Tuesday, October 3, 2017
ಶ್ರೀನಿವಾಸನ ಫಾರಿನ್ ಹೆಂಡತಿ
ನುಗ್ಗೇಹಳ್ಳಿಯ ಶ್ರೀನಿವಾಸಾಚಾರ್ಯರಿಗೆ ಮೊನ್ನೆ ೮೮ ತುಂಬಿತು. ಒಂದಿಷ್ಟು, ಅತೀ ಕಡಿಮೆ ಅನ್ನುವಷ್ಟು, ಕಿವಿ ಕೇಳಿದರೆ ಅದೇ ಹೆಚ್ಚು. (ಅಷ್ಟಾದರೂ ಭಾಗಮ್ಮ ಯಜಮಾನರೊಂದಿಗೆ ಯಾವುದಾದರೂ ವಿಷಯಕ್ಕೆ ಜಗಳ ಆಡುವುದನ್ನು ನಿಲ್ಲಿಸಿಲ್ಲ.) ಯಾವಾಗಾದರೊಮ್ಮೆ ಮಂಡಿ ನೋವು ಅನ್ನುತ್ತಾರೆ. ಈಗಲೂ ತಮ್ಮ ತಟ್ಟೆ ತಾವೇ ತೊಳೆದುಕೊಳ್ಳಬೇಕೆಂಬ ನಿಯಮ ಪಾಲಿಸುವ ಅವರು, ಅವರ ವಯಸ್ಸಿಗೆ ಆರೋಗ್ಯವಾಗಿದ್ದಾರೆಂದೇ ಹೇಳಬೇಕು.
ಆಹಾರದಲ್ಲಿ ತುಂಬಾ ಕಟ್ಟುನಿಟ್ಟು. ಒಂದು ರೊಟ್ಟಿ ಅಂದರೆ, ಒಂದೇ. ನೀವೇನಾದರೂ ಬಲವಂತ ಮಾಡಿ ಇನ್ನೊಂದು ಕಾಲು ಭಾಗ ಹಾಕಿದಿರೋ.. ಅದು ಹೋಗುವುದು ಕಲಗಚ್ಚಿಗೇ. ಆದರೆ, ತಿಂಗಳಿಗೊಮ್ಮೆ ಮೊಮ್ಮಗನ ಮನೆಗೆ ಹೋದಾಗ, ಅವನ ಹೆಂಡತಿ, ಆ ಹೆಣ್ಣು ಮಗು ಶಾಲಿನಿ, ಅಂಗಡಿಯಿಂದ ಅದೆಂತದು? ಗಟ್ಟಿ ಮೊಸರು? ಮಾಮೂಲಿ ಮೊಸರಲ್ಲ. ಇಲ್ಲಿ ಸಿಗುವುದೇ ಇಲ್ಲ, ಇಲ್ಯಾಕೆ ಚನ್ನರಾಯಪಟ್ಟಣದಲ್ಲೂ ಸಿಗೊಲ್ಲ, ಚಾಕುವಿನಲ್ಲಿ ಕತ್ತರಿಸಬೇಕು, ಆ ಥರಹದ ಗಟ್ಟಿ ಮೊಸರು ತಂದು, ಮೊಸರಿನ ಅನ್ನ ಕಲಸಿ, ಬಡಿಸುವ ಎರಡು ನಿಮಿಷ ಮೊದಲು, ತುಪ್ಪದಲ್ಲಿ ಹುರಿದ ಗೋಡಂಬಿ ಚೂರು, ಮೆಣಸು, ಜೀರಿಗೆ, ಒಂದಿಷ್ಟು ತೆಂಗಿನ ತುರಿ ಹಾಕಿ ಕಲಸಿ ಕೊಟ್ಟರೆ, ನಾಲ್ಕು ತುತ್ತು ಹೆಚ್ಚೇ ಒಳಗೆ ಹೋಗುತ್ತಿತ್ತು. 'ಒಳ್ಳೆಯ ಹೆಣ್ಣು ಹುಡುಗಿ ಅದು. ನಮ್ಮ ಮೇಷ್ಟ್ರ ಮನೆ ಕಡೆಯ ಸಂಭಂಧ.' ಅಂದುಕೊಳ್ಳುವರು.
ತಾತನದೇ ಹೆಸರಿಟ್ಟುಕೊಂಡ ಶ್ರೀನಿವಾಸ ಅವರಮ್ಮನ ಥರ ರೊಮ್ಯಾಂಟಿಕ್ ಫೆಲೊ. ಪ್ರೀತಿಯ ಬಗ್ಗೆ ಅವರಮ್ಮ ಹೇಳಿದ 1970s ಕಥೆಗಳನ್ನೆಲ್ಲಾ ನಂಬಿಕೊಂಡು, ಒಂದಿಬ್ಬರು ಹುಡುಗಿಯರನ್ನ ನ್ಯಾಯವಾಗಿ ಪ್ರೀತಿಸಿದ್ದೂ ಆಯಿತು, ಅವರು ಬಿಟ್ಟು ಹೋದದ್ದೂ ಆಯಿತು. ಕೊನೆಗಿವನು ಮನೆಯವರು ತೋರಿಸಿದ ಹುಡುಗಿಗೆ ಮಾರು ಹೋಗಿ, "ಸರಿ ನೀವು ಹೇಳಿದ ಹುಡುಗೀನೇ ಆಗಲಿ. ಆದರೆ ದೇವಸ್ಥಾನದಲ್ಲಿ ಸಿಂಪಲ್ಲಾಗಿ ಮದುವೆ ಆಗ್ತೀನಿ." ಅಂದಿದ್ದಕ್ಕೆ ಮನೆಯವರೆಲ್ಲಾ ಮುಖಕ್ಕೆ ಮಂಗಳಾರತಿ ಮಾಡಿ, 'ಈಗಲೇ ಮಾವನ ದುಡ್ಡುಳಿಸುವ ಹುಕಿ.' ಅಂತ ಛೇಡಿಸಿದ್ದಲ್ಲದೆ, ಅದ್ದೂರಿಯಾಗಿ ದೊಡ್ಡ ಛತ್ರದಲ್ಲಿ ಮೂರು ದಿನ ಮದುವೆ ಮಾಡಿಸಿದ್ದರು. ಅದನ್ನೆಲ್ಲಾ ನೆನಸಿಕೊಂಡರೆ ಶ್ರೀನಿವಾಸನಿಗೆ ಈಗಲೂ ಮೈ ಉರಿದು ಹೋಗುತ್ತದೆ.
ಶ್ರೀನಿವಾಸಾಚಾರ್ಯರಿಗೆ ಕಿವಿ ಕೇಳುವುದು ಕಡಿಮೆಯಾದಂತೆ ಅವರ ಸ್ನೇಹಿತರ ಬಳಗವೂ ಕುಗ್ಗುತ್ತಾ ಹೋಗಿದೆ. ಬಹಳಷ್ಟು ಆಪ್ತರು ಆಗಲೇ ವೈಕುಂಠದ ಬಾಗಿಲು ತಟ್ಟಿದ್ದರೆ, ಉಳಿದವರು ಮಕ್ಕಳ ಮನೆ ಸೇರಿದ್ದಾರೆ. ಇನ್ನು ಊರಿನಲ್ಲಿರುವ ಉಳಿದವರು ಕಂಡಾಗ, ಗೌರವದಿಂದ 'ಹೇಗಿದೀರ ತಾತ?' ಅಂತಲೊ, 'ಐನೋರೆ ಆರಾಮಕ್ಕದೀರ' ಅಂತಲೊ ಕೇಳುತ್ತಾರೆ. ಅಷ್ಟೇ. 'ಸ್ವಲ್ಪ ಕಾಲು ನೋವು,' ಅಂದರೆ, 'ನಿಮ್ಮ ವಯಸ್ಸಿಗೆ ಇದೇನೂ ಅಲ್ಲವೇ ಅಲ್ಲ, ನಮ್ಮ ಮನೆಯವಳಿಗೆ ಈಗಲೇ, ಇನ್ನೂ ಐವತ್ತಕ್ಕೇ ಮಂಡಿ ಸೆಳೆತ.' ಅನ್ನುತ್ತಾರೆ. ಶ್ರೀನಿವಾಸಾಚಾರ್ಯರು ಬೆಳಗ್ಗೆ ಐದೂ-ಮೂವತ್ತು, ಆರಕ್ಕೆಲ್ಲಾ ಎದ್ದು, ಸ್ನಾನ, ಸಂಧ್ಯಾವಂದನೆ, ಔಪಾಸನಾ ಹೋಮ ಮುಗಿಸಿ, ಭಾಗಮ್ಮ ಕೊಟ್ಟ ಕಾಫಿ ಕುಡಿದು, ತಿಂಡಿ ಶಾಸ್ತ್ರ ಮಾಡಿ, ಮತ್ತೊಂದು ಲೋಟ ಕಾಫಿ ಹಿಡಿದು, ಜಗಲಿ ಕಟ್ಟೆಯ ಮೇಲೆ ಬಂದು ಕೂತರೆ, ದಾರಿಹೋಕರೆಲ್ಲ ತಾವಾಗಿಯೇ ಮಾತನಾಡಿಸುತ್ತಾರೆ, ಹನ್ನೊಂದು ಗಂಟೆಯ ಮೇಲೆ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಮೇಲೆ, ಇವರು ಒಬ್ಬರೇ ಆದಾಗ, ಒಂದಷ್ಟು ಆತ್ಮಾವಲೋಕನ ಮಾಡಿಕೊಂಡು, ಬಿಸಿಲೇರುವ ಹೊತ್ತಿಗೆ ಒಳಗೆ ಬಂದು ಒಂದು ಕುಸ್ತು ನಿದ್ದೆ ಹೋಗುತ್ತಾರೆ. ಊರಿನ ಆಗುಹೋಗುಗಳ ಬಗೆಗೆ ಅಪ್ಡೇಟ್ ಆಗಲು, ಸಂಜೆ ಐದರ ಸುಮಾರಿಗೆ ಕಾಫಿ ಕುಡಿದು, ಊರನ್ನು ಒಂದು ಸುತ್ತು ಹಾಕಿ, ಮತ್ತೆ ಸಿಕ್ಕವರನ್ನು ಮಾತಾಡಿಸಿ, ಊರ ಹೊರಗಿನ ತೋಟದವರೆಗೂ ಹೋಗಿ ಬರುತ್ತಾರೆ. ತೋಟದಲ್ಲಿ ಮಾಡಲೇನಾಗದಿದ್ದರೂ, ಬರುವಾಗ ಪೋಸ್ಟ್ ಮಾಸ್ಟರ್ ಮನೆಯ ಹುಡುಗ ಗೋಪಿ (ಅವನಿಗಿನ್ನೂ ನಲವತ್ತೂ ಆಗಿಲ್ಲವೇನೋ.) ಸಿಗುತ್ತಾನೆ. ಅವನೊಬ್ಬನೇ ತಮಗೆ ಸರಿಯಾಗಿ ಕೇಳುವಂತೆ ಮಾತಾಡುವುದು. ಅದ್ಯಾವ ಪ್ರೀತಿಯೋ. ಊರ ಕಥೆಗಳೆಲ್ಲವನ್ನೂ ಹೇಳುತ್ತಾನೆ. ಅವನ ಮನೆ ತಲುಪಿ ಅವನ ಹೆಂಡತಿ ಕೊಟ್ಟ ಕಾಫಿ ಕುಡಿದೇ ಇವರು ತಮ್ಮ ಮನೆಗೆ ವಾಪಾಸ್ಸಾಗುವುದು.
ಅವನು ಹೇಳಿಯೇ ಅವರಿಗೆ ಕಲ್ಕುಂಟೆಯ ಶಲ್ವಪಿಳ್ಳೆಯ ಕಥೆ ಗೊತ್ತಾದದ್ದು. ಶಲ್ವಪಿಳ್ಳೆಗೆ ವಯಸ್ಸಾದದ್ದು ಹೌದು, ಜಬರದಸ್ತು ಕಮ್ಮಿಯಾಗಲಿಲ್ಲ. ಇನ್ನೂ ಮೂವತ್ತರ ಹರೆಯದವನ ಥರ ಕೋರ್ಟು ಕಛೇರಿ ಅಂತ ಅಲೆಯುವ ಹುಕಿ. ಹೊಸಕೋಟೆಯಲ್ಲಿ ಬಸ್ಟ್ಯಾಂಡ್ ಬಳಿಯ ಕಾರ್ನರ್ ಸೈಟಿನ ಮಳಿಗೆಯನ್ನು ಮಾರಿ ದುಡ್ದನ್ನು ಮುಚ್ಚಿಟ್ಟು, ಮಳಿಗೆ ಕೊಂಡವನ ಮೇಲೇ ಕೇಸು ಹಾಕಿ ಬಿಡೋದೆ? 'ನನಗೆ ಮೋಸ ಆಗಿದೆ, ನಾನು ಮಳಿಗೆ ಮಾರಿಯೇ ಇಲ್ಲ.' ಅಂದನಂತೆ ಜಡ್ಜಿನ ಮುಂದೆ. ದುಡ್ಡು ಕೊಟ್ಟು, ಮಳಿಗೆ ಕೊಂಡವನನ್ನು ಕಲ್ಕುಂಟೆಯ ರಂಗನಾಥಸ್ವಾಮಿಯೇ ಕಾಪಾಡಬೇಕು.
ಇನ್ನು ಎಂ.ಎ ಗೌಡರ ಒಬ್ಬನೇ ಮಗ ಯಾರೋ ಒಡಿಸ್ಸಾದ ಹುಡುಗಿಯನ್ನು ಪ್ರೀತಿಸಿದಾನಂತೆ. ಎಷ್ಟೋ ದಿನದಿಂದ ಒಟ್ಟಿಗೇ ಇದಾರಂತೆ. ಮದುವೆಗೆ ಮೊದಲೇ. 'ಇದೆಲ್ಲಾ ಈಗ ಬೆಂಗಳೂರಲ್ಲಿ ಕಾಮನ್ನು' ಅಂದ ಗೋಪಿ. 'ಕಾಮನ್ನಾಗಿರೋದೆಲ್ಲಾ ಸರಿ' ಅಂತೇನಲ್ಲವಲ್ಲ. ಗೌಡರು ಅದಕ್ಕೇ ಮಗನ ವಿಷಯವನ್ನೇ ಎತ್ತುತ್ತಿರಲಿಲ್ಲ. ಪಾಪ ಅಂದುಕೊಂಡರು. ಸಧ್ಯ ನನ್ನ ಮಕ್ಕಳೂ, ಮೊಮ್ಮೊಗನೂ ಇಂಥದೇನೂ ಮಾಡಿಕೊಳ್ಳಲಿಲ್ಲವಲ್ಲ. ಅಂತ ಸಮಾಧಾನವಾಯಿತು.
ಇದ್ದಕ್ಕಿದ್ದಂತೆ ತನ್ನ ಮೂವರು ಮಕ್ಕಳು, ಸೊಸೆ ಎಲ್ಲರೂ ಒಟ್ಟಿಗೆ ಊರಿಗೆ ಬಂದದ್ದು ಶ್ರೀನಿವಾಸಾಚಾರ್ಯರಿಗೆ ಕುತೂಹಲ ಹುಟ್ಟಿಸಿತು. ಗಂಡು ಮಕ್ಕಳಿಬ್ಬರೂ ಲೊಕಾಭಿರಾಮವಾಗಿ ಮಾತಾಡುತ್ತಾ ಕೂತಿದ್ದರೂ ರಾಘವನ ಮುಖ ಮ್ಲಾನವಾಗಿತ್ತು. ಮಗಳು ಜ್ಯೋತ್ಸ್ನ, ಸೊಸೆ ಸ್ನೇಹ, ಭಾಗಮ್ಮನ ಜೊತೆ ಅಡುಗೆ ಮನೆ ಸೇರಿದವರು ಹೊರಗೆ ಬರಲೇ ಇಲ್ಲವಲ್ಲಾ ಎಂದುಕೊಂಡು ಒಳಹೋದರೆ, ಭಾಗಮ್ಮನಿಗೆ ಬೇಜಾರಾಗಿದೆಯೆನ್ನುವುದು ಮುಖಚರ್ಯೆಯಲ್ಲೇ ತಿಳಿಯುತ್ತಿತ್ತು. ಏನಾಯಿತೆಂದು ಮಗಳ ಮುಖ ನೋಡಿದರು. 'ಅಪ್ಪಾ ಕಿರುಚಿಕೊಂಡು ಹೇಳೊ ವಿಷಯವಲ್ಲ ರಾಘವ ಆಮೇಲೆ ತಿಳಿಸುತ್ತಾನೆ.' 'ಶ್ರೀನಿವಾಸನ ವಿಷಯ' ಅಂದಳು. ಇವರಿಗೆ ದಿಗಿಲಾಯಿತು. 'ಆರೋಗ್ಯವಾಗಿದಾನ್ಯೇ? ಕೆಲಸ ಹೋಯಿತೋ?' ಅಂತ ತಕ್ಷಣಕ್ಕೆ ತೋಚಿದ್ದನ್ನ ಕೇಳಿದರು. 'ಮೆಲ್ಲಗೆ ಮಾತಾಡಿ' ಎಂದು ಸಂಜ್ಞೆ ಮಾಡುತ್ತಾ 'ಅದ್ಯಾವುದೂ ಅಲ್ಲ. ಸ್ವಲ್ಪ ಹೊತ್ತು ಸುಮ್ಮನಿರಿ.' ಅಂದರು ಭಾಗಮ್ಮ. ಸಂಜ್ಞೆ ಮಾಡಿದ್ದು ತಿಳಿದರೂ ಬೇರೇನೂ ತಿಳಿಯದೆ ಸೊಸೆಯ ಕಡೆ ಹತಾಶರಾಗಿ ನೋಡಿದರು. "ಮಾವಾ ಆಮೇಲೆ ಇವರೇ ತಿಳಿಸುತ್ತಾರೆ. ಜೋರಾಗಿ ಮಾತನಾಡಿದರೆ ಅಕ್ಕಪಕ್ಕದ ಮನೆಯವರಿಗೆ ಕೇಳಿಸುತ್ತೆ." ಎಂದು ನಿಧಾನವಾಗಿ ಕೇಳಿಸುವಂತೆ ಹೇಳಿದಳು. ಬೇರೆಯವರಿಗೆ ತಿಳಿಯಬಾರದಂಥಾ ವಿಷಯ ಎಂದು ಇನ್ನೂ ದಿಗಿಲಾಯಿತು. ಕಿವಿಕೇಳಿಸದೆ ಹೀಗಾಗಿ ಹೋಯಿತಲ್ಲಾ ಎಂದು ಸಿಟ್ಟು ಬಂತು. "ಇಷ್ಟನ್ನಾದರೂ ಸಮಾಧಾನವಾಗಿ ಹೇಳಿದಳು ಸೊಸೆ. ಸೊಸೆಗೆ ಮೊದಲಿನಿಂದಲೂ ಸಮಾಧಾನ ಜಾಸ್ತಿ. ಈ ರಾಘವನ ಜೊತೆ ಸಮಾಧಾನ ಇಲ್ಲದವರು ನೀಸಲು ಸಾಧ್ಯವಿತ್ತೇ ಅಂದುಕೊಂಡು ಅಡುಗೆ ಮನೆಯಿಂದ ಹೊರನಡೆದರು.
ರಾಘವ ಅವರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಊರ ಹೊರಗಿನ ನಾಲೆ ಬಳಿ ಬಂದು ನಿಲ್ಲಿಸಿದ. ನಾಲೆಯಲ್ಲಿ ಈಗ ನೀರಿರಲಿಲ್ಲ. ಶ್ರೀನಿವಾಸನನ್ನು ಇಲ್ಲಿಗೆ ಈಜು ಕಲಿಸಲು ಪ್ರತೀ ವರ್ಷ ಕರೆದುಕೊಂಡು ಬರುತ್ತಿದ್ದುದು ನೆನಪಾಯಿತು. ಇವರು ರಾಘವನನ್ನೇ ನೋಡುತ್ತಿದ್ದರು. ಅವನು ನಾಲೆ ನೋಡುತ್ತಿದ್ದ. ಮುರಳಿಯಂತೂ ತನ್ನನ್ನೆಲ್ಲಿ ಕೇಳಿಬಿಡುತ್ತಾರೋ ಎನ್ನುವಂತೆ ತಲೆತಗ್ಗಿಸಿಕೊಂಡು ನಿಂತಿದ್ದ. 'ಶ್ರೀನಿವಾಸ ತನ್ನ ಹೆಂಡತಿಗೆ ಡಿವೋರ್ಸ್ ಕೊಡುತ್ತಾನಂತೆ.' ಅಂದ ರಾಘವ. ಇವರಿಗೆ ಕಕ್ಕಾಬಿಕ್ಕಿಯಾಯಿತು. ಕೇಳಿಸಲಿಲ್ಲವೋ, ಹೇಳಿದ್ದು ಮನಸ್ಸೊಳಗೆ ಇಳಿಯಲಿಲ್ಲವೋ, 'ಏನದು?' ಅಂದರು.
ಮುರಳಿ ಹೇಳಿದ 'ಅಪ್ಪಾ ಅವನಿಗೂ ಶಾಲಿನಿಗೂ ಹೊಂದಿಕೆಯಾಗುತ್ತಿಲ್ಲವಂತೆ ದಿನಾ ಜಗಳವಂತೆ. ಇವನಿಗೆ ಸಾಕಾಗಿದೆ.' ಇವರಿಗೆ ಕೋಪ ನೆತ್ತಿಗೇರಿತು. 'ನಿಮ್ಮಮ್ಮನೂ ನನ್ನ ಜೊತೆ ನಿತ್ಯವೂ ಜಗಳವಾಡುತ್ತಾಳೆ, ಆಡಿದ್ದಾಳೆ. ಡಿವೋರ್ಸ್ ಕೊಟ್ಟು ಬಿಡಲೇ?' ಅಂದರು. ಮಕ್ಕಳಿಬ್ಬರೂ ಮಾತಾಡದೇ ನಿಂತಿದ್ದರು. 'ಈ ಕಿವುಡನ ಹತ್ತಿರ ಮಾತಾಡೋದೇನು ಅಂತ ಸುಮ್ಮನೆ ನಿಂತಿದ್ದೀರೋ?' ಮತ್ತೆ ಗದರಿದರು. 'ಅಪ್ಪಾ ಕೋಪಿಸ್ಕೋಬೇಡ. ರಾಘವನಿಗೆ ಮೊದಲೇ ಬೇಜಾರಾಗಿದೆ. ಇನ್ನೇನು ಮಾತಾಡುತ್ತಾನೆ?' ಎಂದ ಮುರಳಿ. 'ನಿನ್ನ ನಾಲಿಗೆ ಬಿದ್ದು ಹೋಗಿದ್ಯೇನು? ನೆಟ್ಟಗೆ ಏನಾಯಿತು ಅಂತ ಹೇಳು. ನೀನು ವಹಿಸಿಕೊಂಡು ಬರಬೇಡ ಅವನಿಗೆ ಬುದ್ದಿ ಹೇಳಿದಿರೋ ಇಲ್ಲವೋ? ಶ್ರೀನಿವಾಸನಿಗೆ ತೆಂಗಿನ ವರಗಲ್ಲಿ ನಾಲ್ಕು ಬಿಡಬೇಕು. ಅಷ್ಟು ಒಳ್ಳೆ ಹೆಣ್ಣು ಮಗಳ ಜೊತೆ ಬಾಳ್ವೆ ಮಾಡಲಾಗದವನು ಇನ್ನೇನು ಮಾಡಿಯಾನು? ನಾನು ಹೋಗಿ ಮಾತಾಡಿ ಬರುತ್ತೇನೆ.' ಅಂದರು.
ಅತ್ತೆ ಜೋತ್ಸ್ನ, 'ತಾತ ನಿನ್ನ ಜೊತೆ ಮಾತಾಡಬೇಕಂತೆ. ಬೆಂಗಳೂರಿಗೆ ಬರುತ್ತಾರೆ ನಮ್ಮ ಜೊತೆ. ಎಷ್ಟು ಹೇಳಿದರೂ ಕೇಳುತ್ತಿಲ್ಲ.' ಅಂದಾಗ 'ಸರಿ ಅತ್ತೆ.' ಅನ್ನುವಷ್ಟು ಚೈತನ್ಯವೂ ಶ್ರೀನಿವಾಸನಿಗೆ ಉಳಿದಿರಲಿಲ್ಲ. ಹುಡುಗೀರ ವಿಷಯದಲ್ಲಿ ತನಗೆ ಬರೀ ಸರ್ಪ್ರೈಸುಗಳೇ ಅಂತ ತನ್ನ ಸ್ಥಿತಿಗೆ ತನಗೇ ನಗು ಬಂತು. 'ಶಾಲಿನಿ ಎಲ್ಲಾ ವಿಷಯದಲ್ಲೂ ಎಲ್ಲರಿಗೂ ಒಪ್ಪಿಗೆಯಾಗುವಂತೆ, ಯಾರಿಗೂ ಬೇಸರವಾಗದಂತೆ, ತುಂಬಾ ಲವಲವಿಕೆಯಿಂದ ಇದ್ದುದರಿಂದ, ಎಲ್ಲರೂ ಅವಳನ್ನು ಇಷ್ಟಪಡುತ್ತಾರೆ. ನನಗೆಷ್ಟು ಹೆಮ್ಮೆ ಇತ್ತು. ಹೀಗೆ ಮೋಸ ಹೋಗಿಬಿಟ್ಟೆನಲ್ಲಾ. ನನಗ್ಯಾಕೆ ತೋಚಲೇ ಇಲ್ಲ. ಸ್ವಲ್ಪ ಎರಾಟಿಕ್ ಆಗಿ ಮಾತಾಡಿದರೂ ಹೆಚ್ಚು ಸ್ಪಂದಿಸುತ್ತಿರಲಿಲ್ಲ. ನಾಚಿಕೆ ಅಂದುಕೊಂಡು ಮೋಸ ಹೋದೆ. ಮದುವೆಯಾದಮೇಲೂ ಯಾವತ್ತಿಗೂ, ಒಂದೇ ಒಂದು ದಿನಕ್ಕೂ ಅವಳಾಗೇ ಆಸಕ್ತಿ ತೋರಿಸಿದವಳಲ್ಲ ಸುಮ್ಮನೆ ಕೊರಡಿನ ಥರ ಇರುತ್ತಿದ್ದಳಲ್ಲ. ನನ್ನ ದಡ್ಡ ಬುದ್ದಿಗೆ ಹೊಳೆಯಲೇ ಇಲ್ಲ. ಇದನ್ನೆಲ್ಲಾ ಎಲ್ಲರಿಗೂ ಹೇಗೆ ಹೇಳಲಿ. ತಾತನಿಗೆ ಇಂಥದನ್ನು ಅರ್ಥ ಮಾಡಿಸಲು ಯಾವತ್ತಿಗಾದರೂ ಸಾಧ್ಯವೇ?
ಬಿಯರ್ ಕುಡಿಯಲು, ಸಿನೆಮಾ, ನಾಟಕ ನೋಡಲು, ಯಾವುದೋ ಮದುವೆ ಮುಂಜಿಗೆ ಹೋಗಲು ಜೊತೆಯಾದರೆ ಸಾಕೆ? ಜೊತೆಗೆ ಸಂಸಾರ ಮಾಡೊಕ್ಕಾಗಲ್ಲ ಅಂದಮೇಲೆ ಏನುಪಯೋಗ?' ಇಷ್ಟು ದಿನ ಅವಳ ಜೊತೆ ಕಳೆದ ಘಳಿಗೆಯೆಲ್ಲಾ ಒಂದು ಸುಳ್ಳಿನಂತೆ ಅನ್ನಿಸಿತು.
ಶ್ರೀನಿವಾಸ ಮದುವೆಯಾದ ಮೇಲೆ ಖರೀದಿಸಿದ ಮರಿಯಪ್ಪನ ಪಾಳ್ಯದ ಅವನ ಮನೆಗೆ, ನುಗ್ಗೇಹಳ್ಳಿಯಿಂದ ಹೆಚ್ಚೆಂದರೆ ಮೂರು ಗಂಟೆ ಕಾಲದ ಪ್ರಯಾಣ. ಮುರಳಿ ಕಾರೋಡಿಸುತ್ತಿದ್ದ. ಅವನ ಪಕ್ಕದಲ್ಲಿ ಶ್ರೀನಿವಾಸಾಚಾರ್ಯರು. ಜೋತ್ಸ್ನ, ಅವರಮ್ಮ ಇನೋವಾದ ಮಧ್ಯದಲ್ಲಿ ಕೂತರೆ, ರಾಘವ ಅವನ ಹೆಂಡತಿ ಹಿಂದೆ ಕೂತರು. ದಾರಿಯುದ್ದಕ್ಕೂ ಅವರೆಲ್ಲಾ ಮಾತಾಡಿಕೊಂಡು ಬರುತ್ತಿದ್ದರೂ ಇವರಿಗೆ ಒಂದಕ್ಷರವೂ ಕೇಳುತ್ತಿರಲಿಲ್ಲ. ತನ್ನ ಮುದ್ದು ಮೊಮ್ಮಗ ಹೀಗೆ ಮಾಡಿದನಲ್ಲಾ ಎಂದು ಮನಸ್ಸು ಕೊರಗುತ್ತಿತ್ತು. 'ಅಪ್ಪಾ ಕಿವಿ ಕೇಳಿಸೋ ಮಿಶಿನ್ ಹಾಕ್ಕೋಬಾರದೆ?' ಎಂದು ಮಗಳು ಕೇಳಿದ್ದನ್ನು ಬಿಟ್ಟರೆ, ಬೇರೆ ಯಾರೂ ಇನ್ನೇನನ್ನೂ ಮಾತಾಡಿಸಲಿಲ್ಲ. ಆ ಮಿಶಿನ್ ಹಾಕಿಕೊಂಡರೆ ಇನ್ನೂ ಹಿಂಸೆ. ಎಲ್ಲಾ ಗೊಜ ಗೊಜ ಎಂದು ಕೇಳುವುದು, ತಲೆನೋವು. ಇವರು ಉತ್ತರ ಕೊಡಲಿಲ್ಲ. ಮಾತಾಡಿದರೆ ತಮ್ಮ ಲಹರಿಗೆ ತೊಡಕಾಗುತ್ತದೆಯೆಂದು ಅವಳು ಹೇಳಿದ್ದು ಕೇಳಲೇ ಇಲ್ಲ ಅನ್ನುವಂತೆ ಇದ್ದುಬಿಟ್ಟರು. ಅವನು ಮೊದಮೊದಲು ಮನೆಯ ದಪ್ಪನೆಯ ಹೊಸ್ತಿಲನ್ನು ತನ್ನ ಅಂಬೆಗಾಲಲ್ಲಿ ದಾಟಿ ಹೊರಗಡೆಯ ಕಲ್ಲು ಮೆಟ್ಟಿಲಮೇಲೆ ಉರುಳಿಕೊಂಡು ಬಿದ್ದಾಗ ಒಂದು ಚೂರೂ ಅಳದೆ, ಬಿದ್ದದ್ದ ಬಿದ್ದದ್ದ ಅನ್ನುತ್ತಾ ಸುಮ್ಮನೆ ಕೂತಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಏನೋ ಕಸ ಕಡ್ಡಿಯನ್ನೋ ಬಾಯಿಗೆ ತುರುಕಿಕೊಂಡು ಅವನ ಅಜ್ಜಿಯನ್ನು ಮನೆ, ಜಗುಲಿ ಊರೆಲ್ಲಾ ಓಡಾಡಿಸಲಿಲ್ಲವೇ? ಮನೆಯ ತುಂಬಾ ತಆಆಆತ ತಾಆಆಆತ ಅಂತ ರಾಗವಾಗಿ ಹೇಳುತ್ತಾ ತನ್ನ ಹಿಂದೆ ಮುಂದೆ ಒಡಾಡಿದ್ದೇ ಓಡಾಡಿದ್ದು, ತೋಟಕ್ಕೂ ಹೋಗಲು ಬಿಡದಂತೆ. ಸ್ಕೂಲಿನ ರಜಾ ದಿನಗಳಲ್ಲಿ ನಾನು ಅವನು ಸುತ್ತದ ಜಾಗಗಳಿಲ್ಲ. ಅವನಿಗೆ ತಾನೇ ಅಲ್ಲವೇ ಬ್ರಹ್ಮೋಪದೇಶ ಮಾಡಿದ್ದು, ಎಂದುಕೊಂಡರು.
ಕಾಲೇಜು ಸೇರುವವರೆಗೂ ಬಿಡದೆ ಅಗ್ನಿಕಾರ್ಯ ಮಾಡಿದ ಶ್ರೀನಿವಾಸ ಆಮೇಲೆ ಕೆಲವು ವರ್ಷ ಪರಿಸರ, ಪ್ರಾಣಿ, ಪಕ್ಷಿ, ಗಿಡ-ಮರ, ಸಮಾನತೆ ಅಂತೆಲ್ಲಾ ಓಡಾಡಿಕೊಂಡಿದ್ದ. 'ತಾತ ನೀನೂ ಔಪಾಸನ ಹೋಮ ಮಾಡೋದನ್ನ ನಿಲ್ಲಿಸು, ಇಷ್ಟು ವರ್ಷ ನೀನು ಅಗ್ನಿಕಾರ್ಯಕ್ಕೆ, ಔಪಾಸನ ಹೋಮಕ್ಕೆ ಅಂತ ಬಳಸಿದ ಚಕ್ಕೆ, ತುಪ್ಪ, ಅಕ್ಕಿ, ಬೆರಣಿಯ ದುಡ್ಡಲ್ಲಿ ಎಷ್ಟು ಬಡ ಮಕ್ಕಳ ಹೊಟ್ಟೆ ತುಂಬುತ್ತಿತ್ತು. ಹೊಟ್ಟೆಗೆ ತಿನ್ನೋದನ್ನ ಹೋಮ ಹವನ ಅಂತ ಬೆಂಕಿಗೆ ಹಾಕೋ ದೌಲತ್ತು ಸರಿ ಅಲ್ಲ. ಹೆಂಗಸರಿಗ್ಯಾಕೆ, ಇತರೆ ವರ್ಗದವರಿಗ್ಯಾಕೆ ಉಪನಯನ ಸಂಸ್ಕಾರ ಮಾಡೋದಿಲ್ಲ? ಇದು ಪುರುಷಪ್ರಧಾನ, ಪುರೋಹಿತಶಾಹಿ ವ್ಯವಸ್ಥೆಯು ಹಾಕಿದ ಕಟ್ಟುಪಾಡು' ಅಂತ ಮೊಮ್ಮಗ ವಾದಿಸಿದರೆ,
'ಪ್ರಾಚೀನ ಕಾಲದಲ್ಲಿ ಎಲ್ಲಾ ವರ್ಣದವರಿಗೂ, ಹೆಣ್ಣುಮಕ್ಕಳಿಗೂ ಕೂಡ ಉಪನಯನ ಸಂಸ್ಕಾರ ಮಾಡುತ್ತಿದ್ದರು. ಉಪನಯನವಾದವರು ಪಾಲಿಸಬೇಕಾದ ನಿಯಮಗಳಿವೆ, ಆ ನಿಯಮಗಳನ್ನು ಪಾಲಿಸಲಾಗದ ಯಾರೂ ಆ ಸಂಸ್ಕಾರಕ್ಕೆ ಯೋಗ್ಯರಲ್ಲ. ನೀನು ಪಾಲಿಸಲು ಯೋಗ್ಯನೋ ಅಯೋಗ್ಯನೋ ನೀನೇ ನಿರ್ಧಾರ ಮಾಡಿಕೋ. ನಾನು ಪುರೋಹಿತ ಶಾಹಿಯೂ ಅಲ್ಲ, ಪುರುಷರೇ ಎಲ್ಲದರಲ್ಲೂ ಮೇಲು ಅನ್ನುವವನಲ್ಲ. ಏನು ಬೇಕಾದರೂ ಪಾಲಿಸುವ- ಬಿಡುವ ಹಕ್ಕು ನಿನಗಿದೆ. ತಾತನೊಬ್ಬ ಮೊಮ್ಮಗ ಹೀಗೆ ಮಾಡಿದರೆ ಅವನಿಗೆ ಶ್ರೇಯಸ್ಸು ಅಂತ ಯೋಚಿಸುತ್ತಾನೆ. ಆ ರೀತಿ ಮಾಡಿಸುತ್ತಾನೆ. ಅಷ್ಟೇ. ದೊಡ್ಡವನಾದೆ ನೀನು. ನಿನ್ನ ಮನಸ್ಸಿಗೆ ಬಂದದ್ದು ಮಾಡು.' ಎಂದು ತಾವೂ ವಾದ ಮಾಡಿ ಕೋಪಿಸಿಕೊಂಡು ಊರಿಗೆ ಬಂದರೆ, ಮಾರನೆಯ ದಿನವೇ ಅವನೇ ಮಾತಾಡಿಸಿಕೊಂಡು ಬಂದಿದ್ದನಲ್ಲಾ. ಚಿನ್ನದಂಥಾ ಹುಡುಗ. ಮನಸ್ಸಿಗೆ ಸರಿ ಅನ್ನಿಸದಿದ್ದರೆ ಜಪ್ಪಯ್ಯಾ ಅಂದರೂ ಏನನ್ನೂ ಮಾಡುವವನಲ್ಲ. ಆದರೂ ಚಿನ್ನದಂಥ ಹುಡುಗ. ತನಗೆ ಮೂರು ಮಕ್ಕಳಿದ್ದರೂ ಒಬ್ಬನೇ ಮೊಮ್ಮಗ. ಮುರಳಿ ಮದುವೆಯಾಗಲಿಲ್ಲ, ಜ್ಯೋತ್ಸ್ನಾಗೆ ಮಕ್ಕಳಾಗಲಿಲ್ಲ. ರಾಘವ ಮತ್ತೊಂದು ಮಗು ಮಾಡಿಕೊಳ್ಳಲಿಲ್ಲ. ಇವನಿಗೇ ಎಲ್ಲಾ ಪ್ರೀತಿ ಸುರಿಸಿದೆ. ಎಷ್ಟು ಮುಚ್ಚಟೆಯಿಂದ ನೋಡಿಕೊಂಡೆ. ಈಗ ಈ ಥರ ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ. ಮೇಷ್ಟ್ರು, 'ನಿಮ್ಮ ಮೊಮ್ಮಗ ಹೀಗೆ ಮಾಡಿದ, ನಮ್ಮ ಹುಡುಗಿಯ ಗತಿ ಏನು?' ಅಂದರೆ ನಾನೇನು ಹೇಳಲಿ ಅಂದುಕೊಂಡು ಕೂತಲ್ಲೇ ತಲೆ ತಗ್ಗಿಸಿದರು.
ತಾತನಿಗೆ ಏನು ಹೇಳಲಿ. ನಾನು ಸರಿಯಾದ ಕಾರಣ ಕೊಡುವವರೆಗೂ ಬಿಡುವವರಲ್ಲ ತಾತ. ಇಲ್ಲೇ ಕೂತು ಬಿಡುತ್ತಾರೆ. ನಾನು ಸಾಯೋ ಕಾಲದಲ್ಲಿ ಹೀಗೆ ಮಾಡ್ತಿಯಲ್ಲೋ ಅನ್ನುತ್ತಾರೆ. ಬೋಧನೆ ಮಾಡುತ್ತಾರೆ.
ತಾತನ ಜೊತೆಗಿನ ಮೊದಲ ನೆನಪು ಮನಸ್ಸು ಹಿಂಡಿತು. ಅಷ್ಟು ಅಗಲವಾದ ಕಾಲುವೆಯ ಹರಿವ ತಿಳಿನೀರಲ್ಲೋ, ಇಲ್ಲಾ ತೋಟದ ಬಾವಿಯ ಹಸಿರು ನೀರಿನಲ್ಲೋ ಈಜಾಡಿ ವಾಪಸ್ಸು ಮನೆಗೆ ಬರುವಾಗ ಸಿಗುವ ಪನ್ನೇರಳೆ ಗಿಡದಿಂದ ತಪ್ಪದೆ ಹಣ್ಣು ಕಿತ್ತು ಕೊಡುತ್ತಿದ್ದರು ತಾತ. ಆಗ ಆ ಹಣ್ಣು ಅದೆಷ್ಟು ರುಚಿ ಅನ್ನಿಸೋದು. ತಾತನಿಗೆ ನೀರೆಂದರೆ ಪ್ರಾಣ. ಸಮುದ್ರವೆಂದರಂತೂ ಮುಗಿದೇ ಹೋಯಿತು. ವರ್ಷಕ್ಕೆ ಒಂದು ಸಾಲಕ್ಕಾದರೂ ಯಾವುದಾದರೂ ಸಮುದ್ರ ಹುಡುಕಿಕೊಂಡು ಹೊರಟುಬಿಡುತ್ತಿದ್ದರು. ಬಾವಿಯಲ್ಲಿ ಅಂಗಾತ ಈಜುವಾಗ ಬಾವಿಯ ಸುತ್ತ ಎತ್ತರಕ್ಕೆ ಬೆಳದು ಬಾವಿಗೆ ರಕ್ಷೆಯಂತೆ ನಿಂತಿದ್ದ ತೆಂಗಿನ ಮರದ ಗರಿ ತೂಗುವುದನ್ನು ನೋಡಿ ಮೈ ಮರೆಯುತ್ತಿದ್ದುದನ್ನು ನೆನೆದರೆ ಈಗಲೂ ಮನಸ್ಸು ಉಲ್ಲಾಸಗೊಳ್ಳುತ್ತದೆ. ಎಷ್ಟು ಯಂಗ್ ಆಗಿದ್ದರು ತಾತ. ಮನುಷ್ಯ ಸಂಭಂಧಗಳು ಭಾವನೆಗಳು ಕಣ್ಣಿಗೆ ಕಾಣುವಷ್ಟು ಸುಲಭದ್ದಲ್ಲ ಅನ್ನೋದನ್ನ ತಾತ ಎಷ್ಟು ಚೆನ್ನಾಗಿ ಅರಿತಿದ್ದರು. ಊರಿನಲ್ಲಿ ಜಗಲಿ ಕಟ್ಟೆಯ ಮೇಲೆ ಕೂತು ಊರಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದ ತಾತ, ಏನೋ ಒಂದು ವ್ಯಾಜ್ಯವೋ, ವಿಶೇಷ ಘಟನೆಯೋ ನಡೆದಾಗ, ಯಾರು ಬಂದು ಹೇಳಿದರೂ, ಹತ್ತನೆಯ ಸರತಿ ಆ ವಿಷಯದ ಬಗ್ಗೆ ಕೇಳುತ್ತಿದ್ದರೂ, ಹೊಸದಾಗಿ ಕೇಳುವಂತೆ ಕೇಳುತ್ತಿದ್ದರು. 'ನಿಂಗೆ ಏನಾಯ್ತು ಅಂತ ಗೊತ್ತಿತ್ತಲ್ಲ ತಾತ. ಯಾಕೆ ಮತ್ತೆ ಮತ್ತೆ ಯಾರೇ ಹೇಳಿದರೂ ಹೊಸದಾಗಿ ಕೇಳ್ತೀಯ?' ಅಂದಿದ್ದಕ್ಕೆ, 'ನೋಡು ಒಂದು ಘಟನೆಗೆ ಬೇಕಾದಷ್ಟು ಆಯಾಮಗಳಿರುತ್ತವೆ. ಯಾರೇ ಏನೇ ಹೇಳಿದರೂ ಅವರ ಮೂಗಿನ ನೇರಕ್ಕೆ ಹೇಳುತ್ತಾರೇ ವಿನಹ ನಿಜವಾಗಲೂ ಏನು ನಡೆಯಿತೆಂದು ವಿವೇಚಿಸುವವರು ಕಡಿಮೆ. ಅದಲ್ಲದೆ ಮನುಷ್ಯ ಯಾವ್ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತಿಸುತ್ತಾನೆ? ಅವನ ಮನಸ್ಸಿನ ಆಗುಹೋಗುಗಳೇನು ಎಂದು ತಿಳಿದುಕೊಳ್ಳುವುದರಲ್ಲಿ ನನಗೆ ಮೊದಲಿನಂದಲೂ ಆಸಕ್ತಿ,' ಅಂದಿದ್ದರು. ಆಗ ತಾತನ ನಡೆ ನನಗೆ ವಿಚಿತ್ರ ಅನ್ನಿಸಿದ್ದರೂ ಆಮೇಲೆ ತಾತನೊಳಗೆ ಒಬ್ಬ ಸೈಕಾಲಜಿಸ್ಟ್ ಇದ್ದ ಅನ್ನಿಸುತ್ತಿತ್ತು. ನಾನು ಸ್ಕೂಲು ಸೇರಿದಮೇಲೆ ಪ್ರತೀ ವಾರ ಅವರೂ ಅಜ್ಜಿಯೂ ತನ್ನ ಜೊತೆಯಿರಲು ನುಗ್ಗೇಹಳ್ಳಿಯಿಂದ ಬಂದುಬಿಡುತ್ತಿದ್ದರಲ್ಲ. ಎಲ್ಲರ ವಿರೋಧದ ನಡುವೆಯೂ ನಾಯಿ ಮರಿ ತಂದು ಕೊಟ್ಟಿದ್ದ ತಾತ, ಮೊಮ್ಮಗನ ಖುಷಿಗೆ ಏನು ಬೇಕಾದರೂ ಮಾಡುತ್ತಿದ್ದರು. ಅವರು ತಮ್ಮ ಗಟ್ಟಿ ಧ್ವನಿಯಲ್ಲಿ 'ಯಗ್ನೋಪವೀತಂ ಪರಮಮಂ ಪವಿತ್ರಂ ಪ್ರಜಾ ಪತೇ..' ಎಂದು ಹೇಳುತ್ತಾ ನನಗೆ ಜನಿವಾರ ಹಾಕಿಸಿದ್ದು, ಬ್ರಹ್ಮೋಪದೇಶ ಮಾಡಿದ್ದು, ಎಲ್ಲವೂ ಕಿವಿಯಲ್ಲಿ ಇನ್ನೂ ಝೇಂಕರಿಸಿದಂತಾಗುತ್ತದೆ. 'ಕೆಲಸ ಸಿಕ್ಕಿದೆ ತಾತ.' ಎಂದು ಫೊನು ಮಾಡಿದ ನಾಲ್ಕು ಘಂಟೆಯ ಒಳಗೆ ನನ್ನ ನೋಡಲು ಬಂದಿದ್ದರಲ್ಲಾ. ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲೂ ತಾತನ ನೆನಪು ಹರಡಿದೆ. ತನ್ನ ಮದುವೆಯಲ್ಲಿ ತಾತನಷ್ಟು ಸಂಭ್ರಮಿಸಿದವರು ಮತ್ಯಾರೂ ಇಲ್ಲವೇನೋ. ಅವರು ತೋರಿಸಿದ ಹುಡುಗಿಯನ್ನೇ ಮದುವೆಯಾದೆ ಅನ್ನೋ ಹೆಮ್ಮೆ ಬೇರೆ. ಶಾಲಿನಿಯೆಂದರೆ ಅಚ್ಚುಮೆಚ್ಚು. 'ನನಗೊಬ್ಬನಿಗೇ ಅಲ್ಲ ಎಲ್ಲರಿಗೂ, ಎಲ್ಲರಿಗೂ ಮೋಸ ಮಾಡಿದಳು.' ಅಂದುಕೊಂಡ.
ಬೆಂಗಳೂರಿನಿಂದ ವಾಪಾಸ್ಸು ಬಂದ ಶ್ರೀನಿವಾಸಾಚಾರ್ಯರು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಿದ್ದರು. ಮೊದಲಿನಂತೆ ಜಗಲಿಯಮೇಲೆ ಕೂತು ಊರವರನ್ನು ಮಾತಾಡಿಸುವ, ಊರ ಹೊರಗಿನವರೆಗೂ ಒಂದು ಸುತ್ತು ಹೋಗಿ ಬರುವ, ಉತ್ಸಾಹ ಇಂಗಿಹೋಗಿತ್ತು. ಊರಿಗೆ ಬಂದು ನಾಲೈದು ದಿನವಾದರೂ ಶ್ರೀನಿವಾಸಾಚಾರ್ಯರು ತೋಟದ ಕಡೆ ಬಾರದಿದ್ದರಿಂದ, ಅವರನ್ನು ಹುಡುಕಿಕೊಂಡು ಬಂದ ಗೋಪಿಗೆ, 'ಆರೋಗ್ಯವಿಲ್ಲ ಮಗು, ಸ್ವಲ್ಪ ಸುಧಾರಿಸಿದ ಮೇಲೆ ನಾನೇ ನಿನ್ನ ಬಂದು ಕಾಣುತ್ತೇನೆ.' ಎಂದು ಕಳುಹಿಸಿದ್ದರು. ಗಟ್ಟಿಯಾಗಿ, ಚನ್ನಾಗೇ ಕೇಳುವಂತೆ 'ಗೋಪಿಗೆ, ಶ್ರೀನಿವಾಸನ ವಿಷಯ ಏನೂ ಹೇಳಬೇಡಿ.' ಎಂದು ಭಾಗಮ್ಮ ತಾಕೀತು ಮಾಡಿದ್ದರು. ನನ್ನ ಮೊಮ್ಮಗ ಹೀಗೆ ಮಾಡಿದ ಅಂತ ಹೇಳಿಕೊಂಡು ಬರಲು ಸಾಧ್ಯವೇ?! ಎಲ್ಲಕ್ಕಿಂತ ಅವರನ್ನು ಘಾಸಿಗೊಳಿಸಿದ್ದು ಮೊಮ್ಮಗ ನಡೆದುಕೊಂಡ ರೀತಿ. ತಾವು ಏನು ಕೇಳಿದರೂ, ಒಂದೇ ಒಂದು ಉತ್ತರ ಕೊಡದೆ ಸುಮ್ಮನೆ ಕೂತಿದ್ದನಲ್ಲ. ಎಷ್ಟು ಬಿಡಿಸಿ ಕೇಳಿದರೂ ಉಹು ತುಟುಕ್ ಪಿಟಕ್ ಅನ್ನಲಿಲ್ಲ. ನನ್ನ ಕೇಳಬೇಡ, ನಾ ಹೇಳಲ್ಲ ಅನ್ನಲಿಲ್ಲ, ಆದರೂ ತುಟಿ ಬಿಚ್ಚಲಿಲ್ಲ. ಸುಮ್ಮನೆ ತಲೆ ಬಗ್ಗಿಸಿ ಕೂತವನು ಅತ್ತು ಬಿಟ್ಟ. ಗಂಡು ಹುಡುಗ ಅಳುವಷ್ಟು ಬೇಜಾರಾಗಿದ್ದಾನೆ. ಚಿಕ್ಕವಯಸ್ಸಿನಲ್ಲಿ ಬಿದ್ದು ಪೆಟ್ಟುಮಾಡಿಕೊಂಡಾಗಲೋ, ಅವನಮ್ಮ ಕೇಳಿದ್ದು ಕೊಡಿಸದೆ ಸತಾಯಿಸಿದಾಗಲೋ ಅಳುತ್ತಿದ್ದ. ಅವನು ದೊಡ್ಡವನಾದ ಮೇಲೆ ಅತ್ತದ್ದನ್ನು ತಾವು ನೋಡಿಯೇ ಇಲ್ಲ. ಏನಾಯಿತೋ ಏನೋ. ಸಾಯೋ ಮುಂಚೆ ನನ್ನ ನೆಮ್ಮದಿ ಕಳೆಯಿತು. ಎಂದುಕೊಂಡರು.
ಈ ಘಟನೆಯಾಗಿ ಮೂರು ತಿಂಗಳು ಕಳೆದಿದೆ. ಶ್ರೀನಿವಾಸಾಚಾರ್ಯರು ಮೊದಲಿನಂತೆ ತೋಟದಕಡೆಗೆ ಹೋಗಿ ಬರುತ್ತಾರೆ. ಆದರೆ ಯಾರನ್ನೂ ತಾವಾಗಿಯೇ ಮಾತಾಡಿಸುವುದಿಲ್ಲ. ಬೇರೆಯವರು ಮಾತಾಡಿಸಿದರೂ, ಸಾಧ್ಯವಾದರೆ ತಮಗೆ ಕೇಳಲೇ ಇಲ್ಲವೇನೋ ಎನ್ನುವಂತಿರುತ್ತಾರೆ. ಆದರೆ ಅವತ್ತು ಗೋಪಿ ಬಿಡಲಿಲ್ಲ. 'ಮನೆಗೆ ಬನ್ನಿ ನೀವು.' ಎಂದು ಬಲವಂತ ಮಾಡಿ ಎಳೆದುಕೊಂಡೇ ಹೋದ. 'ನಿಮ್ಮ ಮೊಮ್ಮಗನ ವಿಷಯ ಗೊತ್ತಾಯಿತು.' ಅಂದ. 'ಊರಿನವರಿಗೆಲ್ಲ ಗೊತ್ತು.' ಎಂದೂ ಸೇರಿಸಿದ. ಶ್ರೀನಿವಾಸಾಚಾರ್ಯರ ಮುಖ, ಮನಸ್ಸು ಎರಡೂ ಚಿಕ್ಕದಾಯಿತು. ನಿಟ್ಟುಸಿರಿಟ್ಟರು. 'ಸಾಯೋ ಕಾಲಕ್ಕೆ ಶ್ರೀನಿವಾಸಾಚಾರ್ಯರ ಮೊಮ್ಮಗ ಹೀಗೆ ಮಾಡಿದ ಅನ್ನೋ ಮಾತು ಕೇಳುವಂತಾಯಿತು.' ಅಂದರು. ಗೋಪಿಗೆ ಕಸಿವಿಸಿಯಾಯಿತು. 'ನಿಮ್ಮ ಮೊಮ್ಮಗನದೇನು ತಪ್ಪು ಪಾಪ. ಆ ಥರದ ಹುಡುಗಿಯರಿರುತ್ತಾರೆ ಅಂತ ನನಗೇ ತಿಳಿದಿರಲಿಲ್ಲ.' ಅಂದ. ಶ್ರೀನಿವಾಸಾಚಾರ್ಯರಿಗೆ ಏನೊಂದೂ ಅರ್ಥವಾಗಲಿಲ್ಲ. 'ಅಯ್ಯೋ ನಿಮಗೇ ತಿಳಿದಿಲ್ವೇ? ನಿಮ್ಮ ಮೊಮ್ಮಗನದೇನೂ ತಪ್ಪಿಲ್ಲ. ಆ ಹುಡುಗಿ ಈಗ ಬೇರೆ ಹುಡುಗಿಯ ಜೊತೆ ಸಂಸಾರ ಮಾಡಿಕೊಂಡಿದೆಯಂತೆ. 'ನನಗೆ ನಾನೀಥರ ಅಂತ ಗೊತ್ತಿರಲಿಲ್ಲ ಈಗ ಗೊತ್ತಾಗಿದೆ ಡೈವೋರ್ಸ್ ಕೊಡು ಅಂದಳಂತೆ.' ಅದಕ್ಕೇ ನಿಮ್ಮ ಮೊಮ್ಮಗ ಬೇರೆಯಾಗಿದ್ದಾನೆ. ನಿಮ್ಮ ಬೀಗರು ಮಗಳಿಗೆ, 'ನನಗೂ ನಿನಗೂ ಸಂಬಂಧವಿಲ್ಲ.' ಅಂತ ಎಳ್ಳೂ ನೀರು ಬಿಟ್ಟು ಬಂದರಂತೆ.' ಅಂದ. ಶ್ರೀನಿವಾಸಾಚಾರ್ಯರಿಗೆ ಮಾತನಾಡಲು ತಿಳಿಯಲಿಲ್ಲ. ಅಸಲಿಗೆ ಅವರಿಗೆ ಅರ್ಥವೇ ಆಗಲಿಲ್ಲ. ಮೊಮ್ಮಗನ ತಪ್ಪೇನು ಇಲ್ಲವೆನ್ನುವುದು ಖಾತ್ರಿಯಾಯಿತು. ಮನೆಗೆ ಬಂದವರು ಭಾಗಮ್ಮನಿಗೆ ನಾಳೆ ಬೆಂಗಳೂರಿಗೆ ಹೊರಡಬೇಕು ಕಾರಿನವನಿಗೆ ಪೋನ್ ಮಾಡು ಅಂದರು.
"ನನಗೆ ನಾನು ಮೋಸ ಮಾಡಿಕೊಂಡೆ ನಿನಗೂ ಮೋಸ ಮಾಡಿದೆ. ನನ್ನ ದೇಹದ ಬಗ್ಗೆ, ನನ್ನ ಸೆಕ್ಷುಯಾಲಿಟಿಯ ಬಗ್ಗೆ, ನನಗೇ ಅರ್ಥವಾಗಿರಲಿಲ್ಲ. ತಪ್ಪೆಲ್ಲಾ ನನ್ನದು. ಇಷ್ಟು ವರ್ಷ ಸುಳ್ಳಿನ ಜೀವನ ನಡೆಸಿದ್ದೆ. ಇಂಚರ ಸಿಗದೇ ಹೋಗಿದ್ದರೆ ನನ್ನ ಜೀವನ ಹೀಗೇ ಸಂತೋಷವಿಲ್ಲದೆ, ಅರ್ಥವಿಲ್ಲದ ಗೊಂದಲದಲ್ಲಿ ಕಳೆದು ಹೋಗುತ್ತಿತ್ತೇನೋ. ಅವಳು ನನ್ನ ಕಣ್ಣು ಮನಸ್ಸು ಎರಡೂ ತೆರೆಸಿದ್ದಾಳೆ. ನಾನೂ ಅವಳೂ ಜೊತೆಗೆ ಬದುಕದೆ ಇದ್ದರೆ ಬದುಕೇ ವ್ಯರ್ಥ ಅನ್ನುವಷ್ಟು ಸ್ಥಿತಿ ತಲುಪಿದ್ದೇವೆ. ಪ್ರೀತಿ ಅಂದರೇನು ಅಂತ ಈಗ ಅರ್ಥವಾಗಿದೆ, ಇಲ್ಲ ಅವಳು ಅರ್ಥ ಮಾಡಿಸಿದ್ದಾಳೆ. ನಾನ್ಯಾರೆಂದು ಕಂಡುಕೊಳ್ಳುವ ಪ್ರಯತ್ನದಲ್ಲಿ, ನಿನಗೆ ಮೋಸವಾಗಿದೆ. ಕ್ಷಮಿಸಿಬಿಡು."
ಶಾಲಿನಿ
ಎಂಬ ಮೈಲ್ ಬಂದು ಬಹಳ ದಿನಗಳಾದರೂ ಶ್ರೀನಿವಾಸ ದಿನಕ್ಕೊಂದು ಬಾರಿ ಹೊಸದೆಂಬತೆ ಓದಿಕೊಳ್ಳುತ್ತಿದ್ದ. ದಿನದಿನಕ್ಕೆ ಅವನ ಮನಸ್ಸು ವಾಸ್ತವಕ್ಕೆ ಹೊಂದಿಕೊಳ್ಳುತ್ತಿತ್ತು.
ನಮ್ಮ ಸಮಾಜ ಎಲ್ಲಾ ಥರಹದ ಸೆಕ್ಷುಯಲ್ ಓರಿಯಂಟೇಷನ್ ಇರುವವರನ್ನು ಒಪ್ಪಿಕೊಳ್ಳುವ ವರೆಗೂ ನಮ್ಮಂಥವರಿಗೆ ಅನ್ಯಾಯವಾಗುತ್ತಲೇ ಇರುತ್ತದೆ. ಹಿಂದೆ ಪ್ರೀತಿಸಿದವರು ಬೇರೆ ಜಾತಿಯ ಧರ್ಮದ ಜನರಾಗಿದ್ದರೆ ಸಮಾಜದ ಭಯದಿಂದ ತೊಳಲಾಡಬೇಕಿತ್ತು. ಈಗ ಸಲಿಂಗಿಯಾದರೆ ಸಮಾಜಕ್ಕೆ ಹೆದರಿಕೊಳ್ಳಬೇಕು. ಇಂಥಹ ಮದುವೆಗಳಿಂದ ತೊಳಲುವ ಜನರೆಷ್ಟೋ ಅಂದುಕೊಂಡ.
ಅವತ್ತು ಭಾನುವಾರ. ಶ್ರೀನಿವಾಸನ ಮನೆಯ ಕಾಲಿಂಗ್ ಬೆಲ್ ಸದ್ದಾದಾಗ ಬಾಗಿಲು ತೆರೆದವಳು ಆರ್ನವಿ. ("ಆ್ಯನ್" ಎನ್ನುವ ಹೆಸರನ್ನು ಬದಲಿಸಿ "ನೀನು ಸಮುದ್ರದಂಥವಳು ಅದಕ್ಕೆ ಆರ್ನವಿ ಅನ್ನುತ್ತೇನೆ ಎಂದಿದ್ದ ಶ್ರೀನಿವಾಸ." ಅವಳಿಗೂ ಆ ಹೆಸರೇ ಇಷ್ಟವಾಗಿಹೋಗಿತ್ತು.)
ಬಾಗಿಲು ತೆರೆದ ತಕ್ಷಣ ಶ್ರೀನಿವಾಸನನ್ನು ತಬ್ಬಿಕೊಂಡು ಕಂದಾ ಅನ್ನಬೇಕು ಅಂದುಕೊಂಡವರಿಗೆ ಕಂಡದ್ದು, ಚಿಕ್ಕ ಚಡ್ಡಿ, ಸೊಂಟದಿಂದ ಮೇಲಕ್ಕಿರುವ ಅಂಗಿ ಹಾಕಿಕೊಂಡಿದ್ದ ಅಮೇರಿಕನ್ ಹುಡುಗಿ. ಕಕ್ಕಾಬಿಕ್ಕಿಯಾಗಿದ್ದ ವೃದ್ಧರಿಬ್ಬರನ್ನೂ ಒಳಗೆ ಕರೆದವಳು 'ಶ್ರೀನಿ ಸಂಧ್ಯಾವಂದನೆ ಮಾಡ್ತಿದಾನೆ, ನಾನು ಹೇಳಿ ಬರ್ತಿನಿ, ನಿಮ್ಮ ತಾತ ಅಜ್ಜಿ ಬಂದಿದಾರೆ ಅಂತ. ಬನ್ನಿ ಒಳಗೆ. ನಿಮ್ಮ ಬಗ್ಗೆ ತುಂಬಾ ಹೇಳಿದಾನೆ ಶ್ರೀನಿ. ನನ್ನ ಹೆಸರು ಆರ್ನವಿ. ಅಂದಳು ಶುದ್ಧ ಕನ್ನಡದಲ್ಲಿ. ಅವಳ ಕೊರಳಲ್ಲಿ ಮಾಂಗಲ್ಯ ಕಂಡಿತು. ಶ್ರೀನಿವಾಸಾಚಾರ್ಯರು ಭಾಗಮ್ಮನ ಕಡೆ ನೋಡಿದರು. ಭಾಗಮ್ಮ ತಮಗಾದ ಆಶ್ಚರ್ಯವನ್ನೂ ಮೀರಿ ಬೆಚ್ಚಗಿನ ನಗೆ ನಕ್ಕು, ಶ್ರೀನಿವಾಸಾಚಾರ್ಯರ ಕೈಹಿಡಿದುಕೊಂಡು ಒಳನಡೆದರು. ಆ ಹುಡುಗಿ ಹೇಳಿದ್ದು ಏನೂ ಕೇಳದಿದ್ದರೂ, ಶ್ರೀನಿವಾಸಾಚಾರ್ಯರಿಗೆ ಜೀವನದಲ್ಲಿ ನೋಡಬೇಕಾದ್ದನ್ನೆಲ್ಲವನ್ನೂ ನೋಡಿಯಾಗಿದೆ ಎನ್ನುವ ಭಾವ ಆವರಿಸಿಕೊಂಡಿತು. ಬಿಳಿ ಹುಡುಗಿ ಹಾಲು ಹಾಕದ ಕರೀ ಕಾಫಿ ತಂದು ಕೊಟ್ಟಳು. ಸಂಧ್ಯಾವಂದನೆ ಮುಗಿಸಿ ಬಂದ ಶ್ರೀನಿವಾಸ ತಾತ ಅಜ್ಜಿಗೆ ನಮಸ್ಕರಿಸಿ ಅಭಿವಾದನೆ ಹೇಳಿದ. ಆಶೀರ್ವಾದ ಮಾಡಿದ ಮೇಲೆ ತಾತ ನಗುತ್ತಾ, 'ಈ ಹುಡುಗಿಗೆ ಮೊಸರನ್ನ ಕಲಸೋಕ್ಕೆ ಬರುತ್ತೇನೋ?' ಎಂದು ಕೇಳಿದರು. ಚಿಕ್ಕಮಗುವಿನಂತೆ ತಾತನ ಕಾಲು ತಬ್ಬಿಕೊಂಡ ಶ್ರೀನಿವಾಸ "ತಾತಾ ಇವಳು ವೀಗನ್ ಹಾಲು ತುಪ್ಪ ಮೊಸರುಗಳನ್ನೆಲ್ಲಾ ತಿನ್ನೋಲ್ಲಾ," ಎನ್ನುತ್ತಾ ಹುಳ್ಳನೆ ನಕ್ಕ.
19th Sept, 2017
Subscribe to:
Post Comments (Atom)
No comments:
Post a Comment