Wednesday, October 13, 2010

ನಡೆದಷ್ಟೂ ದಾರಿ ದೂರ

ಭೀಮನ ಕಣ್ಣಲ್ಲಿ ಹಿಡಂಬೆ ಎಂಬ ಕಮಲಪಾಲಿಕೆ

ವನವಾಸ ಶುರುವಾಗಿ ತಿಂಗಳಾಗುತ್ತಾ ಬಂದಿತ್ತು. ಉಳಿದ ಐದು ಜನರೂ ಕಾಡಿನ ಜೀವನಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದರೂ ಭೀಮನಿಗೆ ಸರಿಹೋಗುತ್ತಲೇ ಇರಲಿಲ್ಲ. ಅದರಲ್ಲೂ ಕೃಷ್ಣೆ ಸಾಮಾನ್ಯ ಹೆಂಗಸರಂತೆ ಕಷ್ಟಪಡುವುದನ್ನು ನೋಡಿದಾಗಲೆಲ್ಲ ರೋಷ ಉಕ್ಕುತ್ತಿತ್ತು. ಕಷ್ಟ ಪಡದೆ ವಿಧಿಯೇ ಇಲ್ಲ ಅಂತಾದರೆ ಒಂದು ಥರ ಆದರೆ ಕಣ್ಮುಂದೆಯೇ ಇದೆಯಲ್ಲಾ ಪರಿಹಾರ.
ಆ ಯೋಚನೆಯನ್ನು ಮನಸ್ಸಿಗೆ ಪೂರ್ತಿಯಾಗಿ ತಂದುಕೊಳ್ಳಲೂ ಕಸಿವಿಸಿ. ಏನೋ ಒಂಥರಾ ಮುಜುಗರ ಇಕ್ಕಟ್ಟಿಗೆ ಸಿಲುಕಿದ ಹಾಗೆ. ಹಾಗೇನು ಮುಜುಗರ ಪಟ್ಟುಕೋಬೇಕಿಲ್ಲ, ಹೀಗಾಗಿದೆ ಅಂತ ತಿಳಿಸಿದರೆ ಸಾಕು. ಅಷ್ಟಕ್ಕೂ ಏನಾಗಿದೆ ಅಂತ ತಿಳಿಸಲೂ ಬೇಕಿಲ್ಲ. ಹಾಗೇ ಸ್ವಲ್ಪ ದಿನ ಹೋಗಿದ್ದು ಬಂದು ಬಿಡಬಹುದು. ಆದರೆ ಧರ್ಮ ಒಪ್ಪಬೇಕಲ್ಲ. ಕಾರಣ ಹೇಳಿಯೇ ಹೇಳುತ್ತಾನೆ. ಅವಳಾದರೂ ಸುಮ್ಮನಿದ್ದಾಳ? ಯಾರೂ ಇರಲಿಲ್ಲ ಅಂತ ನನ್ನ ಬಳಿ ಬಂದಿರಿ. ರಾಜ್ಯ ಹೋಗಿಲ್ಲದಿದ್ದರೆ ನನ್ನ ನೆನಪೂ ಆಗುತ್ತಿರುತ್ತಿರಲಿಲ್ಲ ಅಲ್ಲವೇ ಅನ್ನುತ್ತಾಳೆ. ಉಸಿರುಕಟ್ಟಿಸುತ್ತಾಳೆ. ನೀನು ಹೇಳ್ತಿರೋದೆ ಸರಿ, ಹೀಗಾಗಿ ಹೋಯ್ತು. ನೀನೇ ದಿಕ್ಕು ಅಂತ ನೇರವಾಗೇ ಹೇಳಿದ್ರೆ? ಹೌದು, ಆಗ ನೆನಪಿಸಿಕೊಳ್ಳಲಿಲ್ಲ ನಂದು ತಪ್ಪು. ಅದನ್ನ ಒಂದು ಸತಿ ಒಪ್ಪಿಕೊಂಡ್ರೆ ಆಯ್ತಲ್ಲ? ಖಂಡಿತ ಚನ್ನಾಗೇ ನೋಡ್ಕೊತಾಳೆ. ಇಂದ್ರಪ್ರಸ್ಥದ ಜೀವನ ಅಲ್ದೇ ಹೋಗಬಹುದು ಆದ್ರೆ ಹಿಂಗೆ ನಿರ್ಗತಿಕರ ಥರ ಅಂತೂ ಇರ್ಬೇಕಿಲ್ಲ. ಸರಿ ಅಣ್ಣನಿಗೆ ಹೋಗಿ ಹೇಳೋದೇ ಅಂತ ನಿಶ್ಚಯಿಸಿ ಎದ್ದು ನಿಂತ ಭೀಮ.
ಆದರೆ ಎದ್ದು ನಿಂತವನು ಹೆಜ್ಜೆ ಇಡುವ ಮೊದಲೇ ಕೃಷ್ಣೆಯ ನೆನಪಾಯಿತು. ಬೇಜಾರು ಮಾಡ್ಕೊತಾಳೆ. ಅವಳು ಇವಳನ್ನ ಹೇಗೆ ಕಾಣ್ತಾಳೋ? ಮತ್ತೆ ಕೂತುಕೊಂಡ. ತಲೆ ಧಿಮಿ ಧಿಮಿ ಅನ್ನುತ್ತಿತ್ತು. ಬೇಜಾರು ಯಾಕ್ ಮಾಡ್ಕೊಬೇಕು. ಅವ್ಳಿಗೇ ಹೇಳ್ತಿನಿ. ಅರ್ಥ ಮಾಡ್ಕೊತಾಳೆ ಅನ್ನೋ ನಿಶ್ಚಯವು ಮೂಡೋ ಮೊದಲೇ ಕರಗಿ ಹೋಯಿತು. ಕೃಷ್ಣೆ ಬೇಜಾರಾದ್ರೂ ಅಂದು ತೋರ್ಸಲ್ಲ. ಯಾವತ್ತೂ ಅಂದು ತೋರ್ಸಿಲ್ಲ. ಏನೆ ಆರ್ದ್ರೂ ನಿಂಗೇ ಅರ್ಥವಾಗಬೇಕು ಅದಾಗೇ ಅರ್ಥ ಆಗ್ದಿದ್ರೆ, ಅರ್ಥ ಮಾಡ್ಸಿಯೂ ಪ್ರಯೋಜನ ಇಲ್ಲ ಅನ್ನೋದು ಯಾವತ್ತಿನ ಮತು ಅವಳದು. ಭೀಮ ಮತ್ತೆ ನಿಧಾನವಾಗಿ ಯೋಚಿಸಿದ. ಹೆಂಗಿದ್ರು ಕಮಲಪಾಲಿಕೆಯನ್ನು ಬಿಟ್ಟು ಬಂದು ವರ್ಷಗಳೇ ಕಳೆದಿದೆ. ಬಿಟ್ಟು ಬರೋವಾಗ್ಲೇ ಬೇಜಾರು ಮಾಡಿಯಾಗಿದೆ, ವಾಪಸ್ಸು ಬರ್ತಿನಿ ಅಂತ ಮಾತೇನೂ ಕೊಟ್ಟಿಲ್ಲ. ಕರೆದಾಗ ಬರಬೇಕು ಅಂತ ಹೇಳಿದ್ದೀನಿ, ಕರೆಯುವ ಅವಕಾಶ ಬಂದಿಲ್ಲ ಅಷ್ಟೆ. ಈಗ ಹೋದ್ರೆ ಇವಳಿಗೂ ಬೇಜಾರು. ಮಾತಾಡದೆ ಏನನ್ನೂ ಹೇಳದೆ ಮೌನವಾಗಿ ಕೊಲ್ಲುತ್ತಾಳೆ. ಮೊದಲೇ ದ್ಯೂತ ಸಭೇಲಿ ಸಾಕಷ್ಟು ಬೇಜಾರು ಮಾಡಿದ್ದಾಗಿದೆ ಅಂತೆಲ್ಲಾ ಯೋಚಿಸಿ ಸರಿ ಅವಳಲ್ಲಿಗೆ ಹೋಗೋದು ಬೇಡ ಅಂತ ನಿರ್ಧರಿಸಿದ.



ಶ್ರೀಧರನ ನೆನಪಿನಲ್ಲಿ ಇಳಾ ಎಂಬ ಹಿಡಂಬೆ

ಇನ್ನು ಮುಂದೆ ಓದೋಕ್ಕೆ ಸಾಧ್ಯವೇ ಇಲ್ಲ ಅನ್ನಿಸಿ ಬುಕ್ ಮಾರ್ಕನ್ನು ಇಟ್ಟು ಕಣ್ಣು ಮುಚ್ಚಿದ ಶ್ರಿಧರ. ಹೀಗೆ ನೆನಪುಗಳು ತೊಳಸಿಕೊಂಡು ತೊಳಸಿಕೊಂಡು ಬರುವಾಗ ಓದಲಾದರೂ ಹೇಗೆ ಸಾಧ್ಯ? ಭೀಮನನ್ನು ಬೈದರೆ ನನಗ್ಯಾಕೆ ಸಿಟ್ಟು ಬರಬೇಕು, ಲಂಕೇಷರನ್ನು ಓದೋವಾಗಲೂ ಹಿಂಗೇ ಆಗುತ್ತಿತ್ತು. ಅವರ ಕಥೆಗಳನ್ನು ಕಂಡರೆ ದ್ವೇಶ ಹುಟ್ಟಬೇಕು, ಅಷ್ಟು ಹಿಂಸೆ. ಯಾವ ಕಾರಣಕ್ಕೂ ಓದಬಾರದು ಅಂದುಕೊಂಡು ಮುಚ್ಚಿಡುತ್ತಿರಲಿಲ್ಲವ? ಸಾಯಲಿ ಎಸೆದು ಬಿಡೋಣ ಅನ್ನೋಷ್ಟು ಸಿಟ್ಟು ಬಂದರೂ. ಅಲ್ಲಾ ಸುಮ್ಮಸುಮ್ಮನೆ ತಲೆನೋವು ಬರಿಸಿಕೊಳ್ಳಲು ಹುಚ್ಚಾ? ಓದುತ್ತಾ ಹೋದಹಾಗೆಲ್ಲಾ ತಲೆಯೊಳಗೆ ಒಂಥರಾ ಯಾವುದೋ ಯೋಚನೆ. ನಿದ್ದೆ ಬಾರದೆ ಮಾರನೆ ದಿನವೆಲ್ಲಾ ತಲೆ ಧಿಂ ಅನ್ನುತ್ತಿರುತ್ತಲ್ಲ ಹಾಗೇ.. ಹಾಗೇನು, ಅದೇ ಆಗೋದು. ಎಲ್ಲಾ ಕಂಗೆಡಿಸೋ ಕಥೆಗಳು. ನನ್ನ ತಪ್ಪು, ಸ್ವಾರ್ಥ, ಅಹಂಕಾರ ಇನ್ನೂ ನನ್ನೊಳಗಿನ ಬೇಡದ್ದ ಭಾವನೆಗಳನ್ನೆಲ್ಲಾ ಹೊಡದೆಬ್ಬಿಸುವಂಥಾ ಕಥೆಗಳು. ನೂರಾರು ಪುಟಗಳ ಕಾದಂಬರಿಗಳನ್ನ ಸರಾಗವಾಗಿ ಕೆಲವೇ ಗಂಟೆಗಳಲ್ಲಿ ಓದಿ ಮುಗಿಸಿಬಿಡಬಹುದು. ಲಂಕೇಶರ ಒಂದು ಕಥೆ ಓಂದೇ ಏಟಿಗೆ ಓದಿ ಮುಗಿಸಲು ಕಷ್ಟ. ಸ್ವಲ್ಪ ಓದುತ್ತಾಲೇ ಇನ್ನೇನೋ ನೆನಪಾಗಿ, ಸಣ್ಣತನಗಳು ಹೊರಬಂದ ಘಟನೆಗಳು, ಮರತೇ ಬಿಟ್ಟಿದ್ದ ಮಾತುಗಳು ಎಲ್ಲಾ ಸುಪ್ತ ಮನಸ್ಸಿನಿಂದ ಹೊರಬಂದು ಕಿರಿಕಿರಿ ಮಾಡಿ, ಕಾಡಿ, ಹಿಂಸೆ ಮಾಡಿ ಅಯ್ಯೋ ದಮ್ಮಯ್ಯಾ..
ಲಂಕೆಷ್ ಆದರೆ ಒಂದು ರೀತಿಗೆ ಸಮ. ವೈಯಕ್ತಿವಾಗಿ ಗೊತ್ತಿಲ್ಲದವರು, ಅವರು ಬರೆದಿದ್ದನ್ನು ಒಳಮನಸ್ಸು ತನ್ನ ಜೀವನದ ಯಾವುದಕ್ಕೋ ತಳುಕಿ ಹಾಕುವಾಗಲೂ ಒಂಥರಾ ಆಚೆ ಉಳಿದ ಭಾವ ಇರುತ್ತಿತ್ತು. ಆದರೆ ಇವಳು? ಇವಳು ಬರೆದಿರೋದನ್ನ ಇನ್ಯಾರದೋ ಜೀವನಕ್ಕೆ ಸಮೀಕರಿಸಲು ಹೇಗೆ ಸಾಧ್ಯ?

ನಾವಾಡಿಕೊಳ್ಳುತ್ತಿದ್ದ ಮಾತುಗಳೇ. ಭೈರಪ್ಪನವರ ಪರ್ವ ಓದೋಕ್ಕೆ ಮೊದಲೂ ಅವಳಿಗೆ ಭೀಮನೆಂದರೆ ಇಷ್ಟ. ಅದು ಓದಿದಮೇಲಂತೂ ಇನ್ನೂ. ಮಸಾಲೆ ತಿಂದು ಬರೋಣ ಅಂತ ಕ್ಯಾಂಟೀನಿಗೆ ಎಳೆದುಕೊಂಡು ಹೋದರೆ ಇವಳದು ಮತ್ತೆ ಭೀಮ ಹಿಡಂಬಿಯ ಮಾತು. ಮಹಾಭಾರತದ ಕಥೆ ಏನಾದರಾಗಲಿ. ಹಿಡಂಬಿಗೆ ತುಂಬ ಮೋಸವಾಯಿತು. ಮತ್ತೆ ವಾದ ತೆಗೆಯುವಳು. ಅಲ್ಲಾ, ನೀನೇ ಹೇಳು. ಅಷ್ಟು ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದ ಹಿಡಂಬಿ ಇದ್ದೂ ವನವಾಸದ ಕಾಲದಲ್ಲಿ ಅವಳಲ್ಲಿಗೆ ಹೋಗುವ ಯೋಚನೆ ಒಬ್ಬ ಪಾಂಡುಪುತ್ರನಿಗೂ ಹೊಳೆಯಲಿಲ್ಲವೆಂದರೆ ಆಶ್ಚರ್ಯ. ಹೋಗ್ಲಿ, ಭೀಮಾನಾದ್ರು ಈ ಬಗ್ಗೆ ಯೋಚನೆ ಮಾಡಬಹುದಿತ್ತಲ್ಲ? ಯಕೆ ಹೋಗ್ಲಿಲ್ಲ ಅವ್ಳ್ ಹತ್ರ? ನೆನಪಾಗಲಿಲ್ಲ ಅಂದ್ರೆ ನಂಬಕ್ಕಾಗಲ್ಲ. ಅರವತ್ತು ವರ್ಷದ ನನ್ನ ಚಿಕ್ಕ್ ತಾತ ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ ಜೊತೆಗೋದುತ್ತಿದ್ದ ಹುಡುಗಿಯ ಬಗ್ಗೆ ನೆನಪಿಸಿಕೊಂಡು ಹೇಳುವಾಗ, ಒಂದು ವರ್ಷ ಸಂಸಾರ ಮಾಡಿ ಜೊತೆಗಿದ್ದ ಹೆಂಡತಿಯ ನೆನಪು ಬರಲಿಲ್ಲ ಅಂದರೆ ವಿಚಿತ್ರ. ಆದರೆ ಸರಿಯಾಗಿ ಯುದ್ಧದ ಹೊತ್ತಿಗೆ ಸಹಾಯ ಮಾಡಲು ಅವಳ ಮಗ ಅವಳ ಜನ ಬೇಕು. ಯೋಚನೆ ಮಾಡು, ಭೈರಪ್ಪನವರು ಬರೆದಿರೋದು ಸರಿ. ಎಲ್ಲಾ ಕುಂತಿಯಿಂದಲೇ ಆದದ್ದು. ಅಲ್ಲ ನಿಜಕ್ಕೂ ಭೀಮನ ತಪ್ಪೇ ಅಲ್ಲ, ಭೀಮ ಅಂತವನಲ್ಲ. ವ್ಯಾಸರೇ ಸರಿ ಇಲ್ಲ, ಬರೀ ಘಟನೆಗಳನ್ನ ಹೇಳಿಬಿಟ್ಟರೆ ಆಯಿತಾ ಸೂಕ್ಷ್ಮಗಳು ಬೇಡ? ವ್ಯಾಸರನ್ನು ಬೈದದ್ದಾಯಿತು, ಹಂಗಂತ ಇಳಾ ಆಗ ವ್ಯಾಸರ ಭಾರತವನ್ನ ಓದಿಕೊಂಡಿದ್ದಳು ಅಂತಲ್ಲ, ವ್ಯಾಸರನ್ನು ಬಯ್ಯುವಾಗ ಅವನನ್ನು ಓದಿಕೊಂಡಿದ್ದೀವಾ ಇಲ್ಲವಾ ಅನ್ನೋದೆಲ್ಲಾ ನೆನಪಿಗೆ ಬರೋಲ್ಲ. ನೆನಪಿಗೆ ಬಂದರೂ ಓದದಿದ್ದರೇನಂತೆ ವ್ಯಾಸರು ಖಂಡಿತ ಹಿಡಂಬಿಯನ್ನ ಕದೆಗಣಿಸಿದ್ದಾರೆ. ಅದಕ್ಕೇ ನೋಡು ಪರ್ವ ಇಷ್ಟ ಆಗೋದು. ಮತ್ತೆ ಪರ್ವಕ್ಕೆ ತಂದು ನಿಲ್ಲಿಸಿದ್ದಳು. ಇಷ್ಟೊತ್ತೂ ಸುಮ್ಮನೆ ಕೂತಿದ್ದ ಅನಂತಮೂರ್ತಿಗಳ ಪ್ರಕಾಂಡ ಶಿಷ್ಯ ಶಿವಪ್ರಸಾದ ಭೈರಪ್ಪನವರನ್ನು ಟೀಕಿಸತೊಡಗಿದ. ಮಾತಿಗೆ ಮಾತು ಬೆಳೆದು ನೀ ವಾದ ಮಾಡ್ಬೇಕು ಅಂತ ಮಾಡ್ತಿಯ, ಸುಮ್ಮನೆ ಬಯ್ಯೋದಂದ್ರೆ ನಿಂಗ್ ಖುಷಿ ನಾನು ಮೂರ್ತಿಗಳನ್ನೇನಾದ್ರೂ ಅಂದ್ನ? ನಂಗೆ ಇಬ್ಬರೂ ಲೇಖಕರೂ ಇಷ್ಟ. ಒಂದು ಕೃತಿಯನ್ನ ಲೇಖಕನ ಹಂಗಿಲ್ಲದೆ ಓದಿಕೊಳ್ಳೋಕ್ಕೆ ಬರೋವರ್ಗೂ ಉದ್ಧಾರ ಆಗೋಲ್ಲ. ಮಸಾಲ ದೋಸೆ ಹೆಂಗಿದೆ? ಎಷ್ಟು ಹೈಜೀನಿಕ್ ಆಗಿ ಮಾಡಿದಾನೆ? ಅನ್ನೋದು ಮುಖ್ಯ ಯಾರು ಮಾಡಿದ್ದು ಅನ್ನೋದಲ್ಲ ಅಂತೆಲ್ಲಾ ಯಾವುದ್ಯಾವುದಕ್ಕೋ ಹೋಲಿಸಿ ಮಾತು ಮುಗಿಸಿದ್ದಳು. ಶಿವಪ್ರಸಾದ್ ಅನಂತಮೂರ್ತಿ ಭೈರಪ್ಪನವರ ವಿಷಯ ಮಧ್ಯೆ ತಂದಿದ್ದು ಇಷ್ಟವಾಗದಿದ್ದರೂ, ನನಗ್ಯಾಕೋ ಕೃತಿಯನ್ನ ಲೇಖಕನ ಹಂಗಿಲ್ಲದೆ ಓದಿಕೊಳ್ಳಬೇಕು ಅನ್ನೋದನ್ನ ಒಪ್ಪಿಕೊಳ್ಳೋಕ್ಕೆ ಆಗಿರಲಿಲ್ಲ.

ಇಳಾಳಿಗೆ ತನ್ನ ಬಗ್ಗೆ ಏನನ್ನಿಸುತ್ತಿತ್ತು ಅಂತ ಶ್ರೀಧರ ಯೋಚಿಸಲು ಶುರು ಮಡಿದ. ನೀನು ನನ್ನ ಭೀಮ ಅನ್ನುತ್ತಿದ್ದಳು. ಆದರೆ, ಹಿಡಂಬಿಯ ಹಾಗೆ ಅವಳಾಗೇ ನನ್ನ ಬಳಿ ಬಂದಿರಲಿಲ್ಲ, ಛೇ ನಮ್ಮಗಳನ್ನ ನಾವು ಪುರಾಣದ ಪಾತ್ರಗಳಿಗೇಕೆ ಹೋಲಿಸಿಕೊಳ್ಳಬೇಕು? ನಾವು ಯಾರು ಅಂತ ಕಂಡುಕೊಳ್ಳೋಕ್ಕೆ ಅವಕಾಶವೇ ಕೊಡದಂತೆ ಚಿಕ್ಕಂದಿನಿಂದ ನೀನು ನಿನ್ನ ತಾತನ ಹಾಗೆ, ಬ್ರಂಹಾಂಡ ಸಿಟ್ಟು. ಆದ್ರೆ ನನ್ನ ಥರ ಮೃದು ಮನಸ್ಸು ಅನ್ನುತ್ತಿದ್ದ ಅಮ್ಮನಿಮ್ದ ಹಿಡಿದು, ನೀನು ಅವನ ಹಾಗೆ ಮಾತು ಕಮ್ಮಿ ಇನ್ಯಾರದೋ ರೀತಿ ನಿನ್ನ ಧ್ವನಿ ಇನ್ನು ಏನೇನೋ.. ಎಲ್ಲರೂ ಹೋಲಿಸುವವರೇ. ನಾನ್ಯರು ಅಂತ ಇವತ್ತಿಗೂ ನನಗೇ ಗೊತ್ತಾಗದ ಹಾಗೆ. ನನ್ನ ಭೀಮನಿಗೆ ಹೋಲಿಸುತ್ತಿದ್ದ, ಭೀಮನನ್ನು ಅಷ್ಟು ಇಷ್ಟ ಪಡುತ್ತಿದ್ದ ಇವಳು ಈಗ ಭೀಮನನ್ನ ಬೇರೆ ರೀತಿಯಲ್ಲಿ ಚಿತ್ರಿಸಿದ್ದಾಳೆ. ಪುರಾಣದ ಪಾತ್ರಗಳ ಸ್ವಭಾವ ಮನುಷ್ಯರ ಈಗಿನ ನಡವಳಿಕೆಗಳ ಆಧಾರದ ಮೇಲೆ ಚಿತ್ರಣಗೊಳ್ಳುತ್ತೆ. ಯೋಚನೆಯೇ ಮಾಡದ, ನೇರಾ ನೇರ ಮನಸ್ಸಿನ, ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದ್ದ ಮಗುವಿನ ಹೃದಯದ ಭೀಮ, ಯೋಚನೆ ಮಾಡುವ, ಯಾರ್ಯಾರಿಗೆ ಏನೇನನಿಸುತ್ತೆ? ಅಂತ ಲೆಕ್ಕ ಹಾಕುವ ಭೀಮನಾಗಿ ಹೋಗುತ್ತಾನೆ. ಅವಳಿಗೆ ಫೋನ್ ಮಾಡಿ ಬಾಯಿಗೆ ಬಂದಂತೆ ಕೊಳಕು ಪದಗಳಲ್ಲಿ ಬೈಯ್ಯಬೇಕು ಅನ್ನಿಸಿತು. ಹೀಗೆ ಪುರಾಣವನ್ನ ಮನಸ್ಸಿಗೆ ಬಂದಂತೆ ಚಿತ್ರಿಸಲು ಅವಳಿಗೆ ಹಕ್ಕನ್ನು ಕೊಟ್ಟೋರು ಯಾರು? ಫೋನ್ ಮಾಡಿದರೂ ಬಯ್ಯಲಂತೂ ಆಗೋದಿಲ್ಲ ಅನ್ನೋದೂ ಹೊಳೀತು. ಬಯ್ಯೋದು ಹೋಗ್ಲಿ ಮಾತಾಡಿಸೋಕ್ಕಾದರೂ ಅವಳು ಫೋನ್ ಎತ್ತಬೇಕಲ್ಲ.

ಶ್ರೀಧರ ನಿರ್ಭಾವುಕನಾಗಿ ಓದಿದ ಮತ್ತಷ್ಟು ಪುಟಗಳು

ಎಣಸಿಕೊಂಡಳು, ಇಂದಿಗೆ ಸರಿಯಾಗಿ ಎಂಟು ವರ್ಷ ನಾಲ್ಕು ತಿಂಗಳು, ಇವನು ಹುಟ್ಟೋದನ್ನೀ ಕಾಯುತ್ತಿದ್ದಂತೆ ಹೊರಟರಲ್ಲ ಎಲ್ಲರೂ. ನಿನ್ನ ಕರ್ತವ್ಯ ಅಷ್ಟೇ ಅಂತ ವೇದವ್ಯಾಸರು ಹೇಳಿದರು ಎನ್ನುವ ನೆಪ ಬೇರೆ. ಇವನಾದರೂ ಇರಬಹುದಿತ್ತು. ಅವರಿಗೆಲ್ಲ ಕಷ್ಟವಾಗುತ್ತಿತ್ತು. ಹೌದು, ಸುಖಭೋಗಗಳ ನಡುವೆ ಬೆಳೆದವರ ಕಷ್ಟವೇ ಇದು, ಸುಲಭವಾಗಿ ಕಾರ್ಪಣ್ಯಗಳಿಗೆ, ಬದಲಾವಣೆಗಳಿಗೆ ಹೊಂದಿಕೊಳ್ಳೋಲ್ಲ. ಆದರೂ ಅವರಿಗೆ ಹಿಂಸೆಯಾಗದಂತೆ ನಡೆದುಕೊಳ್ಳುತ್ತಿರಲಿಲ್ಲವಾ ನಾನು? ಯಾರಿಗಾದರೂ ಎದುರು ಮಾತಾಡಿದ್ದೆನಾ? ಅಣ್ಣ ಸತ್ತ ನಂತರ ಕಿರ್ಮೀರನ ಮಕ್ಕಳು ತಾವೇ ಮುಖಂಡರಾಗಬೇಕು ಅಂತ ಎಷ್ಟು ಕಷ್ಟ ಪಟ್ಟರು, ಭೀಮ ಇಲ್ಲದೇ ಹೋಗಿದ್ದರೆ ಅವರೇ ಯಾರಾದರೂ ಬಲವಂತವಾಗಿ ಮದುವೆ ಮಾಡಿಕೊಂಡು.. ಸಧ್ಯ ಹಾಗಾಗಲಿಲ್ಲ. ಸಣ್ಣಂದಿನಿಂದಲೂ ನನಗೆ, ಎಲ್ಲಾದರೂ ಹೋಗಬೇಕು, ಕಾಡುಗಳಿಂದ, ಆಕಾಷ ಕಾಣದಂತೆ ಮುಚ್ಚುವ ಮರಗಳಿಂದ ದೂರ ತುಂ ದೂರಕ್ಕೆ, ಯಾವುದಾದರೂ ಬಯಲಿನಲ್ಲಿ ಅಂಗಾತ ಮಲಗಿಕೊಂಡು ನಕ್ಷತ್ರ ಎಣಿಸಬೇಕು, ಬೇಕಾದಾಗ ಕಾಡಿಗೆ ಹೋಗಿ ಸಾಕಷ್ಟು ಮಾಂಸ ಹಣ್ಣು ತಂದಿಟ್ಟುಕೊಂಡು ಬೇರೇನನ್ನಾದರೂ ಮಾಡಬೇಕು, ಎಲ್ಲಾ ಕಾಡು ಬಯಲು ಝರಿ ಸುತ್ತಬೇಕು, ಹುಡುಗರಂತಿರಬೇಕು ಸುಮ್ಮನೆ ಕೂರಬಾರದು.. ಕನಸುಗಳಿಗೆ ಕಟ್ಟೆಯಲ್ಲಿ?

ರಾಜಕುಮಾರನೊಬ್ಬನನ್ನು ಮದುವೆಯಾಗುತ್ತೇನೆಂದು ಕನಸೂ ಕಂಡಿರಲಿಲ್ಲ. ಮನುಷ್ಯರೆಲ್ಲಾ ದುರ್ಬಲರಾದ ಆಟಿಕೆಗಳಂತೆ ಕಾಣುತ್ತಿದ್ದರು. ಘನವಲ್ಲದ ಯಾವುದೂ ನನ್ನ ಯಾವತ್ತೂ ಆಕರ್ಷಿಸಿದ್ದಿಲ್ಲ. ಅಂಥದ್ದರಲ್ಲಿ ಮನುಷ್ಯರಲ್ಲೊಬ್ಬನಾದ ಇವನನ್ನು ನಾನು ಹಾಗೆ ಬಯಸಿ ಬಯಸಿ ಮದುವೆಯಾಗುತ್ತೇನೆಂದು ಯಾರು ಕಂಡಿದ್ದರು? ನಿಜಕ್ಕೂ ಅವನು ಮನುಷ್ಯರಂತೆಲ್ಲಿದ್ದ? ಅವನ ಅಗಲ ಬುಜ, ತೋಳುಗಳನ್ನು ನೋಡಿದವಳಿಗೆ ಅವನ ಅಪ್ಪುಗೆಯೊಳಗೆ ಪುಡಿಪುಡಿಯಾಗಬೇಕು ಅನ್ನಿಸಿತ್ತು, ನಾಭಿಯಾಳದಲ್ಲಿ ಭೋರ್ಗರೆತ. ನಾಚಿಕೆಯೇ ಇಲ್ಲದವಳಂತೆ ಹೋಗಿ ಕೇಳುವವರೆಗೂ ಅವನು ತಿರಸ್ಕರಿಸಬಹುದು ಎಂದು ಹೊಳೆದೇ ಇರಲಿಲ್ಲ, ಅವನು ತಿರಸ್ಕರಿಸುವ ಒಪ್ಪಿಕೊಳ್ಳುವ ಮೊದಲೇ ಅಣ್ಣ ಬಂದುಬಿಟ್ಟನಲ್ಲ.. ಪಾಪ ಅನ್ನಿಸುತ್ತಿದೆ.. ಭೀಮನನ್ನು ನೋಡಿಯೇ ಅರ್ಥ ಮಾಡಿಕೊಳ್ಲಬೇಕಿತ್ತು. ಅವನು ಸಾಮಾನ್ಯನಲ್ಲ ಅಂತ. ಇಲ್ಲ ಅಣ್ಣನಿಗೆ ಅಹಂಕಾರ, ಅಲ್ಲದೆ ಯಾವತ್ತೂ ಯೊಚನೆ ಮಾಡುವ ಸ್ವಭಾವವೇ ಅಲ್ಲ ಅಣ್ಣನದು, ಮನುಷ್ಯರಲ್ಲವಾ ಅನ್ನೋ ಉಡಾಫೆಯಿಂದಲೇ ಎಗರಿ ಬಿದ್ದ. ಅಣ್ಣನ ಜೊತೆ ನಿಂತು ಹೋರಾಡಿದ್ದರೆ? ಇಲ್ಲ, ಇನ್ನೂ ನಾವು ಹತ್ತು ಜನ ಇದ್ದರೂ ಭೀಮ ಭೀಮನೇ... ಜೊತೆಗೆ ಅವನೊಬ್ಬ ಎದ್ದು ನಿಂತನಲ್ಲ ಬಿಲ್ಲು ಬಾಣ ಹಿಡಿದುಕೊಂಡು, ಇದೆಲ್ಲಾ ಈಗ ಹೊಳಿಯುತ್ತೆ. ಆಗ ನಿಜಕ್ಕೂ ನನ್ನ ಆವಾಹಿಸಿಕೊಂಡಿದ್ದು ಅವರಿಬ್ಬರ ಕಾದಾಟ. ಅಣ್ಣ ಪ್ರಾಣಿಗಳ ಮೇಲೆ ಎಗರುವಂತೆ ಅವುಗಳಿಗೆ ಪೆಟ್ಟುಕೊಡುವಂತೆ ಭೀಮನ ಮೇಲೆ ಎಗರುತ್ತಿದ್ದರೆ, ಭೀಮನದು ಲೆಕ್ಕಾಚಾರದ ಹೊಡೆತ. ಹೊಡೆದಾಡುವುದನ್ನು ಹೇಳಿಕೊಡುವುದಕ್ಕೂ ಅವರಿಗೆ ಗುರುಗಳಿರುತ್ತಾರೆ ಅಂತ ಗೊತ್ತಾಗಿದ್ದು ಆಮೇಲೆ. ಇವನು ಯೋಚನೆ ಮಾಡುವ ಮೊದಲೇ ಅವರಮ್ಮನೇ, ಹೂಂ ಒಪ್ಪಿಕೋ ಭೀಮ ಅವಳನ್ನು ಮದುವೆ ಮಾಡಿಕೋ ಅಂದುಬಿಟ್ಟರಲ್ಲಾ... ಅವನಿಗೇ ಆಶ್ಚರ್ಯ ಆಗುವಂತೆ. ಅವನು ನಿರಾಕರಿಸುವ ಹೊತ್ತಿಗೆ ಆ ಗಡ್ಡದ ವ್ಯಾಸ ಎಲ್ಲಿಂದಲೋ ಹೇಳಿಮಾಡಿಸಿದಂತೆ ಬಂದನಲ್ಲ, ಅವನ ಮಾತನ್ನು ಮೀರುವ ಹಾಗೇ ಇಲ್ಲವಂತೆ. ಆ ಬಿಲ್ಲು ಬಾಣದವನ ಮುಖದಲ್ಲಿ ತೆಳ್ಳಗೆ ಕಂಡೂಕಾಣದಂತೆ ಹರಡಿದ್ದು ತಿರಸ್ಕಾರವೇ ಇರಬೇಕು. ಇಲ್ಲಿರುವವರೆಗೂ ಅವನು ನನ್ನೆಡೆಗೆ ನಮ್ಮವರೆಡೆಗೆ ಬಿಗಿಯಾಗೇ ಇದ್ದ. ಅರ್ಥವಿಲ್ಲದ ಅಹಂಕಾರ.
ಮೊದಮೊದಲು ಕಸಿವಿಸಿ ಪಟ್ಟುಕೊಳ್ಳುತ್ತಿದ್ದ ಭೀಮ ನಿಧಾನಕ್ಕೆ ನನಗೆ ಅಂಟಿಕೊಂಡುಬಿಟ್ಟಿದ್ದ. ಆದರೆ ಕೆಲವೇ ತಿಂಗಳು ಅದು. ಘಟೋದ್ಘಜ ಹೊಟ್ಟೆಯಲ್ಲಿ ಹೊರಳಲು ಶುರುಮಾಡಿದ್ದ ಅಷ್ಟೇ, ಅವರಮ್ಮ ಬಂದು ಹೆಳಿದರಲ್ಲ, ಮಗು ಹುಟ್ಟಿದಮೇಲೆ ನಾವು ಹೊರಡುತ್ತೇವೆ ಅಂತ. ಹುಚ್ಚು ಕೋಪ ಬಂದಿತ್ತು ನನಗೆ. ಅಲ್ಲೇ ಅವಳನ್ನು ಪುಡಿಪುಡಿ ಮಾಡಿಬಿಡುವಷ್ಟು. ಆದರೆ ಭೀಮನ ಅಮ್ಮ ಸುಮ್ಮನಾದೆ. ಭೀಮನಿಗೆ ಹೇಳುತ್ತೇನೆ, ಅವನು ಹೊರಡೋಕ್ಕೆ ಒಪ್ಪಬೇಕಲ್ಲ ಅಂದುಕೊಂಡು ಅವನನ್ನು ಕೇಳಿದರೆ ಅವನು ಕಣ್ಣಿಗೆ ಕಣ್ಣು ಕೊಟ್ಟು ಮಾತಾಡುತ್ತಲೇ ಇರಲಿಲ್ಲ. ಇವನಿಗೂ ಸಾಕಾಗಿ ಹೋಗಿದೆ ಅಂತ ಅಳು ಒತ್ತರಿಸಿಕೊಂಡು ಬಂದಿತ್ತು. ಈಗಲೇ ಹೊರಟು ಹೋಗಿ ಅಂದೆ. ಅವರಮ್ಮ ಮೊಮ್ಮೊಗನ ಮುಖ ನೋಡಿಯೇ ಹೋಗೋದು ಅಂತ ಹಟ ಹಿಡಿದರು. ನಿಜಕ್ಕೂ ಹೋಗಲು ಆತರವಾಗಿದ್ದು ಇವನಿಗೆ. ನಮ್ಮ ಜೊತೆ ಬರುತ್ತೀಯ ಎಂದು ಮಾತಿಗೂ ಕೇಳಲಿಲ್ಲ. ರಾಕ್ಷಸಿಯ ಜೊತೆ ಇದಾನೆ ಎಂದರೆ ಇವನ ಮಾನ ಮಕ್ಕಾಗುವುದಿಲ್ಲವ? ಅವತ್ತಿನಿಂದ ಅವನ ಜೊತೆ ಸುತ್ತಾಡುವುದನ್ನು ನಿಲ್ಲಿಸಿಬಿಟ್ಟೆ, ಮಾತೂ ಎಣಿಸಿದಹಾಗೆ, ನಾನು ನನ್ನ ಹೊಟ್ಟೆಯಲ್ಲಿದ್ದ ಕಂದ, ಅವನೂ ಒಂದೆರೆಡು ಬಾರಿ ಮಾತಾಡಲು ಪ್ರಯತ್ನಿಸಿದೆ ಎನಿಸಿಕೊಳ್ಳಲು ಸಮಾಧಾನ ಮಾಡಲು ಬಂದವನಂತೆ ಮಾಡಿ ಆಮೆಲೆ ಸುಮ್ಮನಾಗಿಬಿಟ್ಟಿದ್ದ. ಹೊರಡುವ ಮೊದಲು ಎಷ್ಟು ಕೊಸರಿಕೊಂಡರೂ ಬಿಡದೆ ಮೂಳೆಗಳು ಮುರಿಯುವಂತೆ ಅಪ್ಪಿಕೊಂಡು ಕಣ್ಣೀರು ಸುರಿಸಿದನಲ್ಲಾ? ಏನರ್ಥ ಅವನದು? ಈ ನಾಟಕಗಳಿಗೆಲ್ಲಾ ಕಲ್ಲಾಗಿ ಹೋಗಿದ್ದೆ ನಾನು. ಹ್ಮ್ ಮ್.. ನಿಟ್ಟುಸಿರೆಳೆದುಕೊಂಡಳು.
ತೆಲೆ ಎತ್ತಿದರೆ ಘತೋಧ್ಗಜ ನಿಂತಿದ್ದ ಏನೋ ಕೇಳಬೇಕೆನ್ನುವಂತೆ ಎಷ್ಟೊತ್ತಿಂದ ನಿಂತಿದ್ದನೋ ಹೇಳು ಸನ್ನೆ ಮಾಡಿದೆ.. ಅವರು ಕಾಡಲ್ಲಿ ನಮ್ಮ ಜೊತೆ ಬಂದು ಇರುತ್ತಾರ? ಬರ್ಬರೀಕ ಹೇಳುತ್ತಿದ್ದ ಅವರು ಹನ್ನೆರೆಡು ವರ್ಷ ಕಾಡಲ್ಲಿ ಇರಬೇಕು ಅಂತ ಆಗಿದೆಯಂತೆ. ಅದಕ್ಕೇ ಇಲ್ಲೇ ಬಂದು ಇರ್ತಾರೆ ನೋಡು ಬೇಕಾದ್ರೆ ಅಂತಿದಾನೆ.. ಸಂಭ್ರಮ ನಿರೀಕ್ಷೆಗಳಿಂದ ಹೇಳಿದ. ಬರ್ಬರೀಕ ಹೇಳಿದ್ದು ನಿಜವಿರಲಿ ಎಂದು ಬೇಡುವಂತೆ. ಆದರೆ ಅವನು ಬರುವುದಿಲ್ಲವೆಂದು ನನಗಿಂತಾ ಚನ್ನಾಗಿ ಯಾರಿಗೆ ಗೊತ್ತಿರಬೇಕು?

ಕಾಡುತ್ತಿರುವುದು ಅವಳಾ? ತನ್ನೊಳಗಿನ ಭಯವಾ?

ಮತ್ತೆ ಪುಸ್ತಕ ಮುಚ್ಚಿದ ಶ್ರೀಧರ. ಮತ್ತದೇ ದಿಮಿಗುಟ್ಟುವ ತಲೆ, ಸೋತ ಸೋತ ಭಾವ.. ಕೋಪವನ್ನ ಹೇಗಾದರಾದರೂ ಹರಿಬಿಡಬೇಕು... ಕಥಾರ್ಸಿಸ್. ಈ ಪುಸ್ತಕವನ್ನ ಚಾಕುವಿನಿಂದ ಚುಚ್ಚಿದರೆ ಅವಳಿಗೆ ನೋವಾಗಬಹುದಾ? ಚುಚ್ಚಿದ ತಕ್ಷಣ ರಕ್ತದಂತೆ ಪದಗಳು ಸೋರಿಹೋದರೆ.. ನಿಜಕ್ಕೂ ಚಲ್ಲಿಹೋಗಬಹುದೇನೊ ಎನ್ನುವ ಅನುಮಾನವಿರುವವನಂತೆ ಪೂರ್ತಿ ಓದಿದಮೇಲೆ ಚುಚ್ಚೋಣ ಅಂದುಕೊಂಡ. ಅವಳನ್ನು ನಾನ್ಯಾಕೆ ಬಿಟ್ಟು ಬಂದೆ ಸಾವಿರ ಸಲ ಕೇಳಿಕೊಂಡಾಗಿದೆ. ಸಾವಿರ ಸಲಕ್ಕೂ ಬೇರೆ ಬೇರೆ ಉತ್ತರಗಳು. ನಿಜವಾದ ಉತ್ತರ ಯಾವುದು? ಅವಳು ಕಂಡುಕೊಂಡ ಉತ್ತರವಂತೂ ಅಲ್ಲ.. ಅವಳು ಸಾಕಾಗಿ ಅವಳಿಂದ ದೂರ ಹೋಗಿ ಸುಖವಾಗಿರಲು.. ಅವಳ ಗಂಡುಬೀರಿತನದಿಂದ ಹೆದರಿಕೊಂಡು ಸಾಕಾಗಿ ಬಂದಿದ್ದಲ್ಲ.. ಯಾಕೋ ನನಗೆ ಯಾರ ಜೊತೆಗೂ ಇರಲು ಸಾಧ್ಯವಿಲ್ಲ ಅನ್ನಿಸುತ್ತೆ. ಪ್ರೀತಿಯಂದರೇನು ಅನ್ನುವ ಉತ್ತರ ಕಂಡುಕೊಳ್ಳಲು ಸಾಧ್ಯವಾಗದೆ ಉಳಿದು ಹೋಗಿದ್ದೇನೆ. ಇದೆಲ್ಲಾ ಅರ್ಥವಾಗುತ್ತಾ ಅವಳಿಗೆ? ಪ್ರೀತಿಸುವವರ ಜೊತೆಗಿದ್ದರೆ ಮಾತ್ರ ಪ್ರೀತಿ ಅರ್ಥ ಆಗೋದು ಅನ್ನುವಂಥ ವ್ಯರ್ಥ ಮಾತುಗಳನ್ನಾಡುತ್ತಾಳೇನೋ ಈಗಲೂ.. ಯಾಕೆ ನನಗೆ ಯಾರನ್ನಾದರೂ ಪ್ರೀತಿಸಲು ಸಾಧ್ಯವೇ ಆಗಿಲ್ಲ? ಸುಮ್ಮನೇ ಜೊತೆಗಿರುತ್ತಾ, ಒಬ್ಬರಿಗೊಬ್ಬರಿಗೆ ಸಹಾಯವಾಗುತ್ತಾ ಅವರ ಸುಖ ದುಖಗಳಲ್ಲಿ ಭಾಗಿಯಾಗುವುದನ್ನೇ ಪ್ರೀತಿ ಅನ್ನುವುದಾದರೆ, ಅಂಥದು ಯಾರ ಜೊತೆಗಾದರೂ ಆಗಬಹುದಲ್ಲಾ? ಆಗ ಅವಳಿದ್ದಳು, ಅವಳು ಅತ್ತರೆ ಪಾಪ ಅನ್ನಿಸುತ್ತಿತ್ತು. ನನಗೆ ಬೇಜಾರಾದರೆ ಅವಳು ಏನಾಯ್ತೋ ಅಂತ ಕೇಳುತ್ತಿದ್ದಳು. ಅದೇ ಅವಳ ಜಾಗದಲ್ಲಿ ಯಾರೇ ಇದ್ದರೂ ನಾನು ಹಾಗೇ ರಿಯಾಕ್ಟ್ ಮಾಡ್ತಿದ್ದೆ, ಅವಳೂ ಅಷ್ಟೇ. ಅದ್ಯಾಕೆ ಅವಳಿಗೆ ಅರ್ಥವಾಗಲಿಲ್ಲ? ಅರ್ಥವಾಗುವುದಿಲ್ಲ?

ಸಿನಿಮಾಗಳನ್ನ ನೋಡಿದರೆ ನಗು ಬರುತ್ತಿತ್ತು. ಅವನು ಪ್ರೀತಿಸಿದ ಹುಡುಗಿ, ‘ನಿ ಇಷ್ಟ ಇಲ್ಲ’ ಅಂತಲೋ, ಅಥವ ಹೇಳಲೇ ಬಾರದ ಗಹನವಾದ ವಿಷಯದಂತೆ ಸುಮ್ಮನಿದ್ದುಬಿಡುವ ಸುಂದರಿ, ಅವಳು ಸಿಗದೆ ದುಃಖಿಸುವ ಅಳುವ, ನೋವಿದ್ದರೂ ಅಥವ ನೋವಿನಲ್ಲಿ(ಅದು ನೋವಾ? ಮತ್ತೆ ಪ್ರಶ್ನೆ?) ಹಾಡುವ ಹುಡುಗ, ಅವಳನ್ನು ದಕ್ಕಿಸಿಕೊಳ್ಳುವುದಕ್ಕೆ ಅವನು ಪಡುವ ಪರಿಪಾಟಲು, ಕೊನೆಗೂ ಸಿಗುವ, ಸಿಗದೇ ಬೇರ್ಯಾರನ್ನೋ ಮದುವೆಯಾಗಿ ಹೋಗುವ, ಇಲ್ಲ ಸತ್ತೇ ಹೋಗುವ ಹುಡುಗಿ. ಎಂಥದೋ ಒಂದು. ಅಂತೂ ಸಿನೆಮಾ ಮುಗಿಯುತ್ತದೆ. ಎಲ್ಲರ ಜೀವನದಲ್ಲೂ ಅಷ್ಟೇ. ಅವನು ಅವಳು ಸಿಗುವವರೆಗೆ ಅದು ಸಿನೆಮಾ, ಆಮೇಲೆ? ಪ್ರೀತಿಯ ಮೊದಲ ಹಂತಗಳು ಮುಗಿದು ‘ನಾನು ಅವನಿಗೇ-ಅವಳು ನನ್ನವಳು’ ಅಂತ ಸ್ಥಾಪಿತವಾದಮೇಲೆ? ಪ್ರೀತಿ ಅಂದರೇನು ಅಂತ ಪ್ರಶ್ನೆ ಹುಟ್ಟುತ್ತದಲ್ಲಾ? ಎಷ್ಟು ತಡಕಾಡಿದರೂ ಉತ್ತರವೇ ಸಿಗದಂಥಾ ಪ್ರಶ್ನೆ, ಅದ್ಯಾಕೆ ಹಾಗೆ? ಒಬ್ಬರಿಗೊಬ್ಬರು ಅಭ್ಯಾಸವಾಗುತ್ತಾ ಹೋಗುತ್ತಾರೆ, ಅವನಿಗೆ ಪೆಟ್ಟಾದರೆ ಇವಳಿಗೆ ಚಿಂತೆಯಾಗುವುದಕ್ಕೆ ಶುರುವಾಗುತ್ತದೆ, ಇವಳು ಅವತ್ಯಾವತ್ತೋ ಊಟ ಮಾಡದೆ ಮಲಗಿದಳು ಅಂತ ಅವನಿಗೆ ಬೇಜಾರು. ಇಂಥದೇ ನೂರು ಥರಾವರಿ ಘಟನೆಗಳಲ್ಲಿ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಕಾಳಜಿ. ಯಾರೇ ಹತ್ತಿರದವರಿಗಾದರೂ ಕಾಳಜಿ ತೋರಿಸುವುದಿಲ್ಲವಾ?? ಕಾಳಜಿಗೂ ಪ್ರೀತಿಗೂ ವೆತ್ಯಾಸ ಉಂಟಲ್ಲ? ಹೌದಾ ಇದೆಯಾ? ಅವನು ಇನ್ನೊಬ್ಬ ಹುಡುಗಿಯನ್ನು ತುಂಬ ಹೊತ್ತು ಮಾತಾಡಿಸಿದರೆ ಇವಳೊಳಗೆ ಧಗ ಧಗ. ಮುನಿಸು ಜಗಳ. ‘ನಾನವನನ್ನು ಪ್ರೀತಿಸೋದರಿಂದ ನಂಗೆ ಹೊಟ್ಟೆ ಉರಿಯುತ್ತೆ, ಪ್ರೀತಿನೇ ಇಲ್ಲಾ ಅಂದಿದ್ರೆ ಏನೂ ಅನ್ನಿಸುತ್ತಿಲಿಲ್ಲ’. ಎಲ್ಲಾ ಕಾಲದ ಪೊಸೆಸ್ಸಿವ್ ಹುಡುಗ ಹುಡುಗಿಯರ ಸ್ಟಾಂಡರ್ಡ್ ಸಮರ್ಥನೆ. ಪ್ರಕಾಶ ಒಮ್ಮೆ ಮಾತಾಡಿದ್ದು ನೆನಪಿಗೆ ಬಂತು. “ಸೈಟ್ ನಂದು. ಅವ್‌ನ್ಯಾರೋ ಬೇವರ್ಸಿ ಬಂದು ಬೇಲಿಹಾಕಿದಾನೆ. ಅವರಪ್ಪನ ಮನೆ ಗಂಟು ಅನ್ನೋ ಥರ. ಅದಕ್ಕೇ ಹೊಟ್ಟೆ ಉರಿಯತ್ತೆ ಬೇರೆಯವರಾಗಿದ್ರೆ ನಂಗೇನ್ ಅನ್‌ಸ್ತಿರ್ಲಿಲ್ಲ” ಅಂದಿದ್ದ. ಹಾಗಾದ್ರೆ ‘ಐ ಓನ್ ದಿಸ್’ ಅನ್ನೋದಕ್ಕೂ ‘ಐ ಲವ್’ ಅನ್ನೋದಕ್ಕೂ ವೆತ್ಯಾಸ ಇಲ್ವಾ? ಪ್ರೀತಿ ದೈಹಿಕ ಸ್ಥಿತಿಗತಿಗಳಿಗೆ ಸಂಭಂದಿಸಿದ್ದಾ? ಇಲ್ಲ ಮನಸ್ಸಿಂದಾ? ಕೊನೆ ಮೊದಲಿರದ ಪ್ರಶ್ನೆಗಳು.
ಈ ಪ್ರಶ್ನೆಗಳಿಗೆ ಉತ್ತರ ಸಿಗದೆ ಯಾರನ್ನಾದರೂ ಪ್ರೀತಿಸುತ್ತಿದ್ದೇನೆ ಅನ್ನುವ ಧೈರ್ಯವಾದರೂ ಹೇಗೆ ಬರಬೇಕು ನನಗೆ? ಪ್ರೀತಿ ಇರದೇನೇ ಅದು ಅರ್ಥವಾಗದೇನೇ ಮದುವೆಯಾಗಿ ನರಳುವುದಕ್ಕಿಂತ ಈಥರದ ಜೀವನ ವಾಸಿ ಎಂದು ಆಯ್ದುಕೊಂಡೆ. ಇವಳ್ಯಾರು ನನ್ನ ಕಾಡೋದಕ್ಕೆ?

ಹಿಡಂಬೆಯ ಸ್ವಗತದಲ್ಲಿ ಪೂರ್ವಾಪರದ ಹಳಹಳಿಕೆ

ಕಾಮಕಂಟಕೆ ಇನ್ನೂ ಮಂಕಾಗಿದ್ದಳು.. ಮಗುವೊಂದು ಇಲ್ಲದೇ ಹೋಗಿದ್ದರೆ? ನೆನೆಸಿಕೊಳ್ಳಲೂ ಭಯವಾಯಿತು ಹಿಡಂಬೆಗೆ. ತನಗಾದರೂ ಗಂಡ ಬದುಕಿದ್ದಾನೆ ಎಂಬುದು ತಿಳಿದಿತ್ತು. ನಾನು ವಂಚನೆಗೊಳಗಾದ ಭಾವನೆಯಲ್ಲಿ ನರಳುತ್ತಿದ್ದರೂ ಅವನು ಬದುಕಿದ್ದಾನೆ ಎಂದಾದರೂ ಬರಬಹುದು ಅನ್ನೋ ಸುಳ್ಳು ನಿರೀಕ್ಷೆಯಾದರೂ ಇತ್ತಲ್ಲಾ. ಇವಳಿಗೆ ಕಣ್ಣ ಮುಂದೆಯೇ ಕಾದಾಡಿ ಸತ್ತ ಗಂಡನ ನೆನಪು ಕಬಳಿಸಿ ನುಂಗುವುದಿಲ್ಲವೇ? ಅವಳು ಬದುಕಬೇಕು ತನ್ನ ಮಗುವಿಗಾದರೂ. ಅಯ್ಯೋ ಅವನಿಗೋಸ್ಕರ ಕಾದಾಡಿ ಸತ್ತೆಯಲ್ಲಾ ಮಗನ ಮೇಲೆ ಭೀಮನ ಮೇಲೆ ಅಸಾಧ್ಯ ಸಿಟ್ಟು ಬಂತು. ವಾಪಸ್ಸು ನಡೆದು ಹೋಗಿ ಅಂದು ನಡೆದ ಘಟನೆಗಳನ್ನು ಬದಲಿಸುವ ಶಕ್ತಿಯಿದ್ದಿದ್ದರೆ ಅನ್ನಿಸಿತು. ಘಟೋದ್ಗಜ ಆ ಯುದ್ಧಕ್ಕೆ ಹೋಗುವ ಮೊದಲು ಎಳೆದುಕೊಂಡು ಬರಬೇಕಿತ್ತು. ಸಹಾಯ ಮಾಡಿ ಎಂದು ಅವರ ಕಡೆಯವರು ಬಂದು ಕರೆದರಲ್ಲ. ಸ್ವತಹ ಅವನಮ್ಮ ಕುಂತಿ ಪತ್ರ ಕಳುಹಿಸಿದ್ದಳು. ನಾನು ಮಗನಿಗೆ ಹೋಗು ಅನ್ನಲಿಲ್ಲ, ಹೋಗಬೇಡ ಅನ್ನಬಹುದಿತ್ತು. ಆದರೆ ಹುಟ್ಟಿಸಿದವನಿಗೂ iಗುವಿನ ಮೇಲೆ ಅಧಿಕಾರ ಇರುತ್ತದಲ್ಲ, ಬರೀ ಹುಟ್ಟಿಸಿದ ಕಾರಣಕ್ಕಾದರೂ. ಮಗ ಹೊರಟು ನಿಂತ ಯಾವುದೋ ನಿಶ್ಚಯ ಮೂಡಿದವನಂತೆ. ಹಠ ಬಿಡದ ಎಳೆ ಪ್ರಾಯದ ಹೆಂಡತಿಯೂ ಹೊರಟು ನಿಂತಳು. ಇದೆಲ್ಲಾ ಭೀಮನಿಂದಲೇ ಆದದ್ದು ಕೊಂದುಹಾಕಬೇಕು ಅವನನ್ನು ಅನ್ನಿಸಿತು.
ಕೋಪದಿಂದ ಹೊರಟವಳು ನದಿಯ ಬಳಿ ಬಂದು ಕೂತಿದ್ದಳು. ಹುಳುಗಳು ಮೂಡಿಸುವ ಚಿಕ್ಕಚಿಕ್ಕ ಅಲೆಗಳನ್ನು ಗಮನಿಸುತ್ತಾ. ಯಾರೋ ಬರುತ್ತಿರಬೇಕು ಅನ್ನಿಸಿತು. ಬರ್ಬರೀಕ ಓಡುತ್ತಾ ಬಂದು ಏದುಸಿರಿನಲ್ಲಿ ಹೇಳಿದ ಅವರು ಬಂದು ಕಾಡಿನ ಹೊರಗೆ ಬೀಡು ಬಿಟ್ಟಿದ್ದಾರೆ ತಮ್ಮ ಅಪ್ಪಣೆಯಿದ್ದರೆ ಒಳಗೆ ಬರುತ್ತಾರಂತೆ ಭಟನೊಬ್ಬನನ್ನು ಕಳುಹಿಸಿದ್ದರು. ಯಾರ್ಯಾರಿದ್ದಾರೆ ಕೇಳಿದಳು. ಭೀಮ ಕೊನೆಗೂ ಬಂದಿದಾನೆ ಅನ್ನುವುದು ಬರ್ಬರೀಕ ಹೇಳುವ ಮೊದಲೇ ಹೊಳೆಯಿತು. ಕುಂತಿಯ ಹೆಸರು ಕೇಳಿದೊಡನೆ ಎದ್ದು ನಿಂತಳು.
ದುಖದ ಕಟ್ಟೆ ಒಡೆಯಿತು. ಕುಂತಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಹೇಳಬೇಕಾದ್ದನ್ನು ಹೇಳಿ ನ್ನಿಸೂರಾದ ಕುಂತಿಯ ನಿಟ್ಟುಸಿರಿನಿಂದ ಕಿಡಿ ತಾಕಿಸಿಕೊಂಡ ಹಿಡಂಬಿಯ ಕೋಪ ಅವಳನ್ನೇ ದಹಿಸುತ್ತಿತ್ತು. ಈ ಹೆಂಗಸು ನನ್ನ ಬಳಿ ಬರುವುದೇ ನನ್ನ ಬರಿದಾಗಿಸುವುದಕ್ಕೆ, ಉಗುಳು ನುಂಗುವುದೂ ಯಮಯಾತನೆ. ಎಲ್ಲಾ ಮೊಮ್ಮೊಕ್ಕಳೂ ಮರಿಮಕ್ಕಳೂ ಸತ್ತು ಹೋಗಿದ್ದಾರೆ. ಅದಕ್ಕೇ ಕೊನೆಗೆ ಯಾರೂ ಇಲ್ಲದಕ್ಕೆ ನನ್ನ ಮೊವ್ಮೂಗ ಬೇಕು. ರಾಕ್ಷಸ ರಕ್ತ ಈಗ ಅಸಹ್ಯವಾಗುವುದಿಲ್ಲವಾ? ತಲೆತಗ್ಗಿಸಿಕೊಂಡೇ ಕೂತಿದ್ದ ಭೀಮನನ್ನು ದುರುದುರು ನೋಡಿದಳು. ಕಾಮಕಂಟಕೆಗೆ ಭೀಮ ದೇವರು. ಇವರು ಸತ್ತಾಗ ಹೇಗೆ ದೇಹವನ್ನು ತಬ್ಬಿಕೊಂಡು ಅತ್ತರು ಗೊತ್ತಾ ಹಿಡಂಬಿ? ಕೊನೆಗೆ ದ್ರೌಪದಿ ಬಹಳ ಹೊತ್ತು ಸಮಾಧಾನ ಮಾಡಬೇಕಾಯಿತು. ಇವನೂ ತಾತನನ್ನು ತುಂಬ ಹಚ್ಚಿಕೊಂಡಿದ್ದಾನೆ. ಅವಳು ಸಾವಿರ ಸಲ ಹೇಳಿದ್ದಳು. ಅವಳಿಗೆ ಹೋಗಲು ಮನಸ್ಸಿದೆ ಖಂಡಿತ ನನ್ನ ಉತ್ತರಕ್ಕಾಗಿ ಕಾಯುತ್ತಿರುತ್ತಾಳೆ. ಇನ್ನು ಉಗುಳು ನುಂಗಲಾಗುವುದೇ ಇಲ್ಲಾ.. “ನೀನೂ ಬಂದು ಬಿಡು ಹಿಡಂಬಿ ಇಲ್ಲ್ಯಾಕೆ ಇರಬೇಕು ಕಾಡಿನಲ್ಲಿ ಕಷ್ಟಪಟ್ಟುಕೊಂಡು..” ಉಸುರಿದಳು ಕುಂತಿ. ಅಸಹ್ಯವಾಗಿ ವಾಂತಿಬರುವಂತಾಯಿತು. ತಲೆತಿರುಗಿ ಬಿದ್ದುಬಿಡುತ್ತೇನೆ ಎಂದುಕೊಂಡಳು. ಅವತ್ಯಾವತ್ತೂ ನಾನು ಒಬ್ಬಂಟಿಯಾಗುತ್ತೇನೆ ಎನ್ನೋದು ಹೊಳೆಯಲಿಲ್ಲವಾ? ನಿಧಾನವಾಗಿ ಎದ್ದು ತನ್ನ ಮರದ ಪೊಟರೆಯನ್ನು ಸೇರಿಕೊಂಡಳು. ಭೀಮ ಒಳಹೋಗಲು ನೋಡಿದ ಅದರ ಬಾಗಿಲು ಭಧ್ರವಾಗಿ ಮುಚ್ಚಿತ್ತು.

ಮುಗಿದಿದ್ದು ಕಾದಂಬರಿಯಷ್ಟೇ ನೆನಪುಗಳಿಗೆ ಕೊನೆಯಿಲ್ಲ

ಶ್ರೀಧರ ಯೋಚಿಸತೊಡಗಿದ. ಅಲ್ಲ ಕಾದಂಬರಿಯೊಂದನ್ನು ಮುಗಿಸುವ ರೀತಿಯೇ ಇದು? ಅವಳ ಮನಸ್ಸಿನಲ್ಲಿರೋದಾದರೂ ಏನು? ಏನಿದೆಲ್ಲದರ ಅರ್ಥ? ನಾನವಳನ್ನು ಎಲ್ಲರಿಂದ ದೂರವಾಗುವಂತೆ ಮಾಡಿ ಒಂಟಿ ಮಾಡಿದೆ ಎನ್ನುವುದಾ? ಕಾಲೇಜಿನ ಕೊನೆಯ ದಿನಗಳು ನೆನಪಾಗತೊಡಗಿದವು.. ಸಧ್ಯ ಕೊನೇಗೂ ಪರೀಕ್ಷೆ, ಕ್ಲಾಸು, ಅಸೈನ್ಮೆಂಟು, ಅಟೆಂಡೆನ್ಸುಗಳಿಗೆಲ್ಲಾ ವಿದಾಯ. ನೆಮ್ಮದಿಯಾಗಿ ಕೆಲಸ ಮಾಡಿಕೊಂಡು ನಮ್ಮ ದುಡ್ಡು ನಾವು ದುಡಿದುಕೊಂಡು ಇರಬಹುದು, ಎಂದು ಖುಶಿಯಾಗುತ್ತಿದ್ದರೆ, ಅಯ್ಯೋ ಮುಗಿದೇ ಹೋಯಿತಲ್ಲಾ.. ಇಲ್ಲಿನ ಖುಷಿ, ಕೇರ್‌ಲೆಸ್ ಜೀವನ, ಹುಡುಗಿಯರನ್ನು ಚುಡಾಯಿಸುವುದು, ಎಲ್ಲದಕ್ಕೂ ಟಾಟಾ ಹೇಳಬೇಕು. ಇನ್ನು ಜವಾಬ್ದಾರಿಗಳು ಬೆಂಬಿಡದ ಬೇತಾಳದಂತೆ ಹೆಗಲೆರುತ್ತವೆ ಎನ್ನುವ ಚಿಂತೆ ಇನ್ನೊಂದೆಡೆ. ಅಲ್ಲದೆ ನನಗೆ ಅವಳಿಗುತ್ತರಿಸುವುದಿತ್ತು, ಮುಂದೇನು ಎನ್ನುವ ಪ್ರಶ್ನೆ ಎದುರಾದಾಗಲೆಲ್ಲಾ ನಾನು ಮೌನಿ. ನನಗೆ ಅವಳು ಹೇಳುತ್ತಿದ್ದ ಪ್ರೀತಿಯ ವ್ಯಾಖ್ಯೆ ಅರ್ಥವಾಗುತ್ತಿರಲಿಲ್ಲ. ಅವಳು ಖಂಡಿತ ಬೇಕು ಅನ್ನಿಸುತ್ತಿದ್ದಳು. ಅವಳ ಅಪ್ಪುಗೆಯ ಸುಖ, ಅವಳೊಡನೆ ಮಾತು, ಸಾಹಿತ್ಯ, ಅಪರೂಪಕ್ಕೆ ಆಡುತ್ತಿದ್ದ ಬ್ಯಾಡ್ಮಿಂಟನ್, ಬೆಳಗ್ಗಿನ ವಾಕ್‌ಗಳು, ಎಲ್ಲವೂ ಚಂದವೇ ಆದರೆ ಪ್ರೀತಿ? ನನಗೆ ಉತ್ತರಿಸಲು ತಿಳಿಯುತ್ತಿರಲಿಲ್ಲ. ಅವಳ ಕಣ್ಣುಗಳ ತುಂಬ ಪ್ರಶ್ನೆ. ಅವಳು ಬಾಯಿಬಿಟ್ಟು ಕೇಳುತ್ತಿರಲಿಲ್ಲ ಅಷ್ಟೆ. ಕೇಳುವಂಥ ಸಂದರ್ಭಕ್ಕೆ ಅವಕಾಶವೇ ಕೊಡದಂತೆ ತಪ್ಪಿಸಿಕೊಂಡು ಬಂದಿದ್ದೆ.
ಅವಳು, ಹಳೆಯ ಸ್ನೇಹಿತರು ಜೊತೆಯಲ್ಲಿಲ್ಲದೆ ಮೊದಮೊದಲು ಹಿಂಸೆಯಾಗುತ್ತಿತ್ತು. ಆಮೇಲೆ ಮತ್ತೆ ಎಲ್ಲಾ ಸರಿ ಹೋಯಿತಲ್ಲ. ಯಾರೂ ಅನಿವಾರ್ಯವಲ್ಲ ಅನ್ನುವ ಸತ್ಯವನ್ನು ಗಟ್ಟಿಮಾಡುತ್ತಾ. ಯಾವಾಗಲೂ ಒಬ್ಬರ ಬದಲಿಗೆ ಇನ್ನೊಬ್ಬರು ಸಿಕ್ಕೇ ಸಿಗುತ್ತಾರೆ.
ಅಷ್ಟೊಂದು ನೋವು ಕೊಟ್ಟಿದ್ದೇನಾ? ನಾನೂ ಅವಳನ್ನು ಮಿಸ್ ಮಾಡಿಕೊಳ್ಳುತ್ತಿದ್ದುದಂತೂ ಹೌದು. ಆದರೆ ನಿಧಾನಕ್ಕೆ ಅಭ್ಯಾಸವಾಯಿತಲ್ಲ. ಅವಳಿಗೆ ಆಗಲಿಲ್ಲವಾ? ಇನ್ನೂ ನನ್ನ ಬಗ್ಗೆ ಯೋಚಿಸಿ ತಲೆಕೆಡಿಸಿಕೊಳ್ಳುತ್ತಾಳೆ ಎನ್ನುವುದೂ ಖುಶಿಯನ್ನೇನು ಉಂಟುಮಾಡುತ್ತಿಲ್ಲ. ಆದರೆ ಪಾಪ ಅನ್ನಿಸುತ್ತೆ. ಹೌದೇನೆ ನಿಜವಾಗಲೂ ಇನ್ನೂ ಅಷ್ಟು ಇಷ್ಟ ಪಡ್ತಿಯ? ಅಂತ ಮುದ್ದುಗರೆಯುತ್ತಾ ಕೇಳಬೇಕು ಅನ್ನಿಸುತ್ತೆ. ಆದರೆ ಅಷ್ಟಕ್ಕೇ ಅವಳದನ್ನ ಪ್ರೀತಿ ಅಂತ ತಪ್ಪು ಅರ್ಥ ಮಾಡಿಕೊಂಡರೆ.. ಭಯವಾಯಿತು. ಇಲ್ಲ, ಅದನ್ನೆಲ್ಲಾ ಮೀರಿ ಬೆಳದಿರುತ್ತಾಳೆ. ಅವಳಿಗೆ ಉತ್ತರಗಳನ್ನು ಕೊಡಲೇ ಬೇಕು. ಪ್ರಶ್ನೆಗಳನ್ನೆತ್ತಿದ್ದಾಳೆ, ಉತ್ತರಗಳನ್ನೂ ಕೇಳಲಿ. ನೇರವಾಗಿ ಮನೆಗೇ ಹೋಗುತ್ತೇನೆ, ಹೇಗೆ ಅವಾಯ್ಡ್ ಮಾಡುತ್ತಾಳೆ ನೋಡೋಣ.
ಯೋಚಿಸುತ್ತಾ ಶ್ರೀಧರ ಕಾದಂಬರಿಯ ಕೊನೆಯ ಪುಟಗಳತ್ತ ಕಣ್ಣು ಹಾಯಿಸಿದ. ಧೀರೇಂದ್ರ ಆಚಾರ್ಯರು ಬರೆದ ಬೆನ್ನುಡಿ ಕಾಣಿಸಿತು. ಅದರ ಶೀರ್ಶಿಕೆಯೇ ಕುತೂಹಲ ಮೂಡಿಸಿತು.

ಪುರಾಣವನ್ನು ವರ್ತಮಾನಕ್ಕೆ ಒಗ್ಗಿಸುವ ವಿಫಲ ಯತ್ನ

ಇಳಾ ಅವರ ಕಾದಂಬರಿಯನ್ನು ನಾನು ಓದುವುದಕ್ಕೆ ಎತ್ತಿಕೊಂಡಾಗ ಇದ್ದ ಕುತೂಹಲ ಓದಿ ಮುಗಿಸುವ ಹೊತ್ತಿಗೆ ಇರಲಿಲ್ಲ. ಇಳಾ ಭಾಷೆ, ಯೋಚಿಸುವ ರೀತಿ, ಕಥೆ ಹೇಳುವ ಶೈಲಿ ಎಲ್ಲದರಲ್ಲೂ ನವ್ಯೋತ್ತರದ ಛಾಪಿದೆ. ಆದರೆ ನನ್ನ ತಕರಾರಿರುವುದು ಅವರ ಕಾದಂಬರಿಯ ವಸ್ತುವಿನ ಬಗ್ಗೆ. ಪುರಾಣವನ್ನು ಪುರಾಣವನ್ನಾUಯೇ ನೋಡುವ ಏಕಾಗ್ರತೆಯನ್ನು ಲೇಖಕಿ ಬೆಳಸಿಕೊಂಡಿಲ್ಲ. ಪುರಾಣದ ಕಥೆಗಳನ್ನು ತಿರುಚಬಾರದು ಅನ್ನುವುದು ನನ್ನ ವಾದವಲ್ಲ. ಆದರೆ ಒಂದು ಪಾತ್ರದ ಸಂವಿಧಾನವನ್ನು ಯೋಚನಾ ಕ್ರಮವನ್ನು ಬದಲಾಯಿಸುವುದು ಮೂಲ ಲೇಖಕನಿಗೆ ಮಾಡುವ ಅನ್ಯಾಯ. ಈ ಕಾಲಘಟ್ಟದ ಜನರ ಆಲೋಚನೆ, ತಲ್ಲಣ, ಭಗ್ನಪ್ರೇಮ, ಯಾಚನೆ, ಆಕ್ರೋಶ ಮತ್ತು ವಿರಹಗಳನ್ನು ಹಿಡಂಬಿಯ ಪಾತ್ರಕ್ಕೆ ಆರೋಪಿಸುತ್ತಾರೆ ಇಳಾ.
ವೇದವ್ಯಾಸರು ದೊಡ್ಡ ಲೇಖಕರಾಗುವುದು ಇಂಥಾ ವಿಚಾರದಲ್ಲೇ. ಅವರ ಹುಟ್ಟು ಬದುಕಿನ ಕಥೆ ಎಲ್ಲರಿಗೂ ತಿಳಿದಿರುವುದೇ. ಆದರೆ ಎಲ್ಲೂ ಅದರ ಪ್ರಭಾವ ಮಹಾಭಾರತದ ಮೇಲೆ ಆಗಿಲ್ಲ. ಅವರ ಏಕಾಂತದ ಯೋಚನೆಗಳು ನೋವುಗಳು ಕಾದಂಬರಿಯ ಪಾತ್ರಗಳನ್ನು ಪ್ರಭಾವಿಸಿಲ್ಲ. ದಾರ್ಶನಿಕನಿಗೆ ಇರಬೇಕಾದ ಗುಣ ಅದು. ಅವನು ತನ್ನನ್ನು ಹೊರಗಿಟ್ಟುಕೊಂಡು, ಕಥೆ ಕಟ್ಟುತ್ತಾ ಹೋಗುತ್ತಾನೆ. ಹಾಗಾದಾಗಲೇ ಲೇಖಕನ ಹಂಗಿಲ್ಲದೆಯೂ ಒಂದು ಕೃತಿ ನಮಗಿಷ್ಟವಾಗುತ್ತದೆ.
ಹಿಡಿಂಬೆ ರಾಕ್ಷಸ ಕುಲಕ್ಕೆ ಸೇರಿದವಳು. ಕಾಡಿನಲ್ಲಿ ವಾಸಿಸುವವರೆ ಜೀವನಕ್ರಮ ಯೋಚನೆಗಳು ಎಲ್ಲಾ ಬೇರೆ ಬೇರೆ. ಭೀಮ ಅವಳನ್ನು ಕೂಡುವ ಮೂಲಕ ಆಕೆಯನ್ನು ಪುನೀತನಾಗಿಸಿದ್ದಾನೆ. ಅವಳಿಗೊಂದು ಮಗುವನ್ನು ಕೊಟ್ಟು, ಮೊದಲೇ ಆದ ಒಪ್ಪಂದದ ಪ್ರಕಾರ ಬಿಟ್ಟು ಹೋಗಿದ್ದಾನೆ. ಅಲ್ಲದೆ ಘಟೋಧ್ಗಜ ಭೀಮ ಯುದ್ಧಕ್ಕೆ ಮೊದಲೇ ಭೇಟಿಯಾಗಿರುತ್ತಾರೆ. ಭೀಮ ಸೌಗಂಧಿಕಾ ಪುಷ್ಪವನ್ನು ತರೋಕ್ಕೆ ಹೋಗಿ ತುಂಬ ದಿನ ಬರದೇ ಇದ್ದಾಗ ಸಹಾಯ ಮಾಡೋದಕ್ಕೆ ಘಟೋದ್ಗಜನನ್ನು ಕರೆಯುತ್ತಾಳೆ ಕುಂತಿ, ರಾಜಸೂಯಯಾಗದ ಸಂಧರ್ಭದಲ್ಲಿ ಘಟೋದ್ಗಜ ಇಂದ್ರನನ್ನು ಸೋಲಿಸಿ ಕಪ್ಪವನ್ನು ತಂದಿರುತ್ತಾನೆ. ಪಾಂಡವರು ವನವಾಸ ಕಾಲದಲ್ಲಿ ಗಂಧಮಾದನ ಪರ್ವತದದಲ್ಲಿ ಸಂಚರಿಸುತ್ತಿದ್ದ ವೇಳೆ ಆಯಾಸಗೊಂಡು ದ್ರೌಪದಿ ಮೂರ್ಛಿತಳಾಗಿ ಬೀಳುತ್ತಾಳೆ. ಆಗ ಘಟೋಧ್ಗಜ ಅವಳನ್ನು ಹೆಗಲಮೇಲೆ ಕೂರಿಸಿಕೊಂಡು ಬಂದು ನಾರಾಯಣಾಶ್ರಮದಲ್ಲಿ ಬಿಡುತ್ತಾನೆ. ಅಲ್ಲದೆ ಅಭಿಮನ್ಯು ಮತ್ತು ವತ್ಸಲೆಯರ ಮದುವೆ ಮಾಡ್ಸುವಲಿಯೂ ಘಟೋಧ್ಗಜ ಮಹತ್ವದ ಪಾತ್ರ ವಹಿಸುತ್ತಾನೆ.
ಹೀಗಾಗಿ ಭೀಮನದಾಗಲಿ, ಕುಂತಿಯದಾಗಲೀ ತಪ್ಪು ಎಂದು ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಹಿಡಂಬಿಯ ಯೋಚನಾ ಲಹರಿ ಈ ಕಾಲದ ಹೆಣ್ಣು ಮಕ್ಕಳ ಯೋಚನಾ ಲಹರಿಯೇ ಹೊರತು ಆ ಪಾತ್ರದ್ದಲ್ಲ. ಆದರಿಂದ ಅದು ಆರೋಪಿತ ಚಿಂತನೆ. ಹೀಗಾಗಿ ಹಿಡಂಬೆಯ ಪಾತ್ರಕ್ಕೆ ಲೇಖಕಿ ನ್ಯಾಯ ಒದUಸಿಲ್ಲ. ಮತ್ತು ಅದಕ್ಕೆ ಪ್ರಾಪ್ತವಾಗಬೇಕಾದ ಪುರಾಣದ ಗುಣ ಪ್ರಾಪ್ತವಾಗಿಲ್ಲ.
ಇಷ್ಟಾಗಿಯೂ ಈ ಕಾದಂಬರಿಯನ್ನು ಕುತೂಹಲದಿಂದ ಓದಿಕೊಳ್ಳಬಹುದು. ಕೊಂಚ ಅಧ್ಯಯನ, ಭಾವನೆಗಳ ಮೇಲೆ ಹತೋಟಿಮತ್ತು ವರ್ತಮಾನ-ಪುರಾಣದ ನಡುವಿನ ತೆಳುಗೆರೆಯನ್ನು ಕಂಡುಕೊಳ್ಳುವ ಕಣ್ಣಿದ್ದರೆ ಇದು ಮತ್ತಷ್ಟು ಉತ್ತಮ ಕೃತಿಯಾಗುತ್ತಿತ್ತು ಎಂಬುದು ನನ್ನ ವಿನಮ್ರ ಅನಿಸಿಕೆ.

ವಿಮರ್ಶೆಯ ಹೊಸಿಲಾಚೆಗೆ ಅವಳ ನೆನಪಿನ ಘಮಲು

ಬಾಲ್ಕನಿಗೆ ಹೋಗಿ ತನ್ನ ಇಷ್ಟದ ಸಿಗರೇಟನ್ನು ಹಚ್ಚುವ ಮೊದಲೊಮ್ಮೆ ಧೀಘವಾಗಿ ಉಸಿರೆಳೆದುಕೊಂಡ. ವರ್ಜೀನಿಯಾ ಟೊಬ್ಯಾಕೋ ಘ್ಂ ಎನ್ನುತ್ತಿತ್ತು. ಜಾರಿಬೀಳದಂತೆ ನಿಧಾನವಾಗಿ ಕಟ್ಟೆಯಮೇಲೆ ಕೂತು ಸಿಗರೇಟು ಹತ್ತಿಸಿದ. ಬೆರಳತುದಿಯ ಜೀವಕೋಶವೂ ನೆಮ್ಮದಿಯಾಗಿ ಕಾಲುಚಾಚಿದಂತೆ ಅನ್ನಿಸಿತು. ವಿಮರ್ಶಕನಿಗೆ ಅವಳ ಬದುಕಿನ ಬಗ್ಗೆ ಏನುತಿಳಿದಿದೆ? ಅವನು ಕೃತಿಯನ್ನ ಮಾತ್ರ ವಿಮರ್ಶೆ ಮಾಡಬಲ್ಲ. ಹಿಡಂಬಿಯ ಯೋಚನಾ ಲಹರಿ ಈ ಕಾಲದ ಹೆಣ್ಣು ಮಕ್ಕಳ ಯೋಚನಾ ಲಹರಿ ಎಂದು ಹೊರಗಿನವನಾದ ವಿಮರ್ಶಕನಿಗೆ ಜವರಲೈಸ್ ಮಾಡಿಬಿಡುವುದು ಸುಲಭ. ಆದರೆ ಸ್ವಂತ ಬದುಕು ಕೃತಿಯನ್ನ ಪ್ರಭಾವಿಸುವ ರೀತಿ, ಅದರೆ ಸಾಂದ್ರತೆ ಹೊರಗಿನವರಿಗೆ ಹೇಗೆ ತಿಳಿಯಬೇಕು ಅನ್ನಿಸಿತು. ಆದರೆ ಮನುಷ್ಯ ಮನುಷ್ಯನನ್ನು ಬದುಕಿಯೆ ಪ್ರಭಾವಿಸಬೇಕು, ಕೃತಿ, ಕಲ್ಪನೆ, ಸ್ಂಶೋಧನೆ, ಕಲೆ ಎಲ್ಲವೂ ಇನ್ನೊಬ್ಬರನ್ನ ಇಂಪ್ರೆಸ್ ಮಾಡಬಹುದು ಆದರೆ ಪ್ರಭಾವಿಸಲು ಸಾಧ್ಯವಿಲ್ಲ ಅನ್ನುವುದೂ ಹೊಳೆಯಿತು. ತಲೆಯೊಳಗೆ ಮತ್ತದೇ ರುಮುರುಮು.. ವಿಮರ್ಶಕನ ಮಾತುಗಳು ಅವಳು ಹೇಳಿದ್ದಕ್ಕೆಲ್ಲಾ ಅರ್ಥವಿಲ್ಲವೆಂಬಂತೆ, ನಿರಾಕರಿಸುವಂತೆ ತೋರುತ್ತಿತ್ತು. ವಿಮರ್ಶಕನ ಪಾಲಿಗೆ ಬರೀ ಮಹಾಭಾರತ ಇದು. ಆದರೆ ನನ್ನ ಪಾಲಿಗೆ ನನ್ನ ಕಥೆಯೂ ಅಲ್ಲವೇ? ಕೇಳಿಕೊಂಡ ಅನುಮಾನವಾಯಿತು.. ಇಷ್ಟೆಲ್ಲಾ ನನ್ನ ಭ್ರಮೆ ಮಾತ್ರವಾ? ಕಾದಂಬರಿಗೂ ನನಗೂ ನಿಜಕ್ಕೂ ಸಂಭಂಧವೇ ಇಲ್ಲವೇ? ಅರ್ಥವಾಗಲಿಲ್ಲ. ಮತ್ತೊಂದು ಸಿಗರೇಟನ್ನು ಹತ್ತಿಸಿದ.. ಅರ್ಥವಾಗದ ಯಾವುದನ್ನೂ ನಾನು ಮಾಡುವುದಿಲ್ಲ ಎನ್ನುವ ಹಳೆಯ ನಿಶ್ಚಯ ನೆನಪಾಯಿತು. ಒಳಗೆ ಬಂದರೆ ಟೀಪಾಯಿಯ ಮೇಲೆ ‘ನಾನು ಹಿಡಿಂಬೆ’ ಕಾದಂಬರಿ ಅನಾಥ ಬಿದ್ದಿತ್ತು. ಯಾರೋ ಕಲಾವಿದ ದೊಡ್ಡ ಸ್ಥನಗಳ ಸಪೂರ ಸೊಂಟದ ಬೊಗಸೆ ಕಣ್ಣುಗಳ ಕಪ್ಪಗಿನ ಸುಂದರಿಯೊಬ್ಬಳ ರೇಖಾ ಚಿತ್ರ ಬರೆದು ಮುಖಪುಟ ವಿನ್ಯಾಸ ಮಾಡಿದ್ದ.
ಶ್ರೀಧರ ತನಗೇ ಗೊತ್ತಿಲ್ಲದ ಹಾಗೆ ಅಂಗೈಯನ್ನು ಮೂಗಿನ ಹತ್ತಿರ ತಂದು ಉಸಿರೆಳೆದುಕೊಂಡ. ಇಳಾಳ ಮೈಯ್ಯ ಕಂಪು ಇನ್ನೂ ಹಾಗೇ ಇದೆ ಅನ್ನಿಸಿತು.
( ಅಕ್ಕ ವಿಶ್ವಕನ್ನಡ ಸಮ್ಮೇಳನದ ಕಥಾಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದ ಕತೆ)

10 comments:

ಮನಸಿನ ಮಾತುಗಳು said...

ತುಂಬಾ ಚೆನ್ನಾಗಿ ಬರೆದಿದ್ದೀರಿ. ನನಗೆ ಬಹಳ ಇಷ್ಟ ಆಯ್ತು.. :-) ಓದುವಾಗ ನಾನು ಎಲ್ಲೋ ಕಳೆದು ಹೋದ ಹಾಗಿತ್ತು..

Kanthi said...

Nice write up.

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಉತ್ತಮ ಬರೆಹ.

ಸಾಗರದಾಚೆಯ ಇಂಚರ said...

ಇದನ್ನು ಓದುತ್ತ ಓದುತ್ತ ಎಲ್ಲಿರುವೆ ಎಂಬುದೇ ನೆನಪಿಸಿಕೊಂಡಂತೆ ಇತ್ತು

ಕಥೆ ಓದಿಸ್ಕೊಂಡು ಹೋಗುತ್ತದೆ

ಶೈಲಿ ತುಂಬಾ ಚೆನ್ನಾಗಿದೆ

ಸುಧೇಶ್ ಶೆಟ್ಟಿ said...

vishishta kathana shaili ... thumba ishta aaythu :)

Pranav said...

Liked it. The narration style and the matters discussed in the story are v.good.

Thanks

ಅನಿಕೇತನ ಸುನಿಲ್ said...

Tumba chennagide ri ;-)pritiyendarenu anno olagina prashnegalu illi katheyamoolaka matte kaadide.....;-)
Thanks for the posting.

ದುರಹಂಕಾರಿ said...

ಈ ಸಾಂದ್ರತೆ ನಂಗಿಷ್ಟ :)
ಹೆಣ್ಣು ಪಾತ್ರಗಳ ಒಳಗಿಳಿದು ನೋಡಲೆತ್ನಿಸುತ್ತಿರುವಂತನಿಸುವ ಭೈರಪ್ಪನವರ ಕೃತಿಗಳಂತೆ ನಿಮ್ಮವೂ (ಹಳೆಯದೊಂದೆರಡು ಸೇರಿಸ್ಕೊಂಡು) ಗಂಡು ಪಾತ್ರಗಳೊಳಗೆ ಓಡಾಡುವ ಯತ್ನದಲ್ಲಿವೆ ಅಂತನಿಸ್ತಿದೆ..

Hema Powar said...

Hi Nayanee,


ಚೆನ್ನಾಗಿ ಬರ್ದಿದ್ದೀ ಆದರೆ ಅದೇಕೋ ಭೈರಪ್ಪನವರ ಇಮಿಟೇಶನ್ ಅನಿಸತ್ತೆ, ಅಂತ ಕಾಮೆಂಟ್ ಮಾಡೊಳಿದ್ದೆ, ಇಲ್ಲಿ 'ದುರಹಂಕಾರಿ' ಗಳ ಕಾಮೆಂಟ್ ನೋಡಿ ಅವರ ಮಾತು ನಿಜ ಅನ್ನಿಸ್ತಿದೆ. ಹೆಣ್ಣಿನ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಬಿಂಬಿಸುವ ಭೈರಪ್ಪನವರ ಬರಹಗಳ ಮೇಲ್ ವರ್ಷನ್ ನೀನು, ನಿನ್ನ ಇತರ ಬರಹಗಳಲ್ಲೂ ನಾನು ಮೆಚ್ಚುವುದು ಇದನ್ನೇ. ಬಹುಶಃ ನೀನು ಹುಡುಗಿ ಎಂದು ತಿಳಿದಿಲ್ಲದಿದ್ದರೆ ಹೀಗನಿಸುತ್ತಿರಲಿಲ್ಲವೇನೋ, ಬರಹಗಾರನನ್ನು/ ಳನ್ನು ಬರಹದಿಂದ ಹೊರಗಿಟ್ಟು ಓದಿಕೊಳ್ಳುವುದನ್ನು ಇನ್ನೂ ನಾನು ಕಲಿತಿಲ್ಲ ಎನಿಸುತ್ತಿದೆ, ಇರಲಿ ನಿನ್ನದು ಒಳ್ಳೆಯ ಪ್ರಯತ್ನ ಇಷ್ಟವಾಯ್ತು :-)

Shashi said...

chennagide