Wednesday, March 18, 2009

ನದಿಯ ಕಣ್ಣಿನಲ್ಲಿ ಕಡಲು

ನವೆಂಬರ್ 20, 2008, ಭಾನುವಾರ.
ಪ್ರದ್ಯುಮ್ನ ಬೆಳಗ್ಗೆ ಏಳುವ ಹೊತ್ತಿಗೆ ಅಮ್ಮ, ತಂಗಿ ಲಲಿತಳನ್ನು ಪೈಪಿನಲ್ಲಿ ಹೊಡೆಯುತ್ತಿದ್ದರು.

ಭಾನುವಾರವೆಂದರೆ ದ್ವೇಷಿಸುವ ಹಾಗೆ ಆಗೋಗಿದೆ ನನಗೆ. ಥೂ... ಇವರಿಬ್ಬರ ಅಬ್ಬರವನ್ನು ಸಹಿಸುವುದಾದರೂ ಹೇಗೆ? ಮನೆಯಿಂದ ಯಾವಾಗ ಹೊರಬಂದೆನೋ ಗೊತ್ತಿಲ್ಲ ಮನಸ್ಸು ತುಡಿಯುತ್ತಿದೆ. ಅಣ್ಣನಾದರೂ ಹೇಗೆ ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದ? ಎರೆಡು ವರ್ಷದಿಂದ ಇದನ್ನೆಲ್ಲಾ ನೋಡಿ ನೋಡಿ ಸಹಿಸಿಕೊಳ್ಳುವುದನ್ನು ಕಲಿತಿಕೊಂಡುಬಿಟ್ಟಿದ್ದನಾ? ಇಲ್ಲ ಅಣ್ಣನ ಸ್ವಭಾವವೇ ಅಂಥದ್ದು. ಸುಮ್ಮನಿದ್ದುಬಿಡುತ್ತಾನೆ, ಎಲ್ಲವನ್ನು ನೋಡಿಕೊಂಡೂ!
ನನಗೇಕೆ ಹಾಗೆ ಸಾಧ್ಯವಾಗುವುದಿಲ್ಲ? ಆವತ್ತು ಮನೆಯಲ್ಲಿ ನೆಡೆದ ಘಟನೆಗಳು ಬೇಡವೆಂದರೂ ಕಣ್ಣಮುಂದೆ ಬರತೊಡಗಿದವು.
ಬೆಳಗ್ಗೆ ಏಳುತ್ತಲೇ ಕೇಳಿದ್ದು ಲಲಿತಾಳ ಕಿರುಚಾಟ ‘ನಾನಿದನ್ನ ತಿನ್ನಲ್ಲ ಒಂದ್ ಕೇಜಿ ಎಣ್ಣೆ ಸುರ್ದಿದಿಯ, ಇದನ್ನ ತಿಂದ್ರೆ ಆನೆ ಥರ ಊದ್ಕೊತಿನಿ. ಇಷ್ಟ್ ವರ್ಶ ಆದ್ರೂ ನಿಂಗೊಂದ್ ಉಪ್ಪಿಟ್ ಮಾಡಕ್ ಬರಲ್ಲ. ಎಲ್ಲಾ ಅಜ್ಜಿ ಕೈಲೇ ಮಾಡ್ಸಿದ್ರೆ ಹೇಗ್ ಬರತ್ತೆ ಹೇಳು? ಅಪ್ಪ ಅದ್ ಹೇಗೆ ನಿನ್ ಜೊತೆ ಸಂಸಾರ ಮಾಡ್ತಿದಾರೋ? ಅಜ್ಜಿಗೆ ಹುಶಾರ್ ತಪ್ಪಿದ್ರೆ ನೀನು ಮಾಡಿದ್ ಅಡುಗೆ ತಿನ್ನೋ ಖರ್ಮ ನಮ್ಗೆ...’
ನಿಲ್ಲುವುದೇ ಇಲ್ಲವೆನೋ ಅನ್ನಿಸಿತ್ತು. ಬಾತ್ ರೂಮಿನಿಂದ ಪೈಪ್ ತಂದ ಅಮ್ಮ ಅದರಲ್ಲೇ ಬಾರಿಸಿದ್ಧಳು. ಒಬ್ಳೇ ಮಗ್ಳು ಅಂತ ಮುದ್ದು ಮಾಡಿ ಬೆಳ್ಸಿದ್ದಕ್ಕೆ ತಲೆ ಎಲ್ಲಾ ಮಾತಾಡ್ತೀಯ ರಾಸ್ಕಲ್’
ಅಮ್ಮನ ಪೈಪಿನ ಏಟುಗಳನ್ನು ತಾಳಲಾರದೆ ತಟ್ತೆ ಬಿಸಾಡಿ ಎದ್ದು ಓಡಿದಳು ಲಲಿತ. ಯಾರಾದರೂ ಹೊರಗಿನವರು ನೋಡಿದರೆ ಅಮ್ಮ ಮಗಳೆಂದು ಯಾರೂ ನಂಬುತ್ತಿರಲಿಲ್ಲ. ನೆಡೆಯುತ್ತಿರುವುದೆಲ್ಲಾ ಯಾವುದೋ ಟಿ ವಿ ಸೀರಿಯಲ್ಲೊಂದರಲ್ಲಿ ಎಂಬಂತೆ ನೋಡುತ್ತಾ ಕುಳಿತಿದ್ದರು ಅಪ್ಪ. ಅಪ್ಪನ ನಿರ್ಭಾವುಕ ಮುಖ ಕಂಡಿತು. ನಿರ್ಭಾವುಕ ಮುಖವೂ ಅಷ್ಟೊಂದು ಸಿಟ್ಟು ತರಿಸಬಹುದೆಂಬ ಕಲ್ಪನೆಯಲ್ಲೂ ಇರಲಿಲ್ಲ.
ಕೈಗೆ ಸಿಕ್ಕಿದ ಬ್ಯಾಟ್‌ನಲ್ಲೇ ಶೋಕೇಸ್ ಗ್ಲಾಸಿಗೆ ಬೀಸಿದೆ. ಇಡೀ ಮನೆ ಒಂದು ನಿಮಿಷ ನಿಶ್ಯಬ್ಧವಾಯಿತು. ಅದುಮಿಕೊಂಡಿದ್ದ ಸಂಕಟವನ್ನ ಕಾರಿಕೊಂಡೆ. ‘ಥು ನಿಮ್ದಿಷ್ಟೇ ಆಗೋಯ್ತು ನಾನು ಮನೆ ಬಿಟ್ಟು ಹೋಗ್ತಿನಿ.’ ಬ್ಯಾಟ್ ಎಸೆದು ಹೊರಟೆ. ‘ಹೋಗು ಹೋಗು ನಾನೊಬ್ಳೇ ಸಾಯ್ತೀನಿ ಇಲ್ಲಿ. ನಂಗೆ ಇನ್ನು ಬದ್ಕೊಕ್ಕಾಗಲ್ಲ ವಿಷ ಕುಡ್ದು ಸತ್ತೋಗ್ತಿನಿ. ಎಲ್ಲಾದುಕ್ಕೂ ನಾನೇ ತಲೆಕೆಡ್ಸ್ಕೊಬೇಕು.
ಅಮ್ಮ ಕೂಗಿಕೊಳ್ಳುತ್ತಿದ್ದಳೋ ಅಳುತ್ತಿದ್ದಳೋ ಗೊತ್ತಾಗಲಿಲ್ಲ. ತಿರುಗಿಯೂ ನೋಡಬೇಕೆನ್ನಿಸದೆ ನೆಡೆದು ಬಂದೆನಲ್ಲಾ.. ಹಾಗೆ ಮಾಡಬಾರದಿತ್ತು ಅನ್ನಿಸಿತು.

ನವೆಂಬರ್ 23, 2008. ಬುಧವಾರ, ಹನುಮಜಯಂತಿ
ತಲೆಗೆ ಶಾಂಪು ಹಚ್ಚುತ್ತಿರುವಾಗ ಪ್ರದ್ಯುಮ್ನನಿಗೆ ‘ಇವತ್ತು ಸಂಜೆ ಅವಳನ್ನು ಭೇಟಿ ಮಾಡಬೇಕು.’ ಎನ್ನುವುದು ಮತ್ತೆ ನೆನಪಾಗಿ ಅಕಾರಣವಾದೊಂದು ಸುಸ್ಥು ಅವನ ಮೈಯನ್ನು ಆವರಿಸಿಕೊಂಡಿತು.
ಇಂಟರ್ನೆಟ್ಟಲ್ಲಿ ಸಿಕ್ಕಿ, ಗಾಂಧಿ ಬಜಾರಿನ ಐಸ್ ಥಂಡರಿನಲ್ಲಿ ಭೇಟಿಯಾದ ಹುಡುಗಿಯ ಮೇಲೆ ಸಣ್ಣದಾಗಿ ಶುರುವಾಗಿದ್ದ ಸೆಳೆತ ಬರೀ ಸೆಳೆತವಲ್ಲ ಅಂತ ಗೊತ್ತಾಗುತ್ತಿದ್ದ ಹಾಗೆ ನನಗೆ ಭಯವಾಯಿತು. ಹೀಗೇ ಭೇಟಿಯಾಗಿ ಮರೆತು ಬಿಡಬಹುದಾದ ಹುಡುಗಿಯಲ್ಲ ಅನ್ನುವ ಕಾರಣ ಮಾತ್ರವಲ್ಲದೆ ಆ ಹುಡುಗಿಯೂ ತನ್ನಲ್ಲಿ ಆಸಕ್ತಿ ತೋರಿಸುತ್ತಿದ್ದುದು ನೆನೆಸಿಕೊಳ್ಳುವ ಹೊತ್ತಿಗೇ ನಾನು ಅವಳಿಗೆ ಹೇಳಿದ ಸುಳ್ಳುಗಳು ನೆನಪಾಗುತ್ತಿವೆ.
ನನಗೆ ಸುಳ್ಳು ಹೇಳುವುದರಲ್ಲೇನೂ ಆಸಕ್ತಿ ಇಲ್ಲ. ಆದರೆ ಎಲ್ಲರಿಗೂ ನಿಜ ಹೇಳಿಕೊಂಡು ಬರಬೇಕಾದ ಜರೂರತ್ತಾದರೂ ಏನು? ನೀವೇನಾದರೂ ಐವತ್ತು ವಯಸ್ಸಿಗಿಂತ ಮೇಲ್ಪಟ್ಟವರಾದರೆ ಮತ್ತು ಇಂಟರ್ನೆಟ್ಟಿನ ದ್ವೇಶಿಗಳಾದರೆ ನಾ ಹೇಳಿದ ಮಾತು ಅರ್ಥವಾಗುವುದು ಕಷ್ಟ. ನೀವೇನೋ ಇಂಟರ್ನೆಟ್ಟಲ್ಲಿ ನೋಡುತ್ತಾ ಇರುತ್ತೀರಿ ಹೀಗೇ ಯಾರಾದರೂ ಮಧ್ಯದಲ್ಲಿ ಸುಮ್ಮನೆ ಬಂದು ಮಾತಾಡಿಸುತ್ತಾರೆ, ನೀವೂ ಮಾತಾಡುತ್ತೀರಿ. ಅವರು ಕೇಳುವ ಪ್ರಶ್ನೆಗಳಿಗೆಲ್ಲಾ ನಿಜವನ್ನೇ ಹೇಳಬೇಕೆಂದಿದೆಯೇನು? ಅದೂ ನನಗೇನು ಕೆಲಸ ಇಲ್ಲ ಅನ್ನೋದನ್ನ ಹೇಳಿಕೊಳ್ಳಬೇಕ? ಸುಳ್ಳು ಹೇಳಿದ್ದೆ. ಆದರೆ ಈಗ? ಈ ಬುಧವಾರ ಸಂಜೆ ಭೇಟಿಯಾಗು ನಿಂಗೇನೋ ಹೇಳಬೇಕು ಅಂದಿದ್ದಳು.
ಇವತ್ತು ಬುಧವಾರ. ಭಯವಾಗುತ್ತಿದೆ. ನಿಜ ಗೊತ್ತಾದರೆ ಅವಳಾಗಿಯೇ ದೂರ ಸರಿಯುತ್ತಾಳೆ ಅಂತ ಸಮಾಧಾನ ಪಟ್ಟುಕೊಂಡರೂ ಆ ಸಮಾಧಾನದಲ್ಲಿರುವ ಅವಳು ಬಿಟ್ಟು ಹೋಗುವಳೆಂಬ ಯೋಚನೆಯೇ ನೋವನ್ನುಂಟುಮಾಡಿ, ಸಮಾಧಾನವೇ ನೋವಾಗಿ ಮಾರ್ಪಡುವುದು ನನ್ನ ವಿಹ್ವಲಗೊಳಿಸುತ್ತಿದೆ. ಇವತ್ತು ಹೇಳಿಬಿಡುತ್ತೆನೆ ಅವಳು ನೀನು ಹೇಗಾದರೂ ಇರು ನಿನ್ನ ಜೊತೆ ಕೊಡುತ್ತೇನೆಂದರೆ ಸರಿಯಾದವಳನ್ನು ಪ್ರೀತಿಸಿದೆ ಎಂದರ್ಥ.

ನೀನು ಹೇಗಾದರೂ ಇರು ನಿನ್ನ ನಾನು ಪ್ರೀತಿಸಿದ್ದು ನಿಜ ಅದಕ್ಕೆ ನಿನ್ನ ಜೊತೇಲಿರ್ತಿನಿ ಅಂತ ಹೇಳಿ ಬಿಡಬಹುದು ಹುಡ್ಗ, ಆದರೆ ಈ ಮೊದಲೇ ನಾನು ಈ ಥರ ತಪ್ಪು ಮಾಡಿದೀನಿ. ಮದುವೆಯಾದವನನ್ನು ಪ್ರೀತಿಸಿದಾಗ ಅವನು ಮದುವೆಯಾದವನೆಂದು ಗೊತ್ತಿರಲಿಲ್ಲ, ಗೊತ್ತಾದ ಮೇಲೂ ಯಾವ ಬದಲಾವಣೆಯಿಲ್ಲದೆಯೇ ಅವನನ್ನು ಪ್ರೀತಿಸುತ್ತಿದ್ದೆ. ನನ್ನ ದೇವತೆ ನೀನು, ಲಕ್ಷಕ್ಕೊಬ್ಬಳು ನಿನ್ನಂಥವಳು, ಎಂಥಾ ತ್ಯಾಗ ನಿನ್ನದು ಅಂತೆಲ್ಲಾ ಹಾಡಿ ಹೊಗಳಿದ್ದ. ಆದರೆ ನನಗೆ ಯಾವ ಹುಡುಗಿಯಾದರೂ ಪ್ರೀತಿಸಿದವನನ್ನು ಬಿಟ್ಟು ಹೋಗಬೇಕಾದದ್ದಾದರೂ ಏಕೆ ಎನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿರಲಿಲ್ಲ. ಅವನು ನನಗೆ ರಾತ್ರಿಗಳಲ್ಲಿ ಸಿಗುತ್ತಿರಲಿಲ್ಲ, ಮಾತಾಡಲೂ ಕೂಡ. ಅವನನ್ನು ನಾನು ಅರ್ಥ ಮಾಡಿಕೊಂಡಂತೆ ಅವನಿಗೆ ನ್ಮನ್ನ ಅರ್ಥ ಮಾಡಿಕೊಳ್ಳಲಾಗಲಿಲ್ಲ, ನಾನು ಬೇರೆಯವರೊಡನೆ ಮಾತಾಡಿದರೂ ಸಹಿಸುತ್ತಿರಲಿಲ್ಲ. ಅವನಿಗೆ ನಾನು ಕೋಪಗೊಂಡಾಗ ಅಥವಾ ಕೋಪಗೊಳ್ಳದಿದ್ದರೂ ಹೆಂಡತಿಯಿದ್ದಳು ನನಗೆ ಉಹು.. ನಾನೊಬ್ಬಳೇ. ಬರಬರುತ್ತಾ ಅವನೇ ನನ್ನ ಉಸಿರುಉಕಟ್ಟಿಸ, ತೊಡಗಿದ ಹೆದರಿಸತೊಡಗಿದ. ನನ್ನ ಎಳೇ ಹುಡುಗಿಯ ಮನಸ್ಸು ಘಾಸಿಗೊಂಡಿತ್ತು. ನನ್ನ ಮುಗ್ಧತೆ ಜಾರಿ ಹೋಗಿತ್ತು. ಮುಗ್ಧತೆಯನ್ನು ಕಳೆದುಕೊಂಡು ಹೊರಬಂದ ಹುಡುಗಿ ಆ ಹಳೇ ಮುಗ್ಧ ಹುಡುಗಿಯ ಬಗ್ಗೆ ಮರುಕ ಪಟ್ಟುಕೊಳ್ಳುತ್ತಾಳೆ, ಅವಳನ್ನು ಪದೇ ಪದೇ ನೋಡಿ ಎಚ್ಚೆತ್ತುಕೊಳ್ಳುತ್ತಾಳೆ.
ನಾನು ಅವನಿಂದ ದೂರವಾದ ಮೇಲೆ ನಿರ್ಧರಿಸಿದ್ದು ಒಂದು. ಪ್ರೀತಿ ಇಡಿಯಾಗಿ ಸಿಕ್ಕಬೇಕು, ಮತ್ತು ಪ್ರೀತಿಸುವವನ ಯಾವುದೇ ನ್ಯೂನ್ಯತೆಯನ್ನ ಒಪ್ಪಿಕೆsಂಡು ಪ್ರೀತಿಸಬಾರದು. ಅಂಥಾ ಪ್ರೀತಿ ಹೆಚ್ಚು ದಿನ ಬದುಕುವುದಿಲ್ಲ. ನೀನು ಕೆಲಸದಲ್ಲಿಲ್ಲದಿದ್ದರೂ ನಿನ್ನ ಪ್ರೀತಿಸುತ್ತೀನಿ ಅಂತ ಇವತ್ತು ನಾನು ನಿನ್ನ ಜೊತೆ ಬಂದು ಬಿಡಬಹುದು ಆದರೆ ಸ್ವಲ್ಪ ದಿನದ ನಂತರ ಪ್ರೀತಿಯ ಮೊದಲ ಆವೇಷಗಳು ಮುಗಿದ ಮೇಲೆ ನಿನ್ನ ಆರ್ಥಿಕ ಅಸಹಾಯಕತೆ ನಿನ್ನನ್ನು ದ್ವೇಷಿಸುವಂತೆ ಮಾಡುತ್ತದೆ ನಾವಿಬ್ಬರೂ ಒಟ್ಟಿಗೆ ಇರಲಾರದಂಥಹ ಅಂಚಿಗೆ ತಂದು ನಿಲ್ಲಿಸುತ್ತದೆ. ನಿನ್ನ ಈಗ ಪ್ರೀತಿಸಿ ಮುಂದೆ ದ್ವೇಶಿಸುವ ಬದಲು ಈಗಲೇ ಕಷ್ಟಪಟ್ಟಾದರೂ ಆ ಭಾವನೆಯನ್ನ ಚಿವುಟಿಹಾಕುತ್ತೇನೆಂದು ಹೇಳಿ ಎದ್ದು ಹೋದಳು. ಇಂಥಾ ಹುಡುಗಿಯನ್ನ ನನ್ನವಳಾಗಿಸಿಕೊಳ್ಳದ ಅಸಹಾಯಕತೆ ನನ್ನದು. ಪ್ರತೀ ದಿನ ಮನೆಯಲ್ಲಿ ಹೊರಗಡೆ ಇಂಥ ಘಾಸಿಗೊಳಿಸುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಬದುಕಲು ಕಾರಣಗಳೇ ಇಲ್ಲ. ಇನ್ನು ಕಾಯುವುದರಲ್ಲಿ ಅರ್ಥವಿಲ್ಲ. ಸಾವಿನ ಬಾಗಿಲು ತಟ್ಟಲು ಧೈರ್ಯ ಬೇಕು.

ನವೆಂಬರ್ 25, 2008. ಶುಕ್ರವಾರ
ಕಾಫಿ ಕಪ್ಪನ್ನು ಕೈಯ್ಯಲ್ಲಿ ಹಿಡಿದು ಕೂತ ಪ್ರದ್ಯುಮ್ನ ಹಳೆಯದನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಕಾಫಿ ಕುಡಿಯುವುದನ್ನೇ ಮರೆತ.

ಏಳು ತಿಂಗಳ ಹಿಂದೆ ಹೀಗಿರಲಿಲ್ಲ. ಅಥವ ಎಲ್ಲವೂ ಹೀಗೇ ಇದ್ದು ನನಗೆ ಗೊತ್ತಾಗುತ್ತಿರಲಿಲ್ಲವೋ? ಬೆಳಗ್ಗೆದ್ದರೆ ಕಾಲೇಜಿಗೆ, ಪ್ರಾಜೆಕ್ಟ್ ವರ್ಕಿಗೆ ಓಡುವ ತರಾತುರಿ, ಸಂಜೆ ಕಾಲೇಜು ಮುಗಿಸಿ ಅಲ್ಲಿಲ್ಲಿ ಅಲೆಯಬೇಕಾದ ಕಡೆಗಳಲ್ಲೆಲ್ಲಾ ಅಲೆದು ಮನೆ ತಲುಪುತ್ತಿದ್ದುದು ಯಾವಾಗಲೋ. ಭಾನುವಾರವೆಂದರೆ ಬರಗೆಟ್ಟವನಂತೆ ಕಾಯುತ್ತಿದ್ದೆ. ಬೆಳಗೇಳುತ್ತಲೇ ಅಜ್ಜಿಯನ್ನು ಗೋಳುಹೊಯ್ದುಕೊಳ್ಳುತ್ತಾ, ತಂಗಿಯನ್ನು ಕೀಟಲೆ ಮಾಡುತ್ತಿದ್ದವನ ಕೈಗೆ ಅಮ್ಮ ಅಶ್ವತ್ಥಾಮ, ಬಲಿರ್ವ್ಯಾಸ..... ಎನ್ನುತ್ತಾ ಹರಳೆಣ್ಣೆಯ ಬೊಟ್ಟುಗಳನ್ನು ಇಟ್ಟು ತಿಕ್ಕಿ, ಅವಳಿಗೆ ತೃಪ್ತಿಯಾಗುವಷ್ಟು ತಲೆಗೆ ಮಯ್ಯಿಗೆ ಎಣ್ಣೆ ಬಳಿದು ‘ನೋಡು ಹೆಂಗಾಗೋಗಿದೆ ತಲೆ ಕೂದ್ಲು ಕದಬೆ ಜುಂಗು’ ಎಂದು ಆತಂಕಪಟ್ಟುಕೊಂಡು ಮಧ್ಯಾನದವರೆಗೂ ‘ಎಣ್ಣೆ ಇಳೀಲಿ’ ಅಂತ ರೂಮಿನ ಟೀ.ವಿ ಮುಂದೆ ಕೂರಿಸಿ ನನ್ನ ಜೊತೆ ಮಾತಾಡುತ್ತಾ ಕಾಲ ಕಳೆದು, ಮಧ್ಯಾನ ಸುಡು ಸುಡು ನೀರಿನಲ್ಲಿ ಸ್ನಾನ ಮಾಡಿಸಿ, ‘ಹೋಗು ನಾನು ಸ್ನಾನ ಮಾಡ್ಕೊಂಡ್ ಬರ್ತಿನಿ’ ಅಂತ ಕಳುಹಿಸಿದರೆ ಮಲ್ಲಿಗೆಯಂಥಹ ಅನ್ನ, ಬಿಸಿ-ಬಿಸಿ ತಿಳಿಸಾರು ಪಲ್ಯ ಹಪ್ಪಳಗಳನ್ನ ಟೆಬಲ್ಲಿನ ಮೇಲಿಡುತ್ತಿರುವ ಅಜ್ಜಿ. ಅನ್ನ ತಿಳಿಸಾರು ಕಲಸಿಕೊಂಡು ತಿನ್ನುತ್ತಿದ್ದರೆ ಆಹಾ... ಮಧ್ಯಾನ ಗಡದ್ದಾದ ನಿದ್ದೆ, ಸಂಜೆ ಕ್ರಿಕೇಟೋ, ಶಟಲ್ ಕಾಕೋ ಆಡಲು ಗೆಳೆಯರು.
ಇಳಿ ಸಂಜೆಯ ಹೊತ್ತಿಗೆ ಮನೆಗೆ ಬಂದರೆ ಯಾವುದಾದರೂ ಇಂಗ್ಲೀಷ್ ಮೂವಿಯನ್ನು ತಂದಿರುತ್ತಿದ್ದ ಅಣ್ಣ. ಈಗ ಭಾನುವಾರಗಳೆಂದರೆ ಅಗಾಧ ಹಿಂಸೆ. ಅಪ್ಪ ತಂಗಿ ಇರುತ್ತಾರಲ್ಲ.. ಅಪ್ಪ ಎದುರಿಗಿದ್ದರೆ ಇನ್ನೂ ಅಪ್ಪನ ಅನ್ನ ತಿನ್ನುತ್ತಿದ್ದೇನೆ ಅಂತ ಮನಸ್ಸು ಚುಚ್ಚುತ್ತಿರುತ್ತೆ, ಇದರ ಜೊತೆಗೆ ತಂಗಿಯ, ಅಮ್ಮನ ಕಿತ್ತಾಟ. ಇವಳು ಮೆಡಿಕಲ್ ಸೇರೋ ಮೊದಲು ಹೀಗಿರಲಿಲ್ಲ. ಅದ್ಯಾಕೆ ಹೀಗಾದಳೋ?’
ತನ್ನ ಕಾಲೇಜಿನ ದಿನಗಳು ನೆನಪಾಗುತ್ತಿವೆ. ‘ನೀನು ಇಷ್ಟು ಚನ್ನಾಗಿರೋದನ್ನ ನೋಡೇ ನಿನ್ನ ಸೆಲೆಕ್ಟ್ ಮಾಡ್ಕೊಂಡ್ ಹೋಗ್ತಾರೆ ಅಂತಿದ್ದ ಹುಡುಗರೆಲ್ಲಾ ಸೆಲೆಕ್ಟಾಗಿ ಹೋದರೂ ನಾನು ಯಾವ ಇಂಟರ್ವ್ಯೂವಿನಲ್ಲೂ ಸೆಲೆಕ್ಟಾಗಲಿಲ್ಲ. ಬಂದವರೆಲ್ಲಾ ೭೦ ಎಂಡ್ ಅಬವ್ ಇದ್ದವರನ್ನು ಮಾತ್ರ ಆರಿಸಿಕೊಂಡು ಹೋದರು. ನಾನು ಇನ್ನಷ್ಟು ಗಮನವಿಟ್ಟು ಓದಬೇಕಿತ್ತು. ಈಗ ಎಷ್ಟು ಯೋಚಿಸಿದರೂ ಪ್ರಯೋಜನವಿಲ್ಲ. ನಾನು ಮಾಡಿರುವ ನಿರ್ಧಾರವೇ ಸರಿ.


ನವೆಂಬರ್ 27, 2008, ಭಾನುವಾರ
ಮಧ್ಯಾನ ಮೂರು ಘಂಟೆ. ಸ್ನೇಹಿತನ ಮನೆಯ ಬಾತ್ರೂಮಿನಲ್ಲಿ ವಿಷದ ಬಾಟಲಿಯನ್ನು ಮುಂದಿಟ್ಟುಕೊಂಡು ಕೂತ ಪ್ರದ್ಯುಮ್ನ ತನ್ನನ್ನು ಸಾಯಲೇಬೇಕಾದಂಥ ಪರಿಸ್ಥಿತಿಗೆ ನೂಕಿದ ಕಾರಣಗಳನ್ನೂ. ತಾನು ಸತ್ತ ನಂತರ ಆಗಬಹುದಾದ ಘಟನೆಗಳನ್ನು ಪಟ್ಟಿಮಾಡುತ್ತಾ ಪೋಲೀಸರಿಗೊಂದು ಪತ್ರ ಬರೆಯತೊಡಗಿದ.
ಈ ಪತ್ರವನ್ನು ಮೊದಲು ಓದುವ ಪೊಲೀಸರೇ, ಆನಂತರ ಓದುವ ತೀರ್ಥರೂಪರೇ, ಓದೋಲ್ಲ ಎಂದು ನಿರಾಕರಿಸಬಹುದಾದ ಅಮ್ಮ,, ಓದಲು ಬೋರಾಗಿ ಮುದುರಿ ಎಸೆಯುವ ಅಣ್ಣ..

ಈ ಪತ್ರವನ್ನ ನಾನು ನನ್ನ ಸಾವಿಗೆ ಯಾರೂ ಕಾರಣರಲ್ಲ ಯಾರಿಗೂ ಹಿಂಸೆ ಕೊಡಬೇಡಿ. ನನ್ನ ಸ್ವ ಇಚ್ಛೆಯಿಂದ ನಾನು ಸಾಯುತ್ತಿದ್ದೇನೆ ಎಂದು ತಿಳಿಸುವುದಕ್ಕೆ ಬರೆಯುತ್ತಿಲ್ಲ. ಆತ್ಮ ಹತ್ಯೆ ಅನ್ನುವುದು ಆಕ್ಷಣದ ನಿರ್ಧಾರವಲ್ಲ ಅದು ಆ ಕ್ಷಣದ ಧೈರ್ಯ ಮಾತ್ರ ನಿರ್ಧಾರ ರೂಪುಗೊಳ್ಳಲು ದೊಡ್ಡ ದೊಡ್ಡಕಾರಣಗಳು ಬೇಕಾದರೆ ಅದು ಕಾರ್ಯರೂಪಕ್ಕೆ ಬರಲು ಅತ್ಯಂತ ಕ್ಷುಲ್ಲಕ ಕಾರಣ ಸಾಕು. ಇದೆಲ್ಲಾ ಆಗುವ ಹೊತ್ತಿಗೆ ಸಾಯಬೇಕೆಂದು ನಿರ್ಧರಿಸಿರುವವನ ಮನಸಿನಲ್ಲಿ ವ್ಯಕ್ತಿತ್ವದಲ್ಲ ಆಗುವ ಮಾರ್ಪಾಡುಗಳು ಅನೇಕ. ಇದೆಲ್ಲಾ ನಿಮಗೆ ಗೊತ್ತಿರುವಂಥದ್ದೇ ಆದರೂ ಹೇಳಬೇಕೆನ್ನಿಸಿತು. ನಿಮಗೆ ನಾನು ನನ್ನ ಕಥೆಯನ್ನ ಹೇಳಿ ತಲೆ ಚಿಟ್ಟು ಹಿಡಿಸುವುದಿಲ್ಲ. ನನ್ನ ಸಾವಿಗೆ ಕಾರಣವಾದವರ ಪಟ್ಟಿಯನ್ನ ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ. ಸಾಧ್ಯವಾದರೆ ಅವರನ್ನೆಲ್ಲಾ ಶಿಕ್ಷೆಗೆ ಒಳಪಡಿಸಿ.

ಸಿಕ್ಕಸಿಕ್ಕವರಿಗೆಲ್ಲಾ ಮನಬಂದಂತೆ ಸಾಲಕೊಟ್ಟು ವಾಪಸ್ಸು ಪಡೆಯಲಾರದೆ ದಿವಾಳಿಯಾಗಿ, ಶೇರು ಹಣದಲ್ಲಿ ನಮ್ಮದೇಶದ ಲಕ್ಷಾಂತ ಜನರ ಕೋಟಿಗಟ್ಟಲೆ ಹಣವನ್ನ ಮುಳುಗಿಸಿ, ಸಾವಿರಾರು ಇಂಜಿನಿಯರುಗಳನ್ನು ಕೆಲ್ಸದಿಂದ ತೆಗೆದುಹಾಕುವಂತೆ ಮಾಡಿ, ನಿರುದ್ಯೋಗಿಗಳನ್ನಾಗಿಸಿದ ಅಮೇರಿಕಾದ ಪ್ರೈವೇಟ್ ಬ್ಯಾಂಕುಗಳನ್ನ, ಪ್ರತಿಯೊಂದಕ್ಕೂ ಅಮೇರಿಕಾ ಅಮೇರಿಕಾ ಎಂದು ಭಾರತವನ್ನ ಭಾರತದ ಆರ್ಥಿಕತೆಯನ್ನ ಅಮೇರಿಕಾದ ಬಾಲಂಗೋಚಿಯಾಗಿಸಿರುವ ಭಾರತದ ಆರ್ಥಿಕ ನೀತಿಯನ್ನ, ಬೆಳಗ್ಗೆ ಮನೆಯಿಂದ ಹೊರಹೋದರೆ ಸಂಜೆ ಮನೆಗೆ ಬರುತ್ತೇವೋ ಇಲ್ಲವೋ ಎಂದು ತಿಳಿಯದೆ ದಿನವೂ ಭಯದಲ್ಲಿ ಸಾಯುವಂತೆ ಮಾಡಿರುವ ಟೆರೆರಿಸ್ಟಗಳನ್ನ, ಅವರನ್ನು ಮಟ್ಟಹಾಕದೆ ಮೊಸಳೆ ಕಣ್ಣೀರು ಸುರಿಸುವ ನಮ್ಮ ಸರಕಾರವನ್ನ, ಇವರಲ್ಲಿ ಯಾರನ್ನಾದರೂ ಶಿಕ್ಷಿಸಲು ಸಾಧ್ಯವ ಹೇಳಿ? ಹ್ಮ್.. ಮ್‌ಮ್‌ಮ್.. ಖಂಡಿತ ಸಾಧ್ಯವಿಲ್ಲ ನನಗೆ ಗೊತ್ತು.

ಬರೀ ಇದಿಷ್ಟೇ ಅಲ್ಲ ಇನ್ನೂ ಹೇಳುತ್ತೇನೆ ಕೇಳಿ. ಇಷ್ಟು ದಿನ ಬ್ಯಾಂಕುಗಳ ಸರದಿಯಾಯಿತು ಇನ್ನು ಕ್ರೆಡಿಟ್ ಕಾರ್ಡುಗಳ ಸರದಿ. ಎಲ್ಲರೂ ಸಿಕ್ಕಿಸಿಕ್ಕ್ದಂಗೆ ಕ್ರೆಡಿಟ್ ಕಾರ್ಡುಗಳನ್ನ ಉಜ್ಜಿ ಬೇಕಾದಷ್ಟು ತೀರಿಸಲಾರದಷ್ಟು ಸಾಲ ಮಾಡಿದ್ದಾರೆ. ಅವರೆಲ್ಲರೂ ಕೈಯೆತ್ತಿದರೆ ಭಾರತ ಮುಳುಗಿದಂತೆಯೇ. ಆಮೇಲೆ ಮತ್ತೊಂದಷ್ಟು ಜನ ನಿಮಗೆ ಈ ರೀತಿಯ ಪತ್ರಗಳನ್ನ ಬರೆದಿಟ್ಟು ಸಾಯುತ್ತಾರೆ.

ನಮ್ಮಣ್ಣನಂಥವರಿಗಾದರೆ ಏನೂ ತೊಂದರೆ ಇಲ್ಲ ಚನ್ನಾಗಿ ಓದಿಕೊಂಡಿದ್ದರೂ ಮೊದಲೇ ಬುದ್ದಿ ಓಡಿಸಿ ಕೊಡಗಿನ ಬಳಿಯಲ್ಲಿ ಒಂದಿಷ್ಟು ತೋಟವನ್ನ ತೆಗೆದುಕೊಂಡು ನೆಮ್ಮದಿಯಾಗಿದ್ದಾನೆ. ಅವನಂತೆ ಆಗಲೇ ಬುದ್ದಿ ಓಡಿಸಿದ್ದರೆ ನನಗೀ ಸ್ಥಿತಿ ಬರುತ್ತಲೇ ಇರಲಿಲ್ಲವೇನೋ..

ನನ್ನ ಫ಼್ರಸ್ಟ್ರೇಷನ್‌ಗೆ ನನ್ನದೇ ಆದ ಚಿಕ್ಕ ಚಿಕ್ಕ ಕಾರಣಗಳಿರಬಹುದು. ಬರೀ ಅದಷ್ಟೇ ಕಾರಣಗಳಾಗಿದ್ದರೆ ನಾನಿವತ್ತು ಸಾಯುತ್ತಿರಲಿಲ್ಲ. ಪ್ರತಿಯೊಬ್ಬನಿಗೂ ಅವನದೇ ಆದ ಸಣ್ಣ ಪುಟ್ಟ ತೊಂದರೆಗಳು ಕಷ್ಟಗಳು ಇರುತ್ತವೆ ಆದರೆ ಎಲ್ಲರೂ ಯಾಕೆ ಸಾಯುವುದಿಲ್ಲ ಹೇಳಿ? ಯಾಕೆಂದರೆ ಅವರಿಗೆ ಅವರವರ ಚಿಕ್ಕ ಪುಟ್ಟ ಕಷ್ಟಗಳನ್ನ ನಿವಾರಿಸಿಕೊಳ್ಳಲು ತೊಂದರೆಗಳಿಂದ ಹೊರಬರಲು ತಿಳಿದಿರುತ್ತದೆ. ಆದರೆ ಈ ತೊಂದರೆಗಳನ್ನು ನನ್ನಿಂದ ಸರಿಪಡಿಸಲು ಸಾಧ್ಯವಿಲ್ಲ ನನ್ನ ಅಳವನ್ನ ಮಿರಿದ ಕಷ್ತಗಳು ಇವು ಎಂದು ತಿಳಿದಾಗ ಅದನ್ನು ಸರಿಪಡಿಸಬೆಕಾದವರ ಮೇಲೆ ಭರವಸೆ ಇಟ್ಟು ಸುಮ್ಮನಾಗುತ್ತಾನೆ. ನನ್ನ ನಂಬಿಕೆ ಭರವಸೆಗಳು ನುಚ್ಚುನೂರಾಗಿವೆ. ನಮ್ಮಂಥ ಲಕ್ಷಾಂತರ ಜನರ ನಂಬಿಕೆಗಳ ಗೋರಿಯಮೇಲೆ ಸರಕಾರಗಳು ಎನೂ ಆಗಿಲ್ಲವೆಂಬಂತೆ ನೆಮ್ಮದಿಯಾಗಿ ಸೀಟು ಭದ್ರಪಡಿಸಿಕೊಳ್ಳುತ್ತಿವೆ. ಯಾರನ್ನ ನಂಬುವುದು ಯಾರಲ್ಲಿ ಭರವಸೆ ಇಡುವುದು ಗೊತ್ತಾಗುತ್ತಿಲ್ಲ.

ನವೆಂಬರ್ 27, 2008, ಭಾನುವಾರ. ಮುಸ್ಸಂಜೆ.
ತ್ರವನ್ನು ಬರೆದು ಮುಗಿಸಿದ ಪ್ರದ್ಯುಮ್ನ ತನ್ನ ಮೊಬೈಲ್ ಕಡೆ ಗಮನ ಹರಿಸಿದಾಗ ಅಲ್ಲಿ ಹದಿನೈದು ಮೆಸೇಜು ಮೂವತ್ತು ಮಿಸ್ ಕಾಲುಗಳಿದ್ದವು. ಮೆಸೇಜುಗಳನ್ನ ಒಂದೊಂದಾಗಿ ಓದತೊಡಗಿದ
ಯಾಕೋ ಫೋನ್ ತೆಗೀತಿಲ್ಲ. ಸುರೇಶಣ್ಣ ಸತ್ತೋಗಿದ್ದಾನೆ ಕಣೋ.. ಫೋನ್ ತಗೊಳ್ಳೋ
ಅಮ್ಮ ಆಳ್ತಿದ್ದಾಳೆ, ಬೇಗ ಬಾರೋ
ಯುವರ್ ಬ್ರದರ್ ಕಮಿಟೆಡ್ ಸೂಸೈಡ್ ಇನ್ ಕಾಫಿ ಎಸ್ಟೇಟ್ ಹೌಸ್.

ಎಲ್ಲಿದ್ದೀಯೋ
..

ವೇರ್ ಆರ್ ಯು? ಸ್ಟಾರ್ಟ್ ಇಮ್ಮಿಡಿಯೆಟ್ಲಿ..

ಪ್ರದ್ಯುಮ್ನ ತಾನು ಬರೆದಿಟ್ಟ ಪತ್ರವನ್ನು ಸುಮ್ಮನೆ ನೋಡಿದ. ಪತ್ರದ ಕೊನೆಯಲ್ಲಿ ತಾನು ಮಾಡಿದ ಸಹಿ ಯಾಕೋ ಅಣ್ಣನ ಸಹಿಯಂತೆ ಕಾಣುತ್ತಿದೆಯಲ್ಲ ಅನ್ನಿಸಿತು.
ಮತ್ತೆ ಫೋನ್ ಹೊಡಕೊಳ್ಳತೊಡಗಿತು. ಎತ್ತಿಕೊಂಡು ಬಂದೆ ಅಂತಷ್ಟೇ ಹೇಳಿ ಪೋನ್ ಕಟ್ ಮಾಡಿದ.
(ಕನ್ನಡಪ್ರಭದಲ್ಲಿ ಪ್ರಿಂಟಾಗಿತ್ತು ಕಣ್ರೀ)