ದೂರ್ವಾಸನ ಬೆಚ್ಚನೆಯ ತಬ್ಬುಗೆಯನ್ನು
ನೆನಪಿಸಿಕೊಳ್ಳುತ್ತಾ ಕೂತವಳಿಗೆ
ಇವನಿಗೆ
ತಬ್ಬಿಕೊಳ್ಳುವುದಷ್ಟೇ ಸಾಧ್ಯ
ಎಂದು ಅರಿವಾದಾಗ
ಮನಸ್ಸಿನಲ್ಲಿ
ಇಂದ್ರ ಮರುತ್ತರು
ಹಾದು ಹೋದರು ಎನ್ನುವುದು ಶುದ್ಧ ಕಲ್ಪನೆ.
ಹಾದು ಹೋದರು ಎನ್ನುವುದು ಶುದ್ಧ ಕಲ್ಪನೆ.
-2-
ಗಂಗೆಯಲಿ ತೇಲಿ ಬಿಟ್ಟವಳಿಗೆ
ಆ ನೆನಪೇ ಪೂರ್ವ ಜನ್ಮದ
ಶಾಪ
ವರ
ಪಡೆದು ಬಂದಳು
ಗಂಗೆಯಲಿ ನಿಂದವನ ಬಳಿ.
ಅಂದೇ ಮುಳುಗಿಸಿದರಾಗಿತ್ತು.
-3-ಅವನು ಅವಳಿಗಾಗಿ ಮತ್ತೆ
ಅನುಮತಿ ಕೇಳಲು ಬಂದ.
ಸಾಕೆಂದು ಮುಖ ತಿರುಗಿಸಿದಳು
ಇವಳು
ಒಪ್ಪಿದ್ದರೆ
ಅವನು ಸಾಯುತ್ತಲೇ ಇರಲಿಲ್ಲ,
ಅವಳೂ.
-4-ಅವಳೂ.
ಅವನಷ್ಟು ಕರೆದರೂ ಹೋಗದೆ
ಉಳಿದದ್ದು ಇವನಿಗಾಗಿಯಂತೆ
ಇವನೇ ಹೋದಾಗ ಅವಳು
ಹೋದದ್ದೇಕೆಂದು
ಹೋದದ್ದೇಕೆಂದು
ಕೇಳಿದರೆ, ಕಂಡ ಕಂಡವರು
ಇವನು ಹೋಗಲು ಅವಳೇ
ಕಾರಣವೆಂದು ಆಡಿಕೊಂಡರು.
-5-ಕಾರಣವೆಂದು ಆಡಿಕೊಂಡರು.
ಹಿಡಂಬಿಯ ಪ್ರೀತಿ ತಿಳಿಯದೇ
ಹೋದ
ಕುಂತಿ
ದ್ರೌಪದಿಗೆ ಐದು ಗಂಡಂದಿರ
ಪ್ರೀತಿ
ಕೊಡಿಸಿದಳಂತೆ!
29 comments:
ಹ್ಮ್..’ಪರ್ವ’ದ ಪ್ರಭಾವ.
ದೂರ್ವಾಸನ ಬೆಚ್ಚನೆಯ ತಬ್ಬುಗೆಯನ್ನು
ನೆನಪಿಸಿಕೊಳ್ಳುತ್ತಾ ಕೂತವಳಿಗೆ.......
:-) super
ಜೊತೆಗೆ ಹಾಕಿರುವ ಚಿತ್ರದ ಬಗ್ಗೆ ಸ್ವಲ್ಪ ಹೇಳಿ.
ಕಂತಿದ ಕುಂತಿಯ ಕನಸು..
ಕುಂತಿಯ ಕಂತು ಕಂತಿನ ಕನಸು..
ಚಿತ್ರ ನೋಡಿದ್ರೆ ಕುಂತಿ ಬಹಳ ಪ್ರೌಢೆಯಾಗಿ
ಕಾಣಿಸ್ತಾಳಲ್ಲ..? ಮಹಾಭಾರತದಲ್ಲಿ ಅವಳು ಚಿಕ್ಕ ಹುಡುಗಿಯಾಗಿ ಚಿತ್ರಿಸಲ್ಪಟ್ಟ ನೆನಪು..
ಅನಿಸಿದ್ದನ್ನು ನೇರವಾಗಿ, ನಮಗೆ ನಿಲುಕುವ ಅನುಭವ ಮತ್ತು ಭಾಷೆಯಲ್ಲಿ ಹೇಳುವುದು ನನ್ನ ಕಾಲದ ಲೇಖಕರ ವೈಶಿಷ್ಟ್ಯ ಎಂದುಕೊಂಡಿದ್ದೆ. ಇದೇನಿದು ಯಾವ ಕಾಲದ್ದೋ ರೂಪಕಗಳ ಊರುಗೋಲಿನ ಹಂಗು! ಅನುಭವವನ್ನು ನಿಮ್ಮ ಕಾಲದ ಭಾಷೆಯಲ್ಲಿ ಹಿಡಿದುಕೊಡಲು ಸೋತಾಗ ಇಂತಹ ಊರುಗೋಲುಗಳಿಗೆ ಆನಿಕೊಳ್ಳಬೇಕಾಗುತ್ತದೆ,.. ಯೋಚನೆ ಮಾಡಿ....
ಶಶಿ
ತುಂಬ ಚೆನ್ನಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಕುಂತಿ ನನಗೂ ಇಷ್ಟದ ಪಾತ್ರ. ಅವಳು ಲಂಕೇಶರ ಅವ್ವನಂತೆ ಒಮ್ಮೊಮ್ಮೆ ಅನ್ನಿಸುತ್ತಾಳೆ.
ಶಶಿ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇಲ್ಲ. ಅನ್ನಿಸಿದ್ದನ್ನು ಹೇಳುವುದಕ್ಕೆ ಯಾವ ಕಾಲದ ರೂಪಕವನ್ನಾದರೂ ಬಳಸಬಹುದು ಮತ್ತು ಹಾಗೆ ಬಳಸುವವನೇ ನಮಗೆ ಆಪ್ತನಾಗುತ್ತಾನೆ. ಕಾರ್ನಾಡರ ಅಷ್ಟೂ ನಾಟಕಗಳು, ಮಾಸ್ತಿಯವರ ಅಷ್ಟೂ ಕತೆಗಳು, ನಾಟಕಗಳು, ಪುತಿನರ ಶ್ರೇಷ್ಠ ಕವಿತೆಗಳು, ಕುವೆಂಪು ಅವರ ದಾರ್ಶನಿಕ ಕೃತಿ, ಷೇಕ್ಸ್ ಪಿಯರ್, ಜೇಮ್ಸ್ ಜಾಯ್ಸ್, ಇಲಿಯಟ್, ಯೇಟ್ಸ್ ಎಲ್ಲರೂ ವರ್ತಮಾನದ ಬಗ್ಗೆ ಬರೆದರು, ಪರಂಪರೆಯ ಕೊಂಡಿಯನ್ನಿಟ್ಟುಕೊಂಡೇ ಬರೆದರು. ಇವರು ನಮ್ಮ ಕಾಲದ ಭಾಷೆಯಲ್ಲಿ ಬರೆಯುವ ಆಧುನಿಕ ಕವಿ ಎಂದು ಕರೆಯುವ ಲಂಕೇಶರು ಕೂಡ ನಾಟಕದ ಮಾತು ಬಂದಾಗ ಬಸವಣ್ಣನತ್ತ ಹೊರಳಬೇಕಾಯಿತು. ಶರ್ಮರಂಥವರು ಕೂಡ ಪುರಾಣಗಳಿಂದ ಪ್ರತಿಮೆಗಳನ್ನು ಎತ್ತಿಕೊಂಡರು. ಅಡಿಗರು ಮಾಡಿದ್ದೂ ಅದನ್ನೇ.
ಪುರಾಣಗಳಿಂದ ಪಾರಾಗಲು ಯತ್ನಿಸುವ ಈ ಊರುಗೋಲು ಬೇಡ ಅನ್ನುವವರಿಗೆ ತಮ್ಮ ಭಾಷೆ ಎಷ್ಟು ಅಸಹಾಯಕ ಎನ್ನುವುದು ಗೊತ್ತಿರುವುದಿಲ್ಲ. ನಾವು ಬಳಸುವ ಒಂದೊಂದು ಪದ ಕೂಡ ನಮ್ಮ ಮಹಾಕಾವ್ಯಗಳಿಂದ ಒಂದಲ್ಲ ಒಂದು ಅರ್ಥವನ್ನು ಎರವಲು ಪಡಕೊಂಡೇ ಬಂದದ್ದು ಅನ್ನುವುದನ್ನು ಯಾಕೆ ಮರೆಯುತ್ತೀರಿ.
ಕೀಪ್ ರೈಟಿಂಗ್.
ನಂಗೆ ಮೊದಲ್ನೇದು ಮತ್ತು ಕೊನೇದು- ಈ ಎರಡು ಚರಣಗಳು ಬಹಳ ಇಷ್ಟವಾದವು. ಚೆನ್ನಾಗಿ ಬರೆದಿರುವೆ, ಹೀಗೇ ಬರೀತಿರು ಅಂತ ಹಾರೈಸುವೆ.
ಶಶಿಯವರು ಈ ಹಿಂದೆ ಹಳೆಯ ರೂಪಕಗಳ ಸಂಗತಿಯಲ್ಲಿ ನನ್ನನ್ನೂ ಆಕ್ಷೇಪಿಸಿದ್ದರು. ಆದರೆ, ಪುರಾಣೇತಿಹಾಸಗಳ ಆ ಎಲ್ಲ ಪಾತ್ರಗಳು ಇಂದಿನ ಬರಹದೊಂದಿಗೆ ಬೆಸೆದುಕೊಳ್ಳುತ್ತಾ ಸ್ವತಃ ತಾವೂ ಬೇರೆ ಬೇರೆ ಅರ್ಥಪಡೆದುಕೊಳ್ಳುತ್ತಾ ಹೋಗುವುದು, ಒಂದೇ ಪಾತ್ರ ಒಬ್ಬೊಬ್ಬರ ಗ್ರಹಿಕೆಗೆ ಒಂದೊಂದು ಬಗೆಯಲ್ಲಿ ನಿಲುಕಿ ಬದಲಾಗುತ್ತ ಹೋಗುವುದು, ಇವೆಲ್ಲ ಒಂದು ಕೌತುಕ ನನಗೆ.
ದೂರ್ವಾಸನ ಬೆಚ್ಚನೆ ತಬ್ಬುಗೆಯ ಕುಂತಿ ನನಗೆ ಹೊಸಬಳು. ನಿನ್ನ ಕಲ್ಪನೆಗೆ ಸಲಾಂ.
ಅಂದ ಹಾಗೆ,
ಮೊನ್ನೆ ನೀನು ‘ಬೈ ಮಿಸ್ಟೇಕ್’ ಕಳಿಸಿದ್ದ ಎಸ್ಸೆಮ್ಮೆಸ್ಸಿನ ಸಾಲುಗಳು ಇನ್ನೂ ಕಾಡ್ತಿದೆ ಕಣೇ ಹುಡ್ಗೀ... ಹೀಗೇ ಮತ್ತೆ ಮತ್ತೆ ಮಿಸ್ಟೇಕ್ ಮಾಡ್ತಲೇ ಇರು!
ನಲ್ಮೆ,
ಚೇತನಾ ತೀರ್ಥಹಳ್ಳಿ
@ವಿಕಾಸ್
ಧನ್ಯವಾದ ಹೆಳ್ಬೇಕೆನೋ???
@Krutavarma
:-)
@ಶಶಿ
ಅನಿಸಿದ್ದನ್ನ ನೇರವಾಗಿ ಬರೆದಿದ್ದೀನಿ... ಲೇಖಕನಿಗೆ ಕಾಲದ ಹಂಗಿಲ್ಲ....
@ಜೋಗಿ nd ಚೇತನಾ
ಧನ್ಯವಾದಗಳು... ನಿಮಗೆ ಇಷ್ಟ ಆಗಿದ್ದು ಖುಷಿ ಆಯ್ತು. ಮಹಾಭಾರತದ ಪಾತ್ರಗಳು ಯಾವಾಗಲೂ ಕಾಡುತ್ತವೆ.ಇನ್ನೂ ತುಂಬಾ ಬರೀಬೇಕು ಅನ್ನಿಸುತ್ತಿದೆ...
Completely agree with Chetana. No escape for us from epics like Ramayana, Mahabharatha, Gita, The Iliad, The Odyessey......
-Prasad.
Isnt it amazing to learn that epics continue to become relevant to the modern times with constant changes in their illumination?
Yeh, it has a tinch of parva. Still.. nice.
Miss your messages....
-Binkada Singari.
@Prasad
:-)
@binkada singaari
:-o...!!!! still thank uuu
ಬಹುಷಃ ನವ್ಯದ ಇನ್ನೊಂದು ಮುಖ- ವಿಕ್ಷಿಪ್ತತೆ!. ಪುರಾಣಗಳಿಂದ ರೂಪಕಗಳನ್ನು ಆಯ್ದುಕೊಂಡು ಹೀಗೆ ಪ್ರಯೋಗ ಮಾಡಿದವರು ಸಾಕಸ್ತು ಮಂದಿ. ಪ್ರಸ್ತುತ ಸೊ ಕಾಲ್ಡ್ ರುಪಕಗಳನ್ನೇ ನೋಡಿ. ದುರ್ವಾಸರು ಕುಂತಿಗೆ ಮಂತ್ರ-ಪಂಚಕಗಳನ್ನು ಕೊಡುವಾಗ ಆಕೆಗೆ ಐದೇ ವರ್ಷ (ಮೂಲ ಕವಿ ವ್ಯಾಸರ ಪ್ರಕಾರ). ಐದುವರ್ಷದ ಬಾಲಕಿಯನ್ನು ಸುಮಾರು ಮಧ್ಯವಯಸ್ಕನಂತಿರುವ ದೂರ್ವಾಸ ತಬ್ಬಿಕೊಂಡರೆ ಆಕೆಗೆ "ಈತನಿಗೆ ತಬ್ಬುವುದಕ್ಕೆ ಮಾತ್ರ ಗೊತ್ತು" ಎಂದು ಆಕೆಗೆ ಗೊತ್ತಾಗುವುದು ದೂರದ ಮಾತು (ಒಂದೊಮ್ಮೆ ಆ ಅರ್ಥದಲ್ಲಿ ತಬ್ಬಿಕೊಂಡಿದ್ದು ಹೌದಾಗಿದ್ದರೆ, ದೂರ್ವಾಸ ಓರ್ವ ಶಿಶುಕಾಮಿ ಎಂದು ವ್ಯಾಸರು ಬರೆದಿರುತ್ತಿದ್ದರು). ಇಸ್ತಕ್ಕು ತಬ್ಬಿಕೊಳ್ಳಬಹುದಾದ ವ್ಯಕ್ತಿತ್ವ ದುರ್ವಾಸನದ್ದನದಲ್ಲ. ದುರ್ವಾಸ ಎಂದರೆ ಓರೆಯಾಗಿ , ವ್ಯತ್ಯಸ್ತವಾಗಿ ಬಟ್ಟೆ ಉಟ್ಟವ ಎಂದು. ಅರ್ಥಾತ್ ಅಸ್ಟೊಂದು ಅನಾಕರ್ಷಕ ವ್ಯಕ್ತಿತ್ವ.
ಇಲ್ಲಿನ ಈ ಚುಟುಕದ ದ್ವನಿ - ದುರ್ವಸನಿಂದಲೇ ಕುಂತಿ ಮಕ್ಕಳನ್ನು ಪಡೆದಳು- ಎಂಬಂತಿದೆ.
ಇಲ್ಲಿ ಇನ್ನೊಂದು ಮನೋವೈಜ್ಞಾನಿಕ ವಿಷಯ ವಿವರಿಸುವುದು ಅಗತ್ಯ. ವಿಕ್ಷಿಪ್ತತೆ ನಮ್ಮನ್ನು ಸುಲಭವಾಗಿ ತಾಕುತ್ತದೆ. ಜೋಗಿಯವರೇ ಒಮ್ಮೆ ಬರೆದಂತೆ, ನಮಗೆ ಮಾಸ್ತಿಯವರ ಸರಳ ಮೌಲ್ಯಗಳ ಕತೆಗಳಿಗಿಂತ ಅವಲೋಮಸಂಕರದಿಂದ ಹಾದರ ಮಾಡುವ ಸಂಸ್ಕಾರದ ಪ್ರನೆಶಾಚರ್ಯನ ಕತೆ ಹೆಚ್ಚು ತಾಕುತ್ತದೆ. ಬದುಕಿನುದ್ದಕ್ಕೂ ಸತ್ಯ ಹಾಗು ಅಹಿಂಸೆಯ ವ್ರತವನ್ನು ಪಾಲಿಸಿದ ಗಾಂಧೀಜಿಯ ವ್ಯಕ್ತಿತ್ವಕ್ಕಿಂತ ವೃದ್ಧಾಪ್ಯದಲ್ಲಿ ಅವರು ತಮ್ಮ ಬ್ರಹ್ಮ್ಮಚಾರ್ಯ ಪರೀಕ್ಷಿಸಿಕೊಳ್ಳುವ ಸಲುವಾಗಿ ಎರಡು ಹರೆಯದ ಹೆಣ್ಣುಮಕ್ಕಳನ್ನು ಅವಲಂಬಿಸಿದ್ದರು ಎನ್ನುವ ವಿಕ್ಷಿಪ್ತತೆ ಹೆಚ್ಚು ಆಪ್ತವಾಗುತ್ತದೆ ಮಾತ್ರವಲ್ಲ, ಹೆಚ್ಚು ಆಕರ್ಷಿಸುತ್ತದೆ. ಇದೊಂದು ರೀತಿಯ "ಪಾಯಸದಲ್ಲಿ ಸಗಣಿಯನ್ನು ಹುಡುಕುವ ಮನಸ್ಥಿತಿ".
ಅಂತೆಯೇ ಇಂದಿನ ಸೊ ಕಾಲ್ಡ್ ನವ್ಯರಲ್ಲಿ ಪುರಾಣಗಳಲ್ಲಿ ತಮ್ಮ ಮತಿಯ ಮಿತಿಯನ್ನು ಮೀರಿದ ವ್ಯವಾಹಾರಗಳನ್ನು ಒಂದು ಬಗೆಯ ಪಾಮರ ರಂಜನೆಯ ಹಾದರ ಮಟ್ಟಕ್ಕೆ ಸೀಮಿತಗೊಳಿಸುವ ಹಾಗು ಅದರ ಮೂಲಕ ಸುಲಭವಾಗಿ ಜನರನ್ನು 'ತಲುಪುವ' ಹವ್ಯಾಸ ಹೆಚ್ಚುತ್ತಿದೆ.
ಇಷ್ಟಕ್ಕೆ ನಿಲ್ಲುವುದಿಲ್ಲ. ಇದರ ಮೂಲವನ್ನು ಗಮನಿಸುವಾಗ ಸ್ವಲ್ಪ ಭಯವಾಗುತ್ತದೆ. "ನಮ್ಮ ಮನೋ ಕಾಲ್ಪನಿಕ ಮಟ್ಟಕ್ಕಿಂತ ಹೆಚ್ಚಿನದ್ದು ಯಾವುದೂ ಇಲ್ಲ" ಎನ್ನುವುದು ಇಲ್ಲಿನ ಒಳದ್ವನಿ. ಇದು ಬಹುಷಃ ಬೌಧ್ಧಿಕ ಪ್ರಾಮಾಣಿಕತೆಯ ಕೊರತೆಯ ಒಂದು ಸ್ತಿತಿ.
ಒಟ್ಟಾರೆಯಾಗಿ ಹೇಳುವದಾದರೆ, ಪುರಾಣಗಳಿಂದ ಹಲವು ಸಂದರ್ಭಗಳನ್ನು ರೂಪಕವಾಗಿ ತೆಗೆದುಕ್ಕೊಲ್ಲುವುದು ಸಹ್ಯವಾದರೂ, ಅದರ ಮೂಲ ಪಾಠದ ಬಗೆಗೆ ಅರಿವಿದ್ದರೆ ಕಾವ್ಯಕ್ಕೊಂದು ವಸ್ತುನಿಷ್ಟತೆಯ ಮೆರಗು ಬರುತ್ತದೆ, ಮಾತ್ರವಲ್ಲ, ಕಾವ್ಯದ ದೃಷ್ಟಿ ಇಂದ ನೋಡುವುದಾದರೆ, ಪಾತ್ರದ ಮೂಲ ಕೇಂದ್ರಪ್ರಜ್ಞೆಗೆ ಅಪಚಾರವಾಗುವುದಿಲ್ಲ ಎಂದು ನನ್ನ ಭಾವನೆ.
D.M.Sagar (Original)
ಜೋಗಿಯವರ ಅಭಿಪ್ರಾಯಕ್ಕೆ ಅರ್ಧ ಸಹಮತ.ಪದ್ಯ ಇಷ್ಟವಾಗಲಿಲ್ಲ.ಮತ್ತದೇ ಬೇಸರ !
2,3,4 ಚರಣಗಳು ಯಾವ ಭಾಗದಿಂದ ಬಂದವೆಂದು ತಿಳಿಯಲಿಲ್ಲ. ಪೂರ್ವಜನ್ಮದ ನೆನಪಿರುವುದು ಶಂತನುವಿನ ಪತ್ನಿ, ಭೀಷ್ಮನ ತಾಯಿ ಗಂಗೆಗೆ.`ಅವನು ಅವಳಿಗಾಗಿ ಮತ್ತೆ ಅನುಮತಿ ಕೇಳಲು ಬಂದ ' ಅಂದರೆ? 5ನೇ ಭಾಗದಲ್ಲಿ ಕುಂತಿಯನ್ನು ಆ ರೀತಿ ಚಿತ್ರಿಸಲು ಯಾವ ಆಧಾರವೂ ಇಲ್ಲ.kathe ಸರಿಯಾಗಿ ಗೊತ್ತಿಲ್ಲದೆ ಬರೆದಂತಿದೆ ಪದ್ಯ .
ಅಯ್ಯೋ ಕತೆಯೆ?!ಸ್ವಲ್ಪ ವಿವರಿಸಿದರೆ ಚೆನ್ನ.
-ಸುಧನ್ವಾ
ಪುಟ್ಟ ಹುಡುಗಿ,
"ದೂರ್ವಾಸನ ಬೆಚ್ಚನೆಯ ತಬ್ಬುಗೆಯನ್ನು
ನೆನಪಿಸಿಕೊಳ್ಳುತ್ತಾ ಕೂತವಳಿಗೆ
ಇವನಿಗೆ
ತಬ್ಬಿಕೊಳ್ಳುವುದಷ್ಟೇ ಸಾಧ್ಯ
ಎಂದು ಅರಿವಾದಾಗ
ಮನಸ್ಸಿನಲ್ಲಿ
ಇಂದ್ರ ಮರುತ್ತರು
ಹಾದು ಹೋದರು ಎನ್ನುವುದು ಶುದ್ಧ ಕಲ್ಪನೆ."
‘ಇಲ್ಲಿ ಹಾದುಹೋದರು ಎನ್ನುವುದು ಶುದ್ಧ ಕಲ್ಪನೆ’ ಎಂಬೊಂದು ಸಾಲಿಗಿಂತ ಮೇಲಿರುವ ಸಾಲುಗಳೆಲ್ಲವು ಬರಿಯ ಕಲ್ಪನೆ ಅಂತ ನೀನು ಹೇಳಿದ ಮೇಲೂ ನಾನಿಲ್ಲಿ ಬೇರೆ ಅರ್ಥಗಳ ಹುಡುಕುವುದಿಲ್ಲ. ಕುಂತಿಯನ್ನ ನೆನೆಯುತ್ತ ಕುಂತಾಗ ನಿನಗನಿಸಿದ್ದನ್ನ ನೀನು ಹೇಳಿದ್ದೀಯ ಬಿಟ್ಟರೆ ಕಥೆಯ ತಿರುಳನ್ನೇನೂ ತಿರುಚಿಲ್ಲ. ನಿನ್ನ ಈ ವಯಸ್ಸಿಗೆ ನಿನ್ನೊಳಗೆ ಹುಟ್ಟಿರಬಹುದಾದ ಪ್ರಬುದ್ಧ ಯೋಚನೆಗಳಿವು ಎಂದೇ ಯೋಚಿಸುತ್ತ ಅರ್ಥಗಳ ಒಳಗಣ ಅರ್ಥಗಳ ಇನ್ನಷ್ಟು ಹುಡುಕದೇ, ನನಗೆ ಸಿಕ್ಕಷ್ಟು ಅರ್ಥಗಳ ಅರ್ಥೈಸಿಕೊಂಡು ಸುಮ್ಮನಾಗುತ್ತೇನೆ. ಹಿಂದಿನ ಕಥೆಯ ಆಧಾರವನ್ನೇ ಮುಖ್ಯವಾಗಿಟ್ಟುಕೊಂಡು ಇಂದಿನ ಕವಿಯಿತ್ರಿಯ ಕಲ್ಪನೆಗಳಿಗೆ ತಣ್ಣೀರೆರೆಚುವ ಮನವಿಲ್ಲ.
ಅಂದ ಹಾಗೆ ‘ಕವಿತೆ ಬರೆಯೋಕೆ ಬರೋಲ್ಲ’ ಅಂತಿದ್ದೆ! ನೋಡು ಎಷ್ಟು ಚೆನ್ನಾಗಿ ಬರ್ದಿದೀಯ. ಸಣ್ಣಪುಟ್ಟ ತಪ್ಪುಗಳಾಗತ್ವೆ ಕವಿತೆ ಹೊಸೆಯೋವಾಗ, ನಡೆಯೋನೆ ತಾನೆ ಎಡವೋನು? ನಿಧಾನಕ್ಕೆ ಎದ್ದು ಸಾವರ್ಸ್ಕೊಂಡು ಮುಂದೆ ಹೋಗ್ತಿರಬೇಕು ಕಾಲಿಗೆ ಸಿಕ್ಕ ಕಲ್ಲುಗಳ ರಸ್ತೆ ಮಧ್ಯದಿಂದ ಎತ್ತಿಟ್ಟು ಸುಮ್ಮನೆ ಮುಂದೆ ಹೋಗ್ತಿರಬೇಕು. ಎಡೆವ ಕಲ್ಲುಗಳಿತ್ತ ಎಚ್ಚರಿಕೆಗೆ ಧನ್ಯವಾದ ಹೇಳ್ತಾ... ಅಷ್ಟೆ.
ನೀ ಬರೆದ ಮೊದಲ ಕವಿತೆ ಇದು ಅಲ್ವಾ? ತುಂಬ ಇಷ್ಟವಾಯ್ತು.
-ಹೀಗೊಬ್ಬಳು.
ಡಿ ಎಮ್ ಸಾಗರ ಅವರು ಬರೆದಿದ್ದರ ಬಗ್ಗೆ ನನ್ನ ಸಹಮತ ಇಲ್ಲ. ಪುರಾಣವನ್ನು ಓದಿ ಅದನ್ನು ಯಥಾವತ್ತಾಗಿ ವಿವರಿಸುವುದು ವ್ಯಾಖ್ಯಾನ, ಕವನ ಅಲ್ಲ. ನಮಗೆ ಎಷ್ಟು ಗೊತ್ತಿರುತ್ತೋ ಅಷ್ಟರಿಂದಲೇ ಕವಿತೆ ಹುಟ್ಟುತ್ತದೆ. ಅಧ್ಯಯನ ಮಾಡಿ ಬರೆಯುವುದಕ್ಕೆ ಕವಿತೆಯೇನೂ ಪಿಎಚ್ ಡಿ ಪ್ರಬಂಧವೇ. ದ್ರೌಪದಿ ಒಬ್ಬರ ಕಣ್ಣಿಗೆ ಮಹಾಪತ್ರಿವ್ರತೆಯಾಗಿ ಮತ್ತೊಬ್ಬಳಿಗೆ ಹಾದರಗಿತ್ತಿಯಾಗಿ ಮತ್ತೊಬ್ಬಳಿಗೆ ಕರ್ಣನನ್ನು ಬಯಸಿದ ಕಾಮುಕಿಯಾಗಿ ಕಾಣಬಹುದು. ವೇದವ್ಯಾಸರು ಹೀಗೇ ಬರೆದಿದ್ದರು ಎಂದು ವಾದಿಸುವುದಕ್ಕೆ ನಾವು ಯಾರು. ಅವರು ಬರೆದದ್ದನ್ನೇ ನಾವೂ ಬರೆಯುವುದಾದರೆ ಯಾಕೆ ಬರೆಯಬೇಕು.
ಹೀಗೆ ಸುಮ್ಮನೆ ವಾದಕ್ಕಾಗಿ ಹೇಳುತ್ತಿಲ್ಲ. ನಮ್ಮೂರಲ್ಲಿ ಗಜಾನನ ಜೋಶಿ ಎಂಬ ರಂಗಭೂಮಿ ಕಲಾವಿದರಿದ್ದರು. ಅವರು ತುಂಬ ಚಿಕ್ಕವರಿದ್ದಾಗ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಅವರು ಎಷ್ಟೋ ಸಾರಿ ರಾಮಾಯಣದ ಪಾತ್ರಗಳನ್ನೂ ಮಹಾಭಾರತದ ಪಾತ್ರಗಳನ್ನೂ ಮತ್ತೊಂದು ರೀತಿ ವರ್ಣಿಸುತ್ತಿದ್ದರು. ಅವರ ಕಲ್ಪನೆ, ಕತೆಯ ಪ್ರಕಾರ ಊರ್ಮಿಳೆ ಹದಿನಾಲ್ಕು ವರುಷ ಗಂಡನಿಂದ ದೂರ ಉಳಿದಳೇ ಹೊರತು, ಗಂಡಸಿನ ಸಂಗದಿಂದ ಅಲ್ಲ. ಹೀಗಾಗಿ ವಾಲ್ಮೀಕಿ ಹದಿನಾಲ್ಕು ವರುಷ ಬ್ರಹ್ಮಚಾರಿ ಆಗಿದ್ದವನು ಮಾತ್ರ ಇಂದ್ರಜಿತುವನ್ನು ಕೊಲ್ಲಬಲ್ಲ ಅಂತ ಹೇಳಿದ. ಹೀಗೇ ತಮಗಿಷ್ಟ ಬಂದ ಹಾಗೆ ವರ್ಣಿಸುತ್ತಿದ್ದರು. ಅವರಿಗೆ ಸೀತೆಯ ಹಿಂದೆ ಕಾಡಿಗೆ ಹೋದ ರಾಮನ ಹಾಗೆ, ಲಕ್ಷ್ಮಣನ ಹಿಂದೆ ಊರ್ಮಿಳೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗಳು ಕಾಡುತ್ತಿದ್ದವು. ಕವಿತೆಯ ಬಗ್ಗೆ ಹಾಗೆಲ್ಲ ತರ್ಕಬದ್ಧತೆಯನ್ನೂ ಮೂಲಕ್ಕೆ ನಿಷ್ಠವಾಗಿರುವದನ್ನೂ ಹುಡುಕುವುದ್ಕಕೆ ಹೋಗಬಾರದು ಎಂದೇ ನನ್ನ ಅನಿಸಿಕೆ.
ಕೇವಲ ವಾದಿಸುವದಕ್ಕಲ್ಲ. ಒಂದು ಸ್ಪಸ್ಟಿಕರಣ ಬೇಕೆನ್ನಿಸಿತ್ತು.
ಕವನದ ಮೂಲದ್ರವ್ಯ ಕಲ್ಪನೆಯೀ ಆದರೂ - ಸೀತೆ ದುರ್ಯೋದನನ ಹೆಂಡತಿ - ಎಂಬ ಆಭಾಸ ಪೂರಿತ ಕಾಲ್ಪನಿಕತೆ ಬಹುಷಃ ಅಪ್ರಬುಧ್ಧ ಬೌದ್ಧಿಕ ಸ್ವೇಚ್ಛೆ ಎನ್ನಿಸಿಕೊಳ್ಳುತ್ತದೆ.
ಇನ್ನು ಮಹಾಭಾರತ ಹಾಗು ರಾಮಾಯಣ ಪಾತ್ರಗಳನ್ನು ವಿಭಿನ್ನ ಹಾಗೂ ಸಮಕಾಲೀನ ದೃಷ್ಟಿಕೋನದಿಂದ ನೋಡುವ ಬೌಧ್ಧಿಕ ವ್ಯಾಯಾಮ ಒಂದು ಮಿತಿಯಲ್ಲಿ ಸಹ್ಯ ಅಂತೆಯೇ ವಿವಾದಾತ್ಮಕ ಕೂಡ.
ಮಹಾಕವ್ಯಗಳಿಂದ ರೂಪಕ ಗಳನ್ನು ಎತ್ತಿಕೊಂಡಾಗ ಕವಿಯ ಜಾಣ್ಮೆ ಇರುವುದು, ಪಾತ್ರದ ಕೇಂದ್ರ-ಪ್ರಜ್ಞೆ ಹಾಗೂ ಕಾಲ್ಪನಿಕತೆಯನ್ನು ಸಮತೊಳನಗೊಳಿಸಿ ಕೊಳ್ಳುವಲ್ಲಿ.
ಇನ್ನು ಅಧ್ಯಯನವಿಲ್ಲದೇ ಬರೆಯುವ ಬಗ್ಗೆ!- ಜೋಗಿಯವರು ಎಂತಹ ದಾರ್ಶನಿಕರು ಎಂದು ನನ್ನಗೆ ಇಂದು ಅರಿವಾಗುತ್ತಿದೆ. ಕೆಲವಾರು ವರ್ಷಗಳ ಹಿಂದೆಯೇ ಅವರು ಬರೆದಿದ್ದರು - ಇನ್ನು ಹತ್ತು ವರುಷ ಕವನ ಬರೆಯುವುದನ್ನು ನಿಷೇಧಿಸಬೇಕು ಎಂದು!.
ಅಧ್ಯಯನ ಅವಶ್ಯಕ. ಪಿ ಎಚ್ ಡಿ. ಮಾಡದವರಿಗೆ ಕೂಡ (ಓದದೆ ಬರೆಯುವನ -ರದಲ್ಲಿ ಹೊಡೆ ಎಂದ ಸರ್ವಜ್ಞ!- ಎಂದು ಎಲ್ಲೋ ಸರ್ವಜ್ಞನ ವಚನ ಓದಿದ್ದರ ದೂರದ ನೆನಪು!).
ಇವಿಷ್ಟೂ ಕೇವಲ ನನ್ನ ವಿನಮ್ರ ಅನಿಸಿಕೆ ಮಾತ್ರ, ವಿಮರ್ಶೆ ಖಂಡಿತ ಅಲ್ಲ.
D.M.Sagar (Original!)
,,;)..;)
"ಇಷ್ಟಕ್ಕೆ ನಿಲ್ಲುವುದಿಲ್ಲ. ಇದರ ಮೂಲವನ್ನು ಗಮನಿಸುವಾಗ ಸ್ವಲ್ಪ ಭಯವಾಗುತ್ತದೆ. ನಮ್ಮ ಮನೋ ಕಾಲ್ಪನಿಕ ಮಟ್ಟಕ್ಕಿಂತ ಹೆಚ್ಚಿನದ್ದು ಯಾವುದೂ ಇಲ್ಲ, ಎನ್ನುವುದು ಇಲ್ಲಿನ ಒಳದ್ವನಿ. ಇದು ಬಹುಷಃ ಬೌಧ್ಧಿಕ ಪ್ರಾಮಾಣಿಕತೆಯ ಕೊರತೆಯ ಒಂದು ಸ್ತಿತಿ."
D M Sagar ರವರ ಈ ಸಾಲುಗಳು ಸ್ವಲ್ಪ harsh ಆಯ್ತೆನೋ ಅಂತ ನನಗನ್ನಿಸುತ್ತೆ. ವೇದಗಳ ಕಾಲದಲ್ಲಿಯೇ "ಚಾರ್ವಕಾ ಸಂಹಿತೆ" ಯಂತಹ contrarian school of thought ಗೂ ಸಹ space ಕೊಟ್ಟವರಲ್ಲವೇ ನಾವು:-)
-ಪ್ರಸಾದ್.
"ಇಷ್ಟಕ್ಕೆ ನಿಲ್ಲುವುದಿಲ್ಲ. ಇದರ ಮೂಲವನ್ನು ಗಮನಿಸುವಾಗ ಸ್ವಲ್ಪ ಭಯವಾಗುತ್ತದೆ. ನಮ್ಮ ಮನೋ ಕಾಲ್ಪನಿಕ ಮಟ್ಟಕ್ಕಿಂತ ಹೆಚ್ಚಿನದ್ದು ಯಾವುದೂ ಇಲ್ಲ, ಎನ್ನುವುದು ಇಲ್ಲಿನ ಒಳದ್ವನಿ. ಇದು ಬಹುಷಃ ಬೌಧ್ಧಿಕ ಪ್ರಾಮಾಣಿಕತೆಯ ಕೊರತೆಯ ಒಂದು ಸ್ತಿತಿ."
D M Sagar ರವರ ಈ ಸಾಲುಗಳು ಸ್ವಲ್ಪ harsh ಆಯ್ತೆನೋ ಅಂತ ನನಗನ್ನಿಸುತ್ತೆ. ವೇದಗಳ ಕಾಲದಲ್ಲಿಯೇ "ಚಾರ್ವಕಾ ಸಂಹಿತೆ" ಯಂತಹ contrarian school of thought ಗೂ ಸಹ space ಕೊಟ್ಟವರಲ್ಲವೇ ನಾವು:-)
-ಪ್ರಸಾದ್.
Read as ಚಾರ್ವಾಕ ಸಂಹಿತೆ.
-Prasad
I DON'T WANT TO COMMENT!!
ನನ್ನ ತಲೆಮಾರಿನ ಲೇಖಕರ, ಕವಿಗಳ ಬರಹಗಳೇ ಮಾತಾಡುತ್ತವೆ ಎಂದುಕೊಂಡಿದ್ದೇನೆ...
- ಶಶಿ
ಪ್ರಪ್ರಥಮವಾಗಿ ಇವು ರುಪಕಗಳಲ್ಲ. ನೀವು ಓದಿಕೊಂಡಿರುವ ವೇದವ್ಯಾಸರ ಮಹಾಭಾರತದಲ್ಲಿ ದುರ್ವಾಸರು ಕುಂತಿಗೆ ಮಂತ್ರ-ಪಂಚಕಗಳನ್ನು ಕೊಡುವಾಗ ಆಕೆಗೆ ಐದು ವರ್ಷವಾದರೆ ನನಗೆ ಇಷ್ಟವಾಗುವ "ಹೌದು ಹೀಗೆ ನೆಡದಿರಬಹುದು" ಎಂದು ಸತ್ಯಕ್ಕೆ ಹತ್ತಿರವೆನಿಸುವ ಪರ್ವದಲ್ಲಿ ದುರ್ವಾಸರು ಕುಂತಿಬೋಜನ ಮನೆಗೆ ಬಂದಾಗ she was in her adoloscence.
ಇಲ್ಲಿರುವುದನ್ನು(ಏನೆಂದು ಕರೆಯಬೇಕೆಂದು ಗೊತ್ತಾಗುತ್ತಿಲ್ಲ ಪದ್ಯವೆಂದು ಕರೆಯಲು ಮನಸ್ಸಿಲ್ಲ.ಪದ್ಯಗಳನ್ನು ಬರೆಯಲು ಬರುವುದಿಲ್ಲ ನನಗೆ) ವ್ಯವಧಾನವಿಲ್ಲದೆ ಓದಿಕೊಂಡಿರುವುದರಿಂದ ಅರ್ಥವಾಗುವುದು ಸ್ವಲ್ಪ ಕಷ್ಟವೇ...
'ಇವನಿಗೆ
ತಬ್ಬಿಕೊಳ್ಳುವುದಷ್ಟೇ ಸಾಧ್ಯ'ದಲ್ಲಿ ಇವನು ಎಂದರೆ ಪಾಂಡು.
my last reply was to D.m sagar.
@Sudhanvaa..
ಇಲ್ಲಿ ಬರೆದಿರುವುದೆಲ್ಲಾ ಕುಂತಿಯ ಬಗ್ಗೆ. ಎರಡನೆಯದರಲ್ಲಿ ಕುಂತಿ ಕರ್ಣನನ್ನು ತೇಲಿಬಿಟ್ಟು ಕೊನೆಗೆ ಅವನಿಂದಲೇ ವರ ಪಡೆದು ಬಂದುದರ ಬಗ್ಗೆ ಬರೆದಿದ್ದೇನೆ.
ಮೂರನೆಯದರಲ್ಲಿ
ಅವನು-ಪಾಂಡು
ಅವಳು-ಮಾದ್ರಿ
ಇವಳು-ಕುಂತಿ
ನಾಲ್ಕನೆಯದರಲ್ಲಿ
ಅವನು-ಮರುತ್ತು
ಇವನು-ಪಾಂಡು
ಅವಳು-ಮಾದ್ರಿ
ಅರ್ಥವಾಗುವುದಕ್ಕೆ ಇಷ್ಟು ಸಾಕು ಎಂದೆನಿಸುತ್ತದೆ.
ಆಧಾರವಿದ್ದೇ ಬರೆಯಬೇಕಾ... prijudiced dosent have the freshness of imajination.
@Shantalaa...
ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಪ್ರೀತಿಯಿಂದ ಓದಿದ್ದು ಖುಷಿಯಾಯ್ತು. ನಂಗೆ ನಿಜವಾಗಲು ಪದ್ಯಗಳನ್ನು ಬರೆಯೋಕ್ಕೆ ಬರೋಲ್ಲ. ಇಲ್ಲಿರುವುದನ್ನು ಪದ್ಯಗಳೆಂದು ಹೇಳಲು ನಾಚಿಕೆ..
ಇದಕ್ಕೆ ಮೊದಲು ಒಂದೆರೆಡು ಪದ್ಯಗಳನ್ನು ಬರೆಯುವ ಹಾಗು ಭಾವಾನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ನಾನು ಅಪ್ಪ ಕೂತ್ಕೊಂಡು ಒಂದೇ ಪದ್ಯವನ್ನ ಕನ್ನಡಕ್ಕೆ translate ಮಾಡಿದ್ವಿ ಒಂದಿನ. when we two parted ಅಂತಿದ್ಯಲ್ಲ Robert Browning ಬರೆದದ್ದು, ಅದು. ಅಪ್ಪ ಮಾಡಿದ್ದು ನೋಡಿ ದಂಗಾಗಿ ಹೋದೆ. ನಾ ಮಾಡಿದ್ದು ತೀರ ಕಳಪೆ ಅನ್ನಿಸಿತ್ತು.
@Sunaada nd Prasaad
:-)
@Arun
:-o
ದೂರ್ವಾಸನ ಬೆಚ್ಚನೆಯ ತಬ್ಬುಗೆಯನ್ನು
ನೆನಪಿಸಿಕೊಳ್ಳುತ್ತಾ ಕೂತವಳಿಗೆ
ಇವನಿಗೆ
ತಬ್ಬಿಕೊಳ್ಳುವುದಷ್ಟೇ ಸಾಧ್ಯ" -
ಇಲ್ಲಿ ತಬ್ಬಿಕೊಳ್ಳುವ ಕ್ರಿಯೆ ಮೊದಲಿಗೆ ಆರೋಪಿಸಲ್ಪತ್ತಿದ್ದು ದುರ್ವಾಸನಿಗೆ. ಒಂದು ಕ್ರಿಯಾಪದ ಒಂದು ನಾಮಪದಕ್ಕೆ associate ಮಾಡಿದ ನಂತರ ಉಪಯೋಗಿಸುವ ಸರ್ವನಾಮ ಪದ (ಅವನು, ಅವಳು, ಅಥವಾ ಅವರು) ಕೂಡ ಮೊದಲು ಉಪಯೋಗಿಸಿದ ಕ್ರಿಯಾ ಪದಕ್ಕೆ ನಿಶ್ಚಿತವಾಗಿ associate ಆಗಿರುತ್ತದೆ. ಇದು ನಾನು ಅಲ್ಪ ಸ್ವಲ್ಪ ಬಲ್ಲ ನಾಲ್ಕು +1 ಭಾಷೆಗಳಲ್ಲೂ (kannada, english, hindi, sanskrit,+ dutch) ಅನ್ವಯವಾಗುವ ಸಾಮಾನ್ಯ ವ್ಯಾಕರಣ ನಿಯಮ!.
D.M.Sagar
ಮೊದಲನೇ ಚರಣ `ಶುದ್ಧ ಕಲ್ಪನೆ' ಎಂಬ ವ್ಯಂಗ್ಯ ಮಿಶ್ರಿತ ಪ್ರಯೋಗದಿಂದ ಬಹಳ ಇಷ್ಟವಾಯಿತು .
ಎರಡೇ ಚರಣದ ಬಗ್ಗೆ : `ಆ ನೆನಪೇ ಶಾಪ-ವರ' ಅಥವಾ `ಶಾಪ ವರ ಪಡೆದು ಬಂದಳು' ಅಂತ ಓದಿಕೊಂಡರೆ ಚೆನ್ನಾಗಿದೆ. ಯಾಕೆಂದರೆ... ತೊಟ್ಟ ಬಾಣವನ್ನು ಮತ್ತೆ ತೊಡದಿರು ಮತ್ತು ಐವರು ಪಾಂಡವರನ್ನು ಉಳಿಸು ಎಂದು ಕರ್ಣನಲ್ಲಿ ಕುಂತಿ ಬೇಡಿಕೊಳ್ಳುವುದು ಹೆಚ್ಚು ಪ್ರಚಲಿತದ ಕತೆ. ಅದಕ್ಕವನು ಅರ್ಜುನನ್ನು ಹೊರತುಪಡಿಸಿ, ಉಳಿದವರಿಗ ಏನೂ ಮಾಡುವುದಿಲ್ಲ, ಒಂದು ವೇಳೆ ಕರ್ಣಾರ್ಜುನ ಕಾಳಗದಲ್ಲಿ ಅರ್ಜುನ ಸತ್ತರೆ ನಿನಗೆ ಐವರು ಮಕ್ಕಳು ಉಳಿಯುತ್ತಾರೆ (ಕರ್ಣ ಸೇರಿಸಿ), ನಾನು ಸತ್ತರು ಐವರು ಉಳಿಯುತ್ತಾರೆ ಎನ್ನುತ್ತಾನೆ.
ಆದರೆ ಕರ್ಣನನ್ನು ತೇಲಿಬಿಟ್ಟ ಕುಂತಿ ಅವನಿಂದಲೇ ಮಾತು ಪಡೆದಳು ಅಂತ ಓದಿಕೊಂಡರೆ ...ಊಹೂಂ. `ಮಮ ಪ್ರಾಣಾಹಿ ಪಾಂಡವಾಃ' ಅಂತ ಕೃಷ್ಣನೇ ಕುಂತಿಯ ಬಳಿಯೇ ಹೇಳಿರುವಾಗ, ಆಕೆ ಕರ್ಣನ ಬಳಿ ಪಾಂಡವರನ್ನು ಉಳಿಸು ಅಂತ ಕೇಳುತ್ತಾಳಲ್ಲ ,ಏನದ್ಭುತ ಅದು. ಕತೆಯಲ್ಲೇ ಹೊಸತನಕ್ಕೆ ಸಾಕಷ್ಟು ಅವಕಾಶಗಳಿವೆ. ಹಾಗಿರುವಾಗ ಕತೆಯ ಭಾವದಲ್ಲಿಲ್ಲದ್ದನ್ನು ಎಳೆದು ತರುವ ಏಕಮುಖದ ಪದ್ಯ ಇಷ್ಟವಾಗುತ್ತಿಲ್ಲ. ಇದು ಐದನೇ ಚರಣಕ್ಕೂ ಅನ್ವಯ.
ಮೂರನೇ ಚರಣದ ಬಗ್ಗೆ : ಪಾಂಡು ಮತ್ತೆ ಅನುಮತಿ ಕೇಳಲು ಬಂದಾಗ ಕೊಡುವುದಕ್ಕೆ ಕುಂತಿಯ ಬಳಿ ಮಂತ್ರಗಳೇ ಇರಲಿಲ್ಲ. ಇನ್ನು ಇವಳು ಒಪ್ಪಿದ್ದರೆ ಅವನು ಸಾಯುತ್ತಲೇ ಇರಲಿಲ್ಲ ಎಂಬುದು ಎಲ್ಲಿಯ ತರ್ಕ? ಪುರಾಣವನ್ನು ಈ ರೀತಿ ಆಧರಿಸುವ ಕ್ರಮ ನನಗಂತೂ ಇಷ್ಟವಿಲ್ಲ.
ನಾಲ್ಕನೇ ಚರಣದ ಬಗ್ಗೆ : ಮರುತ್ತು ಮಾದ್ರಿಯನ್ನು ಕರೆದ ಕತೆ ನನಗೆ ಹೊಸದು. ಆಕೆ ಅಶ್ವಿನಿ ದೇವತೆಗಳಿಂದ ಮಕ್ಕಳನ್ನು ಪಡೆದಳು ಅಂತ ಗೊತ್ತು.
ಅರ್ಥವಾಗುವುದಕ್ಕೆ ಕತೆ ಬೇಕಿರುವಾಗ, ಆ ಕತೆ ಹೇಗಿದ ಅಂತ ನೋಡುವುದೂ ಮುಖ್ಯವಲ್ಲವೆ? ಆಧಾರವಿದ್ದೇ ಬರೆಯಬೇಕಿಲ್ಲ. ಆದರೆ ಆಧಾರವಿದ್ದದ್ದರ ಬಗ್ಗೆ ಬರೆಯುವಾಗ ಅದಕ್ಕೆ ತೀರ ಅಪಚಾರವಾಗದಂತೆ ನೋಡಿಕೊಳ್ಳಬೇಡವೆ? ಅನ್ನಿಸಿದ್ದನ್ನ ನೇರವಾಗಿ ಬರೆದಿದ್ದೇನೆ, ಲೇಖಕನಿಗೆ ಕಾಲದ ಹಂಗಿಲ್ಲ , ಇವು ರೂಪಕಗಳಲ್ಲ ಇತ್ಯಾದಿ ಉತ್ತರಗಳು ಈ ಕವನದ ಪ್ರಸ್ತುತಿಯನ್ನು ಸಮರ್ಥಿಸಲಾರವು.
ನಾನು ಇಷ್ಟೆಲ್ಲ ಬರೆದದ್ದು ಪುರಾಣ-ಕಾವ್ಯದ ಬಗೆಗಿನ ಸೆಳೆತದಿಂದಷ್ಟೇ ಹೊರತು ಯಾವ ಪೂರ್ವಾಗ್ರಹದಿಂದಲೂ ಅಲ್ಲ. ಹೊಗಳಿಕೆಯೇ ಪ್ರೋತ್ಸಾಹ, ವಿಶ್ಲೇಷಣೆಯೇ ಆರೋಪ ಅಂತ ನಂಬಿಕೊಂಡಿದ್ದರೆ, ನಾವೆಲ್ಲ ಹಾಳಾಗಿ ಹೋಗುವುದು ಖಂಡಿತ ! ಇನ್ನಷ್ಟು ಬರೀತಾ ಇರಿ. `ಭೆರಪ್ಪರ ಪರ್ವ ಇಷ್ಟವಿಲ್ಲ 'ಅಂತೆಲ್ಲ ಹೇಳುವುದಕ್ಕೆ ನನಗೆ ಯಾವ ಹಿಂಜರಿಕೆಯೂ ಇಲ್ಲ, ಅದು ಜಂಭವೂ ಅಲ್ಲ. -sudhanva
ಹಾಯ್ ಸಿರಿ,
ನಾನೀವತ್ತು ನೋಡಿದೆ ನಿಮ್ಮ ಬ್ಲಾಗ್ ನಾ. ಎಲ್ಲಾ ಜಗಳಗಂಟರು ಸೇರ್ಕೊಂಡ್ಬಿಟ್ಟಿದಾರೆ ಇಲ್ಲಿ. ಪರ್ವಾಗಿಲ್ವೇ ಜಗಳ ಹಚ್ಚೊ ಕಲೆ ನಿಮಗೆ ಚೆನ್ನಾಗಿ ಗೊತ್ತಿದೆ. ಈ ಜಗಳಗಳಿಗೆಲ್ಲ ನಾವು ಕಾಯ್ತಿರ್ತೀವಿ. ಬರೀತಾ ಇರಿ. ಚೆನ್ನಾಗಿ ಬರೀತೀರಾ.
ಪ್ರೀತಿಯಿಂದ
ಶ್ರೀದೇವಿ ಕಳಸದ
DM sagar,
thanx
ನಿಮ್ಮ reply ಓದಿ
ಸುಮಾರು ದಿನಗಳಿನ್ದ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ವಿಷಯಕ್ಕೆ ಮಾತು ಸಿಕ್ಕ ಹಾಗೆ ಆಗಿದೆ.
le akka ninu isht standard agi bardre nammanthor hege artha madkollodu swalpa artha madse:):):)
ಬಹುಶಃ 'ಪರ್ವ' ಓದದವರಿಗೆ ಅರ್ಥವಾಗುವುದು ಕಷ್ಟ...ಅಥವಾ ಸಾಧ್ಯವಿಲ್ಲ...
'ಗಂಗೆಯಲಿ ತೇಲಿ ಬಿಟ್ಟವಳಿಗೆ.....'
ಕುಂತಿ ಗಂಗೆಯಲಿ ತೇಲಿ ಬಿಟ್ಟಿಲ್ಲ ಅಲ್ಲವೇ ಕರ್ಣನನ್ನ...!!!!ರಾಧೆಗೆ ಕೊಟ್ಟಿದ್ದಲ್ಲವೇ?
ಆ ದಿನ ಅವನು ವರ ಕೂಡ ಕೊಡಲಿಲ್ಲ ಅವಳಿಗೆ...
ನಿನ್ನ ಉಳಿದ ಮಕ್ಕಳಿಗೂ ಹೀಗೇ ಹೇಳಬಲ್ಲೆಯ? ಎಂದಂತೆ ನೆನಪು...
ಸರಿ ತಪ್ಪು ಹುಡುಕೊದಕ್ಕಿಂತ ಭಾವನೆಯನ್ನು ಭಾವ ಲೋಕದಲ್ಲಿ ಕುಳಿತು ಓದಿಕೊಳ್ಳುವುದರಲ್ಲಿ ಹಿತವಿದೆ ಎನ್ನಿಸಿತು ಮೇಲಿನ ವಾದ ವಿವಾದಗಳನ್ನು ನೋಡಿ...
ನನಗೆ ಪರ್ವದ ಮಧ್ಯದಿಂದ ಕೊನೆ ಕೊನೆಗೆ ಕೆಟ್ಟವಳು ಎನಿಸುತ್ತ ಹೋದಳು...ಅದರಲ್ಲೂ ಅವಳು ಉತ್ತರೆಗೆ ನಿಯೋಗ ಮಾಡಿಸಲು ಒಪ್ಪದೇ ದ್ರೌಪದಿಗೆ ಬಸಿರಾಗೆಂದು ಹೇಳಿದಾಗ ನಾನು ಕುಂತಿಯನ್ನು ದ್ವೇಷಿಸಿದೆ..
ನೀವು ಬರೆದ ಎಲ್ಲ ಬರಹಗಳೂ ನನಗೆ ಇಷ್ಟ..
ನಯನೀ,
ಪ್ಲೀಸ್ ಕೃಷ್ಣೆಯ ಬಗ್ಗೆ ಬರೆಯಿರಿ..
Post a Comment