Wednesday, October 29, 2008

ಯಾರೂ.....??

ಟೆರೇಸಿನ ಮೂಲೆಯೊಂದರಲ್ಲಿ ಜಾಗ ಹಿಡಿದು ಯಾವುದೋ ಯೋಚನೆಯಲ್ಲಿ ಮಗ್ನಳಾಗಿದ್ದ ಬಬ್ಲಿಯ ಬಳಿಗೆ ಹೋಗಿ ಕೂತೆ. ಅವಳಿಗೆ ಏನೋ ಹೇಳಬೇಕಿತ್ತು ನಾನು. ಹೇಗೆ ಹೇಳುವುದೆಂದು ತಿಳಿಯುತ್ತಿರಲಿಲ್ಲ, ಹೇಳುವುದು ಹೇಗೆಂದು ಯೋಚಿಸುತ್ತಾ ಟೆರೇಸಿನ ಗೋಡೆಯ ಒರಟು ಚರ್ಮಕ್ಕೆ ನನ್ನ ಬೆನ್ನೊರಗಿಸಿ ಕೂತು ನಿಟ್ಟುಸಿರಿಟ್ಟೆ.

ಇದೆಲ್ಲಾ ಶುರುವಾಗಿದ್ದು ಮೂರುದಿನದ ಹಿಂದೆ, ನಾನು ಮಧು ರೂಮಿಗೆ ಹೋಗಿಬಂದಾಗಿನಿಂದ. ಮಾರನೇ ದಿನ ಸೈಕಾಲಜಿ ಇಂಟರ್ನಲ್ಸ್ ಇತ್ತು ನನ್ನ ಬಳಿ ಒಂದು ಪಾಠದ ನೋಟ್ಸ್ ಇರಲಿಲ್ಲ. ಇಡೀ ಹಾಸ್ಟಲ್ಲಿನ ಏಳ್ನೂರುಜನರಲ್ಲಿರುವ ನನ್ನ ಏಕೈಕ ಕ್ಲಾಸ್ ಮೇಟ್ ಎಂದರೆ ಮಧು. ಸರಿ ಈಗ ಮಲಗಿಬಿಡೋಣ ರಾತ್ರಿ ಒಂದು ಗಂಟೆಗೆ ಎದ್ದು ಮಧು ನೋಟ್ಸ್ ಓದಿದರಾಯ್ತು ಎಂದುಕೊಂಡು ಅವಳಿಗೆ ಮೆಸೇಜ್ ಮಾಡ್ದೆ. ಅವಳು ಸರಿ ನಾನು ರೂಮ್ ಬಾಗ್ಲ್ಲುತೆಗ್ದೇ ಇಟ್ಟಿರ್ತೀನಿ ನಾ ಮಲ್ಗಿದ್ರೂ ಫೋಟೋ ಕಾಪೀಸು ಟೇಬಲ್ ಮೇಲಿರುತ್ತೆ ತೊಗೊಂಡು ಹೋಗು ಎಂಬ ಉತ್ತರ ನೋಡಿ ಒಂದು ಗಂಟೆಗೆ ಅಲರಾಮ್ ಇಟ್ಟು ಮಲಗಿದೆ.

ಒಂದು ಗಂಟೆಗೆ ಅಲರಾಮ್ ಹೊಡೀತು ಎದ್ದು ದಡಬಡಿಸಿ ಆರಿಸಿದೆ. ಲಾಲಿ ಪ್ಚ್… ಎಂದು ಸದ್ದು ಮಾಡುತ್ತಾ ಮಗ್ಗಲು ಬದಲಿಸಿದಳು. ಕತ್ತಲಲ್ಲಿ ಚಪ್ಪಲಿ ಹುಡುಕಿ ಹಾಕಿಕೊಂಡು ರೂಮ್ ಹೊರಗೆ ಬಂದು ಲಿಫ್ಟ್ ಮುಂದೆ ಹೋಗಿ ನಿಂತು ಅದರ ಸ್ವಿಚ್ ಒತ್ತಿದೆ. ಎರಡು ನಿಮಿಷದ ನಂತರ ಅದು ಕೆಟ್ಟು ಹೋಗಿರುವುದು ನೆನಪಿಗೆ ಬಂತು. ಗ್ರೌಂಡ್ ಫ್ಲೋರ್ನಲ್ಲಿರುವ ನನ್ನ ರೂಮಿನಿಂದ ಐದನೇ ಮಹಡಿಯಲ್ಲಿರುವ ಮಧು ರೂಮಿಗೆ ಹೋಗುತ್ತಾ ಕೆಟ್ಟು ನಿಂತಿರುವ ಲಿಫ್ಟನ್ನೂ ಕೆಟ್ಟು ನಿಂತು ನಾಲ್ಕು ದಿನವಾದರೂ ಸರಿಮಾಡಿಸುವ ಗೋಜಿಗೆ ಹೋಗದ ವಾರ್ಡನ್ನನ್ನೂ ಶಪಿಸುತ್ತಾ ಸೆಕೆಂಡ್ ಫ್ಲೋರ್ ತಲುಪಿದೆ.ಅಲ್ಲಿನ ಟ್ಯೂಬ್ ಲೈಟ್ ಬೆಳಕು ಎಲ್ಲಾ ಫ್ಲೋರುಗಳ ಬೆಳಕಿಗಿಂತ ಪ್ರಕಾಶಮಾನವಾಗಿದೆಯಾ ಎಂಬ ಅನುಮಾನವು ಬಗೆಹರಿಯುವ ಮೊದಲೇ ಮೂರನೇ ಮಹಡಿಯಲ್ಲಿ ಲೈಟೇ ಇಲ್ಲ ಎಂಬ ವಾಸ್ತವ ಲೈಟ್ ಆರಿಸಿದವರ ಮೇಲೆ ಸಿಟ್ಟು ತರಿಸಿತು. ಅದೇ ಸಿಟ್ಟಿನಲ್ಲಿ ಮೂರನೇ ಮಹಡಿ ತಲುಪಿ ಲೈಟ್ ಆನ್ ಮಾಡಲು ಸ್ವಿಚ್ ಬೋರ್ಡ್ ಬಳಿ ಹೋದರೆ ನನ್ನ ತಡೆದಿದ್ದು ಆಹ್… ಎಂದು ವಿಚಿತ್ರವಾಗಿ ನರಳುತ್ತಿರುವ ಸದ್ದು ಒಂದು ನಿಮಿಷ ಪ್ರೇತಾತ್ಮಗಳ ಕಲ್ಪನೆ ಬಂದು ಭಯವಾಗಿ ಸಹವಾಸ ಅಲ್ಲ ಎಂದುಕೊಂಡು ಲೈಟ್ ಹಾಕುವ ಸಾಹಸಕ್ಕೆ ಹೋಗದೆ ಅತ್ತಿತ್ತ ನೋಡದೆ ಮೆಟ್ಟಿಲುಗಳನ್ನು ತುಳಿದು ಮಧು ರೂಮ್ ಮುಟ್ಟಿ ಸಮಾಧಾನದ ಉಸಿರು ತೆಗೆದುಕೊಂಡೆ.

ಆದರೆ ತಕ್ಷಣ ನನ್ನ ಕಲ್ಪನೆಗಳ ಬಗ್ಗೆ ನನಗೇ ನಗು ಬಂತು. ಕೆಳಗೆ ಹೋಗುವಾಗಲಾದರೂ ಆ ಏನಿರಬಹುದೆಂದು ನೋಡಿಕೊಂಡೇ ಹೋಗಬೇಕೆಂಬ ಧೃಡ ನಿರ್ಧಾರ ಮಾಡಿ ಫೋಟೋಕಾಪಿಗಳನ್ನು ತೆಗೆದುಕೊಂದು ಮೂರನೇ ಫ್ಲೋರ್ ತಲುಪಿದೆ. ಆದರೆ ಅಲ್ಯಾವ ಸದ್ದೂ ಇರಲಿಲ್ಲ ಆದರೂ ಅಲ್ಲೆಲ್ಲಾ ಅಡ್ದಾಡಿದೆ. ಎನೂ ಕಾಣಲಿಲ್ಲ. ನಿರಾಸೆಗೊಂಡು ರೂಮ್ ತಲುಪಿ ಓದುತ್ತಾ ಕೂತೆ.

ಸುಮಾರು ಮೂರು ಗಂಟೆಯ ಹೊತ್ತಿಗೆ ಪಕ್ಕದ ರೂಮಿನಲ್ಲಿ ಯಾರೋ ಎದ್ದ ಸದ್ದಾಯಿತು. ಹೊರಬಂದು ನೋಡಿದೆ. ಬಬ್ಲಿ ಬ್ರಷು ಪೇಸ್ಟು ಹಿಡಿದುಕೊಂಡು ನಿದ್ದೆಗಣ್ಣಲ್ಲಿ ಬಾತ್ರೂಮ್ ಕಡೆಗೆ ಹೊರಟಿದ್ದಳು. ಅವಳಿಗೆ ನಾಳೆ ಬಿಸ್ನೆಸ್ ಎಕನಾಮಿಕ್ಸ್ ಪರೀಕ್ಷೆ ಇತ್ತು. ನಾನೂ ಅವಳೂ ಬೇರೆ ಬೇರೆ ಕೋರ್ಸ್ ತೆಗೆದುಕೊಂಡಿದ್ದರೂ ಚಿಕ್ಕಂದಿನಿಂದ ಒಳ್ಳೆಯ ಸ್ನೇಹಿತರು. ಅವಳಿಗೆ ದೇವರು ದೆವ್ವ ಎಲ್ಲದರಲ್ಲಿ ಅತ್ಯಂತ ನಂಬಿಕೆ. ನಾನು ನಂಬಿಕೆ ಇದೆಯೋ ಇಲ್ಲವೋ ಎಂದು ನನಗೇ ಗೊತ್ತಿಲ್ಲದ ಎಡಬಿಡಂಗಿ. ಅವಳನ್ನು ಸುಮ್ಮನೆ ಹೆದರಿಸೋಣವೆನ್ನಿಸಿತು. ‘ಬಬ್ಲಿ ಪ್ಲೀಸ್ ಕಣೇ ಈಗ ಮಾತ್ರ ಬಾತ್ರೂಮ್ಗಳ ಕಡೆ ಹೋಗ್ಬೇಡ ಎಂದೆ.’ ಇವಳಿಗೇನಾಗಿತು ಎನ್ನುವಂತೆ ವಿಚಿತ್ರವಾಗಿ ನೋಡಿದಳು. ‘ಹೋಗಬೇಡ ಅಷ್ಟೇ ನಾ ಹೇಳಿದ್ದನ್ನ ಕೇಳು.’ ಎಂದು ನನ್ನ ರೂಮಿಗೆ ಎಳೆದುಕೊಂಡು ಹೋಗಿ ನನಗಾದ ಅನುಭವವನ್ನ ವಿತ್ ಆಡಿಯೋ ವೀಡಿಯೋ ಎಫೆಕ್ಟ್ ವಿವರಿಸಿ ಹೇಳಿದೆ.

ಆಮೇಲೆ ನಮ್ಮ ಸಂವಾದ ಹೀಗಿತ್ತು
ಬಬ್ಲಿ: ಎಷ್ಟ್ ಗಂಟೆಗೆ ನೆಡೆದಿದ್ದು ಹೇಳು?
ನಾನು: ಒಂದು ಗಂಟೆಗೆ!
ಬಬ್ಲಿ: ಹಂಗಾದ್ರೆ ಆ ಸದ್ದು ಖಂಡಿತ ದೆವ್ವದ್ದೇ..
ನಾನು: ಆಂ.. ಯಾಕೆ? (ನನಗೆ ನಗು ಬರುತ್ತಿತ್ತು)
ಬಬ್ಲಿ: ಮಂಗನ್ ಥರ ಆಡ್ಬೇಡ ಸ್ವಲ್ಪ ಸೀರಿಯಸ್ಸಾಗಿರೋದು ಕಲಿ ರಾತ್ರಿ ಒಂದು ಗಂಟೆಗೆ ಈವಿಲ್ ಸ್ಪಿರಿಟ್ಸ್ ಇವೋಕ್ ಆಗುತ್ತೆ ಅಂತಾರೆ
ನಾನು: ಯಾರು ಅಂತಾರೆ?
ಬಬ್ಲಿ: ನಾನು ದಿ ಎಕ್ಸಾರ್ಸಿಸ್ಟ್ ಮೂವಿಲಿ ನೋಡಿದ್ದೆ (ನನಗೆ ನಗು ತಡೆಯಲಾಗಲಿಲ್ಲ) ನಗ್ಬೇಡ ಆ ಸಿನೆಮಾನ ನೈಜ ಘಟನೆ ಆಧರಿಸಿ ಮಾಡಿರೋದು.
ನಾನು: ಸರಿ ಹಂಗಾದ್ರೆ ನಾಳೆನೂ ಒಂದ್ ಗಂಟೆಗೆ ಹೋಗಿ ನೋಡಣ ಬರ್ತೀಯಾ. ನಿನ್ ದೆವ್ವ ಕಾಣ್ಸುತ್ತಾ ಅಂತ? ಬಬ್ಲಿ: ಬೇಕಾದ್ರೆ ನಿಂಗ್ ತಲೆ ಕೆಟ್ಟಿದ್ರೆ ನೀ ಹೋಗು ನಾನು ಬರಲ್ಲ!
ನಾನು: ಏ ಹೆದ್ರ್ಬೇಡ ಕಣೇ ಈ ಹುಡ್ಗೀರು ಹೊತ್ತಲದ್ ಹೊತ್ನಲ್ ಫೋನಲ್ ಮಾತಾಡ್ತಿರಲ್ವ? ಆ ಸೌಂಡೇ ಇರ್ಬೇಕು ಅದು. ದೆವ್ವ ಅಲ್ಲ ಅಂತ ನಾ ಪ್ರೂವ್ ಮಾಡ್ತಿನಿ ಬಾ ನನ್ಜೊತೆ.
ಬಬ್ಲಿ: ನಾ ಬರಲ್ಲ! ನೀನೂ ಹೋಗಬಾರದು . ಸಾಕು ಆ ವಿಷ್ಯ ಮಾತಾಡಿದ್ದು ಓದ್ಕ. ಎಂದು ಎದ್ದು ಹೋಗಿ ಮತ್ತೆ ಮಲಗಿಕೊಂಡಳು!

ಆ ಸದ್ದು ಹೇಗೆ ಬರುತ್ತಿತ್ತೆಂದು ಕಂಡುಹಿಡಿಯಲೇಬೇಕೆನ್ನಿಸಿತು ನನಗೆ. ಈ ಗೂಬೆ ಬರ್ದೇ ಹೋದ್ರೆ ಪರವಾಗಿಲ್ಲ ನಾನಂತೂ ಹೋಗಿ ನೋಡೋದೇ ಎಂದು ನಿರ್ಧರಿಸಿದೆ. ಇಂಟರ್ನಲ್ಸ್ ಮುಗಿದ ರಾತ್ರಿ ‘ಮೊಗ್ಗಿನ ಮನಸು’ ಸಿನೆಮಾ ನೋಡಿ ಬಂದು ಸುಮಾರು ಹತ್ತು ಗಂಟೆಯ ಹೊತ್ತಿಗೆ ಮಲಗಿದೆವು.

ರಾತ್ರಿ ಒಂದು ಗಂಟೆಗೆ ಅಲರಾಮ್ ಹೊಡೀತು. ಎದ್ದು ರೂಮಿನಿಂದ ಹೊರಬರುವ ಹೊತ್ತಿಗೆ ಬಬ್ಲಿಯೂ ನಿಂತಿದ್ದಳು. ‘ನೀನೂ ಬರ್ತೀಯಾ? ‘ ನನಗೆ ಆಶ್ಚರ್ಯವಾಯಿತು. ‘ನಿನ್ ಫ್ರೆಂಡಾದ್ಮೇಲೆ ಇನ್ನೇನ್ ಮಾಡಕ್ಕಾಗತ್ತೆ ನನ್ ಕರ್ಮ!’ ಬೈದುಕೊಂಡಳು. ಇಬ್ಬರೂ ಸದ್ದು ಮಾಡದೆ ಮೂರನೇ ಫ್ಲೋರ್ಗೆ ಹೋದೆವು. ಅದೇ ರೀತಿಯ ಸದ್ದು ಬಬ್ಲಿ ನನ್ನ ಮುಖ ನೋಡಿ ಬಾರೆ ಹೋಗಣ ಇದು ಖಂಡಿತಾ ದೆವ್ವಾನೇ ಪಿಸುಗುಟ್ಟಿದಳು. ನೀನು ಬೇಕಾದ್ರೆ ಹೋಗು ನಂಗೆ ಡಿಸ್ಟರ್ಬ್ ಮಾಡ್ಬೇಡ ಬೈದೆ. ಅಲ್ಲೇ ನಿಂತಳು.

ನೀ ಇಲ್ಲೇ ನಿಂತಿರು ನಾನು ಆ ಕಾರಿಡಾರಿನ ಕಡೆಯಲ್ಲಿ ನೋಡ್ಕೊಂಡ್ ಬರ್ತೀನಿ ಎಂದು ನಾನು ಹೇಳುವ ಹೊತ್ತಿಗೆ, ಸರಿ ನಾನು ಇಲ್ಲಿ ಬಾತ್ ರೂಮ್ಗಳ ಕಡೆ ನೋಡಿ ಬರ್ತೀನಿ ಅಂದ್ಲು. ಕೆಟ್ಟ ಧೈರ್ಯದಿಂದ ಉದ್ದದ ಕತ್ತಲೆ ಕಾರಿಡಾರಿನ ತುಂಬ ಅಲೆದಾಡಿದೆ. ಉದ್ದಕೆ ಚಾಚಿಕೊಂಡಿರುವ ಕಾರಿಡಾರು, ಕಾರಿಡಾರಿನ ಎರಡೂ ಬದಿಗೆ ರೂಮುಗಳು. ಅಲ್ಲಿ ಯಾರೂ ಇರಲ್ಲಿಲ್ಲ! ಬಾತ್ರೂಮ್ನ ಕಡೆಯಿಂದ ಬಬ್ಲಿ ಜೋರಾಗಿ ಕಿರುಚಿಕೊಂಡಳು! ಆ ದಿಕ್ಕಿಗೆ ಓಡಿದೆ. ಅಲ್ಲಿಂದ ಹೊರಬಂದ ಬಬ್ಲಿ ನನ್ನ ಕೈಹಿಡಿದುಕೊಂಡು ದಡ ದಡ ಕೆಳಗಿಳಿಯತೊಡಗಿದಳು! ‘ಏನಾಯ್ತು ಏನಿತ್ತು ಅಲ್ಲಿ..?’ ‘ಹೌದು ನೀ ಹೇಳಿದ್ದೇ ಸರಿ ಯಾವ್ದೋ ಹುಡ್ಗಿ ಫೋನ್ನಲ್ಲಿ ಮಾತಾಡ್ತಿದ್ಲು. ನಾನು ಅವ್ಳನ್ನೇ ಕಾನ್ಸಂಟ್ರೇಷನ್ನಿಂದ ನೋಡ್ತಾ ಏನ್ ಮಾತಾಡ್ತಿದಾಳೆ ಅಂತ ಕೇಳ್ತಿದ್ನಾ ಅಷ್ಟರೊಳಗೆ-’ ‘ಅಷ್ಟರೊಳಗೆ ದೆವ್ವಾ ಬಂದ್ಬಿಡ್ತಾ?’ ನನ್ನ ಪ್ರಶ್ನೆ. ‘ಥೂ ನಿನ್ನ! ಜಿರಳೆ .. ಜಿರಳೆ ಬಿತ್ತು ನನ್ ಮೇಲೆ! ಅದ್ಕೆ ಕಿರಿಚ್ಕೊಂಡೆ.’ ಅಂದ್ಲು.

ಥೂ ಈ ಜಿರಳೆ ಹಲ್ಲಿಗಳಿಗೆಲ್ಲಾ ಹೆದ್ರುಕೊತೀಯಲ್ಲ ಎಂದು ಬೈದುಕೊಂಡರೂ ನಾನೂ ಅಂಥವಳೇ ಆದ್ದರಿಂದ ಸುಮ್ಮನಾದೆ.

+++

ಈ ಘಟನೆ ನೆಡೆದ ಮರುದಿನ ಸಂಜೆ ಕಾಲೇಜು ಮುಗಿದಮೇಲೆ ಕಾಲೇಜು ಬಸ್ಸಿಗೆ ಎಂದಿನಂತೆ ಕಾಯುತ್ತಾ ನಿಂತಿದ್ದೆ. ಬಸ್ಸು, ಬಾಧೂಳಿಯನ್ನು(ಗೋಧೂಳಿ ಥರ-ಬಸ್ಸು ಸೃಷ್ಟಿಸುವ ಧೂಳು) ಅಲ್ಲಿ ನಿಂತವರಿಗೆಲ್ಲಾ ಅಭಿಷೇಕ ಮಾಡಿಸುತ್ತಾ ಬಂದು ನಮ್ಮೆಲ್ಲರ ಮುಂದೆ ನಿಂತಿತು. ಹತ್ತಲು ಹೋದೆ ಯಾರೋ ಬ್ಯಾಗ್ ಹಿಡಿದು ಎಳೆಯುತ್ತಿದ್ದಾರೆ ಹತ್ತಲು ಬಿಡುತ್ತಿಲ್ಲ ಅನ್ನಿಸಿತು, ತಿರುಗಿ ನೋಡಿದೆ ಯಾರೂ ಇಲ್ಲ. ಆದರೆ ಹತ್ತಲು ಮಾತ್ರ ಆಗುತ್ತಿಲ್ಲ ‘ಎಂತದಾ ಬೇಗ ಬೇಗ ಹತ್ತಿ ಲೇಟ್ ಮಾಡದ್ ಎಂತಕ್ಕೆ’ ಅಂದರು ಡ್ರೈವರ್ ಅಣ್ಣ. ಅಣ್ಣಾ ಯಾರೋ ಬ್ಯಾಗ್ ಎಳೀತಿದಾರೆ ಹತ್ತಕ್ ಬಿಡ್ತಿಲ್ಲ ಅಂತ ಹೇಳಕ್ ಹೋದೋಳು ಹುಚ್ಚು ಅಂದುಕೊಂಡಾರೆಂದು, ಅಣ್ಣಾ ಹತ್ತಕ್ ಆಗ್ತಿಲ್ಲ ಅಂದೆ. ಅಲ್ಲಿಂದ ಧಡಾರೆಂದು ಎದ್ದ ಅಣ್ಣ ಮೇಲೆಳೆದು ಹತ್ತಿಸಿಕೊಂಡು ನನ್ನ ಕೈಗೆ ಬಸ್ ಕೀ ಕೊಟ್ಟು, ನೀರು ಬೇಕಾ? ಸುಸ್ತಾಗ್ತಿದೆಯಾ? ಅಂದರು ನನಗೆ ಒಂದೂ ಅರ್ಥವಾಗಲಿಲ್ಲ. ಪಾಪ ಎಷ್ಟು ವರ್ಷದಿಂದ ಫಿಟ್ಸ್ ಇದೆ ಅಂತ ಪರಿತಾಪ ಬೇರೆ. ನಾನು ತಲೆ ಚಚ್ಚಿಕೊಳ್ಳುವುದೊಂದು ಬಾಕಿ!

ಹಾಸ್ಟಲ್ಲಿಗೆ ಬಂದು ಅಟೆಂಡೆನ್ಸ್ ಕೊಡಲು ಹೋದೆ ವಾರ್ಡನ್ನು ‘ನಯ್ನಿ ನಿನ್ ಫ್ರೆಂಡ್ ಬಬ್ಲಿಗ್ಯಾರೋ ಸಿ.ಡಿ ಕೊಟ್ಟೋಗಿದಾರೆ ಕೊಟ್ಬಿಡು ಅವ್ಳಿಗೆ. ಅವ್ಳಿನ್ನು ಕಾಲೇಜಿನಿಂದ ಬಂದಿಲ್ಲ ಅಲ್ವ?’ ಎನ್ನುತಾ ಸಿಡಿಯೊಂದನ್ನು ನನ್ನ ಕೈಗಿತ್ತರು. ಮ್ಯಾಮ್ ಯಾರ್ ಕೊಟ್ಟಿದ್ದು ಕೇಳಿದೆ. ಗೊತ್ತಿಲ್ಲ ನಾನು ಮೆಸ್ ಬಿಲ್ಲ್ ಬರೀತಿದ್ದೆ ಈ ಸಿ ಡಿನ ಬಬ್ಲಿಗೆ ಕೊಟ್ಬಿಡಿ ಅಂದ್ರು ಸರಿ ಅಂದೆ. ನಿಮ್ಮ್ ಹೆಸ್ರೇನು ಅಂತ ಕೇಳಬೇಕು ಅನ್ಕೊಳೋ ಹೊತ್ತಿಗೆ ಅವ್ರು ಹೋಗ್ಬಿಟ್ಟಿದ್ರು. ಯಾವ್ದೋ ಹುಡ್ಗಿ ಅಂದ್ರು. ಸಿಡಿ ಮೇಲೂ ಯಾವ ಹೆಸರೂ ಇರಲಿಲ್ಲ. ಥ್ಯಾಂಕ್ ಯೂ ಹೇಳಿ ತೆಗೆದುಕೊಂಡು ಬಂದೆ. ಬಬ್ಲಿ ಬಂದ ಮೇಲೆ ಅವಳಿಗೆ ಸಿ ಡಿ ಕೊಟ್ಟು ವಾರ್ಡನ್ ಹೇಳಿದ್ದನ್ನೇ ಹೇಳಿ, ಯಾವ ಸಿ ಡಿ ಹಾಕಿ ನೋಡು ಅಂದೆ ಅದಕ್ಕವಳು ನಾನು ಲ್ಯಾಪ್ ಟಾಪ್ ತಂದು ಒಂದು ವಾರನೂ ಆಗಿಲ್ಲ ನನ್ ಹತ್ರ ಲ್ಯಾಪ್ ಟಾಪ್ ಇದೆ ಅಂತ ನಿನ್ಗೆ ಲಾಲಿಗೆ ಬಿಟ್ರೆ ಯಾರಿಗೂ ಗೊತ್ತಿಲ್ಲ. ಲಾಲಿಗೆ ಏನಾದ್ರೂ ಕೊಡಕ್ಕಿದ್ರೆ ನಂಗೇ ಡೈರೆಕ್ಟಾಗಿ ಕೊಟ್ಟಿರೋಳು ಮತ್ತ್ಯಾರು ನಂಗೆ ಕೊಡ್ತಾರೆ ಇದನ್ನ ಅಂತ ತಲೆಕೆಡೆಸಿಕೊಂಡಳು. ಯಾರಾದ್ರೂ ತಂದು ಕೊಟ್ಟಿರಲಿ ಏನಿದೆ ನೋಡಣ ಹಾಕು ಅಂದೆ. ಬೇಡ ಕಣೇ ಪ್ಲೀಸ್. ಆಮೇಲ್ ನೋಡಣ ಈಗ ಬೇಡ ಅಂದಳು. ಇವಳಿಗೇನೋ ಆಗಿದೆ ಅನ್ನಿಸಿತು. ಸಂಜೆ ಬಸ್ ಹತ್ತುವಾಗ ನಡೆದ ಘಟನೆಯನ್ನು ಹೇಳಬೇಕೆನಿಸಿದರೂ, ಇದಕ್ಕೂ ದೆವ್ವದ ಕೈವಾಡವೇ ಕಾರಣ ಎಂದಾಳೆಂದೆನ್ನಿಸಿ ಏನೂ ಹೇಳದೇ ಸುಮ್ಮನಾದೆ.

ಅವತ್ತು ರಾತ್ರಿ ಒಂದು ಗಂಟೆಗೆ ಮತ್ತೆ ಎಚ್ಚರವಾಯಿತು, ಅಲರಾಮ್ ಇಟ್ಟಿರಲಿಲ್ಲ. ಎದ್ದು ಕೂತೆ ಮತ್ತೆ ಆ ಸದ್ದು ಥೇಟ್ ಅದೇ ರೀತಿ. ಲಾಲಿಗೂ ರಾತ್ರಿಯೆಲ್ಲಾ ಫೋನಲ್ಲಿ ಮಾತಾಡುತ್ತಾ ನರಳುವ ಬುದ್ದಿ ಅಂಟಿಕೊಂಡಿತಾ ಎಂದು ಅನುಮಾನವಾಗಿ ಲೈಟ್ ಆನ್ ಮಾಡಿದೆ, ಸದ್ದು ನಿಂತಿತು. ನೋಡಿದರೆ ಲಾಲಿ ಹೊದ್ದು ಮಲಗಿದ್ದಳು. ಬೆಡ್ಶೀಟ್ ಒಳಗೆ ನುಸುಳಿಕೊಂಡೇ ಮಾತಾಡುತ್ತಿರಬಹುದಾ ಎಂದು ಮತ್ತೊಂದು ಅನುಮಾನವಾಯಿತು. ಲಾಲಿ ನಿನ್ ಮೊಬೈಲ್ ಕೊಡು ಅಂದೆ. ಅದಕ್ಕೆ ಲಾಲಿ ಏನೇ ನಿಂದು ಹಿಂಸೆ ಈ ರಾತ್ರಿ ಹೊತ್ನಲ್ಲಿ ಮೊಬೈಲ್ ಅಲ್ಲೇ ಟೇಬಲ್ ಮೇಲಿದೆ ನೋಡು ಚಾರ್ಜ್ ಗೆ ಹಾಕಿದೀನಿ ಅಂದಳು. ನನಗೆ ನಿದ್ದೆ ಬರಲಿಲ್ಲ.

+++

ಮಾರನೇ ದಿನ ಮತ್ತೆ ಬಸ್ ಹತ್ತುವಾಗ ಅದೇ ಅನುಭವವಾಯಿತು. ‘ದಿಸ್ ಈಸ್ ಟೂ ಮಚ್’ ನನಗೇನಾಗಿದೆ ಸೈಕಾಲಜಿಕಲ್ ಡಿಸಾರ್ಡರ್ ಏನಾದರೂ ಶುರುವಾಗಿದೆಯೇನೋ ಅನುಮಾನವಾಯಿತು. ಖಂಡಿತ ಅದೇ ಇಲ್ಲಾಂದ್ರೆ ಹಿಂಗೆಲ್ಲಾ ಆಗೋಕ್ಕೆ ಸಾಧ್ಯನೇ ಇಲ್ಲ. ಅವತ್ತು ಸೈಕಾಲಜಿ ಲೆಕ್ಚರರ್ ಹೇಳುತ್ತಿದ್ದು ಜ್ನಾಪಿಸಿಕೊಂಡೆ. ವಿಸ್ಯುಯಲ್ ಹಾಲೋಸಿನೇಷನ್, ಆಡಿಟರಿ ಹಾಲೊಸಿನೇಷನ್, ಗಸ್ಟೇಟರೀ ಹಾಲೋಸಿನೇಷನ್… ಥೂ ನನಗೇ ಎಲ್ಲಾ ಕಷ್ಟಾ ಅಂತ ದುಃಖ ಬೇರೆ ಆಗುತ್ತಿತ್ತು… ಇದನ್ನೆಲ್ಲಾ ಹೇಳಿಕೊಳ್ಳೋಣವೆಂದೇ ಬಬ್ಲಿ ಬಳಿ ಕೂತಿದ್ದೆ. ಹೇಳೋದನ್ನು ಕೇಳಿ ನಕ್ಕುಬಿಟ್ಟರೆ ಅನುಮಾನವಾಯಿತು. ನಕ್ಕರೆ ನಗಲಿ ಎಂದುಕೊಂಡು ಹೇಳೂಬಿಟ್ಟೆ. ಬಾ ಎಂದು ರೂಮಿಗೆಳೆದುಕೊಂಡು ಹೋದಳು ಬಬ್ಲಿ. ಏನೆಂದು ಕೇಳಿದರೆ ಮಾತೇ ಆಡುತ್ತಿಲ್ಲ. ರೂಮ್ ಬಾಗಿಲ ಬೋಲ್ಟ್ ಜಡಿದು ಲ್ಯಾಪ್ ಟಾಪ್ ಆನ್ ಮಾಡಿದಳು. ಇದು ನೆನ್ನೆ ನೀನು ಕೊಟ್ಯಲ್ಲ, ನಂಗ್ಯಾರೋ ಕೊಟ್ಟುಹೋದರು ಅಂತ ಆ ಸಿಡಿ ಎನ್ನುತ್ತಾ ಅದನ್ನು ಹಾಕಿ ಪ್ಲೇ ಮಾಡಿದಳು. ಅಲ್ಲೂ ಅದೇ ಸದ್ದು ಅದೇ ನರಳುವ ಸದ್ದು. ನನ್ಗೆ ಚಿಟ್ಟು ಹಿಡಿಯುವುದೊಂದು ಬಾಕಿ.

ಅಷ್ಟರೊಳಗೆ ಬಾಗಿಲು ಬಡಿದರು. ಲ್ಯಾಪ್ ಟಾಪ್ ಆಫ್ ಮಾಡಿ ರೂಮ್ ಬಾಗಿಲು ತೆರೆದರೆ ಲಾಲಿ ‘ಗೊತ್ತಾಯ್ತೇನ್ರೇ ವಿಶ್ಯಾ.. ಆ ಮಲೆಯಾಳಿ ಹುಡುಗೀರಿದ್ರಲ್ಲಾ ಯಾವಾಗ್ಲೂ ಜೊತೆಗೇ ಓಡಾಡ್ಕೊಂಡಿದ್ರಲ್ಲಾ ನರ್ಸಿಂಗ್ ಕಾಲೇಜೋರು ಅವ್ರಿಬ್ಬರ ಡೆಡ್ ಬಾಡೀಸ್ ಫಾರ್ಮರ್ ಫುಡ್ ಬಾವೀಲಿ ಸಿಕ್ಕಿದ್ಯಂತೇ ಪೋಲೀಸೆಲ್ಲಾ ಬಂದಿದಾರಂತೆ ನೋಡ್ಕೊಂಡ್ ಬರಣಾ ಬನ್ರೇ’ ಎಂದಳು ಏದುಸಿರಿಡುತ್ತಾ.. ನಂಗೆ ಆಶ್ಚರ್ಯವಾಯಿತು. ಬಾರೆ ಬಬ್ಲಿ ಹೋಗಣ ಅಂದ್ರೆ ಇಲ್ಲ ಬೇಡ ನಾ ಬರಲ್ಲ ನೀನೂ ಹೋಗ್ಬೇಡ. ಲಾಲಿ ನೀನು ಹೋಗು ನಾವು ಬರಲ್ಲ ಅಂದ್ಲು. ಎಲ್ಲದಕ್ಕೂ ಬೇಡ ಬೇಡ ಅಂತೀಯಲ್ಲ ಏನಾಗಿದೆ ನಿಂಗೆ ಅಂದೆ. ಅವಳ ಕಣ್ಣಲ್ಲಿ ಜಲಪಾತ.

ನಯ್ನೀ ಎರೆಡು ದಿನದ ಹಿಂದೆ ಥರ್ಡ್ ಫ್ಲೋರ್ ಬಾತ್ ರೂಮಿನಿಂದ ಕಿರುಚಿಕೊಂಡು ಬಂದ್ನಲ್ಲ ಆವಾಗ ನಾನು ನೋಡಿದ್ದು ಜಿರಲೆನಲ್ಲ ಅಲ್ಲ್ಯಾರೂ ಫೋನ್ನಲ್ಲೂ ಮಾತಾಡುತ್ತಿರಲಿಲ್ಲ. ಈಗ ಲಾಲಿ ಹೇಳಿದ್ಲಲ್ಲ ಆ ಹುಡ್ಗೀರು ಬಾತ್ ರೂಮ್ನಲ್ಲಿ ಈ ಲೋಕದ ಪ್ರಗ್ನೇನೇ ಇಲ್ಲದೋರ ಥರ ಒಬ್ಬರ ಬೆತ್ತಲೆ ದೇಹನ ಇನ್ನೊಬ್ಬರು ತಬ್ಬಿಕೊಂಡು ಮಲ್ಗಿದ್ರು, ನಂಗೆ ಅಸಹ್ಯ ಆಗಿ ಕಿರುಚಿಕೊಂಡೆ. ನಾ ನೋಡಿದೆ ಅಂತಾನೇ ಅವ್ರು ಆತ್ಮಹತ್ಯೆ ಮಾಡ್ಕೊಂದಿರ್ಬೇಕು ಬಿಕ್ಕಳಿಸಿದಳು. ನನಗೆ ಆಘಾತ! ಹೇಗೆ ಪ್ರತಿಕ್ರಯಿಸಬೇಕೆಂದೇ ತಿಳಿಯಲಿಲ್ಲ.. ಇಬ್ಬರೂ ಆ ವಿಶಯವನ್ನು ಯಾರಿಗೂ ಹೇಳಬಾರದೆಂದು ನಿರ್ಧರಿಸಿದೆವು.

ಮಾರನೇ ದಿನ ಕಾಲೇಜಿಗೆ ಹೊರಟೆ ಹೊರಡುವ ಮೊದಲು ಇಂಟರ್ನಲ್ಸ್ ಮಾಕ್ಸಿಗೆ ಸೈನ್ ಹಾಕಿಸಿಕೊಳ್ಳೋಣವೆಂದು ವಾರ್ಡನ್ ರೂಮಿಗೆ ಹೋದೆ. ವಾರ್ಡನ್ ಜೊತೆ ಪೋಲೀಸ್ ಮಾತಾಡುತ್ತಾ ಕೂತಿದ್ದರು ಅವರು ಹೇಳೋದು ಕೇಳಿಸಿತು ‘ಪೊಸ್ಟ್ ಮಾರ್ಟಮ್ ರಿಪೋರ್ತ್ಸ್ ಬಂದಿದೆ ಈ ಹುಡುಗೀರು ಸತ್ತು ಆಗ್ಲೇ ಐದು ದಿನ ಆಗಿದೆ…. ಮುಂದಿನದೇನು ಕೇಳಿಸಲಿಲ್ಲ. ಬಬ್ಲಿ ಎರಡು ದಿನದ ಹಿಂದಷ್ಟೇ ಅವರನ್ನು ನೋಡಿದೆ ಎಂದಳಲ್ಲ ಅವಳು ನೋಡಿದ್ದಾದರೂ ಏನು! ಅವಳು ಹೇಳಿದ್ದು ನಿಜವಾ ಏನೂ ಅರ್ಥ ಆಗಲಿಲ್ಲ ನನಗೆ. ನಾನು ಕುಸಿದು ಕೂತೆ!

Friday, October 24, 2008

ಹಾಗೆ ಹಿಂಸೆಪಟ್ಟುಕೊಂಡು ಇರಬಾರದು ಹುಡುಗ...

ಮುಂಜಾವಿನ ಮುದ್ದು ಬಿಸಿಲೇ…

ಇಷ್ಟೆಲ್ಲಾ ದೂರ ಹೋಗ್ತೀವಿ ಅಂದ್ಕೊಂಡಿರಲಿಲ್ಲ ಅನ್ನೋದಕ್ಕೆ ಇಷ್ಟು ದೂರ ಹೋಗಲ್ಲ ಅಂದುಕೊಂಡಿರಲೂ ಇಲ್ಲ. ಸುಮ್ಮನೆ ಹಾಗೇ ಏನಾದರೂ ಘಟಿಸಲಿ ಎನ್ನುವಂತೆ ಇದ್ದುಬಿಟ್ಟೆವಲ್ಲ ಇಬ್ಬರೂ.

ನಾನು ನಿನ್ನ ಕೆನ್ನೆಗೆ ಮುತ್ತಿಟ್ಟು ಕಿವಿ ಕಚ್ಚಿದ್ದು, ನೀನು ಆಗತಾನೇ ಸಿಗರೇಟು ಸೇದಿದ ತುಟಿಯನ್ನೇ ನನ್ನ ತುಟಿಗೆ ಒತ್ತಿದ್ದು, ಅಂಥದ್ದು, ಅದಕ್ಕಿಂತ ಹೆಚ್ಚಿನದು ನೂರಾರು ಸಾರಿ ಆಗಿದ್ದು, ಉಹು ಅದನ್ನ ನೆನಪಿಸೋಕ್ಕೆ ಪತ್ರ ಬರೀತಿಲ್ಲ.

ನೀನು ಆಗಾಗ ಫೋನ್ನಲ್ಲಿ ಕದ್ದು ಮಾತಾಡುವ ನಿನ್ನ ಗರ್ಲ್ ಫ್ರೆಂಡುಗಳ ಬಗ್ಗೆ ಮಾತಾಡಿದರೆ ಬುದ್ಧಿ ಇಲ್ಲದವಳಾಗುತ್ತೇನೆ. ಗರ್ಲ್ ಫ್ರೆಂಡುಗಳು ಅಂತ ಹೇಳುವುದರಲ್ಲಿ ನನ್ನ ಸ್ವಂತದ್ದೊಂದು ಸಮಾಧಾನವಿದೆ. ಬಹಳಷ್ಟು ಜನ ಹುಡುಗಿಯರಿದ್ದಾರೆ ಯಾರನ್ನೂ ಹಚ್ಚಿಕೊಳ್ಳುವ ಜಾಯಮಾನವಲ್ಲ ಇವನದ್ದು ಅನ್ನೋ ನಂಬಿಕೆ. ಇಲ್ಲ ನಿನಗೆ ಒಬ್ಬಳೇ ಗರ್ಲ್ ಫ್ರೆಂಡ್ ಎಂದುಕೊಂಡುಬಿಟ್ಟರೆ ಈ ಪತ್ರಕ್ಕೂ ಅರ್ಥವಿರುವುದಿಲ್ಲ.

ಅವನ ಜೊತೆ ಅವತ್ತು ನಾನು ಮೊಬೈಲ್ನಲ್ಲಿ ಮಾತಾಡುತ್ತಿದ್ದಾಗ ನೀನು ನನ್ನ ಕೈಯಿಂದ ಮೊಬೈಲ್ ಕಿತ್ತುಕೊಂಡು ಎಸೆದೆಯಲ್ಲಾ, ಆವಾಗಲೇ ಅರ್ಥವಾಗಿದ್ದು you can be so furious ಅಂತ. ಆಮೇಲೆ ಇಬ್ಬರೂ ಅತ್ತೆವಲ್ಲಾ ಒಟ್ಟಿಗೇ ಕೂತು. ‘ನಾನು ಪೊಸೆಸ್ಸಿವ್ ಅನ್ನ್ಸ್ತೀನಾ ಚಿನ್ನ? ಹಿಂಸೆ ಮಾಡ್ತಿದೀನ ನಾನು ನಿಂಗೆ? ನಂಗೆ ಅವ್ನು ಇಷ್ಟ ಇಲ್ಲ ಕಣೇ, ನಂಗೆ ಕಷ್ಟ ಆಗುತ್ತೆ. ಸಾರಿ. ನನ್ನೆದುರಿಗೆ ಅವ್ನ ಜೊತೆ ಮಾತಾಡ್ಬೇಡ ಪ್ಲೀಸ್. ನಾನಿಲ್ದಿರೋವಾಗ ಎಷ್ಟ್ಬೇಕಾದ್ರೂ ಮಾತಾಡು ನಾನು ಬೇಡ ಅನ್ನಲ್ಲ.’ ಎನ್ನುತ್ತಿದ್ದ ನಿನ್ನ ಮುದ್ದುಗರೆಯಬೇಕೆನಿಸಿತ್ತು ನನಗೆ. ನಾವಿಬ್ಬರೂ ಜೊತೆಗಿರಲು ಶುರುವಾಗಿ ಏಳು ವರ್ಷದ ನಂತರ ಮೊದಲ ಸಾರಿ ಹೀಗಾಗಿದ್ದಲ್ಲವ? ನಿನ್ನ ಪೊಸೆಸಿವ್ ಎಂದು ಹೇಗೆ ಕರೆಯಲಿ ನಾನು?

ನಾನು ಇಲ್ಲಿಗೆ ಬಂದದ್ದು ಯಾಕೆ ಗೊತ್ತಾ? ಇಬ್ಬರೂ ಒಬ್ಬರಿಗೊಬ್ಬರು ಬೋರಾಗಿಬಿಡುತ್ತಿದ್ದೇವೇನೋ ಅಂತ ಭಯ ಕಾಡತೊಡಗಿತ್ತು. ಒಬ್ಬರಿಗೊಬ್ಬರು ಬೋರಾದಾಗಲೂ ಒಟ್ಟಿಗೇ ಇರುವ ಹಿಂಸೆಯನ್ನು ಪಡಬಾರದು ಎಂಬ ಕಾರಣಕ್ಕೆನೇ ಮದುವೆಯ ಗೋಜಿಗೆ ಹೋಗದೆ ಸುಮ್ಮನೆ ಜೊತೆಗಿರಲು ಶುರು ಮಾಡಿದವರಲ್ಲವೇ ನಾವು, ಈಗ ಇನ್ನೊಬ್ಬರಿಗೆ ಬೇಜಾರಾಗಬಾರದು, ಹರ್ಟ್ ಮಾಡಬಾರದು ಎಂಬ ಕಾರಣಕ್ಕೆ ಒಟ್ಟಿಗೆ ಇರಬಾರದು.
ನಿನಗೆ ನಾನು ಬೋರಾಗತೊಡಗಿದ್ದೇನೆ ಎಂದು ಸ್ಪಷ್ಟವಾಗತೊಡಗಿದ್ದು, ನೀನು ಅತ್ಯಂತ busy ಆಗಿ, ನನ್ನ ಜೊತೆ ಮಾತಾಡಿ ಕರ್ತವ್ಯವನ್ನು ಮುಗಿಸಬೇಕೆನ್ನುವಂತೆ ಎಣಿಸಿ ಐದು ನಿಮಿಷ ಎದುರು ಕೂತು ಎದ್ದು ಹೋಗತೊಡಗಿದೆಯಲ್ಲಾ ಆಗ. ಹಾಗೆ ಹಿಂಸೆಪಟ್ಟುಕೊಂಡು ಇರಬಾರದು ಹುಡುಗ. ನಿನಗೆ ಯಾವಾಗ ನನ್ನ ಜೊತೆ ಇರುವುದು ಕರ್ತವ್ಯವೆನಿಸತೊಡಗಿದೆ, ನಿನಗೆ ನನ್ನ ಸಾಂಗತ್ಯ ಯಾವ ರೀತಿಯ ಖುಷಿಯನ್ನೂ ಕೊಡುತ್ತಿಲ್ಲ ಎಂದು ತಿಳಿಯಿತೋ ನನಗೆ ಆ ಕ್ಷಣದಿಂದ ನಿನ್ನ ಜೊತೆಗೆ ಇರುವುದು ಉಸಿರು ಕಟ್ಟಿದ ಅನುಭವ.

ಅದಕ್ಕೇ ಇಲ್ಲಿಗೆ ಬಂದು ಬಿಟ್ಟೆ. ತಾತ ನನ್ನ ಹೆಸರಿಗೆ ಬರೆದ ಈ ಕಾಫಿ ಎಸ್ಟೇಟ್ ಮಾತ್ರ ಸಮಾಧಾನ ಕೊಡುತ್ತೆ ಅನ್ನಿಸಿತು. ನಿನಗೆ ನಾನು ಬೇಕೆನ್ನಿಸಿದರೆ ಇಲ್ಲಿಗೆ ಬಂದೇ ಬರುತ್ತೀಯ ಎಂದು ಗೊತ್ತಿತ್ತು. ನೀನು ಬರದೇ ಹೋಗಿದ್ದರೆ ಜೀವನ ಪೂರ್ತಿ ನಿನಗಾಗಿ ಕಾಯುತ್ತಾ ಕೂರುತ್ತಿದ್ದೆ ಎನ್ನುವುದು ಸುಳ್ಳು. ಆದರೆ ಅವತ್ತಿನಿಂದ, ನಾನು ಅಲ್ಲಿಂದ ಇಲ್ಲಿಗೆ ಹೊರಟು ಬಂದ ದಿನದಿಂದ ನೆನ್ನೆಯವರೆಗೂ ಅಂದರೆ ಐವತ್ತೇಳು ದಿನ ಒಂಭತ್ತು ಗಂಟೆಗಳು ಬೇರೆ ಯಾರೂ ಬೇಕೆನಿಸಲಿಲ್ಲ.
ನೆನ್ನೆ ನೀನು ಬಂದು ಎದುರು ಕೂತಾಗ ಅಳದೆ ಯಾವ ಭಾವನೆಗಳನ್ನೂ ತೋರಿಸದೆ ಸಹಜವಾಗಿರಲು ಎಷ್ಟು ಕಷ್ಟಪಟ್ಟೆ ಗೊತ್ತಾ? ನನ್ನ ನಾಟಕದ ಕಟ್ಟೆ ಒಡೆದು, ನಾನು ಭೋರ್ಗರೆದು ನೀರಾಗಿ ಸುರಿದದ್ದು ಕಾಫಿ ಬಟ್ಟಲ ಕೆಳಗೆ ಸಿಕ್ಕ ನಿನು ಬರೆದಿಟ್ಟು ಹೋದ ಚೀಟಿ ಓದಿದಾಗ.. ‘I can exist without you, but can’t live. I want to live please come’ ಹೌದು ಹುಡುಗ ನಾನೂ ಬದುಕಬೇಕು, ಬರುತ್ತೇನೆ.

ತೇರೇ ಬಿನ್ ಮೆ ಯು ಕೈಸೆ ಜಿಯಾ
ಕೈಸೆ ಜಿಯಾ ತೆರೆ ಬಿನ್

ನಿನ್ನ
ಬೆಚ್ಚಗಿನ ಉಸಿರು

Sunday, October 5, 2008

ನೋಟದೊಳು ತಾನಿಲ್ಲದೆ

ಯಾವುದರಿಂದಾದರೂ ಶಾಶ್ವತವಾಗಿ ಕಳಚಿಕೊಂಡೆ ಅಥವಾ ಇನ್ನೇನನ್ನೋ ಕಳೆದುಕೊಂಡೆ ಅಂತ ನಿಶ್ಚಿತವಾಗಿ ಗೊತ್ತಾದಾಗ ತನಗೆ ಅಸಾಧ್ಯವಾದ ಹಸಿವಾಗುತ್ತದೆ ಅನ್ನುವುದು ಅವಳಿಗೆ ಮತ್ತೆ ಸ್ಪಷ್ಟವಾಯಿತು. ಇನ್ನು ಅವನ ಜೊತೆ ಬದುಕುವುದು ಸಾಧ್ಯವೇ ಇಲ್ಲ ಎಂದು ಮನಸ್ಸಿನಲ್ಲೇ ತೀರ್ಮಾನಿಸಿದ ನಂತರ ಅಡುಗೆ ಮನೆಗೆ ಹೋಗಿ ತಾನೇ ಮಾಡಿಟ್ಟಿದ್ದ ಪುಲಾವನ್ನು ತಟ್ಟೆ ಭರ್ತಿ ಹಾಕಿಕೊಂಡು ಗಾಜಿನ ಬಟ್ಟಲು ತುಂಬ ಮೊಸರು ಸುರಿದುಕೊಂಡು ಸಾವಧಾನವಾಗಿ ಏನನ್ನೂ ಯೋಚಿಸದೆ ನಿಧಾನವಾಗಿ ತಿಂದಿದ್ದು ನೆನಪಾಯಿತು. ಹಾಗೆ ಹಸಿವಿನಿಂದ ತಿನ್ನುವಾಗ ತನ್ನ ಮನಸ್ಸು ಪೂರ್ತಿ ಖಾಲಿಯಾಗುತ್ತಿರುತ್ತಲ್ಲ, ಯಾವುದೇ ಭಾವನೆಗಳಿಲ್ಲದ ಖಾಲಿ- ಖಾಲಿ ಮನಸ್ಸಿಗೆ ಬರೀ ತನ್ನ ದೇಹದ ಹಸಿವು ಮಾತ್ರ ಗೊತ್ತಾಗುತ್ತಲ್ಲ ಅಂತ ಆಶ್ಚರ್ಯವಾಯಿತು. ಇಡೀ ತನ್ನ 34 ವರ್ಷದ ಜೀವನದಲ್ಲಿ ಹೀಗೆ ಆಗುತ್ತಿರುವುದು ಇದು ನಾಲ್ಕನೇ ಸಲ ಎಂದು ಎಣಿಸಿಕೊಂಡು ಹತ್ತನೇ ತರಗತಿಯ ಫಲಿತಾಂಶದ ಸಮಯದಲ್ಲಿ 'ಕನ್ನಡದಲ್ಲಿ ಫೇಲ್ ಆಗಿದಾಳೆ ' ಅಂತ ಅಪ್ಪ ಪೆಚ್ಚು ಮೋರೆ ಹಾಕಿಕೊಂಡು ಬಂದು ಹೇಳಿದಾಗ ತಾನು ಒಂದು ತೊಟ್ಟೂ ಕಣ್ಣೀರು ಸುರಿಸದೆ ಅಮ್ಮ ಮಾಡಿದ್ದ ಬೆಳಗಿನ ಉಪ್ಪಿಟ್ಟನ್ನೇ ಮತ್ತೆ ತಟ್ಟೆ ಭರ್ತಿ ಹಾಕಿಕೊಂಡು ತಿನ್ನುವಾಗಲೂ ತನಗೆ ಗೊತ್ತಾಗುತ್ತಿದ್ದುದು ಹಸಿವಾಗುತ್ತಿದೆ ಅನ್ನೋದು ಒಂದೇ. ಮುಂದೆ ಪಿಯುಸಿಯ ಫಿಸಿಕ್ಸ್ ಟ್ಯೂಷನ್‌ನಲ್ಲಿ ನಿದ್ದೆ ತಡೆಯಲಾರದೆ 'ನಿದ್ದೆ ಬರ್‍ತಿದೆ ಕಣೇ' ಅಂತ ನಂದಿನಿಯ ತೊಡೆಯ ಮೇಲೆ ಮಲಗಿದ್ದ ತನಗೆ, ಟ್ಯೂಷನ್ ಮುಗಿಸಿ, ಮನೆಗೆ ಹೋಗಿ,ತಿಂಡಿ ತಿಂದು, ಕಾಲೇಜಿಗೆ ಬಂದು ನಂದಿನಿಯನ್ನು ಹುಡುಕುತ್ತಿದ್ದರೆ ಸಿಕ್ಕಿದ್ದು ಅವಳ ಸಾವಿನ ಸುದ್ದಿ. ಎಲ್ಲರೂ ಅವಳು ಆಕ್ಸಿಡೆಂಟಾಗಿ ಸತ್ತುಬಿದ್ದಿದ್ದ ಜಾಗಕ್ಕೆ ಓಡಿಹೋಗುತ್ತಿದ್ದರೆ ತಾನು ಮಧ್ಯಾಹ್ನಕ್ಕೆಂದು ತಂದಿದ್ದ ಊಟವನ್ನು ತಿನ್ನತೊಡಗಿದ್ದೆ. ಆವಾಗಲೂ ತನ್ನ ಮನಸ್ಸಿಗೆ ಅಸಾಧ್ಯವಾಗಿ ಹಸಿವಾಗುತ್ತಿದೆ, ತಿನ್ನದಿದ್ದರೆ ಸತ್ತೇ ಹೋಗುತ್ತೇನೆ ಅನ್ನಿಸಿತ್ತು. ಮುಂದೆ ತನ್ನ ಮದುವೆ ನಿಶ್ಚಯವಾದಾಗ ಅಮ್ಮ ತನ್ನನ್ನು ತಬ್ಬಿಕೊಂಡು ನಮ್ಮನ್ನ ಬಿಟ್ಟೊಗ್ತಿಯಲ್ಲೆ ಕಂದ ಅಂತ ಬಿಕ್ಕಳಿಸುತ್ತಿದ್ದರೆ ತನಗೆ ಹಸಿವಿನ ಸಂಕಟದಿಂದ ಪ್ರಜ್ಞೆ ತಪ್ಪುತ್ತದೆ ಅನ್ನಿಸಿ ಅಮ್ಮಾ ತುಂಬಾ ಹಸಿವಾಗ್ತಿದ್ದೆ ಕಣೇ ಅಂದದ್ದು ನೆನಪಾಗಿ ನಿಟ್ಟುಸಿರಿಟ್ಟಳು.
***
"ನೀನು ಸಮುದ್ರದ ಥರ ಪರಿಪೂರ್ಣ ಹೆಣ್ಣು" ಅಂದಿದ್ದ ಅವನ ಮಾತುಗಳಿಗೆ ತನ್ನ ಕಣ್ಗಳು ಅರಳುಮಲ್ಲಿಗೆ. ಸಮುದ್ರ ಹುಡ್ಗ ಅಲ್ವೇನೋ ಅಂದಿದ್ದಕ್ಕೆ ಅವನ ನಗುವಿನ ಉತ್ತರ. ತನ್ನ ಹೆಗಲ ಮೇಲಿದ್ದ ಅವನ ಬಲಗೈ ಜಾರಿ ತೋಳುಗಳನ್ನು ಬಿಗಿಯಾಗಿ ಅಮುಕಿದ್ದವು.

ನಮ್ಮ ಹಾಸ್ಟೆಲಿನ ಎತ್ತರದ ಕಾಂಪೌಂಡುಗಳ ಎದುರಿನ ಉದ್ದೋ ಉದ್ದದ ರಸ್ತೆಯ ಆ ತುದಿಯಿಂದ ಈ ತುದಿಗೆ ಈ ತುದಿಯಿಂದ ಆ ತುದಿಗೆ ನಡೆದಾಡುತ್ತಾ ಮಾತಾಡುತ್ತಿದ್ದೆವು ಸಮಯದ ಹಂಗನ್ನು ಮರೆತು. ನದಿಗಳು ಹೋಗಿ ಸಮುದ್ರವನ್ನು ಸೇರುತ್ತವೆ ಕಣೇ, ಗಮನಿಸು ಸಮುದ್ರ ಒಂದು, ನದಿಗಳು ಹಲವಾರು. ಪ್ರಕೃತಿಯಲ್ಲಿ ಯಾವಾಗಲೂ ಒಂದು ಹೆಣ್ಣಿಗೆ ಬಹಳಷ್ಟು ಜನ ಪೈಪೋಟಿ ನಡೆಸುತ್ತಿರುತ್ತಾರೆ. 'Competitive male and choosy female' ಒಂದು ಅಂಡಾಣುವಿಗೆ ಮಿಲಿಯಗಟ್ಟಲೆ ವೀರ್ಯ ಸ್ಪರ್ಧಿಸುತ್ತವೆ. ಹೊಂಬಾಳೆಯನ್ನು ಗಮನಿಸಿದ್ದಿಯಲ್ಲ ಒಂದು ಹರಳಿಗೆ ಹಲವಾರು ಕೇಸರಗಳು. ಡಿಸ್ಕವರಿ ಚಾನೆಲ್ ನೋಡಿರ್‍ತೀಯಾ... ಪ್ರಾಣಿಗಳ ಉದಾಹರಣೆ ಕೊಡೋದು ಬೇಡ. ಇನ್ನು ಮನುಷ್ಯರದು ನಿನ್ನ ಅನುಭವಕ್ಕೇ ಬಂದಿರುತ್ತೆ ಎಂದು ತುಂಟ ನಗೆ ಬೀರಿದ್ದ.

ಆಕಾಶದಲ್ಲಿನ ನಕ್ಷತ್ರಗಳನ್ನು, ಅಷ್ಟು ಹೊತ್ತಾದರೂ ಇನ್ನು ಓಡಾಡುತ್ತಿರುವ ಜನಗಳನ್ನು ದೂರದಲ್ಲಿದ್ದ ಮರಗಳನ್ನು ಕಬ್ಬಿನಂಗಡಿಯ ಮುಚ್ಚಿದ ಬಾಗಿಲನ್ನು ನೋಡುತ್ತಾ ಮಾತಾಡುವ ರೀತಿ ನೋಡಿದಾಗ ಇವೆಲ್ಲವುಗಳಿಂದ ಅವನು ಪದಗಳನ್ನು ಹೆಕ್ಕುತ್ತಿದ್ದಾನೆ ಎಂದು ಅನುಮಾನವಾಗುತ್ತಿತ್ತು. ಮುಂದುವರೆಸಿದ್ದ, ಸಮುದ್ರ ಯಾವಾಗಲೂ receiving endನಲ್ಲಿರುತ್ತೆ. ಹೆಣ್ಣೂ ಅಷ್ಟೇ. ನದಿಗಳು ಸಮುದ್ರವನ್ನು ಸೇರಲು ಹುಡುಕಿಕೊಂಡು ಬರುತ್ತವೆ. ಪ್ರಕೃತಿಯಲ್ಲಿ ಹೆಣ್ಣು ಗಂಡಿಗಿಂತ ವಿಶಾಲವಾಗಿರುತ್ತಾಳೆ. ಅಂಡಾಣುವಿನ ಗಾತ್ರ 0.1 ಮಿ.ಮೀ. ಇದ್ದರೆ ಒಂದು ವೀರ್ಯಾಣುವಿನ ಗಾತ್ರ 0.05 ಮಿ.ಮೀ. ಇರುತ್ತೆ. ಇರುವೆಗಳ ಬಗ್ಗೆ ತಿಳಿದಿದ್ದೀಯ? ರಾಣಿ ಇರುವೆ ದೊಡ್ಡದಿರುತ್ತೆ. ಕಪ್ಪೆಗಳನ್ನು ತೆಗೆದುಕೋ ಹೆಣ್ಣು ಕಪ್ಪೆ ಗಾತ್ರ ದೊಡ್ಡದು.

ಸಮುದ್ರ ವಿಶಾಲವಾಗಿರುತ್ತೆ ಎಂದಷ್ಟೇ ಹೇಳಿದರೆ ಅದರ ಅಗಲವಾದ ಹರವಿಗೆ ಅನ್ಯಾಯ ಮಾಡಿದ ಹಾಗೆ. ಬರೀ ಇಷ್ಟೇ ಅಲ, ಗಂಡಿಗೆ ಬಂದು ಸೇರುವುದೊಂದೇ ಗೊತ್ತು, ಹೆಣ್ಣು ಪೊರೆಯುತ್ತಾಳೆ. ವೀರ್ಯಾಣು ಮತ್ತು ಅಂಡಾಣುಗಳು ಸೇರಿ ಜೀವಾಣು ಅನ್ನಿಸಿಕೊಂಡು ಅದು ಗರ್ಭಾಶಯದ ಒಳಗೆ ನೆಲೆಗೊಳ್ಳುವವರೆಗೆ, ಅಂದರೆ ನಾಲ್ಕೈದು ದಿನಗಳು ಆ ಜೀವವನ್ನು ಪೊರೆಯುವುದು ಅಂಡಾಣುವಿನ ಒಳಗಿನ ಯೋಕ್(ಹಳದಿ ಲೋಳೆ). ತಾಯಿ ಒಂಬತ್ತು ತಿಂಗಳು ಮಗುವನ್ನು ಕಾಪಾಡುತ್ತಾಳೆ. ಸಮುದ್ರ ತನ್ನಲ್ಲಿ ನದಿಗಳಿದ್ದು ಕರಗಿಸಿಕೊಂಡು ಪೊರೆಯುತ್ತದೆ. ನದಿಗಳು ಹೇಗಿದ್ದರೂ ಸ್ವೀಕರಿಸುತ್ತದೆ, ಒಂದಾಗುತ್ತದೆ; ಒಂದಾಗಿ ಅವುಗಳ ಕೊಳಕನ್ನು ಶುದ್ಧವಾಗಿಸುತ್ತದೆ, ಶುದ್ಧವಾಗುತ್ತದೆ... ಹಾಗೇ ನೀನೂ ಅಂದಿದ್ದ. ಅವನ ಮಾತುಗಳು ಸರಿಯಾಗಿ ಅರ್ಥವಾಗದಿದ್ದರೂ ಕೆಲವಕ್ಕೆ ವಿರೋಧವಿದ್ದರೂ ಇಷ್ಟವಾಗಿದ್ದವು. ಆದರೆ ಈಗ ಯೋಚಿಸಿದರೆ ಅಂದೇ ಅವನು ನನ್ನಲ್ಲಿನ ಕೊಳಕುಗಳನ್ನು ಸಹಿಸಿಕೋ ಅಂದಿದ್ದನಾ ಎಂದು ಅನುಮಾನವಾಗುತ್ತದೆ.

***

'ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು...' ಕೆ.ಎಸ್.ಎನ್. ಅವರ ಸಾಲಿಗೆ ಅರ್ಥವೇ ಇಲ್ಲವಲ್ಲ. ಇಷ್ಟಪಟ್ಟು ಮದುವೆಯಾದ ಹುಡುಗ, ಹೇಗೋ ಏನೋ ಹೊಂದಿಕೊಂಡು ಹೋಗುವ ಪ್ರಮೇಯವೇ ಇರಲಿಲ್ಲ. ಆದರೆ ಒಂದು ಹೆಣ್ಣಿಗೊಂದು ಗಂಡು ಎನ್ನುವುದೂ ಸುಳ್ಳಾಯಿತಲ್ಲ. ಅವನ ಕಾಮಕ್ಕೆ ನಾನು ಸಾಕಾದರೆ ವಿಕೃತಕ್ಕೆ ಕಾರ್‌ಡ್ರೈವರ್...!

ಪ್ರಕೃತಿಯಲ್ಲಿ ಸಹಜವಾದುದ್ದನ್ನು ನಾನ್ಯಾವತ್ತೂ ವಿರೋಧಿಸಿದ್ದೇ ಇಲ್ಲ. ಕ್ಷುದ್ರ ಜಂತುವಿನಿಂದ ಹಿಡಿದು ಹುಲಿ, ಜಿಂಕೆ, ಆನೆ ಕೊನೆಗೆ ಮನುಷ್ಯನವರೆಗೂ ಎಲ್ಲಾ ಪ್ರಾಣಿಗಳಿಗೆ ತನ್ನ ಸಂತಾನ ಎಷ್ಟು ಸಾಧ್ಯವೋ ಅಷ್ಟು ಬೆಳೆಯಲಿ ಎಂಬ ಗುಪ್ತ ಆಸೆಯೊಂದು ವಂಶವಾಹಿನಿಗಳಲ್ಲಿರುತ್ತದಂತೆ. ಅಂಥದಿರುವುದರಿಂದಲೇ ಮನುಷ್ಯರು ಸಾಮಾನ್ಯವಾಗಿ ಒಬ್ಬರಿಂದ ತೃಪ್ತರಾಗೋದಿಲ್ಲ. ಕ್ಷೇತ್ರವು ತಾನು ಸಂತಾನೋತ್ಪತ್ತಿಗೆ ಅರ್ಹವಾಗಿರುವಷ್ಟು ವರ್ಷಗಳೂ ಸತತವಾಗಿ ಸಶಕ್ತವಾದ ಬೀಜದ ಹುಡುಕಾಟದಲ್ಲಿದ್ದರೆ, ಬೀಜವು ಫಲವತ್ತಾದ ಕ್ಷೇತ್ರದ ಹುಡುಕಾಟದಲ್ಲಿರುತ್ತದೆ. ಅದಕ್ಕೇ ನನಗೆಂದೂ ಮದುವೆಯಾಚೆಗಿನ ಸಂಬಂಧಗಳು ತಪ್ಪೆನಿಸಿದ್ದೇ ಇಲ್ಲ. ನಿನಗೆ extra marital affaireಇದ್ದರೂ ನಾನು ಕೇಳಲು ಬರುವುದಿಲ್ಲ. ಆದರೆ ನೀನು ಯಾರೊಂದಿಗಾದರೂ ಭಾವನಾತ್ಮಕವಾಗಿ ಬೆಸೆದುಕೊಂಡಾಗ ಮಾತ್ರ ನಿನ್ನ ತೊರೆದು ಹೋಗುತ್ತೇನೆ ಎಂದು ಮದುವೆಗೆ ಮೊದಲೇ ಅವನಿಗೆ ಹೇಳಿದ್ದೆ. ಆದರೆ ಗಂಡು ಮತ್ತೊಂದು ಗಂಡಿನೊಡನೆ? ಅದು ವಿಕೃತಿ.

ಬರೀ ಇಷ್ಟೇ ಆಗಿದ್ದರೆ ಅದು ಬೇರೆ. ಆ ವಿಷಯ ತಿಳಿದ ರಾತ್ರಿ ಹೇಗೆ ಶುರುಮಾಡುವುದೆಂದು ತಿಳಿಯದೆ ನೀನು ಯಾವಾಗನಿಂದ ಹೀಗೆ ಎಂದು ಕೇಳಿದವಳಿಗೆ ಆಘಾತ ಕಾದಿತ್ತು. "ನನಗೆ ನೀನು ಬೇಕಿರಲಿಲ್ಲ. ನೀನು ಹೇಳುತ್ತಿಯಲ್ಲ; ದೈಹಿಕ ಮಾನಸಿಕ ಸಾಂಗತ್ಯ ಅವೆಲ್ಲಾ ಬುರುಡೆ ಅನಿಸುತ್ತೆ. ಅವನ ಜೊತೆ ಇದ್ದರೆ ಯಾರಿಗೂ ಸಿಗದ ಅನೂಹ್ಯವಾದ ಸುಖ ನನಗೆ ಸಿಗುತ್ತೆ. ನೀನು ಅತೃಪ್ತಿಯಿಂದ ನರಳಬಾರದಲ್ಲ ಅಂತ ನಿನಗೋಸ್ಕರ ಆಗಾಗ ನಿನ್ನ ಸೇರುತ್ತೇನೆ" ಅಂದ. ಇಷ್ಟು ದಿನ ನಿನಗೆ ಭಿಕ್ಷೆ ಹಾಕುತ್ತಿದ್ದೆ ಅನ್ನುತ್ತಿದ್ದಾನೆ ಅನ್ನಿಸಿ ಕುಸಿದುಹೋದೆ.

"ನಿನಗೋಸ್ಕರ" ಎಂಬ ಪದವನ್ನ ತಾನು ಮೊದಲಿನಿಂದಲೂ ಎಷ್ಟು ದ್ವೇಷಿಸುತ್ತಿದ್ದೆ. ಯಾರೂ ಯಾರಿಗೋಸ್ಕರವೂ ಏನನ್ನೂ ಮಾಡಬಾರದು. ಏನನ್ನೇ ಮಾಡಿದರೂ ಅದರಲ್ಲಿ ತನಗೆ ಖುಷಿ ಸಿಗದೆ ಬೇರೆಯವರಿಗೆ ಖುಷಿಯಾಗಲೆಂದು ಮಾಡುವುದು ಭಿಕ್ಷೆ ಹಾಕಿದಂತೆಯೇ. ನನಗೋಸ್ಕರ ಬಾ, ನನಗೋಸ್ಕರ ಊಟಮಾಡು, ನನಗೋಸ್ಕರ ಹಾಡು ಹೇಳು... ಊಹುಂ... ಸ್ಟುಪಿಡಿಟಿ. ಯಾರೂ ಯಾರಿಗೋಸ್ಕರವೂ ಏನನ್ನೂ ಮಾಡಬಾರದು. ಪ್ರೀತಿಯಂತೂ ಅಲ್ಲವೇ ಅಲ್ಲ, ಅವನ ಭಿಕ್ಷೆ ಬೇಕಾಗಿಲ್ಲ.

***

ಪರಿಚಿತರ ನಗು ಕಿರಿಕಿರಿಯನ್ನೂ ಅಥವಾ ಅಪರಿಚಿತರ ತುಟಿಯಂಚಿನ ಆಸೆ ಅಸಹ್ಯವನ್ನೂ ಉಂಟುಮಾಡುತ್ತಿಲ್ಲ ಎಂದು ಅರಿವಾದಾಗ ಹುಬ್ಬಳ್ಳಿಯ ಬಸ್‌ಸ್ಟಾಂಡಿನಲ್ಲಿ ಕುಳಿತ ಅವಳು ತೀರ ಕಣ್ಣಿಗೆ ಕಾಣುವಂತೆ ಕಂಪಿಸಿದಳು.
ಬಸ್ಸು ಬಂದು ನಿಂತಾಗ ಉಂಟಾದ ಗಡಿಬಿಡಿಗೆ ತನ್ನನ್ನು ಒಡ್ಡಿಕೊಳ್ಳದೆ ಎಲ್ಲರೂ ಹತ್ತಿದ ಮೇಲೆ ನಿಧಾನವಾಗಿ ಬಸ್ಸಿನ ಕಡೆ ಚಲಿಸಿದಳು. ಸ್ವಲ್ಪವೇ ಸ್ವಲ್ಪ ಹರಿದು ಬಣ್ಣಗೆಟ್ಟಂತೆ ಕಾಣಿಸುತ್ತಿದ್ದ ಕುಷನ್, ಕೊನೆಯಿಂದ ಮೂರನೆಯ ಸೀಟು ಎಷ್ಟೋ ವರ್ಷಗಳಿಂದ ಇವಳಿಗಾಗಿಯೇ ಕಾದು ಕೂತಿರುವಂತೆ ಕಂಡಿತು. ಕುಳಿತವಳ ಮನಸ್ಸು ಬಸ್ಸಲ್ಲಿ ಕೂತು ಸರಿಯಾಗಿ ನಾಲ್ಕು ವರ್ಷವಾಯಿತಲ್ಲ ಎಂದು ಎಣಿಸಿಕೊಂಡಿತು. ಜೊತೆ-ಜೊತೆಗೆ ಕಾರ್ ಡ್ರೈವರ್‌ನ ನೆನಪಾಗಿ ಹೊರಟ ನಿಟ್ಟುಸಿರಿನ ಮೇಲೆ, ನೆನಪಿನ ಮೇಲೆ ಸಿಟ್ಟಾದಳು.

ಇದ್ದಕ್ಕಿದ್ದಂತೆ ಮೀರಾ, ಅಕ್ಕಮಹಾದೇವಿಯವರ ಮೇಲೆ ಅಸಾಧ್ಯವಾದ ಹೊಟ್ಟೆಕಿಚ್ಚಾಯಿತು. ಇದ್ದವನನ್ನು ತೊರೆದು, ತಮ್ಮ ಸ್ಪರ್ಶಕ್ಕೆ ಸಿಗದೇಹೋದ ರಕ್ತ ಮಾಂಸಗಳಿಲ್ಲದ, ಬರೀ ಕಲ್ಪನೆಯಲ್ಲಿರುವ ವ್ಯಕ್ತಿಯನ್ನು ಅಷ್ಟು ತೀವ್ರವಾಗಿ ಹೇಗೆ ಪ್ರೀತಿಸಿದರು ಎಂದು ಗಲಿಬಿಲಿಗೊಂಡಳು.

ಬುದ್ಧಿಗೆ ತಿಳಿಯುವ, ಮನಸ್ಸಿಗೆ ಇಳಿಯುವ, ಕಲ್ಪನೆಗೆ ಹೊಳೆಯುವ ಯಾವುದೇ ವಿಷಯವು ಬರೀ ಬುದ್ಧಿ- ಮನಸ್ಸು ಕಲ್ಪನೆಗಳಿಗೇ ಸೀಮಿತಗೊಂಡಿದ್ದರೆ, ಅವುಗಳ ಅನುಭವ ಇಲ್ಲದಿದ್ದರೆ, ತಿಳಿದ, ಇಳಿದ ಹೊಳೆದ ವಿಷಯಗಳ ತೀವ್ರತೆ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಅದು ಪರಿಣಾಮಕಾರಿಯಾಗಬೇಕಾದರೆ ಇವೆಲ್ಲವುದರ ಜೊತೆಗೆ ದೇಹಕ್ಕೂ ಅದರ ಅನುಭವವಾಗಬೇಕು. ಉದಾಹರಣೆಗೆ, ಈಜು ಬರದವನಿಗೆ ತಾನು ನೀರಿಗೆ ಬಿದ್ದರೆ ಉಸಿರು ಕಟ್ಟುತ್ತೆ, ಸತ್ತು ಹೋಗುತ್ತೇನೆ ಎಂದು ತಿಳಿದಿರುತ್ತದೆ. ಉಸಿರು ಕಟ್ಟಿ ಸಾವನ್ನು ಸಮೀಪಿಸುವ ಕಲ್ಪನೆಯಿರಬಹುದು. ಆದರೆ ಒಮ್ಮೆ ಅವನು ನೀರಿಗೆ ಬಿದ್ದು ಸಾವನ್ನು ಹತ್ತಿರದಿಂದ ಕಂಡು ಬದುಕಿಕೊಂಡಾಗ ಸಿಕ್ಕ ಅನುಭವವಿರುತ್ತದಲ್ಲ; ಅದು ಬುದ್ಧಿ, ಮನಸ್ಸು, ಕಲ್ಪನೆಗಳ ಮೇಲೆ ಉಂಟುಮಾಡುವ ಪರಿಣಾಮ ಅನನ್ಯವಾದುದು. ತೀರಾ ದೈಹಿಕವಾಗಿ ಮನಸ್ಸು, ಬುದ್ಧಿ, ಕಲ್ಪನೆಗಳಿಗೆ ಇಳಿದ ಅನುಭವಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ.

ಸಾವಿರ ಬಾರಿ ನಿನ್ನ ಪ್ರೀತಿಸುತ್ತೇನೆಂದು ಪರಿಪರಿಯಾಗಿ ಹೇಳಿದ್ದರೂ ಅರ್ಥಮಾಡಿಕೊಳ್ಳಲಾಗದ ಹುಡುಗನಿಗೆ ಇವಳು ಕೊಡುವ ಮುತ್ತೊಂದು ಪ್ರೀತಿಯ ದ್ಯೋತಕದಂತೆ, ದೃಢೀಕರಣದಂತೆ ಕಾಣುತ್ತದೆ. ಅನಿಶ್ಚಿತತೆಯಲ್ಲಿ ಹೊರಳಾಡುವ ಹುಡುಗ ನೆಮ್ಮದಿಯ ನಿಟ್ಟುಸಿರಾಗುತ್ತಾನೆ ಎನ್ನುವ ತನ್ನ ವಾದಕ್ಕೆ ಅಪವಾದವೆಂಬಂತೆ ಮೀರಾ, ಅಕ್ಕ ಕಂಡರು. ಇದನ್ನು ಮೀರಿದಂತೆ ಅವರನ್ನು ಆಳುತ್ತಿದ್ದುದು ಯಾವುದು? ಭಕ್ತಿಯಾ? ಭಯವ? ಎಂದು ಕಸಿವಿಸಿಯಾಯಿತು. ಬರೀ ಭಕ್ತಿಯೆಂದು ಮನಸ್ಸು ಒಪ್ಪಿಕೊಳ್ಳಲೇ ಇಲ್ಲ.
ಇವನ ಪ್ರೀತಿ ಇಂದು ಇದ್ದು ನಾಳೆ ಸಾಯುವಂಥದ್ದು. ಅವನನ್ನು ಪ್ರೀತಿಸಿದರೆ ನಾವು ಸಾಯುವವರೆಗಾದರೂ ಪ್ರೀತಿಯನ್ನು ಕಳೆದುಕೊಳ್ಳುವ ಭಯವಿಲ್ಲವೆಂದುಕೊಂಡು ಇದ್ದವರನ್ನು ನೂಕಿ ಕಲ್ಪಿಸಿಕೊಂಡು ಪ್ರೀತಿಸಿದರು. ಅವರಲ್ಲೂ ಇದ್ದಿದ್ದು ಎಲ್ಲರಿಗೂ ಸಹಜವಾದ ಪ್ರೀತಿಸಿದವರನ್ನು, ಪ್ರೀತಿಯನ್ನು ಕಳೆದುಕೊಳ್ಳುವ ಭಯ ಎನಿಸಿತು. ತನ್ನ ಜೀವನದ ಇಂಥಾ ಗಳಿಗೆಯಲ್ಲೂ ಆಲೋಚನೆಗಳು ಹುಟ್ಟುತ್ತಿವೆಯಲ್ಲಾ ಎಂದು ಅವಳ ಮನಸ್ಸು ಖುಷಿಪಡುವ ಹೊತ್ತಿಗೆ ಅವಳು ಕುಳಿತಿದ್ದ ಬಸ್ಸು ದಾವಣಗೆರೆಯನ್ನು ದಾಟಿ ಶಿವಮೊಗ್ಗದ ಕಡೆಗೆ ಹೊರಳುತ್ತಿತ್ತು.

***

ಆಂಜನೇಯನ ಗೂಡಲ್ಲಿ ಹಚ್ಚಿಟ್ಟ ದೀಪ ಸಣ್ಣಗೆ ಕಂಪಿಸುತ್ತಿತ್ತು. ಮೇಲೆ ಲಕ್ಷ್ಮಿ ಜನಾರ್ಧನನ ಫೋಟೋ. ಕಾವೇರತ್ತೆಯ ಕೋಣೆಯ ಕಡೆಗಿದ್ದ ಜಾಲರಿ ಬಾಗಿಲ ತೂತುಗಳಲ್ಲಿ ಜೇಡರ ಬಲೆ, ಆ ಬಲೆಯಲ್ಲಿ ಸಿಕ್ಕು ಸ್ತಬ್ಧವಾಗಿ ರೂಪುಕಳೆದುಕೊಂಡು ಗುರುತಿಸಲಾರದಂತಾಗಿದ್ದ ಹುಳು, ಜಾಲರಿ ಬಾಗಿಲ ಹಿಂದೆ ಉದ್ದಕ್ಕೆ ಒಂದಿಂಚೂ ಬಿಡದಂತೆ ನೆಲದಮೇಲೆ ಹರಡಿದ ಅಡಿಕೆ... ಎಲ್ಲವೂ ಮೌನವನ್ನೇ ಆವಾಹನೆ ಮಾಡಿಕೊಂಡಂತೆ ಕಂಡವು.

ತೊಟ್ಟಿಯ ಬಳಿ ಬಿಸಿಲಿಗೆ ಒಣಗಲೆಂದು ಚೀಲದ ಮೇಲೆ ಹರಡಿದ್ದ ಅಡಿಕೆ ಹೋಳುಗಳ ಮೇಲೆ ಕೈಯಾಡಿಸುತ್ತಾ ಕೂತ ಕನಕಲಕ್ಷ್ಮಿಗೆ ಬೆಳಿಗ್ಗೆ ಸಣ್ಣಗೆ ಶುರು ಆಗಿದ್ದ ಬಿಸಿಲು ಹೀಗೇ ಏಕಾಏಕಿ ಹಾರಿಹೋಗಿದ್ದು ಏಕೆಂದು ಆಶ್ಚರ್ಯವಾಯಿತು. ತೊಟ್ಟಿಯ ತೆರೆದು ಸೂರಿನಿಂದ ನೋಡಿದಳು. ಕಪ್ಪು ಮೋಡಗಳು... ಅದ್ಯಾಕೆ ಹಾಗೆನಿಸಿತ್ತೋ ಏನೋ. ಮುಗಿಲು ಅವುಡುಗಚ್ಚಿ ತಣ್ಣೀರನ್ನು ತಡೆಹಿಡಿದಿದೆ. ಭುವಿಗೆ ತನ್ನ ಸಂಕಟವನ್ನು ಭರಿಸುವ ಶಕ್ತಿಯಿಲ್ಲ ಎನ್ನುವಂತೆ ಅಳುವನ್ನು ತಡೆಹಿಡಿದುಕೊಂಡಂತೆ ಕಂಡಿತು, ಗಂಡನನ್ನು ನೋಡಿದರು. ಗಂಡ ಜಗತ್ತಿನ ಪರಿವೇ ಇಲ್ಲದಂತೆ ಪೇಪರಿನಲ್ಲಿ ಮುಳುಗಿಹೋದವನಂತೆ ಕಂಡ. ಅವನು ಕೂತಿರುವ ಕಪ್ಪನೆಯ ಕುರ್ಚಿಯೂ ಪೇಪರ್ ಓದುತ್ತಿದ್ದೆಯೋ ಏನೋ ಎಂಬ ವಿಲಕ್ಷಣವಾದ ಅನುಮಾನವಾಯಿತು ಕನಕಲಕ್ಷ್ಮಿಗೆ.

ಬೀದಿಯ ತಿರುವಿನಲ್ಲಿ ಆಟೋ ಬಂದ ಸದ್ದಾಯಿತಲ್ಲಾ... ಅಂದುಕೊಳ್ಳುವ ಹೊತ್ತಿಗೆ ಪ್ರೊ.ಪಾಂಡುರಂಗ ಡೆಕ್ಕನ್ ಹೆರಾಲ್ಡ್‌ನ ಸಂಪಾದಕೀಯ ಪುಟ ಓದುತ್ತಿದ್ದರು. ಮೂಲೆ ಮನೆ, ಸಾಹುಕಾರ್ ಮನೆ, ಎಂಜಿನಿಯರ್ ಮನೆ ಹಾದು ತಮ್ಮ ಮನೆ ಮುಂದೆ ನಿಂತ ಆಟೋ ಸದ್ದು, ಅವನ ಕಿವಿಗಳಲ್ಲಿ ದಾಖಲಾಗಿ ಆಟೋದಲ್ಲಿ ಬಂದವರು ತಮ್ಮ ಮನೆಗೆ ಬಂದವರೋ ಅಥವಾ ದೇವಕಜ್ಜಿಯ ಮನೆಗೆ ಬಂದವರೋ ಎಂದು ಅನುಮಾನಪಡುತ್ತಿರುವಾಗಲೇ ತನ್ನ ಮನೆ ಕಡೆ ತಿರುಗಿದ್ದ ಹೆಜ್ಜೆಸಪ್ಪಳ ಇನ್ನೂ ಸ್ಪಷ್ಟವಾಗಿ ಇದು ಮೊದಲನೆಯ ಮಗಳು ನಡೆಯುವ ರೀತಿ ಅಲ್ಲವೇ... ಎಂದು ಆದ ಆಶ್ಚರ್ಯವು, ಬರುವ ಮೊದಲು ಒಂದು ಫೋನಾದರೂ ಮಾಡಿ ಬರುತ್ತಿದ್ದಳಲ್ಲಾ.. ಕಾರಲ್ಲಿ ಬರದೆ ಹೀಗೇ ಆಟೋದಲ್ಲಿ ಬಂದಿದ್ದಳಲ್ಲಾ... ಎಂದು ಅನುಮಾನವಾಗಿ ಪರಿವರ್ತನೆಯಾಗುವ ಮೊದಲೇ ಅವಳು ಒಳಗೆ ಬಂದು ತಮ್ಮನ್ನ ನೋಡಿದ ರೀತಿ, ಉಫ್... !! ಎಂದು ಹೆಗಲಿನ ಭಾರವನ್ನು ಕೆಳಗಿಳಿದ ಪರಿ, ಅವಳ ಕಣ್ಣುಗಳಲ್ಲಿದ್ದ ತಣ್ಣಗಿನ ನಿರುಮ್ಮಳತೆಯು ಅವಳು ಎಲ್ಲಾ ಭಾರವನ್ನು ನೀಗಿಕೊಂಡಂತೆ ಜೀವನಪರ್ಯಂತ ಇಲ್ಲೇ ಇರಲು ಬಂದವಳಂತೆ ಭಾಸವಾಯಿತು. ಇದ್ಯಾವುದರ ಪರಿವೆಯೂ ಇಲ್ಲದಂತೆ ಅಡಿಕೆ ಹೋಳುಗಳ ಮೇಲೆ ಕೈಯಾಡಿಸುತ್ತಾ ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದಳಲ್ಲಾ... ಅವಳಿಗೆ ಇದನ್ನೆಲ್ಲ ಹೇಗೆ ವಿವರಿಸುವುದೆಂಬ ಗಾಬರಿಯಲ್ಲಿ ಹೆಂಡತಿಯ ಕಡೆ ನೋಡಿದರು. ಆ ಎರಡೂ ಹೆಣ್ಣು ಕಣ್ಣುಗಳಲ್ಲಿ ನೆಲೆಯಾಗಿದ್ದ ಸಮಾಧಾನವೂ ಪ್ರಶ್ನೆಗಳನ್ನು ಮೀರಿ ಯಾವ ಉತ್ತರದ ಹಂಗಿಲ್ಲದೆ ನಿನ್ನ ಸಲಹಬಲ್ಲೆ ಎನ್ನುವಂತೆ ಇನ್ನೆರಡು ಹೆಣ್ಣುಕಣ್ಣುಗಳನ್ನು ನೋಡುತ್ತಾ ದೃಢತೆಯನ್ನು ಸಾರಿದ್ದವು. ಆಕಾಶದಲ್ಲಿ ಮಿಂಚು. ತಂದೆ, ಮಗಳ ಕಡೆ ನೋಡಿದರು ಅಲ್ಲಿ ಮಳೆ ಸದ್ದಿಲ್ಲದೆ ಸುರಿಯತೊಡಗಿತ್ತು.

(ದಿ ಸಂಡೇ ಇಂಡಿಯನ್ ನಲ್ಲಿ ಪ್ರಕಟವಾದ ನನ್ನ ಕಥೆ)

Wednesday, September 17, 2008

ನಾನೂ ಬರೆಯುತ್ತೇನೆಂಬ ಸ್ವಗತ

(ನನ್ನಪ್ಪ ಬರ್ದಿದ್ ಕವಿತೆ ಇದು. ಎಷ್ಟೊಂದು ಬರೆದರೂ ಯಾರಿಗೂ ತೋರಿಸದೆ ಅಮ್ಮನಿಗೆ ಮಾತ್ರ ಓದಿಹೇಳಿ ಸುಮ್ಮನಾಗುತ್ತಿದ್ದರು. ಓದೋದೆಂದ್ರೆ ತುಂಬ ಇಷ್ಟ ಅಪ್ಪಂಗೆ. ಇತ್ತೀಚೆಗೆ ನಾನೂ ಅಲ್ಪಸ್ವಲ್ಪ ಬರೀತಿನಿ ಅದನ್ನ ಅಪ್ಪಿತಪ್ಪಿ ಪೇಪರಿನವರೂ ಹಾಕುತ್ತಾರೆ ಅಂತ ಗೊತ್ತಾದಮೇಲೆ ನನಗೂ ಓದಿ ಹೇಳಲು ಶುರು ಮಾಡಿದ್ದಾರೆ. ಅವರು ಓದಿ ಹೇಳುವಾಗ ಕದ್ದು ರೆಕಾರ್ಡ್ ಮಾಡಿ ಆಮೇಲೆ ಅವರಿಂದಲೇ ಒಪ್ಪಿಗೆ ಪಡೆದು ಇಲ್ಲಿ ಹಾಕುತ್ತಿರುವೆ. ಪ್ರೀತಿಯಿಂದ ಓದಿಕೊಳ್ಳುತ್ತೀರೆಂಬ ಭರವಸೆಯಿಂದ...)

ನಾನೂ ಬರೆಯುತ್ತೇನೆ
ಕೇಳಿಕೊಂಡೆ ನನಗೆ ನಾನೇ..
ಏನನ್ನ?
ಕವನವನ್ನೇ ಕಾವ್ಯವನ್ನೇ

ಇಲ್ಲ ಇಲ್ಲ
ಗುರು ಲಘು ಮಾತ್ರಾಗಣ ಏನನ್ನೂ ನಾ ಅರಿಯೆ
ಚಂದಸ್ಸು-ಈ ಪದ ಕೇಳಿರುವೆ ಅದೇನೆಂದರಿಯೆ
ಗೇಯತೆ, ಶ್ಲೇಷೆ,ಉಪಮೆ ಇದ್ಯಾವುದರ ತಿಳಿವಿಲ್ಲ ಎನಗೆ
ನ ಬರೆಯಲಾರೆ ಕಾವ್ಯ ಕವನವನ್ನ

ಮತ್ತೆನು ಕಥೆಯೋ
ಇಲ್ಲ ಇಲ್ಲ
ನ ಬರೆಯುವುದರಲ್ಲಿ ಯಾವ ಕಥೆಯೂ ಇಲ್ಲ
ಓದಿದ್ದೇನೆ ಮಾಸ್ತಿಯವರ ಕಥೆಗಳನ್ನ
ಕಾರಂತ ಅನಂತಮೂರ್ತಿ
ಲಿಯೋ ಟಾಲ್ಸ್ ಟಾಯ್ ಅವರ ಕಥೆಗಳನ್ನ

ನ ಬರೆಯುವುದರಲ್ಲಿ ಅಂಥ ವಸ್ತುಗಳೇ ಇಲ್ಲ
ಮತ್ತೇನು ಬರೆಯುವೆ?
ಪ್ರಭಂದವನ್ನೆ? ಇಲ್ಲ ಇಲ್ಲ
ಮೂರ್ತಿರಾಯರ ಪ್ರಭಂಧ ಒದಿದ್ದೇನೆ
ಪಾವೆಂ ಅಂತೆಯೇ ಅನೇಕರದ್ದು
ಯಾವುದೋ ವಸ್ತು ಹಿಡಿದು
ಏನೆಲ್ಲಾ ಬರೆಯುತ್ತಾರವರು
ವಿಷಯ ಜ್ನಾನವಿಲ್ಲ ಎನಗೆ
ನಾ ಬರೆಯುವುದು ಪ್ರಬಂಧವಲ್ಲ.

ನನಗೆ ನಾನೇ ಮತ್ತೆ ಕೇಳಿಕೊಂಡೆ,
ನಾ ಬರೆಯುವುದೇನು?
ಅಡ್ಡಲಾಗಿ ಬರೆಯುತ್ತಾ ಹೋಗುವ
ಗದ್ಯವ ಕತ್ತರಿಸಿ ಕತ್ತರಿಸಿ
ಉದ್ದಕೆ ಬರೆಯುತ್ತೇನೆ
ನವ್ಯ, ನವೋದಯ ಇದ್ಯಾವುದರ
ಅರ್ಥ ಅರಿಯದ ನಾನು
ನನ್ನದು ನವೀನ ಎಂದುಕೊಳ್ಳುತ್ತೇನೆ
ಪ್ರಥಮ ಶ್ರೋತ್ರುವಾದ ನನ್ನಾಕೆ
'ಇನ್ನೆಷ್ಟು ದಿನ ಈ ಶಿಕ್ಷೆ' ಎಂದು
ಕೇಳಿದಾಗ ಸಿಟ್ಟು ಸಿಡಿಮಿಡಿಗೊಂಡು
ಬರೆದಿದ್ದ ಪರಪರನೆ ಹರಿದು ಎಸೆಯುತ್ತೇನೆ
ನಾನು ಬರೆದ್ದಿದ್ದೇನೆಂಬುದಕ್ಕೆ
ಸಾಕ್ಷಿಯೇ ಉಳಿಸುವುದಿಲ್ಲ ನಾನು.

Thursday, September 11, 2008

ಸಾವಿನ ಹುಟ್ಟು......

ಸಾವು ಹುಟ್ಟಿತು! ಹುಟ್ಟುತ್ತಲೇ ಅಳುವ ಮೂಲಕ ತನ್ನ ಹುಟ್ಟಿನ, ಜೀವದ ಮುಖವಾಡವನ್ನು ಧರಿಸಿತು. ಸಾವಿನ ಹುಟ್ಟಿಗೆ ಎಲ್ಲರೂ ಸಂಭ್ರಮಿಸಿದರು, ಸಿಹಿ ಹಂಚಿದರು. ಸಾವಿಗೆ ಇದು ತನ್ನ ಕಂಡಲ್ಲ ತನ್ನ ಮುಖವಾಡವನ್ನು ಕಂಡು ಪಡುತ್ತಿರುವ ಸಂಭ್ರಮವೆಂದು ತಿಳಿಯಿತು. ಅದಕ್ಕೆ ಜೀವದ ಮುಖವಾಡಕ್ಕೆ ಮತ್ತಷ್ಟು ಬಿಗಿಯಾಗಿ ಆತುಕೊಂಡಿತು. ಹಾಲು ಕುಡಿಯಿತು, ನಕ್ಕಿತು, ಅತ್ತಿತು ತನ್ನ ಎತ್ತಿ ಆಡಿಸುವವರಿಗೆ ಮೊಗದಷ್ಟು ಅಪ್ಪಿಕೊಂಡಿತು.


ಮೊದಲನೆ ಹುಟ್ಟುಹಬ್ಬವಂತೆ. ಚಿರಾಯುವಾಗು ಎಂದು ಹಿರಿಯರು ಹರಸಿದರು. ಮುಖವಾಡಕ್ಕಲ್ಲ ತನಗೇ ಹರಸಿದ್ದು ಎಂಬ ಅರಿವಿನಿಂದ ಸಾವು ಹಿರಿಹಿರಿ ಹಿಗ್ಗಿತು.


ತೊದಲು ನುಡಿಯಿತು, ಮಾತಾಯಿತು, ಸಾವು ಬೆಳೆಯಿತು. ಅಕ್ಷರ ಕಲಿಯಿತು, ಲೋಕವ ತಿಳಿದುಕೊಂಡೆ ಎಂದು ಮುಖವಾಡ ಬೀಗಿತು. ಅದೇ ಅಹಂಕಾರದಲ್ಲಿ ಏನೇನೋ ಮಾಡಿತು. ಕೂಡಿತು, ಕಳೆಯಿತು, ಅಳೆಯಿತು, ಸುರಿಯಿತು.


ಮುಖವಾಡಕ್ಕೆ ಮತ್ತೊಂದು ಮುಖವಾಡವನ್ನು ತಂದು ಕಟ್ಟಿದರು. ಮುಖವಾಡಗಳೆರಡೂ ಸೇರಿ ಮತ್ತೊಂದಷ್ಟು ಮುಖವಾಡಗಳಿಗೆ ಜನ್ಮ ನೀಡಿದವು.ಒಮ್ಮೆ ಗಹಗಹಿಸಿ ನಕ್ಕು ಮತ್ತೊಮ್ಮೆ ಬಿಕ್ಕಳಿಸಿ ಅತ್ತಿತು. ಒಮ್ಮೆ ರೋಷಾವೇಷದಿಂದ ಯಾರಮೇಲೋ ಏರಿಹೋಗಿ ಇನ್ನೊಮ್ಮೆ ಅಟ್ಟಿಸಿಕೊಂಡು ಬಂದವರಿಂದ ದೂರ ಓಡಿ ಬಳಲಿತು ಬಲಿಯಿತು.


ಮುಖವಾಡಕ್ಕೆ ತಾನು ಮುಖವಾಡವೆಂಬುತು ಮರತೇ ಹೋದಂತಿತ್ತು. ಮುಖವಾಡ ಕಳಚಿಕೊಂಡವರ ಕಂಡು ಮರುಗಿತು. ತಾನು ಶಾಶ್ವತವೆಂದುಕೊಂಡಿತು.

ಸಾವು ಹುಟ್ಟಿ ಬಹಳಷ್ಟು ವರ್ಷಗಳಾಯಿತು. ಯಾರಿಗೂ ಅದು ಮುಖವಾಡವೆಂದು ಗೊತ್ತಾಗಲೇ ಇಲ್ಲ. ಮುಖವಾಡವನ್ನೇ ನಿಜವೆಂದುಕೊಂಡು ಸುತ್ತ ಸಂಸಾರ ಹೂಡಿದರು, ಸುಖಿಸಿದರು. ತನ್ನ ಮುಖವಾಡದ ಪ್ರತಿಯೊಂದು ಕೃಯೆಗೂ ಎಲ್ಲರೂ ಅಷ್ಟು ಹರ್ಷಿಸುವುದು ನೋಡಿ ಸಾವಿಗೆ ಮುಖವಾಡದ ಮೇಲೆ ಹೊಟ್ಟೆಕಿಚ್ಚಾಯಿತು. ನಿಜವಾಗಿ ಇದೆಲ್ಲಾ ತನ್ನ ಹಕ್ಕು ಎಂದುಕೊಂಡಿತು. ಮುಖವಾಡವನ್ನು ಕಿತ್ತೊಗೆಯಿತು!

ಮುಖವಾಡವನ್ನು ಅದು ಕಿತ್ತೊಗೆದ ರಭಸಕ್ಕೆ, ಸುತ್ತಲಿನವರೆಲ್ಲಾ ಸ್ಥಬ್ಧರಾದರು. ಮೂಕರಾದರು.
ಮುಖವಾಡಕ್ಕೇ ಬೆಲೆಕೊಡುವ ಈ ಲೋಕವ ಕಂಡು ಸಾವು ಅಚ್ಚರಿಪಟ್ಟಿತು. ಮತ್ತೆಲ್ಲೊ ಮುಖವಾಡವನ್ನು ಧರಿಸಿ ಮತ್ತೆ ಹುಟ್ಟಿತು!!

Sunday, August 31, 2008

ನಿನ್ನ ಕುರಿತುಉಕ್ಕಿ ಹರಿಯಲು
ತನಗೆ ಮಾತ್ರ ಸಾಧ್ಯ
ಎಂದು ಅಹಂಕಾರ ಪಡುವ
ನನ್ನ ನಲ್ಲ
ಸದಾ ಭೊರ್ಗರೆಯುವ ನದಿಯನ್ನು
ಹೆಣ್ಣೆಂದು ಕರೆದು
ಪ್ರೀತಿಸಿದಅವನ ಹಾದಿ ಕಾಯುವಾಗ
ಒಂದೊಂದು ಕ್ಷಣವೂ ಒಂದು
ಯುಗದಂತೆ ಅಂದುಕೊಳ್ಳುತ್ತಿರುವಾಗಲೇ
ಕೆಲವೇ ಕ್ಷಣಗಳ
ಭೇಟಿಗಾಗಿ ಯುಗಗಟ್ಟಲೆ ಕಾದ
ಶಬರಿಯ ನೆನಪಾಗಿ
ನಾಚಿಕೆಯಿಂದ ತಲೆ ತಗ್ಗಿಸಿದೆ..ಶಬರಿಯ ಸಂಯಮವಿಲ್ಲ
ಅಹಲ್ಯೆಯ ಆಸೆಗಳಿಲ್ಲ
ನನಗೆ
ಅವನ ಹಾದಿ ಕಾಯುವ
ಸುಖ ಸುಕ್ಕುಗಟ್ಟುತ್ತಿದೆ
ಕಾದ ಹಾದಿಯಲ್ಲಿ ಮಿಂಚಿದ ಕನಸುಗಳು
ಮತ್ತೆ ಕರೆಯುತ್ತಿವೆ
ತಿರುಗಿ ಹೋಗಲಾರದ
ನನ್ನ ಅಸಹಾಯಕತೆಗೆ
ಪಾತಿವ್ರತ್ಯದ ಹೊದಿಕೆ

Wednesday, August 13, 2008

ಕುಂತಿಯ ನೆನೆಯುತ್ತಾ ಕುಂತು..

-1-
ದೂರ್ವಾಸನ ಬೆಚ್ಚನೆಯ ತಬ್ಬುಗೆಯನ್ನು
ನೆನಪಿಸಿಕೊಳ್ಳುತ್ತಾ ಕೂತವಳಿಗೆ
ಇವನಿಗೆ
ತಬ್ಬಿಕೊಳ್ಳುವುದಷ್ಟೇ ಸಾಧ್ಯ
ಎಂದು ಅರಿವಾದಾಗ
ಮನಸ್ಸಿನಲ್ಲಿ
ಇಂದ್ರ ಮರುತ್ತರು
ಹಾದು ಹೋದರು ಎನ್ನುವುದು ಶುದ್ಧ ಕಲ್ಪನೆ.
-2-
ಗಂಗೆಯಲಿ ತೇಲಿ ಬಿಟ್ಟವಳಿಗೆ
ಆ ನೆನಪೇ ಪೂರ್ವ ಜನ್ಮದ
ಶಾಪ
ವರ
ಪಡೆದು ಬಂದಳು
ಗಂಗೆಯಲಿ ನಿಂದವನ ಬಳಿ.
ಅಂದೇ ಮುಳುಗಿಸಿದರಾಗಿತ್ತು.
-3-
ಅವನು ಅವಳಿಗಾಗಿ ಮತ್ತೆ
ಅನುಮತಿ ಕೇಳಲು ಬಂದ.
ಸಾಕೆಂದು ಮುಖ ತಿರುಗಿಸಿದಳು
ಇವಳು
ಒಪ್ಪಿದ್ದರೆ
ಅವನು ಸಾಯುತ್ತಲೇ ಇರಲಿಲ್ಲ,
ಅವಳೂ.
-4-
ಅವನಷ್ಟು ಕರೆದರೂ ಹೋಗದೆ
ಉಳಿದದ್ದು ಇವನಿಗಾಗಿಯಂತೆ
ಇವನೇ ಹೋದಾಗ ಅವಳು
ಹೋದದ್ದೇಕೆಂದು
ಕೇಳಿದರೆ, ಕಂಡ ಕಂಡವರು
ಇವನು ಹೋಗಲು ಅವಳೇ
ಕಾರಣವೆಂದು ಆಡಿಕೊಂಡರು.
-5-

ಹಿಡಂಬಿಯ ಪ್ರೀತಿ ತಿಳಿಯದೇ
ಹೋದ
ಕುಂತಿ
ದ್ರೌಪದಿಗೆ ಐದು ಗಂಡಂದಿರ
ಪ್ರೀತಿ
ಕೊಡಿಸಿದಳಂತೆ!

Friday, July 18, 2008

ನಿನ್ನ ಚಾರ್ಲೀ ಸೆಂಟೂ ಅವನ ಪಿಜ್ಜಾ ಬರ್ಗರ್ರೂ


ನಿನ್ನ ಪತ್ರ ಓದಿದೆ. ಹುಡುಗ ಇಷ್ಟ ಆಯ್ತು ಬಹಳ ಗಂಭೀರವಾಗಿ, ಚೊಕ್ಕವಾಗಿ ನಿಂಗೇನನ್ನಿಸುತ್ತೋ ಅದನ್ನು ಹೇಳಿದ್ದೀಯ. ಈಗಿನ ಕನ್ನಡ ಸಾಹಿತ್ಯದ ಬಗ್ಗೆ ನೀನು ಇಷ್ಟೆಲ್ಲಾ ತಲೆಕೆಡಿಸಿಕೊಂಡಿದ್ದೀಯ ಅಂತ ಗೊತ್ತಾದಾಗ ಸುಮ್ಮನೆ ಖುಷಿಯಾಯಿತು. It was witty and sarcastic.

ಮೊದಲು ನಾನು ನಿಂಗೆ ಕೊಟ್ಟ ಪುಸ್ತಕದ ಬಗ್ಗೆ ಮಾತಾಡೋಣ. ನಾನು ನಿಂಗೆ ಆ ಪುಸ್ತಕ ಕೊಡುವಾಗ ಹೇಳಿದ್ದು ‘ಚೆನ್ನಾಗಿದೆ ಓದು’ ಅಂತಲ್ಲ. ನಂಗೆ ಇಷ್ಟ ಆಯ್ತು ಓದು ಅಂತ. ಈಗ ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಅನ್ನೋದಿದೆಯಲ್ಲ it's a generalised comment. ಇಂಥ ಕಾಮೆಂಟುಗಳು ನನಗೆ ಅರ್ಥ ಆಗಲ್ಲ. ನನಗೆ ಗೊತ್ತಾಗೋದು “ನಂಗೆ ಇಷ್ಟ ಆಯ್ತು" ಅಥವ ‘ಇಷ್ಟ ಆಗ್ಲಿಲ್ಲ’ ಅನ್ನೋದು. ಚೆನ್ನಾಗಿದೆ ಅಥವ ಚೆನ್ನಾಗಿಲ್ಲ ಒಳ್ಳೆಯವನು ಅಥವ ಕೆಟ್ಟವನು ಅನ್ನೋದು ಎಷ್ಟೊಂದು ಸಾಪೇಕ್ಷವಾದದ್ದು ಅಲ್ಲವೆ? ಕೆಲವರಿಗೆ ಇಷ್ಟವಾದದ್ದು ಇನ್ನು ಕೆಲವರಿಗೆ ಇಷ್ಟವಾಗದೆ ಇರಬಹುದು. ಕೆಲವರಿಗೆ ಒಳ್ಳೆಯವನು ಅನಿಸಿದ್ದವನು ಇನ್ನೊಬ್ಬರಿಗೆ ಕೆಟ್ಟವನಾಗಿರಬಹುದು.

ವಿಷಯಕ್ಕೆ ಬರೋಣ. ನಾ ಕೊಟ್ಟ ಪುಸ್ತಕವಿದೆಯಲ್ಲ ಅದು ನಾನು ಹುಟ್ಟಿ ಬೆಳೆದ ಪರಿಸರಕ್ಕಿಂತ ಬಹಳ ಭಿನ್ನವಾದ ಬೇರೆಯದೇ ಆದ ಪರಿಸರದಲ್ಲಿ ನಡೆಯುತ್ತೆ. ಎಲ್ಲೆಲ್ಲೂ ನಡೆಯುವುದು ಅಂಥದೇ ಕಥೆಗಳು. ಅದನ್ನು ಹೇಳುವ ರೀತಿ, ಅದು ನಡೆಯುವ ಪರಿಸರ, ಅದು ನಡೆದ ಕಾಲಘಟ್ಟ ಪ್ರತಿಯೊಂದು ಕಾಲಘಟ್ಟದಲ್ಲೂ ಅಂಥ ಘಟನೆಗಳಿಗೆ ಅನುಭವಗಳಿಗೆ ಜನ ಹೇಗೆ ಸ್ಪಂದಿಸುತ್ತಿದ್ದರು ಎಂಬುದು ಮುಖ್ಯ ಆಗತ್ತೆ. ಅವರು ಬರೆದಿದ್ದು ಮೂವತ್ತು ವರ್ಷದ ಹಿಂದೆ ನಡೆದಿರಬಹುದಾದ ಕಥೆಯನ್ನು. ಅಲ್ಲಿ ಪರಿಸ್ಥಿತಿಗಳು ಆಗ ಹೇಗಿದ್ದವು ಎಂಬುದನ್ನು. ಅವರು ಎಷ್ಟು ಸಹಜವಾಗಿ ಬಿಂಬಿಸುತ್ತಾರೆಂದರೆ ಸುಮ್ಮನೆ ಇಷ್ಟ ಆಗುತ್ತಾ ಹೋಯಿತು. ಹೊಸದೇನಿದೆ ಅಂದೆಯಲ್ಲ ಹುಡುಗ, ಹೊಸತು ಪದವನ್ನು ಹೇಗೆ ಡಿಫೈನ್ ಮಾಡ್ತಿಯ ನೀನು? ನನಗೆ ಆ ಲೇಖಕರು ತೋರಿಸಿದ ಜಗತ್ತಿದೆಯಲ್ಲ ತುಂಬ ಹೊಸತದು.
ಆ ಕಾದಂಬರಿಯ ಮೂಲಕ ಅದೇ ಜಾಗದ ಬಗ್ಗೆ ಜ್ಞಾನಪೀಠಿಯೊಬ್ಬರು ಬರೆಯುತ್ತಿದ್ದಾಗ ಇದ್ದ ಪರಿಸರಕ್ಕೂ ಇವರು ಬರೆದು ಕೈಗಿತ್ತಾಗ ನಾನು ಕಂಡ ಪರಿಸರಕ್ಕೂ ಎಷ್ಟೊಂದು ವ್ಯತ್ಯಾಸವಾಗಿದೆ ಅನಿಸಿತು ಗೊತ್ತಾ? ನಾವು ಈಗ ಹೋಗಿ ನೋಡಿದರೆ ನಮಗೆ ಅಲ್ಲಿ ಇನ್ಯಾವುದೋ ಪರಿಸರ ಕಾಣಿಸೀತು. ಬದಲಾದ ಕಾಲಘಟ್ಟಗಳಲ್ಲಿ ಅಲ್ಲಿನ ಸಮಾಜ ಪರಿಸರ ಹೇಗಿದ್ದವು ಎಂಬುದು ಹೀಗೇ ದಾಖಲಾಗಬೇಕು. ಅಲ್ವಾ

ಅಂಕಣಕಾರರೊಬ್ಬರು ಅಡಿಗರು ಹೀಗಂದರು ಬೇಂದ್ರೆ ಹಾಗಂದರು ಟೆನಿಸನ್ ಹೀಗೆ ಹೇಳುತ್ತಾನೆ, ವರ್ಡ್ಸ್ ವರ್ಥ್ ಹಾಗನ್ನುತ್ತಾನೆ ಎಂದು ಹೇಳಬೇಕಾದರೆ ಅವರು ಎಷ್ಟು ಓದಿಕೊಂಡಿರಬೇಕು ಎಂಬ ಕಲ್ಪನೆ ಇರುತ್ತೆ ಅಲ್ಲವ ನಿನಗೆ. ಬಹಳಷ್ಟು ಜನಕ್ಕೆ ಅಷ್ಟು ಅಗಾಧವಾಗಿ ಓದಲು ಸಮಯವಿರುವುದಿಲ್ಲ ಅಥವ ಇರುವ ಸಾಹಿತ್ಯ ಸಾಗರದಲ್ಲಿ ಯಾವ ನದಿಯ ನೀರು ಕುಡಿಯಬೇಕೆಂದು ತಿಳಿದಿರುವುದಿಲ್ಲ. ಎಲ್ಲರೂ ಸಾಹಿತ್ಯದ ವಿದ್ಯಾರ್ಥಿಗಳಾಗಿರುವುದಿಲ್ಲ. ಓದಿದವರು, ಇಂಥವರು ಹೀಗೆ ಬರೆದಿದ್ದರು ಅದನ್ನು ಓದಿದ ನನಗೆ ಹೀಗನಿಸಿತು, ಬೇರೊಂದು ಭಾಷೆಯ ಲೇಖಕ ಇದೇ ಕಾಂಟೆಕ್ಟಿನಲ್ಲಿ ಇನ್ನೆಂಥದೋ ಬರೆದಿದ್ದಾನೆ ಎಂದು ಹೇಳಿ ಆ ಹಿರಿಯ ಜೀವಿಗಳು, ಲೇಖಕರು ಬರೆದಿದ್ದ ಕವನದ, ಲೇಖನದ ಅಥವ ಕಥೆಯ ಕೆಲವು ಸಾಲುಗಳನ್ನು ಕೋಟ್ ಮಾಡಿದರೆ, ನಿಜವಾಗಿ ಸಾಹಿತ್ಯದಲ್ಲಿ ಆಸಕ್ತಿ ಕಾಳಜಿ ಇರುವವರು ಅದನ್ನು ಹುಡುಕಿಯಾದರೂ ಓದೋಲ್ಲವೆ...? ಬೇಂದ್ರೆಯವರ “ಇಳಿದು ಬಾ ತಾಯೆ, ಇಳಿದು ?...." ಅಂಥ ಪ್ರಸಿದ್ಧ ಕವನವೂ ಗೊತ್ತಿಲ್ಲದ ಸಾಹಿತ್ಯಾಸಕ್ತರಿಗೆ ಇಂಥ ಅಂಕಣಕಾರರಿಂದ ಸಹಾಯವಾಗೋಲ್ಲವಾ ಹೇಳು?

ಇನ್ನು? “ಡಿಫರೆಂಟಾಗಿ ಬರೆಯುವವರು..." ಎಂಬುದರ ಬಗ್ಗೆ ನಾನು ಏನೇ ಹೇಳಿದರೂ ಅದು “ಶುದ್ಧ ಸಮರ್ಥನೆ" ಅನಿಸಿಕೊಳ್ಳುತ್ತೆ ಅಲ್ಲವೆ?

ನಿನ್ನ ಚಾರ್ಲಿ ಸೆಂಟಿನ ಉದಾಹರಣೆಗೂ ಪಿಜ್ಜಾ ಬರ್ಗರ್ ಉದಾಹರಣೆಗೂ ಏನು ವ್ಯತ್ಯಾಸ ಹುಡುಗ ? ಈಗಲೂ ಮಲ್ಲಿಗೆ ಹೂವು ಮುಡಿಯುತ್ತಾರೆ. ಬದಲಾದ ಕಾಲಕ್ಕೆ ತಕ್ಕಂತೆ ನಿನ್ನ ಚಾರ್ಲಿ ಸೆಂಟಿನಲ್ಲಿ ಜಾಸ್ಮಿನ್ ಪರಿಮಳ ಇರುತ್ತದೆ.
Five point someoneನ ಲೇಖನವನ್ನೇ ತೆಗೆದುಕೋ. ಅವನು ಬೆಳೆದ ವಾತಾವರಣವನ್ನು ಅವನ ಕಾಲೇಜ್ ದಿನಗಳನ್ನು ವರ್ಣಿಸುವ five point someone ಇಷ್ಟವಾಗುತ್ತದೆ. one night at call centre ಮನಸ್ಸಿಗೆ ತಟ್ಟುವುದೇ ಇಲ್ಲ.... ಬದಲಾದ ರಾಮಾಯಣಗಳು ಬಹಳಷ್ಟಿವೆ... ನಿನಗೆ ಯಾವುದು ತುಂಬ ಇಷ್ಟವಾಯಿತು?

ಉಹುಂ ನೀನು ಹೇಳಿದ್ದು ತಪ್ಪು ಅನ್ನುತ್ತಿಲ್ಲ ನಾನು. ನಿಜ ಕನ್ನಡದಲ್ಲಿ ಫ್ಯಾಂಟಸಿ, ರೋಮಾನ್ಸ್, ಫಿಕ್ಷನ್ ,ಪರಮಾಣು, ನಕ್ಷತ್ರ ,ಕೃಷಿ ಎಲ್ಲದರ ಬಗ್ಗೆ ಬರೆಯಬೇಕು. ಆದರೆ ಈಗ ಇರುವ, ಬರುತ್ತಿರುವ ಸಾಹಿತ್ಯವನ್ನು ಬರೀ ಕೋಸಂಬರಿ ಎಂದರೆ ಅರ್ಥಹೀನ. ನಿನಗೆ ಇಷ್ಟ ಆಗುತ್ತಿಲ್ಲ ಅಂತ ಹೇಳು ಬೇಕಾದರೆ. ನಿನಗೆ ಇಷ್ಟವಾದದ್ದನ್ನು ಆರಿಸಿಕೊಂಡು ಓದು. ಎಲ್ಲರೂ ತೇಜಸ್ವಿ, ಕಾರಂತ, ಬಿ.ಜಿ.ಎಲ್. ಸ್ವಾಮಿ ಆಗಲು ಸಾಧ್ಯವಿಲ್ಲ. ಅಂಥ ಪ್ರತಿಭಾವಂತರಿದ್ದರೆ ಏನೇ ತಿಪ್ಪರಲಾಗ ಹಾಕಿದರೂ ಅವರ ಬೆಳವಣಿಗೆಯನ್ನು ತಡೆಯಲು ಸಾಧ್ಯವಿಲ್ಲ. survival of the fittest!

ಹೆಚ್ಚು ಹೇಳೋಲ್ಲ ನಾನು. ಇದಕ್ಕೆ ನೀನು ಉತ್ತರ ಬರೆಯಬಹುದು. ನಾನು ಉತ್ತರಿಸುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ ವಾದ ಮಾಡಿಕೊಂಡು ಹೋದರೆ ನನಗೆ ಅಂಥ ವಾದಗಳಲ್ಲಿ ನಂಬಿಕೆ ಇಲ್ಲ. ಭೈರಪ್ಪನವರ ವಂಶವೃಕ್ಷದಲ್ಲಿ ಶ್ರೀನಿವಾಸ ಶ್ರೋತ್ರಿಗಳು ಹೇಳುವಂತೆ “ಮೂಲ ದೃಷ್ಟಿಯಲ್ಲೇ ಭಿನ್ನತೆ ಇರುವಾಗ ಚರ್ಚೆಯಿಂದ ಯಾವ ಪ್ರಯೋಜನವೂ ಇಲ್ಲ".

Thursday, July 10, 2008

ನಿನಗಿದು ಅರ್ಥವಾಗುವುದಿಲ್ಲ ಎಂದು ಗೊತ್ತಿದ್ದೂ..

'ಅವನು ಬಂದು ಇನ್ನೂ ಮೂರು ಗಳಿಗೆಗಳಾಗಿವೆ ಅಷ್ಟೇ..... ' ಎಂದು ನನ್ನ ಸಖಿಯರೊಂದಿಗೆ ನಾನು ಇಲ್ಲಿ ಉಸುರುತ್ತಿರುವಾಗಲೇ, ನೀನು ಅಲ್ಲಿ ನಿನ್ನ ಸ್ನೇಹಿತರ ಸಮ್ಮುಖದಲ್ಲಿ ನಾನು ಬಂದು ಮೂರು ವರುಷವಾಯಿತು ಎಂದು ಹೇಳುತ್ತಾ ಮೂರು ಪದವನ್ನು ಮೂರು ರಹದಾರಿ ಉದ್ದಕ್ಕೆ ಎಳೆದು ನಿಟ್ಟುಸಿರಿಟ್ಟೆ ಎಂಬ ಸುದ್ದಿ ಬಂದಿದೆ.
'ನನ್ನ ಹೆಂಡತಿಯನ್ನು ನೀಚನೊಬ್ಬ ಹೊತ್ತುಕೊಂಡು ಹೋಗಿದ್ದಾನೆ, ದಯವಿಟ್ಟು ಸಹಾಯ ಮಾಡಿ.' ಎಂದು ಕರೆದವನ ಕರೆಗೆ ತಕ್ಷಣ ಹೊರಟು ನಿಂತೆ. ಎಷ್ಟಾದರೂ ನೀ ಬಯಸಿದ ಹುಡುಗಿಯಲ್ಲವೇ ಅವಳು. ಯುದ್ಧಕ್ಕೆ ಸನ್ನದ್ಧನಾಗಿರುವ ಗಂಡನನ್ನು ತಡೆಯುವ ರಾಣಿ ರಾಣಿಯೇ? ಆದರೆ ಯುದ್ಧದ ಕಾರಣವೇ ನನ್ನ ಎದೆಯಲ್ಲಿ ಮತ್ಸರದ ಬೆಂಕಿಯನ್ನು ಹೊತ್ತಿಸಿತ್ತು. ಆದರೂ, ಚರಿತ್ರೆಯ ಅನೇಕ ನತದೃಷ್ಟ ರಾಣಿಯರಂತೆ ಎದೆಯುರಿಯನ್ನು ನಿರ್ಲಿಪ್ತ ಮುಖಭಾವದಲ್ಲೂ, ರಾಣೀತನದ ಗಾಂಭೀರ್ಯದಲ್ಲೂ ಬಚ್ಚಿಟ್ಟು ದೂರದೇಶಕ್ಕೆ ನಿನ್ನನ್ನು ಕಳುಹಿಸಿಕೊಟ್ಟೆ. ನಾನು ಹೋಗಬೇಡ ಎಂದಿದ್ದರೂ ನೀನು ಹೋಗದೇ ಉಳಿಯುತ್ತಿರಲಿಲ್ಲ ಅನ್ನುವದೂ ನನಗೆ ಗೊತ್ತಿತ್ತು.
ಸೇವಕ ಸೇವಕಿಯರು, ಸುರಿದುಕೊಳ್ಳುವಷ್ಟು ಸುಖ, ಸೌಕರ್ಯ, ಸಾಮ್ರಾಜ್ಯ, ಆದರೆ ಸಖನಿಲ್ಲ ಎಂದು ಮನಸ್ಸು ಯಾವುದೋ ಮೂಲೆಯಲ್ಲಿ ಕೊರಗುತ್ತಿದ್ದರೂ, ಎಲ್ಲರೂ ಹಾಗೇ ಕೊರಗುತ್ತಾರೆ, ನಾನು ಹಾಗಲ್ಲ ಎಂದು ನನ್ನನ್ನೇ ನಂಬಿಸಿಕೊಂಡೆ. ದೃಢವಾಗಿ ನಿಂತೆ. ಮಳೆಗಾಲದ ಹನಿಗಳು ಅಕ್ಷತೆಯಂತೆ ಎರಚಾಡುತ್ತಿದ್ದರೆ, ನನ್ನೊಳಗೆ ಕಡಲ ಆವೇಗ. ಅದಕ್ಕೆ ಕಾಳ್ಗಿಚ್ಚಿನಂತೆ ಹಬ್ಬುವ ವಿರಹದುರಿ. ನೀನು ನನ್ನನ್ನು ಅಪ್ಪಿ ಮುದ್ದಿಸಿದ ಸುಖದ ಹೊದಿಕೆ ನನ್ನನ್ನು ಸಂತೈಸುತ್ತಿತ್ತು.
ಯುದ್ಧ ಮುಗಿಯಿತು ಎಂಬ ಸುದ್ದಿ ಅಲ್ಲೆಲ್ಲಿಂದಲೋ ಬಂತು. ಉಳಿದ ಚೂರುಪಾರು ಕೌಮಾರ್ಯವನ್ನೇ ದಿಂಬಿನ ಕೆಳಗಿಟ್ಟು ಗರಿಗರಿಯಾಗಿಸಿಕೊಂಡು ಅಣಿಯಾದೆ. ಕ್ಷಣಕ್ಷಣವೂ ಕಾದೆ. ಬಳಸದೆ ಹೋದ ಲೋಹಕ್ಕೆ ಬೇಗ ತುಕ್ಕು ಹಿಡಿಯುವುದಂತೆ. ಬಳಸದೇ ಹೋದ ದೇಹ?
ತಡವಾಗಿ ಬಂದವನಿಗೆ ಸಾವಿರ ಕಾರಣಗಳಿದ್ದವು. ಮುಗಿಯದ ಯುದ್ಧ, ತಪ್ಪಿಹೋದ ದಾರಿ, ಗೆದ್ದ ಸಂಭ್ರಮ. ಕೊನೆಗೂ ಬಂದೆ; ಕೋಪದೊಳಗೂ ಖುಷಿಯಿತ್ತು. ಬಂದವನಿಗೆ ತನ್ನ ಸಾಹಸಗಳನ್ನು ವರ್ಣಿಸುವ ಹುರುಪು. ನಮಗೆ ಕೇಳಿಸಿಕೊಳ್ಳಲೇ ಬೇಕಾದ ಉತ್ಸಾಹ. ಹತ್ತು ವರ್ಷ ಅಹೋರಾತ್ರಿ ಹೇಳಿದರೂ ಮುಗಿಯದಷ್ಟು ಕತೆಯಿತ್ತು. ಕೇಳಿ ನಮಗೆ ಬೇಸರ ಆಗಲಿಲ್ಲ. ಹೇಳಿ ನಿನಗೆ ಬೇಸರವಾಯ್ತು. ಮತ್ತೆ ಹೊರಟು ನಿಂತಿರುವೆ.
ನನ್ನಲ್ಲೂ ಕತೆಗಳಿವೆ. ನನ್ನ ಯೌವನದುದ್ದಕ್ಕೂ ಅವು ಚಾಚಿಕೊಂಡಿವೆ. ಸವರದೇ ಉಳಿದ ನನ್ನ ದೇಹದ ಒಂದೊಂದು ಸುಕ್ಕೂ ಸಾವಿರ ಕತೆ ಹೇಳೀತು. ನೀನು ಬಿಟ್ಟು ಹೋದದ್ದನ್ನು ಆಳಿದ ಕತೆ, ಕೊಟ್ಟು ಹೋದದ್ದನ್ನು ಬೆಳೆಸಿದ ಕತೆ, ಬಿಟ್ಟು ಹೋದವನ ನೆನಪಲ್ಲಿ ಬೆಂದ ಕತೆ, ಅವನಿಗಾಗಿ ಕಾದ ಕತೆ. ಸಾವಿರ ಆಮಿಷಗಳ ಎದುರು ಅವನವಳಾಗಿಯೇ ಉಳಿದ ಕತೆ.
ಕೇಳುವುದಕ್ಕೆ ನಿನಗೆ ಆಸಕ್ತಿಯಿಲ್ಲ. ಬಿಡುವಿಲ್ಲ. ಏಕಾಂತದಲ್ಲಿ ನಂಬಿಕೆಯಿಲ್ಲ. ನಾಯಕನಾದವನಿಗೆ ಜೊತೆಗೆ ಸಮೂಹ ಇರಬೇಕು. ಸಾಮೂಹಿಕವಾದದ್ದು ಪ್ರೀತಿ ಆಗಿರುವುದಿಲ್ಲ.
ವರ್ಷಗಳ ಕಾಲ ಹೋರಾಡಿ, ಹಲವಾರು ಅನುಭವಗಳನ್ನು ಮೈಗೂಡಿಸಿಕೊಂಡ ಮನಸ್ಸು ಜಡ್ಡುಗಟ್ಟಿರುತ್ತದೆ. ಅದಕ್ಕೇ ನಿನಗೆ ನನ್ನ ದೇಹದ ಸುಕ್ಕು ಮಾತ್ರ ಕಾಣಿಸಿತು.
ನನ್ನ ಯೌವನದಲ್ಲಿ ನೀನೆಲ್ಲಿದ್ದೆ?
-ಪೆನಲೋಪೆ
ಟಿಪ್ಪಣಿ- ಟೆನಿಸನ್ ಬರೆದ ಯೂಲಿಸಿಸ್ ಕವಿತೆ ಓದಿದ ತಕ್ಷಣ ಅನ್ನಿಸಿದ್ದು.