Saturday, July 18, 2009

ಸಾಹಿತ್ಯ ಯಾಕೆ ಬೇಕು ಎಂದು ಹೇಳಲು ಯತ್ನಿಸುತ್ತಾ...

‘ಸಾಹಿತ್ಯ ಯಾಕೆ ಬೇಕು?’ ಅನ್ನೋ ಸಾಲು ನೋಡುತ್ತಲೇ ಈ ಪ್ರಶ್ನೆಯನ್ನ ಯಾವತ್ತೂ ಕೇಳಿಕೊಳ್ಳಲೇ ಇಲ್ಲವಲ್ಲ ಅಂತ ನನ್ನ ಬಗ್ಗೆ ನನಗೇ ಆಶ್ಚರ್ಯವಾಯಿತು. ಸ್ಕೂಲಿಗೆ ಹೋಗುತ್ತಿದ್ದ ವಯಸ್ಸಿನಿಂದಲೂ ಸ್ಕೂಲಿಗೆ ಯಾಕೆ ಹೋಗಬೇಕು ಅಂತ ಗೊತ್ತಿತ್ತು. ಯಾಕೆ ಓದಬೇಕು ಅಂತ ಗೊತ್ತಿತ್ತು. ಅಪ್ಪ ‘ಡಾಕ್ಟರಾಗಬೇಕು ನೀನು, ಚನ್ನಾಗಿ ಓದು’ ಅನ್ನುತ್ತಿದ್ದರು. ಇವತ್ತು ಸ್ಕೂಲಿಗೆ ಹೋಗುವುದು ನಾಳೆ ಡಾಕ್ಟ್ರಾಗುವುದಕ್ಕೆ ಅಂದುಕೊಂಡಿದ್ದೆ. ಅಮ್ಮನಿಗೆ ಮನೆಕೆಲಸದಲ್ಲಿ, ಅಡುಗೆ ಮಾಡುವುದಕ್ಕೆ ಸಹಾಯ ಮಾಡುತ್ತಿದ್ದರೆ, ಈಗಲೇ ಎಲ್ಲಾ ಕಲಿತುಬಿಡು ಮುಂದೆ ನಿನಗೆ ಕಷ್ಟವಾಗುವುದಿಲ್ಲ ಅನ್ನುತ್ತಿದ್ದಳು. ಸ್ನಾನ ಮಾಡುವುದು ಕ್ಲೀನಾಗಿರುವುದಕ್ಕೆ, ಕ್ರೀಮು, ಪೌಡ್ರು ಹಚ್ಚಿಕೊಳ್ಳುವುದು ಚನ್ನಾಗಿ ಕಾಣೋದಕ್ಕೆ, ವಾಕಿಂಗು ಸೈಕ್ಲಿಂಗು ಆರೋಗ್ಯವಾಗಿರೋಕ್ಕೆ ಅಂತೆಲ್ಲಾ ಹೇಳಿಕೊಟ್ಟರು. ಆದರೆ ಮನೆಯಲ್ಲಿ ಅಷ್ಟೊಂದು ಪುಸ್ತಕಗಳನ್ನ ಅಪ್ಪ ಯಾಕೆ ಇಟ್ಟಿದ್ದರು ಅಂತ ಯಾವತ್ತೂ ಹೇಳಲಿಲ್ಲ. ಅಪ್ಪ ಅಂದ ತಕ್ಷಣ ನೆನಪಾಗುವುದು ಅವರು ಪುಸ್ತಕವೊಂದನ್ನು ಕಯ್ಯಲ್ಲಿ ಹಿಡಿದುಕೊಂಡು ಮಂಚದಮೇಲೆ ಆರಾಮಾಗಿ ಕೂತು ಓದುತ್ತಿದ್ದುದು. ಅಪ್ಪ ಯಾಕೆ ಹಾಗೆ ಓದುತ್ತಿದ್ದರು? ನಾನು ಹುಚ್ಚು ಹಿಡಿದವಳಂತೆ, ಪರೀಕ್ಷೆ ಹತ್ತಿರ ಬಂದರೂ ಬಯಾಲಜಿ, ಫ್ಹಿಸಿಕ್ಸ್ ಪುಸ್ತಕಗಳೊಳಗೆ ವೈದೇಹಿ, ಅನಂತಮೂರ್ತಿ, ಕುವೆಂಪು, ಬೈರಪ್ಪನವರ ಕಥೆ ಕಾದಂಬರಿಗಳನ್ನು ಕದ್ದಿಟ್ಟುಕೊಂಡು ಓದುತ್ತಿದ್ದುದು ಯಾಕೆ? ಲೈಬ್ರರಿಯಿಂದ ಎಲ್ಲರೂ ಸೈಕಾಲಜಿ ಪುಸ್ತಕವನ್ನೋ ಜರ್ನಲಿಸಂ ಪುಸ್ತಕವನ್ನೋ ತೆಗೆದು ಓದಿದರೆ ನಾನ್ಯಾಕೆ ಲಂಕೇಷರ ನಾಟಕಗಳನ್ನು, ಚಾರ್ಲ್ಸ್ ಡಿಕನ್ಸಿನ, ಟಾಲ್ಸ್‌ಟಾಯ್‌ನ ಕಾದಂಬರಿಗಳನ್ನು ಆರಿಸಿಕೊಂಡು ಓದುತ್ತೇನೆ? ಹೀಗೆ ನಾನ್ಯಾವತ್ತೂ ಕೇಳಿಕೊಂಡಿರಲಿಲ್ಲ.

ಆದ್ಯತೆಗಳು ಬದಲಾಗಿವೆ ಹೌದು, ಆದ್ಯತೆಗೆಳು ಬದಲಾಗಿರುವುದು ಈಗ ಮಾತ್ರವಾ? ಪ್ರತಿಯೊಂದು ತಲೆಮಾರಿನ ಆದ್ಯತೆಯೂ ತನ್ನ ಹಿಂದಿನ ತೆಲೆಮಾರಿನ ಆದ್ಯತೆಗಿಂತ ಭಿನ್ನವಾಗಿರುತ್ತದೆ. ಹಾಗಂತ ಸಾಹಿತ್ಯಕ್ಕೆ ಅದರಿಂದ ಹೊಡೆತ ಬಿದ್ದಿದೆಯಾ? ಬೆಂಗಳೂರಿನ ಜನ ಟ್ರಾಫಿಕ್ಕಿನಲ್ಲೇ ದಿನದ ಅರ್ಧ ಕಳೆದುಕೊಳ್ಳುತ್ತಾರೆ, ನನ್ನ ಕೆಲವು ಸ್ನೇಹಿತರಿಗೆ ಏನನ್ನದರೂ ಓದುವುದಕ್ಕಿಂತ ಇಂಟರ್ನೆಟ್ಟಲ್ಲಿ ಚಾಟ್ ಮಾಡುವುದು, ಸ್ನೇಹಿತರ ಜೊತೆ ಸುತ್ತಾಡುವುದು, ಬೀಚಿಗೆ ಹೋಗೋದು, ಸಿನಿಮಾಗಳಿಗೆ ಹೋಗೋದು ಇಷ್ಟ ಆಗುತ್ತೆ. ಅದು ಅವರವರ ಇಷ್ಟ, ನನಗೆ ಓದುವುದು ಹೇಗೆ ಪ್ರೀತಿಯೋ ಹಾಗೆ ಅವರಿಗೆ ಇಂಟರ್ನೆಟ್ಟು ಪ್ರೀತಿ. ನಾನು ಲಂಕೇಶರ ‘ನನ್ನ ತಂಗಿಗೊಂದು ಗಂಡು ಕೊಡಿ’ ಹಿಡಿದುಕೊಂಡು ಕೂತಿದ್ದರೆ ನನ್ನ ಸ್ನೇಹಿತೆ ಎಮ್ ಟಿ.ವಿ ರೋಡೀಸ್‌ನಲ್ಲಿ ಯಾರು ಗೆಲ್ಲುತ್ತಾರೆ ಅಂತ ತಲೆಕೆಡಿಸಿಕೊಳ್ಳುತ್ತಾಳೆ. ಆಗ ಎಮ್ ಟಿ.ವಿ, ಇಂಟರ್ನೆಟ್ಟು, ಇಷ್ಟೊಂದು ಟ್ರಾಫಿಕ್ಕು ಇರಲಿಲ್ಲ ಆದರೂ ಎಷ್ಟೋ ಜನ ಏನನ್ನೂ ಓದುತ್ತಿರಲಿಲ್ಲ. ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇರಲಿಲ್ಲ ಅಷ್ಟೆ. ಈಗಲೂ ಅದೇ ರೀತಿ ಸಾಹಿತ್ಯದಲ್ಲಿ ಆಸಕ್ತಿ ಇರುವವರು ಓದುತ್ತಾರೆ ಇಲ್ಲದವರು ತಮ್ಮ ಆಸಕ್ತಿಗಳೆಡೆಗೆ ಹೊರಳಿಕೊಳ್ಳುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ಆ ವಿಶಯಕ್ಕೆ ಜನರು ಹೆಚ್ಚಿನ ಆದ್ಯತೆ ಕೊಟ್ಟರು, ಆಗ ಅಂಥ ಸಾಹಿತ್ಯ ಬಂತು. ಕೆಲವು ದಿನಗಳ ನಂತರ, ಪ್ರಕ್ರುತಿಗೆ ಆದ್ಯತೆ ಕೊಟ್ಟರು, ಮುಂದಿನವರು ಸಮಾನತೆ ಅಂದರು, ಸ್ತ್ರೀ ಶೋಶಿಸಲ್ಪಡುತ್ತಿದ್ದಾಳೆ ಅಂತ ಗೊತ್ತಾಯಿತು, ಹೀಗೆ ಜನರ ಗಮನ ಒಂದರಿಂದ ಇನ್ನೊಂದಕ್ಕೆ ಬದಲಾಗುತ್ತಾ ಹೋಯಿತು. ಪ್ರತೀ ಬಾರಿ ಹೀಗೆ ಆದಾಗಲೂ ಅದಕ್ಕೆ ಸಮಾನಾಂತರವಾಗಿ ಸಾಹಿತ್ಯವೂ ಬದಲಾಗಿದೆ. ಈಗಿನ ಆದ್ಯತೆಗಳಿಗೆ ತಕ್ಕಂತೆ, ರಿಯಲಿಸ್ಟಿಕ್ಕಾಗಿ, ಉತ್ಪ್ರೇಕ್ಷೆಗಳಿಲ್ಲದೆ, ಇಷ್ಟವಾಗುವಂತೆ, ಪೂ ಚಂ ತೆ ಬರೆದರಲ್ಲ. ವಸುದೇಂದ್ರ, ಜೋಗಿ, ವಿವೇಕ್ ಶಾನಭಾಗ ಬರೆದುದನ್ನು ಇಷ್ಟಪಟ್ಟು ಓದುತ್ತೇವಲ್ಲ. ಚೇತನ್ ಭಗತ್ ಕಾದಂಬರಿಗಳಲ್ಲಿ ಏನೂ ಇಲ್ಲ ಅನ್ನುವವರು ಕೂಡಾ ಅದನ್ನು ಓದುತ್ತಾರೆ, ಅರವಿಂದ್ ಅಡಿಗ ‘ಹೀಗೆಲ್ಲಾ ಭಾರತದ ಸ್ಥಿತಿ ಇದೆ’ ಅಂತ ಹೇಳಿ ನಮ್ಮನ್ನು ಆಶ್ಚರ್ಯ ಪಡಿಸುತ್ತಾನೆ. ಕೋಲ್‌ರಿಜ್‌ನ ‘ಕುಬ್ಲಾ ಖಾನ್’ ಆಶ್ಚರ್ಯ್ ಪಡಿಸುವಂತೆ ಈ ಥರ ಅದೆಲ್ಲೋ ಅದ್ಯಾವತ್ತೋ ನಡೆದಿರಬಹುದು ಅಂತ ಅಂದುಕೊಳ್ಳುವಂತೆ ‘ವೈಟ್ ಟೈಗರ್’ನಲ್ಲಿ ಅವನು ಹೇಳಿರುವ ಸ್ಥಿತಿ ಭಾರತದ ಕೆಲವು ಕಡೆಗಳಲ್ಲಾದರೂ ಇದೆ ಎಂದು ಅನಿಸುತ್ತದೆ.

‘ಸಾಹಿತ್ಯದಿಂದ ಹೊಟ್ಟೆ ತುಂಬುವುದಿಲ್ಲ’ ಅಂತ ನಾನು ಸಣ್ಣವಳಿದ್ದಾಗ ಹೇಳಿದ್ದರೆ, ಬೇಡ ಒಂದು ಐದಾರು ವರ್ಷದ ಹಿಂದೆ ಹೇಳಿದ್ದರೂ ಸಹ ನನಗೆ ಈ ಸಾಲಿನ ಅರ್ಥ ತಿಳಿಯುತ್ತಿರಲಿಲ್ಲ. ನಾನು ಅಷ್ಟು ಆಸೆಯಿಂದ ಕಾದಂಬರಿ, ಕಥೆಗಳು, ಸಿಕ್ಕ ಸಿಕ್ಕ ಮ್ಯಾಗ್ಜೈನುಗಳನ್ನ ಓದುತ್ತಿರುವಾಗ, ಮುಂದೆ ನಾನೇನಾದ್ರೂ ಬರೀತಿನಿ, ಅದರಿಂದ ದುಡ್ಡು ಬರುತ್ತೆ ಅಂತ ಗೊತ್ತಿರಲಿಲ್ಲ. ಸಾಹಿತ್ಯ ಯಾಕೆ ಬೇಕು ಅಂತ ಯೋಚಿಸುವಾಗ ಕಥೆಯೋ ಕಾದಂಬರಿಯೋ ಪ್ರಭಂದವೋ ಬರೆದರೆ ಅದರಿಂದ ದುಡ್ಡು ಬರುತ್ತೆ ಅದಕ್ಕೆ ಬರೆಯುತ್ತೀನಿ ಅಂತ ಯಾರಾದರೂ ಯೋಚಿಸುತ್ತಾರ? ಸಾಹಿತ್ಯ ಸ್ರಷ್ಠಿಯಾಗುವುದು ಇನ್ನು ಬರೆಯದೇ ಇರಲು ಸಾಧ್ಯವಿಲ್ಲ ಅನ್ನೋ ಒತ್ತಡದಿಂದಲ್ಲವ, ಅದರಮೇಲಿನ ಪ್ರೀತಿ ಆಸಕ್ತಿಯಿಂದಲ್ಲವ? ಹಾಗೆ ಬರೆದದ್ದು ಮಾತ್ರ ಗೆಲ್ಲುತ್ತದೆ ಅನ್ನುವುದು ನನ್ನ ನಂಬಿಕೆ. ‘ಎನಿಥಿಂಗ್ ರಿಟನ್ ವಿದೌಟ್ ಇಂಟ್ರೆಸ್ಟ್ ಇಸ್ ಇನ್ ಜನರಲ್ ರೆಡ್ ವಿದೌಟ್ ಪ್ಲೆಶರ್’ ಅಂತ ಎಲ್ಲೋ ಓದಿದ ನೆನಪು. ಅದಲ್ಲದೆ ‘ಸಾಹಿತ್ಯ’ ಎನ್ನುವುದು ಬರೀ ಬರೆಯುವುದಕ್ಕಲ್ಲ ಓದುವುದಕ್ಕೂ ಸಂಭಂದ ಪಟ್ಟಿದೆ, ಹಾಗೆ ಓದುವುದಕ್ಕೆ ಯಾರಾದರೂ ದುಡ್ಡುಕೊಡುತ್ತಾರ? ಉಳ್ಟಾ ನಾವೇ ದುಡ್ಡು ಕೊಟ್ಟು ಖರೀದಿಸಿ ಓದಬೇಕು. ಅದಲ್ಲದೇ ಸಾಮಾನ್ಯವಾಗಿ ಈಗಿನ ಯಾವ ಸಾಹಿತಿಯೂ ಸಾಹಿತ್ಯ ತನ್ನ ಹೊಟ್ಟೆ ಹೊರೆಯುತ್ತೆ ಅಂತ ನಂಬಿಕೊಂಡಿಲ್ಲ. ಪ್ರತಿಯೊಬ್ಬರೂ ಬೇರ್ಯಾವುದೋ ಕೆಲಸದಲ್ಲಿದ್ದುಕೊಂಡು ಸಾಹಿತ್ಯವನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಈಗಲೂ ಮತ್ತೆ ಸಾಹಿತ್ಯ ಯಾಕೆ ಬೇಕು ಅಂತ ಕೇಳಿಕೊಂಡಾಗ, ಸಾಹಿತ್ಯದಿಂದ ನಮ್ಮ ತಿಳುವಳಿಕೆ ಹೆಚ್ಚುತ್ತದೆ, ಎಷ್ಟೋ ವಿಷಯಗಳು ಗೊತ್ತಾಗುತ್ತದೆ, ಜನರನ್ನ ಅವರ ಮನಸ್ಸನ್ನ ಇನ್ನೂ ಚನ್ನಾಗಿ ಅರ್ಥ ಮಾಡಿಕೊಳ್ಳಬಹುದು, ರಸಾನುಭವಕ್ಕೆ, ಸಾಮಾಜಿಕ ಉನ್ನತಿಗೆ, ಹೀಗೇ ಯೋಚಿಸುತ್ತಾ ಏನೇನನ್ನೋ ಪಟ್ಟಿ ಮಾಡುತ್ತಾ ಹೋದರೂ, ಇಂಥಾ ಯಾವ ಕಾರಣಗಳು ಗೊತ್ತಿಲ್ಲದಿದ್ದಾಗಲೂ ಪ್ರೀತಿಯಿಂದ ಆಸೆಯಿಂದ ಓದುತ್ತಿದ್ದೆನಲ್ಲಾ ಅನ್ನುವುದು ಜ್ನಾಪಕವಗುತ್ತದೆ. ಬರೆಯದೆ ಇರಲು ಸಾಧ್ಯವಿಲ್ಲ ಅನ್ನಿಸಿದಾಗ ಬರೆದೆನಲ್ಲಾ ಅನ್ನುವುದು ಹೊಳೆಯುತ್ತದೆ. ಓದಿನ ಪ್ರೀತಿಗೆ, ಓದದೇ ಇರಲಾರದ ಕಾತರತೆಗೆ, ಬರೆಯದೇ ಇರಲಾರದಂತೆ ಹೊರಳಿಸುವ ಸಂಕಟಕ್ಕೆ ನನಗೆ ಸಾಹಿತ್ಯ ಬೇಕು.

9 comments:

ಪ್ರಣವ್ said...

Namaste,

ಅರವಿಂದ ಅಡಿಗ ಹೇಳುವುದಕ್ಕಿಂತ ಮುಂಚೆ ಭಾರತ ಹೀಗಿದೆ ಎಂದು ಗೊತ್ತಿರಲಿಲ್ಲ ಎನ್ನುವುದು ಶುದ್ಧ ಸುಳ್ಳು ಅಥವಾ ಅಜ್ಞಾನ. ಎಂತಹ ಸಾಮಾನ್ಯ ಮನುಷ್ಯನಿಗೂ ಗೊತ್ತಿರುತ್ತದೆ ಅದು.

ಪ್ರಣವ್ said...

ಅರವಿಂದ ಅಡಿಗನನ್ನು ಅಥವಾ ಮತ್ಯಾರನ್ನೇ ಆಗಲಿ ಸುಮ್ಮನೇ ಪ್ರಶಸ್ತಿ ಬಂದಿದ್ದಕ್ಕೆ ಉಘ್ಹೇ ಉಘ್ಹೇ ಬೇಡ. ವಸ್ತುನಿಷ್ಠವಾಗಿರಲಿ ಬರೆಯುವುದು. ಸಾಹಿತ್ಯದಿಂದಲೇ ಜೀವನ ತಿಳಿಯುವುದಿಲ್ಲ. ಜೀವನಾನುಭವ ಪಡೆದುಕೊಂಡವರು ಬರೆಯಲು ಬರುವವರು ಸಾಹಿತ್ಯ ಸೃಷ್ಟಿಸುತ್ತಾರೆ. ಇದರಲ್ಲಿ ನಿಮಗೆ ಸಾಹಿತ್ಯ ಏಕೆ ಬೇಕು ಎನ್ನುವುದಕ್ಕಿಂತ ನೀವು ಏನೇನು ಓದಿದ್ದೀರಿ ಅನ್ನುವುದೇ ಜಾಸ್ತಿ ಇದೆ ಮತ್ತು ಒಂದಿಷ್ಟು common popular ಲೇಖಕರ ಹೆಸರುಗಳಿವೆ. ನಿಮ್ಮ ಈ ಲೇಖನ ಎಲ್ಲೋ ಪ್ರಕಟವಾಗಿರಬೇಕಲ್ಲ ಖಂಡಿತ .?

ಬಾಲು said...

ಮೃಗನಯನೀ ಇ ಪ್ರಶ್ನೆ ನನ್ನೂ ಹಲವಾರು ಕಾದಿದೆ. ನಾವು ಯಾಕೆ ಓದುತ್ತೇವೆ ಅನ್ನೋದು ಕ್ಲಿಷ್ಟಕರವಾದ ವಿಷಯ.
ಜ್ಞಾನಾರ್ಜನೆ ಗೆ ಓದುತ್ತಿವಿ ಅನ್ನೋದು ಒಂದು ಸುಂದರ ಸುಳ್ಳು, ಇಂಟರ್ನೆಟ್ ಕಾಲದಲ್ಲಿ ಜ್ಞಾನಾರ್ಜನೆ ಗೆ ಹಲವಾರು ಮಾರ್ಗ ಇದೆ.
ಇನ್ನು ಕಲ್ಪನಾ ಶಕ್ತಿ ವಿಸ್ತಾರ ಮಾಡಿಕೊಳ್ಳಲಿಕ್ಕೆ, ಅನ್ನೋದು ಕೂಡ ಒಂದು ನಾಜೂಕು ಸುಳ್ಳು. ಹ್ಯಾರಿ pottor ಸಿನಿಮಾ ನೋಡೋ ನಾವು ಕಲ್ಪನೆ ಶಕ್ತಿ ವಿಸ್ತಾರಕ್ಕೆ ಪುಸ್ತಾಕ ಅನಿವಾರ್ಯ ಅಲ್ಲ ಅಂತ ಒಪ್ಪಿಕೊಳ್ಳಲೇ ಬೇಕು.

ಲೇಖಕ ಬರೆಯದಿರಲು ಸಾದ್ಯವೇ ಇಲ್ಲ ಅಂದಗ ಬರೆಯುತ್ತಾನೆ, (ಹಠಕ್ಕೆ ಬಿದ್ದು ಬರೆದವರ ಕಾದಂಬರಿ ಒಮ್ಮೆ ಓದಿದ ನಂತರ ತೂಕಕ್ಕೆ ಹೋಗುತ್ತೆ ಅನ್ನೋದು ಸತ್ಯ) ಓದುಗನಿಗೆ ಪುಸ್ತಕ ಒಂದು ಕುಶಿ ಕೊಡೊ ಮಾರ್ಗ, ತ್ಯಾಗರಾಜರ ಕೀರ್ತನೆ ಒಬ್ಬರಿಗೆ ಕುಶಿ ಕೊಡಬಹುದು, ಮಗದೊಬ್ಬಗೆ ರಿಹನ್ನ, ಅಕೊನ್ ಗಳು ಇಷ್ಟ ಆಗಬಹುದು.

ಬಹುಷ್ಯ ನಾವು ಓದೋದು ನಮಗೆ ಕುಶಿ, ನೆಮ್ಮದಿ ....ಸಿಗುತ್ತೆ ಅಂತ ಇರಬಹುದು.

Narasimha Vasista said...

hey again a nice one,,, one thing i noticed in ur writings,,, it will hold the reader,, but some times i m really confused abt the message it gives back , or the conculsion i have taken , same in this case , i dont know why i read sahitya

mahesh said...

ಓದಿನ ಪ್ರೀತಿಗೆ, ಓದದೇ ಇರಲಾರದ ಕಾತರತೆಗೆ, ಬರೆಯದೇ ಇರಲಾರದಂತೆ ಹೊರಳಿಸುವ ಸಂಕಟಕ್ಕೆ ನನಗೆ ಸಾಹಿತ್ಯ ಬೇಕು.....

ಯಾವತ್ತಿನಿಂದಲೋ ಕಾಡುತ್ತಿದ್ದ ಪ್ರಶ್ನೆಗೆ ಸಮಾಧಾನ ಸಿಕ್ಕಂತಾಯಿತು....

Thanks..

ನೀರ ತೆರೆ said...

ಸಾಹಿತ್ಯ ಯಾಕೆ ಬೇಕೆಂದರೆ ನಮ್ಮನ್ನು ನಾವು ಅನ್ವೇಷಿಸಿಕೊಳ್ಳುವುದಕ್ಕೆ. ಬದುಕಿನಲ್ಲಿ ಹೊಸ ಅರ್ಥ ಹುಡುಕುವುದಕ್ಕೆ. ನಮ್ಮದೆ ದೃಷ್ಟಿಕೋನವೊಂದನ್ನು ರೂಪಿಸಿಕೊಳ್ಳಲಿಕ್ಕೆ. ನನ್ನ ಬದುಕಿನ ಅನುಭವವಿದು.

seenu said...

@Mahesh,

:O . dhanya bidi.

Unknown said...

ಸಾಹಿತ್ಯ ಯಾಕೆ ಬೇಕೆಂದರೆ
ದೃಷ್ಟಿಕೋನವೊಂದನ್ನು ರೂಪಿಸಿಕೊಳ್ಳಲಿಕ್ಕೆ

ಅನಿಕೇತನ ಸುನಿಲ್ said...

Mruganayanee,
Mayuradalibandaagle idanna odidvi......neevu helodu nija annisute.
chenda bardideeri.
Abhinandanegalu.
Sunil.