Saturday, September 12, 2009

ಒಬ್ಬರು ಇಷ್ಟವಾಗುವ ಹಾಗೆ ಮತ್ತೊಬ್ಬರು ಇಷ್ಟವಾಗುತ್ತಾರಾ?

ಅವನಿಗೆ ಹೇಳ್ಬಿಡ್ಲಾ? ಪ್ರಶ್ನೆಯಾದಳು ಮಗಳು. ಹದಿನೆಂಟು ವರ್ಷದ ಬೆರಗು ಕಣ್ಗಳ ತುಂಬಾ ಅದೊಂದೇ ಪ್ರಶ್ನೆ. ಅವಳು ಹೇಳುವ ಮೊದಲೇ ಇಂಥದ್ದೇನೋ ಆಗಿದೆ ಅನ್ನಿಸಿತ್ತು. ಅವಳ ಚಡಪಡಿಕೆ, ಖುಶಿ, ತನ್ನೊಳಗೆಲ್ಲಾ ಕನಸುಗಳನ್ನು ತುಂಬಿಕೊಂಡ ಮನಸ್ಸು, ಕೊನೆಗೆ ಅವಳಾಗೇ ಬಂದು ಹೇಳಿದಳು. ಅವನ್ಯಾಕೆ ಇಷ್ಟ ಅಂತ ಕೇಳಿಕೊಂಡಿದ್ದೀಯ ಕೇಳಿದೆ. ಹೂಂ ಅಂದಳು ಅನುಮಾನಿಸುತ್ತಾ. ಹೇಳು ಅಂದರೆ ‘ಉಹು ಹೀಗೆ ಅಂತ ಹೇಳಲು ಗೊತ್ತಾಗುತ್ತಿಲ್ಲ’ ಅಂತ ಒಪ್ಪಿಕೊಂಡಳು. ಇಷ್ಟಪಡಲು ನಿಜವಾಗಲೂ ಅಂಥದ್ದೊಂದು ಕಾರಣವೇನು ಬೇಕಿಲ್ಲ. ಅಂಥ ಕಾರಣಗಳು ಕಳೆದುಹೋದರೂ ಪ್ರೀತಿಸಲು ಸಾಧ್ಯವಾ ಅನ್ನುವುದು ಮುಖ್ಯ. ನಿನ್ನದು ಪ್ರೀತಿಯಾ? ಆಕರ್ಷಣೆಯಾ? ಅಂತೆಲ್ಲಾ ಕೇಳುವುದಿಲ್ಲ. ಮಗಳು ಮೋಸ ಹೋಗಿಬಿಟ್ಟರೆ ಅಂತ ತಾಯಿ ಮನಸ್ಸು ಭಯ ಪಡುವುದು ಸಹಜ. ನಿನ್ನ ತಡೆಯೋಲ್ಲ. ಯಾರಿಗೂ ಉದಾಹರಣೆಗಳನ್ನು ಕೊಟ್ಟು ಹೆದರಿಸಿದರೆ ಉಪಯೋಗವಿಲ್ಲ ಅನ್ನುವುದು ಗೊತ್ತು. ಎಲ್ಲರಿಗೂ ಅವರವರದೇ ಅನುಭವಗಳಾಗಬೇಕು, ಅನುಭವಗಳಿಂದ ಕಲಿಯಬೇಕು. ಏನೂ ಆಗೋಲ್ಲ ನಿನಗೆ. ಜಾಗ್ರತೆಯಿಂದ ಇರು. ಏನಾದರೂ ಆದರೂ ಅಮ್ಮ ಯಾವತ್ತೂ ಇರುತ್ತಾಳೆ. ಅವನಿಗೆ ಹೇಳುತ್ತೀಯೋ ಬಿಡುತ್ತೀಯೋ ಅದು ನಿನಗೆ ಬಿಟ್ಟಿದ್ದು. ನೀನು ಹೇಳದೇ ಅದು ಅವನಿಗೆ ಅರ್ಥವಾದರೆ ಇನ್ನೂ ಖುಷಿ. ಹೇಳಿದರೆ ಮನೆಗೆ ಕರೆದುಕೊಂಡು ಬಾ ಅವನಿಗಿಷ್ಟವಾದ ತಿಂಡಿ ಮಾಡಿಕೊಡ್ತೀನಿ ಎಂದು ಹೇಳಿ ಎದ್ದು ಬಂದೆ.
* * *
‘ನನ್ನ ಕಷ್ಟಗಳನ್ನ ಹೇಳಿಕೊಳ್ಳೋದರಲ್ಲಿ ನನಗೆ ನಂಬಿಕೆ ಇಲ್ಲ. ಹೇಳಿಕೊಳ್ಳೋದರಲ್ಲಿ ಮಾತ್ರವಲ್ಲ ಕೇಳೋದರಲ್ಲೂ. ಅವರ ಮಗ ಪಿ. ಯು. ಸಿ. ಯಲ್ಲಿ ಫೇಲಾದನಂತೆ, ಇವಳನ್ನು ನೋಡಿಕೊಂಡು ಹೋದ ಗಂಡು ಮೊದಲು ಒಪ್ಪಿದವನು ಆಮೇಲೆ ಬೇಡ ಅಂದ. ಉಹು ನನಗೆ ಅದರಲ್ಲೆಲ್ಲಾ ಆಸಕ್ತಿಯಿಲ್ಲ. ಹಾಗೆ ಕೇಳಿಸಿಕೊಳ್ಳುತ್ತಾ ಇದ್ದರೆ ಹೇಳಿಕೊಳ್ಳುವುದು ಅವರಿಗೆ ಒಂದು ತರಹದ ಪ್ಲೆಶರ್ ಕೊಡುತ್ತದೆ. ಅಂಥಾ ವಿಷಯಗಳಿಂದ ಏನೂ ಉಪಯೋಗವಿಲ್ಲ ಮಾತ್ರವಲ್ಲ ಆ ತರಹದಲ್ಲದಿದ್ದರೆ ಮತ್ತೊಂದು ತರಹದ ಕಷ್ಟ ಎಲ್ಲರಿಗೂ ಇದ್ದೇ ಇರುತ್ತೆ. ಸೆಲ್ಫ್ ಸೆಂಟರ್ಡ್ ಪರ್ಸನಾಲಿಟಿಗಳ ಕಷ್ಟವೇ ಅದು. ಅವರಿಗೆ ಯಾರ ಕಷ್ಟಗಳನ್ನು ಕೇಳಲಾಗುವುದಿಲ್ಲ ಮಾತ್ರವಲ್ಲ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದೂ ಅವರಿಗೆ ಹಿಂಸೆ. ನನ್ನ ಕಷ್ಟಗಳನ್ನು ಹೇಳಿಕೊಂಡರೆ ನಾನು ಎಲ್ಲರ ಮುಂದೆ ಪೆಥೆಟಿಕ್ ಆಗಿಬಿಡುತ್ತೇನೇನೋ ಎಂದನಿಸುತ್ತೆ. ತೇಜಸ್ವಿ ಕಾದಂಬರಿಗಳನ್ನೋ ಟಾಲ್ಸಟಾಯ್ ಕಥೆಗಳನ್ನೋ ತೆಗೆದುಕೋ ಯಾವುದೇ ಪರ್ಸನಲ್ ವಿಷಯದ ಬಗ್ಗೆ ಅಲ್ಲಿನ ಎರೆಡು ಪಾತ್ರಗಳು ತುಂಬಾ ಇಂಟಿಮೇಟಾಗಿ ಮಾತಾಡಿಕೊಳ್ಳುವುದಿಲ್ಲ. ತೇಜಸ್ವಿಯ ಜುಗಾರಿ ಕ್ರಾಸಿನಲ್ಲಿಯಾಗಲೀ, ಚಿದಂಬರ ರಹಸ್ಯದಲ್ಲಾಗಲೀ ಯಾವ ಪಾತ್ರವೂ ತಮ್ಮ ಅತ್ಯಂತ ಇಂಟಿಮೇಟ್ ತುಂಬಾ ಪರ್ಸನಲ್ ಅನ್ನುವಂತಹ ಸಂಗತಿಗಳನ್ನ ಗೆಳೆಯನೊಡನೆ ಹೇಳಿಕೊಂಡು ಗೋಳಿಡುವುದಿಲ್ಲ. ಆದರೆ ಕುವೆಂಪು ಹಾಗೆ ಬರೆಯುತ್ತಿದ್ದರು, ಡಿಕನ್ಸ್ ಬರೆಯುವ ಅಂಥ ಕ್ಷಣಗಳನ್ನ ಆಸಕ್ತಿಯಿಂದ ಕಣ್ಣು ಒದ್ದೆ ಮಾಡಿಕೊಂಡು ಓದುತ್ತೇವೆ. ನಾನು ಆ ಲೇಖಕರ ಅಥವ ಅವರ ಪಾತ್ರಗಳ ಥರ ಎಂದು ಹೇಳುತ್ತಿಲ್ಲ. ನಿನಗೆ ಆ ತರಹದ ಎ಼ಕ್ಸಾಂಪಲ್ಸ್ ಕೊಟ್ಟರೆ ಅರ್ಥವಾಗುತ್ತೆ ಅನ್ನೋದಕ್ಕೆ ಹೇಳಿದೆ’ ಅಂದ ಅವನು. ಹೌದು ಇಷ್ಟು ದಿನವಾದರೂ ಒಮ್ಮೆಯೂ ತನ್ನ ಕಷ್ಟಗಳ ಬಗ್ಗೆ ಹೇಳಿಕೊಂಡಿಲ್ಲ ಅವನು. ಬರೀ ಕಷ್ಟಗಳ ಬಗ್ಗೆ ಅಲ್ಲ ಯಾವುದರ ಬಗ್ಗೆಯೂ ಏನನ್ನೂ ಅಷ್ಟು ಹತ್ತಿರವಾಗಿ ನನಗೊಬ್ಬಳಿಗೇ ಹೇಳುತ್ತಿರುವಂತೆ ಹೇಳಿಕೊಂಡಿಲ್ಲ. ನಾನು ಕೇಳಿ ಕೇಳಿ ಹಿಂಸೆ ಮಾಡುವುದರಿಂದ ಏನನ್ನಾದರೂ ಹೇಳುತ್ತಾನೇನೋ, ಹಾಗೆ ಹೇಳುವಾಗಲೂ ತನಗೊದಗಿರುವ ಕಷ್ಟ ಕಷ್ಟವೇ ಅಲ್ಲವೆನ್ನುವ ಥರ ಲೇವಡಿ ಮಾಡುತ್ತಾ ಹೇಳಿಕೊಳ್ಳುತ್ತಾನೆ. ‘ಇನ್ನು ಮುಂದಾದರೂ, ನನ್ನ ಬಳಿಯಾದರೂ ಹೇಳಿಕೊಳ್ಳೋ’ ಎನ್ನೋಣ ಎಂದುಕೊಂಡೆ. ನನ್ನ ಬಳಿಯಾದರೂ ಅಂದರೇನು? ‘ನನ್ನ ಬಳಿಯಾದರೂ ಹೇಳಿಕೊಳ್ಳೋ’ ಅನ್ನುವ ವಾಕ್ಯದಲ್ಲಿ ನಾನು ಅವನ ಜೀವನದಲ್ಲಿ ಪ್ರಾಮುಖ್ಯತೆಯನ್ನ ಪಡಿಯಬೇಕೆಂಬ ದೂರದ ಆಸೆಯೇನಾದರೂ ಇದೆಯೇ ಎಂದು ನನ್ನ ಮೇಲೆ ನನಗೇ ಅನುಮಾನವಾಗಿ ಹೇಳಲಾರದೇ ಹೋದೆ.

ಏನೂ ಸರಿ ಇಲ್ಲದಿದ್ದಾಗಲೂ ಎಲ್ಲವೂ ಸರಿಯಿರುವಂತೆ ನಕ್ಕು ಆ ಕ್ಷಣಕ್ಕೆ ಅದೊಂದು ಕಷ್ಟವೇ ಅಲ್ಲವೆಂಬಂತೆ ನಟಿಸುವ ಕಲೆ ಅವನಿಗೆ ಸಿದ್ದಿಸಿಬಿಟ್ಟಿದೆ ಅನ್ನಿಸಿತು. ಅಥವಾ ತನ್ನ ಸ್ವಂತ ಭಾವನೆಗಳನ್ನು ವಿಮರ್ಷಿಸಲು ಎಡೆ ಕೊಡದೆ ಎಲ್ಲದನ್ನೂ ನಿರಾಕರಿಸುತ್ತಾ ಏನೂ ಆಗಿಲ್ಲವೆಂಬಂತೆ ನಟಿಸುವುದರಿಂದ ತನ್ನೊಳಗೆ, ತನ್ನ ಎದೆಯಲ್ಲಿ ನಡೆಯುತ್ತಿರುವ ಕೋಲಾಹಲಗಳನ್ನು ಮರೆಯಬಹುದು ಅನ್ನೋ ಭ್ರಮೆಯೋ? ಹಾಗಿರುವುದರಿಂದಲೇ ಯಾರೂ ಅವನ ಬಳಿ ಏನನ್ನೂ ಹೇಳಿಕೊಳ್ಳಲು ಬರುವುದಿಲ್ಲ ಹೇಳಿಕೊಳ್ಳಹೋದವರಿಗೆ ಭಾವನೆಗಳನ್ನ ಅರ್ಥಮಾಡಿಕೊಳ್ಳಲಾಗದ, ಭಾವನೆಗಳೇ ಇಲ್ಲದ ‘ಕೋಲ್ಡ್ ಮ್ಯಾನ್’ ಥರ ಕಾಣುತ್ತಾನಾ? ಆದರೆ ಅವನು ಹಾಗಲ್ಲ ಎಂದು ನನಗೆ ಗೊತ್ತು.

“ನನಗೆ ಗೊತ್ತು” ಅನ್ನುವುದು ಅಹಂಕಾರ, ನನ್ನನ್ನೇ ನಾನು, ಅವನನ್ನು ಬೇರೆಯವರಿಗಿಂತ ಚನ್ನಾಗಿ ಅರ್ಥ ಮಾಡಿಕೊಂಡಿರೋಳು ಎಂದು ಹೇಳಿಕೊಳ್ಳುವುದರ ಇನ್ನೊಂದು ರೂಪ. ಆದರೆ ಇಂಥ ಅಹಂಕಾರಕ್ಕೆ ಅರ್ಥವಿಲ್ಲ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ತಮಗೆ ತೀರ ಇಷ್ಟವಾದವರನ್ನ ಹೀಗೇ ಅರ್ಥ ಮಾಡಿಕೊಂಡಿರುತ್ತಾರಲ್ಲವ? ಅಂಥವರಲ್ಲಿ ನಾನೂ ಒಬ್ಬಳು. ಅದರಲ್ಲಿ ವಿಶೇಷವಾದರೂ ಏನು? ಆದರೆ ನಾನೇಕೆ ಅವನಿಗಾಗಿ ಇಷ್ಟೊಂದು ಹಾತೊರೆಯುತ್ತೇನೆ? ಹಂಬಲಿಸುತ್ತೇನೆ? ನನಗೇಕೆ ಅವನ ಬಗ್ಗೆ ಧಾವಂತವಾಗುತ್ತಿದೆ? ನಾನವನನ್ನು ಪ್ರೀತಿಸುತ್ತಿದ್ದೇನಾ? ಅವನಿಗೆ ನನ್ನ ಪ್ರೀತಿಸಲು ಸಾಧ್ಯವಾ? ಅವನು ಯಾರನ್ನಾದರೂ ಯಾವತ್ತಾದರೂ ಪ್ರೀತಿಸುತ್ತಾನ? ಪ್ರೀತಿಸಿದ್ದಾನ? ಪ್ರೀತಿ ಹೀಗೆ ಏಕಾಎಕಿ ಜಾಗೃತವಾಗಿಬಿಡುತ್ತದ? ಅವನಿಗೆ ಹೇಳಿಬಿಡಲಾ? ಇಷ್ಟಕ್ಕೂ ಅದು ಹೇಳಿಕೊಳ್ಳುವುದಾ? ಅರ್ಥಮಾಡಿಕೊಳ್ಳುವುದಲ್ಲವ? ಅವನು ಯಾವತ್ತಾದರೂ ಅರ್ಥ ಮಾಡಿಕೊಳ್ಳುತ್ತಾನ? ನನಗ್ಯಾಕೆ ಹೀಗೆ ಸಂಕಟವಾಗುತ್ತಿದೆ? ಅಳು ಬರುತ್ತಿದೆ? ನಾನು ಹೇಳಿಕೊಳ್ಳುವುದಿಲ್ಲ. ಪ್ರೀತಿಗೆ ಬದಲು ಪ್ರೀತಿ ಸಿಗಬೇಕಾಗಿಲ್ಲ.

ಈ ದಿನಗಳಲ್ಲಿ ಅನುಭವಿಸಿದಷ್ಟು ಸಿಟ್ಟು, ಆತಂಕ, ಅನಿಶ್ಚಿತತೆ, ಅನುಮಾನ, ನಾನು ಅವನಿಗೆ ಬೇಡವಾಗಿರುವೆನೆಂದೆನಿಸುವ ಭಾವ. ಥು.. ಯಾಕಷ್ಟು ಗೋಳು ಹೊಯ್ದುಕೊಂಡೆ? ನಿಜಕ್ಕೂ ಅಡಿಕ್ಟಾಗೋಗಿದೀನಿ. ಯಾಕ್ ಹಾಗೆ ಆಡಿದೆ? ಬೇಕಿತ್ತಾ ನನಗೆ? ನನಗವನು ಯಾವತ್ತೂ ಸಿಗೋದಿಲ್ಲ ಅಂತ ಗೊತ್ತಲ್ಲವ? ಸಿಗೋದು ಅಂದರೇನು ಎಲ್ಲಾ ಸಮಯವೂ ನನ್ನ ಜೊತೆಗೇ ಇರುವುದು, ನಾನು ಕಣ್ಣು ಬಿಟ್ಟಾಗಲೆಲ್ಲಾ ನಾನವನನ್ನು ನೋಡುವಂತಾಗುವುದು, ಯಾರ ಹೆದರಿಕೆ ಭಯಗಳಿಲ್ಲದೆ ನನ್ನ ಉಸಿರನ್ನು ಅವನ ಉಸಿರಾಗಿಸುವಂತಾಗುವುದಾ? ನಾನು ಕೂಗಿದಾಗಲೆಲ್ಲ ಬರುವನೆನ್ನ ಹುಡುಗ.. ಅಂತಿದ್ದರೆ ಅವನು ನನ್ನವನಾ? ಪ್ರೀತಿ ಅನ್ನುವುದು ‘ಹೀಗೇ’ ಅಂತ ಅದಕ್ಕೊಂದು ಭಾಷ್ಯ ಕೊಡುವುದು ಎಷ್ಟು ಕಷ್ಟ? ಹೀಗೇ ಅಂತ ವಿಶ್ಲೇಶಿಸಿ ಹೇಳಬೇಕಾದದ್ದಾದರೂ ಯಾತಕ್ಕೆ? ನನಗೆ ಜೀವನ ಪೂರ್ತಿ ‘ಪ್ರೀತಿ’ ಇಡಿಯಾಗಿ ಸಿಕ್ಕುವುದಿಲ್ಲವಾ? ಹುಚ್ಚು...

ಧಸಕ್ ಎಂದು ಎದ್ದು ಕೂತೆ. ಯಾರೋ ಹೊರಗೆಳೆದುಕೊಂಡು ಬಂದಂತೆ. ಇಷ್ಟು ವಿವರವಾಗಿ ಇಪ್ಪತ್ನಾಲ್ಕು ವರ್ಷದ ಹಿಂದೆ ನೆಡೆದ ಘಟನೆ ಯಾಕೆ ನೆನಪಾಗಬೇಕು. ಅದೆಲ್ಲಾ ಅನುಭವಗಳಿಂದ ಮತ್ತೆ ಹಾದು ಹೋದ ಹಾಗೆ? ಮಗಳು ಅವನಿಗೆ ಹೇಳಿಬಿಡುತ್ತಾಳ? ಯಾಕೋ ಮಲಗಿಯೇ ಇರೋಣ ಅನ್ನಿಸಿತು. ಓದಲು ತೆರೆದ ಪುಸ್ತಕದ ಒಂದು ಸಾಲೂ ಓದಲಾಗುತ್ತಿಲ್ಲ.


ಮದುವೆಯಾಗುತ್ತೀಯ ಅಂದ ಪ್ರೀತಿಯ ಮಾತೇ ಇಲ್ಲ. ಹಿಂಗೆಲ್ಲಾ ಕೇಳುತ್ತಾರ ಆಶ್ಚರ್ಯವಾಯಿತು. ಇಲ್ಲ ಎಂದು ಹೇಳುವುದಕ್ಕೂ ಹುಂ.. ಎಂದು ಹೇಳುವುದಕ್ಕೂ ಎರಡಕ್ಕೂ ಕಾರಣಗಳಿರಲಿಲ್ಲ. ಅಮ್ಮನನ್ನು ಕೇಳು ಅಂದೆ, ನಕ್ಕ. ಕಷ್ಟಗಳನ್ನೇನು ಕೊಡಲಿಲ್ಲ ಹುಡುಗ, ಸುಖ ಪಟ್ಟೆ ಅನ್ನಲಾ? ಸುಖ ಅಂದರೇನು? ಅದನ್ನು ಅರ್ಥೈಸುವುದಾದರೂ ಹೇಗೆ? ಹೊಟ್ಟೆ, ಬಟ್ಟೆ, ಲಗ್ಜುರಿಗಳಿಗೆ ಚಿಂತೆಯಿಲ್ಲದೆ ನೆಮ್ಮದಿಯಾಗಿರುವುದೇ ಸುಖವಾ? ಬರೀ ಅಷ್ಟಿದ್ದರೆ ನೆಮ್ಮದಿ ಬಂದು ಬಿಡುತ್ತಾ? ಹೋಗಲಿ ಅದೆಲ್ಲಿಂದಾದರೂ ಬರುವಂಥದಾ? ನಾನೇ ಕಂಡುಕೊಳ್ಳಬೇಕದದ್ದಲ್ಲವಾ? ಎಲ್ಲಾ ಇದ್ದರೂ ಏನೋ ಇಲ್ಲದಂತೆ ನನ್ನನ್ನು ಕಾಡುತ್ತಿದ್ದುದು ಕಾಡುತ್ತಿರುವುದಾದರೂ ಯಾವುದು? ಇಷ್ಟು ದಿನಗಳಾದರೂ ಮದುವೆಯಾದವನೊಂದಿಗೆ ಹಾಗಿರಲಾಗಲೇ ಇಲ್ಲವಲ್ಲ. ಇವನೊಡನೆ ಯಾವುದೇ ಭಿಡೆಗಳಿಲ್ಲದೆ ಬದುಕಲು ಬರಲೇ ಇಲ್ಲ. ಮೊದಲು ‘ಮುದ್ದಾಗಿದ್ದಾಳೆ’ ಎಂದು ನನ್ನ ಇಷ್ಟಪಟ್ಟು ಕಟ್ಟಿಕೊಂಡವನಿಗೆ, ಅವನ ವ್ಯಾವಹಾರಿಕ ಸ್ಪಂದನೆಗಳಿಗೆ ಸರಿಯಾಗಿ ಸ್ಪಂದಿಸದೆ, ನನ್ನ ಭಾವಲೋಕದಲ್ಲೇ, ಕಥೆ-ಕಾದಂಬರಿ ಆರ್ಟ್ ಸಿನೆಮಾಗಳಂಥಹ ಸಂಗತಿಗಳಲ್ಲಿ ಅವನ ಮಾತಿನಲ್ಲಿ ಹೇಳೋದಾದರೆ ‘ಕೆಲಸಕ್ಕೆ ಬಾರದ’ ವಿಷಯಗಳಲ್ಲೇ ಮುಳುಗಿ ಹೋಗಿರುತ್ತಿದ್ದ ನನ್ನನ್ನು ಕಂಡು ಮೊದ್ದು-ಮೊದ್ದು ಅನ್ನಿಸಿ, ತಪ್ಪು ಮಾಡಿದೆ ಅನ್ನಿಸಿರಬೇಕು. ಆಮೇಲಾಮೇಲೆ ದೈಹಿಕ ಅಗತ್ಯತೆಗಳು ಕಡಿಮೆಯಾಗುತ್ತಾ ಹೋದ ಹಾಗೆ ದೂರವಾಗುತ್ತಾ ಹೋದೆವು. ‘ಬೇರೆಯಾವುದಾದರೂ ಸಂಭಂದದಲ್ಲಿ ತೊಡಗುತ್ತಾನ?’ ಎಂದು ಆಸಕ್ತಿಯಿಂದ ಕಾದೆ. ಹಾಗವನು ಮಾಡಿದ್ದರೆ, ಅವನಿಗೆ ‘ನಿನ್ನ ಇನ್ನೊಂದು ಸಂಭಂದದ ಬಗ್ಗೆ ನನಗೆ ಗೊತ್ತು ಆದರೆ ನಾನು ಅದಕ್ಕೆ ಅಡ್ಡಿಯಾಗುವುದಿಲ್ಲ, ಅದಕ್ಕೂ ನನಗೂ ಸಂಭಂಧವಿಲ್ಲ, ಬೇಕಾದರೆ, ನಿನಗೆ ಸಹಾಯವಾಗುವುದಾದರೆ, ನಿನ್ನಿಂದ ದೂರ ಸರಿಯುತ್ತೇನೆ.’ ಎಂದು ಹೇಳಿ ಅವನ ಮುಂದೆ ಉದಾತ್ತವಾಗುವ ಕನಸು ಕಂಡಿದ್ದೆ. ಕೆಲವರಿಗಾದರೂ ತಮಗೆ ಯಾರಾದರೂ ಹತ್ತಿರದವರು ಮೋಸ ಮಾಡಲಿ ಎಂದು ಕಾಯ್ದು (ಅದಕ್ಕೆ ಮೋಸ ಅನ್ನಬೇಕ?) ಮೋಸ ಹೋಗುತ್ತಿದ್ದೇವೆಂದು ಗೊತ್ತಾದಾಗ ದೊಡ್ದ ರಂಪಾಟ ಮಾಡದೆ ದೊಡ್ಡ ಮಾತಿನಲ್ಲಿ ಹೇಳೋದಾದರೆ ಕ್ಷಮಿಸಿ, ಎಲ್ಲರಿಂದ ಸಿಂಪತಿಯನ್ನ ಪಡೆಯಬೇಕೆಂಬ ಸುಪ್ತ ಆಸೆಯಿರುತ್ತದೇನೋ? ನನ್ನ ದೊಡ್ಡವಳಾಗಲು ಅವನು ಬಿಡಲಿಲ್ಲ.

ಕಥೆಯಾಗಿದ್ದರೆ ಓದಿದ ಜನ ಕ್ಲೀಷೆ ಎನ್ನುತ್ತಿದ್ದರೇನೋ.. ಹಾಗೆನ್ನುವಂತೆ ಎಷ್ಟೋ ವರ್ಷಗಳ ಮೇಲೆ ಎದುರು ಸಿಕ್ಕ, ಹುಡುಗಿಯಂತೆ ತಲೆ ತಗ್ಗಿಸಿದ. ಮನೆಗೆ ಬರಲಾ ಮಾತಾಡಬೇಕು ಅಂದ. ಮನಸಿನಲ್ಲಿ ನೆಲೆಯಾದವನು ಮನೆಗೆ ಬರಲಾ ಎಂದರೆ ಬೇಡವೆನ್ನಲಾಗಲಿಲ್ಲ.. ನಾ ಕೊಟ್ಟ ಕಾಫಿಯನ್ನ ತೊಟ್ಟು ತೊಟ್ಟಾಗಿ ಹೀರುತ್ತಿದ್ದವನನ್ನು ಸರಿಯಾಗಿ ಗಮನಿಸಿದೆ.. ಕಬ್ಬಿಣದಂತಿದ್ದ ತೋಳುಗಳು, ಆಗ ಅದರಲ್ಲಿ ಕರಗಿಹೋಗಬೇಕೆನಿಸುತ್ತಿತ್ತು, ಇನ್ನೂ ಒಂದಷ್ಟು ಕೊಬ್ಬನ್ನು ಸೇರಿಸಿ ಪುಷ್ಟಿಯಾಗಿದ್ದವು. ನನಗೆ ನಿನ್ನ ಮನಸ್ಸು ಅರ್ಥ ಆಗುತ್ತಿತ್ತು, ನನ್ನ ಮನಸ್ಸೂ ಅದೇ ಆಗಿತ್ತು. ಆದರೆ ನಿನ್ನಂಥ ಹುಡುಗಿ ನನ್ನ ಜೊತೆ ಕಷ್ಟ ಪಡಬಾರದು ಎಂದು ನಿರ್ಧರಿಸಿದ್ದೆ. ಅಮ್ಮನನ್ನು ನೋಡಿದ್ದೆನಲ್ಲ, ಅಮ್ಮನಂಥವಳಿಗೆ ಅಪ್ಪನಿಗಿಂತ ಚನ್ನಾಗಿ ನೋಡಿಕೊಳ್ಳುವವರು ಸುಖದಲ್ಲಿ ಸಾಕುವವರು, ಅವಳನ್ನು ಕಷ್ಟಕ್ಕೆ ನೂಕದವರು ಸಿಗಬೇಕಿತ್ತು ಅನ್ನಿಸುತ್ತಿತ್ತು. ನಾವೇನಾದರೂ ಮದುವೆಯಾಗಿದ್ದರೆ ನನ್ನ ಮಗನಿಗೂ ಹಾಗೇ ಅನ್ನಿಸುತ್ತಿತ್ತು. ಹಾಗಾಗುವುದು ನನಗೆ ಬೇಕಿರಲಿಲ್ಲ. ಮದುವೆಯಾಗಿದ್ದರೆ ನಿನ್ನ ಕಣ್ಣಲ್ಲಿ ಈಗ ಕಾಣುವ ಪ್ರೀತಿ ಕಾಣುತ್ತಿರಲಿಲ್ಲ ಅಂದ. ಬೇರೆ ದಾರಿಯಲ್ಲಿ ಹೋಗಲು ನಿರ್ಧರಿಸಿ ಇನ್ನೆಲ್ಲೋ ಸೇರಿದ ಮೇಲೆ, ನಾವು ತುಳಿಯದ ದಾರಿಯಲ್ಲಿ ಮುಳ್ಳೇ ಇತ್ತೆಂದು ಅಂದುಕೊಳ್ಳುವುದಕ್ಕೆ ಏನನ್ನುತ್ತಾರೆ? (ಬುದ್ದಿವಂತಿಕೆ?) ಕೇಳೋಣವೆಂದುಕೊಂಡೆ, ವ್ಯರ್ಥ ಅನ್ನಿಸಿತು, ಸುಮ್ಮನಾದೆ. ಅದ್ಯಾಕೋ ಎಷ್ಟೋ ವರ್ಷಗಳಿಂದ ಹಿಡಿದಿಟ್ಟಿದ್ದನೇನೋ ಎನ್ನುವಂತೆ ನಿರುಮ್ಮಳವಾಗಿ, ಎದುರು ಕೂತ ಅವನಿಗೂ ನಿಚ್ಛಳವಾಗಿ ತಿಳಿಯುವಂತೆ ನಿಟ್ಟುಸಿರಿಟ್ಟೆ. ನನ್ನ ಇನ್ಯಾವುದೂ ಕಾಡಲು ಸಾಧ್ಯವಿಲ್ಲ ಅನ್ನಿಸಿತು. ಯಾಕೋ ಮಗಳು ನೆನಪಾದಳು. ಅಷ್ಟು ದಿನಗಳಿಂದ ‘ಇವತ್ತು ಹೇಳುತ್ತೇನೆ, ನಾಳೆ ಹೇಳುತ್ತೇನೆ’ ಅನ್ನುತ್ತಿದ್ದವಳು ಇವತ್ತು ಏನಾದರಾಗಲಿ ಹೇಳಿಯೇ ಬಿಡ್ತಿನಿ ಅಮ್ಮಾ ಅಂದಿದ್ದಳು. ಅವನು ಒಪ್ಪಿಕೊಂಡಿರುತ್ತಾನಾ? ಪ್ರಶ್ನೆಯಾಯಿತು ಮನಸ್ಸು. ಅವನು ಕಾಫಿ ಕಪ್ಪನ್ನು ಸದ್ದು ಮಾಡುತ್ತಾ ಟೇಬಲ್ಲಿನ ಮೇಲೆ ಇಟ್ಟ. ಅವನ ಮಾತುಗಳಿಗೆ ನಾನು ಉತ್ತರವನ್ನೇ ಕೊಡದೆ ಎಲ್ಲೋ ಕಳೆದು ಹೋಗಿದ್ದೆ. ನಾನೇನಾದರೂ ಅಂದಿದ್ದರೆ ಮಾತು ಬೆಳೆಯುತ್ತಿತ್ತು. ಮಾತುಗಳು ಬೆಳೆದರೆ ಏನಾಗುತ್ತದೆಂದು ಗೊತ್ತಿತ್ತು. ನನ್ನ ಗಂಡನನ್ನು ಸುಮ್ಮನೆ ಉದಾತ್ತನನ್ನಾಗಿಸುವುದು ನನಗೆ ಬೇಕಿರಲಿಲ್ಲ. ವಾದಗಳಿಂದ ಏನೂ ಪ್ರಯೋಜನವಿಲ್ಲ ವಾದ ಮಾಡುವವರು ಇಬ್ಬರೂ ಮಾತಾಡುತ್ತಾ ಹೋಗುತ್ತಾರಷ್ಟೇ ನಮ್ಮ ಅನಿಸಿಕೆ ನಂಬಿಕೆಗಳು ಯಾವರೀತಿಯಾದರೂ ಎದುರಿನವರ ಭಾವಕ್ಕೆ ತಟ್ಟಬೇಕಷ್ಟೇ. ಅದು ಮಾತಿನಿಂದಾಗುವಂಥದಲ್ಲ. ಅದೂ ಯಾವುದೋ ವಿಷಯದಲ್ಲಿ ಎದುರಿನವರು ನಮಗಿಂತಾ ಸಂಪೂರ್ಣ ಭಿನ್ನವಾದ ಅಭಿಪ್ರಾಯ ಹೊಂದಿದ್ದರೆ ಎಷ್ಟೇ ವಾದ ಮಾಡಿದರೂ ಆಗುವುದು ಪದಗಳ ವ್ಯರ್ಥ ವೆಚ್ಚ. ಹೊರಟು ನಿಂತವನು ಮನೆಗೆ ಬಾ ಅಂದ. ಸುಮ್ಮನೆ ನಕ್ಕೆ. ಅವನಿಗೆ ನಾನು ಹೋಗುವುದಿಲ್ಲವೆಂದು ಗೊತ್ತು.

ಮಗಳು ಮನೆಗೆ ಬಂದಳು ಖುಶಿಯಾಗಿದ್ದಳು. ‘ನಿನ್ನ ಹುಡುಗನಿಗೇನು ಇಷ್ಟ? ಯಾವತ್ತು ಮನೆಗೆ ಬರುತ್ತಾನೆ?’ ಕೇಳಿದೆ. ಇಲ್ಲಮ್ಮ ಅವನಿಗೆ ಈಗಾಗಲೇ ಗರ್ಲ್ ಫ್ರೆಂಡ್ ಇದಾಳಂತೆ ಅಂದಳು. ಅತ್ತಿದ್ದಾಳ ಕಣ್ನನ್ನು ಹುಡುಕಿದೆ. ಅದಕ್ಕೆಲ್ಲಾ ಅಳೋದಿಲ್ಲಮ್ಮಾ.. ಇನ್ಯಾರಾದರೂ ಅವನಷ್ಟೇ ಇಷ್ಟವಾಗುವವನನ್ನು ಹುಡುಕಿಕೊಳ್ಳುತ್ತೇನೆ ಅಂದಳು. ಒಬ್ಬರು ಇಷ್ಟವಾಗುವ ಹಾಗೆ ಮತ್ತೊಬ್ಬರು ಇಷ್ಟವಾಗುತ್ತಾರ? ಪ್ರಶ್ನೆ ನನ್ನಲ್ಲಿಯೇ ಉಳಿಯಿತು.