾಲಿನಲ್ಲೋ, ಸಿನಿಮಾ ಥಿಯೇಟರಿನಲ್ಲೋ, ಪಾರ್ಕಿನ ಬೆಂಚಿನಮೇಲೋ ಇಟ್ಟು ಬರಬೇಕು. ಅಲ್ಲಿ ಇನ್ಯಾವುದೋ ಓದುಗನಿಗೆ ಸಿಗಬೇಕು. ಅನಾಮಧೇಯಳಾಗಿ ಬರೆಯಬೇಕು. ಹೆಸರಿನ, ಕಾವ್ಯನಾಮದ, ಇನ್ಯಾವುದೋ ವ್ಯಕ್ತಿತ್ವದ, ಹಂಗಿಲ್ಲದೆ.
ಓದುಗ, ನಿನಗೆ ಇಷ್ಟವಾಗುತ್ತೋ ಇಲ್ಲವೋ ಅಂತ ಯೋಚಿಸದೆಯೂ ಬರೆಯಬೇಕು. ನೀನು ಕಾಫಿ ಕುಡಿಯಲು ಕಾಫಿ ಅಂಗಡಿಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ, ಇಡೀ ಅಂಗಡಿ ಖಾಲಿಯಾಗಿತ್ತು. ನೀನು ಬಂದು ಕೂತ ಚೇರಿನ ಪಕ್ಕದ, ಅಗಲದ, ಕಲ್ಲಿನ ಬಣ್ಣದ ಇನ್ನೊಂದು ಖುರ್ಚಿಯ ಮೇಲಿದ್ದ ಪುಸ್ತಕವನ್ನು ಸುಮ್ಮನೆ ಕುತೂಹಲದಿಂದ ಎತ್ತಿಕೊಂಡು ಓದಲು ಶುರುಮಾಡಿದ್ದೀಯ ಅಂತ ಕಲ್ಪಿಸಿಕೊಂಡು ನಾನು ಹೇಳಬೇಕಾದ್ದನ್ನ ಬರೆಯುತ್ತಾ ಹೋಗುತ್ತಿದ್ದೇನೆ. ಬರೆದದ್ದನ್ನು ಯಾರೂ ಓದೋಲ್ಲ ಅಂತ ಅನ್ನಿಸಲು ಶುರುವಾದರೆ ಬರೆಯಲು ಆಸಕ್ತಿಯೇ ಇರುವುದಿಲ್ಲ. ಇನ್ಯಾರೋ ಓದುತ್ತಾರೆ ಎಂದು ಗೊತ್ತಾದ ತಕ್ಷಣ ನಮ್ಮ ಸುಪ್ತ ಮನಸ್ಸು ನಮ್ಮನ್ನ ಒಳ್ಳೆಯವರನ್ನಾಗಿ ಬಿಂಬಿಸುತ್ತಾ ಹೋಗುತ್ತೆ, ನಮ್ಮ ತಪ್ಪುಗಳನ್ನು ನಮ್ಮ ಕೆಟ್ಟ ಗುಣಗಳನ್ನು ಹೇಳಿಕೊಂಡರೂ ಅದರಲ್ಲಿ ಸಹಾನುಭೂತಿಯ ಅಪೇಕ್ಷೆ ಇರುತ್ತದೇ ವಿನಹ ಮತ್ತೇನು ಅಲ್ಲ. ಅದಕ್ಕೇ ನಾನ್ಯಾವತ್ತೂ ಡೈರಿಯನ್ನೇ ಬರೆಯಲಿಲ್ಲ ಘಟನೆಗಳನ್ನು ಎಷ್ಟೇ ನಿಷ್ಟೆಯಿಂದ ಬರೀ ಸತ್ಯವನ್ನೇ ಬರೆಯುತ್ತೇನೆ ಅಂತ ಬರೆಯಲು ಕೂತರೂ ಪುಸ್ತಕದಲ್ಲಿ ಚಿತ್ರಿತವಾಗುವ ನಮ್ಮನ್ನು, ವಾಸ್ತವಕ್ಕಿಂತಾ ಒಳ್ಳೆಯವರನ್ನಾಗಿ ಮಾಡಿಕೊಳ್ಳುತ್ತಾ ಹೋಗುತ್ತೇವೆ, ನಮಗೇ ನಾವು ಮೋಸ ಮಾಡಿಕೊಳ್ಳುವ ಹಲವು ಬಗೆಗಳಲ್ಲಿ ಡೈರಿ ಬರೆಯುವುದೂ ಒಂದು. ನನ್ನ ಪ್ರಕಾರ ಮನಸ್ಸಿಗೆ ಗೊತ್ತಿರುವ ಚರಮ ಸತ್ಯವನ್ನ ಬರೆದಾಗಲೀ ಹೇಳಿಯಾಗಲೀ ಖಾಲಿಮಾಡಿಕೊಳ್ಳಲು ಸಾಧ್ಯವಿಲ್ಲ. ಮನಸ್ಸಿಗೆ ಮಾತ್ರ ನಮ್ಮತನ ಗೊತ್ತಿರುತ್ತೆ. ಅದು ಇನ್ಯಾವ ರೀತಿಯಲ್ಲೂ ಪ್ರಕಟಗೊಳ್ಳಲು ಸಾಧ್ಯವಿಲ್ಲ. ಇದೆಲ್ಲಾ ಮುಗಿಯದ ಚರ್ಚೆಗಳು. ಹೋಗಲಿ, ಕಾಫಿ ಕುಡಿಯುತ್ತಾ ಆರಾಮಾಗಿ ಓದು, ಸಕ್ಕರೆ ಜಾಸ್ತಿ ಹಾಕಿಕೊಂಡು ಕುಡಿಯುತ್ತಿಲ್ಲ ತಾನೆ? ಸಕ್ಕರೆ ಕಾಫಿಯ ರುಚಿಯನ್ನು ಕೆಡಿಸಿಬಿಡುತ್ತೆ. ನಿನ್ನ ಗೆಳೆಯನೋ ಗೆಳತಿಯೋ ಬಂದರೆ ಮುಚ್ಚಿಟ್ಟುಬಿಡು. ನಿನಗೊಬ್ಬನಿಗೇ ಕಥೆ ಹೇಳುವುದು ನಾನು.
ಆವತ್ತಿನ ದಿನದ ಬಗ್ಗೆ ಹೇಳಬೇಕು. ಅದರೆ ನನಗೆ ತುಂಬಾ ಮರೆವು ನಾನು ಹೇಳಿದ್ದನ್ನೆಲ್ಲಾ ನಿಜ ಅಂತ ನಂಬಬೇಡ, ಆದರೆ ನನಗೆ ಸುಳ್ಳು ಹೇಳಿ ದೊಡ್ಡವಳಾಗುವ ಯಾವ ಅವಶ್ಯಕತೆಯೂ ಇಲ್ಲ ಅನ್ನುವುದೂ ನೆನಪಿರಲಿ. ಅಜ್ಜಿಗೆ ಅಲ್‌ಜೈಮರ್ ಶುರುವಾಗಿರಬಹುದಾ ಅಂತ ಮೊಮ್ಮಗ ಅವರಮ್ಮನ ಹತ್ತಿರ ಹೇಳುತ್ತಿದ್ದ. ಇರಬಹುದು. ಆದರೆ ಇಷ್ಟು ಓದಿದಮೇಲೆ ಸುಳ್ಳು ಹೇಳುತ್ತೀನೋ, ನಿಜ ಹೇಳುತ್ತೀನೋ, ಕಲ್ಪಿಸಿಕೊಂಡು ಹೇಳುತ್ತೀನೋ, ಏನೇ ಆದರೂ ಇನ್ನು ಮುಂದೆಯೂ ಓದಿಯೇ ಓದುತ್ತಿಯ ಅನ್ನೋ ನಂಬಿಕೆ ಇದೆ.
ಅಂದು ನಡೆದದ್ದನ್ನ ಹೇಳುತ್ತೇನೆ. ನನಗೆ ಹೆಚ್ಚು ಕಮ್ಮಿ ಮೂವತ್ತೇಳು ವರ್ಷ. ಸುಮ್ಮನೆ ತೋಟದ ಮನೆಯ ಹೊರಗೆ ಜೋಕಾಲಿ ಮೇಲೆ ಕೂತು ಕವಿತೆಯೊಂದನ್ನ ತಿದ್ದುತ್ತಾ ಕೂತಿದ್ದೆ. ಅಷ್ಟೊತ್ತಿಗೆ ನನ್ನ ಏಳು ಕವನ ಸಂಕಲನಗಳು ಪ್ರಕಟವಾಗಿ(ಒಂಬತ್ತಿರಬಹುದು. ಎಷ್ಟಾದರೆ ಏನು?) ಎರಡಕ್ಕೆ ಎಂಥದೋ ಪ್ರಶಸ್ತಿ ಬಂದಿತ್ತು. ಅವನು ಭಾನುವಾರದ ಎಂದಿನ ಅಭ್ಯಾಸದಂತೆ ನಿಧಾನಕ್ಕೆ ಎದ್ದು ಬಂದ, ಅವನ ತುಟಿಗಳು ಯಾವಾಗಲೂ ಒದ್ದೆಯಾಗಿರುತ್ತದಲ್ಲಾ ಎನ್ನುವ ಗೊತ್ತಿರುವ ಸಂಗತಿಯನ್ನೇ ಮತ್ತೆ ಪ್ರೀತಿಯಿಂದ ನೋಡಿದೆ. ಮತ್ತೆ ಏನೋ ಬರೀತಿದಿಯಾ ಅನ್ಸುತ್ತೆ ಅನ್ನುತ್ತಾ ಪಕ್ಕದಲ್ಲಿ ಕೂತು ಜೋಕಾಲಿ ಜೀಕಿದ. ಅವನು ಪಕ್ಕದಲ್ಲಿ ಕೂತರೂ ಮನಸ್ಸು ಅವನ ತುಟಿಯನ್ನೇ ನೋಡುತ್ತಿತ್ತು.
ಅಷ್ಟು ಇಷ್ಟವಾಗುವ ಅವನು ಒಮ್ಮೊಮ್ಮೆ ಇದ್ದಕ್ಕಿದ್ದಂತೆ ತಕ್ಷಣಕ್ಕೆ ಬದಲಾಗಿದ್ದಾನೆ, ಇವನು ನನ್ನವನಲ್ಲವೇ ಅಲ್ಲ ಇನ್ಯಾರೋ ಅನ್ನಿಸುತ್ತಿತ್ತು. ಆಕ್ಷಣಕ್ಕೆ ಈ ಅಪರಿಚಿತನ ಜೊತೆ ಏನು ಮಾಡುತ್ತಿದ್ದೇನೆ ಎಂದು ಥಟ್ಟನೆ ಪ್ರಶ್ನೆ ಮೂಡಿ, ನಿಧಾನಕ್ಕೆ ನನ್ನ ಸುತ್ತಮುತ್ತಲಿನ ಪರಿಸರ, ತೆಂಗಿನ ಮರಗಳು, ಮನೆಯ ಹಿಂದಿನ ಮೀನಿನ ಕೊಳ, ಒಂಟಿ ಹುಳಿಮಾವಿನ ಮರ, ಹಸುಗಳು ನೀರು ಕುಡಿಯುವ ಟ್ಯಾಂಕು, ಕೊಬ್ಬರಿ ಒಣಗಿಸಿದ್ದ ಅಟ್ಟ, ದೂರದ ಗದ್ದೆಗಳು, ಅಲ್ಲಿನ ಟ್ರಾಕ್ಟರಿನ ಸದ್ದು ಎಲ್ಲವೂ ನಿಧಾನಕ್ಕೆ ಕರಗುತ್ತಿದೆ ಅನ್ನಿಸಿ ನಾನೊಬ್ಬಳೇ ಅನ್ನಿಸಿಬಿಡುತ್ತಿತ್ತು. ಅವನು ಮಾತಾಡುತ್ತಿರುವುದೆಲ್ಲಾ ನಿಜ ಎಲ್ಲರೂ ಸತ್ಯವಂತರು ಅಂತ ತಿಳಿದಿದ್ದರೂ ತಣ್ಣನೆಯ ಸುಳ್ಳಿನ ಕುಳಿರ್ಗಾಳಿ ನನ್ನ ತಾಕಿ ಚಕಿತಗೊಳಿಸುತ್ತಿತ್ತು.
ಹೀಗೆ ಒಬ್ಬಂಟಿ ಅನ್ನಿಸಿ ಚಕಿತಗೊಂಡು ಕೂತಾಗಲೆಲ್ಲಾ ಅವನೊಡನೆ ಮಾತು ಶುರು ಮಾಡುವುದು ಕಷ್ಟವಾಗುತ್ತಿತ್ತು. ಅವನೂ ಕೂಡಾ ಏನೂ ಸಂಭಂಧವೇ ಇಲ್ಲದಂತೆ ಕಾರ್ ಸ್ಟಾರ್ಟ್ ಮಾಡಿ ತೋಟದ ಮಧ್ಯೆ ಹೋಗಿಬಿಡುತ್ತಿದ್ದ. ಆದರೆ ಅಂದು ಅವನು ಮಾತಾಡುವವನಂತೆ ಪಕ್ಕ ಬಂದು ಕೂತ ಬಲ ಭುಜದಮೇಲೆ ಹಿತವಾಗಿ ಒರಗಿಕೊಂಡ ಮಾತಾಡದಿದ್ದರೂ ಆ ಉಸಿರಾಟದ ಏರಿಳಿತ ಅವನನ್ನು ಪರಿಚಿತನನ್ನಾಗಿಸುತ್ತಿತ್ತು. ಎಲ್ಲವೂ ನಿಧಾನಕ್ಕೆ ಗೋಚರಿಸತೊಡಗಿತ್ತು ಕಣ್ಮುಚ್ಚಿ ಅವನ ಸ್ಪರ್ಶಕ್ಕೆ ಕಾದು ಕೂತೆ. ಆದರೆ ಅವನು ಹಾಗೆ ಅಂದಿದ್ದಾದರೂ ಏತಕ್ಕೆ. ನಿನ್ನ ಕವಿತೆಗಳಲ್ಲಿ ನನ್ನ ಬಗ್ಗೆ ಬರಿಯಬೇಡ ಅಂದನಲ್ಲ ಹಾಗಂದರೆ ಅದರ ಅರ್ಥವಾದರೂ ಏನು? ನಿನ್ನ ಬಗ್ಗೆ ಬೇಕಾದರೆ ಬರೆದುಕೋ ಅಂದನಲ್ಲಾ,
ಇಷ್ಟು ವರ್ಷಗಳಲ್ಲಿ ನನ್ನನ್ನು ಅವನು ತನ್ನ ನೆರಳಾಗಿಸಿಕೊಂಡಿದ್ದಾನೆ ಅನ್ನುವುದೂ ಅವನಿಗೆ ತಿಳಿದಿಲ್ಲವೇ? ಪ್ರೀತಿ ಕಾಯ್ದುಕೊಳ್ಳೋದಕ್ಕೆ, ಅವನ ಜೊತೆ ಸಂಭ್ರಮದಿಂದ ಬದುಕುವುದಕ್ಕೆ, ಖುಷಿ ಹಂಚಿಕೊಳ್ಳುವುದಕ್ಕೆ, ದುಖಃದಲ್ಲಿ ಜೊತೆಯಾಗಿರುವುದಕ್ಕೆ, ನಾನು ನನ್ನನ್ನೇ ಇಷ್ಟಿಷ್ಟೇ ಇಷ್ಟಿಷ್ಟೇ ಕಳೆದುಕೊಳ್ಳುತ್ತಾ, ನಿಧಾನವಾಗಿ ಅವನಾಗಿದ್ದು, ನನ್ನ ಇಷ್ಟ ಆಸಕ್ತಿಗಳೆಲ್ಲಾ ಕಳೆದು ಕಲಸಿಹೋಗಿ, ನನ್ನ ಈಗಿನ ಆಸಕ್ತಿಗಳು ನನ್ನವೋ ಅವನವೋ ಎಂದು ತಿಳಿಯದಷ್ಟು ಒಂದಾಗಿರುವುದು, ಮೊದಲು ತುಂಬಾ ಗಮನವಿಟ್ಟು ಅವನಿಗೆ ಬೇಜಾರಾಗದಂತೆ ನಡೆದುಕೊಳ್ಳುತ್ತಿದ್ದುದು ಈಗ ಹಾಗಿರುವುದೇ ನನ್ನ ರೀತಿಯಾಗಿರುವುದು ಇವೆಲ್ಲವೂ ಅವನಿಗೆ ಗೊತ್ತೇ ಇಲ್ಲವೇ? ನನ್ನ ಬಗ್ಗೆ ಬರೆದರೂ ಅವನನ್ನು ನನ್ನಿಂದ ಹೊರಗಿಡುವುದು ಹೇಗೆ?
ಮನೆಯ ಮುಂದಿನ ಮಲ್ಲಿಗೆ ಬಳ್ಳಿಯ ಬಗ್ಗೆ ಬರೆದರೆ, ಆ ಹೂವು ಅವನಿಗಿಷ್ಟ ಅದಕ್ಕೆ ಅದು ಅಲ್ಲಿದೆ ಅನ್ನೋದನ್ನ ಮರೆತು ಬರೆಯಲು ಹೇಗೆ ಸಾಧ್ಯ? ಈಗ ನನಗೆ ಸೇವಂತಿಗೆಗಿಂತ ಮಲ್ಲಿಗೆಯೇ ಇಷ್ಟವಾಗಲು ಅವನು ಕಾರಣ ತಾನೆ?
* * *
ನೆನ್ನೆ ನಾನು ಬರೆಯಲು ಕೂತಾಗ ಏನು ಹೇಳುತ್ತಿದ್ದೆ ಅನ್ನೋದು ಮರೆತು ಹೋಗಿದೆ. ಈಗ ಮತ್ತೆ ಓದಿಕೊಂಡರೆ ಎಡವಟ್ಟಾಗಿ ಏನೇನೋ ಬರೆದಿದ್ದೀನಲ್ಲಾ ಹರಿದುಹಾಕೋಣ ಅನ್ನಿಸಿತು. ಆದರೂ ಇರಲಿ. ಅನಾಮಧೇಯ ಲೇಖಕಿ ಏನು ಬರೆದರೂ ಒಂದಕ್ಕೊಂದು ಸಂಭಂಧವಿಲ್ಲದಿದ್ದರೂ ನೀನು ಅಜ್ನಾತ ಓದುಗ ಬೇಕಾದರೆ ಓದುತ್ತೀಯ ಇಲ್ಲವಾದರೆ ಅಲ್ಲೇ ಪುಸ್ತಕಬಿಟ್ಟು ಹೋಗುತ್ತೀಯ. ಅದಕ್ಕೇ ಹರಿದು ಹಾಕದೆ ಬರೆಯುತ್ತಾ ಹೋಗುತ್ತೇನೆ.
ಇವತ್ತು ಮಧ್ಯಾಹ್ನ ನಾನು ನಿದ್ದೆಯಲ್ಲಿದ್ದಾಗ ಪೇಪರಿನವರು ಯಾರೋ ಸಂದರ್ಶನ ಮಾಡಲು ಬಂದಿದ್ದರಂತೆ. ಮೊಮ್ಮಗ ಬುದ್ದಿವಂತ. ಪ್ರಶ್ನೆಗಳನ್ನ ಬಿಟ್ಟು ಹೋಗಿ ಎದ್ದಮೇಲೆ ತ್ರಾಣವಿದ್ದರೆ ಉತ್ತರ ಬರೆದುಕೊಡುತ್ತಾರೆ ನಾನೇ ಟೈಪ್ ಮಾಡಿ ಮೈಲ್ ಮಾಡುತ್ತೇನೆ ಅಂದಿದ್ದಾನೆ. ಈ ಪತ್ರಕರ್ತರು ಎಷ್ಟೋ ವರ್ಷಗಳಿಂದ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳುತ್ತಾರೆ. ದಡ್ಡರಲ್ಲ ಅವರು ಅದೇ ಪ್ರಶ್ನೆಗಳಿಗೆ ಬೇರೆ ಬೇರೆ ಉತ್ತರ ಬೇಕು ಅವರಿಗೆ. ಐದು ವರ್ಷ ಹಿಂದೆ ಹೇಳಿದ ಉತ್ತರಕ್ಕೂ ಈಗಿನ ಉತ್ತರಕ್ಕೂ ಸಾಮ್ಯತೆ ಇಲ್ಲದಿದ್ದರೆ ಅವರಿಗೆ ಖುಷಿ. ಲೇಖಕಿಯ ಅಭಿಪ್ರಾಯದಲ್ಲೇ ಭೇದ ಇದೆ ಎಂದು ಸುದ್ದಿಮಾಡಬಹುದಲ್ಲಾ. ’ಅವರಿಗೆ ಹುಶಾರಿಲ್ಲ ಮುಂದೆ ಯಾವತ್ತಾದರೂ ಉತ್ತರಿಸಬಹುದು’ ಅಂತ ಮೈಲ್ ಮಾಡು ಎಂದೆ. ಪ್ರಶ್ನೆಗಳು ಇಲ್ಲೇ ಇವೆ. ಬೋರು ಹೊಡೆಸಿದರೂ ಓದಿಕೋ..
ಕವಯಿತ್ರಿಯಾಗಿ ನಿಮ್ಮ ಸ್ಥಾನಮಾನ ಏನು?
ಮಹಿಳಾ ಲೇಖಕರಿಗಿಂತ ಪುರುಷ ಲೇಖಕರಿಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತಿದೆ ಅನ್ನಿಸೋಲ್ಲವಾ?
ನಿಮ್ಮ ಗಂಡ ನಿಮಗೆ ಸಪೋರ್ಟಿವ್ ಆಗಿದ್ದರಾ? ಅವರ ಸಾವಿನ ನಂತರವೂ ಅವರ ಜೊತೆ ಬಾಳುವೆ ನಡೆಸಿದಂತೆ ಬರೆದಿರಲ್ಲಾ.. ಅವರಿಲ್ಲದ ಜೀವನ ಕಷ್ಟವಾಗಿತ್ತಾ?
ನೀವು ಬರೆದ ಕಥೆಗಳಲ್ಲೆಲ್ಲಾ ’ಆಟೋಬಯಾಗ್ರಫಿಕಲ್ ಎಲಿಮೆಂಟ್’ ಇದೆ ಎನ್ನುತ್ತಾರಲ್ಲ ನೀವೇನು ಹೇಳುತ್ತೀರಿ?
ಕಥೆ ಕವಿತೆ ಕಾದಂಬರಿ ಕಾಲಮ್ಮುಗಳನ್ನು ಬರೆದಿದ್ದೀರಿ. ಎಲ್ಲವೂ ವಿಬಿನ್ನವಾಗಿರುತ್ತೆ. ಬೇರೆ ಬೇರೆ ಸಾಹಿತ್ಯಿಕ ಪ್ರಕಾರಗಳನ್ನು ಬರೆಯುವಾಗ ಬೇರೆ ಬೇರೆ ಮನಸ್ಥಿತಿಯಲ್ಲಿರುತ್ತೀರ?
ಈಗಿನ ಕಾಲದ ಲೇಖಕಿಯರು ಬೀಡೂಬಿಡುಸಾಗಿ ತಮ್ಮ ಲೈಂಗಿಕ ಜೀವನದ ಬಗ್ಗೆ ಬರೆದುಕೊಳ್ಳುತ್ತಾರೆ ಅದರ ಬಗ್ಗೆ ಜನರು ತಕರಾರೆತ್ತುವುದಿಲ್ಲಾ, ನೀವು ಬರೆದಾಗ ಬಹಳ ವಿರೋಧವಿತ್ತಲ್ಲ ಹೇಗನ್ನಿಸುತ್ತೆ?
ನೀವು ಕನ್ನಡದವರಾಗಿ ಕನ್ನಡದಲ್ಲಿ ಏನೂ ಬರಿಯದೆ ಬರೀ ಆಂಗ್ಲ ಭಾಶೆಯಲ್ಲಿ ಬರೆಯಲು ಕಾರಣವೇನು?
* * *
ಇಲ್ಲಿರುವ ಕೆಲವು ಪ್ರಶ್ನೆಗಳಿಗಾದರೂ ನಿಜವಾದ ಉತ್ತರಗಳನ್ನು ನನಗೇನನ್ನಿಸುತ್ತೋ ಅದನ್ನೇ ಹೇಳುತ್ತಾ ಹೋಗುತ್ತೇನೆ ನಾನು. ಪೇಪರಿನವರಿಗೆ ಕೊಡುವ ಸಿದ್ಧ ಉತ್ತರಗಳಲ್ಲ. ಯಾವ ಲೇಖಕನೂ ಪೂರ್ಣ ಪ್ರಮಾಣದಲ್ಲಿ ತನಗನ್ನಿಸುವುದನ್ನ ಹಾಗೇ ನೇರವಾಗಿ ಹೇಳುವುದಿಲ್ಲ. ಹಾಗೆ ಪ್ರಕಟಗೊಳ್ಳುವುದಕ್ಕೆ ಸಾವಿರ ಅಡೆತಡೆಗಳಿರುತ್ತವೆ. ಸಮಾಜದ ಅಂಜಿಕೆ ಇರುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ಲೇಖಕನ ಹತ್ತಿರದವರು ತಮಗೆ ಗೊತ್ತಿಲ್ಲದಂತೆಯೇ ಅವನ ಮೇಲೆ ಪ್ರಭಾವ ಬೀರುತ್ತಿರುತ್ತಾರೆ. ಲೇಖಕನ ನಿಜವಾದ ಬರಹ ಎಲ್ಲೋ ಆಳದಲ್ಲೇ ಉಳಿದುಕೊಂಡು, ಸೋಸಿದ ಸಮಾಜ ಸರಿ ಅನ್ನುವ, ಹಿತವೆನ್ನಿಸುವ ಬರಹಗಳು ಹೊರಗೆ ಬರುತ್ತವೆ. ಈ ಕಷ್ಟಕ್ಕೆ ಲೇಖಕಿಯರು ಸಿಲುಕುವುದು ಹೆಚ್ಚು. ಇದರಿಂದ ಹೊರಬರುವುದೋ ಒಳಗೇ ಉಳಿಯುವುದೋ ಅವರವರಿಗೇ ಬಿಟ್ಟಿರುತ್ತೆ. ನಾನು ಹೊರಬರಲು ಪ್ರಯತ್ನಿಸಿದೆ.
ಸುಮ್ಮನೆ ಬರೆಯುತ್ತಾ ಹೋಗುತ್ತಿದ್ದೆ ನಾನು. ಹಾಗೆ ಸುಮ್ಮನೆ ಬರೆಯುವ ಸ್ವಾತಂತ್ರ ಹುಡುಗಿಯರಿಗಿರುವುದಿಲ್ಲ. ಹಿಂದೆ ಇದೇ ಪ್ರಶ್ನೆಗೆ ಉತ್ತರಿಸುತ್ತಾ ಸಮಾನತೆಯ ಮಾತಾಡಿದ್ದೆ. ಮಹಿಳಾವಾದ ನಗು ತರಿಸುತ್ತಿದ್ದರೂ ಮಹಿಳಾವಾದದ ರೂವಾರಿಯಂತೆ ಆಡಿದ್ದೆ. ನಿಜಕ್ಕೂ ನನಗೆ ಮಹಿಳಾವಾದ ಅಷ್ಟೊಂದು ಪ್ರಭಾವ ಬೀರಿರಲಿಲ್ಲ. ಪ್ರೀತಿ ಕಾಳಜಿಯಿಂದ ನೋಡಿಕೊಂಡ, ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದ ಅಪ್ಪನ ಜೊತೆ ಬೆಳೆದ ನನಗೆ ಯಾವ ವಾದದಲ್ಲೂ ನಂಬಿಕೆ ಇಲ್ಲ. ’ಗಂಡಸು ಹೆಂಗಸು’ ’ಬುದ್ದಿವಂತ ದಡ್ಡ’ ’ಮೇಲು ಜಾತಿ ಕೀಳು ಜಾತಿ’ ’ಪಾಶ್ಚಾತ್ಯ ಪೌರ್ವಾತ್ಯ’ ಅಂತ ವಿಂಗಡಿಸೋಕ್ಕಿಂತ ತರ್ಕದಿಂದ ಯೋಚಿಸಿ ನಡೆಯುವವ ಮತ್ತು ವಿಚಾರಹೀನ ಜನ ಅಂತ ವಿಭಜಿಸುವುದು ಒಳ್ಳೆಯದು. ಜಗತ್ತಿನಲ್ಲಿ ಎರಡೇ ರೀತಿಯ ಜನರಿರುತ್ತಾರೆ ಸ್ಥಿತಿಗತಿಗಳನ್ನ ಅರ್ಥ ಮಾಡಿಕೊಂಡು ವ್ಯವಹರಿಸುವ ಜನ ಒಂದು ರೀತಿಯವರಾದರೆ ಇದಕ್ಕೆ ವಿರುದ್ಧವಾದವರು ಇನ್ನೊಂದು ರೀತಿ. ಆದರೆ ಒಂದು ವಿಚಿತ್ರ ಗಮನಿಸಿದ್ದೀಯ ಎಲ್ಲರೂ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದಿಲ್ಲ. ನಮ್ಮೆಲ್ಲರನ್ನ ಸಮಾನವಾಗಿಸುವ ಗುಣ ಏನು ಗೊತ್ತಾ ನಮ್ಮ ನಮ್ಮ ವೈರುಧ್ಯಗಳು. ಪ್ರತಿಯೊಬ್ಬರೂ ಇನ್ನೊಬ್ಬರಿಗಿಂತ ಬೇರೆಯಾಗಿರುತ್ತೇವಲ್ಲ ಅದೇ ನಮ್ಮ ಎಲ್ಲರಲ್ಲಿರುವ ಸಮಾನ ಅಂಶ.
ಆವತ್ತು ಜೋಕಾಲಿಯಲ್ಲಿ ಪಕ್ಕದಲ್ಲಿ ಕೂತು ನನ್ನ ಬಗ್ಗೆ ಬರಿಯಬೇಡ ಅಂದಿದ್ದನಲ್ಲ, ನಾನದನ್ನು ಗಂಭೀರವಾಗಿ ತೆಗೆದುಕೊಂಡೇ ಇರಲಿಲ್ಲ. ನನ್ನ ಬರಹಗಳಲ್ಲಿ, ಸಂದರ್ಶನಗಳಲ್ಲಿ, ಸಹಲೇಖಕರೊಡನೆ ಆಡುವ ಮಾತುಗಳಲ್ಲಿ ನಾನು ಯಾವ ಮುಚ್ಚು ಮರೆ ಇಲ್ಲದೆ, ನನ್ನ ಸ್ನೇಹಿತರ ಬಗ್ಗೆ ಅವನ ಸ್ನೇಹಿತೆಯರ ಬಗ್ಗೆ ಹೇಳಿಕೊಳ್ಳುತ್ತಿದ್ದೆ. ಅವನಿಗೆ ಕಿರಿಕಿರಿಯಾಗುತ್ತಿತ್ತೇನೋ. ಬಹಳ ದಿನಗಳ ಮೇಲೆ ’ಫೋರ್‌ವರ್ಡ್’ ಎನ್ನುವ ಚಂದದ ಕವನವನ್ನ ಬರೆದಿದ್ದೆ. ಹಾಗೆ ಅಪರೂಪಕ್ಕೆ ಚಂದದ ಕವಿತೆ ಹುಟ್ಟಿದಾಗ ಮಾತ್ರ ಅವನಿಗೆ ತೋರಿಸುತ್ತಿದ್ದೆ. ನೋಡುತ್ತಿದ್ದ ಹಾಗೇ ಹರಿದು ಹಾಕಿದ. ಯಾಕೆಂದು ನನಗೆ ಅರ್ಥವೇ ಆಗಲಿಲ್ಲ. ’ನನ್ನ ಬಗ್ಗೆ ಬರೆಯಬೇಡ ಎಂದರೆ ಅರ್ಥವಾಗೋಲ್ಲವ ನಿನಗೆ?’ ಎಂದು ಕೂಗಿದ. ನಾನು ಪದ್ಯದ ಇನ್ನೊಂದು ಪ್ರತಿ ಇಟ್ಟುಕೊಂಡಿರಲಿಲ್ಲ. ಹರಿದ ಚೂರುಗಳನ್ನ ಒಟ್ಟು ಮಾಡತೊಡಗಿದೆ ಆಗಲೇ ನನಗೆ ’ಪೀಸಸ್ ಆಫ್ ಆಂಗರ್’ ಕವಿತೆಯ ಸಾಲುಗಳು ಮೂಡತೊಡಗಿದ್ದವು. ಯಾಕೋ ಈ ಎರಡು ಕವಿತೆಗಳನ್ನು ಮರೆಯಲು ಸಾಧ್ಯವೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ನನ್ನ ಕೋಣೆಯಲ್ಲಿ ಚೂರುಗಳನ್ನು ಹಿಡಿದು ಕೂತವಳಿಗೆ ನಾನು ಹಿಡಿದುಕೊಂಡು ಕೂತಿರುವುದು ಹಾಳೆಯ ಚೂರುಗಳನ್ನೋ ಅಥವಾ ದಾಂಪತ್ಯದ್ದೋ ಎಂದು ಅನುಮಾನವಾಗತೊಡಗಿತ್ತು. ಅವನು ಹೇಳಿದ ಮಾತುಗಳು ಘಣೀರನೆ ಕಿವಿಯಲ್ಲಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಿದ್ದವು. "ಕೆಲವು ರಹಸ್ಯಗಳು ಕೆಲವರ ಮಧ್ಯೆಯೇ ಇರಬೇಕು, ಓದುಗ ಅದನ್ನು ಚಪ್ಪರಿಸಿಕೊಂಡು ಓದುತ್ತಾನೆ. ಅದವನಿಗೆ ಮನೋರಂಜನೆ ಅಷ್ಟೇ.. ನೀನು ಒಳ್ಳೆಯ ಕವಯಿತ್ರಿ, ನಿನ್ನ ಕವಿತೆಗಳಲ್ಲಿ ಸಾಹಿತ್ಯಕ ಗುಣ ಇದೆ ಅಂತ ಜನ ನಿನ್ನ ಓದುತ್ತಿಲ್ಲ ನಿನಗೆ ಭಂಡ ಧೈರ್ಯ, ಏನೂ ಮುಚ್ಚಿಡದೆ ರಂಜಕವಾಗಿ ನಿನ್ನ ಪ್ರೇಮಪ್ರಕರಣಗಳ ಬಗ್ಗೆ ಬರೆದುಕೊಳ್ಳುತ್ತೀಯ ಅಂತ ಓದುತ್ತಾರೆ. ನಾನು ನಿನ್ನ ಪ್ರೇಮ ಪ್ರಕರಣಗಳನ್ನ ಹಾದರ ಅಂತ ಕರೆದು ನನ್ನ ಸ್ನೇಹಿತರ ಬಳಿ ಹೇಳಿದರೆ ನಾನು ಹಳೆಯ ಕಾಲದ ಗೂಸಲು, ನನಗೆ ಅಹಂಕಾರ, ಮೇಲ್ ಚಾವಿನಿಸ್ಟಿಕ್ ಪಿಗ್ ನಾನು. ಅದೇ ನೀನೇ ಬರೆದುಕೊಂಡರೆ ಅದು ಮುಕ್ತತೆ. ನಿನ್ನ ಈ ಮುಕ್ತತೆಯಿಂದ ನಮ್ಮ ಸಂಭಂದ ಎಷ್ಟು ಹಾಳಾಗುತ್ತಿದೆ ಅನ್ನೋದು ಅರ್ಥವಾಗೋಲ್ಲವ? ಮಕ್ಕಳ ಮೇಲೆ ಎಂಥ ಪರಿಣಾಮ ಬೀರುತ್ತೆ ಅನ್ನೋದನ್ನ ಯೋಚಿಸಿದ್ದೀಯ? ನೀನು ಏನಾದರೂ ಮಾಡಿಕೋ ನನ್ನ ಬಗ್ಗೆ, ನನ್ನ ಹಳೆಯ ಸ್ನೇಹಿತೆಯರ ಬಗ್ಗೆ, ನನ್ನ ನಿನ್ನ ಸಂಬಂಧದ ಬಗ್ಗೆ ಏನನ್ನೂ ಬರೆಯಬೇಡ’ ಎಂದು ಹೇಳಿ ನಡದೇ ಬಿಟ್ಟ.
ಇದೇ ಮಾತುಗಳನ್ನು ಆಡಿದ ಅಂತ ಎಣಿಸಬೇಡ. ಈ ಥರದ ಮಾತುಗಳನ್ನ ಆಡಿದ್ದ. ನನಗೆ ಆಗಿದ್ದ ನೋವನ್ನು ನೆನಸಿಕೊಂಡರೆ ಮಾತುಗಳು ಇನ್ನೂ ಕ್ರೂರವಾಗಿದ್ದುವೇನೋ. ಇದಾದ ಮೇಲೆ ನನ್ನ ಸ್ಥಿತಿ ಅಸಹನೀಯವಾಗತೊಡಗಿತ್ತು. ನನ್ನ ಕವಿತೆಗಳಲ್ಲಿ ಸಾಹಿತ್ಯಕ ಗುಣ ಇಲ್ಲವೇ ಎಂದು ಪ್ರಶ್ನಿಸಿಕೊಂಡು ಎಲ್ಲಾ ಕವಿತೆಗಳನ್ನು ಓದತೊಡಗಿದೆ. ಅವನು ಹೇಳಿದಂತೆ ನನ್ನ ಕವಿತೆ ಬೋಲ್ಡ್ ಆಗಿದ್ದರೂ ಅದರಲ್ಲಿ ಪ್ರೀತಿಯ ಹಂಬಲ ಇತ್ತು. ನಾನು ಪ್ರೇಮ ಪ್ರಕರಣಗಳ ಬಗ್ಗೆ ಬರೆದಿದ್ದರೂ ಕಾಮದ ಬಗ್ಗೆ, ದೇಹದ ಹಸಿವಿನ ಬಗ್ಗೆ ಬರೆಯಲಿಲ್ಲ. ಎಲ್ಲಕ್ಕಿಂತಾ ಮುಖ್ಯವಾದದ್ದು ಪ್ರೀತಿ, ಇನ್ಯಾವುದೂ ಅಲ್ಲ ಅನ್ನುವುದು ನನಗೆ ತೀರ ಚಿಕ್ಕ ವಯಸ್ಸಿಗೇ ಹೊಳೆದುಬಿಟ್ಟಿತ್ತು. ಅದೇ ನನ್ನ ಪ್ರತಿಯೊಂದು ಕವಿತೆಯಲ್ಲೂ ಢಾಳಾಗಿ ಕಾಣಿಸುತ್ತಿತ್ತು. ಆದರೂ ಓದುಗರು ನನ್ನ ಪುಸ್ತಕಗಳನ್ನು ಕೊಳ್ಳುವುದು ಮನೋರಂಜನೆಗಾಗಿ, ಚಪ್ಪರಿಸಿಕೊಂಡು ಓದುವುದಕ್ಕೆ ಎನ್ನುವ ಮಾತುಗಳೂ ಸತ್ಯ ಎನ್ನಿಸತೊಡಗಿತು. ಅವನನ್ನು ಒಳಗೊಳ್ಳದೆ, ನನ್ನನ್ನೂ ಬರಹದಲ್ಲಿ ಒಡಮೂಡಿಸದೆ ಬರೆಯಲು ನಿರ್ಧರಿಸಿದೆ.
ಆಶ್ಚರ್ಯ ಏನು ಗೊತ್ತಾ ಓದುಗ? ನಾನು ಬರೆದದ್ದೆಲ್ಲಾ ಸುಳ್ಳು ಅನ್ನಿಸುತ್ತಿತ್ತು. ಏನು ಬರೆದರೂ ಅದರಲ್ಲಿ ಸತ್ವವಿಲ್ಲ ಅನ್ನಿಸುತ್ತಿತ್ತು. ನಾನು ಪ್ರಕಟಗೊಳ್ಳದೇ ಹೋಗುವ ಕ್ಷಣ ನನ್ನದಲ್ಲ, ನನ್ನ ಬರಹಗಳಲ್ಲಿ ನನ್ನ ಅಂತಃಸತ್ವ ಮೂಡದಿದ್ದರೆ ಅದು ನನ್ನ ಬರಹವಾಗಲು ಹೇಗೆ ಸಾಧ್ಯ? ನನ್ನ ಕಥೆ ಅವನ ಕಥೆ ಬೇರೆಯಾಗಬೇಕು ಅಂದ ಅವನು. ಅವನಿಲ್ಲದ ನನಗೆ ನನ್ನ ಪೂರ್ಣ ಅಸ್ತಿತ್ವವೇ ಇರಲಿಲ್ಲ. ನಾನಿಲ್ಲದ ಅವನು ಅವನೊಳಗಿದ್ದ. ಅವನಿಲ್ಲದ ನಾನು ನನ್ನಲ್ಲಿರಲೇ ಇಲ್ಲ. ಇದನ್ನೇ ಅವನಿಗೆ ಹೇಳಲು ಪ್ರಯತ್ನಿಸಿದೆ. ಎರಡರಲ್ಲಿ ಒಂದನ್ನು ಆರಿಸಿಕೋ ಎಂದ. ಉಸಿರು ಬೇಕೋ ರಕ್ತ ಬೇಕೋ ಎಂದು ಕೇಳಿದ ಹಾಗಾಯಿತು. ಎರಡೂ ಬೇಕಿತ್ತು ನನಗೆ, ನಾನು ಜೀವಂತವಾಗಿರಲು. ಆದರೆ ಉಸಿರು ನನ್ನಿಂದ ಬಿಡುಗಡೆ ಪಡೆದುಕೊಂಡು ನನ್ನ ಜೀವಚ್ಚವವನ್ನಾಗಿ ಮಾಡಿತು. ಅವನು ಬೇರೆ ಹೋದ. ಡಿವೋರ್ಸಿಗೆ ಅಪ್ಲೈ ಮಾಡುತ್ತೇನೆ ಅಂದಿದ್ದ. ನನ್ನಲ್ಲಿನ ರಕ್ತ ಇಂಗಿ ಹೋಗಿತ್ತು. ಇನ್ಯಾರ್ಯಾರೋ ಉಸಿರ ಕೊಡಲು ಬಂದರು. ನನ್ನ ನೆನಪುಗಳಿಗೆ ಬೆಂಕಿ ಹಚ್ಚಲು ಯಾರಿಗೂ ಬಿಡಲಿಲ್ಲ. ಅವಡುಗಚ್ಚಿ, ಉಸಿರು ಬಿಗಿಹಿಡಿದು, ದೃಷ್ಟಿ ಕದಲಿಸದೆ ಬದುಕತೊಡಗಿದೆ. ದಿನೇದಿನೇ ಅವನು ನನ್ನಿಂದ ದೂರವಾಗುತ್ತಿರುವುದು ಅರಿವಾಗುತ್ತಿತ್ತು. ಹೆಚ್ಚು ಮಾತುಕತೆಯಿಲ್ಲದೆ ದಿನಗಳು ಸಾಗತೊಡಗಿದ್ದವು, ಹೀಗೆ ನನ್ನಿಂದ ದೂರವಾಗಲು ಹವಣಿಸುತ್ತಿದ್ದವನು ಇದ್ದಕ್ಕಿದ್ದಂತೆ ಅದ್ಯಾಕೋ ಎಲ್ಲರಿಂದಲೂ ದೂರವಾಗಿಬಿಟ್ಟ.
ನನ್ನ ಮುಂದಿನ ಬರಹಗಳಲ್ಲಿ ನನ್ನನ್ನೇ ನಾನು ಹುಡುಕತೊಡಗಿದ್ದೆ. ನನ್ನ ಹುಡುಕಾಟಗಳಲ್ಲೆಲ್ಲಾ ಅವನೇ. ನಾನು ಎಲ್ಲದರಿಂದ ಬಿಡುಗಡೆ ಪಡೆಯಲು ಹೊರಟಂತೆ ಬರೆದೆ. ಬದುಕಲಾರದೆ ಬರೆದೆ. ಅವನಿಗೆ ನಾನು ಋಣ ತೀರಿಸುವವಳಂತೆ, ಇನ್ಯಾವ ಸಂಭಂಧಕ್ಕೂ ಓಗೊಡದೆ ಅವನೊಂದಿಗೆ ಬದುಕುತ್ತಿರುವಂತೆ ಬರೆದೆ. ಇದನ್ನೂ ಕೂಡಾ ನೀನು ನಂಬಬೇಕಿಲ್ಲ ನಾನು ಹೀಗೆ ಬದುಕಿದ್ದಿರಬಹುದು ಅಥವಾ ನಾನು ಕೈಚಾಚಿದ ನನಗೆ ಅದಾಗೇ ದಕ್ಕಿದ ಸಂಭಂದಗಳಲ್ಲಿ ತೀವ್ರವಾಗಿ ಗುಟುಕು ಗುಟುಕಿಗೂ ಅದೇ ಕೊನೆ ಗುಟುಕುವಂತೆ ಬದುಕಿದೆ, ಪ್ರತಿಯೊಬರಲ್ಲೂ ಅವನನ್ನೇ ಹುಡುಕಿರಬಹುದು. ನನಗೆ ನೆನಪಿಲ್ಲ. ಈಗ ಹಿಂತಿರುಗಿ ನೋಡಿದರೆ ಇದೆರೆಡರಲ್ಲಿ ಯಾವುದು ಘಟಿಸಿದ್ದರೂ ಈಗಿನ ನನ್ನ ಬದುಕಿಗೆ ಹೆಚ್ಚಿನ ವೆತ್ಯಾಸವನ್ನೇನೂ ಸೃಷ್ಟಿಸಿಲ್ಲ ಅನ್ನಿಸಿ ಆಶ್ಚರ್ಯವಾಗುತ್ತಿದೆ. ಈ ಇಳೀ ವಯಸ್ಸಿನಲ್ಲಿ ಭುಧ್ಧನ ತತ್ವಗಳು ನನ್ನ ಆಕರ್ಶಿಸುತ್ತಿವೆ. ನನ್ನ ರಾಮನಿಗೆ ಬುದ್ಧನೆಂದು ನಾಮಕರಣ ಮಾಡಿದ್ದೇನೆ. ಮತಾಂತರವಾಗುತ್ತೀಯ ಎಂದು ನಗುತ್ತಾ ಕೇಳಿದ ಆತ್ರೇಯ. ನನ್ನ ಮತಾಂತರವಾಗಿ ಹೋಗಿದೆ ನಿನಗೆ ತಿಳಿದಿಲ್ಲ ಅಷ್ಟೇ ಎಂದು ಹೇಳಿದೆ.
ನಾನು ಇಷ್ಟೆಲ್ಲಾ ನನ್ನ ಬಗ್ಗೆ ಬರೆದುಕೊಂಡ ಮೇಲೆ ನಾನು ಯಾರು ಅಂತ ಸುಲಭವಾಗಿ ಗುರುತಿಸಿರುತ್ತೀಯ ನೀನು. ಇವತ್ತಿಗೂ ನನಗೆ ನಾನು ಅಜ್ನಾತವಾಗಿರುವಂತೆ ಬರೆಯಲು ಸಾಧ್ಯವೇ ಇಲ್ಲ ನೋಡು. ಅದಕ್ಕೇ ನೀನು ಇದನ್ನ ಓದಬಾರದು. ಬರೆಯುತ್ತಾ ಹೋದರೆ ನನಗೇ ಇನ್ನೂ ಬರೆಯುವ ಆಸೆ ಹೆಚ್ಚಾಗಬಹುದು. ಅಂತೆಯೇ ಕಲ್ಲು ಬೆಂಚಿನ ಮೇಲೆ ಪುಸ್ತಕವನ್ನಿಟ್ಟುಬರುವ ಆಸೆಯೂ.
* * *
ಈ ಪುಟಗಳನ್ನು ಬೆಂಕಿಗೆಸೆಯುವ ಮುಂಚೆ ಕಥೆಯೊಂದ ಹೇಳಬೇಕು. ಇದನ್ನು ಬರೆಯುವಾಗ ನನ್ನ ಅಷ್ಟು ದಿನದಿಂದ ಕಾಡುತ್ತಿದ್ದ ಅನೂಹ್ಯವಾದ ಭಯದಿಂದ ಬಿಡುಗಡೆಯಾದಂತೆ, ಕಳಚಿಕೊಂಡಂತೆ, ನೆಮ್ಮದಿಯಿಂದಿದ್ದೇನೆ. ಇಟಲಿಯ ಡ್ಯೂಕ್ ಒಬ್ಬನ ಕಥೆ ಇದು. (ಅವನದೋ ಅವನ ಹೆಂಡತಿಯದೋ?) ಅವನು ತನ್ನ ಹೆಂಡತಿಯ ಪೇಂಟಿಂಗ್ ಅನ್ನು ತೋರಿಸಿ ಅವಳ ಬಗ್ಗೆ ಹೇಳುತ್ತಾ ಹೋಗುತ್ತಾನೆ. ನಗು ಮುಖದ ವಿನಯವಂತ ಹುಡುಗಿಯವಳು, ಯಾರ ಮುಂದೆಯೂ ತನ್ನ ಹೆಚ್ಚುಗಾರಿಕೆಯನ್ನ ತೋರಿಸಿಕೊಳ್ಳದೆ ಇರುತ್ತಿದ್ದ ಆ ಹುಡುಗಿ ಕೆಲಸದವನಿಗೂ ಕೂಡಾ ಧನ್ಯವಾದ ಹೇಳುವುದನ್ನು ಮರೆಯುತ್ತಿರಲಿಲ್ಲ. ಎಲ್ಲರಿಗೂ ಅವಳ ನಗು ಮುಖದ ಪರಿಚಯವಿರುತ್ತೆ. ಡ್ಯೂಕ್‌ಗೆ ತನ್ನ ಹೆಂಡತಿ ಘನತೆಗೆ ತಕ್ಕಂತೆ ನಡೆಯುತ್ತಿಲ್ಲ ಅನ್ನಿಸುತ್ತದೆ. ಅವಳಿಗೆ ನಿನ್ನ ನಡತೆಯನ್ನು ತಿದ್ದಿಕೋ ಎಂದು ಹೇಳುವುದಕ್ಕೂ ಅವನ ಅಭಿಮಾನ ಅಡ್ಡಬರುತ್ತದೆ. ಅದಕ್ಕೆ ಅವನು ತನ್ನ ಭಟರಿಗೆ ಅಪ್ಪಣೆ ಕೊಡಿಸುತ್ತಾನೆ. ಅವಳ ನಗು ಧನ್ಯವಾದಗಳೆಲ್ಲಾ ಕೊನೆಗೊಳ್ಳುತ್ತವೆ. I gave orders and all smiles stopped ಎಂಬುದನ್ನ ಅವಳ ಕೊಲೆಯಾಯಿತು ಎಂದು ಸರಿಯಾಗಿ ಅರ್ಥಮಾಡಿಕೊಳ್ಳುವ ಜನ. I didn't like his going away from me and he died ಅಂತ ಬರೆದರೆ ಗಂಡನ ಸಾವಿನ ಬಗ್ಗೆ ದುಃಖಿಸುತ್ತಿದ್ದಾಳೆ ಎಂದು ತಪ್ಪಾಗಿ ಅರ್ಥಮಾಡಿಕೊಂಡರು. ಅಥವಾ ತಪ್ಪು ನನ್ನದೂ ಇರಬಹುದು.
- ॑ ॑-॑
Wednesday, July 13, 2011
Subscribe to:
Posts (Atom)