ಹೊರಟು ನಿಂತ ಹುಡುಗೀ,
WHEN we two parted
In silence and tears,
Half broken-hearted
To sever for years…
… If I should meet thee
After long years,
How should I greet thee?
With silence and tears.
ಈ ಸಾಲುಗಳನ್ನ ಬಳಸಿಕೊಳ್ಳದೆ ನಾನು ಹೇಳಬೇಕಾದ್ದನ್ನು ಶುರು ಮಾಡಲು ಸಾಧ್ಯವೇ ಇಲ್ಲವೇನೊ ? ಬೈರನ್ ಕವನದ ಸಾಲುಗಳಿವು. ಅವರು ಬೇರೆಯಾಗಿದ್ದಾರೆ, ಅವಳೇ ಬಿಟ್ಟುಹೋಗಿದ್ದಾಳ? ಇವನು ಇನ್ನು ಜೊತೆಗಿರೋಕ್ಕಾಗಲ್ಲಾ ಬೇರೆಬೇರೆಯಾಗೋಣ ಅಂದಿದ್ದಾನ? ಅಥವ ಇಷ್ಟು ದಿನ ಆದದ್ದಾಯಿತು ಇನ್ನು ನಮ್ಮ ದಾರಿ ನಮಗೆ ಅಂತ ಮಾತಾಡಿಕೊಂಡು ಅಗಲಿದ್ದಾರ? ಅದನ್ನೆಲ್ಲಾ ಊಹಿಸುತ್ತಾ ಕೂತುಕೊಳ್ಳಬಹುದು, ಆದರೆ ಕವಿ ಬೇರೆಯಾದ ಕ್ಷಣದ ಬಗ್ಗೆ ನೆನೆಸಿಕೊಂಳ್ಳುತ್ತಾ ಈಗಿನ ತನ್ನ ಸ್ಥಿತಿಯ ಬಗ್ಗೆ ಹೇಳುತ್ತಾನೆ. ಹೇಳುತ್ತಾನೆ ಏನು ನೋವಿನಲ್ಲಿ ಮಾತಾಡುತ್ತಾನೆ ಅವನಿಗೇನೋ ನಂಬಿಕೆ ಮುಂದೆ ಭೇಟಿಯಾಗುತ್ತೇವೆ, ಆಗ ಅವಳ ಪಕ್ಕ ನಾನಿರಬೇಕಾದ ಜಾಗದಲ್ಲಿ ಇನ್ಯಾರೋ ಇರುತ್ತಾನೆ ಅನ್ನುವುದೂ ತಿಳಿದಿದೆ. ಹಾಗೆ ಭೇಟಿಯಾದಾಗ ಹೇಗೆ ಮಾತಾಡಿಸಲೇ ನಿನ್ನ? ‘With silence and tears?’ ಅಂತ ಪ್ರಶ್ನೆಯಾಗುತ್ತಾನೆ ಅವನು.
ಹಿಂದಿನ ಕಾಲದ ಅಸಫಲ ಪ್ರೀತಿಗಳು ಹಾಗೇ ಇದ್ದವು. ಆಗ ಇದ್ದ ಸಾವಿರಾರು ಅಡೆತಡೆಗಳ ನಡುವೆಯೂ ಪ್ರೀತಿ ಚಿಮ್ಮುತ್ತಿತ್ತಲ್ಲಾ ಆಶ್ಚರ್ಯವಾಗುತ್ತೆ. ಬಡವ ಶ್ರೀಮಂತ ಮೇಲು ಜಾತಿ ಕೀಳು ಜಾತಿ ಅಪ್ಪ ಅಮ್ಮ ಸಮಾಜದ ಭಯ, ಯಾವುದೋ ಕೆಲಸದ ಮೇಲೆ ದೂರದ ಊರಿಗೆ ಹೋಗೋ ಹುಡುಗ ಎಷ್ಟು ದಿನವಾದರೂ ಬರದೇ ಇರೋದು ಇವೆಲ್ಲವುಗಳ ನಡುವೆಯೂ ಪ್ರೀತಿಸುತ್ತಿದ್ದರು. ಪ್ರೀತಿಸುವುದು ಮಾತ್ರವಲ್ಲ ಆ ಪ್ರೀತಿಯನ್ನ ಪಡೆದುಕೊಳ್ಳೋದೂ ಅಷ್ಟೇ ಕಷ್ಟದ್ದಾದ್ದರಿಂದ ‘ದೇವದಾಸ್ ಪಾರ್ವತಿ’ ಥರಹದ ಕಥೆಗಳು ಎಲ್ಲೆಲ್ಲೂ ಹರಡಿಕೊಂಡಿದ್ದವು. ಅವಳು ಹಿರಿಯರ ಒತ್ತಡವನ್ನು ಸಹಿಸಲಾರದೆ ಆತ್ಮಹತ್ಯೆ ಪ್ರಯತ್ನಗಳೆಲ್ಲಾ ವಿಫಲವಾಗಿ ಕೊನೆಗೆ ಭಾವನೆಗಳನ್ನೆಲ್ಲ ಬರಡು ಮಾಡಿಕೊಂಡು, ಯಾರೊಡನೆಯೋ ಜೀವನ ಸಾಗಿಸುತ್ತಿದ್ದಳು. ಇವನು ಮದುವೆಯೇ ಆಗದೇ ಅವಳ ನೆನಪಿನಲ್ಲೇ ಉಳಿದುಬಿಡುತ್ತಿದ್ದ. ಕೆಲವಷ್ಟು ಜನ ಬಿಟ್ಟಿರಲಾರದೆ ಜೊತೆಗಿರಲು ಬಿಡದ ಸಮಾಜವನ್ನೂ ಎದುರಿಸುವ ಧೈರ್ಯವಿಲ್ಲದೆ ಅಮರರಾಗುತ್ತಿದ್ದರು. ಅಂಥದ್ದರಲ್ಲೂ ಕೆಲವರು ಎದುರು ಹಾಕಿಕೊಂಡು ಬದುಕಿ ತೋರಿಸುತ್ತಿದ್ದರು.
ಈಗ ಪ್ರೀತಿಸಿದವರು ಬೇರೆಯಾಗಲು ಕಾರಣಗಳನ್ನ ಹುಡುಕಿಕೊಂಡು ಹೋಗಬೇಕು. ಅಪ್ಪ ಅಮ್ಮ ಅಷ್ಟು ರಿಜಿಡ್ ಅಗಿಲ್ಲ, ಜಾತಿ ಅನ್ನೋದು ಕನ್ಸಿಡರ್ ಮಾಡ್ಬಹುದಾದ್ದಂಥ ವಿಷಯವೇ ಅಲ್ಲ, ಶ್ರೀಮಂತ ಬಡವ ಅನ್ನೋದು ಮುಖ್ಯವಾಗೋಲ್ಲ, ದೂರ ಇದ್ದರೆ ಫೋನು ಇಂಟರ್ನೆಟ್ ಇದೆ.
ಲಷ್ಮೀನಾರಾಯಣ ಭಟ್ಟರ ಅಶ್ವಥ್ ಹಾಡಿದ
ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ
ಇಂದು ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ
ಸಾಲುಗಳು ನೆನಪಾಗುತ್ತಿವೆ. ಅವರು ಹಾಡಿದ್ದು ಪ್ರೇಮಿಗಳ ಎರಡು ಸ್ಥಿತಿಯ ಬಗ್ಗೆ ಅದು ಪ್ರೇಮದ ಸ್ಥಿತಿಯೂ ಆಗಿದೆಯಾ ಅಂತ ಅನುಮಾನ ನನಗೆ. ಅದೆಲ್ಲಾ ಹೋಗಲಿ ಬಿಡು, ಸಮಯ ಕಳೆಯುವುದಕ್ಕೆ, ಪ್ರೀತಿ ಅಂದರೆ ಇದೇನಾ ಅಂತ ಎಕ್ಪೆರಿಮೆಂಟ್ ಮಾಡೋದಕ್ಕೆ, ಎಲ್ಲರೂ ಪ್ರೀತಿಸುತ್ತಿದ್ದಾರೆ ನಾನೂ ಪ್ರೀತಿಸಬೇಕು ಅಂತಂದುಕೊಂಡು ಪ್ರೀತಿಸುವವರ ಬಗ್ಗೆ ಮಾತಾಡುವುದರಲ್ಲಿ ಅರ್ಥವಿಲ್ಲ ಕಣೇ. ಪ್ರೀತಿಸಿದವರೆಲ್ಲಾ ಮದುವೆಯಾಗಲೇಬೇಕಿಲ್ಲ, ಪ್ರೀತಿಯ ಅಂತ್ಯ ಮದುವೆಯಲ್ಲ ಅಂತೆಲ್ಲಾ ಮಾತಾಡುತ್ತೀವಲ್ಲಾ ಹಾಗಾದರೆ ಹೇಳೇ ಸಖಿ ಪ್ರೀತಿಯಂದರೇನು? ಆ ಕ್ಷಣದ ಆನಂದವಾ, ಒಟ್ಟಿಗೆ ಇದ್ದಷ್ಟು ದಿನದ ಅನುಭವಗಳಾ? ಇಲ್ಲಾ ಸಂತೃಪ್ತ ಕಾಮವಾ? ಇದೆಲ್ಲಾ ಆದಮೇಲೆ ‘move on’ ಅಂದು ಬೇರೆಯಾಗುವುದಾ ಅಂತ ಅರ್ಥ ಮಾಡಿಕೊಳ್ಳಲು ತಿಣುಕಾಡುತ್ತಿದ್ದೇನೆ. ‘ಮೂವ್ ಆನ್’ ಪದದ ಅರ್ಥವೇ ಬೇರೆ ಅಲ್ಲವಾ? ನಿಜವಾದ ಪ್ರೀತಿಯೇ ಇಲ್ಲದಿದ್ದರೆ ಮೂವ್ ಆಗುವುದು ಎಲ್ಲಿಗೆ? ಪ್ರೀತಿ ಅನ್ನೊದು ಬರೀ ಇಷ್ಟೇ ಅಲ್ಲ ಅನ್ನೋದಂತೂ ಗೊತ್ತು. ಇಂಥಾ ಪ್ರೀತಿಗೆ ಮೂವ್ ಆನ್ ಅನ್ನೋ ಪದವೂ ಬೇಕಿಲ್ಲ. ಒಂದು ಜಾಗದಲ್ಲಿದ್ದರಲ್ಲವೇ ಬೇರೆ ಕಡೆಗೆ ಹೋಗೋದು?
ಮೊದಲಿನ ಹಾಗೆ ಈಗ ಯಾರು ಪ್ರೀತಿಸುತ್ತಾರೋ, ಔಟ್ ಡೇಟೆಡ್ ಥರ ಮಾತಾಡಬೇಡ ಅನ್ನಬಹುದು ನೀನು. ಪ್ರೀತಿಗೆ ಮೊದಲು ಕೊನೆ ಇದೆಯಾ ಅಂತ ಕೇಳಿಕೊಳ್ಳುತ್ತೇನೆ ನಾನು. ನನ್ನ ತುಂಬೆಲ್ಲಾ ಬರೀ ಪ್ರಶ್ನೆಗಳು. ಹಿಂದಿನ ಕಾಲದ ಪ್ರೇಮಿಗಳಿಗೆ ಆಪ್ಶನ್ಸ್‌ಸೇ ಇರಲಿಲ್ಲ. ಅವರ ಜಗತ್ತು ಇಷ್ಟು ವಿಶಾಲವಾಗಿರಲಿಲ್ಲ. ಅಲ್ಲಿ ಇಷ್ಟು ವೈವಿಧ್ಯಗಳಿರಲಿಲ್ಲ. ನಮಗೆ ನೂರಾರು ದಾರಿಗಳು. ಸಾವಿರಾರು ಆಯ್ಕೆಗಳು ದಿನಾ ಯಾರ್ಯಾರನ್ನೋ ಭೇಟಿಯಾಗುತ್ತೇವೆ ಒಬ್ಬರಿಗಿಂತ ಇನ್ನೊಬ್ಬರು ಭಿನ್ನ ಒಬಳ್ಳಿಗಿಂತ ಇನ್ನೊಬ್ಬಳು ಸುರಸುಂದರಿ, ಮತ್ತೊಬ್ಬ ಮತ್ತಷ್ಟು ಬುದ್ದಿವಂತ, ಇನ್ಯಾರೋ ಬುದ್ದಿವಂತೆ, ಮತ್ತೆಲ್ಲೋ ಪ್ರಭುದ್ದ ಹುಡುಗ. ಪ್ರೀತಿಮಾಡಿದ ಮೇಲೆ ತಪ್ಪು ಮಾಡಿದೆನಾ ಅನ್ನಿಸತೊಡಗುತ್ತದೆ. ಅವನಿಗಿಂತ ಇನ್ನೊಬ್ಬ ವಾಸಿ ಅನ್ನಿಸುತ್ತನೆ. ಇವಳಾಗಿದ್ದರೆ ಇನ್ನೂ ಹೆಚ್ಚು ಅರ್ಥಮಾಡಿಕೊಳ್ಳುತ್ತಾಳೇನೋ? ಕೇಳಿಕೊಳ್ಳುತ್ತದೆ ಮನಸ್ಸು. ಆಯ್ಕೆಗಳು ಕಂಡ ತಕ್ಷಣ ಪ್ರೀತಿ ಬದಲಾಗುವುದಾದರೆ ಅದು ಪ್ರೀತಿಯೇ ಅಲ್ಲ.
‘love is not love which alters when alteration finds’
ನಾವು ಯಾರನ್ನಾದರೂ ಪ್ರೀತಿಸಿದ್ದೇ ಆದರೆ, ಅವರನ್ನ ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಬೆಳಬೇಕು ಕಣೇ. ‘ನೀನು ಇದ್ದಂತೆ ನಿನ್ನ ಪ್ರೀತಿಸುತ್ತೇನೆ ನೀನೇನು ಬದಲಾಗಬೇಕಿಲ್ಲ’ ಅನ್ನೋದೆಲ್ಲಾ ಬೊಗಳೆ. ನಾನು ನಿರೀಕ್ಷಿಸಿದಂಥ ಹುಡುಗಿಯನ್ನ ಪ್ರೀತಿಸಿದ್ದರೆ ಅವಳು ಬದಲಾಗಬೇಕಿಲ್ಲ ಹೌದು. ನೀನು ಪ್ರೀತಿಸೋ ಹುಡುಗ ನಿನ್ನ ಇಷ್ಟದಂತಿದ್ದರೆ, ನೀನು ಹಾಗಿರೋ ಹೀಗಿರೋ ಅಂತೆಲ್ಲಾ ಹೇಳಬೇಕಿಲ್ಲ. ಹಂಗಿಲ್ಲದೇ ಹೋದರೇ ಅವರಿಗೆ ಹಿಂಸೆ ಮಾಡದೆ ಅವರನ್ನು ಬದಲಾಯಿಸಲು ಪ್ರಯತ್ನಿಸಬೇಕು. ಪ್ರೀತಿ ಏನನ್ನೂ ಬದಲಾಯಿಸುತ್ತದೆ ಅನ್ನೋದನ್ನ ನಂಬುತ್ತೀಯಲ್ಲ. ಅವಳು ಹೆದರಿಕೆ ಸ್ವಭಾವದವಳಾ ಲೆಟ್ ಹಿಂ ಮೇಕ್ ಹರ್ ಟಫ್, ಅವನಿಗೆ ಇನ್ಸೆಕ್ಯುರಿಟಿಯಾ ಇವಳು ನಂಬಿಕೆ ತುಂಬಲಿ, ಅವಳು ಪೊಸೆಸ್ಸಿವಾ? ಟೀಚ್ ಹರ್ ಹೌ ಟು ಗಿವ್ ಸ್ಪೇಸ್. ಅವನಿಗೆ ಕೀಳರಿಮೆಯಾ? ನಾಟ್ ಹಾಪನಿಂಗ್ ಅನ್ನಿಸುತ್ತಾನ? ತಲೆಚಿಟ್ಟು ಹಿಡಿಯುವಂತೆ ಬಡ ಬಡ ಮಾತಾಡುತ್ತಾಳ? ಅಸಾಧ್ಯ ಸಿಟ್ಟಾ? ಪ್ರತಿಯೊಂದನ್ನು ನಿಭಾಯಿಸುವುದಕ್ಕೆ ದಾರಿಗಳಿವೆ. ಪ್ರೀತಿಯಲ್ಲಿ ನಿಷ್ಟೆ, ನಂಬಿಕೆ, ಕಾಳಜಿ, ಒಟ್ಟಿಗೆ ಬೆಳೆಯುವ, ಹಿರಿದಾಗುವ, ನಂಗೆ ಅರವತ್ತು ವಷವಾದಾಗಲೂ ನಿನ್ನ ತೊಡೆಯಮೇಲೆ ಹೀಗೇ ಮಲಗಬೇಕು ಕಣೋ ಅನ್ನೋ ಕನಸುಗಳು ಉಸಿರನಿಡುವೆ ಹೆಸರಕೊಡುವೆ ಅನ್ನುವ ಸಂಬ್ರಮ ಎಲ್ಲವೂ ಇವತ್ತಿಗೂ ನಿಜ. ಹಾಗೆ ಪ್ರೀತಿಯನ್ನ ಕೊನೆವರೆಗೂ ಕಾಯ್ದುಕೊಂಡಾಗಲೇ ನಾವು ಕನಸಿದ್ದೆಲ್ಲಾ ನಿಜವಾಗುತ್ತದೆ, ಪ್ರೀತಿಸಿದಮೇಲೆ ಪ್ರೀತಿಯನ್ನ ಕಾಪಿಟ್ಟುಕೊಳ್ಳುವ, ಅದನ್ನ ಹಿತವಾಗಿಬೆಳೆಸಿ, ಅವರಜೊತೆಗಿರುವ ಕನಸಿರುವವರು ಇದ್ದಾರೆ, ಪ್ರೀತಿ ಇದ್ದರೆ ಹಾಗೇ ಇರಬೇಕು.
ಇಶ್ಟೆಲ್ಲಾ ಆದರೂ ಇನ್ನೇನೋ ಆಗಿಬಿಡತ್ತೆ. ಲವ್ ಜಿಹಾದ್ ಅನ್ನೋ ಶಬ್ಧ ಎಲ್ಲಿಂದಲೋ ಬಾಂಬ್‌ನಂತೆ ಎರಗುತ್ತದೆ, ಒಬ್ಬೊಬ್ಬ ಅಮ್ಮಂದಿರು ಮಕ್ಕಳ ಪ್ರೀತಿ ಪ್ರೇಮವನ್ನ ಸಹಿಸದೆ ತೀರ ತಾವೇ ಸಾವಿನ ಕದ ತಟ್ಟಲ ಹೋಗುತ್ತಾರೆ, ನಾವೆಷ್ಟೇ ನಿಷ್ಟೆಯಿಂದ ಪ್ರೀತಿಸಿದರೂ ಅಲ್ಲೊಬ್ಬಳು ಬೇಕಂತಲೇ ಬಿಟ್ಟು ಹೋಗುತ್ತಾಳೆ, ಇನ್ನೊಬ್ಬನಿಗೆ ಪ್ರೀತಿ ಪ್ರೇಮ ಯಾಕೋ ಸಾಕು ಅನ್ನಿಸಿ ಸನ್ಯಾಸತ್ವದ ಕಡೆ ವಾಲುತ್ತಾನೆ. ಬಾ ನಿನ್ನ ನೋಡಿಕೊಳ್ಳುತ್ತೇನೆ ಅಂತ ಕರೆದುಕೊಂಡು ಹೋದವ ಅವಳಿಗೆ ಸರಿಯಾದ ನೆಲೆಯನ್ನೇ ಕಲ್ಪಿಸುವುದಿಲ್ಲ. ಇನ್ನು ಕೆಲವರಿಗೆ ಎಲ್ಲವೂ ಬೇಕು ಅವರೂ ನಿಮ್ಮನ್ನ ಪ್ರೀತಿಸುತ್ತಾರೆ ಆದರೆ ಕೊನೆಯ ಕ್ಷಣದಲ್ಲಿ ಕಮಿಟ್ಮೆಂಟ್ ಬೇಡ ಅನ್ನಿಸಿಬಿಡತ್ತೆ ಹೀಗೆಲ್ಲಾ ಆಗಿ ಪ್ರೀತಿ ಸುಳ್ಳು ಅನ್ನಿಸತೊಡಗುತ್ತಲ್ಲ ಅದು ನರಕ ಯಾತನೆ. ಬೇರೇನೂ ಬೇಡಾ ಅನ್ನಿಸಿ, ಕೆಲವರು ಜೀವನದಿಂದ ವಿಮುಖರಾದರೆ, ಇನ್ನೊಂದಷ್ಟು ಜನ ಸಾವೇ ಮೇಲು ಅಂದುಕೊಳ್ಳುತ್ತಾರೆ, ಮತ್ಯಾರೋ ಬದುಕು, ಸಮಾಜ ಅವರನ್ನು ತಾಳಲಾರದಂಥ ಸ್ಥಿತಿಗೆ ತಳ್ಳಿಕೊಳ್ಳುತ್ತಾರೆ. ಇದ್ಯಾವುದೂ ಆಗಬಾರದು ನಮ್ಮನ್ನು ಬಿಟ್ಟು ಹೋದವರನ್ನ ನಾವು ಸೇರಲಾರದವರನ್ನ ನಾವು ಪ್ರೀತಿಸಿದ್ದಂತೂ ಸತ್ಯ. ಹಾಗೆ ನಿಶ್ಕಲ್ಮತೆಯಿಂದ ಪ್ರೀತಿಸಲು ನಮಗೆ ಸಾಧ್ಯವಾಯಿತಲ್ಲ, ಅದು ನಮ್ಮ ಖುಷಿ. ಅಷ್ಟು ನಮ್ಮಲ್ಲಿರಲಿ, ಸಿಗಲಾರದವರ ಬಗ್ಗೆ ಕಾತರ, ಕಾದ ಕಾವ ಬೇಸರ ಬೇಡ. ಇಂಥ ಸಂದರ್ಭಗಳಲ್ಲಿ ‘ವಿ ಶುಡ್ ಮೂವ್ ಆನ್’ ನಮ್ಮನ್ನು ಇವೆಲ್ಲವುಗಳಿಂದ ಹೊರತರುವ ಪ್ರಯತ್ನಗಳನ್ನು ಮಾಡಬೇಕು. ನಮಗೆ ಖುಷಿ ತರುವಂಥದ್ದನ್ನು ಕಂಡುಕೊಳ್ಳಬೇಕು, ಹಾಗೇ ಬಾಳಬೇಕು. ಇಂಥದೇನಾದರೂ ಆದಾಗ ಅದರಿಂದ ಹೊರಬರುವ ವಿಧಾನಗಳು ನಮ್ಮ ಡಿಫೆ ನ್ಸ್ ಮೆಖ್ಯಾನಿಸಮ್‌ನಲ್ಲೇ ಇದೆ. ಅದನ್ನ ಹುಡುಕಿದರೆ ಸಾಕು ನಾನೇನೂ ಹೇಳ್ಬೇಕಿಲ್ಲ.
ಅದಕ್ಕೇ ಹುಡುಗಿ ಅವನನ್ನು ನೀನು ಬಿಟ್ಟುಬರಬಾರದು, ಯಾವುದಾದರೂ ಸಂಭಂಧದಿಂದ ಕಳಚಿಕೊಳ್ಳುವುದು ಸುಲಭ ಅದನ್ನು ನಿಷ್ಟೆಯಿಂದ ಪ್ರೀತಿಯಿಂದ ನಿಭಾಯಿಸುವುದು ನಿನ್ನಲ್ಲಿ ಜೀವನೋತ್ಸಾಹವನ್ನ ತುಂಬುತ್ತದೆ. ಅವನಿಗೆ ನಿನ್ನ ಪ್ರೀತಿಯನ್ನ ಅರ್ಥ ಮಾಡಿಸು, ಅವನನ್ನು ಅಷ್ಟು ಪ್ರೀತಿಸುವ ನೀನು ಸುಮ್ಮಸುಮ್ಮನೆ ಚಿಕ್ಕ ಕಾರಣಗಳಿಗೆಲ್ಲಾ ಬಿಟ್ಟು ಬರಬಾರದು. ನೀನು ಬಿಟ್ಟು ಬರುತ್ತೇನೆ ಎಂದು ಹೊರಟರೆ ಅವನು ಖಂಡಿತಾ ಹೇಳಿ ಹೋಗು ಕಾರಣ ಎಂದು ಕೇಳಿಯೇ ಕೇಳುತ್ತಾನೆ. ಹೇಳಲು ನಿನ್ನಲ್ಲಿ
ಕಾರಣಗಳಿವೆಯಾ, ಕೇಳಿಕೋ.
ಬಹುಶಃ ನಿನ್ನಲ್ಲಿ ಹೇಳಬಹುದಾದ, ಅವನನ್ನು ಒಪ್ಪಿಸಬಹುದಾದ ಕಾರಣಗಳೇ ಇರುವುದಿಲ್ಲ.
ಯಾಕೆಂದರೆ,
ಒಂದುಹೆಣ್ಣಿಗೊಂದುಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದ ಕನಸ ಕಂಡು
ದುಃಖ ಹಗುರ ಎನುತಿರೆ
ಪ್ರೇಮವೆನಲು ಹಾಸ್ಯವೇ?
ಇಂತಿ,
ನಿನ್ನೊಳಗಿನ ನೀನು
(ವಿಜಯ ಕರ್ನಾಟಕದಲ್ಲಿ ಫೆಬ್ರವರಿ 14ರಂದು ಪ್ರಕಟವಾದ ಬರಹ)
Sunday, February 28, 2010
Subscribe to:
Post Comments (Atom)
6 comments:
ಮ್ರಗನಯನಿ
ಸುಂದರ ಬರಹ
ಶಬ್ದಗಳ ಪ್ರಯೋಗ ಬಹಳಷ್ಟು ಚೆನ್ನಾಗಿದೆ
ಅದರಲ್ಲೂ ''ಅದೆಲ್ಲಾ ಹೋಗಲಿ ಬಿಡು, ಸಮಯ ಕಳೆಯುವುದಕ್ಕೆ, ಪ್ರೀತಿ ಅಂದರೆ ಇದೇನಾ ಅಂತ ಎಕ್ಪೆರಿಮೆಂಟ್ ಮಾಡೋದಕ್ಕೆ, ಎಲ್ಲರೂ ಪ್ರೀತಿಸುತ್ತಿದ್ದಾರೆ ನಾನೂ ಪ್ರೀತಿಸಬೇಕು ಅಂತಂದುಕೊಂಡು ಪ್ರೀತಿಸುವವರ ಬಗ್ಗೆ ಮಾತಾಡುವುದರಲ್ಲಿ ಅರ್ಥವಿಲ್ಲ ಕಣೇ. ಪ್ರೀತಿಸಿದವರೆಲ್ಲಾ ಮದುವೆಯಾಗಲೇಬೇಕಿಲ್ಲ, ಪ್ರೀತಿಯ ಅಂತ್ಯ ಮದುವೆಯಲ್ಲ ಅಂತೆಲ್ಲಾ ಮಾತಾಡುತ್ತೀವಲ್ಲಾ ಹಾಗಾದರೆ ಹೇಳೇ ಸಖಿ ಪ್ರೀತಿಯಂದರೇನು? ಆ ಕ್ಷಣದ ಆನಂದವಾ, ಒಟ್ಟಿಗೆ ಇದ್ದಷ್ಟು ದಿನದ ಅನುಭವಗಳಾ? ಇಲ್ಲಾ ಸಂತೃಪ್ತ ಕಾಮವಾ? ''
ತುಂಬಾ ಹಿಡಿಸಿದ ಸಾಲುಗಳು
DEAR MRUGNAYANEE
REALLY A WONDERFUL ADVICE AND CONSOLATION TO THOSE WHO LOVE. I HAVEN'T READ SUCH A PASSIONATE AND INTIMATE WRITEUP OF LATE. LOVED IT A LOT.
STARTED READING YOUR OTHER WRITE UPS. WHERE WERE YOU ALL THESE DAYS.
- MADAN GOPAL
’ಆಪ್ಶನ್ಸ್‌ಸೇ’ ಇರಲಿಲ್ಲ ಅಂತ ಅಸಂಬದ್ಧವಾಗಿ ಬರೆಯೋದಕ್ಕಿಂತ 'ಆಯ್ಕೆಗಳೇ' ಇರಲಿಲ್ಲ ಅಂತ ಸುಲಭವಾಗಿ ಬರೆಯಬಹುದು.
ಜಾತಿ ’ಕನ್ಸಿಡರ್’ ಮಾಡುವ ವಿಷಯವೇ ಅಲ್ಲ ಅನ್ನುವುದಕ್ಕಿಂತ ಜಾತಿ ’ಪರಿಗಣನೆ’ಗೆ ತೆಗೆದುಕೊಳ್ಳುವ ವಿಷಯವೇ ಅಲ್ಲ ಎಂದರೆ ಕನ್ನಡ ಬರವಣಿಗೆ ಸಾರ್ಥಕವಾಗತ್ತೆ.
Overall a verygood Kannada article with nice topic, presentation and too much use of english words and phrases!
Hi ಮೃಗನಯನೀ,
very nice write up...liked a lot... :-)
Hi ಮೃಗನಯನೀ,
very nice write up...liked a lot... :-)
Nice one Mruganayanee.....
Paperloo odidde...good one ;-)
baritaa iri...print mediadinda daatikonde illi barabeka nimma baravanige? ;-)
Post a Comment