ಯಾವುದರಿಂದಾದರೂ ಶಾಶ್ವತವಾಗಿ ಕಳಚಿಕೊಂಡೆ ಅಥವಾ ಇನ್ನೇನನ್ನೋ ಕಳೆದುಕೊಂಡೆ ಅಂತ ನಿಶ್ಚಿತವಾಗಿ ಗೊತ್ತಾದಾಗ ತನಗೆ ಅಸಾಧ್ಯವಾದ ಹಸಿವಾಗುತ್ತದೆ ಅನ್ನುವುದು ಅವಳಿಗೆ ಮತ್ತೆ ಸ್ಪಷ್ಟವಾಯಿತು. ಇನ್ನು ಅವನ ಜೊತೆ ಬದುಕುವುದು ಸಾಧ್ಯವೇ ಇಲ್ಲ ಎಂದು ಮನಸ್ಸಿನಲ್ಲೇ ತೀರ್ಮಾನಿಸಿದ ನಂತರ ಅಡುಗೆ ಮನೆಗೆ ಹೋಗಿ ತಾನೇ ಮಾಡಿಟ್ಟಿದ್ದ ಪುಲಾವನ್ನು ತಟ್ಟೆ ಭರ್ತಿ ಹಾಕಿಕೊಂಡು ಗಾಜಿನ ಬಟ್ಟಲು ತುಂಬ ಮೊಸರು ಸುರಿದುಕೊಂಡು ಸಾವಧಾನವಾಗಿ ಏನನ್ನೂ ಯೋಚಿಸದೆ ನಿಧಾನವಾಗಿ ತಿಂದಿದ್ದು ನೆನಪಾಯಿತು. ಹಾಗೆ ಹಸಿವಿನಿಂದ ತಿನ್ನುವಾಗ ತನ್ನ ಮನಸ್ಸು ಪೂರ್ತಿ ಖಾಲಿಯಾಗುತ್ತಿರುತ್ತಲ್ಲ, ಯಾವುದೇ ಭಾವನೆಗಳಿಲ್ಲದ ಖಾಲಿ- ಖಾಲಿ ಮನಸ್ಸಿಗೆ ಬರೀ ತನ್ನ ದೇಹದ ಹಸಿವು ಮಾತ್ರ ಗೊತ್ತಾಗುತ್ತಲ್ಲ ಅಂತ ಆಶ್ಚರ್ಯವಾಯಿತು. ಇಡೀ ತನ್ನ 34 ವರ್ಷದ ಜೀವನದಲ್ಲಿ ಹೀಗೆ ಆಗುತ್ತಿರುವುದು ಇದು ನಾಲ್ಕನೇ ಸಲ ಎಂದು ಎಣಿಸಿಕೊಂಡು ಹತ್ತನೇ ತರಗತಿಯ ಫಲಿತಾಂಶದ ಸಮಯದಲ್ಲಿ 'ಕನ್ನಡದಲ್ಲಿ ಫೇಲ್ ಆಗಿದಾಳೆ ' ಅಂತ ಅಪ್ಪ ಪೆಚ್ಚು ಮೋರೆ ಹಾಕಿಕೊಂಡು ಬಂದು ಹೇಳಿದಾಗ ತಾನು ಒಂದು ತೊಟ್ಟೂ ಕಣ್ಣೀರು ಸುರಿಸದೆ ಅಮ್ಮ ಮಾಡಿದ್ದ ಬೆಳಗಿನ ಉಪ್ಪಿಟ್ಟನ್ನೇ ಮತ್ತೆ ತಟ್ಟೆ ಭರ್ತಿ ಹಾಕಿಕೊಂಡು ತಿನ್ನುವಾಗಲೂ ತನಗೆ ಗೊತ್ತಾಗುತ್ತಿದ್ದುದು ಹಸಿವಾಗುತ್ತಿದೆ ಅನ್ನೋದು ಒಂದೇ. ಮುಂದೆ ಪಿಯುಸಿಯ ಫಿಸಿಕ್ಸ್ ಟ್ಯೂಷನ್‌ನಲ್ಲಿ ನಿದ್ದೆ ತಡೆಯಲಾರದೆ 'ನಿದ್ದೆ ಬರ್‍ತಿದೆ ಕಣೇ' ಅಂತ ನಂದಿನಿಯ ತೊಡೆಯ ಮೇಲೆ ಮಲಗಿದ್ದ ತನಗೆ, ಟ್ಯೂಷನ್ ಮುಗಿಸಿ, ಮನೆಗೆ ಹೋಗಿ,ತಿಂಡಿ ತಿಂದು, ಕಾಲೇಜಿಗೆ ಬಂದು ನಂದಿನಿಯನ್ನು ಹುಡುಕುತ್ತಿದ್ದರೆ ಸಿಕ್ಕಿದ್ದು ಅವಳ ಸಾವಿನ ಸುದ್ದಿ. ಎಲ್ಲರೂ ಅವಳು ಆಕ್ಸಿಡೆಂಟಾಗಿ ಸತ್ತುಬಿದ್ದಿದ್ದ ಜಾಗಕ್ಕೆ ಓಡಿಹೋಗುತ್ತಿದ್ದರೆ ತಾನು ಮಧ್ಯಾಹ್ನಕ್ಕೆಂದು ತಂದಿದ್ದ ಊಟವನ್ನು ತಿನ್ನತೊಡಗಿದ್ದೆ. ಆವಾಗಲೂ ತನ್ನ ಮನಸ್ಸಿಗೆ ಅಸಾಧ್ಯವಾಗಿ ಹಸಿವಾಗುತ್ತಿದೆ, ತಿನ್ನದಿದ್ದರೆ ಸತ್ತೇ ಹೋಗುತ್ತೇನೆ ಅನ್ನಿಸಿತ್ತು. ಮುಂದೆ ತನ್ನ ಮದುವೆ ನಿಶ್ಚಯವಾದಾಗ ಅಮ್ಮ ತನ್ನನ್ನು ತಬ್ಬಿಕೊಂಡು ನಮ್ಮನ್ನ ಬಿಟ್ಟೊಗ್ತಿಯಲ್ಲೆ ಕಂದ ಅಂತ ಬಿಕ್ಕಳಿಸುತ್ತಿದ್ದರೆ ತನಗೆ ಹಸಿವಿನ ಸಂಕಟದಿಂದ ಪ್ರಜ್ಞೆ ತಪ್ಪುತ್ತದೆ ಅನ್ನಿಸಿ ಅಮ್ಮಾ ತುಂಬಾ ಹಸಿವಾಗ್ತಿದ್ದೆ ಕಣೇ ಅಂದದ್ದು ನೆನಪಾಗಿ ನಿಟ್ಟುಸಿರಿಟ್ಟಳು.
***
"ನೀನು ಸಮುದ್ರದ ಥರ ಪರಿಪೂರ್ಣ ಹೆಣ್ಣು" ಅಂದಿದ್ದ ಅವನ ಮಾತುಗಳಿಗೆ ತನ್ನ ಕಣ್ಗಳು ಅರಳುಮಲ್ಲಿಗೆ. ಸಮುದ್ರ ಹುಡ್ಗ ಅಲ್ವೇನೋ ಅಂದಿದ್ದಕ್ಕೆ ಅವನ ನಗುವಿನ ಉತ್ತರ. ತನ್ನ ಹೆಗಲ ಮೇಲಿದ್ದ ಅವನ ಬಲಗೈ ಜಾರಿ ತೋಳುಗಳನ್ನು ಬಿಗಿಯಾಗಿ ಅಮುಕಿದ್ದವು.
ನಮ್ಮ ಹಾಸ್ಟೆಲಿನ ಎತ್ತರದ ಕಾಂಪೌಂಡುಗಳ ಎದುರಿನ ಉದ್ದೋ ಉದ್ದದ ರಸ್ತೆಯ ಆ ತುದಿಯಿಂದ ಈ ತುದಿಗೆ ಈ ತುದಿಯಿಂದ ಆ ತುದಿಗೆ ನಡೆದಾಡುತ್ತಾ ಮಾತಾಡುತ್ತಿದ್ದೆವು ಸಮಯದ ಹಂಗನ್ನು ಮರೆತು. ನದಿಗಳು ಹೋಗಿ ಸಮುದ್ರವನ್ನು ಸೇರುತ್ತವೆ ಕಣೇ, ಗಮನಿಸು ಸಮುದ್ರ ಒಂದು, ನದಿಗಳು ಹಲವಾರು. ಪ್ರಕೃತಿಯಲ್ಲಿ ಯಾವಾಗಲೂ ಒಂದು ಹೆಣ್ಣಿಗೆ ಬಹಳಷ್ಟು ಜನ ಪೈಪೋಟಿ ನಡೆಸುತ್ತಿರುತ್ತಾರೆ. 'Competitive male and choosy female' ಒಂದು ಅಂಡಾಣುವಿಗೆ ಮಿಲಿಯಗಟ್ಟಲೆ ವೀರ್ಯ ಸ್ಪರ್ಧಿಸುತ್ತವೆ. ಹೊಂಬಾಳೆಯನ್ನು ಗಮನಿಸಿದ್ದಿಯಲ್ಲ ಒಂದು ಹರಳಿಗೆ ಹಲವಾರು ಕೇಸರಗಳು. ಡಿಸ್ಕವರಿ ಚಾನೆಲ್ ನೋಡಿರ್‍ತೀಯಾ... ಪ್ರಾಣಿಗಳ ಉದಾಹರಣೆ ಕೊಡೋದು ಬೇಡ. ಇನ್ನು ಮನುಷ್ಯರದು ನಿನ್ನ ಅನುಭವಕ್ಕೇ ಬಂದಿರುತ್ತೆ ಎಂದು ತುಂಟ ನಗೆ ಬೀರಿದ್ದ.
ಆಕಾಶದಲ್ಲಿನ ನಕ್ಷತ್ರಗಳನ್ನು, ಅಷ್ಟು ಹೊತ್ತಾದರೂ ಇನ್ನು ಓಡಾಡುತ್ತಿರುವ ಜನಗಳನ್ನು ದೂರದಲ್ಲಿದ್ದ ಮರಗಳನ್ನು ಕಬ್ಬಿನಂಗಡಿಯ ಮುಚ್ಚಿದ ಬಾಗಿಲನ್ನು ನೋಡುತ್ತಾ ಮಾತಾಡುವ ರೀತಿ ನೋಡಿದಾಗ ಇವೆಲ್ಲವುಗಳಿಂದ ಅವನು ಪದಗಳನ್ನು ಹೆಕ್ಕುತ್ತಿದ್ದಾನೆ ಎಂದು ಅನುಮಾನವಾಗುತ್ತಿತ್ತು. ಮುಂದುವರೆಸಿದ್ದ, ಸಮುದ್ರ ಯಾವಾಗಲೂ receiving endನಲ್ಲಿರುತ್ತೆ. ಹೆಣ್ಣೂ ಅಷ್ಟೇ. ನದಿಗಳು ಸಮುದ್ರವನ್ನು ಸೇರಲು ಹುಡುಕಿಕೊಂಡು ಬರುತ್ತವೆ. ಪ್ರಕೃತಿಯಲ್ಲಿ ಹೆಣ್ಣು ಗಂಡಿಗಿಂತ ವಿಶಾಲವಾಗಿರುತ್ತಾಳೆ. ಅಂಡಾಣುವಿನ ಗಾತ್ರ 0.1 ಮಿ.ಮೀ. ಇದ್ದರೆ ಒಂದು ವೀರ್ಯಾಣುವಿನ ಗಾತ್ರ 0.05 ಮಿ.ಮೀ. ಇರುತ್ತೆ. ಇರುವೆಗಳ ಬಗ್ಗೆ ತಿಳಿದಿದ್ದೀಯ? ರಾಣಿ ಇರುವೆ ದೊಡ್ಡದಿರುತ್ತೆ. ಕಪ್ಪೆಗಳನ್ನು ತೆಗೆದುಕೋ ಹೆಣ್ಣು ಕಪ್ಪೆ ಗಾತ್ರ ದೊಡ್ಡದು.
ಸಮುದ್ರ ವಿಶಾಲವಾಗಿರುತ್ತೆ ಎಂದಷ್ಟೇ ಹೇಳಿದರೆ ಅದರ ಅಗಲವಾದ ಹರವಿಗೆ ಅನ್ಯಾಯ ಮಾಡಿದ ಹಾಗೆ. ಬರೀ ಇಷ್ಟೇ ಅಲ, ಗಂಡಿಗೆ ಬಂದು ಸೇರುವುದೊಂದೇ ಗೊತ್ತು, ಹೆಣ್ಣು ಪೊರೆಯುತ್ತಾಳೆ. ವೀರ್ಯಾಣು ಮತ್ತು ಅಂಡಾಣುಗಳು ಸೇರಿ ಜೀವಾಣು ಅನ್ನಿಸಿಕೊಂಡು ಅದು ಗರ್ಭಾಶಯದ ಒಳಗೆ ನೆಲೆಗೊಳ್ಳುವವರೆಗೆ, ಅಂದರೆ ನಾಲ್ಕೈದು ದಿನಗಳು ಆ ಜೀವವನ್ನು ಪೊರೆಯುವುದು ಅಂಡಾಣುವಿನ ಒಳಗಿನ ಯೋಕ್(ಹಳದಿ ಲೋಳೆ). ತಾಯಿ ಒಂಬತ್ತು ತಿಂಗಳು ಮಗುವನ್ನು ಕಾಪಾಡುತ್ತಾಳೆ. ಸಮುದ್ರ ತನ್ನಲ್ಲಿ ನದಿಗಳಿದ್ದು ಕರಗಿಸಿಕೊಂಡು ಪೊರೆಯುತ್ತದೆ. ನದಿಗಳು ಹೇಗಿದ್ದರೂ ಸ್ವೀಕರಿಸುತ್ತದೆ, ಒಂದಾಗುತ್ತದೆ; ಒಂದಾಗಿ ಅವುಗಳ ಕೊಳಕನ್ನು ಶುದ್ಧವಾಗಿಸುತ್ತದೆ, ಶುದ್ಧವಾಗುತ್ತದೆ... ಹಾಗೇ ನೀನೂ ಅಂದಿದ್ದ. ಅವನ ಮಾತುಗಳು ಸರಿಯಾಗಿ ಅರ್ಥವಾಗದಿದ್ದರೂ ಕೆಲವಕ್ಕೆ ವಿರೋಧವಿದ್ದರೂ ಇಷ್ಟವಾಗಿದ್ದವು. ಆದರೆ ಈಗ ಯೋಚಿಸಿದರೆ ಅಂದೇ ಅವನು ನನ್ನಲ್ಲಿನ ಕೊಳಕುಗಳನ್ನು ಸಹಿಸಿಕೋ ಅಂದಿದ್ದನಾ ಎಂದು ಅನುಮಾನವಾಗುತ್ತದೆ.
***
'ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು...' ಕೆ.ಎಸ್.ಎನ್. ಅವರ ಸಾಲಿಗೆ ಅರ್ಥವೇ ಇಲ್ಲವಲ್ಲ. ಇಷ್ಟಪಟ್ಟು ಮದುವೆಯಾದ ಹುಡುಗ, ಹೇಗೋ ಏನೋ ಹೊಂದಿಕೊಂಡು ಹೋಗುವ ಪ್ರಮೇಯವೇ ಇರಲಿಲ್ಲ. ಆದರೆ ಒಂದು ಹೆಣ್ಣಿಗೊಂದು ಗಂಡು ಎನ್ನುವುದೂ ಸುಳ್ಳಾಯಿತಲ್ಲ. ಅವನ ಕಾಮಕ್ಕೆ ನಾನು ಸಾಕಾದರೆ ವಿಕೃತಕ್ಕೆ ಕಾರ್‌ಡ್ರೈವರ್...!
ಪ್ರಕೃತಿಯಲ್ಲಿ ಸಹಜವಾದುದ್ದನ್ನು ನಾನ್ಯಾವತ್ತೂ ವಿರೋಧಿಸಿದ್ದೇ ಇಲ್ಲ. ಕ್ಷುದ್ರ ಜಂತುವಿನಿಂದ ಹಿಡಿದು ಹುಲಿ, ಜಿಂಕೆ, ಆನೆ ಕೊನೆಗೆ ಮನುಷ್ಯನವರೆಗೂ ಎಲ್ಲಾ ಪ್ರಾಣಿಗಳಿಗೆ ತನ್ನ ಸಂತಾನ ಎಷ್ಟು ಸಾಧ್ಯವೋ ಅಷ್ಟು ಬೆಳೆಯಲಿ ಎಂಬ ಗುಪ್ತ ಆಸೆಯೊಂದು ವಂಶವಾಹಿನಿಗಳಲ್ಲಿರುತ್ತದಂತೆ. ಅಂಥದಿರುವುದರಿಂದಲೇ ಮನುಷ್ಯರು ಸಾಮಾನ್ಯವಾಗಿ ಒಬ್ಬರಿಂದ ತೃಪ್ತರಾಗೋದಿಲ್ಲ. ಕ್ಷೇತ್ರವು ತಾನು ಸಂತಾನೋತ್ಪತ್ತಿಗೆ ಅರ್ಹವಾಗಿರುವಷ್ಟು ವರ್ಷಗಳೂ ಸತತವಾಗಿ ಸಶಕ್ತವಾದ ಬೀಜದ ಹುಡುಕಾಟದಲ್ಲಿದ್ದರೆ, ಬೀಜವು ಫಲವತ್ತಾದ ಕ್ಷೇತ್ರದ ಹುಡುಕಾಟದಲ್ಲಿರುತ್ತದೆ. ಅದಕ್ಕೇ ನನಗೆಂದೂ ಮದುವೆಯಾಚೆಗಿನ ಸಂಬಂಧಗಳು ತಪ್ಪೆನಿಸಿದ್ದೇ ಇಲ್ಲ. ನಿನಗೆ extra marital affaireಇದ್ದರೂ ನಾನು ಕೇಳಲು ಬರುವುದಿಲ್ಲ. ಆದರೆ ನೀನು ಯಾರೊಂದಿಗಾದರೂ ಭಾವನಾತ್ಮಕವಾಗಿ ಬೆಸೆದುಕೊಂಡಾಗ ಮಾತ್ರ ನಿನ್ನ ತೊರೆದು ಹೋಗುತ್ತೇನೆ ಎಂದು ಮದುವೆಗೆ ಮೊದಲೇ ಅವನಿಗೆ ಹೇಳಿದ್ದೆ. ಆದರೆ ಗಂಡು ಮತ್ತೊಂದು ಗಂಡಿನೊಡನೆ? ಅದು ವಿಕೃತಿ.
ಬರೀ ಇಷ್ಟೇ ಆಗಿದ್ದರೆ ಅದು ಬೇರೆ. ಆ ವಿಷಯ ತಿಳಿದ ರಾತ್ರಿ ಹೇಗೆ ಶುರುಮಾಡುವುದೆಂದು ತಿಳಿಯದೆ ನೀನು ಯಾವಾಗನಿಂದ ಹೀಗೆ ಎಂದು ಕೇಳಿದವಳಿಗೆ ಆಘಾತ ಕಾದಿತ್ತು. "ನನಗೆ ನೀನು ಬೇಕಿರಲಿಲ್ಲ. ನೀನು ಹೇಳುತ್ತಿಯಲ್ಲ; ದೈಹಿಕ ಮಾನಸಿಕ ಸಾಂಗತ್ಯ ಅವೆಲ್ಲಾ ಬುರುಡೆ ಅನಿಸುತ್ತೆ. ಅವನ ಜೊತೆ ಇದ್ದರೆ ಯಾರಿಗೂ ಸಿಗದ ಅನೂಹ್ಯವಾದ ಸುಖ ನನಗೆ ಸಿಗುತ್ತೆ. ನೀನು ಅತೃಪ್ತಿಯಿಂದ ನರಳಬಾರದಲ್ಲ ಅಂತ ನಿನಗೋಸ್ಕರ ಆಗಾಗ ನಿನ್ನ ಸೇರುತ್ತೇನೆ" ಅಂದ. ಇಷ್ಟು ದಿನ ನಿನಗೆ ಭಿಕ್ಷೆ ಹಾಕುತ್ತಿದ್ದೆ ಅನ್ನುತ್ತಿದ್ದಾನೆ ಅನ್ನಿಸಿ ಕುಸಿದುಹೋದೆ.
"ನಿನಗೋಸ್ಕರ" ಎಂಬ ಪದವನ್ನ ತಾನು ಮೊದಲಿನಿಂದಲೂ ಎಷ್ಟು ದ್ವೇಷಿಸುತ್ತಿದ್ದೆ. ಯಾರೂ ಯಾರಿಗೋಸ್ಕರವೂ ಏನನ್ನೂ ಮಾಡಬಾರದು. ಏನನ್ನೇ ಮಾಡಿದರೂ ಅದರಲ್ಲಿ ತನಗೆ ಖುಷಿ ಸಿಗದೆ ಬೇರೆಯವರಿಗೆ ಖುಷಿಯಾಗಲೆಂದು ಮಾಡುವುದು ಭಿಕ್ಷೆ ಹಾಕಿದಂತೆಯೇ. ನನಗೋಸ್ಕರ ಬಾ, ನನಗೋಸ್ಕರ ಊಟಮಾಡು, ನನಗೋಸ್ಕರ ಹಾಡು ಹೇಳು... ಊಹುಂ... ಸ್ಟುಪಿಡಿಟಿ. ಯಾರೂ ಯಾರಿಗೋಸ್ಕರವೂ ಏನನ್ನೂ ಮಾಡಬಾರದು. ಪ್ರೀತಿಯಂತೂ ಅಲ್ಲವೇ ಅಲ್ಲ, ಅವನ ಭಿಕ್ಷೆ ಬೇಕಾಗಿಲ್ಲ.
***
ಪರಿಚಿತರ ನಗು ಕಿರಿಕಿರಿಯನ್ನೂ ಅಥವಾ ಅಪರಿಚಿತರ ತುಟಿಯಂಚಿನ ಆಸೆ ಅಸಹ್ಯವನ್ನೂ ಉಂಟುಮಾಡುತ್ತಿಲ್ಲ ಎಂದು ಅರಿವಾದಾಗ ಹುಬ್ಬಳ್ಳಿಯ ಬಸ್‌ಸ್ಟಾಂಡಿನಲ್ಲಿ ಕುಳಿತ ಅವಳು ತೀರ ಕಣ್ಣಿಗೆ ಕಾಣುವಂತೆ ಕಂಪಿಸಿದಳು.
ಬಸ್ಸು ಬಂದು ನಿಂತಾಗ ಉಂಟಾದ ಗಡಿಬಿಡಿಗೆ ತನ್ನನ್ನು ಒಡ್ಡಿಕೊಳ್ಳದೆ ಎಲ್ಲರೂ ಹತ್ತಿದ ಮೇಲೆ ನಿಧಾನವಾಗಿ ಬಸ್ಸಿನ ಕಡೆ ಚಲಿಸಿದಳು. ಸ್ವಲ್ಪವೇ ಸ್ವಲ್ಪ ಹರಿದು ಬಣ್ಣಗೆಟ್ಟಂತೆ ಕಾಣಿಸುತ್ತಿದ್ದ ಕುಷನ್, ಕೊನೆಯಿಂದ ಮೂರನೆಯ ಸೀಟು ಎಷ್ಟೋ ವರ್ಷಗಳಿಂದ ಇವಳಿಗಾಗಿಯೇ ಕಾದು ಕೂತಿರುವಂತೆ ಕಂಡಿತು. ಕುಳಿತವಳ ಮನಸ್ಸು ಬಸ್ಸಲ್ಲಿ ಕೂತು ಸರಿಯಾಗಿ ನಾಲ್ಕು ವರ್ಷವಾಯಿತಲ್ಲ ಎಂದು ಎಣಿಸಿಕೊಂಡಿತು. ಜೊತೆ-ಜೊತೆಗೆ ಕಾರ್ ಡ್ರೈವರ್‌ನ ನೆನಪಾಗಿ ಹೊರಟ ನಿಟ್ಟುಸಿರಿನ ಮೇಲೆ, ನೆನಪಿನ ಮೇಲೆ ಸಿಟ್ಟಾದಳು.
ಇದ್ದಕ್ಕಿದ್ದಂತೆ ಮೀರಾ, ಅಕ್ಕಮಹಾದೇವಿಯವರ ಮೇಲೆ ಅಸಾಧ್ಯವಾದ ಹೊಟ್ಟೆಕಿಚ್ಚಾಯಿತು. ಇದ್ದವನನ್ನು ತೊರೆದು, ತಮ್ಮ ಸ್ಪರ್ಶಕ್ಕೆ ಸಿಗದೇಹೋದ ರಕ್ತ ಮಾಂಸಗಳಿಲ್ಲದ, ಬರೀ ಕಲ್ಪನೆಯಲ್ಲಿರುವ ವ್ಯಕ್ತಿಯನ್ನು ಅಷ್ಟು ತೀವ್ರವಾಗಿ ಹೇಗೆ ಪ್ರೀತಿಸಿದರು ಎಂದು ಗಲಿಬಿಲಿಗೊಂಡಳು.
ಬುದ್ಧಿಗೆ ತಿಳಿಯುವ, ಮನಸ್ಸಿಗೆ ಇಳಿಯುವ, ಕಲ್ಪನೆಗೆ ಹೊಳೆಯುವ ಯಾವುದೇ ವಿಷಯವು ಬರೀ ಬುದ್ಧಿ- ಮನಸ್ಸು ಕಲ್ಪನೆಗಳಿಗೇ ಸೀಮಿತಗೊಂಡಿದ್ದರೆ, ಅವುಗಳ ಅನುಭವ ಇಲ್ಲದಿದ್ದರೆ, ತಿಳಿದ, ಇಳಿದ ಹೊಳೆದ ವಿಷಯಗಳ ತೀವ್ರತೆ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಅದು ಪರಿಣಾಮಕಾರಿಯಾಗಬೇಕಾದರೆ ಇವೆಲ್ಲವುದರ ಜೊತೆಗೆ ದೇಹಕ್ಕೂ ಅದರ ಅನುಭವವಾಗಬೇಕು. ಉದಾಹರಣೆಗೆ, ಈಜು ಬರದವನಿಗೆ ತಾನು ನೀರಿಗೆ ಬಿದ್ದರೆ ಉಸಿರು ಕಟ್ಟುತ್ತೆ, ಸತ್ತು ಹೋಗುತ್ತೇನೆ ಎಂದು ತಿಳಿದಿರುತ್ತದೆ. ಉಸಿರು ಕಟ್ಟಿ ಸಾವನ್ನು ಸಮೀಪಿಸುವ ಕಲ್ಪನೆಯಿರಬಹುದು. ಆದರೆ ಒಮ್ಮೆ ಅವನು ನೀರಿಗೆ ಬಿದ್ದು ಸಾವನ್ನು ಹತ್ತಿರದಿಂದ ಕಂಡು ಬದುಕಿಕೊಂಡಾಗ ಸಿಕ್ಕ ಅನುಭವವಿರುತ್ತದಲ್ಲ; ಅದು ಬುದ್ಧಿ, ಮನಸ್ಸು, ಕಲ್ಪನೆಗಳ ಮೇಲೆ ಉಂಟುಮಾಡುವ ಪರಿಣಾಮ ಅನನ್ಯವಾದುದು. ತೀರಾ ದೈಹಿಕವಾಗಿ ಮನಸ್ಸು, ಬುದ್ಧಿ, ಕಲ್ಪನೆಗಳಿಗೆ ಇಳಿದ ಅನುಭವಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ.
ಸಾವಿರ ಬಾರಿ ನಿನ್ನ ಪ್ರೀತಿಸುತ್ತೇನೆಂದು ಪರಿಪರಿಯಾಗಿ ಹೇಳಿದ್ದರೂ ಅರ್ಥಮಾಡಿಕೊಳ್ಳಲಾಗದ ಹುಡುಗನಿಗೆ ಇವಳು ಕೊಡುವ ಮುತ್ತೊಂದು ಪ್ರೀತಿಯ ದ್ಯೋತಕದಂತೆ, ದೃಢೀಕರಣದಂತೆ ಕಾಣುತ್ತದೆ. ಅನಿಶ್ಚಿತತೆಯಲ್ಲಿ ಹೊರಳಾಡುವ ಹುಡುಗ ನೆಮ್ಮದಿಯ ನಿಟ್ಟುಸಿರಾಗುತ್ತಾನೆ ಎನ್ನುವ ತನ್ನ ವಾದಕ್ಕೆ ಅಪವಾದವೆಂಬಂತೆ ಮೀರಾ, ಅಕ್ಕ ಕಂಡರು. ಇದನ್ನು ಮೀರಿದಂತೆ ಅವರನ್ನು ಆಳುತ್ತಿದ್ದುದು ಯಾವುದು? ಭಕ್ತಿಯಾ? ಭಯವ? ಎಂದು ಕಸಿವಿಸಿಯಾಯಿತು. ಬರೀ ಭಕ್ತಿಯೆಂದು ಮನಸ್ಸು ಒಪ್ಪಿಕೊಳ್ಳಲೇ ಇಲ್ಲ.
ಇವನ ಪ್ರೀತಿ ಇಂದು ಇದ್ದು ನಾಳೆ ಸಾಯುವಂಥದ್ದು. ಅವನನ್ನು ಪ್ರೀತಿಸಿದರೆ ನಾವು ಸಾಯುವವರೆಗಾದರೂ ಪ್ರೀತಿಯನ್ನು ಕಳೆದುಕೊಳ್ಳುವ ಭಯವಿಲ್ಲವೆಂದುಕೊಂಡು ಇದ್ದವರನ್ನು ನೂಕಿ ಕಲ್ಪಿಸಿಕೊಂಡು ಪ್ರೀತಿಸಿದರು. ಅವರಲ್ಲೂ ಇದ್ದಿದ್ದು ಎಲ್ಲರಿಗೂ ಸಹಜವಾದ ಪ್ರೀತಿಸಿದವರನ್ನು, ಪ್ರೀತಿಯನ್ನು ಕಳೆದುಕೊಳ್ಳುವ ಭಯ ಎನಿಸಿತು. ತನ್ನ ಜೀವನದ ಇಂಥಾ ಗಳಿಗೆಯಲ್ಲೂ ಆಲೋಚನೆಗಳು ಹುಟ್ಟುತ್ತಿವೆಯಲ್ಲಾ ಎಂದು ಅವಳ ಮನಸ್ಸು ಖುಷಿಪಡುವ ಹೊತ್ತಿಗೆ ಅವಳು ಕುಳಿತಿದ್ದ ಬಸ್ಸು ದಾವಣಗೆರೆಯನ್ನು ದಾಟಿ ಶಿವಮೊಗ್ಗದ ಕಡೆಗೆ ಹೊರಳುತ್ತಿತ್ತು.
***
ಆಂಜನೇಯನ ಗೂಡಲ್ಲಿ ಹಚ್ಚಿಟ್ಟ ದೀಪ ಸಣ್ಣಗೆ ಕಂಪಿಸುತ್ತಿತ್ತು. ಮೇಲೆ ಲಕ್ಷ್ಮಿ ಜನಾರ್ಧನನ ಫೋಟೋ. ಕಾವೇರತ್ತೆಯ ಕೋಣೆಯ ಕಡೆಗಿದ್ದ ಜಾಲರಿ ಬಾಗಿಲ ತೂತುಗಳಲ್ಲಿ ಜೇಡರ ಬಲೆ, ಆ ಬಲೆಯಲ್ಲಿ ಸಿಕ್ಕು ಸ್ತಬ್ಧವಾಗಿ ರೂಪುಕಳೆದುಕೊಂಡು ಗುರುತಿಸಲಾರದಂತಾಗಿದ್ದ ಹುಳು, ಜಾಲರಿ ಬಾಗಿಲ ಹಿಂದೆ ಉದ್ದಕ್ಕೆ ಒಂದಿಂಚೂ ಬಿಡದಂತೆ ನೆಲದಮೇಲೆ ಹರಡಿದ ಅಡಿಕೆ... ಎಲ್ಲವೂ ಮೌನವನ್ನೇ ಆವಾಹನೆ ಮಾಡಿಕೊಂಡಂತೆ ಕಂಡವು.
ತೊಟ್ಟಿಯ ಬಳಿ ಬಿಸಿಲಿಗೆ ಒಣಗಲೆಂದು ಚೀಲದ ಮೇಲೆ ಹರಡಿದ್ದ ಅಡಿಕೆ ಹೋಳುಗಳ ಮೇಲೆ ಕೈಯಾಡಿಸುತ್ತಾ ಕೂತ ಕನಕಲಕ್ಷ್ಮಿಗೆ ಬೆಳಿಗ್ಗೆ ಸಣ್ಣಗೆ ಶುರು ಆಗಿದ್ದ ಬಿಸಿಲು ಹೀಗೇ ಏಕಾಏಕಿ ಹಾರಿಹೋಗಿದ್ದು ಏಕೆಂದು ಆಶ್ಚರ್ಯವಾಯಿತು. ತೊಟ್ಟಿಯ ತೆರೆದು ಸೂರಿನಿಂದ ನೋಡಿದಳು. ಕಪ್ಪು ಮೋಡಗಳು... ಅದ್ಯಾಕೆ ಹಾಗೆನಿಸಿತ್ತೋ ಏನೋ. ಮುಗಿಲು ಅವುಡುಗಚ್ಚಿ ತಣ್ಣೀರನ್ನು ತಡೆಹಿಡಿದಿದೆ. ಭುವಿಗೆ ತನ್ನ ಸಂಕಟವನ್ನು ಭರಿಸುವ ಶಕ್ತಿಯಿಲ್ಲ ಎನ್ನುವಂತೆ ಅಳುವನ್ನು ತಡೆಹಿಡಿದುಕೊಂಡಂತೆ ಕಂಡಿತು, ಗಂಡನನ್ನು ನೋಡಿದರು. ಗಂಡ ಜಗತ್ತಿನ ಪರಿವೇ ಇಲ್ಲದಂತೆ ಪೇಪರಿನಲ್ಲಿ ಮುಳುಗಿಹೋದವನಂತೆ ಕಂಡ. ಅವನು ಕೂತಿರುವ ಕಪ್ಪನೆಯ ಕುರ್ಚಿಯೂ ಪೇಪರ್ ಓದುತ್ತಿದ್ದೆಯೋ ಏನೋ ಎಂಬ ವಿಲಕ್ಷಣವಾದ ಅನುಮಾನವಾಯಿತು ಕನಕಲಕ್ಷ್ಮಿಗೆ.
ಬೀದಿಯ ತಿರುವಿನಲ್ಲಿ ಆಟೋ ಬಂದ ಸದ್ದಾಯಿತಲ್ಲಾ... ಅಂದುಕೊಳ್ಳುವ ಹೊತ್ತಿಗೆ ಪ್ರೊ.ಪಾಂಡುರಂಗ ಡೆಕ್ಕನ್ ಹೆರಾಲ್ಡ್‌ನ ಸಂಪಾದಕೀಯ ಪುಟ ಓದುತ್ತಿದ್ದರು. ಮೂಲೆ ಮನೆ, ಸಾಹುಕಾರ್ ಮನೆ, ಎಂಜಿನಿಯರ್ ಮನೆ ಹಾದು ತಮ್ಮ ಮನೆ ಮುಂದೆ ನಿಂತ ಆಟೋ ಸದ್ದು, ಅವನ ಕಿವಿಗಳಲ್ಲಿ ದಾಖಲಾಗಿ ಆಟೋದಲ್ಲಿ ಬಂದವರು ತಮ್ಮ ಮನೆಗೆ ಬಂದವರೋ ಅಥವಾ ದೇವಕಜ್ಜಿಯ ಮನೆಗೆ ಬಂದವರೋ ಎಂದು ಅನುಮಾನಪಡುತ್ತಿರುವಾಗಲೇ ತನ್ನ ಮನೆ ಕಡೆ ತಿರುಗಿದ್ದ ಹೆಜ್ಜೆಸಪ್ಪಳ ಇನ್ನೂ ಸ್ಪಷ್ಟವಾಗಿ ಇದು ಮೊದಲನೆಯ ಮಗಳು ನಡೆಯುವ ರೀತಿ ಅಲ್ಲವೇ... ಎಂದು ಆದ ಆಶ್ಚರ್ಯವು, ಬರುವ ಮೊದಲು ಒಂದು ಫೋನಾದರೂ ಮಾಡಿ ಬರುತ್ತಿದ್ದಳಲ್ಲಾ.. ಕಾರಲ್ಲಿ ಬರದೆ ಹೀಗೇ ಆಟೋದಲ್ಲಿ ಬಂದಿದ್ದಳಲ್ಲಾ... ಎಂದು ಅನುಮಾನವಾಗಿ ಪರಿವರ್ತನೆಯಾಗುವ ಮೊದಲೇ ಅವಳು ಒಳಗೆ ಬಂದು ತಮ್ಮನ್ನ ನೋಡಿದ ರೀತಿ, ಉಫ್... !! ಎಂದು ಹೆಗಲಿನ ಭಾರವನ್ನು ಕೆಳಗಿಳಿದ ಪರಿ, ಅವಳ ಕಣ್ಣುಗಳಲ್ಲಿದ್ದ ತಣ್ಣಗಿನ ನಿರುಮ್ಮಳತೆಯು ಅವಳು ಎಲ್ಲಾ ಭಾರವನ್ನು ನೀಗಿಕೊಂಡಂತೆ ಜೀವನಪರ್ಯಂತ ಇಲ್ಲೇ ಇರಲು ಬಂದವಳಂತೆ ಭಾಸವಾಯಿತು. ಇದ್ಯಾವುದರ ಪರಿವೆಯೂ ಇಲ್ಲದಂತೆ ಅಡಿಕೆ ಹೋಳುಗಳ ಮೇಲೆ ಕೈಯಾಡಿಸುತ್ತಾ ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದಳಲ್ಲಾ... ಅವಳಿಗೆ ಇದನ್ನೆಲ್ಲ ಹೇಗೆ ವಿವರಿಸುವುದೆಂಬ ಗಾಬರಿಯಲ್ಲಿ ಹೆಂಡತಿಯ ಕಡೆ ನೋಡಿದರು. ಆ ಎರಡೂ ಹೆಣ್ಣು ಕಣ್ಣುಗಳಲ್ಲಿ ನೆಲೆಯಾಗಿದ್ದ ಸಮಾಧಾನವೂ ಪ್ರಶ್ನೆಗಳನ್ನು ಮೀರಿ ಯಾವ ಉತ್ತರದ ಹಂಗಿಲ್ಲದೆ ನಿನ್ನ ಸಲಹಬಲ್ಲೆ ಎನ್ನುವಂತೆ ಇನ್ನೆರಡು ಹೆಣ್ಣುಕಣ್ಣುಗಳನ್ನು ನೋಡುತ್ತಾ ದೃಢತೆಯನ್ನು ಸಾರಿದ್ದವು. ಆಕಾಶದಲ್ಲಿ ಮಿಂಚು. ತಂದೆ, ಮಗಳ ಕಡೆ ನೋಡಿದರು ಅಲ್ಲಿ ಮಳೆ ಸದ್ದಿಲ್ಲದೆ ಸುರಿಯತೊಡಗಿತ್ತು.
(ದಿ ಸಂಡೇ ಇಂಡಿಯನ್ ನಲ್ಲಿ ಪ್ರಕಟವಾದ ನನ್ನ ಕಥೆ)
Sunday, October 5, 2008
Subscribe to:
Post Comments (Atom)
17 comments:
chennagide kathe.katheyalli aasakti kuda ide. good effort.kudos
bahaLa chendada kathe. chenda annodakkinta, oLLeya anuBhUti kaTTikoTTa kathe anta hELabahudu.
HeegE bareetiru. ninna kathegaLanna bahaLa sogasagi bareeti. keep writing.
love,
Chetana
Mruganayanee,
Kathe tumba chennagidhe. Neevu aike madiro katha vasthu vantu really appreciative. I liked it very much.
Hema
@ಕುಂಟಿನಿ, ಚೇತನ, ಹೇಮ
ಕಥೆ ಬರ್ದು ಮೂರು ತಿಂಗಳಾದರೂ ಆಗಿತ್ತು. ಮೊನ್ನೆ ಸಂಡೆ ಇಂಡಿಯನ್ ನಲ್ಲಿ ಓದಿದಮೇಲೆ ಅಪ್ಪ ಕಥೆ ಸುಮಾರು ಅಂದರಂತೆ ಅಮ್ಮನ ಬಳಿ. ಅಮ್ಮ ನಂಗಿಷ್ಟ ಆಯ್ತು ಅಂದಳು.
ನಿಮಗಿಷ್ಟವಾದ್ದ್ದು ಖುಷಿ ನೀಡಿತು. ಇವತ್ತೇ ಮತ್ತೊಂದು ಕಥೆ ಬರೆಯೋಣ ಅನ್ನಿಸುತ್ತಿದೆ. ಬರೆದರೆ ಅದು ನಿಮ್ಮ ಪ್ರೀತಿಯಿಂದ.
ಗಾಢ ಅನುಭೂತಿ ಕಟ್ಟಿಕೊಡ್ತು ಕತೆ.
ಎರೆಡೆರಡು ಸಲ ಸಲಿಲವಾಗಿ ಓದಿಸ್ಕೊಂತು.
ಥ್ಯಾಂಕ್ಸ್ ನಿಮ್ಗೆ!
-ರಂಜಿತ್
Even though the story stuff is old & common, the narration style is likeable. U have come up with so many wonderful comparisions, info & emotions. Really a different way of narration. Thank you.
Miss, story caught my attention with the initial paragraph. But as I went down reading it, I lost interest trying to figure out what its tryin convey. I liked your narration.
BTW it would be nice to see newbred writers like you to move away from rightwing ideology and try to see Gay and lesbianism as a normal sexual orientation.
@Rangit
ಧನ್ಯವಾದಗಳು. ಆದ್ರೆ ಎರೆಡೆರೆಡು ಸಲ ಓದಿದ್ಯಾಕೆ ಎಂದು ಗೊತ್ತಾಗ್ಲಿಲ್ಲ ;-o
@Vikaas
thanks ಕಣೋ... ನೀನು expect ಮಾಡೋ ರೀತಿ ಬರೆಯೋಕ್ಕೆ ಇನ್ನೂ ತುಂಬ ಟೈಮ್ ಬೇಕಾಗ್ಬಹುದೇನೋ ನಂಗೆ
ಮೃಗನಯನಿ,
ಚೆನ್ನಾಗಿ ಬರೆದಿದ್ದೀರಿ...
really nice dear:)
you are one of the fine writer I have come across, when I read many kannada blogs, please keep writing, kannada may get a fine writer for future generation.
ಧನ್ಯವಾದಗಳು ರಾಘವೇಂದ್ರ, ಅಗ್ನಿ.
@ nostalgiya
ಹೊಗಳಿ ಹೊನ್ನ ಶೂಲಕ್ಕೇರಿಸಿದರಯ್ಯ... :-) thank you.try to live up to the expectations.
uph... nimma blog huduki huduki ivattu siktu. hasidavage paramaana badisO kale nimagide. keep it up.
with love
preethi
ಚಂದದ ಕಥೆ. ಶೈಲಿ ಇಷ್ಟವಾಯ್ತು.
@Preeti
konege hEge siktu :-0 dhanyavaadagaLu
@Vaishaali
dhanyavaadagaLu
Hi Mruganayinee...entha chenda ri nimma kathe.....nirammalavaagiso niroopane...simply adhbhuta....neevu kannadakke innoo hesaru taro barahagaarti aagtiri..sorry aagbittiddiri.....shubhavaagali..baritane iri :)
Sunil.
mruganayanee.. story sumaaradaru... narration bahala adbutha vaagi bandide.... keep it up...its vry practical... i liked it vry mch...
Post a Comment